ADVERTISEMENT

ಕೆರೆ ಕಲುಷಿತಗೊಳಿಸುವ ಆಮೆ!

ವರ್ಷ ಗೌಡ
Published 28 ಜನವರಿ 2020, 19:58 IST
Last Updated 28 ಜನವರಿ 2020, 19:58 IST
ಕೆಂಪು ಕಿವಿಯ ಆಮೆ
ಕೆಂಪು ಕಿವಿಯ ಆಮೆ   
""

ಸಾಕುಪ್ರಾಣಿಗಳಾಗಿ ಜಲಚರಗಳನ್ನು ಸಾಕಿಕೊಳ್ಳುವ ಪರಿಪಾಠ ನಗರಗಳಲ್ಲಿ ಹೆಚ್ಚಾಗುತ್ತಿದೆ. ಆದರೆ ಸಾಕುಪ್ರಾಣಿಯಾಗಿ ಬೆಳೆಸಿಕೊಳ್ಳುತ್ತಿರುವ ಪುಟ್ಟಗಾತ್ರದ ಆಮೆಗಳು ಕೆರೆಗಳನ್ನು ಹಾಳು ಮಾಡುತ್ತಿವೆ ಎನ್ನುತ್ತಿದ್ದಾರೆ ಪರಿಸರ ತಜ್ಞರು. ಬೆಂಗಳೂರಿನಲ್ಲಿರುವ ಬಹುತೇಕ ಕೆರೆಗಳೂ ಆಮೆಗಳಿಂದ ಹಾಳಾಗಿವೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಕೆರೆಗಳು ಸ್ವಚ್ಛವಾಗಿದ್ದರೆ, ಒಂದಿಷ್ಟು ಜೀವಿಗಳು ಬದುಕುವುದಕ್ಕೆ ನೆಲೆ ಸಿಗುತ್ತದೆ. ಆದರೆ ಕೆಲವು ಆಕ್ರಮಣಕಾರಿ ಸ್ವಭಾವದ ಜೀವಿಗಳಿಂದಾಗಿ ಇತರೆ ಜೀವಿಗಳ ಉಳಿವು ಪ್ರಶ್ನಾರ್ಥಕವಾಗುತ್ತಿದೆ. ನಗರದ ಬಹುತೇಕ ಕೆರೆಗಳಲ್ಲಿ ಬೀಡುಬಿಟ್ಟಿರುವ ರೆಡ್‌ ಇಯರ್‌ ಸ್ಲೈಡರ್ ಟರ್ಟಲ್‌ (ಕೆಂಪು ಕಿವಿಯ ಜಾರುವ ಆಮೆ) ಕೂಡ ಇದೇ ರೀತಿ ಕೆರೆಗಳ ಪರಿಸರ ವ್ಯವಸ್ಥೆಯನ್ನು ಹಾಳುಮಾಡುತ್ತಿದೆ.

ಇದರ ಕಿವಿಗಳು ಕೆಂಪು ಬಣ್ಣದಲ್ಲಿರುವುದು ಹಾಗೂ, ಅಪಾಯ ಎದುರಾದಾಗ ಸುರಕ್ಷಿತೆಗಾಗಿ ಜಾರಿ ತಪ್ಪಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವುದರಿಂದ ಇದನ್ನು ರೆಡ್ ಇಯರ್ ಸ್ಲೈಡರ್ ಎನ್ನುತ್ತಾರೆ.

ADVERTISEMENT

ನಗರದ ಬಹುತೇಕ ಕೆರೆಗಳನ್ನು ಸ್ವಚ್ಛಗೊಳಿಸುವಾಗ ಅಥವಾ ಸೂಕ್ಷ್ಮವಾಗಿ ಗಮನಿಸಿದಾಗ ನೂರಾರು ಆಮೆಗಳು ಕಾಣ ಸಿಗುತ್ತವೆ. ಯಡಿಯೂರು ಕೆರೆ ಹಾಗೂ ಸ್ಯಾಂಕಿ ಕೆರೆಗಳನ್ನು ಒಮ್ಮೆ ಗಮನಿಸಿದರೆ ಹಲವು ಆಮೆಗಳು ಇರುವುದು ಗೊತ್ತಾಗುತ್ತದೆ. ಇಲ್ಲಿ ಕಾಣಸಿಗುವ ಬಹುತೇಕ ಆಮೆಗಳು ಕೆಂಪು ಕಿವಿಯ ಆಮೆಗಳು. ಪುಟ್ಟಗಾತ್ರದ ಆಮೆ ಪ್ರಭೇದಗಳಲ್ಲಿ ಒಂದಾದ ಇದರ ಮೂಲ ನೆಲೆ ಮೆಕ್ಸಿಕೊ ಮತ್ತು ದಕ್ಷಿಣ ಅಮೆರಿಕ ಖಂಡದ ರಾಷ್ಟ್ರಗಳು.

ಅಮೆರಿಕದ ಬಹುತೇಕ ಜನರು ಇದನ್ನು ಸಾಕಿಕೊಳ್ಳುತ್ತಿದ್ದಾರೆ. ಕ್ರಮೇಣ ಇದನ್ನು ಸಾಕಿಕೊಳ್ಳುವ ಪರಿಪಾಠ ವಿಶ್ವದ ಇತರೆ ದೇಶಗಳಿಗೂ ವ್ಯಾಪಿಸಿದೆ. ಮುಟಂಟ್ ನಿಂಜಾ ಟರ್ಟಲ್ಸ್‌ ಕಾರ್ಟೂನ್‌ ಚಿತ್ರದಲ್ಲಿ ಇದನ್ನು ಪರಿಚಯಿಸಿದ ಮೇಲೆ ಇದರ ಮೇಲೆ ಹದಿಹರೆಯದವರು ಹೆಚ್ಚು ಒಲವು ಬೆಳೆಸಿಕೊಂಡು ಅಕ್ವೇರಿಯಂಗಳಲ್ಲಿ ಸಾಕಿಕೊಳ್ಳುತ್ತಿದ್ದಾರೆ.

‘ಇದನ್ನು ‘ಕಾಯಿನ್‌ ಟರ್ಟಲ್‌’ ಎಂದೂ ಕರೆಯುತ್ತಾರೆ. ಪುಟ್ಟಗಾತ್ರದಲ್ಲಿರುವುದರಿಂದ ಅಕ್ವೇರಿಯಂಗಳಲ್ಲಿ ಸಾಕಿಕೊಳ್ಳುವುದಕ್ಕೆ ಇವನ್ನು ಖರೀದಿಸಲಾಗುತ್ತಿದೆ. ಆದರೆ ಈ ಆಮೆ 10ರಿಂದ 12 ಇಂಚುಗಳಷ್ಟು ಉದ್ದ ಬೆಳೆಯುತ್ತದೆ ಎಂಬ ಮಾಹಿತಿ ಬಹುತೇಕರಿಗೆ ಇಲ್ಲ. ಅವು ಬೆಳೆದಂತೆಲ್ಲಾ ಮನೆಗಳಲ್ಲಿರುವ ಅಕ್ವೇರಿಯಂಗಳು ಅವುಗಳ ಗಾತ್ರಕ್ಕೆ ಸರಿಹೊಂದುವುದಿಲ್ಲ. ಇವಕ್ಕೆ ಹಸಿವು ಕೂಡ ಜಾಸ್ತಿ, ಹೀಗಾಗಿ ಹೆಚ್ಚು ಆಹಾರ ಸೇವಿಸಿ, ಹೆಚ್ಚು ಮಲವನ್ನು ವಿಸರ್ಜಿಸುತ್ತವೆ. ಇದರಿಂದ ಅಕ್ವೇರಿಯಂ ಬೇಗ ಕಲುಷಿತಗೊಳ್ಳುತ್ತದೆ’ ಎಂದು ವನ್ಯಜೀವಿ ಸಂರಕ್ಷಣಾ ಹೋರಾಟಗಾರ ಸಂಜೀವ್ ಪೆಡ್ನೇಕರ್‌ ಈ ಆಮೆಯ ಬಗ್ಗೆ ಮಾಹಿತಿ ನೀಡಿದರು.

‘ಈ ಆಮೆ ವಯಸ್ಕ ಹಂತ ತಲುಪಿದ ಮೇಲೆ ಹಲವರು ಕೆರೆಗಳಿಗೆ ತಂದು ಬಿಡುತ್ತಿದ್ದಾರೆ. ಈ ಮೂಲಕ ಈ ಜೀವಿಗೆ ಉಪಕಾರ ಮಾಡುತ್ತಿದ್ದೇವೆ ಎಂದು ಅವರು ಭಾವಿಸುತ್ತಾರೆ. ಅವು ನಗರದ ಕೆರೆಗಳ ಜೀವ ವ್ಯವಸ್ಥೆ ಹಾಳು ಮಾಡುತ್ತಿವೆ’ ಎಂದು ಹೇಳುತ್ತಾರೆ.

ಇದು ಆಕ್ರಮಣಕಾರಿ ಸ್ವಭಾವದ ಪ್ರಾಣಿ. ಕೆರೆಗಳಲ್ಲಿನ ಇತರೆ ಜಲಚರಗಳ ಉಳಿವಿಗೆ ಮಾರಕ. ಸರ್ವಭಕ್ಷಕ ಜೀವಿಯಾಗಿರುವುದರಿಂದ ನೀರಿನಲ್ಲಿರುವ ಜಲಚರಗಳನ್ನು ಮೊದಲು ತಿನ್ನುತ್ತದೆ. ಕೆರೆಯಲ್ಲಿನ ಜಲಚರಗಳ ಸಂತತಿ ನಶಿಸಿದ ಮೇಲೆ ಜಲಸಸ್ಯಗಳು ಮತ್ತು ಪಾಚಿಯನ್ನು ತಿನ್ನುತ್ತದೆ. ನಿತ್ಯ ಆಹಾರ ಸೇವಿಸುವ ಪ್ರಮಾಣವನ್ನು ಹೆಚ್ಚಿಸುತ್ತಲೇ ಹೋಗುತ್ತದೆ. ಇದರಿಂದ ಕೆರೆಗಳಲ್ಲಿ ಇತರೆ ಜಲಚರಗಳು ಉಳಿದಿದ್ದರೂ ಆಹಾರ ಕೊರತೆಯಿಂದಾಗಿ ಅವು ಸಾಯುತ್ತವೆ. ಆಹಾರ ದೊರೆಯುವ ಪ್ರಮಾಣ ಕುಸಿದರೆ, ತನ್ನ ಉಳಿವಿಗಾಗಿ ಇತರೆ ಆಮೆ ಪ್ರಭೇದಗಳನ್ನೂ ಭಕ್ಷಿಸಲು ಆರಂಭಿಸುತ್ತದೆ. ಕೊನೆಗೆ ಒಂದಕ್ಕೊಂದು ಕಿತ್ತು ತಿಂದು ಜೀವ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತವೆ.

ಭಾರತದಲ್ಲಿನ ಸಿಹಿನೀರಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜಲಚರಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ಸ್ನೇಹಾ ಧಾರವಾಡ್‌ಕರ್ ಅವರೂ ‘ಇದು ಅಪಾಯಕಾರಿ ಜಲಚರ’ ಎಂದು ಹೇಳುತ್ತಾರೆ.

‘ಈ ಆಮೆ ಬೆಳೆದಂತೆಲ್ಲಾ ತನ್ನ ಸುತ್ತಲಿನ ಪ್ರದೇಶಗಳನ್ನೆಲ್ಲಾ ತನ್ನ ಸುರಕ್ಷತೆಗಾಗಿ ಹಾಗೂ ತನಗೆ ಅನುಕೂಲವಾಗುವಂತೆ ಬದಲಿಸಿಕೊಳ್ಳುತ್ತದೆ. ಇದಕ್ಕಾಗಿ ಮಾರಕ ರೋಗಗಳನ್ನು ಕೆರೆಯಲ್ಲಿ ಹರಡುತ್ತದೆ. ಇದರಿಂದ ಕೆರೆಯಲ್ಲಿನ ಇತರೆ ಜೀವಿಗಳ ಉಳಿವಿಗೆ ಅಪಾಯಕಾರಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ರೋಗಕ್ಕೆ ತುತ್ತಾದ ಜಲಚರಗಳಿಗೆ ಅದನ್ನು ತಡೆಯುವಂತಹ ರೋಗ ನಿರೋಧಕ ಶಕ್ತಿಯೂ ಇರುವುದಿಲ್ಲ’ ಎನ್ನುತ್ತಾರೆ ಸ್ನೇಹಾ.

ವಿಶ್ವದ 100 ಅತ್ಯಂತ ಆಕ್ರಮಣಕಾರಿ ಸ್ವಭಾವದ ಜೀವಿಗಳಲ್ಲಿ ಈ ಆಮೆಯೂ ಒಂದು ಎಂದು ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಘೋಷಿಸಿದೆ. ಎಮಿಡ್ಯಿಡೇ ಕುಟುಂಬಕ್ಕೆ ಸೇರಿದ ಇದರ ವೈಜ್ಞಾನಿಕ ಹೆಸರು ಟ್ರಕೆಮಿಸ್‌ ಸ್ಕ್ರಿಪ್ಟಾ ಎಲಿಗ್ಯಾನ್ಸ್‌. ಒಟ್ಟಿನಲ್ಲಿ ಈ ಮಾರಕ ಜಲಚರವನ್ನು ಸಾಕಿಕೊಳ್ಳುವುದಕ್ಕೆ ಒಲವು ತೋರದೆ ಇರುವುದು ಒಳ್ಳೆಯದು ಎನ್ನುವುದು ತಜ್ಞರ ಅಭಿಪ್ರಾಯ.ಈ ಆಮೆ ಮರಿಯಾಗಿದ್ದಾಗ ಕೇವಲ ₹5ರ ನಾಣ್ಯದಷ್ಟು ಗಾತ್ರವಿರುತ್ತದೆ. ಪುಟ್ಟಗಾತ್ರದ ಜೀವಿಯಾಗಿರುವುದರಿಂದ ಮಕ್ಕಳ ಗಮನವನ್ನು ಬೇಗ ಸೆಳೆಯುತ್ತದೆ. ಹೀಗಾಗಿ ಹಲವರು ಇವನ್ನು ಅಕ್ವೇರಿಯಂಗಳಲ್ಲಿ ಸಾಕಿಕೊಳ್ಳುವುದಕ್ಕೆ ಇಷ್ಟಪಡುತ್ತಾರೆ. ಅಕ್ವೇರಿಯಂ ಸ್ವಚ್ಛಗೊಳಿಸುವಾಗ ಹಲವರಿಗೆ ಈ ಆಮೆ ಕಚ್ಚಿದ ನಿದರ್ಶನಗಳೂ ಇವೆ. ಒಟ್ಟಿನಲ್ಲಿ ಇದು ಮನೆಗಳಲ್ಲಿ ಸಾಕಿಕೊಳ್ಳಬಹುದಾದ ಪ್ರಾಣಿ ಅಲ್ಲ ಎನ್ನುತ್ತಾರೆ ಬಿಬಿಎಂಪಿ ವನ್ಯಜೀವಿ ಸಂರಕ್ಷಣಾ ವಿಭಾಗದ ಮೇಲ್ವಿಚಾರಕಶರತ್ ಆರ್. ಬಾಬು.

ಮಾರಾಟ ನಿಷೇಧಿಸಬೇಕು

1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ಹಲವು ವನ್ಯಜೀವಿಗಳ ಸಂರಕ್ಷಣೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಆದರೆ ಈ ಕಾಯ್ದೆಯಲ್ಲಿ ಹಲವು ನ್ಯೂನತೆಗಳಿವೆ. ಪರಿಸರಕ್ಕೆ ಮಾರಕವಾಗುವಂತಹ ಜೀವಿಗಳನ್ನು ರಕ್ಷಿಸುವುದು ಎಷ್ಟು ಸರಿ. ಮೊದಲು ಇಂತಹ ಆಮೆಗಳನ್ನು ಮಾರಾಟ ಮಾಡುವುದು, ಕೊಳ್ಳುವುದರ ಹಾಗೂ ಸಾಕಿಕೊಳ್ಳುವುದರ ಮೇಲೆ ನಿಷೇಧ ವಿಧಿಸಬೇಕು. ಈಗಾಗಲೇ ಸಾಕಿಕೊಳ್ಳುತ್ತಿರುವವರು ಕೆರೆಗಳಿಗೆ ತೆಗೆದುಕೊಂಡು ಹೋಗಿ ಬಿಡದೇ, ವನ್ಯಜೀವಿ ಸಂರಕ್ಷಣಾ ಸಿಬ್ಬಂದಿಗೆ ಮಾಹಿತಿ ನೀಡಬಹುದು. ಅಥವಾ ಮೃಗಾಲಯಗಳಿಗೆ ಒಪ್ಪಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಇವುಗಳನ್ನು ಸಂತಾನೋತ್ಪತ್ತಿಯನ್ನು ತಡೆಯಬೇಕು ಹಾಗೂ ನಿಗಾ ವಹಿಸಿ, ಮಾರಾಟ ಮಾಡದಂತೆ ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ವನ್ಯಜೀವಿ ಸಂರಕ್ಷಣಾ ಹೋರಾಟಗಾರಸಂಜೀವ ಪೆಡ್ನೇಕರ್ ಅವರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.