ADVERTISEMENT

ನವಾಜ್‌ ಷರೀಫ್‌ ವಿರುದ್ಧ ತನಿಖೆ

ಭಾರತಕ್ಕೆ ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣ

ಪಿಟಿಐ
Published 8 ಮೇ 2018, 19:30 IST
Last Updated 8 ಮೇ 2018, 19:30 IST
ನವಾಜ್‌ ಷರೀಫ್‌
ನವಾಜ್‌ ಷರೀಫ್‌   

ಇಸ್ಲಾಮಾಬಾದ್‌: 490 ಕೋಟಿ ಡಾಲರ್‌ (ಸುಮಾರು ₹32,830 ಕೋಟಿ) ಮೊತ್ತವನ್ನು ಭಾರತಕ್ಕೆ ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ವಿರುದ್ಧ ತನಿಖೆ ನಡೆಸುವಂತೆ ಅಲ್ಲಿನ ಭ್ರಷ್ಟಾಚಾರ ತಡೆ ಘಟಕವು ಆದೇಶಿಸಿದೆ. ಭ್ರಷ್ಟಾಚಾರ ಆರೋಪದ ಹಲವು ಪ್ರಕರಣಗಳಿಂದ ಕಂಗೆಟ್ಟಿರುವ ಷರೀಫ್‌ ಅವರನ್ನು ಇದು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.

ಹಣ ಅಕ್ರಮ ವರ್ಗಾವಣೆ ಸುದ್ದಿಯು ‍ಪಾಕಿಸ್ತಾನದ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಅದನ್ನು ಗಣನೆಗೆ ತೆಗೆದುಕೊಂಡಿರುವ ರಾಷ್ಟ್ರೀಯ ಭ್ರಷ್ಟಾಚಾರ ತಡೆ ಘಟಕದ ಮುಖ್ಯಸ್ಥ ನ್ಯಾಯಮೂರ್ತಿ ಜಾವೇದ್‌ ಇಕ್ಬಾಲ್‌ ಅವರು ತನಿಖೆಗೆ ಆದೇಶಿಸಿದ್ದಾರೆ ಎಂದು ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ಪತ್ರಿಕೆ ವರದಿ ಮಾಡಿದೆ.

ವಿಶ್ವ ಬ್ಯಾಂಕ್‌ನ 2016ರ ಹಣ ರವಾನೆ ವರದಿಯಲ್ಲಿಯೂ ಈ ವಿಚಾರ ಪ್ರಸ್ತಾಪ ಆಗಿದೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ.

ADVERTISEMENT

ಭಾರತದ ಹಣಕಾಸು ಸಚಿವಾಲಯಕ್ಕೆ ಈ ಹಣವನ್ನು ವರ್ಗಾವಣೆ ಮಾಡಲಾಗಿದೆ. ಇದರಿಂದಾಗಿ ಭಾರತದ ವಿದೇಶಿ ವಿನಿಮಯ ಮೀಸಲು ಹೆಚ್ಚಳವಾಯಿತು. ಪಾಕಿಸ್ತಾನದ ವಿನಿಮಯ ಮೀಸಲು ತಗ್ಗಿತು ಎಂದು ವರದಿಗಳು ಹೇಳಿವೆ.

ಪನಾಮಾ ದಾಖಲೆ ಸೋರಿಕೆಯ ಆಧಾರದಲ್ಲಿ ಸು‍ಪ್ರೀಂ ಕೋರ್ಟ್‌ ನೀಡಿದ ತೀರ್ಪಿನಂತೆ ಭ್ರಷ್ಟಾಚಾರ ತಡೆ ಘಟಕವು ಮೂರು ಪ್ರಕರಣಗಳನ್ನು ದಾಖಲಿಸಿಕೊಂಡು ಷರೀಫ್‌ ವಿರುದ್ಧ ತನಿಖೆ ನಡೆಸುತ್ತಿದೆ. ಲಾಹೋರ್‌ನ ಜತಿ ಉಮ್ರಾ ಪ್ರದೇಶದಲ್ಲಿರುವ ತಮ್ಮ ತೋಟಕ್ಕೆ ಹೋಗುವ ರಸ್ತೆಯನ್ನು ಕಾನೂನುಬಾಹಿರವಾಗಿ ಅಗಲ ಮಾಡಿಸಿಕೊಂಡಿದ್ದಾರೆ ಎಂಬ ಮತ್ತೊಂದು ಪ್ರಕರಣದ್ದೂ ವಿಚಾರಣೆ ನಡೆಯುತ್ತಿದೆ. ಭಾರತಕ್ಕೆ ಹಣ ವರ್ಗಾವಣೆಯ ಆರೋ‍ಪ ಐದನೆಯ ಪ್ರಕರಣವಾಗಿದೆ.

ಭ್ರಷ್ಟಾಚಾರ ಆರೋಪಗಳ ಕಾರಣಕ್ಕಾಗಿಯೇ ಷರೀಫ್‌ ಅವರನ್ನು ಪ್ರಧಾನಿ ಹುದ್ದೆಯಿಂದ ಸುಪ್ರೀಂ ಕೋರ್ಟ್‌ ಕಳೆದ ವರ್ಷ ಅನರ್ಹಗೊಳಿಸಿತ್ತು. ಮೂರು ಅವಧಿಗೆ ಪ್ರಧಾನಿಯಾಗಿದ್ದ ಷರೀಫ್‌ ಅವರು ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದರು. ಇದು ರಾಜಕೀಯಪ್ರೇರಿತ ಆರೋಪ ಎಂದು ಷರೀಫ್‌ ವಾದಿಸಿದ್ದರು.

ಪಾಕಿಸ್ತಾನದ ಅತ್ಯಂತ ಪ್ರಭಾವಿ ರಾಜಕೀಯ ಕುಟುಂಬ ಮತ್ತು ಪಕ್ಷದ ಮುಖ್ಯಸ್ಥರಾಗಿರುವ ಷರೀಫ್‌ ಅವರ ರಾಜಕೀಯ ಭವಿಷ್ಯ ಆಗಿನಿಂದಲೇ ತೂಗುಯ್ಯಾಲೆಯಲ್ಲಿದೆ. ಆರೋಪಗಳು ಸಾಬೀತಾದರೆ ಅವರು ಜೈಲು ಶಿಕ್ಷೆಗೆ ಗುರಿಯಾಗಬೇಕಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.