ADVERTISEMENT

‘ವಿಶ್ವ ಭೂದಿನ’ಕ್ಕೀಗ ಬಂಗಾರದ ಹಬ್ಬ

ಏಪ್ರಿಲ್ 22 ‘ವಿಶ್ವ ಭೂದಿನ’

ಸುಮಂಗಲಾ ಎಸ್‌.ಮುಮ್ಮಿಗಟ್ಟಿಬೆಂಗಳೂರು
Published 22 ಏಪ್ರಿಲ್ 2020, 9:17 IST
Last Updated 22 ಏಪ್ರಿಲ್ 2020, 9:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭೂಮಿಯೆನ್ನುವುದು ಕುದಿಪಾತ್ರೆಯಂತಾಗಿ, ಮನುಷ್ಯನ ಬದುಕು ನೀರಿನಿಂದ ಹೊರಗೆ ಬಿದ್ದ ಮೀನಿನಂತಾಗಿದೆ. ಮನುಷ್ಯನ ಹಸ್ತಕ್ಷೇಪದಿಂದ ಪರಿಸರದಲ್ಲಾದ ವ್ಯತ್ಯಯ ಭೂಮಿಯ ಆರೋಗ್ಯಕ್ಕೆ ಕುತ್ತುತಂದಿದೆ. ಭೂಮಿಯ ಆರೋಗ್ಯದ ಬಗ್ಗೆ ಕಾಳಜಿ ಮಾಡುವ ಉದ್ದೇಶದಿಂದ ರೂಪುಗೊಂಡದ್ದು ವಿಶ್ವ ಭೂದಿನ. 1970ರಲ್ಲಿ ಆರಂಭವಾದ ಈ ಆಚರಣೆಗೀಗ ಐವತ್ತು ವರ್ಷ. ಪರಿಸರದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ ಕೊರೊನಾ ಬಾಧೆ ವಿಶ್ವವನ್ನು ಆವರಿಸಿಕೊಂಡಿದೆ. ಇಂಥ ಸಂದರ್ಭದಲ್ಲಿ ಪರಿಸರದ ಬಗೆಗಿನ ನಮ್ಮ ಕಾಳಜಿ ಮತ್ತಷ್ಟು ಗಾಢವಾಗಬೇಕು. ಪರಿಸರದ ಬಗ್ಗೆ ನಾವೆಲ್ಲ ಯೋಚಿಸುವ ನಿಟ್ಟಿನಲ್ಲಿ ಗಮನಸೆಳೆಯುವ ಈ ಬರಹ ಭೂಮಿಯ ಕ್ಷೇಮಸಮಾಚಾರದ ಕುರಿತು ಯೋಚಿಸಲು ಪ್ರೇರಣೆ ನೀಡುವಂತಿದೆ.

ಏಪ್ರಿಲ್ 22 ‘ವಿಶ್ವ ಭೂದಿನ’. ಇದನ್ನು ಮೊಟ್ಟ ಮೊದಲ ಬಾರಿಗೆ 1970ರಲ್ಲಿ ಅಮೆರಿಕದಲ್ಲಿ ಆಚರಿಸಲಾಯಿತು. ಅಂದರೆ, ಈ ಆಚರಣೆಗೀಗ ಬಂಗಾರದ ಹಬ್ಬ. ಐವತ್ತು ವರ್ಷಗಳ ಹಿಂದೆ ಗೇಲಾರ್ಡ್ ನೆಲ್ಸನ್‌ನ ಕರೆಗೆ ಓಗೊಟ್ಟು 20 ದಶಲಕ್ಷ ಅಮೆರಿಕನ್ನರು ಭೂಮಿಗೆ ದನಿಯಾಗಿ ರಸ್ತೆಗಿಳಿದರು. ಅದು ಅಂದಿನ ಅಮೆರಿಕದ ಜನಸಂಖ್ಯೆಯ ಶೇಕಡಾ ಹತ್ತು ಮಾತ್ರ. ಆದರೆ ಇಂದು ಜಗತ್ತಿನ 192 ದೇಶಗಳು ‘ವಿಶ್ವ ಭೂದಿನ‘ವನ್ನು ಆಚರಿಸುತ್ತಿವೆ. ವಿಶ್ವ ಭೂದಿನವನ್ನು ಆಚರಿಸುತ್ತಿರುವ ದೇಶಗಳಲ್ಲಿ ಭಾರತವೂ ಒಂದು.

ಭೂಮಿಯ ಪರಿಸರವನ್ನು ಮಾನವ ಹದಗೆಡಿಸುತ್ತಿದ್ದಾನೆ, ಅದರ ಪರಿಣಾಮ ಗಂಭೀರವಾಗಲಿದೆ ಎಂಬ ಅರಿವು ಅರವತ್ತರ ದಶಕದಲ್ಲಿಯೇ ಮೂಡಲು ಪ್ರಾರಂಭಿಸಿತ್ತು. ಅಮೆರಿಕದ ಜಾನ್ ಹಾಪ್ಕಿನ್ಸ್‌ ವಿಶ್ವವಿದ್ಯಾಲಯದ ರೇಚಲ್ ಕಾರ್ಸನ್ 1962ರಲ್ಲಿ ಪ್ರಕಟಿಸಿದ ‘ಸೈಲೆಂಟ್ ಸ್ಪ್ರಿಂಗ್’, ಜನರಲ್ಲಿ ಪರಿಸರದ ಮೇಲಿನ ಮಾನವ ಚಟುವಟಿಕೆಗಳ ಪರಿಣಾಮವನ್ನು ಎತ್ತಿ ತೋರಿಸಿತ್ತು. ಇದರಿಂದ ಹಲವಾರು ಮಾನವ ಸಂಘಟನೆಗಳು ಹುಟ್ಟಿಕೊಂಡವು. ಪರಿಸರ ಸಂರಕ್ಷಣೆಯ ಚಳವಳಿಗಳು ಆರಂಭವಾದವು. ಅವುಗಳಲ್ಲಿ ಈ ಭೂದಿನದ ಆಚರಣೆಯೂ ಒಂದು. ಅಂದಿನಿಂದ ಪ್ರತಿ ವರ್ಷ ಭೂದಿನವನ್ನು ಒಂದು ಘೋಷವಾಕ್ಯದೊಂದಿಗೆ ಆಚರಿಸುತ್ತಲೇ ಬಂದಿದ್ದೇವೆ.

ADVERTISEMENT

2016ರಲ್ಲಿ ವಿಶ್ವಸಂಸ್ಥೆ ‘ವಿಶ್ವ ಭೂದಿನ’ವನ್ನು ಪ್ಯಾರಿಸ್ ಒಪ್ಪಂದಕ್ಕೆ ಸಹಿಹಾಕಲು ಆರಿಸಿಕೊಂಡಿತು. ಪರಿಸರ ಪ್ರಜ್ಞೆಯನ್ನು ಮೂಡಿಸಲು ನಡೆಯುತ್ತಿರುವ ಸತತ ಪ್ರಯತ್ನಗಳ ಹೊರತಾಗಿಯೂ ಇಂದು ನಾವು ಏರುತ್ತಿರುವ ಭೂಮಿಯ ತಾಪಮಾನ ಹಾಗೂ ಬದಲಾಗುತ್ತಿರುವ ಹವಾಗುಣದ ಭೀಕರ ಪರಿಣಾಮವನ್ನು ಎದುರಿಸುತ್ತ ನೂರಾರು ಜೀವ ಸಂಕುಲಗಳನ್ನು ಅಳಿವಿನಂಚಿಗೆ ತಂದು ನಿಲ್ಲಿಸಿದ್ದೇವೆ. ಮತ್ತೆ ಮತ್ತೆ ನಡೆಯುತ್ತಿರುವ ಜಾಗೃತ ಹೋರಾಟಗಳ ಹೊರತಾಗಿಯೂ ಭೂಮಿ ಅಪಾಯದಂಚಿನಲ್ಲಿದೆ. ಇಳೆಯ ಉಳಿವಿಗೇ ಕಂಟಕ ಬಂದಿರುವುದು ಕೇವಲ ಮಾನವನ ಚಟುವಟಿಕೆಗಳ ಪರಿಣಾಮದಿಂದ ಎನ್ನುವುದು ಖಚಿತವಾಗಿದೆ. ಹಾಗಾಗಿಯೇ ಈ ಬಾರಿಯ ಭೂದಿನದ ಘೋಷ ವಾಕ್ಯ ‘ಕ್ಲೈಮೇಟ್ ಆ್ಯಕ್ಷನ್’. ಅಂದರೆ ‘ಬದಲಾಗುತ್ತಿರುವ ಹವಾಗುಣವನ್ನು ತಡೆಯಲು ಕ್ರಮ ಕೈಗೊಳ್ಳೋಣ’ ಎಂದು.

ಬಂಗಾರದ ಹಬ್ಬಕ್ಕೆ ಬಲವಾದ ಸವಾಲು

ಮಾನವ ಜನಾಂಗಕ್ಕೆ ಇದೊಂದು ಬಲವಾದ ಸವಾಲೇ ಸರಿ. ಕಳೆದ ಕೆಲವೇ ದಶಕಗಳಲ್ಲಿ ಭೂಮಿಯ ತಾಪಮಾನ ಹೆಚ್ಚಾಗಿದೆ. ಹವಾಗುಣ ಬದಲಾವಣೆಯ ಪರಿಣಾಮವನ್ನು ನಾವೆಲ್ಲಾ ಅನುಭವಿಸುತ್ತಿದ್ದೇವೆ. ಸಾಗರಗಳ ನೀರಿನ ಮಟ್ಟ ಹೆಚ್ಚಾಗಿದೆ, ಹಿಮಾವೃತ ಪ್ರದೇಶಗಳ ಹಿಮಗಡ್ಡೆಗಳು ಕರಗುತ್ತಿವೆ, ಹಿಮ ನದಿಗಳು ಒಣಗುತ್ತಿವೆ. ಮಳೆಯ ಪ್ರಮಾಣ ಮತ್ತು ಹಂಚಿಕೆಯಲ್ಲಿ ವೈಪರೀತ್ಯಗಳು ಉಂಟಾಗುತ್ತಿವೆ. ಜೀವಿ ಪ್ರಭೇದಗಳು ನಶಿಸಿ ಹೋಗುತ್ತಿವೆ ಹೀಗೆ ಅನಾಹುತಗಳ ಪಟ್ಟಿ ಮುಂದುವರಿಯುತ್ತಲೇ ಹೋಗುತ್ತದೆ. ಇವೆಲ್ಲವನ್ನೂ ಎದುರಿಸಲು ಮಾನವ ಜನಾಂಗ ಸಿದ್ಧವಿದೆಯೇ? ಇದಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು ಏನೇನು? ಮಾಡಿದ ತಪ್ಪನ್ನು ಸರಿಪಡಿಸಲು ನಾವು ತಯಾರಿದ್ದೇವೆಯೇ? ಇವೆಲ್ಲವನ್ನು ಪರಾಮರ್ಶಿಸಿ ತಕ್ಷಣವೇ ಕಾರ್ಯರೂಪಕ್ಕೆ ಇಳಿಯುವಂತೆ ಮಾಡಲು ಇಡಿಯ ಜಗತ್ತಿನ ಜನತೆಯ ಗಮನವನ್ನು ಸೆಳೆಯಲು ‘ಕ್ಲೈಮೇಟ್ ಆ್ಯಕ್ಷನ್’ ಎನ್ನುವ ಘೋಷವಾಕ್ಯವನ್ನು ಆಯ್ದುಕೊಳ್ಳಲಾಗಿದೆ. 2020ರ ಕೊನೆಯ ಹೊತ್ತಿಗೆ ದೇಶಗಳು ಪ್ಯಾರಿಸ್ ಒಪ್ಪಂದದ ಬಗೆಗೆ ತಮ್ಮ ಬದ್ಧತೆಯನ್ನು ಹೆಚ್ಚಿಸಿಕೊಳ್ಳುತ್ತವೆ ಎಂದು ಅಪೇಕ್ಷಿಸಲಾಗಿದೆ.

ಎಲ್ಲೆಲ್ಲಿ ಏನೇನು ನಡೆಯುತ್ತದೆ?

ಮಾಲಿನ್ಯ ಇಳಿಮುಖವಾಗಿರುವ ಸಂದರ್ಭದಲ್ಲಿ ಸ್ನಾನ ಮಾಡಿದಂತೆ ಕಾಣಿಸುತ್ತಿರುವ ದೆಹಲಿಯ ಸುಂದರ ನೋಟ.

ಈ ಬಾರಿಯ ಭೂದಿನವನ್ನು ವಿಶೇಷ ಪ್ರಯತ್ನಗಳೊಂದಿಗೆ, ‘ಇದು ಕೇವಲ ದಿನವಲ್ಲ, ಇದೊಂದು ಚಳವಳಿ’ ಎಂದು ಆಚರಿಸಲಾಗುತ್ತಿದೆ. ಜಗತ್ತಿನಾದ್ಯಂತ ಮತ್ತೊಮ್ಮೆ ಭೂಮಿ ಪ್ರೇಮಿಗಳು ಪ್ಯಾರಿಸ್ ಒಪ್ಪಂದದ ಕಟ್ಟು ಪಾಡುಗಳಿಗೆ ಬದ್ಧರಾಗುವಂತೆ ದೇಶಗಳನ್ನು ಒತ್ತಾಯಿಸಲಿದ್ದಾರೆ. ಈ ಸಂದರ್ಭದಲ್ಲಿ 12 ಗೊತ್ತುವಳಿಗಳ ಮೂಲಕ ಬದಲಾಗುತ್ತಿರುವ ಹವಾಗುಣವನ್ನು ನಿಯಂತ್ರಿಸುವ ಅಥವಾ ಅದು ಇನ್ನೂ ಹೆಚ್ಚು ತೊಂದರೆದಾಯಕವಾಗದಂತೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. 2020ರ ಆರಂಭದ ಸಂದರ್ಭದಲ್ಲೇ ಭೂಮಿಯ ಆರೋಗ್ಯಕ್ಕೆ ಅಗತ್ಯವಾದ ಹನ್ನೆರಡು ಸಂಗತಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ’ಭೂ ದಿನ‘ದ ಸಂಘಟಕರು ಪಟ್ಟಿ ಮಾಡಿದ್ದಾರೆ. ಹೊಸ ವರ್ಷದ ಗೊತ್ತುವಳಿಗಳ ರೂಪದಲ್ಲಿರುವ ಆ ಹನ್ನೆರಡು ಸಂಗತಿಗಳು ಹೀಗಿವೆ:

1. ಸಸ್ಯಾಹಾರಿಗಳಾಗಿ: ಮಾಂಸಾಹಾರಕ್ಕಾಗಿ ಪ್ರಾಣಿಗಳ ಸಾಕಣೆ ಹವಾಗುಣಕ್ಕೆ ಹೊರೆಯಾಗುತ್ತಿದೆ. ಇದರಿಂದ ಹೊರ ಬರುವ ಉಷ್ಣವರ್ಧಕ ಅನಿಲಗಳು ಭೂ ತಾಪವನ್ನು ಹೆಚ್ಚಿಸುತ್ತಿವೆ. ಆದುದರಿಂದ ಸಸ್ಯಾಹಾರವನ್ನು ಸೇವಿಸಿ. ಒಮ್ಮೆಲೇ ಸಸ್ಯಾಹಾರಕ್ಕೆ ಬದಲಾಗುವುದು ಕಷ್ಟವಾದಲ್ಲಿ ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟವನ್ನು ಸಸ್ಯಾಹಾರವನ್ನಾಗಿಸಿ.

2. ಜಿಮ್ ಮತ್ತು ಕಾರಿನ ಬಳಕೆ ತ್ಯಜಿಸಿ: ನೀವು ನಿಮ್ಮ ಕಾರು ಮತ್ತು ಜಿಮ್‌ನ ಬಳಕೆಯನ್ನು ಬಿಟ್ಟುಬಿಡಿ. ಇದರಿಂದ ನಿಮ್ಮ ಮತ್ತು ಭೂಮಿಯ ಆರೋಗ್ಯಗಳೆರಡೂ ಚೆನ್ನಾಗಿರುತ್ತವೆ. ವಾಯುಮಂಡಲವನ್ನು ಸೇರುವ ಹಸಿರು ಮನೆ ಅನಿಲಗಳ ಪ್ರಮಾಣ ಇದರಿಂದ ನಿಯಂತ್ರಣಕ್ಕೆ ಬರುತ್ತದೆ. ನೀವು ಕಾರನ್ನು ಬಿಟ್ಟು ಓಡಾಡುವ ಪ್ರತಿ ಮೈಲಿಗೂ ನಿಮ್ಮ ಇಂಗಾಲದ ಹೆಜ್ಜೆಯ ಗುರುತು ಒಂದು ಪೌಂಡ್ ಕಡಿಮೆಯಾಗುತ್ತದೆ. ಅದರ ಜೊತೆಗೆ ನಿಮ್ಮ ಕೈಯಲ್ಲಿ ಸಾಮಾನು ತುಂಬಿದ ಚೀಲಗಳಿದ್ದರೆ ಮತ್ತೂ ಲಾಭ. ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುವುದು ವೈಯಕ್ತಿಕ ಆರೋಗ್ಯಕರ ಹಿತ, ಪರಿಸರದ ಆರೋಗ್ಯಕ್ಕೂ ಪೂರಕ.

3. ಹೆಚ್ಚೆಚ್ಚು ಪುಸ್ತಕಗಳನ್ನು ಓದಿ: ಹೆಚ್ಚು ಪುಸ್ತಕಗಳನ್ನು ಓದುವ ಮೂಲಕ ನಿಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಿ. ಹೀಗೆ ಓದುವ ಪುಸ್ತಕಗಳಲ್ಲಿ ಪರಿಸರದ ಬಗೆಗಿನ ಅರಿವು ಮೂಡಿಸುವ ಪುಸ್ತಕಗಳೂ ಇರಲಿ. ಇದೆಲ್ಲ ತಿಳಿವಳಿಕೆ ಭೂಮಿಯ ಸಂರಕ್ಷಣೆಗೆ ನೆರವಾಗಲಿದೆ.

4. ಕಾಂಪೋಸ್ಟ್ ಕಾಂಪೋಸ್ಟ್, ಕಾಂಪೋಸ್ಟ್: ನೀವು ಸೇವಿಸದೇ ಬಿಟ್ಟ ಆಹಾರವನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ. ಅದನ್ನು ಸರಿಯಾದ ರೀತಿಯಲ್ಲಿ ಕಾಂಪೋಸ್ಟ್‌ ಮಾಡಿ. ಎಷ್ಟು ಬೇಕೋ ಅಷ್ಟು ಆಹಾರವನ್ನು ಮಾತ್ರ ತಟ್ಟೆಯಲ್ಲಿ ಹಾಕಿಸಿಕೊಳ್ಳಿ. ಅದನ್ನು ಎಸೆಯುವ ಮುನ್ನ ಅದನ್ನು ಬೆಳೆಯಲು ಮತ್ತು ತಯಾರಿಸಲು ಬೇಕಾಗುವ ನೈಸರ್ಗಿಕ ಸಂಪನ್ಮೂಲಗಳನ್ನು ನೆನಪು ಮಾಡಿಕೊಳ್ಳಿ. ಆಹಾರ ಕೊಳೆಯುವಾಗ ಉತ್ಪತ್ತಿಯಾಗುವ ಮಿಥೇನ್ ಇಂಗಾಲದ ಡೈ ಆಕ್ಸೈಡಗಿಂತ ನೂರು ವರ್ಷಗಳವರೆಗೆ 34 ಪಟ್ಟು ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಆದುದರಿಂದ ಆಹಾರದ ತ್ಯಾಜ್ಯವನ್ನು ಸಂಸ್ಕರಿಸಲು ಸಂಘಟಿತರಾಗಿ.

5. ಸೂಕ್ತ ರೀತಿಯಲ್ಲಿ ಮರುಬಳಕೆ ಮಾಡಿ: ಮರುಬಳಕೆ ಮಾಲಿನ್ಯಕ್ಕೆ ಪರಿಹಾರ. ಆದರೆ ಅದನ್ನು ಸೂಕ್ತ ರೀತಿಯಲ್ಲಿ ಮಾಡದಿದ್ದರೆ ಅದರಿಂದಾಗುವ ಅಪಾಯವೇ ಹೆಚ್ಚು ಆದುದರಿಂದ ಸರಿಯಾದ ರೀತಿಯಲ್ಲಿ ವಸ್ತುಗಳ ಮರುಬಳಕೆ ಮಾಡಿ.

6. ಪ್ಲಾಸ್ಟಿಕ್ ಚೀಲಗಳನ್ನು ತ್ಯಜಿಸಿ: ಒಂದು ಬಾರಿ ಬಳಸಿ ಬಿಸಾಡುವ ಪ್ಲಾಸ್ಟಿಕ್ ಚೀಲಗಳು ಭೂಮಿಯ ಒಳಗಿನ ಪಿಟ್‌ಗಳಲ್ಲಿ 500-1000 ವರ್ಷಗಳವರೆಗೆ ಉಳಿಯುತ್ತವೆ. ಆದುದರಿಂದ ಮರುಬಳಕೆ ಮಾಡಬಹುದಾದ ಚೀಲಗಳನ್ನೇ ಬಳಸಿ.

7. ಮಾಹಿತಿಯನ್ನು ಹಂಚಿಕೊಳ್ಳಿ: ಕಡಿಮೆ ಬಳಕೆ ಮತ್ತು ಮರು ಬಳಕೆಗಾಗಿ ನೀವು ಕಂಡುಕೊಂಡ ಅತ್ಯುತ್ತಮ ಮಾಹಿತಿಯನ್ನು ಹಂಚಿಕೊಳ್ಳಿ. ಇದರಿಂದ ಭೂಮಿಯ ಸಂಪನ್ಮೂಲವನ್ನು ನೀವು ರಕ್ಷಿಸಿಕೊಳ್ಳಬಲ್ಲಿರಿ.

8. ವಿಶ್ವ ಭೂದಿನದ ಆಚರಣೆಗಾಗಿ ದಾಖಲಿಸಿಕೊಳ್ಳಿ: ನಿಮ್ಮ ಹತ್ತಿರದ ಪ್ರದೇಶಗಳಲ್ಲಿ ನಡೆಯುವ ವಿಶ್ವ ಭೂದಿನದ ಆಚರಣೆಗಾಗಿ ಹೆಸರು ನೋಂದಾಯಿಸಿಕೊಳ್ಳಿ ಮತ್ತು ಅದರಲ್ಲಿ ಭಾಗವಹಿಸಿ. ಇದು 50ನೇ ವರ್ಷದ ಆಚರಣೆ ಹಾಗೂ ಐತಿಹಾಸಿಕ ಘಟನೆ.

9. ಪೂರ್ತಿ ಸಸ್ಯಾಹಾರಿಗಳಾಗಿ: ದಿನಕ್ಕೆ ಎರಡು ಸಲ ಸಸ್ಯಾಹಾರ ಸೇವಿಸುವವರು, ಕ್ರಮೇಣ 2 ಸಲದಿಂದ ಮೂರು ಸಲದ ಸಸ್ಯಾಹಾರಕ್ಕೆ ಪರಿವರ್ತನೆ ಹೊಂದಿ, ಇದರ ಮೂಲಕ ಭೂಮಿಯ ತಾಪಮಾನವನ್ನು ತಗ್ಗಿಸಲು ನೆರವಾಗಿ.

10. ಎಚ್ಚರಿಕೆಯಿಂದ ಪ್ರಯಾಣಿಸಿ: ಪ್ರಯಾಣ ಮತ್ತು ಪ್ರವಾಸ ನಿಮ್ಮ ಆದ್ಯತೆಗಳ ಪಟ್ಟಿಯಲ್ಲಿರಲಿ. ಆದರೆ, ವಿಮಾನಯಾನವನ್ನು ಆದಷ್ಟೂ ತಪ್ಪಿಸಿ. ವಿಮಾನ ಪ್ರಯಾಣ ಹೆಚ್ಚು ಮಾಲಿನ್ಯಕಾರಕ ಮತ್ತು ಹೆಚ್ಚಿನ ಉಷ್ಣವರ್ಧಕ ಅನಿಲಗಳನ್ನು ಹೊರಹಾಕುತ್ತದೆ. ಅದಕ್ಕಾಗಿ ರೈಲು ಇಲ್ಲವೇ ಹಡಗಿನ (ಗ್ರೇಟಾ ಥನ್ಬರ್ಗ್‌ಳ ಹಾಗೆ) ಪ್ರಯಾಣ ಮಾಡಿ. ಇದರಿಂದ ನೀವು ಹೆಚ್ಚೆಚ್ಚು ಸ್ಥಳಗಳನ್ನು ನೋಡಬಲ್ಲಿರಿ.

11. ಕೊಳ್ಳುಬಾಕರಾಗಬೇಡಿ: ಅನವಶ್ಯಕ ಖರೀದಿ ಬೇಡ. ಅದು ನಿಮ್ಮ ಜೇಬಿಗಲ್ಲದೇ ಭೂಮಿಗೂ ಭಾರ. ಅದು ಕೊಳೆಯುವಾಗ ಉತ್ಪತ್ತಿಯಾಗುವ ಉಷ್ಣವರ್ಧಕ ಅನಿಲಗಳು ಭೂಮಿಯ ತಾಪವನ್ನು ಹೆಚ್ಚಿಸುತ್ತವೆ.

12. ಮತ ಚಲಾಯಿಸಿ: ತಪ್ಪದೇ ಮತ ಚಲಾಯಿಸಿ. ನೀವಿರುವ ಪ್ರದೇಶದ ಆಡಳಿತ ವ್ಯವಸ್ಥೆಯ ನಿರ್ಣಯಗಳು ಭೂಮಿಯ ತಾಪವನ್ನು ಇಳಿಸಲು ನೆರವಾಗುತ್ತವೆ. ಪ್ರಜ್ಞಾಪೂರ್ವಕವಾಗಿ ನೀವು ಮಾಡಿದ ಆಯ್ಕೆ ಮಹತ್ವದ್ದಾಗಿರುತ್ತದೆ.

ಭಾರತದಲ್ಲಿ ವಿಶ್ವ ಭೂದಿನದ ಆಚರಣೆ

ವಿಶ್ವ ಭೂದಿನದ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತ ಸಹ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈಗಾಗಲೇ ಈ ಕೆಲಸ ಆರಂಭವಾಗಿದ್ದು, ಅದಕ್ಕಾಗಿ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಸತತವಾಗಿ ನಡೆದಿದೆ. ಬದಲಾಗುತ್ತಿರುವ ಹವಾಗುಣ ಭೂಮಿಯ ಉತ್ತರಾರ್ಧವನ್ನು ಭಾದಿಸಿದಷ್ಟು ನಮ್ಮನ್ನು ಬಾಧಿಸಲಾರದು ಎಂದುಕೊಳ್ಳಲಾಗಿತ್ತು. ಆದರೆ ಜಾಗತಿಕ ತಾಪಮಾನದ ಏರಿಕೆಯ ಪರಿಣಾಮಗಳು ನಮ್ಮಲ್ಲಿಯೂ ಗೋಚರವಾಗುತ್ತಿವೆ. 2009ರಲ್ಲಿ ಉತ್ತರ ಕರ್ನಾಟಕದಲ್ಲಾದ ಮಳೆ, 2013ರ ಕೇದಾರನಾಥದ ಪ್ರವಾಹ, (ಕೇದಾರನಾಥ ಹಿಮಾಲಯ ಚಾರೋಬಾರಿ ಗ್ಲೇಸಿಯರ್‌ನ ಕೆಳಭಾಗದಲ್ಲಿದೆ. ಗ್ಲೇಸಿಯರ್‌ನ ಹಿಮಕರಗಿದ ಫಲವಾಗಿ ಅಲ್ಲಿ ದೊಡ್ಡ ನೀರಿನ ಕೊಳವೊಂದು ನಿರ್ಮಾಣವಾಗಿತ್ತು. ಅಂದು ಸುರಿದ ಭಾರೀ ಮಳೆಯಿಂದಾಗಿ ಕೊಳ ಸ್ಫೋಟಗೊಂಡು ಪ್ರವಾಹ ಉಂಟಾಯಿತು.) ಹಿಮಾಲಯದ ಬಹುತೇಕ ಹಿಮನದಿಗಳು ಕರಗುತ್ತಿರುವುದು ಉಪಗ್ರಹಗಳ ಚಿತ್ರಗಳಿಂದ ಸಾಬೀತಾಗಿದೆ.

ಕರ್ನಾಟಕದ ಪಶ್ಚಿಮ ಘಟ್ಟಗಳ ಹಲವು ಮರಗಳ ಹೂ ತಳೆಯುವಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಇದು ಜೀವಿಗಳ ಆಹಾರದ ಸರಪಳಿಯಲ್ಲಿ ಮಹತ್ತರ ಬದಲಾವಣೆಯನ್ನು ಉಂಟು ಮಾಡುತ್ತದೆ. ಅದನ್ನು ಅವಲಂಬಿಸಿದ ಕೀಟಪ್ರಪಂಚ, ಹಣ್ಣನ್ನು ಅವಲಂಬಿಸಿದ ಪ್ರಾಣಿಪಕ್ಷಿಗಳು, ಮುಂದೆ ಆ ಮರದ ಪುನರುತ್ಪಾದನೆ, ಎಲ್ಲವೂ ಏರುಪೇರಾಗುತ್ತಿದೆ. ಮಹಾರಾಷ್ಟ್ರ, ಕೇರಳ, ಕರ್ನಾಟಕದ ಪ್ರವಾಹಗಳು ಸೇರಿದಂತೆ ಪ್ರಾಕೃತಿಕ ಏರುಪೇರಿನ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಆದುದರಿಂದಲೇ ಈ ಬಾರಿಯ ವಿಶ್ವ ಭೂದಿನದ ಆಚರಣೆ ಅತ್ಯಂತ ಮಹತ್ವಪೂರ್ಣವಾಗಲಿದೆ. ಭಾರತ ಈ ವರ್ಷದಲ್ಲಿ ಹವಾಮಾನ ಬದಲಾವಣೆಯ ತಡೆಗೆ ಮಹತ್ವದ ತೀರ್ಮಾನಗಳನ್ನು ಕೈಗೊಂಡಿದೆ. ಪ್ಯಾರಿಸ್ ಒಪ್ಪಂದಕ್ಕೆ ಬದ್ಧವಾಗಿದ್ದು, ಅದಕ್ಕಾಗಿ ನ್ಯಾಷನಲ್ ಮಿಶನ್ ಒಂದನ್ನು ರೂಪಿಸಿದೆ. ಅದರ ಎಂಟು ಯೋಜನೆಗಳು ಕಾರ್ಯನಿರತವಾಗಿವೆ.

ವಿಶ್ವ ಭೂದಿನ ಎಂದರೆ, ಅದು ಒಂದು ದಿನದ ಆಚರಣೆ ಮಾತ್ರವಲ್ಲ; ಅದು ನಿರಂತರ ಹೋರಾಟವಾಗಬೇಕು. ಆ ದಿನದ ಆಚರಣೆಗಾಗಿ ಓಟ, ಭಾಷಣ, ಸಮಾರಂಭ ಇವು ಕೇವಲ ಸಾಂಕೇತಿಕ ಮಾತ್ರ. ಇವನ್ನೂ ಮೀರಿ ಜನಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸ ಆಗಬೇಕಿದೆ. ಹವಾಮಾನ ಬದಲಾವಣೆಯ ಈ ಸವಾಲು ಸಣ್ಣದಲ್ಲ. ಆದರೆ ಈಗ ನಮಗೆ ಆಯ್ಕೆಯೇ ಇಲ್ಲ. ಮಾಡು ಇಲ್ಲವೇ ಮಡಿ ಹಂತವನ್ನು ನಾವೆಲ್ಲ ತಲುಪಿದ್ದೇವೆ. ಇಂದು ಪ್ರಾರಂಭಿಸಿದರೆ ಕೊನೆಯ ಪಕ್ಷ ಸ್ವಲ್ಪವಾದರೂ ಪರಿಣಾಮವಾಗಬಹುದು ಎನ್ನುವುದು ಪರಿಣತರ ಅಭಿಪ್ರಾಯ.

ಇಷ್ಟು ಸಾಕೇ?

ಹಲವು ದಶಕಗಳ ಮಾನವ ಚಟುವಟಿಕೆಗಳ ಪರಿಣಾಮವನ್ನು ಸುಲಭವಾಗಿ ಬದಲಾಯಿಸಲು ಸಾಧ್ಯವಿಲ್ಲ. ಆದರೆ ಮಾನವ ಮನಸ್ಸು ಮಾಡಿದಲ್ಲಿ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನು ಓಝೋನ್ ಪದರವನ್ನು ಸರಿಪಡಿಸುವ ವಿಷಯದಲ್ಲಿ ನಾವೆಲ್ಲ ನೋಡಿದ್ದೇವೆ. ಪ್ರತಿ ದಿನವೂ ಭೂದಿನವಾದಾಗ ಮಾತ್ರ ಸದ್ಯದ ಪರಿಸ್ಥಿತಿಯಿಂದ ಭೂಮಿಯನ್ನು ಕಾಪಾಡಲು ಸಾಧ್ಯ. ಭೂಮಿ ಎಲ್ಲವನ್ನೂ ತಡೆಯುತ್ತದೆ ಎಂದು ಭಾವಿಸಿ ನಾವು ಮಾಡಿದ ತಪ್ಪನ್ನು ಸರಿಪಡಿಸಲು ನಮ್ಮ ಜೀವನದ ಪ್ರತಿ ಕ್ಷಣವೂ ಭೂಪರವಾಗಿರಬೇಕು. ಇದರೊಂದಿಗೆ ರಾಜಕೀಯ ಇಚ್ಛಾಶಕ್ತಿಯೂ ಬೆರೆಯಬೇಕು. ಅಮೆರಿಕ ಈಗಾಗಲೇ ಪ್ಯಾರೀಸ್ ಒಪ್ಪಂದದಿಂದ ಹೊರ ಬರುವುದಾಗಿ ಹೇಳಿದೆ. ಭಾರತ ಅಸಾಂಪ್ರದಾಯಿಕ ಇಂಧನ ಮೂಲವಾದ ಸೌರಶಕ್ತಿಯ ಬಳಕೆಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದೆ. ಹವಾಗುಣ ಬದಲಾವಣೆಯನ್ನು ಎದುರಿಸುವುದಕ್ಕಾಗಿ ಸಚಿವಾಲಯವೇ ನಮ್ಮಲ್ಲಿದೆ. ಹಲವಾರು ಯೋಜನೆಗಳು ಜಾರಿಯಲ್ಲಿವೆ. ಅವೆಲ್ಲವೂ ಜನಸಾಮಾನ್ಯನ ಅರಿವಿಗೆ ಬರಬೇಕು. ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರಾಮಾಣಿಕ ಪ್ರಯತ್ನಗಳಾಗಬೇಕು ಅಂದಾಗ ಮಾತ್ರ ವಿಶ್ವ ಭೂದಿನದ ಸುವರ್ಣಾಚರಣೆಗೆ ಅರ್ಥ ಬರುತ್ತದೆ. ಪ್ರತಿಯೊಬ್ಬರೂ ಒಂದು ಗಿಡವನ್ನಾದರೂ ನೆಟ್ಟು ಇದನ್ನು ಸಾರ್ಥಕಗೊಳಿಸಬೇಕು.

ಪ್ರತಿಕ್ರಿಯಿಸಿ: ರಚನಾತ್ಮಕ ಟೀಕೆ–ಟಿಪ್ಪಣಿಗಳಿಗೆ ಸ್ವಾಗತ. ಪ್ರತಿಕ್ರಿಯೆ ಚುಟುಕು, ಚುರುಕಾಗಿರಲಿ. ಇ–ಮೇಲ್: feedback@sudha.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.