ADVERTISEMENT

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಂಧನ‍; ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 19:30 IST
Last Updated 11 ಫೆಬ್ರುವರಿ 2018, 19:30 IST

ಬೆಂಗಳೂರು: ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆಗೆ ಗ್ರಾಹಕರಾಗಿ ಹೋಗಿದ್ದ ಕಾಂಗ್ರೆಸ್‌ನ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ರಾಮಕೃಷ್ಣ ಅವರನ್ನು ಶನಿವಾರ ರಾತ್ರಿ ಬಂಧಿಸಿದ್ದ ಸಿಸಿಬಿ ಪೊಲೀಸರು, 46ನೇ ಎಸಿಎಂಎಂ ನ್ಯಾಯಾಲಯಕ್ಕೆ ಭಾನುವಾರ ಹಾಜರುಪಡಿಸಿದರು.

ದಾಳಿ ಕುರಿತು ಸಿಸಿಬಿ ಇನ್‌ಸ್ಪೆಕ್ಟರ್‌ ನೀಡಿದ್ದ ದೂರಿನನ್ವಯ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು, ರಾಮ ಕೃಷ್ಣ ಅವರಿಗೆ ಜಾಮೀನು ಮಂಜೂರು ಮಾಡಿದರು. ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಡಿ ಬಂಧಿಸಿದ್ದ ಶಿಲ್ಪಾ, ಮಾಲತೇಶ್‌ ಹಾಗೂ ರಾಜುರನ್ನು 15 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದರು.

‘ಮಾಲತೇಶ್‌ ಹಾಗೂ ರಾಜು ಅವರೇ ಗ್ರಾಹಕರನ್ನು ಹುಡುಕಿಕೊಂಡು ಬರುತ್ತಿದ್ದರು. ಅವರಿಗೆ ಕಮಿಷನ್‌ ಶಿಲ್ಪಾ ಹಣ ನೀಡುತ್ತಿದ್ದಳು’ ಎಂದರು.

ADVERTISEMENT

‘ಮನೆಯ ಮೇಲೆ ದಾಳಿ ನಡೆಸಿದ್ದ ವೇಳೆ ರಾಮಕೃಷ್ಣ ಸಿಕ್ಕಿಬಿದ್ದಿದ್ದರು. ತಾನೊಬ್ಬ ಗುತ್ತಿಗೆದಾರ ಆಗಿದ್ದು, ಗ್ರಾಹಕನಾಗಿ ಬಂದಿದ್ದೆ ಎಂದಷ್ಟೇ ಹೇಳಿಕೊಂಡಿದ್ದರು. ಹೀಗಾಗಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೆವು. ಕಾನೂನು ತಜ್ಞರ ಸಲಹೆಯಂತೆ ಅವರ ವಿರುದ್ಧ ಮಹಿಳೆಯನ್ನು ವೇಶ್ಯಾವಾಟಿಕೆಗೆ ಬಳಸಿಕೊಂಡ (ಐಪಿಸಿ 370–ಎ) ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದೆವು. ಇದೇ ಮೊದಲ ಬಾರಿ ಮನೆಗೆ ಹೋಗಿದ್ದೆ ಎಂದಿದ್ದಾರೆ. ಅವರು ಪಕ್ಷವೊಂದರ ಜಿಲ್ಲಾ ಘಟಕದ ಅಧ್ಯಕ್ಷ ಎಂದು ಹೇಳಲಾಗುತ್ತಿದ್ದು, ಅದನ್ನು ಪರಿಶೀಲಿಸುತ್ತಿದ್ದೇವೆ’ ಎಂದರು.

ಪಕ್ಷದಿಂದ ಅಮಾನತು

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ರಾಮಕೃಷ್ಣ ಅವರನ್ನು ವಜಾ ಮಾಡಿದ್ದು, ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಕೆಪಿಸಿಸಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.