ADVERTISEMENT

ವಿಭಿನ್ನ ಜಾಗಗಳಲ್ಲಿ ವೇಗ ಬದಲಿಸುವ ಸಮಯ!

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 15:07 IST
Last Updated 30 ಜೂನ್ 2019, 15:07 IST
ಸ್ಪೇಸ್‌ ಟೈಮ್
ಸ್ಪೇಸ್‌ ಟೈಮ್   

ಕಾಲ ಮತ್ತು ಸಮಯ ಅಥವಾ ಸಮಯ ಮತ್ತು ಬಾಹ್ಯಾಕಾಶ ಈ ಎರಡರ ನಿಕಟ ಸಂಬಂಧವನ್ನು 20ನೇ ಶತಮಾನದ ಮಹಾನ್ ಭೌತವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್‌ ತನ್ನ ಸಾಪೇಕ್ಷತಾವಾದದಲ್ಲಿ ವಿವರಿಸಿದ್ದಾರೆ.

ಸಮಯ ಯಾವಾಗಲೂ ಘಟನೆಯ ಸ್ಥಳ ಅಥವಾ ಬಾಹ್ಯಾಕಾಶಕ್ಕೆ ಸಂಬಧಿಸಿರುತ್ತದೆ. ಐನ್‌ಸ್ಟೀನ್‌ ಪ್ರಕಾರ ಉದ್ದ, ಅಗಲ, ಎತ್ತರದ ಜತೆಗೆ ನಾಲ್ಕನೆಯ ಆಯಾಮವು ಸಮಯವೇ ಆಗಿದೆ. ಸಮಯವು ಯಾವಾಗಲೂ ಸಾಪೇಕ್ಷವಾದದ್ದು. ಒಬ್ಬ ವೀಕ್ಷಕನಿಗೆ ಹೋಲಿಕೆಯಲ್ಲಿ ಒಂದು ಘನ ವಸ್ತುವು ಅತಿ ವೇಗವಾಗಿ ಚಲಿಸುತ್ತಿದ್ದರೆ, ಅದಕ್ಕೆ ಸಂಬಂಧಪಟ್ಟಂತೆ ಕಾಲವು ನಿಧಾನವಾಗಿ ಚಲಿಸುತ್ತದೆ.

ಐನ್‌ಸ್ಟೀನ್‌ ಪ್ರಕಾರ ಬಾಹ್ಯಾಕಾಶ ಮತ್ತು ಸಮಯದ ಪ್ರಶ್ನೆ ಬಂದಾಗ ಯಾವಾಗಲೂ ನಮಗೆ ಸರಿಯಾದ ಉತ್ತರ ದೊರೆಯುವುದೇ ಇಲ್ಲ. ಸ್ವತಂತ್ರವಾದ ಬಾಹ್ಯಾಕಾಶ ಮತ್ತು ಸಮಯದಲ್ಲಿ ಉತ್ತರವನ್ನು ಹುಡುಕಲು ಸ್ವತಂತ್ರವಾದ ಚೌಕಟ್ಟು ಎನ್ನುವುದು ಇರುವುದೇ ಇಲ್ಲ.

ADVERTISEMENT

ಬಾಹ್ಯಾಕಾಶದಲ್ಲಿ ಸಮಯವೂ ಹೇಗೆ ಮುಂದೆ ಹೋಗುತ್ತದೆ? ಎಂಬ ಪ್ರಶ್ನೆಗೆ ಉತ್ತರವಾಗಿ ಯಾವುದೇ ವಸ್ತುವು ಬೆಳಕಿನ ವೇಗದ ಸಮೀಪದಲ್ಲಿ ಚಲಿಸುತ್ತಿದ್ದಾಗ, ಸಮಯ ನಿಧಾನವಾಗಿ ಚಲಿಸುತ್ತದೆ. ಅಂದರೆ ಬೆಳಕಿನ ಸಮೀಪದ ವೇಗದಲ್ಲಿ ಚಲಿಸುತ್ತಿರುವ ವಾಹನದಲ್ಲಿ ಇಟ್ಟ ಗಡಿಯಾರದ ವೇಳೆ ಹಿಗ್ಗುತ್ತದೆ.

ಗೊತ್ತಿರುವ ಹಾಗೆ ಬೆಳಕಿನ ವೇಗ ಸೆಕೆಂಡಿಗೆ 3 ಲಕ್ಷ ಕಿ.ಮೀ. ಈ ವೇಗವನ್ನು ತಲುಪಲು ಯಾರಿಗೂ ಸಾಧ್ಯವಾಗಿಲ್ಲ. ಒಂದು ವಸ್ತುವು ಬೆಳಕಿನ ವೇಗದಲ್ಲಿ ಚಲಿಸುತ್ತಿದ್ದರೆ, ದ್ರವ್ಯರಾಶಿಯು ಅನಂತವಾಗಿ ಉದ್ದವು ಸೊನ್ನೆಯಾಗಿರುತ್ತದೆ. ಈ ಸ್ಥಿತಿಯನ್ನು ಯಾವ ವಸ್ತುವೂ ತಲುಪಿಲ್ಲ. ಅಂತರಿಕ್ಷ ಯಾನದಲ್ಲಿ ಇರುವ ಉಪಗ್ರಹಗಳ ಸರಾಸರಿ ವೇಗವು ಗಂಟೆಗೆ ಸುಮಾರು 28 ರಿಂದ 40 ಸಾವಿರ ಕಿ.ಮೀ.

ಈವರೆಗೆ ಅತಿ ವೇಗವಾಗಿ ಪ್ರಯಾಣ ಮಾಡುವ ಉಪಗ್ರಹವು ಅಪೊಲೋ-10 ಆಗಿದ್ದು, ಅದರ ವೇಗ ಸೆಕೆಂಡಿಗೆ 11 ಕಿ.ಮೀ. ಅದರಲ್ಲಿ ಇತ್ತ ಗಡಿಯಾರವು ಭೂಮಿಯಲ್ಲಿರುವ ಗಡಿಯಾರಕ್ಕಿಂತ ಕೆಲವೇ ಮಿಲಿಸೆಕೆಂಡ್ ಗಳಷ್ಟು ನಿಧಾನವಾಗಿ ಚಲಿಸಿದರೂ ಇದು ಐನ್‌ಸ್ಟೀನ್‌ “ಟೈಮ್ ಡೈಲೇಶನ್” ಸೂತ್ರಕ್ಕೆ ಒಳ್ಳೆಯ ಉದಾಹರಣೆ.

ಸಮಯವು ಭವಿಷ್ಯ ಕಾಲಕ್ಕೂ ಹರಿಯುತ್ತ ಬೇರೆ ಬೇರೆ ಜಾಗಗಳಲ್ಲಿ ತನ್ನ ವೇಗವನ್ನು ಬದಲಾಯಿಸುತ್ತದೆ ಎಂಬುದನ್ನು ಐನ್‌ಸ್ಟೀನ್‌ 100 ವರ್ಷಗಳ ಹಿಂದೆಯೇ ತನ್ನ ಸಿದ್ಧಾಂತದ ಮೂಲಕ ತೋರಿಸಿಕೊಟ್ಟಿದ್ದಾನೆ.

ಸಮಯದ ಯಂತ್ರ ಎನ್ನುವುದು ವಿಜ್ಞಾನಿಗಳ ಪ್ರಕಾರ “ವರ್ಮ್ ಹೋಲ್”.ಆಗಿದೆ. ಇದರ ಋಣಾತ್ಮಕ ಶಕ್ತಿಯು ಬಾಹ್ಯಾಕಾಶ ಮತ್ತು ಅದರ ಸಮಯವನ್ನು ತನ್ನ ಸುರಂಗದ ಬಾಯಿಗೆಳೆದುಕೊಂಡು ಭೂತಕಾಲ ಅಥವಾ ಭವಿಷ್ಯತ್ ಕಾಲಕ್ಕೆ ಒಯ್ಯುವ ಸಮಯ ಬರುತ್ತದೆ ಎಂದು ಅನೇಕ ವಿಜ್ಞಾನಿಗಳ ನಂಬಿಕೆ.

ಪ್ರಸಿದ್ಧ ಖಗೋಳ ವಿಜ್ಞಾನಿ ಸ್ಟೀಫನ್ ಹಾಕಿನ್ಸ್ ಹೇಳುವಂತೆ ವರ್ಮ್ ಹೋಲ್ ಎನ್ನುವುದು ಊಹಿಸಲಾರದಷ್ಟು ಅತ್ಯಂತ ಸೂಕ್ಷ್ಮವಾಗಿದೆ. ಇದನ್ನು ಮನುಷ್ಯ ಹಾದು ಹೋಗಲು ಸಾದ್ಯವಿಲ್ಲ. ಆದರೆ, ಕೆಲವು ವಿಜ್ಞಾನಿಗಳು ಈ ವರ್ಮ್ ಹೋಲ್ ನನ್ನು ಟ್ರಿಲಿಯನ್ ನಷ್ಟು ದೊಡ್ಡದು ಮಾಡಿ ಮನುಷ್ಯ ಅಥವಾ ಉಪಗ್ರಹಗಳು ಹಾಡು ಹೋಗುವಂತೆ ಮಾಡುವ ಸಾಧ್ಯತೆಯ ಬಗ್ಗೆ ಯೋಚಿಸುತ್ತಿದ್ದಾರೆ.

ಆದರೆ ಒಂದು ಕೊನೆ ಭೂಮಿಯ ಹತ್ತಿರವಿದ್ದು, ಮತ್ತೊಂದು ಯಾವುದಾದರೂ ದೂರದ ಗ್ರಹದಲ್ಲಿ ಇರಬಹುದು. ಇದೂ ಅಲ್ಲದೇ ವರ್ಮ್ ಹೋಲ್ ನ ಎರಡೂ ಕೊನೆಯೂ ಭೂಮಿಯ ಮೇಲಿದೆ. ದೂರದ ಬದಲು ಟೈಮ್ ನಿಂದ ಬೇರೆ ಮಾಡಿದ್ದರೆ. ವರ್ಮ್ ಹೋಲ್ ಮೂಲಕ ಭೂಮಿಯಿಂದ ಹೊರಟು ಭೂಮಿಯಲ್ಲೇ ಹೊರಬರುವುದು. ಆಗ ಅದರಿಂದ ಹೊರಬಂದಾಗ ನೀವು ಭೂತಕಾಲದಲ್ಲಿದ್ದು, ಬಹುಶಃ ಗತಕಾಲದ ಜೀವಿಗಳು ನೀವು ಹೊರಬರುವುದನ್ನು ನೋಡುತ್ತಿರಬಹುದು. ಇವೆಲ್ಲಾ ಇನ್ನೂ ಬರೀ ಊಹೆಯಾಗಿದ್ದು, ನಿಜವಾಗುವ ಕಾಲ ಯಾವಾಗ ಬರುವುದೊ ಎಂದು ವಿಜ್ಞಾನಿಗಳ ಸಂಶೋಧನೆಯೇ ಹೇಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.