ADVERTISEMENT

World Environment Day| ಆಕಾಶವಾಣಿ ಅಂಗಳದಲ್ಲಿ ಸಸ್ಯರಾಶಿ...

ಸಸ್ಯ ಸಂಕುಲ ಬೆಳೆಸಿದ ರೂವಾರಿ ಮಡಿಕೇರಿ ಆಕಾಶವಾಣಿ ‘ಕಾರ್ಯಕ್ರಮ ನಿರ್ವಾಹಕ’ ಡಾ.ವಿಜಯ್‌ ಅಂಗಡಿ

ಅದಿತ್ಯ ಕೆ.ಎ.
Published 5 ಜೂನ್ 2021, 7:40 IST
Last Updated 5 ಜೂನ್ 2021, 7:40 IST
ತಾವೇ ಬೆಳೆದ ಗಿಡಗಳ ಮಧ್ಯೆ ಮಡಿಕೇರಿ ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ.ವಿಜಯ್‌ ಅಂಗಡಿ ಅವರು (ಪ್ರಜಾವಾಣಿ ಚಿತ್ರ)
ತಾವೇ ಬೆಳೆದ ಗಿಡಗಳ ಮಧ್ಯೆ ಮಡಿಕೇರಿ ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ.ವಿಜಯ್‌ ಅಂಗಡಿ ಅವರು (ಪ್ರಜಾವಾಣಿ ಚಿತ್ರ)   

ಮಡಿಕೇರಿ: ಇದು ‘ಯುವವಾಣಿ’, ರೈತರಿಗೆ ಸಲಹೆ, ಹವಾಮಾನದ ಮಾಹಿತಿ, ಯೋಗ, ಗ್ರಾಮೀಣ ಸೊಗಡು ಆಧರಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಕೇಂದ್ರ ಮಾತ್ರ ಅಲ್ಲ. ಪರಿಸರದ ಮಹತ್ವವನ್ನೂ ಸಾರುತ್ತಿದೆ.

ಡಾ.ವಿಜಯ್‌ ಅಂಗಡಿ

–ಅದ್ಯಾವ ಸ್ಥಳವೆಂಬ ಕುತೂಹಲವೇ...? ಹಾಗಾದರೆ ನೀವು ಮಡಿಕೇರಿ ಆಕಾಶವಾಣಿ ಆವರಣಕ್ಕೆ ಬರಬೇಕು. ಆಕಾಶವಾಣಿ ಆವರಣದಲ್ಲಿ ಹಣ್ಣಿನ ಗಿಡಗಳು ಹಾಗೂ ಔಷಧೀಯ ಸಸ್ಯಗಳು ನಳನಳಿಸುತ್ತಿವೆ. ಅದರ ರೂವಾರಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ ಡಾ.ವಿಜಯ್‌ ಅಂಗಡಿ.

ವಿಜಯ್‌ ಅವರು, ಹಾಸನ ಆಕಾಶವಾಣಿ ಕೇಂದ್ರದಲ್ಲಿ ಸುಮಾರು 27ವರ್ಷಗಳ ಕಾಲ ಸೇವೆ ಸಲಿಸಿದ್ದರು. ಮಡಿಕೇರಿ ಕೇಂದ್ರಕ್ಕೆ ವರ್ಗವಾಗಿ ಬಂದು, ಸುಮಾರು ಎರಡೂವರೆ ವರ್ಷ ಕಳೆದಿದ್ದು ತಮ್ಮ ಕಾರ್ಯ ಸ್ಥಾನದ ಆವರಣವನ್ನು ಸಸ್ಯರಾಶಿಯಿಂದ ಕಂಗೊಳಿಸುವಂತೆ ಮಾಡಿದ್ದಾರೆ. ವಿಜಯ್‌ ಅವರ ಸ್ವಂತ ಊರು ಬಳ್ಳಾರಿ ಜಿಲ್ಲೆ, ಕೂಡ್ಲಿಗಿ ತಾಲ್ಲೂಕಿನ ಎಂ.ಬಿ.ಅಯ್ಯನಹಳ್ಳಿ.

ADVERTISEMENT

ವಿವಿಧ ಬಗೆಯ 85 ಸಸ್ಯಗಳು ಕಾಳಜಿಯಿಂದ ನಾಟಿ ಮಾಡಿ, ಅವುಗಳನ್ನು ಪೋಷಣೆ ಮಾಡುತ್ತಿದ್ದಾರೆ. ತಮ್ಮ ಕಚೇರಿಯ ಸಮಯವಾದ ಮೇಲೆ, ಉಳಿದ ವೇಳೆಯನ್ನು ಸಸ್ಯತೋಟಕ್ಕೆ ಬಳಕೆ ಮಾಡುತ್ತಿದ್ದಾರೆ. ಉನ್ನತ ಹುದ್ದೆಯಲ್ಲಿದ್ದರೂ ಅವರೇ ಹಾರೆ ಹಿಡಿದು ಕೆಲಸ ಮಾಡುತ್ತಾರೆ. ಬೇಸಿಗೆಯಲ್ಲಿ ಗಿಡಗಳಿಗೆ ನೀರೆರೆದು ಪೋಷಿಸಿದ್ದಾರೆ. ವಿಜಯ್‌ ಅವರ ಪರಿಸರದ ಮೇಲಿನ ಕಾಳಜಿ, ಮುಂದಾಲೋಚನೆಯಿಂದ ಈ ಸಸ್ಯ ತೋಟ ನಿರ್ಮಾಣವಾಗಿದೆ. ಭವಿಷ್ಯದಲ್ಲಿ ಸಸ್ಯ ಸಂಕುಲ ಎಷ್ಟು ಮಹತ್ವ ಎಂಬುದನ್ನು ಸಾರಿ ಹೇಳುತ್ತಿದೆ.

ಹೇಗಿತ್ತು... ಹೇಗಾಯಿತು...?

ಆಕಾಶವಾಣಿಯ ಸುತ್ತಮುತ್ತಲಿದ್ದ ಜಾಗದಲ್ಲಿ ಗಿಡಗಂಟಿಗಳು ಬೆಳೆದಿದ್ದವು. ನಿರ್ವಹಣೆಯೂ ಇರಲಿಲ್ಲ. ವಿಜಯ್‌ ಅವರು, ಕಳೆ ತೆಗೆದು ಅಲ್ಲಿ ಸಸ್ಯಕಾಶಿಯನ್ನೇ ನಿರ್ಮಿಸಿದ್ದಾರೆ.

ತಾವು, ರೈತರ ಸಂದರ್ಶನಕ್ಕೆ ಗ್ರಾಮೀಣ ಪ್ರದೇಶಕ್ಕೆ ತೆರಳಿದ್ದ ಕಡೆಗಳಲ್ಲಿ ತಮ್ಮ ಸ್ವಂತ ಹಣ ನೀಡಿ ಸಸಿ ಖರೀದಿಸಿ ತಂದು ಬೆಳೆಸಿದ್ದಾರೆ. ಅವುಗಳು ಬೆಳೆಯುತ್ತಿವೆ. ಇನ್ನೂ ಕೆಲವೇ ತಿಂಗಳಲ್ಲಿ ಹಣ್ಣಿನ ಗಿಡಗಳು ಫಲ ನೀಡಲಿವೆ. ಜೊತೆಗೆ, ಆಕಾಶವಾಣಿಗೆ ಸಂದರ್ಶನ ನೀಡಲು ಬರುವ ರೈತರಿಗೂ ಪರಿಸರದ ಮಹತ್ವ ತಿಳಿಸಿ, ಗಿಡಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.

85 ಬಗೆಯ ಗಿಡಗಳು

ತೆಂಗು, ಬೂದು ಬಾಳೆ, ಪಚ್ಚಬಾಳೆ, ಅನಾನಸ್‌, ದಾಸವಾಳ, ಮಾಂಗಾಯಿ ಶುಂಠಿ, ಕಿತ್ತಳೆ, ಹೆಲಿಕೋನಿಯಾ, ಕಬ್ಬು, ಅಲಂಕಾರಿಕಾ ಬಾಳೆ, ಕ್ರಿಸ್ಥ್‌ಥಾರ್ನ್‌, ಮರಗೆಣಸು, ಸಿಹಿ ಗೆಣಸು, ಬೆಣ್ಣೆ ಹಣ್ಣು, ಬಟರ್‌ ಫ್ರೂಟ್‌, ಕಾಫಿ, ಕಾಳಿಮೆಣಸು, ಡ್ರ್ಯಾಗನ್‌ ಫ್ರೂಟ್‌, ‘ಮೇ’ ಲಿಲ್ಲಿ, ‘ಮೈಕ್’‌ ಲಿಲ್ಲಿ, ಬಿಳಿ ಲಿಲ್ಲಿ, ಅಲಂಕಾರಿಕಾ ದತ್ತೂರಿ, ಬಳ್ಳಿ ಬಸಳೆ, ಮೈಸೂರು ಬಸಳೆ, ಎಲೆ ಬೆಳ್ಳುಳ್ಳಿ, ಪರಂಗಿ, ನೆಲ ಗುಲಾಬಿ, ಕಣಗಲೆ, ಕೆಂಪು ಕ್ಯಾನ, ಹಳದಿ ಕ್ಯಾನ, ಲವಂಗ, ಮೆಣಸು, ಪೇರಲ, ರುದ್ರಾಕ್ಷಿ ಹಲಸು, ಗೋಡಂಬಿ, ವೆನಿಲ್ಲ, ಅಡುಗೆ ಬಾಳೆ, ವಾಟರ್‌ ಆ್ಯಪಲ್‌, ಕಲರ್‌ ಬದಲಿಸುವ ದಾಸವಾಳ, ಮಿನಿಯೇಚರ್‌ ಆಂಥೂರಿಯಂ, ಸೋಂಪು ಗಿಡ, ಅಶೋಕ, ಪುನರ್ಪುಳಿ, ನೆಲ ಆರ್ಕಿಡ್... ಹೀಗೆ ಹತ್ತಾರು ಬಗೆಯ ಗಿಡಗಳನ್ನು ವಿಜಯ್‌ ಅವರು ಬೆಳೆಸಿದ್ದಾರೆ.

ಔಷಧೀಯ ಸಸ್ಯಗಳು

ನಿಂಬೆ ಹುಲ್ಲು, ಅರಿಶಿಣ, ಕಸ್ತೂರಿ ಅರಿಶಿಣ, ಸದಾ ಪುಷ್ಪ, ಚಕ್ರಮುನಿ, ಗಾಂಧಾರಿ ಮೆಣಸು, ಕರಿಬೇವು, ಮಧು ನಾಶಿನಿ, ಜೇಷ್ಠ ಮಧು, ಪೆಪ್ಪರ್‌ ಮಿಂಟ್‌, ದೊಡ್ಡ ಒಂದೆಲಗ, ಸಣ್ಣ ಒಂದೆಲಗ, ಅರಾರೂಟ್‌, ಅಮೃತಬಳ್ಳಿ, ಇನ್ಸುಲಿನ್‌ ಗಿಡ... ಹೀಗೆ ಹಲವು ಬಗೆಯ ಔಷಧೀಯ ಹುಲ್ಲು ಸಹ ಬೆಳೆಸಿದ್ದಾರೆ.

ಅಡಿಕೆ ಸಿಪ್ಪೆಯೇ ಗೊಬ್ಬರ

‘ಗ್ರಾಮೀಣ ಪ್ರದೇಶಕ್ಕೆ ತೆರಳಿದಾಗ ಅಲ್ಲಿ ಸಿಗುವ ಅಡಿಕೆ ಸಿಪ್ಪೆ ತಂದು ಬುಡಕ್ಕೆ ಹಾಕುತ್ತಿದ್ದೇನೆ. ಪ್ರೀತಿಯಿಂದ ಗಿಡ ಬೆಳೆಸಿದ್ದೇನೆ. ಕಳೆದ ವರ್ಷ 80 ಕಡೆ ನಿಂಬೆ ಹುಲ್ಲಿನ ಸಸಿ ಹಾಕಲಾಗಿತ್ತು. ಅವುಗಳೂ ಬೆಳೆದಿವೆ. ಈ ನಿಂಬೆ ಹುಲ್ಲನ್ನು ಪಾನೀಯಕ್ಕೂ ಬಳಕೆ ಮಾಡಿಕೊಳ್ಳಬಹುದು. ಅದನ್ನು ಕುಡಿದರೆ ಆಹ್ಲಾದಕರ ಎನಿಸಲಿದೆ. ಬರವನ್ನೂ ತಡೆದುಕೊಳ್ಳುವ ಸಸಿಯಿದು. ಹಲವು ಬಗೆಯ ಔಷಧೀಯ ಸಸಿ ಬೆಳೆಸಲಾಗಿದೆ. ಪ್ರತಿಯೊಂದಕ್ಕೂ ಮಹತ್ವವಿದೆ. ಆಕಾಶವಾಣಿ ವಸತಿ ಗೃಹದ ಆವರಣದಲ್ಲೂ ಗಿಡ ಬೆಳೆಸಲಾ ಗುತ್ತಿದೆ’ ಎಂದು ಡಾ.ವಿಜಯ್ ಅಂಗಡಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪರಿಸರ ಕಾಳಜಿ ನೋಡಿ ಖುಷಿ

‘ವಿಜಯ್‌ ಅಂಗಡಿ ಪರಿಸರ ಪ್ರೇಮಿ. ಅವರು ಆಕಾಶವಾಣಿಗೆ ಕೃಷಿ ಸಂಬಂಧಿಸಿದ ಕಾರ್ಯಕ್ರಮ ಮಾತ್ರ ರೂಪಿಸುತ್ತಿಲ್ಲ. ಪ್ರಾಯೋಗಿಕವಾಗಿಯೂ ಆವರಣದಲ್ಲಿ ಗಿಡ ಬೆಳೆಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ತಾವೇ ಕೆಲಸ ಮಾಡುತ್ತಿದ್ದಾರೆ. ರಾತ್ರಿ 9 ಗಂಟೆಯ ತನಕವೂ ಗಿಡಗಳ ಆರೈಕೆ ಮಾಡುತ್ತಾರೆ. ಅವರು ಕಾಲಿಗೆ ಚಪ್ಪಲಿ ಸಹ ಧರಿಸುವುದಿಲ್ಲ. ಅಷ್ಟು ಸರಳ ವ್ಯಕ್ತಿ. ಪರಿಸರ ಕಾಳಜಿ ನೋಡಿ ಖುಷಿಯಾಗುತ್ತದೆ’ ಎಂದು ನಿಲಯದ ಮುಖ್ಯಸ್ಥ ಶ್ರೀನಿವಾಸ್‌ ಪ್ರತಿಕ್ರಿಯಿಸಿದರು.

***

ಹಸಿರೀಕರಣ ಮಾಡುವ ಉದ್ದೇಶ ದಿಂದ ಖಾಲಿ ಜಾಗದಲ್ಲಿ ಗಿಡ ನೆಡಲಾಗಿದೆ. ಜೊತೆಗೆ, ಅವುಗಳ ಬಳಕೆಯ ಬಗ್ಗೆಯೂ ದಾಖಲೀಕರಣ ಮಾಡುವ ಉದ್ದೇಶವಿದೆ

- ಡಾ.ವಿಜಯ್‌ ಅಂಗಡಿ, ಕಾರ್ಯಕ್ರಮ ನಿರ್ವಾಹಕ, ಮಡಿಕೇರಿ ಆಕಾಶವಾಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.