ADVERTISEMENT

ನದಿಗಳು ಮಲಿನ: ತಡೆಗಿಲ್ಲ ಗಮನ

ಒಡಲಿಗೆ ತ್ಯಾಜ್ಯ; ವಿವಿಧ ರೀತಿಯಲ್ಲಿ ಕಲುಷಿತವಾಗುತ್ತಿರುವ ಜಲಮೂಲಗಳು

ಎಂ.ಮಹೇಶ
Published 16 ನವೆಂಬರ್ 2020, 4:54 IST
Last Updated 16 ನವೆಂಬರ್ 2020, 4:54 IST
ಖಾನಾಪುರ ಪಟ್ಟಣದ ಚರಂಡಿ ನೀರು ಮಲಪ್ರಭಾ ನದಿ ಸೇರುವ ದೃಶ್ಯ
ಖಾನಾಪುರ ಪಟ್ಟಣದ ಚರಂಡಿ ನೀರು ಮಲಪ್ರಭಾ ನದಿ ಸೇರುವ ದೃಶ್ಯ   

ಬೆಳಗಾವಿ: ಜಿಲ್ಲೆಯಲ್ಲಿ ಹರಿದಿರುವ ವಿವಿಧ ನದಿಗಳ ಒಡಲುಗಳು ವಿಷಕಾರಿ ಪ್ಲಾ‌ಸ್ಟಿಕ್‌ ಸೇರಿದಂತೆ ಹಲವು ರೀತಿಯ ತ್ಯಾಜ್ಯಗಳು ಸೇರಿ ಮಲಿನಗೊಳ್ಳುತ್ತಿವೆ.

ಜಿಲ್ಲೆಯ ಖಾನಾಪುರದಲ್ಲಿ ಮಲಪ್ರಭಾ, ಮಾರ್ಕಂಡೇಯ ಹಾಗೂ ಮಹದಾಯಿ ನದಿಗಳು ಉಗಮವಾಗುತ್ತವೆ. ಮಹದಾಯಿ ಗೋವಾ ಕಡೆಗೆ ಹರಿದರೆ ಉಳಿದೆರಡು ನದಿಗಳು ಜಿಲ್ಲೆಯ ಮೂಲಕ ಹಾದು ಹೋಗುತ್ತವೆ. ಜನ, ಜಾನುವಾರು ಸೇರಿದಂತೆ ಸಕಲ ಜೀವಗಳಿಗೂ ‘ಜೀವನದಿ’ಗಳಾಗಿವೆ. ಆದರೆ, ಈ ಜಲ ಮೂಲಗಳನ್ನು ಎಷ್ಟರ ಮಟ್ಟಿಗೆ ಗೌರವ ಹಾಗೂ ಪವಿತ್ರವಾದ ಭಾವನೆಯಿಂದ ನೋಡಿಕೊಳ್ಳಬೇಕಿತ್ತೋ ಆ ಕೆಲಸ ಆಗುತ್ತಿಲ್ಲ. ರಕ್ಷಣೆಯ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಇಲಾಖೆಗಳು ತೊಡಗುತ್ತಿಲ್ಲ.

ತನ್ನ ಹಿತಕ್ಕೂ ಸಂಚಕಾರ!

ADVERTISEMENT

ಅನ್ನಕ್ಕೆ ಕಾರಣವಾಗಿರುವ ನದಿಗಳು ಒತ್ತುವರಿಯಿಂದಲೂ ನಲುಗುತ್ತಿವೆ. ಜೊತೆಗೆ, ನದಿ ಪಾತ್ರಕ್ಕೆ ವಿಷವನ್ನು ಉಣಿಸುವ ಅಥವಾ ಸೇರಿಸುವ ಮೂಲಕ ಕ್ರಮೇಣ ಅವುಗಳನ್ನು ಕಲುಷಿತಗೊಳಿಸಲಾಗುತ್ತಿದೆ. ಈ ಮೂಲಕ ಮಾನವ ತನ್ನದೇ ಹಿತಕ್ಕೂ ಸಂಚಾಕಾರ ತಂದುಕೊಳ್ಳುತ್ತಿದ್ದಾನೆ. ಇದು ಪ್ರಜ್ಞಾವಂತರ ಆತಂಕ್ಕೆ ಕಾರಣವಾಗಿದೆ. ಜೊತೆಗೆ, ನದಿಗಳ ರಕ್ಷಣೆಗೆ ದನಿ ಎತ್ತಬೇಕಾದ ತುರ್ತು ಅಗತ್ಯವೂ ಎದುರಾಗಿದೆ.

ಜಿಲ್ಲೆಯಲ್ಲಿ ಕೃಷ್ಣಾ, ವೇದಗಂಗಾ, ದೂಧ್‌ಗಂಗಾ, ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ ಹಾಗೂ ಮಲಪ್ರಭಾ ನದಿಗಳು ಹರಿಯುತ್ತಿವೆ. ತಾವು ಹರಿಯುವ ಸುತ್ತಮುತ್ತಲಿನ ಪ್ರದೇಶವನ್ನೆಲ್ಲಾ ಹಸಿರುಮಯ ಮಾಡುತ್ತಾ, ಎಲ್ಲ ಪ್ರಾಣಿ–ಪಕ್ಷಿಗಳಿಗೂ ಬದುಕು ಕೊಡುತ್ತಿವೆ.

ಎಲ್ಲದಕ್ಕೂ ನದಿಯೇ ಬೇಕು

ನದಿ ಹಾಗೂ ದೇವಸ್ಥಾನಗಳ ನಂಟು ಹಿಂದಿನಿಂದಲೂ ಬೆಸೆದಿದೆ. ಪ್ರಮುಖ ದೇವಸ್ಥಾನಗಳು ಬಹುತೇಕ ನದಿ ದಂಡೆಯಲ್ಲೇ ಇವೆ. ಧಾರ್ಮಿಕ ಆಚರಣೆಗಳು, ಮದುವೆ, ಮುಂಜಿ, ಬಾಗಿನ ಅರ್ಪಣೆ, ಚಿತಾಭಸ್ಮ ವಿಸರ್ಜನೆಯಂತಹ ಕಾರ್ಯಗಳಿಗೂ ನದಿ ತೀರ ಬಳಕೆಯಾಗುತ್ತಿದೆ. ಈ ಚಟುವಟಿಕೆಗಳು ಕೂಡ ನದಿ ಮಲಿನಕ್ಕೆ ‘ಪಾತ್ರ’ ನೀಡುತ್ತಿವೆ. ಇದನ್ನು ತಡೆಯಲು ಹಾಗೂ ನದಿ ತ್ಯಾಜ್ಯ ನಿರ್ವಹಿಸಲು ಸ್ಥಳೀಯ ಆಡಳಿತಗಳು ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಇತ್ತೀಚಿನ ವರ್ಷಗಳಲ್ಲಿ ನದಿ ದಂಡೆಯಲ್ಲಿ ಕಟ್ಟಡ ನಿರ್ಮಾಣ ತ್ಯಾಜ್ಯ (ಡೆಬ್ರಿಸ್)ವನ್ನೂ ತಂದು ಸುರಿಯುತ್ತಿರುವುದು ನಡೆದಿದ್ದರೂ, ಕಡಿವಾಣ ಬೀಳುತ್ತಿಲ್ಲ.

ತ್ಯಾಜ್ಯ, ಹೂಳು ಮೊದಲಾದವುಗಳು ಸೇರುತ್ತಿರುವುದರಿಂದಾಗಿ ನದಿಗಳ ಪಾತ್ರ ಕಿರಿದಾಗುತ್ತಿದೆ. ಹೀಗಾಗಿ, ಪ್ರತಿ ಮಳೆಗಾಲದಲ್ಲೂ ಒಂದಿಲ್ಲ ಒಂದು ಕಡೆ ಪ್ರವಾಹ ಸಾಮಾನ್ಯವಾಗಿದೆ. ಜಿಲ್ಲಾ ‍ಪಂಚಾಯಿತಿಯಿಂದ ಕೆಲ ವರ್ಷಗಳ ಹಿಂದೆ ಮಾರ್ಕಂಡೇಯ ನದಿ ಹೂಳೆತ್ತಲಾಗಿತ್ತು. ಹೋದ ವರ್ಷ ಹಿರಣ್ಯಕೇಶಿ ನದಿಯಲ್ಲೂ ಇಂಥದೊಂದು ಕೆಲಸ ನಡೆದಿತ್ತು. ಆದರೆ, ತ್ಯಾಜ್ಯವು ಮತ್ತೆ ನದಿಗಳಿಗೆ ಸೇರದಂತೆ ನೋಡಿಕೊಳ್ಳುವಲ್ಲಿ ಸ್ಥಳೀಯ ಸಂಸ್ಥೆಗಳು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪ ಪರಿಸರ ಪ್ರೇಮಿಗಳದಾಗಿದೆ. ಎಷ್ಟೋ ಕಡೆಗಳಲ್ಲಿ ಚರಂಡಿಯ ನೀರು ಸೇರುತ್ತಿದೆ. ಅಂಥ ನೀರನ್ನು ಸಂಸ್ಕರಿಸಿ ನದಿಗೆ ಹರಿಸಬೇಕು ಎನ್ನುವ ಕಾಳಜಿಯನ್ನೂ ಸ್ಥಳೀಯ ಸಂಸ್ಥೆಯವರು ತೋರುತ್ತಿಲ್ಲ! ಕೆರೆಗಳ ವಿಷಯದಲ್ಲೂ ಇದೇ ಪರಿಸ್ಥಿತಿ ಇದೆ.

ನೋಟಿಸ್ ಜಾರಿ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ರಾಜ್ಯಮಟ್ಟದ ಸಮಿತಿಯ ಅಧ್ಯಕ್ಷ ನ್ಯಾ.ಸುಭಾಷ್ ಬಿ. ಅಡಿ ಹೋದ ವರ್ಷ ಪ್ರವಾಸ ಕೈಗೊಂಡಿದ್ದ ವೇಳೆ ನದಿಗಳ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

‘ಮಲಿನ ನೀರನ್ನು ನದಿಗಳಿಗೆ ನೇರವಾಗಿ ಹರಿಸುವಂತಿಲ್ಲ. ಸಂಸ್ಕರಿಸಿದ ನಂತರವೇ ಬಿಡಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ರಾಮದುರ್ಗ, ಖಾನಾಪುರದ ಬಳಿ ಮಲಪ್ರಭಾ ನದಿಗೆ ಚರಂಡಿ ನೀರು ಸೇರುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಖಾನಾಪುರ ಸ್ಥಳೀಯ ಸಂಸ್ಥೆ ಮುಖ್ಯಾಧಿಕಾರಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಮರಾಠಾ ಮಂಡಲ ಕಾಲೇಜಿನವರಿಗೂ ನೋಟಿಸ್ ಕೊಡಲಾಗಿದೆ. ಇವರೆಲ್ಲರೂ ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಅಳವಡಿಸಿಕೊಳ್ಳುವುದಾಗಿ ತಿಳಿಸಿವೆ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಳಗಾವಿ ಪರಿಸರ ಅಧಿಕಾರಿ ಗೋಪಾಲಕೃಷ್ಣ ಸಣ್ಣತಂಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

**

ಬೆಳಗಾವಿ ಜಿಲ್ಲೆ ಹಾದು ಹೋಗುವ ನದಿಗಳು

ನದಿಗಳು ಮತ್ತು ಹರಿಯುವ ತಾಲ್ಲೂಕುಗಳು

ಕೃಷ್ಣಾ;ಚಿಕ್ಕೋಡಿ, ರಾಯಬಾಗ, ಕಾಗವಾಡ, ಅಥಣಿ

ವೇದಗಂಗಾ;ಚಿಕ್ಕೋಡಿ, ನಿಪ್ಪಾಣಿ

ದೂಧ್‌ಗಂಗಾ;ಚಿಕ್ಕೋಡಿ, ನಿಪ್ಪಾಣಿ

ಘಟಪ್ರಭಾ;ಹುಕ್ಕೇರಿ, ಗೋಕಾಕ, ಮೂಡಲಗಿ

ಮಾರ್ಕಂಡೇಯ;ಬೆಳಗಾವಿ, ಹುಕ್ಕೇರಿ, ಗೋಕಾಕ

ಹಿರಣ್ಯಕೇಶಿ;ಹುಕ್ಕೇರಿ, ಗೋಕಾಕ

ಮಲಪ್ರಭಾ;ಖಾನಾಪುರ, ಕಿತ್ತೂರು, ಬೈಲಹೊಂಗಲ, ಸವದತ್ತಿ, ರಾಮದುರ್ಗ

***

ವಿಫಲವಾದ ಖಾನಾಪುರ ಪಟ್ಟಣ ಪಂಚಾಯಿತಿ

ಖಾನಾಪುರ ತಾಲ್ಲೂಕಿನ ಅರಣ್ಯದಲ್ಲಿ ಹುಟ್ಟಿ ಹರಿಯುವ ಮಲಪ್ರಭಾ ನದಿಗೆ ಚರಂಡಿ ನೀರನ್ನು ಹರಿಸುವ ಕಾರ್ಯವನ್ನು ಸ್ಥಳೀಯ ಪಟ್ಟಣ ಪಂಚಾಯಿತಿ ಹಲವು ವರ್ಷಗಳಿಂದಲೂ ಮಾಡುತ್ತಿದೆ.

ಪಟ್ಟಣದಿಂದ ಎಲ್ಲ ಚರಂಡಿಗಳ ಮಲಿನ ನೀರನ್ನು ಹೊರವಲಯದಲ್ಲಿ ಮಲಪ್ರಭಾ ನದಿಗೆ ಸೇರಿಸಲಾಗುತ್ತಿದೆ. ಜನರು ನದಿ ತೀರದಲ್ಲಿ ಹೆಣಗಳನ್ನು ಸುಡುವುದು, ನದಿಯಿಂದ ಮರಳು ತೆಗೆಯುವುದು, ಜಾನುವಾರು ಹಾಗೂ ಬಟ್ಟೆಗಳನ್ನು ತೊಳೆಯುವುದು, ಚಿತಾಭಸ್ಮ, ದೇವರ ಫೊಟೊಗಳನ್ನು ಹಾಕುವುದು, ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ಸೇರಿದಂತೆ ಪ್ರಾಣಿಗಳ ಕಳೇಬರಗಳನ್ನು ನದಿಯಲ್ಲಿ ಎಸೆಯುವುದು ಸಾಮಾನ್ಯವಾಗಿದೆ. ಹೀಗಾಗಿ ನದಿ ಅಕ್ಷರಶಃ ಮಲಿನಗೊಂಡಿದೆ.

ಮಹದಾಯಿ ನದಿ ಭೀಮಗಡ ಅಭಯಾರಣ್ಯದಲ್ಲಿ ಹುಟ್ಟಿ ಪಶ್ಚಿಮಘಟ್ಟದ ಬೆಟ್ಟಗಳಿಂದ ಪಾತಾಳಕ್ಕೆ ಧುಮುಕಿ ಗೋವಾದಲ್ಲಿ ಸಮುದ್ರ ಸೇರುತ್ತದೆ. ನಾಗರಗಾಳಿ ಅರಣ್ಯದಲ್ಲಿ ಹುಟ್ಟಿ ಲೋಂಡಾ ಬಳಿ ಉತ್ತರಕನ್ನಡ ಪ್ರವೇಶಿಸುವ ಪಾಂಡರಿ ನದಿ ಜನದಟ್ಟಣೆಯಿಂದ ದೂರವಿರುವ ಕಾರಣ ಅಷ್ಟಾಗಿ ಮಲಿನವಾಗಿಲ್ಲ.

***

ಕೆರೆಗಳನ್ನೂ ಬಿಟ್ಟಿಲ್ಲ ಕಲುಷಿತ ನೀರು

ಚನ್ನಮ್ಮನ ಕಿತ್ತೂರಿನ ಶತಮಾನದ ಹಳೆಯ ಕೆರೆಗಳಿಗೂ ಚರಂಡಿಗಳ ಕಲುಷಿತ ನೀರು ಸೇರುವುದು ನಿಂತಿಲ್ಲ. ಸಕ್ಕರೆಗೆರೆ, ಅರಿಸಿನಗೆರೆ, ತುಂಬುಗೆರೆ, ರಣಕಟ್ಟಿಕೆರೆ, ಚಂದ್ಯಾರ ಕೆರೆಗಳಿಗೆ ಹೊಲಸು ನೀರು ಸೇರುವಂತಾಗಿದೆ.

ಅರಿಸಿನಗೆರೆ ಮತ್ತು ಸಕ್ಕರೆಗೆರೆಗೆ ಸೋಮವಾರ ಪೇಟೆಯ ಕೊಳಚೆ ನೀರು ನಿರಂತರವಾಗಿ ಹರಿಯುತ್ತಲೇ ಇರುತ್ತದೆ. ಒಂದು ಕಾಲಕ್ಕೆ ಅಡುಗೆಗೆ ಬಳಸಲಾಗುತ್ತಿದ್ದ ಸೋಮವಾರ ಪೇಟೆಯ ಸಕ್ಕರೆಗೆರೆ ನೀರು ದಶಕದಿಂದ ಬಳಸಲು ಯೋಗ್ಯವಾಗಿ ಉಳಿದಿಲ್ಲ. ಕೆಲವರಂತೂ ಶೌಚಾಲಯದ ನೀರನ್ನೂ ಚರಂಡಿಗೆ ಹರಿಬಿಡುತ್ತಿದ್ದಾರೆ. ಜೊತೆಗೆ ಪ್ಲಾಸ್ಟಿಕ್, ಹರಿದ ಚಪ್ಪಲಿ, ತ್ಯಾಜ್ಯ ವಸ್ತುಗಳು ಇಲ್ಲಿಯ ಪ್ರಮುಖ ಕೆರೆಗಳನ್ನು ಸೇರಿಕೊಂಡು ಗಬ್ಬೆದ್ದು ನಾರುತ್ತಿವೆ.

‌ಚಂದ್ಯಾರ ಕೆರೆಗೆ ಮಳೆ ನೀರು ಹರಿದು ಬರುವ ಕಾಲುವೆಗೆ ಮಾಂಸ ತ್ಯಾಜ್ಯ ತಂದು ಸುರಿಯಲಾಗುತ್ತದೆ. ಇದೆಲ್ಲವೂ ಕೆರೆ ಸೇರುತ್ತಿದೆ. ಅಂತರ್ಜಲ ಮಟ್ಟ ಹೆಚ್ಚಿಸುವ, ಜಾನುವಾರುಗೆ ಕುಡಿಯಲು ಉಪಯೋಗ ಆಗುತ್ತಿದ್ದ ಕೆರೆ ಅಂಗಳದ ‘ಪವಿತ್ರತೆ’ ಉಳಿಸಿಕೊಳ್ಳಬೇಕು. ಚರಂಡಿ ನೀರು ಬೇರೆಡೆ ಹರಿದು ಹೋಗುವ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಲೇ ಇರುತ್ತಾರೆ. ಆದರೆ, ವ್ಯವಸ್ಥೆ ಸುಧಾರಿಸಿಲ್ಲ!

***

ಹಾಳಾದ ವಾತಾವರಣ

ಎಂ.ಕೆ. ಹುಬ್ಬಳ್ಳಿ ಬಳಿಯ ಗಂಗಾಂಬಿಕಾ ಐಕ್ಯಮಂಟಪ, ವಿಠ್ಠಲ-ರುಕ್ಮೀಣಿ ಮಂದಿರ ಹಾಗೂ ಅಶ್ವಥ- ಲಕ್ಷ್ಮಿನರಸಿಂಹ ಕ್ಷೇತ್ರದ ಬಳಿಯ ಮಲಪ್ರಭಾ ನದಿ ತೀರ ತ್ಯಾಜ್ಯದಿಂದ ತುಂಬಿ ಮಲಿನವಾಗುತ್ತಿದೆ.

ನದಿಯಲ್ಲಿ ನೆರೆ ಬಂದಾಗ ಸಂಗ್ರಹಗೊಂಡ ವಿವಿಧ ಬಗೆಯ ತ್ಯಾಜ್ಯ, ಚಿತಾಭಸ್ಮ, ವಿವಿಧ ಪೂಜೆಯಿಂದ ಸಂಗ್ರಹವಾಗುವ ತ್ಯಾಜ್ಯದಿಂದ ನದಿ ದಡದ ಪ್ರದೇಶ ಕಲ್ಮಶಗೊಳ್ಳುತ್ತಿದೆ. ಇದು ಸ್ನಾನ ಹಾಗೂ ಪೂಜಾ ಕೈಂಕರ್ಯಕ್ಕೆ ಬರುವ ಜನರಿಗೆ ಅಸಹ್ಯ ತರಿಸುತ್ತಿದೆ. ಇಲ್ಲಿನ ಪಟ್ಟಣ ಪಂಚಾಯಿತಿ ಅಥವಾ ಸಂಬಂಧಿಸಿದ ಇಲಾಖೆಯವರು ದೇವಸ್ಥಾನಗಳ ಸ್ವಚ್ಛತೆ ಕೈಗೊಳ್ಳಬೇಕು ಮತ್ತು ನದಿ ಮಲಿನ ಆಗದಂತೆ ಜನರಲ್ಲಿ ಅರಿವು ಮೂಡಿಸಬೇಕು ಎನ್ನುವುದು ಪ್ರಜ್ಞಾಂತರ ಒತ್ತಾಯವಾಗಿದೆ.

***

ಸಹಸ್ರಾರು ಮಂದಿ ಭಕ್ತರು ನೆರೆಯುವ ಸವದತ್ತಿ ಯಲ್ಲಮ್ಮ ದೇವಸ್ಥಾನ ಪ್ರದೇಶದಿಂದ ಬಹಳಷ್ಟು ಮಲಿನ ನೀರು ಮಲಪ್ರಭಾ ನದಿ ಸೇರುತ್ತಿತ್ತು. ಈ ಹಿನ್ನೆಲೆಯಲ್ಲಿ ದೇವಸ್ಥಾನ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದು, ಎಸ್‌ಟಿಪಿ ಹಾಕುವಂತೆ ಸೂಚಿಸಲಾಗಿದೆ

-ಗೋಪಾಲಕೃಷ್ಣ ಸಣ್ಣತಂಗಿ, ಪರಿಸರ ಅಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ

***

ಮಲಪ್ರಭಾ, ಘಟಪ್ರಭಾ ನದಿ ತೀರದ ಒತ್ತುವರಿ ಪ್ರವಾಹಕ್ಕೆ ಕಾರಣವಾಗಿದೆ. ಹೀಗಾಗಿ, ಸಮಗ್ರ ಸಮೀಕ್ಷೆಗೆ ಸೂಚಿಸಲಾಗಿದೆ. ವರದಿ ಸಿದ್ಧವಾದ ಬಳಿಕ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರ ಯೋಜನೆ ರೂಪಿಸಲಾಗುವುದು

- ರಮೇಶ ಜಾರಕಿಹೊಳಿ, ಜಲಸಂಪನ್ಮೂಲ ಸಚಿವ

***

(ಪ್ರಜಾವಾಣಿ ತಂಡ: ಪ್ರದೀಪ ಮೇಲಿನಮನಿ, ಪ್ರಸನ್ನ ಕುಲಕರ್ಣಿ, ಎಸ್. ವಿಭೂತಿಮಠ, ಚನ್ನಪ್ಪ ಮಾದರ, ಬಸವರಾಜ ಶಿರಸಂಗಿ, ಪರಶುರಾಮ ನಂದೇಶ್ವರ, ಸುಧಾಕರ ತಳವಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.