ADVERTISEMENT

ಕಲುಷಿತ ನೀರು, ಆಹಾರ; ಹೆಚ್ಚುತ್ತಿರುವ ಅನಾರೋಗ್ಯ

ದಿಲಾವರ್ ರಾಮದುರ್ಗ
Published 22 ಜನವರಿ 2019, 20:00 IST
Last Updated 22 ಜನವರಿ 2019, 20:00 IST
   

ಮಾಡಿದ್ದುಣ್ಣೊ ಮಹಾರಾಯಾ. ಇದೀಗ ಬೆಂಗಳೂರು ನಾಗರಿಕತೆ ಎದುರಿಸುತ್ತಿರುವುದು ಈ ಸ್ಥಿತಿಯನ್ನೇ. ಜನಾರೋಗ್ಯದ ದೃಷ್ಟಿಯಿಂದ ನಗರ ಜನಜೀವನ ತನ್ನ ವರ್ತನೆಯನ್ನು ಬದಲಾಯಿಸಿಕೊಳ್ಳದಿದ್ದರೆ ಆರೋಗ್ಯ ಎನ್ನುವುದು ಮರೀಚಿಕೆ ಅಷ್ಟೇ. ಮನುಷ್ಯನ ಅಗತ್ಯಗಳಾಗಿರುವ ನೀರು ಮತ್ತು ಅನ್ನ ಸುರಕ್ಷಿತವಾಗುಳಿಯುತ್ತಿಲ್ಲ ಎಂದ ಮೇಲೆ ಇನ್ನೇನು..

ಬದುಕಿಗೆ ಅಗತ್ಯವಾದ ಶುದ್ಧ ಅಥವಾ ಸುರಕ್ಷಿತ ನೀರನ್ನು ಕಾವೇರಿ ನದಿ ಪಾತ್ರಗಳಿಂದ ಮೂಲಸೌಕರ್ಯ ಅಭಿವೃದ್ಧಿಪಡಿಸಿ ನಗರಕ್ಕೆ ಹರಿಸಿಕೊಳ್ಳಬಹುದು. ಅದು ಕಷ್ಟವೇನಲ್ಲ. ಆದರೆ ಅದಷ್ಟೇ ಸಾಕೇ? ಅಗತ್ಯ ಆಹಾರ ಕೂಡ ಬೇಕಲ್ಲ?

ನೆನಪಿರಲಿ. ತನ್ನ ಸುತ್ತಮುತ್ತಲಿನ ಪ್ರದೇಶಗಳ ಕೃಷಿ ಭೂಮಿಯಿಂದಲೇ ಬೆಂಗಳೂರು ಅಗತ್ಯ ಹಾಲು, ಹಣ್ಣು, ತರಕಾರಿ, ಸೊಪ್ಪು ಮತ್ತಿತರ ಆಹಾರ ಪದಾರ್ಥಗಳನ್ನು ಬಹುತೇಕವಾಗಿ ಪಡೆದುಕೊಳ್ಳುತ್ತದೆ. ಅಂದರೆ ಸುತ್ತಲಿನ ಪ್ರದೇಶಗಳಲ್ಲಿ ನಡೆಯುವ ಕೃಷಿ ಚಟುವಟಿಕೆಗಳು ನಗರದ ಆಹಾರ ಅಗತ್ಯವನ್ನು ಪೂರೈಸುತ್ತಿವೆ ಎಂದಾಯಿತು. ಆರೋಗ್ಯಕರ ಬದುಕು ಬೇಕು ಅಂದಾಗ ಆರೋಗ್ಯಯುತ ಆಹಾರವೂ ಅಗತ್ಯ. ಹಾಗಾದರೆ ಈ ಆರೋಗ್ಯಯುತ ಆಹಾರ ಸುಮ್ಮನೇ ಬಂದು ಬಿಡುತ್ತದೆಯೇ?

ADVERTISEMENT

ಯೋಚಿಸಲೇಬೇಕಾದ ಅತ್ಯಂತ ಪ್ರಮುಖ ಆಂಶವಿದು. ಮಹಾನಗರಕ್ಕೆ ಬಂದು ಸೇರುತ್ತಿರುವ ಇಂದಿನ ಆಹಾರ ಪದಾರ್ಥಗಳು, ಸೊಪ್ಪು, ತರಕಾರಿ, ಹಣ್ಣು, ಹಾಲು ಇವೆಲ್ಲ ಆರೋಗ್ಯಯುತವಾಗಿಲ್ಲ. ಇದರಿಂದಾಗಿಯೇ ನಗರ ಜನಾರೋಗ್ಯ ಅಷ್ಟೊಂದು ಸುರಕ್ಷಿತವಾಗಿಲ್ಲ. ಈ ಹಿನ್ನೆಲೆಯಲ್ಲಿ ಕೃಷಿಕರನ್ನು ದೂರುವುದು ನ್ಯಾಯವಲ್ಲ. ನಗರ ನಾಗರಿಕರು ತಮ್ಮನ್ನು ತಾವೇ ದೂರಿಕೊಳ್ಳಬೇಕಷ್ಟೇ.

ವಿಷಯ ಜಟಿಲವೇನಲ್ಲ. ತುಂಬ ಸರಳವಾಗಿದೆ. ಮನುಷ್ಯನಿಗೆ ದಕ್ಕುತ್ತಿರುವ ನೀರು ನೈಸರ್ಗಿಕ. ಹಾಗೆ ಬಹುತೇಕ ಅಗತ್ಯ ಆಹಾರವನ್ನು ನಾವು ವ್ಯವಸ್ಥೆ ಮಾಡಿಕೊಳ್ಳಬೇಕು. ಅದು ಕೃಷಿಯಿಂದ ಮಾತ್ರ ಸಾಧ್ಯ. ಮನುಷ್ಯನಿಗಿರುವಷ್ಟು ನೀರಿನ ಅಗತ್ಯ ಕೃಷಿಗೂ ಇದೆ. ಶುದ್ಧ ನೀರು ಆರೋಗ್ಯಕ್ಕೆ ಹೇಗೆ ಪೂರಕವೋ ಸುರಕ್ಷಿತ ನೀರು ಕೃಷಿಗೂ ಅಗತ್ಯ.

ಸುರಕ್ಷಿತ ನೀರು ನಮಗೆ ನದಿ ಮೂಲಗಳಿಂದಲೇ ದಕ್ಕುವಂಥದು. ಸರ್ಕಾರದ ವ್ಯವಸ್ಥೆ ಕಷ್ಟಪಟ್ಟು ಮೂಲಸೌಕರ್ಯ ರೂಪಿಸಿ ನಗರಕ್ಕೆ ಕುಡಿಯುವ ನೀರು ಒದಗಿಸಬಹುದು. ಅದು ಅಗತ್ಯ ಕೂಡ. ತಕರಾರಿಲ್ಲ. ಆದರೆ ನದಿಯ ನೀರೆಲ್ಲವೂ ನಗರ ಬಳಕೆಗೆ, ಉದ್ಯಮ, ಕಾರ್ಖಾನೆಗೆ ಉಪಯೋಗವಾಗಿ ಅದರಿಂದ ಬಂದ ಕಲ್ಮಶವೆಲ್ಲ ಅದೇ ನದಿ ನೀರು ಸೇರಿ ಕಲುಷಿತಗೊಳ್ಳುತ್ತದೆ. ಅದು ಸಮಸ್ಯೆ.

’ಕೃಷಿ ಭೂಮಿಯ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಯಾರೂ ಯೋಚಿಸುತ್ತಿಲ್ಲ. ಅತಿಯಾದ ಕೈಗಾರಿಕೆ ರಾಸಾಯನಿಕಳು. ಇ–ತ್ಯಾಜ್ಯ, ಆಸ್ಪತ್ರೆ ತ್ಯಾಜ್ಯ, ಬ್ಯಾಕ್ಟಿರಿಯಾ, ಪೆಟ್ರೊಲಿಯಂ ತ್ಯಾಜ್ಯ... ಎಲ್ಲವೂ ನೀರಿಗೆ ಸೇರುತ್ತಿದೆ. ಅಂದರೆ ಅಂತರ್ಜಲದ ಮೇಲೆ ಇದೆಲ್ಲ ಪರಿಣಾಮ ಬೀರುತ್ತಿದೆ. ಕೃಷಿಗೆ ಬಳಕೆಯಾಗುವುದು ಇಂಥದೇ ನೀರು. ಹಲವು ಕಲ್ಮಶಗಳಿಂದ ಕೂಡಿದ ನೀರನ್ನು ಬಳಸಿ ಕೃಷಿ ಮಾಡಿದರೆ ಅದರ ಫಲದಲ್ಲೂ ಅಪಾಯಕಾರಿ ಅಂಶಗಳು ಸೇರದೇನು? ಬೆಂಗಳೂರಿಗರು ಮಾಡುತ್ತಿರುವ ಮಾಲಿನ್ಯ ಅವರದೇ ಉಣ್ಣುವ ತಟ್ಟೆಗೆ ವಾಪಸ್‌ ಆಗುತ್ತಿದೆ. ಈ ಬಗ್ಗೆ ಗಂಭೀರವಾಗಿ ಯೋಚಿಸಲೇಬೇಕಿದೆ‘ ಎನ್ನುತ್ತಾರೆ ತಜ್ಞ ಆಂಜನೇಯ ರೆಡ್ಡಿ.

ಇತ್ತೀಚೆಗೆ ಬೆಂಗಳೂರಿನಲ್ಲಿ ಕಿಡ್ನಿ, ಲಿವರ್‌, ಹೃದಯ ಸಂಬಂಧಿ ಕಾಯಿಲೆಗಳ ಜೊತೆಗೆ ನರರೋಗಗಳಿಂದ ಬಳಲುತ್ತಿರುವವರ ಸಂಖ್ಯೆ ಜಾಸ್ತಿಯಾಗಿದೆ. ಲಕ್ಷಕ್ಕೆ ಒಂದಷ್ಟು ಜನರಲ್ಲಿ ಕಾಣಿಸುತ್ತಿದ್ದ ಎಷ್ಟೋ ಕಾಯಿಲೆಗಳು ಪ್ರತಿ ಸಾವಿರ, ಪ್ರತಿ ನೂರು ಇನ್ನೂ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಪ್ರತಿ ಹತ್ತು ಜನರಲ್ಲೂ ಕಾಣಿಸಿಕೊಂಡರೆ ಅಚ್ಚರಿ ಪಡಬೇಕಿಲ್ಲ. ನಗರ ನಿವಾಸಿಗಳ ಆರೋಗ್ಯ, ಮಾನಸಿಕ ಸ್ಥಿತಿಗತಿಯ ಬಗ್ಗೆ ನಿಮಾನ್ಸ್‌ ಸೇರಿದಂತೆ ಹಲವು ಅಧ್ಯಯನಗಳು ನಡೆದಿವೆ. ಇವೆಲ್ಲದರಿಂದ ಆತಂಕಕಾರಿ ಅಂಶಗಳೇ ಹೊರಬರುತ್ತಿರುವುದನ್ನು ಕಡೆಗಣಿಸುವುದಾದರೂ ಹೇಗೆ ಎಂದು ಅವರು ಪ್ರಶ್ನಿಸುತ್ತಾರೆ.

ಸಾವಯವ ಪದಾರ್ಥಗಳನ್ನು ತಿನ್ನಿ ಅಂತ ಹೇಳ್ತಾರೆ. ರಾಸಾಯನಿಕ ಗೊಬ್ಬರ ಬಳಸದೇ ಬೆಳೆದರಷ್ಟೇ ಅದು ಸಾವಯವ ಆಗದು. ಅದಕ್ಕೆ ಪೂರಕವಾಗಿ ಬೇಕಾಗುವ ಸುರಕ್ಷಿತ ನೀರು ಕೂಡ ಮುಖ್ಯವಾಗುತ್ತದೆ. ನೀರಿನಲ್ಲಿ ಲೋಹದ ಅಂಶಗಳು, ಹೈಯರ್‌ ನ್ಯೂಟ್ರಿಯಂಟ್ಸ್‌, ಮಾರ್ಜಕಗಳು ಸೇರಿದರೆ ಅದು ಹೇಗೆ ಸುರಕ್ಷಿತ ನೀರಾಗಲು ಸಾಧ್ಯ? ಹೀಗೆ ನೀರು ಹಾಳಾಗಿ ನಗರಕ್ಕೆ ಸೇರುವ ನೀರಿನ ಗುಣಮಟ್ಟವೂ ಹಾಳಾಗಿ ಅದರ ಕಲೂಷಿತ ಅಂಶ ಮತ್ತೆ ವಾಪಸ್‌ ನಗರದ ಸುತ್ತಲಿನಆನೇಕಲ್‌, ಕೋಲಾರ, ಚಿಕ್ಕಬಳ್ಳಾಪುರ,ರಾಮನಗರ, ದೇವನಹಳ್ಳಿ, ಹೊಸಕೋಟೆ, ಆನೇಕಲ್‌, ನೆಲಮಂಗಲ... ಕೃಷಿ ಭೂಮಿಗೆ ಬಿಟ್ಟು ಅಲ್ಲಿಂದ ಆರೋಗ್ಯಯುತ ಆಹಾರ ಪದಾರ್ಥಗಳನ್ನು ನಿರೀಕ್ಷಿಸುವುದು ಹಾಸ್ಯಾಸ್ಪದ ಎನ್ನುತ್ತಾರವರು.

ನೀರು ಕಲುಷಿತಗೊಳ್ಳಲು ಕಾರಣವಾಗುವ ಅಂಶಗಳತ್ತ ಗಮನ ವಹಿಸುವುದು ಅತ್ಯಂತ ಅಗತ್ಯ. ನಮ್ಮ ಆರೋಗ್ಯ ಚೆನ್ನಾಗಿರಬೇಕು ಅಂದರೆ ನಮ್ಮ ಆಹಾರವೂ ಚೆನ್ನಾಗಿರಬೇಕು. ಆಹಾರ ಚೆನ್ನಾಗಿರಬೇಕು ಅಂದರೆ ಕೃಷಿಯೂ ಚೆನ್ನಾಗಿರಬೇಕು. ಕೃಷಿ ಚೆನ್ನಾಗಿರಬೇಕು ಅಂದರೆ ಅದಕ್ಕೆ ಅಗತ್ಯ ನೀರು ಕೂಡ ಸುರಕ್ಷಿತವಾಗಿರಬೇಕು.

**

ಕೃಷಿಭೂಮಿಯ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಯಾರೂ ಯೋಚಿಸುತ್ತಿಲ್ಲ. ಕುಡಿಯಲು ಸುರಕ್ಷಿತ ನೀರಿನ ಅಗತ್ಯವಿರುವಂತೆ ಕೃಷಿಗೂ ಸುರಕ್ಷಿತ ನೀರು ಬೇಕು. ಕಲುಷಿತ ನೀರಿನಿಂದ ಕೃಷಿ ಮಾಡಿ ಆರೋಗ್ಯಯುತ ತರಕಾರಿ, ಸೊಪ್ಪು ಇತರ ಆಹಾರ ಪದಾರ್ಥಗಳನ್ನು ನಿರೀಕ್ಷಿಸಿದರೆ ಹೇಗೆ?

–ಆರ್‌. ಆಂಜನೇಯ ರೆಡ್ಡಿ, ನೀರಾವರಿ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.