ADVERTISEMENT

ಉಸಿರುಗಟ್ಟಿಸುವ ಹಸಿರುಕ್ರಾಂತಿ

ನಾಗೇಶ ಹೆಗಡೆ
Published 11 ಜುಲೈ 2020, 19:30 IST
Last Updated 11 ಜುಲೈ 2020, 19:30 IST
ಹುಣಸೂರಿನ ಬಳಿಯ ಲಕ್ಷ್ಮಣ ತೀರ್ಥ ನದಿ
ಹುಣಸೂರಿನ ಬಳಿಯ ಲಕ್ಷ್ಮಣ ತೀರ್ಥ ನದಿ   
""

ಹುಣಸೂರು ಪಟ್ಟಣದ ನಟ್ಟನಡುವೆ ‘ಲಕ್ಷ್ಮಣ ತೀರ್ಥ’ ಎಂಬ ಚಂದದ ಕಿರುನದಿ ಅಂಕುಡೊಂಕಾಗಿ ಹರಿಯುತ್ತದೆ. ಅದು ಇಡೀ ಪಟ್ಟಣದ ಹೆಮ್ಮೆಯ ಆಸ್ತಿಯೇ ಆಗಬಹುದಿತ್ತು. ಆದರೆ ಡಿಸೆಂಬರಿನಲ್ಲಿ ನೋಡಿದರೆ ಅದೊಂದು ಹಸುರು ಚಾಪೆಯಂತೆ ಕಾಣುತ್ತದೆ. ಆಳದಲ್ಲಿ ನೀರಿದ್ದರೂ ಮೇಲೆಲ್ಲ ದಟ್ಟ ಜಲಕಳೆ ಬೆಳೆದಿದೆ. ಕಣ್ಣು ಹಾಯಿಸಿದಷ್ಟು ದೂರವೂ ಅದೊಂದು ಜೌಗು ಮರುಭೂಮಿಯಾಗಿದೆ. ರವಿಕಿರಣವೂ ಭೇದಿಸದಂಥ ಆ ಬಗ್ಗಡದಲ್ಲಿ ಜಲಸಸ್ಯಗಳು ಕೊಳೆತು, ಆಮ್ಲಜನಕವೆಲ್ಲ ಖಾಲಿಯಾಗಿ, ಅದೊಂದು ದುರ್ನಾತದ ಧಾರೆಯಾಗುತ್ತದೆ.

ಮೀನು, ಕಪ್ಪೆ, ನೀರೊಳ್ಳೆ ಹಾವು ಮುಂತಾದ ಯಾವ ಪ್ರಾಣಿಯೂ ಬದುಕಲಾರದ, ಹಾಗಾಗಿ ಜಲಪಕ್ಷಿಗಳಿಗೂ ಆಸರೆ ನೀಡದ ಜಡಜಲ ಅದು. ಥೇಟ್‌ ಇಂದ್ರಜಿತುವಿನ ಬಾಣದಿಂದ ಪ್ರಜ್ಞೆತಪ್ಪಿದ ಲಕ್ಷ್ಮಣನ ಹಾಗೆ ಇಡೀ ನದಿ ನಿಶ್ಚಲವಾಗಿ ಕಾಣುತ್ತದೆ. ಸಂಜೀವಿನಿಯನ್ನು ತರಬೇಕಾದ ಹನುಮಂತ ಎಲ್ಲಿದ್ದಾನೆ? ಅಲ್ಲೇ ಹುಣಸೂರಿನಲ್ಲೇ ಇದ್ದಾನೆ! ಕಲ್ಲಾಗಿದ್ದಾನೆ. ಪ್ರತಿ ಸಂಕ್ರಾಂತಿಯ ನಂತರ ಅಲ್ಲಿ ಹನುಮ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲೆಂದು ಬೇರೆ ಜಿಲ್ಲೆಗಳಿಂದಲೂ ಜನ ಬರುತ್ತಾರೆ. ಪೇಟೆಯ ಮಧ್ಯದ ಆ ಕೆಸರುಕೂಪದಲ್ಲಿ ಕಮಲವೂ ಅರಳುತ್ತಿಲ್ಲವಾದ್ದರಿಂದ ಲಕ್ಷಣತೀರ್ಥದತ್ತ ಯಾರೂ ಸುಳಿಯುವುದಿಲ್ಲ.

ನದಿ-ಕೆರೆಗಳು ಹೀಗೆ ಮೃತಸ್ಥಿತಿಯನ್ನು ತಲುಪಿದರೆ ಇಂಗ್ಲಿಷ್‌ನಲ್ಲಿ ಅದಕ್ಕೆ ಯುಟ್ರೊಫಿಕೇಶನ್‌ ಎನ್ನುತ್ತಾರೆ. ಇಲ್ಲೂ ಒಂದು ವಿಪರ್ಯಾಸವಿದೆ. ಗ್ರೀಕ್‌ ಭಾಷೆಯಿಂದ ಪಡೆದ ಈ ಶಬ್ದದ ಅರ್ಥ ‘ಸುಪೋಷಿತ’ ಅಂದರೆ, ಮೈಕೈ ತುಂಬಿಕೊಂಡ ಆರೋಗ್ಯವಂತ! ಆದರೆ ಇಲ್ಲಿ ನಳನಳಿಸುವುದು ನದಿಯಲ್ಲ, ಅದರ ಮೇಲೆ ಬೆಳೆದಿರುವ ಕಳೆಸಸ್ಯಗಳು.

ADVERTISEMENT

ಅದೇ ನದಿ ಮುಂದೆ ಕಾವೇರಿಗೆ ಕೂಡಿ ಕನ್ನಂಬಾಡಿ ಜಲಾಶಯವನ್ನು ಸೇರುತ್ತದೆ. ಅಲ್ಲಿಂದ ಹೊರಬಿಡುವ ಹೆಚ್ಚುವರಿ ನೀರು ಮತ್ತೆ ಶ್ರೀರಂಗಪಟ್ಟಣದ ಮಧ್ಯೆ ಕಾವೇರಿಯ ಧಾರೆಯಾಗುತ್ತದೆ. ಇಲ್ಲಿಯೂ ಬೇಸಿಗೆ ಬಂತೆಂದರೆ ನೀರಿನ ಧಾರೆಯ ಬದಲು ಪಾಚಿಯ ಹಸುರು ಚಾಪೆಯೇ ಕಾಣುತ್ತದೆ. ನೀರು ಇಲ್ಲಿ ಕಣ್ಮರೆಯಾಗಿ ಅಂತರಗಂಗೆಯಾಗಿ ಹರಿಯುತ್ತದೆ. ಅದರ ಮೇಲೆ ಬೆಳೆಯುವ ದಟ್ಟ ಸಸ್ಯರಾಜಿಗೆ ಕನ್ನಡದಲ್ಲಿ ಅಂತರಗಂಗೆ ಎಂತಲೇ ಕರೆಯುತ್ತಾರೆ.

ಬೇಸಿಗೆಯಲ್ಲಿ ನೀರಿನ ಬೇಡಿಕೆ ಹೆಚ್ಚುತ್ತ ಹೋದಂತೆ ನಮ್ಮ ಜಲಸಿರಿಯ ಜಿಲ್ಲೆಗಳ ಹಣೆಬರಹ ಎಲ್ಲೆಲ್ಲೂ ಇದೇ ಆಗಿದೆ. ಕೆರೆಗಳಲ್ಲಿ ನೀರಿದ್ದರೂ ಅದು ಮೃಗಜಲವಾಗುತ್ತದೆ. ಜೀವಪೋಷಕವಾಗಬೇಕಿದ್ದ ನೀರು ಕೇವಲ ಕಳೆಪೋಷಕವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಏನೆಂದರೆ ನೀರಿನಲ್ಲಿ ರಂಜಕ ಮತ್ತು ಸಾರಜನಕ ಅತಿಯಾದ ಪ್ರಮಾಣದಲ್ಲಿ ಸೇರ್ಪಡೆಯಾಗುವುದು. ದಟ್ಟ ಜನವಸತಿ ಇರುವಲ್ಲಿ ಚರಂಡಿ ನೀರಲ್ಲಿ ಈ ಎರಡೂ ಬಗೆಯ ರಸಗೊಬ್ಬರಗಳು ಸಾಂದ್ರವಾಗಿರುತ್ತವೆ. ನಮ್ಮ ದೇಶದ ಸಾಬೂನು, ಡಿಟರ್ಜೆಂಟ್‌ಗಳಿಗೆ ರಂಜಕವನ್ನು ಕೃತಕವಾಗಿ ಸೇರಿಸಿರುತ್ತಾರೆ. ಅದಕ್ಕೇ ಬೆಂಗಳೂರಿನಲ್ಲಿ ಭಾರೀ ಮಳೆ ಬಿದ್ದಾಗಲೆಲ್ಲ ಕೊಳೆನೀರಲ್ಲಿ ಬುರುಗಿನ ಬೆಟ್ಟಗಳೇ ಸೃಷ್ಟಿಯಾಗುತ್ತವೆ. ಜೊತೆಗೆ ಕೃಷಿ, ಉದ್ಯಾನಗಳಿಗೆ ಹೇರಳ ರಸಗೊಬ್ಬರವನ್ನು ಸೇರ್ಪಡೆ ಮಾಡುವುದರಿಂದ ಅದು ಕ್ರಮೇಣ ಹರಿದು ಬಂದು ನಗರದಾಚಿನ ಜಲಧಾರೆಯೂ ಜೀವವಿರೋಧಕ ಆಮೋನಿಯಾ ದುರ್ನಾತವನ್ನು ಸೂಸುವ ವಿಕ್ಷಿಪ್ತ ಹಸಿರುಕ್ರಾಂತಿಯನ್ನು ಮಿಂಚಿಸುತ್ತದೆ. ನಿಸರ್ಗ ತಾನು ‘ಅಪಾಯಕ್ಕೆ ಸಿಲುಕಿದ್ದೇನೆ’ ಎಂದು ಕೆಂಪು ಬಾವುಟವಲ್ಲ, ಹಸಿರು ಬಾವುಟದಲ್ಲೇ ಹೇಳಬೇಕಾಗಿದೆ.

ಪೃಥ್ವಿಗೆ ಒಂಬತ್ತು ಬಗೆಯ ಸುರಕ್ಷಾ ಸೀಮಾರೇಖೆ (ಪ್ಲಾನೆಟರಿ ಬೌಂಡರಿ)ಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ನಮ್ಮ ಬದುಕಿನಲ್ಲೂ ಅಂಥ ಗಡಿರೇಖೆಗಳಿರುತ್ತವೆ. ವೇಗದ ಹೆದ್ದಾರಿಗಳಲ್ಲಿ ರಸ್ತೆ ದಾಟಬೇಡಿ, ಹೈಟೆನ್ಶನ್‌ ವಿದ್ಯುತ್ ತಂತಿಗಳ ಸಮೀಪ ಹೋಗಬೇಡಿ, ಜಲಪಾತದಂಚಿನ ನೀರನ್ನು ದಾಟಬೇಡಿ, ಬೆಂಕಿಯ ಸಮೀಪ ಹೋಗಬೇಡಿ, ಎಲ್ಲರೆದುರು ಕತ್ತೆಯ ಹಿಂಭಾಗದಲ್ಲೂ, ಹೆಣ್ಣುಮಕ್ಕಳ ಮುಂಭಾಗದಲ್ಲೂ ಹಸ್ತಕ್ಷೇಪ ಮಾಡಬೇಡಿ… ಇತ್ಯಾದಿ ಇರುತ್ತವಲ್ಲ? ಪೃಥ್ವಿಗೂ ಅಂಥದ್ದೇ ಶೀಲವಲಯಗಳನ್ನು ನಿಗದಿಪಡಿಸಲಾಗಿದೆ. ಅದರಲ್ಲಿ ಮೂರನ್ನು ಇದೀಗ ದಾಟುತ್ತಿದ್ದೇವೆ; ಎರಡನ್ನು ಆಗಲೇ ಧಿಕ್ಕರಿಸಿ ತುಂಬ ದೂರ ನುಗ್ಗಿದ್ದೇವೆ. ಅವುಗಳಲ್ಲಿ ಜೀವಿವೈವಿಧ್ಯ ರಕ್ಷಣೆ ಒಂದು, ಮತ್ತು ಸಾರಜನಕ- ರಂಜಕಗಳ ಅತಿಬಳಕೆ ಇನ್ನೊಂದು. ಭೂಲೋಕದ ಜೀವಿವೈವಿಧ್ಯದಲ್ಲಿ ಶೇಕಡಾ 58ರಷ್ಟನ್ನು ನಾವು ಧ್ವಂಸ ಮಾಡಿದ್ದೇವೆ. ಅಪರೂಪದ ಬಹಳಷ್ಟು ಜೀವಜಂತುಗಳು ನಿರ್ನಾಮಗೊಂಡಿವೆ. ಅಳಿದುಳಿದವನ್ನಾದರೂ ಉಳಿಸಿಕೊಳ್ಳೋಣ ಎಂದು ಈ 2020ನೇ ಇಸವಿಯನ್ನು ‘ಜೀವಿವೈವಿಧ್ಯ ರಕ್ಷಣೆಯ ವರ್ಷ’ ಎಂದು ವಿಶ್ವಸಂಸ್ಥೆ ಘೋಷಿಸಿದೆ.

ಸಾರಜನಕ ಮತ್ತು ರಂಜಕದ ಅತಿಬಳಕೆಯ ಕತೆಯೂ ಅಷ್ಟೇ ರಂಜನೀಯವಾಗಿದೆ, ಜೀವಪೋಷಕವಾಗುವ ಬದಲು ಜೀವಮಾರಕವಾಗುತ್ತಿದೆ. ಹಿಂದೆಲ್ಲ ರಸಗೊಬ್ಬರಕ್ಕೆ ಬೇಕಿದ್ದ ಸಾರಜನಕವನ್ನು ಗಣಿಯಿಂದ ಎತ್ತುತ್ತಿದ್ದರು. ಅದಕ್ಕೆ ‘ಚಿಲಿ ಸಾಲ್ಟ್‌ ಪೀಟರ್‌’ ಎಂಬ ಹೆಸರಿತ್ತು. ಅದೇ ಖನಿಜದಿಂದ ಸ್ಫೋಟಕಗಳನ್ನು ತಯಾರಿಸಬಹುದೆಂದು ಗೊತ್ತಾದ ಮೇಲೆ ಮೊದಲನೇ ಮಹಾಯುದ್ಧದಲ್ಲಿ ಮಿತ್ರದೇಶಗಳು ಅಂಥ ಎಲ್ಲ ಖನಿಜ ನಿಕ್ಷೇಪಗಳೂ ತಮಗೇ ಬೇಕೆಂದು ದಿಗ್ಬಂಧನ ಹಾಕಿದವು. ಜರ್ಮನಿಗೆ ಸ್ಫೋಟಕ ತಯಾರಿಸಲು ಸಾರಜನಕ ಬೇಕೇ ಬೇಕಿತ್ತು. ಅವರಿಗದು ಸಿಗಲಿಲ್ಲ. ಆದರೆ ಅವರ ಕರಾಮತ್ತು ನೋಡಿ! ಗಾಳಿಯಲ್ಲಿ ಹೇಗಿದ್ದರೂ ಶೇಕಡಾ 78ರಷ್ಟು ಸಾರಜನಕವೇ ಇದೆಯಲ್ಲ, ಗಾಳಿಯನ್ನೇ ಹಿಂಡಿ ಸಾರಜನಕವನ್ನು ದ್ರವರೂಪದಲ್ಲಿ ತೆಗೆಯುವ ಯಂತ್ರವನ್ನು ಅಲ್ಲಿನ ರಸವಿಜ್ಞಾನಿಗಳು (ಫ್ರಿಝ್‌ ಹೇಬರ್‌ ಮತ್ತು ಕಾರ್ಲ್ ಬಾಷ್‌) ರೂಪಿಸಿದರು. ಯುದ್ಧ ಮುಗಿದ ನಂತರ ಅದೇ ತಂತ್ರಜ್ಞಾನದಿಂದ ರಸಗೊಬ್ಬರ ತಯಾರಿಕೆ ಆರಂಭವಾಯಿತು. ನಿಸರ್ಗದ ಮೇಲೆ ಯುದ್ಧ ಸಾರಲಾಯಿತು. ಅದುವರೆಗೆ ಪ್ರಕೃತಿ ತನ್ನದೇ ನಿಧಾನ ಗತಿಯಲ್ಲಿ ಸಸ್ಯಗಳ ಬೇರಿನಲ್ಲಿರುವ ಏಕಾಣುಜೀವಿಗಳ ಮೂಲಕ ವಾಯುಮಂಡಲದ ಸಾರಜನಕವನ್ನು ಹೀರಿ ಮಣ್ಣಿಗೆ ಸೇರಿಸುತ್ತಿತ್ತು. ಅಥವಾ, ಮಳೆಗಾಲದ ಆರಂಭದಲ್ಲಿ ತುಸು ದಿಢೀರಾಗಿ ಗುಡುಗು ಮಿಂಚುಗಳ ಮೂಲಕ ಸಸ್ಯಗಳಿಗೆ ಸಾರಜನಕವನ್ನು ನೇರವಾಗಿ ಕೊಡುತ್ತಿತ್ತು (ಆದ್ದರಿಂದಲೇ ಕೊಪ್ಪಳ ಜಿಲ್ಲೆಯಲ್ಲಿ ಜೂನ್‌ ಮುಗಿದರೂ ಮಳೆಹನಿ ಬೀಳದಿದ್ದರೂ ಗಿಡಮರಗಳು ದಟ್ಟ ಹಸಿರನ್ನು ಚಿಮ್ಮಿಸುತ್ತವೆ).

ಗಾಳಿಯನ್ನು ಹಿಂಡಿ ರಸಗೊಬ್ಬರ (ಆಮೋನಿಯಾ)ವನ್ನು ತಯಾರಿಸುವ ತಂತ್ರದಂಡ ಸಿಕ್ಕಿದ್ದೇ ತಡ, ಮನುಕುಲದ ಗತಿಯೇ ಬದಲಾಯಿತು. ಎರಡನೆಯ ಮಹಾಯುದ್ಧದ ನಂತರವಂತೂ ಹಸಿವೆಯ ವಿರುದ್ಧದ ಯುದ್ಧಾಸ್ತ್ರವಾಗಿ ಹೊಲಕ್ಕೆ ಕಾರ್ಬಾಮೈಡ್‌ (ಯೂರಿಯಾ) ಮತ್ತು ಡಿಎಪಿಯನ್ನು ಸುರಿಯುತ್ತ ಏಷ್ಯದ ಬಡರಾಷ್ಟ್ರಗಳಲ್ಲೂ ಆಹಾರ ಉತ್ಪಾದನೆಯನ್ನು ಶೇಕಡಾ 300-400ರಷ್ಟು ಹೆಚ್ಚಿಸಲಾಯಿತು. ಸಸ್ಯಗಳಿಗೆ ಬೇಕಿದ್ದುದಕ್ಕಿಂತ ಐದುಪಟ್ಟು ಹೆಚ್ಚಿನ ಸಾರಜನಕ, ರಂಜಕಗಳನ್ನು ವಿಜ್ಞಾನಿಗಳೇ ಶಿಫಾರಸು ಮಾಡತೊಡಗಿದರು. ವಿಜ್ಞಾನಿಗಳು ಹೇಳಿದ್ದಕ್ಕಿಂತ ಜಾಸ್ತಿ ಪ್ರಮಾಣದಲ್ಲಿ ಉದ್ಯಮಿಗಳೂ ದಲ್ಲಾಳಿಗಳೂ ಅಂಗಡಿಕಾರರೂ ರೈತರಿಗೆ ಶಿಫಾರಸು ಮಾಡುವ ಪದ್ಧತಿ ಜಾರಿಗೆ ಬಂತು. ಔಷಧಗಳ ಭಾರೀ ಮಾರಾಟಗಾರರನ್ನು ಕಂಪನಿಗಳು ವಿದೇಶಕ್ಕೆ ರಂಜನೆಗೆ ಕರೆದೊಯ್ಯುವ ಹಾಗೆ ರಂಜಕ, ಸಾರಜನಕ, ಪೊಟಾಶ್‌ ಮತ್ತು ಪೀಡೆನಾಶಕ ಕೆಮಿಕಲ್‌ಗಳ ಭಾರೀ ಮಾರಾಟಗಾರರನ್ನೂ ಕಂಪನಿಗಳು ವಿಲಾಸೀ ಪ್ರಯಾಣಕ್ಕೆ ಕರೆದೊಯ್ಯುತ್ತವೆ.

ನಿಸರ್ಗಕ್ಕೆ ಏನನ್ನೇ ಎರಚಿದರೂ -ಕಸವಿರಲಿ, ವಿಷವಿರಲಿ- ಅದು ತಿರುಗಿ ನಮಗೇ ಬರುತ್ತದೆ. ರಸಗೊಬ್ಬರ ಎರಚಿದರೆ ಅದರ ಕೆಡುಕು ಗುಣಗಳು ದುಪ್ಪಟ್ಟು ರೂಪದಲ್ಲಿ ನಮಗೆ ಬರುತ್ತದೆ. ಕಾವೇರಿಯ ನೀರನ್ನು ಬೆಂಗಳೂರಿನ ನಲ್ಲಿಗಳಲ್ಲಿ ಹರಿಸುವ ಮುನ್ನ ಅದರಲ್ಲಿನ ಪಾಚಿ ಕಣಗಳನ್ನು ಕೊಲ್ಲಲೆಂದು ಹೆಚ್ಚು ಹೆಚ್ಚು ಕೆಮಿಕಲ್‌ಗಳನ್ನು ಸೇರಿಸಬೇಕಾಗಿ ಬರುತ್ತಿದೆ. ಗ್ರಾಮೀಣ ಅಂತರ್ಜಲದಲ್ಲೂ ನೈಟ್ರೇಟ್‌ ಮಾಲಿನ್ಯ ತೀರ ಹೆಚ್ಚಾಗುತ್ತಿದೆ. ಯುರೋಪಿನ ಪುಷ್ಪೋದ್ಯಮ ಬೆಂಗಳೂರಿಗೆ ಏಕೆ ಬಂತು ಗೊತ್ತೆ? ಅಲ್ಲಿನ ಅಂತರ್ಜಲದಲ್ಲಿ ನೈಟ್ರೇಟ್‌ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿ ಹೆಚ್ಚಿತ್ತು. ರಂಜಕ, ನೈಟ್ರೇಟ್‌ ಹಾವಳಿ ಅಮೆರಿಕ ಕೆನಡಾದಲ್ಲೂ ಅದೆಷ್ಟು ಹೆಚ್ಚಿತೆಂದರೆ 1990ರ ದಶಕದಲ್ಲಿ ಕೆರೆ-ನದಿ, ಸಮುದ್ರಗಳಲ್ಲಿ ನಿರ್ಜೀವ ಪ್ರಾಂತಗಳನ್ನು (ಡೆಡ್‌ಝೋನ್‌) ಗುರುತಿಸುವ ದೊಡ್ಡ ಅಭಿಯಾನವೇ ನಡೆಯಿತು. ಭಾರತದಲ್ಲೂ ಬಂಗಾಳ ಉಪಸಾಗರದಲ್ಲಿ 60 ಸಾವಿರ ಚದರ ಕಿ.ಮೀ. ವಿಸ್ತಾರದ ‘ಡೆಡ್‌ಝೋನ’ನ್ನು ನಾಲ್ಕು ವರ್ಷಗಳ ಹಿಂದೆಯೇ ನಮ್ಮ ಸಾಗರವಿಜ್ಞಾನಿಗಳು ಗುರುತಿಸಿದ್ದಾರೆ. ಸಪ್ತಸಾಗರಗಳಲ್ಲಿ ಅಂಥ ಮೃತಭಾಗಗಳ ಸಂಖ್ಯೆ 1980ರಲ್ಲಿ 80 ಇತ್ತು. ಇಂದು ಈ ಸಂಖ್ಯೆ 405ಕ್ಕೆ ಏರಿದೆ. ಮೀನು, ಹವಳ, ಆಮೆ, ಏಡಿ, ಸೀಗಡಿ ಏನೇನೂ ಇಲ್ಲದ ಜಲಮರುಭೂಮಿಗಳು ಅವು.

ಸೀಮೆಗೊಬ್ಬರದ ಅತಿಬಳಕೆಯಿಂದಲೇ ಪೃಥ್ವಿಯ ಎರಡು ಸೀಮಾರೇಖೆಗಳನ್ನು ನಾವು ದಾಟಿದ್ದೇವೆ. ಹಿಂದಕ್ಕೆ ಹೆಜ್ಜೆ ಇಡುವುದು ಕಷ್ಟ; ಆದರೆ ಅಸಾಧ್ಯವೇನಲ್ಲ. ನಗರಗಳಿಂದ ಹೊರಬರುವ ಚರಂಡಿರೊಚ್ಚೆಯನ್ನು ಸೋಸಿ ಒಣಗಿಸಿದರೆ ಅದು ಅತ್ಯುತ್ತಮ ಗೊಬ್ಬರವೇ ಹೌದು. ಚೀನಾದಲ್ಲಿ ಅದನ್ನು ಪಡೆಯಲೆಂದು ಕೃಷಿಕರು ಮುಂಗಡ ಬುಕಿಂಗ್‌ ಮಾಡುತ್ತಾರೆ. ಹುಬ್ಬಳ್ಳಿಯ ಉಣಕಲ್‌ ಕೆರೆ, ಬೆಂಗಳೂರಿನ ಬೆಳ್ಳಂದೂರು, ಅಗರ, ಹಳ್ಳಿಗಾಡಿನ 36 ಸಾವಿರ ಕೆರೆಗಳಲ್ಲಿ ಗಣಿಗಾರಿಕೆ ನಡೆಸಿದರೆ ಬಂಗಾರ ಗೊಬ್ಬರ ಸಿಗುತ್ತದೆ. ಕ್ರಮೇಣ ಕೆರೆಯೂ ನೌಕಾಯಾನಕ್ಕೆ, ಪಕ್ಷಿವೀಕ್ಷಣೆಗೆ ಅಣಿಯಾಗುತ್ತದೆ. ನಾವು ಅಣಿಯಾಗಬೇಕಷ್ಟೆ. ರಂಜಕದ ಸಮಸ್ಯೆ ತುಸು ಜಾಸ್ತಿ ದಾರುಣ. ಅದನ್ನು ಕಾರ್ಖಾನೆಗಳಲ್ಲಿ ಉತ್ಪಾದಿಸಲು ಸಾಧ್ಯವಿಲ್ಲ. ಗಣಿಗಳಿಂದಲೇ ಎತ್ತಬೇಕು. ಅದು ಮುಗಿದು ಹೋದರೆ ಮುಂದೆ ನಮ್ಮ ಕೆರೆಹಳ್ಳಗಳಿಂದಲೇ ಎತ್ತಬೇಕು. ಅಥವಾ ಹನುಮಂತ ಸಂಜೀವಿನಿ ಬೆಟ್ಟವನ್ನು ಹೊತ್ತು ತಂದಂತೆ ನಾವದನ್ನು ಬೇರೆ ಗ್ರಹದಿಂದ ಸಾಗಿಸಿ ತರಬೇಕು. ಏಕೆಂದರೆ ಜಗತ್ತಿನಲ್ಲಿ ಇನ್ನು 80 ವರ್ಷಗಳಿಗೆ ಸಾಲುವಷ್ಟು ರಂಜಕ ಮಾತ್ರ ಇದೆ. ದಿಲ್ಲಿಯಿಂದ ಹಳ್ಳಿಯವರೆಗಿನ ಯಾರೂ ಅದನ್ನೊಂದು ಗಂಭೀರ ಸಮಸ್ಯೆ ಎಂದೇ ಪರಿಗಣಿಸುತ್ತಿಲ್ಲ. ನಮ್ಮ ದೇಹಕ್ಕೆ ರಂಜಕದ ಕೊರತೆ ಉಂಟಾದರೆ ಸುಸ್ತು, ಸಂಧಿವಾತ, ಅಶಕ್ತತೆ, ಮೂಳೆ ಶಿಥಿಲತೆ ಇತ್ಯಾದಿ ಕಾಯಿಲೆ ಬಂತೆಂದು ನರಳುತ್ತೇವೆ. ಜಲದೇವತೆಗೆ ರಂಜಕದ ಅತಿಬಳಕೆಯ ಕಾಯಿಲೆ ಬಂದಿದೆ. ತುರ್ತು ಚಿಕಿತ್ಸೆ ಬೇಕಿದೆ.

**

ಭೂಲೋಕದ ಜೀವಿವೈವಿಧ್ಯದಲ್ಲಿ ಶೇಕಡಾ 58ರಷ್ಟನ್ನು ನಾವು ಧ್ವಂಸ ಮಾಡಿದ್ದೇವೆ. ಅಪರೂಪದ ಬಹಳಷ್ಟು ಜೀವಜಂತುಗಳು ನಿರ್ನಾಮಗೊಂಡಿವೆ. ಅಳಿದುಳಿದವನ್ನಾದರೂ ಉಳಿಸಿಕೊಳ್ಳೋಣ ಎಂದು ಈ 2020ನೇ ಇಸವಿಯನ್ನು ‘ಜೀವಿವೈವಿಧ್ಯ ರಕ್ಷಣೆಯ ವರ್ಷ’ ಎಂದು ವಿಶ್ವಸಂಸ್ಥೆ ಘೋಷಿಸಿದೆ.

**

ನಗರಗಳಿಂದ ಹೊರಬರುವ ಚರಂಡಿರೊಚ್ಚೆಯನ್ನು ಸೋಸಿ ಒಣಗಿಸಿದರೆ ಅದು ಅತ್ಯುತ್ತಮ ಗೊಬ್ಬರವೇ ಹೌದು. ಚೀನಾದಲ್ಲಿ ಅದನ್ನು ಪಡೆಯಲೆಂದು ಕೃಷಿಕರು ಮುಂಗಡ ಬುಕಿಂಗ್‌ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.