ADVERTISEMENT

ವಿಶ್ವ ಭೂದಿನ | ಭೂಮಿಯೇ ಅಧಿಪತಿ, ಮನುಷ್ಯ ಬೆದರುಗೊಂಬೆ

ವಿಶ್ವ ಭೂದಿನ ವಿಶೇಷ

ಟಿ.ಆರ್.ಅನಂತರಾಮು
Published 22 ಏಪ್ರಿಲ್ 2020, 9:15 IST
Last Updated 22 ಏಪ್ರಿಲ್ 2020, 9:15 IST
ಕೊರೊನಾ ಕಾರಣದಿಂದಾಗಿ ವಿಶ್ವ ಹೇರಿಕೊಂಡಿರುವ ನಿರ್ಬಂಧಗಳ ಹಿನ್ನೆಲೆಯಲ್ಲಿ ವಾಯುಗೋಳ ಕನ್ನಡಿಯ ಗುಣ ಪಡೆಯುತ್ತಿರುವುದಕ್ಕೆ, ಜಲಂಧರ್‌ನಿಂದ ದೂರದ ಹಿಮಾಲಯ ಶ್ರೇಣಿ ಕಾಣಿಸುತ್ತಿರುವುದು ಉದಾಹರಣೆಯಂತಿದೆ.
ಕೊರೊನಾ ಕಾರಣದಿಂದಾಗಿ ವಿಶ್ವ ಹೇರಿಕೊಂಡಿರುವ ನಿರ್ಬಂಧಗಳ ಹಿನ್ನೆಲೆಯಲ್ಲಿ ವಾಯುಗೋಳ ಕನ್ನಡಿಯ ಗುಣ ಪಡೆಯುತ್ತಿರುವುದಕ್ಕೆ, ಜಲಂಧರ್‌ನಿಂದ ದೂರದ ಹಿಮಾಲಯ ಶ್ರೇಣಿ ಕಾಣಿಸುತ್ತಿರುವುದು ಉದಾಹರಣೆಯಂತಿದೆ.   

‘ಕ್ಷಮಯಾಧರಿತ್ರಿ’ ಎನ್ನುವುದು ಭೂಮಿಯೊಂದಿಗೆ ತಳಕು ಹಾಕಿಕೊಂಡಿರುವ ವಿಶೇಷಣ. ಆದರೆ, ಸಹನೆಗೂ ಕೊನೆಯಿದೆಯಲ್ಲವೇ? ಸಹನೆ ತೀರಿದಾಗ, ಕ್ಷಮೆ ಹಿಂದುಳಿದು ಧರಿತ್ರಿಯ ಕೋಪಕ್ಕೆ ಮನುಷ್ಯ ತುತ್ತಾಗಬೇಕಾಗುತ್ತದೆ. ಪ್ರಕೃತಿಯ ಮುಂದೆ ತಾನೊಂದು ಹುಲ್ಲುಕಡ್ಡಿ ಎಂದು ತಿಳಿದಿದ್ದರೂ ಅಟಾಟೋಪ ಪ್ರದರ್ಶಿಸುವ ಮನುಷ್ಯನಿಗೆ ಪ್ರಕೃತಿ ಆಗಾಗ ಪೆಟ್ಟು ಕೊಡುತ್ತಲೇ ಇರುತ್ತದೆ. ಈಗಂತೂ ಕೊರೊನಾ ಹೆಸರಿನಲ್ಲಿ ಬಲವಾದ ‍ಪೆಟ್ಟನ್ನೇ ಕೊಟ್ಟಿದೆ. ಭೂಮಿಯೊಂದಿಗಿನ ತನ್ನ ಸಖ್ಯವನ್ನು ವಿಮರ್ಶೆಗೊಡ್ಡಿಕೊಳ್ಳಲು ಮನುಕುಲಕ್ಕಿದು ಮತ್ತೊಂದು ಅವಕಾಶ. ಅಂದಹಾಗೆ, ಈ ಕೊರೊನಾ ಸಂದರ್ಭದಲ್ಲಿ ಭೂಮಿಯ ಗಾಯಗಳು ಜಾದೂವಿನಂತೆ ಮಾಯುತ್ತಿರುವುದನ್ನು ನೋಡಿದರೆ, ನಮ್ಮ ಈವರೆಗಿನ ಕ್ರೌರ್ಯದ ಬಗ್ಗೆ ನಾವೇ ನಾಚಿಕೆಪಟ್ಟುಕೊಳ್ಳುವಂತಾಗುತ್ತದೆ. ನಮ್ಮ ಆರೋಗ್ಯದೊಂದಿಗೆ, ಭೂಮಿಯ ಆರೋಗ್ಯದ ಬಗ್ಗೆಯೂ ಗಮನಹರಿಸುವ ಸಮಯವಿದು.

ಇಡೀ ಜಗತ್ತು ಈ ಗಳಿಗೆಯಲ್ಲಿ ಕೊರೊನಾ ವೈರಸ್‌ನ ಬಿಗಿಮುಷ್ಟಿಯಲ್ಲಿದೆ. ಎಲ್ಲ ಮನೆಗಳೂ ಈಗ ಪರಪ್ಪನ ಅಗ್ರಹಾರದ ಮುಂದುವರಿದ ಜೈಲುಕೋಣೆಗಳಾಗಿವೆ. ಸದ್ಯಕ್ಕೆ ಕೊರೊನಾ ತಂದಿರುವ ಸಾವುನೋವುಗಳ ಸಂಖ್ಯೆಯನ್ನು ಎಣಿಸುವುದು ಬೇಡ. ಅದು ಹೈಜಂಪ್ ಮಾಡುತ್ತಲೇ ಇದೆ. ಆ ರೋಗಾಣು ಜಾಗತಿಕವಾಗಿ ತಂದಿರುವ ನಷ್ಟವನ್ನು 1ರ ಮುಂದೆ ಎಷ್ಟು ಸೊನ್ನೆಗಳನ್ನು ಹಾಕಿ ಲೆಕ್ಕಮಾಡಬೇಕೋ ತಿಳಿಯುತ್ತಿಲ್ಲ. ಶತ್ರುವಿನೊಡನೆ ಹೋರಾಡಬಹುದು; ಸಾವು ನೋವುಗಳು ಅಲ್ಲಿ ಅತ್ಯಂತ ಸಹಜ. ಇಲ್ಲಿ ನಾವು ಹೋರಾಡುತ್ತಿರುವುದು ಅಗೋಚರ ಶತ್ರುವಿನ ಮೇಲೆ. ಯಾವಾಗ ಎರಗುತ್ತದೋ ಅದನ್ನು ಕೂಡ ಭಯದಿಂದಲೇ ನೋಡಬೇಕು. ಮನೆಯಲ್ಲಿ ಖೈದಾಗಿ ಕೂತರೆ ಸದ್ಯಕ್ಕೆ ಯುದ್ಧವನ್ನು ಗೆಲ್ಲಬಹುದು. ಹೊಸ್ತಿಲನ್ನು ದಾಟಿದರೆ ‘ಸೇಫ್’ ಎನ್ನುವಂತಿಲ್ಲ. ನಮ್ಮ ಬದುಕು ಬಿಡಿ, ಮುಂದಿನ ಪೀಳಿಗೆಯ ಭವಿಷ್ಯ? ಎಂದು ವಿಹ್ವಲರಾಗಿ ಕೇಳುತ್ತಿದ್ದಾರೆ ವೃದ್ಧರು. ಯೂರೋಪಿನಲ್ಲಿ ವೃದ್ಧಾಶ್ರಮಗಳನ್ನು ಕೇರ್ ಮಾಡದೆ ಸಾಯಲು ಬಿಟ್ಟಿರುವ ಸಂಗತಿಗಳು ಒಂದಲ್ಲ ನೂರಾರು. ಈ ಸಂದರ್ಭದಲ್ಲಿ ಪ್ರಸಿದ್ಧ ನಟ ನಾನಾ ಪಾಟೇಕರ್‌ನ, ‘ಯಶವಂತ್’ ಚಿತ್ರದ ಡೈಲಾಗ್ ಮತ್ತೆ ಮತ್ತೆ ಅನುರಣಿಸುತ್ತಿದೆ ‘ಏಕ್ ಮಚ್ಚರ್, ಸಾಲಾ, ಆದ್ಮಿಕೋ ಹಿಜ್ರಾ ಬನಾದೇತಾ ಹೈ’ – ನನ್ ಮಗಂದು ಒಂದು ಸೊಳ್ಳೆ, ಮನುಷ್ಯನನ್ನು ಷಂಡನನ್ನಾಗಿ ಮಾಡಿಬಿಡುತ್ತದೆ. ಈಗ ಜಗತ್ತಿನ ಎಲ್ಲರ ಬಾಯಲ್ಲೂ ಕೊರೊನಾದೇ ಜಪ. ಇಡೀ ಪ್ರಪಂಚವನ್ನೇ ಬಂದ್ ಮಾಡಿದೆ.

ಇಂಥ ಸಾವು ನೋವಿನ ಸಂದರ್ಭಕ್ಕೆ ಜಗತ್ತು ಒಡ್ಡಿಕೊಂಡಿರುವಾಗ ಕೊರೊನಾ ವೈರಸ್ ಕೆಲವು ವಿಸ್ಮಯಗಳನ್ನೂ ನಮ್ಮ ಮುಂದೆ ತೆರೆದಿಟ್ಟಿದೆ. ಸೂತಕದ ನಡುವೆಯೂ ಜನ ಇದನ್ನು ಸವಿಯುತ್ತಿದ್ದಾರೆ. ಮೊದಲು ಮಾಲಿನ್ಯದ ಮಡುವಾಗಿ ರಾಡಿಯನ್ನು ಹೊತ್ತು ಹರಿಯುತ್ತಿದ್ದ ಯಮುನಾ ನದಿ, ಈಗ ಸ್ಪಟಿಕ ಸದೃಶ ನೀರನ್ನು ಹರಿಸುತ್ತಿದೆ. ಸ್ತಬ್ಧವಾದ ಕೈಗಾರಿಕೆಗಳು ಯಮುನೆಗೆ ಹೊಸಜೀವ ಕೊಟ್ಟಿದೆ. ವಾಟ್ಸ್ ಆ್ಯಪ್‌ನಲ್ಲಿ ಆ ಚಿತ್ರಗಳು ಧಾರಾಳವಾಗಿ ಹರಿದಾಡುತ್ತಿವೆ. ಒಂದು ವಾರದ ಹಿಂದಷ್ಟೇ ಪಂಜಾಬಿನ ಜಲಂಧರ್ ನಗರವಾಸಿಗಳು ಕಣ್ಣುಜ್ಜಿ ನೋಡಿದಾಗ ನಂಬದಾದರು. ಹಿಮಾಲಯದ ದೌಲಧರ್ ಶೃಂಗ ಮೈಮುರಿದು ನಿಂತಿರುವುದು ಸ್ಪಷ್ಟವಾಗಿ ಕಾಣಿಸಿತು. ಕೊರೊನಾದ ಭಯವನ್ನೂ ಮರೆತು ‘ಕಣ್ಣು ಮುಟ್ಟಬೇಡಿ’ ಎಂಬ ಸೂಚನೆಯನ್ನೂ ಕೊಡವಿ ಮತ್ತೆ ಮತ್ತೆ ಹಿಮಾಲಯದ ಆ ದೃಶ್ಯವನ್ನು ಕಣ್ಣುತುಂಬ ತುಂಬಿಕೊಂಡರು. ಜಲಂಧರ್ ಸುತ್ತಲೂ ವಾಯುಗೋಳ ಸದಾ ಮಾಲಿನ್ಯ ಕಣಗಳಿಂದ ತುಂಬಿ ಎದುರಿಗಿದ್ದವರೇ ಕಾಣದಷ್ಟು ದೂಳು ಸಂಚಯಿಸುತ್ತಿತ್ತು. ಹೊರಗೆ ವಾಹನಗಳ ಓಡಾಟವಿಲ್ಲ, ಜನಗಳು ಗೃಹಬಂಧಿ, ವಾಯುಗೋಳ ತನ್ನ ನಿಜಸ್ವರೂಪವನ್ನು ತೋರಿಸಿತ್ತು. ಕ್ರಿಕೆಟ್‌ಪಟು ಹರ್‌ಭಜನ ಸಿಂಗ್ ‘ಅರೆರೇ, ನಾನು ಇಲ್ಲಿಂದ ಹಿಮಾಲಯವನ್ನು ನೋಡುತ್ತಿದ್ದೇನೆಯೆ?’ ಎಂದು ಖುಷಿಯಾಗಿ ಮಾಸ್ಕ್ ತೆಗೆದು ಉದ್ಗಾರವನ್ನು ಎತ್ತಿದ. ನಿಜಕ್ಕೂ ಇದು ಸಂಭ್ರಮಿಸಬೇಕಾದ್ದೆ. ಏಕೆಂದರೆ ಜಲಂಧರ್‌ನಿಂದ 200 ಕಿಲೋ ಮೀಟರ್‌ಗೂ ಹೆಚ್ಚು ದೂರವಿರುವ ಹಿಮಾಲಯ ಕಾಣುವುದೆಂದರೆ?

ADVERTISEMENT
ಕೊರೊನಾ ರೋಗಾಣುವಿನ ತವರು ಎಂದು ಗುರ್ತಿಸಲಾಗಿರುವ ಚೀನಾದ ವುಹಾನ್‌ನಲ್ಲಿ ಮಾಂಸದ ಮಾರಾಟಗಾರನೊಬ್ಬ ಗ್ರಾಹಕರ ನಿರೀಕ್ಷೆಯಲ್ಲಿರುವುದು. ಇಲ್ಲಿನ ಮಾಂಸದಂಗಡಿಗಳು ವನ್ಯಮೃಗಗಳ ಮಾಂಸವನ್ನೂ ಪೂರೈಸುತ್ತವೆ.

ರಾಜಧಾನಿ ದೆಹಲಿ ಮೊನ್ನೆ ಮೊನ್ನೆಯವರೆಗೆ ಹೊಂಜು (ಹೊಗೆ+ಮಂಜು) ತುಂಬಿಕೊಂಡು ತತ್ತರಿಸಿಹೋಗಿತ್ತು. ನಗರವಾಸಿಗಳು ಹಿಡಿ ಶಾಪ ಹಾಕುತ್ತಿದ್ದರು. ಸರಿ–ಬೆಸ ಸಂಖ್ಯೆಯ ವಾಹನಗಳನ್ನು ಪರ್ಯಾಯ ದಿನಗಳಲ್ಲಿ ರಸ್ತೆಗಿಳಿಸುವ ವ್ಯವಸ್ಥೆಯೂ ದೊಡ್ಡ ಫಲವನ್ನೇನೂ ಕೊಡಲಿಲ್ಲ. ದಶಕದ ಹಿಂದೆಯೇ ಅಲ್ಲಿ ಡೀಸೆಲ್ ವಾಹನಗಳನ್ನು ನಿಷೇಧಿಸಿ, ಅದಾದರೂ ಪರಿಹಾರ ಕೊಡಬಹುದೆಂಬ ಪ್ರಯೋಗವೂ ಸಂಪೂರ್ಣವಾಗಿ ಫಲಕೊಡಲಿಲ್ಲ. ಪಂಜಾಬಿನಲ್ಲಿ ವ್ಯವಸಾಯ ಮುಗಿದಾಗ, ಕೂಳೆಯನ್ನು ಸುಟ್ಟು ಅದರ ಕಾರ್ಬನ್ ಕಣಗಳು ದೆಹಲಿಯನ್ನು ಮುತ್ತಿದಾಗ ಸರ್ವೋಚ್ಚ ನ್ಯಾಯಾಲಯವೇ ಅಸಮಾಧಾನ ವ್ಯಕ್ತಪಡಿಸಿ ‘ನೀವು ಜನಗಳನ್ನು ಹೀಗೆ ಕೊಲ್ಲುತ್ತಿದ್ದೀರಾ?’ ಎಂದು ಎಚ್ಚರಿಸಿತ್ತು. ದೆಹಲಿ ವಸ್ತುಶಃ ನರಕವಾಗಿತ್ತು. ಇದಕ್ಕೆಲ್ಲ ಬ್ರೇಕ್ ಹಾಕಿದ್ದು ಕೊರೊನಾ ವೈರಸ್ – ‘ಸಾಲಾ, ಏಕ್ ವೈರಸ್!’ ಈಗ ದೆಹಲಿಯ ವಾಯುಗೋಳದಲ್ಲಿ ಶೇ. 50 ಭಾಗ ಮಾಲಿನ್ಯ ಕಡಿಮೆಯಾಗಿದೆ. ಅಷ್ಟರಮಟ್ಟಿಗೆ ದೆಹಲಿ ನಿವಾಸಿಗಳಿಗೆ ಖುಷಿಯಾಗಿರಬಹುದು. ಸಾವು ಎದುರಾದಾಗಲೂ ಮತ್ತೆ ಯಾವುದೋ ಸಂಗತಿ ಸಾಂತ್ವನ ತರುತ್ತದೆ. ದೆಹಲಿಯೊಂದೇ ಅಲ್ಲ, ಭಾರತದಲ್ಲಿ ಈ ಗಳಿಗೆಯಲ್ಲಿ 103 ನಗರಗಳು ಮಾಲಿನ್ಯದ ಹೊದಿಕೆಯನ್ನು ಅತ್ತ ಸರಿಸಿ ನಗುತ್ತಿವೆ. ಇಂಥ ಸುದ್ದಿ ನಮ್ಮ ಬದುಕಿನಲ್ಲಿ ಎಂದಾದರೂ ಸಿಕ್ಕೀತೆ?

ಇತ್ತ ಬೆಂಗಳೂರಿನ ಮಲ್ಲೇಶ್ವರದಲ್ಲಿ ಕೆಲವು ಮನೆಗಳ ಮೇಲೆ ನವಿಲು ಕಾಣಿಸಿಕೊಂಡವು. ಬೀದಿಯಲ್ಲಿ ರಾಜಾರೋಷ ಓಡಾಟ. ನಗರ ಹೇಗಿದೆ ಎಂದು ಇನ್‌ಸ್ಪೆಕ್ಷನ್ ಮಾಡುವ ಸರತಿ ಅವುಗಳಿಗೆ. ನಗರವಾಸಿಗಳು ಕ್ವಾರಂಟೈನ್‌ನಲ್ಲಿರುವಾಗ ಜನ–ವಾಹನ ಹೊರಗೆ ಬರುವುದಿಲ್ಲ ಎಂದು ಅವು ಹೇಗೆ ಲೆಕ್ಕಹಾಕಿದವೋ ತಿಳಿಯದು. ಸುತ್ತಲಿನ ನಿಶ್ಯಬ್ದ ಅವುಗಳಿಗೆ ಸ್ಫೂರ್ತಿ, ಧೈರ್ಯ ಕೊಟ್ಟಿರಬೇಕು. ಇನ್ನು ತಿರುಪತಿ ತಿಮ್ಮಪ್ಪನ ಸದ್ಯದ ಏಕಾಂತ ಎಲ್ಲ ಭಕ್ತರಿಗೂ ಗೊತ್ತು. ಒಬ್ಬ ಕುತೂಹಲಿ ತಿರುಪತಿ ಬೆಟ್ಟದ ತಿರುವುಗಳಲ್ಲೇ ನಿಂತು ಕಂಡದ್ದು ತಂಡತಂಡಗಳಲ್ಲಿ ಆರಾಮವಾಗಿ ರಸ್ತೆಗಳಲ್ಲಿ ಇಳಿದಿದ್ದ ಜಿಂಕೆಗಳನ್ನು. ಇದು ಸಾಧ್ಯವೆ? ಪ್ರತಿವರ್ಷ ವಾಯುಮಾಲಿನ್ಯ ಸಂಬಂಧಿತ ರೋಗದಿಂದ ಚೀನಾದಲ್ಲಿ ಹತ್ತು ಲಕ್ಷ ಮಂದಿ ಸಾಯುತ್ತಾರೆಂಬುದು ಡ್ಯೂಕ್ ವಿಶ್ವವಿದ್ಯಾಲಯದ ಪರಿಸರ ತಜ್ಞ ಜಿಮ್ ಸ್ಯಾಂಗ್ ಕೊಟ್ಟಿರುವ ಅಂಕೆ ಅಂಶ. ‘ಚೀನಾದ ಮೇಲೆ ಕೊರೊನಾ ವೈರಸ್‌ನ ಆಕ್ರಮಣ ದೊಡ್ಡದೇನಲ್ಲ ಬಿಡಿ, ಈಗ ಆ ದೇಶದ ವಾಯುಗೋಳ ದೊಡ್ಡ ಪ್ರಮಾಣದಲ್ಲಿ ಮಾಲಿನ್ಯದಿಂದ ಮುಕ್ತವಾಗಿದೆ. ಕೊರೊನಾ ವೈರಸ್‌ನಿಂದ ಸುಮಾರು 3,200 ಮಂದಿ ಸತ್ತಿರಬಹುದು. ಆದರೆ ಶುದ್ಧ ವಾಯುಗೋಳ ಒಂದು ಲಕ್ಷ ಜನರನ್ನು ಬದುಕಿಸಿದೆಯಲ್ಲ’ ಎನ್ನುತ್ತಿದ್ದಾನೆ. ಇದನ್ನು ಯಾವ ಲೆಕ್ಕಕ್ಕೆ ಸೇರಿಸಬೇಕು, ಪಾಪಕ್ಕೋ, ಪುಣ್ಯಕ್ಕೋ?

ಜನ–ವಾಹನ ರಸ್ತೆಗಿಳಿಯುವುದು ಕಡಿಮೆಯಾದಂತೆ ಬೆಂಗಳೂರಿನ ರಸ್ತೆಗಳಲ್ಲಿ ಅಲ್ಲೊಂದು ಇಲ್ಲೊಂದು ನವಿಲು ಕಾಣಿಸಿಕೊಳ್ಳುತ್ತಿವೆ. ಎಚ್‌.ಎಸ್‌.ಆರ್‌. ಲೇಔಟ್‌ನ ಮರದ ಮೇಲಿನ ಈ ನವಿಲಿಗೀಗ ಯಾವ ನಿರ್ಬಂಧವೂ ಇದ್ದಂತಿಲ್ಲ.

ಬೆಲ್ಜಿಯಂನ ರಾಜಧಾನಿ ಬ್ರುಸೆಲ್ಸ್ ಸದಾ ಗಿಜಿಗುಟ್ಟುವ ರಾಜಕೀಯ ಕೇಂದ್ರ. ಮೆಟ್ರೊ, ರೈಲು, ಬಸ್ಸು, ಮೋಟಾರ್ ವಾಹನಗಳು ಈಗ ವಸ್ತುಶಃ ಅಲ್ಲಿ ಸ್ತಬ್ಧವಾಗಿವೆ. ಕೊರೊನಾ ವೈರಸ್ ಇದಕ್ಕೇನೂ ರಿಯಾಯಿತಿ ಕೊಟಿಲ್ಲ. ಹಿಂದೆ ಅಲ್ಲೂ ಭೂಕಂಪನಗಳಾಗುತ್ತಿದ್ದವು, ನೆಲ ನಡುಗುತ್ತಿತ್ತು. ಅಷ್ಟೇಕೆ ಅಲ್ಲಿನ ಸಾರಿಗೆ ಸಂಪರ್ಕಗಳೇ ದಿನವೂ ಭೂಮಿಯನ್ನು ನಡುಗಿಸುತ್ತಿದ್ದವು. ಹೀಗಾಗಿ ಭೂಕಂಪನ ತಜ್ಞರಿಗೆ ಸರಿಯಾಗಿ ರೆಕಾರ್ಡ್ ಮಾಡುವುದು ಕೂಡ ಭಾರಿ ಸಮಸ್ಯೆಯಾಗಿತ್ತು. ಈಗ ಆ ತಜ್ಞರು ಹೇಳುತ್ತಾರೆ – ‘ಭೂಮಿಯ ಅತ್ಯಂತ ಸಣ್ಣ ಕಂಪನವನ್ನೂ ನಾವು ಗುರುತಿಸಬಹುದು, ಇದೆಲ್ಲ ಕೊರೊನಾ ಕೃಪೆ’. ಬೋಸ್ಟನ್ ವಿಶ್ವವಿದ್ಯಾಲಯದ ಸಂಶೋಧಕಿಯೊಬ್ಬಳು ಡೆಸಿಬಲ್ ಮೀಟರ್ ಹಿಡಿದು ತನ್ನ ವಿಶ್ವವಿದ್ಯಾಲಯದ ಹತ್ತಿರವೇ ಇರುವ ಕೆನ್‌ಮೋರ್ ಸ್ಕೈರ್‌ಗೆ ಹೋದಾಗ, ಇದೇನಿದು ‘ಪಿನ್ ಡ್ರಾಪ್ ಸೈಲೆನ್ಸ್’ ಎಂದು ಖುಷಿಪಟ್ಟಿದ್ದಾಳೆ. ಪ್ರತಿದಿನ ಅದೇ ಚೌಕದಲ್ಲಿ 90 ಡೆಸಿಬಲ್ ಶಬ್ದ ಕಿವಿಯ ತಮಟೆಗೆ ತಾಕಿ ಭಾರೀ ಕಿರಿಕ್ ಉಂಟುಮಾಡುತ್ತಿತ್ತಂತೆ. ಈಗ ನೋಡಿದರೆ ಬರೀ 68 ಡೆಸಿಬಲ್ ಅಷ್ಟೇ. ನಾವು ಮಾತನಾಡಿದರೆ 70 ಡೆಸಿಬಲ್ ಶಬ್ದ ಉಂಟಾಗುತ್ತದೆ. ಈಗ ಪಿಸುಗುಟ್ಟಿದರೂ ಸಾಕು, ಅಷ್ಟು ದೂರ ಕೇಳಿಸುತ್ತದೆ ಎಂದು ಅಚ್ಚರಿಪಡುತ್ತಾಳೆ.

ಒಂದರೆಕ್ಷಣ ಈ ಕೊರೊನಾ ಮಂತ್ರ ಪಠಿಸುವ ಬದಲು ಭೂಮಿಯ ತೀರ ಇತ್ತೀಚಿನ ಚರಿತ್ರೆಯ ಪುಟ ತೆರೆದರೆ ಅಲ್ಲೂ ವಿಸ್ಮಯ. ನಮ್ಮ ಕೆ.ಜಿ.ಎಫ್.ನಲ್ಲಿ ಚಿನ್ನದ ಗಣಿಯ ಕಥೆ 2001ಕ್ಕೇ ಮುಗಿಯಿತು. ಚರಮಗೀತೆ ಹಾಡಿ ಆಯಿತು. ಗಣಿಯ ನಿತ್ಯದ ಶಬ್ದಕ್ಕೆ ಹೆದರಿ ಕಾಡುಪ್ರಾಣಿಗಳು ಗಾವುದ ಗಾವುದ ದೂರ ಹೋಗಿದ್ದವು. ಅನಂತರ ಏನಾಯಿತು? ಸ್ಥಳೀಯರು ಕಂಡಂತೆ ಕೆ.ಜಿ.ಎಫ್. ಸುತ್ತಮುತ್ತ ಕೃಷ್ಣಮೃಗಗಳು ಧಾರಾಳವಾಗಿ ಬರುತ್ತಿವೆ. ಅವುಗಳ ಸಂಖ್ಯೆ ಸಾವಿರ ಮುಟ್ಟಿವೆಯಂತೆ. ‘ಚಿನ್ನವೇನೋ ಹೋಯಿತು, ಕೊನೆಯಪಕ್ಷ ಕೃಷ್ಣಮೃಗಗಳನ್ನಾದರೂ ಸಂರಕ್ಷಿಸಲು ಯೋಜನೆ ರೂಪಿಸಿ’ ಎಂದು ಅಲ್ಲಿನ ಜನ ಅರಣ್ಯ ಇಲಾಖೆಯ ಮೊರೆಹೊಕ್ಕಿದ್ದಾರಂತೆ.

ಮನುಷ್ಯಕೃತ ಮಹಾಪರಾಧಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಇನ್ನೊಂದು ಸಂಗತಿ ನಿಮ್ಮ ನೆನಪಿನಿಂದ ಹಾರಿಹೋಗಿರಲಾರದು. ಅದು ಯುಕ್ರೇನ್‌ನ (ಆಗಿನ ರಷ್ಯ) ಚೆರ್ನೊಬಿಲ್ ಕಥೆ. ಅಲ್ಲಿ ಪರಮಾಣು ಸ್ಥಾವರದಲ್ಲಿ ಅಪಘಾತ ಸಂಭವಿಸಿ, ವಿಕಿರಣ ಹೊರಹೊಮ್ಮಿ ಅತ್ತ ಸೈಬೀರಿಯಾದವರೆಗೆ ವಿಕಿರಣ ಮಾಲಿನ್ಯ ಉಂಟುಮಾಡಿತ್ತು. ಹಲವು ಬಗೆಯ ಜೀವಿಗಳು, ವಿಶೇಷವಾಗಿ ಕಂದುಕರಡಿ, ಹಿಮಸಾರಂಗಗಳು ಬಲಿಯಾಗಿ ಅವುಗಳು ಜನ್ಮಕೊಟ್ಟ ಮರಿಗಳೆಲ್ಲ ವಿಕೃತಾಂಗ ಹೊಂದಿದ್ದವು. ಇತ್ತ, ಸಾವಿರಾರು ಜನರಿಗೆ ಗರ್ಭಪಾತವಾಗಿತ್ತು. ವಿಕಿರಣದ ಸೋರಿಕೆ ಎಂದರೆ ಅದೇನು ಸೀಮೆಎಣ್ಣೆಯ ಡಬ್ಬ ಸೋರಿದಂತಲ್ಲ. ವಿಕಿರಣ ಹಬ್ಬಿದಷ್ಟು ದೂರವೂ ಜೀವಿಗಳನ್ನು ಹಂತಹಂತವಾಗಿ ಕೊಲ್ಲುತ್ತ ಹೋಗುತ್ತವೆ. ಸಹಸ್ರಾರು ವರ್ಷಗಳ ಕಾಲ ಈ ವಿಕಿರಣ ಸದ್ದಿಲ್ಲದ ಸಾವಿಗೆ ಎಡೆಮಾಡಿಕೊಡುತ್ತದೆ. ಈ ಅವಘಡ ಸಂಭವಿಸಿದ್ದು 34 ವರ್ಷಗಳ ಹಿಂದೆ, ಏಪ್ರಿಲ್ 26, 1986ರಲ್ಲಿ. ಕ್ಯಾನ್ಸರ್‌ಗೆ ಬಲಿಯಾದವರ ಖಚಿತ ಸಂಖ್ಯೆ ಇನ್ನೂ ಲಭ್ಯವಿಲ್ಲ. 29,900 ಕಿಲೋ ಮೀಟರ್ ದೂರದ ಬೆಲಾರಿಸ್ ಎಂಬ ಗಣರಾಜ್ಯಕ್ಕೂ ವಿಕಿರಣ ಹಬ್ಬಿತ್ತು. ಸ್ವೀಡನ್, ಫಿನ್ಲೆಂಡ್, ಆಸ್ಟ್ರಿಯಾ, ನಾರ್ವೆ, ಬಲ್ಗೇರಿಯ, ಸ್ವಿಟ್ಜರ‍್ಲೆಂಡ್ – ವಿಕಿರಣದಿಂದ ತತ್ತರಿಸಿಹೋಗಿ ಜನರನ್ನು ಕಾಪಾಡುವುದೇ ರಾಷ್ಟ್ರಿಯ ಯೋಜನೆಯಾಯಿತು. ತೀರಾ ಹತ್ತಿರದ ನಗರದ ಪ್ರಿಪ್ಯಾಟ್‌ನ್ನು ‘ಘೋಸ್ಟ್ ಸಿಟಿ’ ಎಂದೇ ಕರೆಯುತ್ತಿದ್ದಾರೆ. ಕೇವಲ 30 ಗಂಟೆಯಲ್ಲಿ 50 ಸಾವಿರ ಜನರನ್ನು ಚೆರ್ನೊಬಿಲ್ ನಗರದಿಂದ ಸ್ಥಳಾಂತರಿಸಬೇಕಾಯಿತು. 34 ವರ್ಷಗಳ ನಂತರ ಅಲ್ಲಿ ಏನಾಗಿದೆಯೆಂದರೆ, ಮನುಷ್ಯ ಇಣುಕಲೂ ಹಿಂಜರಿಯುವ ಜಾಗವಾಗಿ ಕಾಡುಕೋಣ, ಕಂದುಕರಡಿ, ಕಾಡುಹಂದಿಗಳು ಹಾಯಾಗಿ ಜೀವ ನಡೆಸಿವೆಯಂತೆ. ರಷ್ಯ ಇದನ್ನು ವನ್ಯಧಾಮವಾಗಿ ಪರಿವರ್ತಿಸಲು ಆಗಲೇ ಯೋಚಿಸಿತ್ತು. ಪಾಪ, ಆ ಪ್ರಾಣಿಗಳಿಗೇನು ಗೊತ್ತು; ಅವುಗಳ ಮುಂದಿನ ಸಂತತಿ ಕೂಡ ವಿಕಿರಣದಿಂದ ಪಾರಾಗುವಂತಿಲ್ಲ.

ಒಂದು ಅಂಶ ನಿಮಗೆ ಥಟ್ಟನೆ ಅರ್ಥವಾಗುತ್ತದೆ: ಮನುಷ್ಯನ ಸುಳಿವಿಲ್ಲದಿದ್ದರೆ, ಅರಣ್ಯ ಬೋಳಿಸದಿದ್ದರೆ, ವನ್ಯಜೀವಿಗಳು ತಮ್ಮ ಆವಾಸದಲ್ಲಿ ಹಾಯಾಗಿರುತ್ತವೆ. ಈಗ ವಾಸ್ತವಕ್ಕೆ ಬರೋಣ. ಮನುಷ್ಯನನ್ನು ಎಷ್ಟು ದಿನ ‘ಲಾಕ್‌ಡೌನ್’ನಲ್ಲಿ ಹಿಡಿದಿಡಬಹುದು? ಕೊರೊನಾ ವೈರಸ್ ತಂದಿರುವ ಮಹಾಮಾರಿ ತನ್ನ ಹಿಡಿತವನ್ನು ಸಡಿಲಿಸುತ್ತಲೇ ಮತ್ತೆ ಮನುಷ್ಯನಿಗೆ ಅದೇ ಬುದ್ಧಿ. ಪ್ರಕೃತಿಯ ಮೇಲೆ ಮತ್ತೆ ಆಕ್ರಮಣ ಮಾಡುವುದು ಶತಸಿದ್ಧ. ಎಂದು ತಾನೆ ನಾವು ಪಾಠ ಕಲಿಯುತ್ತೇವೆ? ಈಗಿನದು ಪ್ರಕೃತಿ ನೀಡಿರುವ ಒಂದು ಸಣ್ಣ ಎಚ್ಚರಿಕೆ ಅಷ್ಟೇ. ಕೊರೊನಾ ವೈರಸ್ ತಾಕಿದ ಮೇಲೆ ಪ್ರಕೃತಿ ತಜ್ಞರೊಬ್ಬರು ಹೇಳಿದ ಮಾತು: ‘ಭೂಮಿ ಈಗ ಸ್ವಲ್ಪ ಉಸಿರಾಡುತ್ತಿದೆ, ಆದರೆ ನಾವು ಉಸಿರು ಬಿಗಿ ಹಿಡಿದಿದ್ದೇವೆ’.

ಪ್ರಕೃತಿಗೇಕೆ ಮುನಿಸು?

ಬನ್ನಿ, ನದಿ ವಿಹಾರಕ್ಕೆ ಎಂದು ಕರೆಯುವಂತಿದೆ ಯಮುನೆ. ದೆಹಲಿಯಲ್ಲಿ ಮಾಲಿನ್ಯದ ಪ್ರಮಾಣ ಕಡಿಮೆಯಾದಂತೆಲ್ಲ ಯಮುನಾ ನದಿಯ ಹೊಳಪೂ ಹೆಚ್ಚುತ್ತಿದೆ.

ಪ್ರಕೃತಿ ಮತ್ತು ಭೂಮಿ ಬೇರೆಯಲ್ಲ. ಪ್ರಕೃತಿಯ ನಾಶ ಎಂದರೆ ಅದು ನಿಶ್ಚಯವಾಗಿಯೂ ಭೂಮಿಯ ಪರಿಸರದ ನಾಶ. ಭೂಮಿ ಹುಟ್ಟಿದ ಸಂಗತಿ ನಮ್ಮ ಊಹೆಗೂ ನಿಲುಕದ್ದು. ಆದರೆ ವಿಜ್ಞಾನಿಗಳಿರುವುದೇ ಪ್ರಕೃತಿಯ ರಹಸ್ಯವನ್ನು ಬಿಡಿಸಲು. ಭೂವಿಜ್ಞಾನಿಗಳು ಹೇಳುತ್ತಿದ್ದಾರೆ – ಭೂಮಿ ಹುಟ್ಟಿ 460 ಕೋಟಿ ವರ್ಷಗಳಾಗಿವೆ. ಆದರೆ ತನ್ನ ಸುತ್ತ ವಾಯುಗೋಳ ನಿರ್ಮಿಸಲು ಜೀವೋತ್ಪತ್ತಿಗೆ ನೆರವಾಗಲು ಬೇಕಾದ ಪರಿಕರಗಳನ್ನು ಕೂಡಿಡಲು ಮೊದಲ ನೂರು ಕೋಟಿ ವರ್ಷಗಳ ತಯಾರಿ ಮಾಡಿಕೊಂಡಿತ್ತು. ಬರಿ ಒಂದು ಶತಮಾನವನ್ನಷ್ಟೇ ಬಾಳುವ ಮನುಷ್ಯ ಮೊದಮೊದಲು ಅದೆಷ್ಟು ಪ್ರಕೃತಿಯನ್ನು ಕೊಳ್ಳೆ ಹೊಡೆದ ಎಂದರೆ ಈಗ ಕನಿಷ್ಠ ಎಂದರೆ ಭೂಮಿಯನ್ನು ಮುನ್ನಿನ ಸ್ಥಿತಿಗೆ ತರಲು 300 ವರ್ಷಗಳ ಪರಿಶ್ರಮ ಬೇಕಂತೆ.

ಹಿಂದೆಯೂ ಜ್ವಾಲಾಮುಖಿಗಳಿದ್ದವು, ಈಗಲೂ ಇವೆ. ಹಿಂದೆಯೂ ಭೂಕಂಪನಗಳಾಗಿದ್ದವು, ಈಗಲೂ ಆಗುತ್ತಿವೆ. ಹಿಂದೆಯೂ ಸುನಾಮಿ ಹುಚ್ಚೆದ್ದು ಕುಣಿಯುತ್ತಿತ್ತು, ಈಗಲೂ ಅದು ಮರೆಯಾಗಿಲ್ಲ. ಅವೆಷ್ಟೋ ಪ್ರಾಕೃತಿಕ ವಿಕೋಪಗಳನ್ನು ಪೂರ್ವಭಾವಿಯಾಗಿ ತಿಳಿಯುವ ತಂತ್ರದಲ್ಲೂ ಮನುಷ್ಯ ಜಯ ಸಾಧಿಸಿದ್ದಾನೆ. ಕೋಟ್ಯಂತರ ಜನರ ಜೀವ ಈ ತಂತ್ರಜ್ಞಾನದ ಪ್ರಗತಿಯಿಂದಾಗಿ ಬಚಾವಾಗಿದೆ. ಹೀಗೆಂದ ಮಾತ್ರಕ್ಕೆ ಭೂಮಿಯ ಮೇಲೆ ಮನುಷ್ಯ ಏಕಸ್ವಾಮ್ಯ ಸಾಧಿಸುವಂತಿಲ್ಲ. ನಾವು ನೆನಪಿನಲ್ಲಿಟ್ಟುಕೊಳ್ಳಬೇಕು, ಈ ಭೂಮಿಯನ್ನು ಸುಮಾರು ಒಂದು ಟ್ರಿಲಿಯನ್ (1,000,000,000,000) ಜೀವಿಗಳೊಂದಿಗೆ ಹಂಚಿಕೊಂಡಿದ್ದೇವೆ. ನಾವು ಹುಟ್ಟುವ ಮೊದಲೇ ಕಪ್ಪೆ ಇತ್ತು, ಹಲ್ಲಿ, ಮೊಸಳೆ, ಹಾವುಗಳಂಥ ಸರೀಸೃಪಗಳಿದ್ದವು, ಹಕ್ಕಿಗಳಿದ್ದವು. ಅವುಗಳ ಬಾಳ್ವೆಗೆ ಮನುಷ್ಯನ ಹಂಗಿರಲಿಲ್ಲ. ಈಗಲೂ ಅಷ್ಟೇ, ಇಡೀ ಮನುಜಕುಲ ಕಣ್ಮರೆಯಾದರೆ, ಕೆಲವು ಸಾಕುಪ್ರಾಣಿಗಳಿಗೆ ತೊಂದರೆಯಾಗಬಹುದೇ ವಿನಾ ಉಳಿದ ಜೀವಿಗಳಿಗಲ್ಲ, ಅವು ಇನ್ನೂ ಚೆನ್ನಾಗಿಯೇ ಬಾಳುತ್ತವೆ.

ಪ್ರಶ್ನೆ ಇರುವುದು ಇಲ್ಲಿ. ಭೂಮಿಗೆ ನಮ್ಮಿಂದ ಏನೂ ಉಪಕಾರವಾಗಿಲ್ಲ; ಆದರೂ ಅದು ನಮಗೆ ಬದುಕಲು ಅವಕಾಶ ಕಲ್ಪಿಸಿಕೊಟ್ಟಿದೆ. ಪ್ರತಿಯಾಗಿ ನಾವು ಕೊಟ್ಟಿರುವುದೇನು?

ತುಂಬ ಹಿಂದಕ್ಕೆ ಹೋಗುವುದು ಬೇಡ. ಹದಿನೆಂಟನೆಯ ಶತಮಾನದ ಕೈಗಾರಿಕಾ ಕ್ರಾಂತಿ ಬ್ರಿಟನ್ನಿನಲ್ಲಿ ಪ್ರಾರಂಭವಾದೊಡನೆ ಶಕ್ತಿಯ ಬಳಕೆಗಾಗಿ ಮೊದಲು ಕೈ ಇಟ್ಟದ್ದೇ ಭೂಮಿಯ ಕಲ್ಲಿದ್ದಲ ದಾಸ್ತಾನಿಗೆ. ಅಲ್ಲಿಂದ ಪ್ರಾರಂಭ, ವಾಯುಗೋಳದ ಅಧಃಪತನದ ಮೊದಲ ಅಧ್ಯಾಯ. ಈಗ ಜಗತ್ತು ವಾರ್ಷಿಕ 3500 ಕೋಟಿ ಟನ್ನು ಕಾರ್ಬನ್ ಡೈ ಆಕ್ಸೈಡನ್ನು ವಾಯುಗೋಳಕ್ಕೆ ಜಮೆಮಾಡುತ್ತಿದೆ. 1900ರಲ್ಲಿ 200 ಕೋಟಿ ಇದ್ದದ್ದು ಕೈಗಾರಿಕಾ ಪ್ರಗತಿಯಿಂದ, ಹಾಗೆಯೇ ಜನಸಂಖ್ಯಾ ಸ್ಫೋಟದಿಂದ ಏಕಾಏಕಿ 3500 ಕೋಟಿಗೆ ತಲಪಿದೆ. ಭೂಮಿಗಾದರೋ ವಾಯುಗೋಳ ರಚಿಸಲು 100 ಕೋಟಿ ವರ್ಷ ಬೇಕಾಯಿತು. ನಮಗೆ ವಾಯುಗೋಳವನ್ನು ಮಾಲಿನ್ಯ ಮಾಡಲು ಬರಿ 120 ವರ್ಷಗಳು ಸಾಕಾಯಿತು. ಇಂಥದನ್ನೇ ನೋಡಿ ಹುಟ್ಟಿರಬೇಕು, ‘ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ’ ಎಂಬ ಗಾದೆ. ವಿಚಿತ್ರವೆಂದರೆ ನಮಗೆ ಬೇಕಾದ ವಾಯುವನ್ನು ನಾವೇ ಮಲಿನಮಾಡುತ್ತಿದ್ದೇವೆ. ಒಂದರ್ಥದಲ್ಲಿ ನಾವು ಭಸ್ಮಾಸುರರು. ಚೀನಾದಲ್ಲಿ ವಾರ್ಷಿಕ ಉಸಿರಿನ ತೊಂದರೆ ಸಂಬಂಧಿತ ಕಾಯಿಲೆಗಳಿಂದ 10 ಲಕ್ಷ ಜನ ಬಲಿಯಾಗುತ್ತಿದ್ದಾರೆ – ಏಕೆ ಹೇಳಿ? ವಾಯುಗೋಳಕ್ಕೆ ಪ್ರತಿವರ್ಷ ಚೀನಾ ತೂರಿಬಿಡುತ್ತಿರುವುದು 980 ಕೋಟಿ ಟನ್ನು ಕಾರ್ಬನ್ ಡೈ ಆಕ್ಸೈಡ್ - ‘ನಿಮ್ಮ ಫಲವನ್ನು ನೀವೇ ಉಣ್ಣಿ’ ಎಂದು ನಿಸರ್ಗ ಅದೇ ಮಾಲಿನ್ಯವನ್ನು ಹಿಂತಿರುಗಿಸುತ್ತಿದೆ.

ಕಾನೂನಿನ ಕಣ್ಣಿಗೆ ಮಣ್ಣೆರಚಿ ನಡೆಯುತ್ತಿರುವ ಚಟುವಟಿಕೆಗಳಿಂದಾಗಿ ವಿಶ್ವದ ಶ್ವಾಸಕೋಶ ಎಂದು ಹೆಸರಾದ ಅಮೆಜಾನ್‌ ಕೊಳ್ಳದ ಕಾಡು ಕೂಡ ವರ್ಷದಿಂದ ವರ್ಷಕ್ಕೆ ಸವಕಳಿಯಾಗುತ್ತಿದೆ.

ಏನು ಎಸೆದರೂ ಸಾಗರದ ಹೊಟ್ಟೆಗೆ ಸೇರುತ್ತದೆ ಎಂದು ಜಗತ್ತು ಪರಿಭಾವಿಸಿ ಪ್ಲಾಸ್ಟಿಕ್‌ ಅನ್ನು ತುಂಬಿಸುತ್ತ ಬಂತು, ಹಾಗೆಯೇ ಇತರ ಮಾಲಿನ್ಯಕಾರಕಗಳನ್ನು ಕೂಡ. ನಾವು ಉತ್ಸರ್ಜಿಸುವ ಎಲ್ಲ ಕಾರ್ಬನ್ ಡೈ ಆಕ್ಸೈಡನ್ನು ಕೂಡ ಸಸ್ಯಗಳು ತಮ್ಮ ದ್ಯುತಿ ಸಂಶ್ಲೇಷಣೆಗೆ ಬಳಸಿಕೊಳ್ಳುವುದಿಲ್ಲ. ಹೆಚ್ಚಿನ ಪಾಲನ್ನು ಸಾಗರ ಹೀರಿಕೊಳ್ಳುತ್ತದೆ. ಈಗಾಗಲೇ ಸಾಗರದ ನೀರು ಈ ಅನಿಲ ಸೇರಿ ಆಮ್ಲೀಯವಾಗುತ್ತಿದೆ. ಹವಳ ದ್ವೀಪಗಳನ್ನು ಬಿಳಿಚಿಕೊಳ್ಳುವಂತೆ ಮಾಡುತ್ತಿದೆ. ಒಂದು ಹಂತದಲ್ಲಿ ಇಡೀ ಸಾಗರ ಕಾರ್ಬನ್ ಡೈ ಆಕ್ಸೈಡನ್ನು ಹೀರಿಕೊಳ್ಳದ ಮಟ್ಟ ತಲಪಿದರೆ ಗತಿ ಏನು? ಒಂದು ಲೋಟ ನೀರಿಗೆ ಒಂದು ಲೋಟ ಉಪ್ಪು ಬೆರೆಸಿದರೆ ಅದು ಕರಗುವುದೆಂತು? ಇಂಥ ದುಃಸ್ಥಿತಿ ಸಮುದ್ರಕ್ಕೆ ಬಂದಿದೆ. ಏಕೆಂದರೆ ಅಂದಾಜಿನಂತೆ 38,000 ಶತಕೋಟಿ ಟನ್ನು ಕಾರ್ಬನ್ ಡೈ ಆಕ್ಸೈಡನ್ನು ಹೀರಿ ಸಂತೃಪ್ತವಾಗಿಬಿಟ್ಟಿದೆ. ಇನ್ನೂ ಹೆಚ್ಚುವರಿ ಕಾರ್ಬನ್ ಡೈ ಆಕ್ಸೈಡನ್ನು ಸ್ವೀಕರಿಸದ ಹಂತ ತಲುಪಿದರೆ, ಜೀವಜಗತ್ತು ಅರೆಕ್ಷಣವೂ ಈ ಗ್ರಹದಲ್ಲಿರಲಾರದು.

ಇನ್ನು, ಕಾಡುನಾಶದ ಪ್ರಮಾಣವನ್ನು ಊಹಿಸಿಕೊಂಡರೆ ಎದೆ ಬಡಿತ ಪ್ರಾರಂಭವಾಗುತ್ತದೆ. ಇದು ವಿಶ್ವಬ್ಯಾಂಕ್ ನೀಡಿರುವ ವರದಿ: ಇಪ್ಪತ್ತನೇ ಶತಮಾನದ ಆರಂಭದಿಂದ ತೊಡಗಿ ಈವರೆಗೆ ಪ್ರತಿವರ್ಷ 38,300 ಚದರ ಕಿಲೋ ಮೀಟರ್ ಕಾಡು ನಾಶವಾಗುತ್ತಿದೆಯಂತೆ. ಅಷ್ಟೇಕೆ, ಜಗತ್ತಿನಲ್ಲಿ ಶೇ. 20 ಭಾಗ ಆಮ್ಲಜನಕದ ಕೊಡುಗೆ ಅಮೆಜಾನ್‌ನ ಮಳೆಕಾಡಿನಿಂದ ಬರುತ್ತಿದೆ. ಅದನ್ನು ‘ವಿಶ್ವದ ಶ್ವಾಸಕೋಶ’ ಎನ್ನುವುದುಂಟು. ಕಳೆದ ಒಂದೇ ವರ್ಷದಲ್ಲಿ 9762 ಚದರ ಕಿಲೋ ಮೀಟರ್ ವಿಸ್ತೀರ್ಣದ ಕಾಡು ಬೋಳಾಗಿದೆ. ಉಪಗ್ರಹಗಳ ಕಣ್ಣು ಸುಳ್ಳು ಹೇಳುವುದಿಲ್ಲ. ವಿಶ್ವ ಪರಿಸರ ಯೋಜನೆಯ ಇತ್ತೀಚಿನ ವರದಿ ನೋಡಿದರೆ ದಿಗಿಲಾಗುತ್ತದೆ. ಪ್ರತಿ 24 ಗಂಟೆಗೆ 150ರಿಂದ 200 ಜೀವಿ ಪ್ರಭೇದಗಳು ಭೂಮಿಯಿಂದ ಕಣ್ಮರೆಯಾಗುತ್ತಿವೆ. ಇವೆಲ್ಲಕ್ಕೂ ಕಾರಣ ಮನುಷ್ಯನೇ. ಈ ಲೆಕ್ಕದಲ್ಲಿ ಜಗತ್ತಿನ ಪ್ರತಿ ಪ್ರಜೆಯೂ ಅಪರಾಧಿಯೇ. ಬಹುಶಃ ನಾವು ಒಂದು ಅಂಶವನ್ನು ಮನಗಂಡಿಲ್ಲ. ಈ ಜೀವಿಲೋಕದಲ್ಲಿ ಒಂದಲ್ಲ ಒಂದು ಹಂತದಲ್ಲಿ ಎಲ್ಲ ಜೀವಿಯೂ ಆಹಾರ ಸರಪಳಿಯ ಕೊಂಡಿಯೇ. ಒಂದು ಕಳಚಿದರೆ ಅದು ತರುವ ಆಘಾತ ಊಹೆಗೂ ಮೀರಿದ್ದು.

ಈಗಿನ ಕೊರೊನಾ ವೈರಸ್‌ನ ಮೂಲ ಹುಡುಕಲು ಹೊರಟರೆ ಅದು ನಮ್ಮ ಆಹಾರ ಪದ್ಧತಿಯನ್ನೇ ಪ್ರಶ್ನಿಸುವಂತಿದೆ. ಚೀನಾದ ವುಹಾಂಗ್ ಪಟ್ಟಣವೇ ಈ ವೈರಸ್‌ನ ಉಗಮ ಕೇಂದ್ರವಾಯಿತು. ಅಲ್ಲಿ ಸಾಕುಪ್ರಾಣಿಗಳನ್ನು ಕೊಲ್ಲುವುದಕ್ಕಿಂತ ಹೆಚ್ಚು ವನ್ಯಜೀವಿಗಳ ಮಾಂಸ ಮಾರಾಟವೇ ಹೆಚ್ಚು. ವನ್ಯಜೀವಿಗಳನ್ನು ಬೆಳೆಸಲೆಂದೇ ಇಡೀ ಚೀನಾದಲ್ಲಿ 20 ಸಾವಿರ ಫಾರಂಗಳಿವೆಯಂತೆ. ಅರಣ್ಯದ ಬಾವಲಿ, ಚಿಪ್ಪುಹಂದಿಗಳಲ್ಲಿದ್ದ ಕೊರೊನಾ ವೈರಸ್ ಈ ಮಾಂಸದಂಗಡಿಯಿಂದ ಕೊಂಡ ಮಾಂಸದ ಮೂಲಕ ಹೊರಬಿದ್ದು ಅಂತಿಮವಾಗಿ ಮನುಷ್ಯರ ಹೊಟ್ಟೆಹೊಕ್ಕಿತು. ಇಡೀ ಜಗತ್ತಿಗೇ ಅದು ಹಬ್ಬಿ ಈಗ ಮಾಡುತ್ತಿರುವ ರಾದ್ಧಾಂತ ಕಣ್ಣೆದುರಿಗೇ ಇದೆ. ಇಲ್ಲಿ ಒಂದು ಪ್ರಶ್ನೆ? ಮನುಷ್ಯನಿಗೆ ಸಹಜವಾದ ಆಹಾರ ಸೇವನೆ, ಅದು ಸಸ್ಯವಾಗಿರಬಹುದು, ಮಾಂಸವಾಗಿರಬಹುದು, ಎಂದೂ ಕಾಯಿಲೆಯನ್ನು ತರುವಷ್ಟು ಪ್ರಬಲ ಸೂಕ್ಷ್ಮಜೀವಿಗಳನ್ನು ಹೊಂದಿರುವುದಿಲ್ಲ. ಆದರೆ ಕಾಡುಪ್ರಾಣಿಗಳು ಕೆಲವು ವೈರಸ್‌ಗಳಿಗೆ ಸಹಜವಾದ ನಿರೋಧಕ ಶಕ್ತಿ ಬೆಳೆಸಿಕೊಂಡಿರುತ್ತವೆ. ಅದು ಮನುಷ್ಯನ ಹೊಟ್ಟೆ ಹೊಕ್ಕಾಗ, ಮನುಷ್ಯರಿಗೆ ನಿರೋಧಕ ಶಕ್ತಿ ಇರುವುದಿಲ್ಲ. ಒಬ್ಬರಿಂದ ಒಬ್ಬರಿಗೆ ಹರಡುತ್ತಲೇ ಹೋಗುತ್ತಿರುವುದು ಕಣ್ಣೆದುರಿಗೇ ಇದೆ. ಇದಕ್ಕೆ ನಿಸರ್ಗವನ್ನು ದೂಷಿಸಿದರೆ ಫಲವೇನು? ಹೀಗಿದ್ದರೆ ಹೇಗೆ ಎಂದು ಸಾವಿರ ಪ್ರಶ್ನೆಗಳನ್ನು ಕೇಳಬಹುದು. ವುಹಾಂಗ್‌ನಲ್ಲಿ ಒಡನೆಯೇ ಇದು ಮನುಷ್ಯರಿಗೆ ಹರಡದಂತೆ ತಡೆದಿದ್ದರೆ? ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ತುರ್ತಾಗಿ ಚೀನಾ ನಿಲ್ಲಿಸಿದ್ದರೆ?

ಈಗ ಇದು ಪ್ರಶ್ನಿಸುವ ಸಮಯವಲ್ಲ, ತಂತ್ರಜ್ಞಾನವಷ್ಟೇ ಅಲ್ಲ, ಈಗ ಕಾಯಿದೆಗಳೂ ಜಾಗತೀಕರಣಕ್ಕೆ ಒಗ್ಗಿರುವ ಸಮಯ. ಬಹುಶಃ ಇದನ್ನೇ ‘ನಮ್ಮ ಪಾಪದ ಕೊಡ ತುಂಬಿದೆ’ ಎಂದೋ, ‘ಮಾಡಿದ್ದುಣ್ಣೊ ಮಹಾರಾಯ’ ಎಂದೋ ಜನಸಾಮಾನ್ಯರು ಈ ಗಳಿಗೆಯಲ್ಲಿ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿರುವುದು.

ಕೊರೊನಾ ಲಾಕ್‌ಡೌನ್‌ ಕಾರಣದಿಂದಾಗಿ ‘ಭೂಮಿ ಈಗ ಸ್ವಲ್ಪ ಉಸಿರಾಡುತ್ತಿದೆ’ ಎನ್ನುವ ಮಾತನ್ನು ಮತ್ತೆ ನೆನಪಿಸಿಕೊಳ್ಳೋಣ. ಭೂಮಿ ತನ್ನ ಉಸಿರಾಟದ ಸಹಜಗತಿಯನ್ನು ತನ್ನಷ್ಟಕ್ಕೆ ಸರಿಪಡಿಸಿಕೊಳ್ಳಬಲ್ಲದು ಎನ್ನುವುದಕ್ಕೆ ಪ್ರಸಕ್ತ ಸಂದರ್ಭ ಒಂದು ಉದಾಹರಣೆಯಷ್ಟೇ. ಆದರೆ, ನಾವು ನಮ್ಮ ಉಸಿರಾಟಕ್ಕೆ ಭೂಮಿಯನ್ನೇ ನೆಚ್ಚಿದ್ದೇವೆ. ಮತ್ತೆ ಭೂಮಿಯ ಕೊರಳು ಹಿಂಡಿದರೆ, ಆಗ ಭೂಮಿ ತಿರುಗಿಬಿದ್ದರೆ, ನಮ್ಮ ಉಸಿರು ನಿಲ್ಲಲೂಬಹುದು.

ಪ್ರತಿಕ್ರಿಯಿಸಿ: ರಚನಾತ್ಮಕ ಟೀಕೆ–ಟಿಪ್ಪಣಿಗಳಿಗೆ ಸ್ವಾಗತ. ಪ್ರತಿಕ್ರಿಯೆ ಚುಟುಕು, ಚುರುಕಾಗಿರಲಿ. ಇ–ಮೇಲ್: feedback@sudha.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.