ADVERTISEMENT

ಬೆಂಕಿ ಅವಘಡ ತಡೆಗೆ ‘ಫೈರ್‌ಚಾಂಪ್’

ವಿಡಿಯೊ ಮೂಲಕ ಜನರಿಗೆ ರಕ್ಷಣಾ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 19:30 IST
Last Updated 18 ಫೆಬ್ರುವರಿ 2020, 19:30 IST
ಅಭಿಯಾನದ ಲೋಗೊ
ಅಭಿಯಾನದ ಲೋಗೊ   

ಒಂದು ವೇಳೆ ನಿಮ್ಮ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ಏನು ಮಾಡುತ್ತೀರಿ? ಅಯ್ಯೋ ಹೀಗೆ ಮಾಡಿದ್ದರೆ ಬೆಂಕಿ ಅವಘಡದಿಂದ ಪಾರಾಗಬಹುದು ಎಂಬ ಉಪಾಯ ನಿಮಗೆ ಗೊತ್ತಿದೆಯೇ? ಬೆಂಕಿಯಿಂದ ತಪ್ಪಿಸಿಕೊಳ್ಳಲು ಜನರಿಗೆ ನೀವು ಸಲಹೆಗಳನ್ನು ಹೇಳಬಯಸುವಿರಾ? ಹಾಗಾದರೆ ಈಗಲೇ ಕೈಜೋಡಿಸಿ ‘ಐ ಆ್ಯಮ್‌ ಫೈರ್‌ ಚಾಂಪಿಯನ್’ ಅಭಿಯಾನದ ಜೊತೆಗೆ.

ಕಾರ್ಲ್‌ಟನ್ಅಗ್ನಿ ದುರಂತದ 10ನೇ ವರ್ಷದ ಸ್ಮರಣಾರ್ಥ ‘ಬಿಯಾಂಡ್‌ ಕಾರ್ಲ್‌ಟನ್’ ಟ್ರಸ್ಟ್‌ ಆರಂಭಿಸಿರುವ ಈ ಅಭಿಯಾನದ ಮೂಲಕ ಅಗ್ನಿ ದುರಂತ ತಡೆಯುವ ಚಾಂಪಿಯನ್ ನೀವಾಗಬಹುದು. ಅಪಾಯಕ್ಕೂ ಮುನ್ನವೇ ಜಾಗೃತಗೊಳಿಸುವುದು ಅಭಿಯಾನದ ಉದ್ದೇಶ.

ಅವಘಡದಿಂದ ಪಾರಾಗುವ ತಂತ್ರಗಾರಿಕೆಗಳ ಕೊರತೆಯಿಂದಅಗ್ನಿ ದುರಂತಗಳಲ್ಲಿ ಸಿಲುಕಿ, ಎಷ್ಟೋ ಮಂದಿ ಅಸಹಾಯಕರಾಗಿ ಪ್ರಾಣ ಬಿಟ್ಟಿದ್ದಾರೆ. ಆದರೆ, ಈ ಅಭಿಯಾನದ ಮೂಲಕ ನೀವು ನೀಡುವ ಸಲಹೆ ಹಾಗೂ ಮಾರ್ಗದರ್ಶನಗಳು ಮುಂದೆ ಎದುರಾಗುವ ಅವಘಡಗಳಿಂದ ಜನರನ್ನು ಪಾರು ಮಾಡಲಿದೆ.

ADVERTISEMENT

ಅಭಿಯಾನದಲ್ಲಿ ಭಾಗವಹಿಸುವುದು ಹೇಗೆ?

#Iamafirechamp ಅಭಿಯಾನದಲ್ಲಿ ಭಾಗವಹಿಸಲು ಇಚ್ಛಿಸುವವರು 15 ಸೆಕೆಂಡುಗಳ ವಿಡಿಯೊ ಶೂಟ್‌ ಮಾಡಿ ಕಳುಹಿಸಬೇಕು. ಅದರಲ್ಲಿ ತಮ್ಮ ವಾಸಸ್ಥಾನ ಹಾಗೂ ಮಾಡುವ ಕೆಲಸದ ಬಗ್ಗೆ ತಿಳಿಸಬೇಕು. ಬೆಂಕಿ ಅವಘಡ ಎದುರಾದಾಗ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳನ್ನು ವಿಡಿಯೊ ಮೂಲಕ ಹಂಚಿಕೊಳ್ಳಬಹುದು.

ಪ್ರಾತ್ಯಕ್ಷಿಕೆ ಮೂಲಕವೂ ಪಾರಾಗುವ ತಂತ್ರಗಳನ್ನು ತಿಳಿಸಬಹುದು. ಕನ್ನಡ, ಇಂಗ್ಲಿಷ್‌, ಹಿಂದಿ ಸೇರಿ ಇತರೆ ಯಾವ ಭಾಷೆಯಲ್ಲಾದರೂ ವಿಡಿಯೊ ಚಿತ್ರೀಕರಿಸಬಹುದು.#Iamafirechamp ಹ್ಯಾಶ್‌ಟ್ಯಾಗ್‌ ಬಳಸಿ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್ ಅಥವಾinfo@beyondcarlton.org ವಿಳಾಸದಲ್ಲಿ ನಿಮ್ಮ ವಿಡಿಯೊ ಹಂಚಿಕೊಳ್ಳಬಹುದು.

ಏನಿದು ‘ಬಿಯಾಂಡ್ ಕಾರ್ಲ್‌ಟನ್’ ?

ನಗರದ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಕಾರ್ಲ್‌ಟನ್ ಟವರ್ಸ್‌ ಸಂಕೀರ್ಣದಲ್ಲಿ2010ರ ಫೆ.23ರಂದು ಸಂಭವಿಸಿದ ಅಗ್ನಿ ದುರಂತದಲ್ಲಿ ಒಂಬತ್ತು ಮಂದಿ ಪ್ರಾಣ ಕಳೆದುಕೊಂಡರು. ಈ ಕರಾಳ ಘಟನೆಯಲ್ಲಿ ತನ್ನ ಮಗನನ್ನು ಕಳೆದುಕೊಂಡ ಉದಯ್ ವಿಜಯನ್‌ ಎನ್ನುವವರು ಜನರಿಗೆ ಅಗ್ನಿ ಸುರಕ್ಷತಾ ಕ್ರಮಗಳ ಮಾಹಿತಿ ತಲುಪಿಸುವ ಉದ್ದೇಶದಿಂದ ‘ಬಿಯಾಂಡ್ ಕಾರ್ಲ್‌ಟನ್’ ಟ್ರಸ್ಟ್‌ ಪ್ರಾರಂಭಿಸಿದರು. ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಪೋಷಕರು ಹಾಗೂ ಸಂಬಂಧಿಕರ ಜತೆಗೂಡಿ ಈ ಅಭಿಯಾನ ಆರಂಭಿಸಿದ್ದಾರೆ.

‘ಅಗ್ನಿ ಸುರಕ್ಷತಾ ಕಾನೂನುಗಳ ಕೊರತೆ’

‘ಅಗ್ನಿ ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿ. ದೇಶದಲ್ಲಿ ಅಗ್ನಿ ಸುರಕ್ಷತಾ ಕಾನೂನು ಜಾರಿಗೆ ತರುವಲ್ಲಿ ನಿರಾಸಕ್ತಿ ತೋರಿದೆ. ಹೀಗಾಗಿ ವೇಗವಾಗಿ ಮಾಹಿತಿ ಪಸರಿಸುತ್ತಿರುವ ಸಾಮಾಜಿಕ ಮಾಧ್ಯಮಗಳನ್ನೇ ಅಭಿಯಾನದ ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದೇವೆ. ಈ ಅಭಿಯಾನ ನಾಗರಿಕರನ್ನು ಅಗ್ನಿ ಸುರಕ್ಷತೆಯ ಕಡೆಗೆ ಸನ್ನದ್ಧಗೊಳಿಸುವ ಒಂದು ಪ್ರಯತ್ನ’ ಎನ್ನುತ್ತಾರೆಬಿಯಾಂಡ್ ಕಾರ್ಲ್‌ಟನ್ ಸ್ಥಾಪಕಉದಯ್ ವಿಜಯನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.