ADVERTISEMENT

ಮಾಲಿನ್ಯ ನಿಯಂತ್ರಣ ದಿನ: ಮಾಲಿನ್ಯದಿಂದ ಶುದ್ಧ ನೀರು, ಗಾಳಿ ಸಿಗುತ್ತಿಲ್ಲ

ಪೃಥ್ವಿರಾಜ್ ಎಂ ಎಚ್
Published 2 ಡಿಸೆಂಬರ್ 2019, 6:34 IST
Last Updated 2 ಡಿಸೆಂಬರ್ 2019, 6:34 IST
ಮಾಲಿನ್ಯ
ಮಾಲಿನ್ಯ   

ವಿಷಾನಿಲಗಳಿಂದಾಗಿ ಶುದ್ಧಗಾಳಿ ಸಿಗುತ್ತಿಲ್ಲ. ಜಲಮೂಲಗಳ ನಾಶದಿಂದಾಗಿ ಕುಡಿಯುವ ನೀರು ಮಲಿನವಾಗಿದೆ. ರಾಸಯನಿಕಗಳ ಬಳಕೆಯಿಂದಾಗಿ ಮಣ್ಣು ಕೂಡ ಕಲುಷಿತವಾಗುತ್ತಿದೆ. ಕಣ್ಣಿಗೆ ಹಾನಿ ಮಾಡುವ ಬೆಳಕಿನಮಾಲಿನ್ಯ, ಶ್ರವಣಮಾಂದ್ಯರನ್ನಾಗಿ ಮಾಡುವ ಶಬ್ದಮಾಲಿನ್ಯ, ಆರೋಗ್ಯ ಕೆಡಿಸುವ ವಿಕಿರಣ ಮಾಲಿನ್ಯ... ಇವೆಲ್ಲವೂ ಭೂಮಿಯ ಮೇಲೆ ಮನುಷ್ಯನ ಉಳಿವಿಗೆ ಮಾರಕವಾಗುತ್ತಿವೆ. ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನದ (ಡಿಸೆಂಬರ್‌2) ಅಂಗವಾಗಿ ಈ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ.

1984ರಲ್ಲಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಅನಿಲ ದುರಂತದಲ್ಲಿ ಮಡಿದ ಲಕ್ಷಾಂತರ ಜನರ ಸ್ಮರಣಾರ್ಥ ಮತ್ತು ಮಾಲಿನ್ಯ ನಿಯಂತ್ರಣದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ 2ರಂದು ರಾಷ್ಟ್ರೀಯ ವಾಯುಮಾಲಿನ್ಯ ನಿಯಂತ್ರಣ ದಿನ ಆಚರಿಸಲು ನಿರ್ಧರಿಸಲಾಯಿತು.

ಈ ದಿನದಂದು ವಾಯುಮಾಲಿನ್ಯ ನಿಂಯಂತ್ರಣ ಮಂಡಳಿ ದೇಶದಾದ್ಯಂತ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ಮಾಲಿನ್ಯ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸುತ್ತದೆ. ಶಾಲಾ– ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ.

ADVERTISEMENT

ಮಿತಿ ಮೀರಿದೆ ವಾಯುಮಾಲಿನ್ಯ: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಮಾಲಿನ್ಯ ನಿಯಂತ್ರಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಯಾವ ಪ್ರಯೋಜನವೂ ಆಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳುತ್ತಿದೆ. ಅತಿ ಹೆಚ್ಚು ಪ್ರಮಾಣದಲ್ಲಿ ವಾಯುಮಾಲಿನ್ಯವಿರುವ ವಿಶ್ವದ 15 ನಗರಗಳಲ್ಲಿ 13 ನಗರಗಳು ಭಾರತದಲ್ಲೇ ಇವೆ ಎಂದು ಎಚ್ಚರಿಸಿದೆ. ದೇಶದ ರಾಜಧಾನಿ ದೆಹಲಿ ಜನರೇ ಶುದ್ಧಗಾಳಿಗಾಗಿ ಆಕ್ಸಿಜನ್ ಬಾರ್‌ಗಳ ಮೊರೆ ಹೋಗುತ್ತಿದ್ದಾರೆ ಎಂದರೆ ವಾಯು ಮಾಲಿನ್ಯದ ತೀವ್ರತೆ ಅರ್ಥವಾಗುತ್ತದೆ.

ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತು ಪರಿಸರಕ್ಕೆ ಹಾನಿ ಮಾಡುವ ಇಂಧನಗಳ ಬಳಕೆಯೇ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣಗಳಾಗಿವೆ. ಈಗಲೂ ಕೆಲವು ಹಳ್ಳಿಗಳಲ್ಲಿ ಅಡುಗೆಗಾಗಿ ಕಟ್ಟಿಗೆಗಳನ್ನು ಉರುವಲಾಗಿ ಬಳಸುತ್ತಿರುವುದು, ಬೆಳೆ ತಾಜ್ಯಗಳನ್ನು ಸುಡುತ್ತಿರುವುದು, ರಾಸಾಯನಿಕ ಗೊಬ್ಬರಗಳು, ಕೀಟ ನಿಯಂತ್ರಕ ಔಷಧಿಗಳು, ಕೈಗಾರಿಕೆಗಳು ಹೊರಸೂಸುತ್ತಿರುವ ಅಪಾಯಕಾರಿ ರಾಸಾಯನಿಕಗಳು, ಮಿತಿ ಮೀರಿದ ಪ್ಲಾಸ್ಟಿಕ್ ಬಳಕೆ ಮಾಲಿನ್ಯಕ್ಕೆ ಕಾರಣಗಳು.

ದೇಶದಲ್ಲಿ ಸುಮಾರು 14 ಕೋಟಿ ಜನ ಕಲುಷಿತ ಗಾಳಿಯನ್ನೇ ಸೇವಿಸಿ ಸಾವಿಗೆ ಸನಿಹವಾಗುತ್ತಿದ್ದಾರೆ. 2017ರಲ್ಲಿ ಸುಮಾರು 2 ಲಕ್ಷ ಮಕ್ಕಳು ವಾಯು ಮಾಲಿನ್ಯದಿಂದಾಗಿಯೇ ಜೀವ ಕಳೆದುಕೊಂಡಿದ್ದಾರೆ. ಬಿಡಿಸಿ ಹೇಳುವುದಾದರೆ ಪ್ರತಿ ಮೂರು ನಿಮಿಷಕ್ಕೊಂದು ಮಗು ಸಾಯುತ್ತಿದೆ ಎನ್ನುತ್ತಿವೆ ಕೆಲವು ವರದಿಗಳು. ಅಕಾಲಿಕವಾಗಿ ಸಾವಿಗೀಡಾಗುತ್ತಿರುವವರ ಪೈಕಿ ಶೇ 26ರಷ್ಟು ಮಂದಿ ಮಾಲಿನ್ಯ ಕಾರಣಗಳಿಂದಾಗಿಯೇ ಜೀವ ಕಳೆದುಕೊಳ್ಳುತ್ತಿದ್ದಾರೆ.

ಹಸಿರು ಮನೆ ವಾತಾವರಣದ ಮೇಲೆ ದುಷ್ಪರಿಣಾಮ ಬೀರುವ ರಾಸಾಯನಿಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತಿರುವ ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಮೊದಲೆರಡು ಸ್ಥಾನಗಳಲ್ಲಿ ಕ್ರಮವಾಗಿ ಅಮೆರಿಕ ಮತ್ತು ಚೀನಾ ಇವೆ.

ಗ್ಲೋಬಲ್ ಎನ್ವಿರಾನ್‌ಮೆಂಟ್ ಪರ್ಫಾಮೆನ್ಸ್ ಇಂಡೆಕ್ಸ್ (ಇಪಿಐ) ಪ್ರಕಾರ 2016ರಲ್ಲಿ, ಭಾರತ 141ನೇ ರ್‍ಯಾಂಕ್‌ನಲ್ಲಿತ್ತು.2017ರಲ್ಲಿ ಇನ್ನಷ್ಟು ಕುಸಿದು 177ನೇ ಸ್ಥಾನಕ್ಕೆ ತಲುಪಿತು.

ಇಪಿಐ ಪ್ರಕಾರ ಶುದ್ಧಗಾಳಿ ಪೂರೈಸುವ ರಾಷ್ಟ್ರಗಳಲ್ಲಿ ಭಾರತದ ಸಾಧನೆ ಕೇವಲ ಶೇ 5.75 ಆಗಿದ್ದರೆ, ಜಪಾನ್ ಮತ್ತು ಸ್ವಿಟ್ಜರ್ಲೆಂಡ್‌ ರಾಷ್ಟ್ರಗಳು ಶೇ 90ರಷ್ಟು ಪ್ರಗತಿ ಸಾಧಿಸಿವೆ.

ಈ ಎಲ್ಲ ಮಾಲಿನ್ಯಗಳು ದೇಶದ ಆರ್ಥಿಕ ವ್ಯವಸ್ಥೆ ಮೇಲೂ ಪ್ರಭಾವ ಬೀರುತ್ತಿವೆ. ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ದರೆ ಮನುಷ್ಯನ ಉಳಿವು ಪ್ರಶ್ನಾರ್ಥಕವಾಗಲಿದೆ.

ನದಿಗಳೂ ಸ್ವಚ್ಛವಾಗಿಲ್ಲ

ನದಿಗಳನ್ನು ಪವಿತ್ರ ಎಂದು ಭಾವಿಸುವ ಭಾರತದಲ್ಲಿನ ಯಾವ ನದಿಯೂ ಸಂಪೂರ್ಣ ಸ್ವಚ್ಛವಾಗಿಲ್ಲ. ದೇಶದ ಅತಿದೊಡ್ಡ ನದಿ ಗಂಗಾ ತಟದಲ್ಲೇ ಕೋಟ್ಯಂತರ ಮಂದಿ ವಾಸಿಸುತ್ತಿದ್ದಾರೆ. ದೇಶದಲ್ಲಿ 251 ನದಿಗಳಿದ್ದು ಇವುಗಳಲ್ಲಿ 121 ನದಿಗಳು ಸಂಪುರ್ಣ ಕಲುಷಿತವಾಗಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ಕಾಯ್ದೆ ಮತ್ತು ನಿಯಮಾವಳಿಗಳು

l ಜಲ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ ಕಾಯ್ದೆ– 1974 ಮತ್ತು 1977

l ವಾಯುಮಾಲಿನ್ಯ ನಿಯಂತ್ರಣ ಕಾಯ್ದೆ– 1981

l ಪರಿಸರ ಸಂರಕ್ಷಣೆ ನಿಯಮಾವಳಿ– 1986

l ಪರಿಸರ ಸಂರಕ್ಷಣಾ ಕಾಯ್ದೆ– 1986

l ರಾಷ್ಟ್ರೀಯ ಪರಿಸರ ನ್ಯಾಯಮಂಡಳಿ ಕಾಯ್ದೆ– 1995

l ರಾಸಾಯನಿಕ ಅಪಘಾತಗಳ ನಿಯಮಾವಳಿ– 1996

l ಪ್ಲಾಸ್ಟಿಕ್ ತಯಾರಿ ಮತ್ತು ಪುನರ್ಬಳಕೆ ಕಾಯ್ದೆ– 1999

l ಶಬ್ದ ಮಾಲಿನ್ಯ ನಿಯಮಾವಾಳಿ –2000

l ಬ್ಯಾಟರಿಗಳ ಬಳಕೆ ಮತ್ತು ನಿರ್ವಹಣಾ ನಿಯಮಾವಳಿ– 2001

ಸಾರ ಕಳೆದುಕೊಳ್ಳುತ್ತಿದೆ ಮಣ್ಣು

ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಬಳಕೆಯಿಂದಾಗಿ ಫಲವತ್ತಾದ ಮಣ್ಣು ಕೂಡ ಕಲುಷಿತವಾಗಿದೆ. ಇದು ಮನುಷ್ಯನ ಆರೋಗ್ಯ ಭದ್ರತೆ ಮತ್ತು ಆಹಾರ ಭದ್ರತೆಗೆ ಅಪಾಯಕಾರಿ. ಮಣ್ಣಿನ ಮಾಲಿನ್ಯ ನಾವು ಸೇವಿಸುವ ಆಹಾರವಷ್ಟೇ ಅಲ್ಲ, ಉಸಿರಾಡುವ ಗಾಳಿ, ಕುಡಿಯುವ ನೀರಿನ ಮೇಲೂ ಪರಿಣಾಮ ಉಂಟುಮಾಡುತ್ತಿದೆ.

ನಿಯಂತ್ರಣಕ್ಕೆ...

l ವೈಜ್ಞಾನಿಕ ವಿಧಾನದಲ್ಲಿಕಸ ಸಂಗ್ರಹಣೆ ಮತ್ತು ನಿರ್ವಹಣೆ

l ಜಲಮೂಲಗಳ ಸಂರಕ್ಷಣೆ ಮತ್ತು ನೀರಿನ ಮಿತಬಳಕೆ

l ಅಪಾಯಕಾರಿ ವಸ್ತು, ಉಪಕರಣಗಳ‌ ವೈಜ್ಞಾನಿಕ ನಿರ್ವಹಣೆ

l ಇ–ತ್ಯಾಜ್ಯದ ಪುನರ್ಬಳಕೆ

l ನವೀಕರಿಸಬಹುದಾದ ಇಂಧನಗಳ ಬಳಕೆ

l ಪ್ಲಾಸ್ಟಿಕ್ ಬಳಕೆಗೆ ನಿಷೇಧ

l ಆಹಾರ ಪದಾರ್ಥಗಳನ್ನು ಪೋಲಾಗದಂತೆ ತಡೆಯುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.