ADVERTISEMENT

ಅನುಭವ ಮಂಟಪ | ಉದಾರೀಕರಣಕ್ಕೆ 30 ವರ್ಷ: ಆರೋಗ್ಯ ಅನುತ್ಪಾದಕವಾಯಿತೇ?

ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ
Published 8 ಸೆಪ್ಟೆಂಬರ್ 2021, 5:43 IST
Last Updated 8 ಸೆಪ್ಟೆಂಬರ್ 2021, 5:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬ್ರಿಟಿಷರ ಆಳ್ವಿಕೆಯನ್ನು ಕಿತ್ತೊಗೆದು 75 ವರ್ಷಗಳಾಗು ತ್ತಿರುವ ಈ ಸಂದರ್ಭದಲ್ಲಿ, ಆರ್ಥಿಕ ನೀತಿಯ ದಿಕ್ಕು ಬದಲಿಸಿ 30 ವರ್ಷಗಳಾಗುತ್ತಿವೆ. ಈಗಿನ ಪಥವು ಹಿಮ್ಮುಖವಾಗಿ ಸ್ವಾತಂತ್ರ್ಯ ಸೇನಾನಿಗಳ ಕನಸುಗಳನ್ನು, ಅವರು ಕಟ್ಟಿದ್ದ ಸಾಧನೆ-ಸಂಸ್ಥೆಗಳನ್ನು ಕುಟ್ಟಿ ಹಾಕಿ ಮತ್ತೆ ದಾಸ್ಯದೆಡೆಗೆ ಒಯ್ಯುವಂತಿದೆ.

ಭವಿಷ್ಯದೊಂದಿಗೆ ಮುಖಾಬಿಲೆಗೆ ಬಡತನ, ಅಜ್ಞಾನ, ಅನಾರೋಗ್ಯ, ಅಸಮಾನತೆಗಳನ್ನು ತೊಡೆದುಹಾಕಿ, ಪ್ರತಿಯೊಬ್ಬನಿಗೂ ಪರಿಪೂರ್ಣವಾದ ಜೀವನವನ್ನು ಖಾತರಿಗೊಳಿಸಬಲ್ಲ ಸಾಮಾಜಿಕ, ಆರ್ಥಿಕ, ರಾಜಕೀಯ ಸಂರಚನೆಗಳನ್ನು ರೂಪಿಸಬೇಕು ಎಂದು ಸ್ವಾತಂತ್ರ್ಯದ ಆ ಬೆಳಗಿನಲ್ಲಿ ಪ್ರಧಾನಿ ಜವಾಹರಲಾಲ್‌ ನೆಹರೂ ಘೋಷಿಸಿದ್ದರು, ಅದಕ್ಕೆ ಭದ್ರ ಬುನಾದಿಯನ್ನೂ ಸಿದ್ಧಪಡಿಸಿದ್ದರು.

ಸ್ವಾತಂತ್ರ್ಯ ಪೂರ್ವದಲ್ಲೇ (1940) ಕರ್ನಲ್ ಸಾಹಿಬ್ ಸಿಂಗ್ ಸೋಖಿ ಅಧ್ಯಕ್ಷತೆಯ ಆರೋಗ್ಯ ಯೋಜನೆಯ ಉಪಸಮಿತಿಯು ಸರ್ಕಾರವೇ ಸಮಗ್ರ ಆರೋಗ್ಯ ಸೇವೆಗಳನ್ನು ಉಚಿತವಾಗಿ ಒದಗಿಸಬೇಕು, ಆಧುನಿಕ ವೈದ್ಯರನ್ನೇ ಸೇವೆಗೆ ನಿಯೋಜಿಸಬೇಕು, ಸಾವಿರ ಜನಸಂಖ್ಯೆಗೆ ಒಬ್ಬ ವೈದ್ಯನಿರಬೇಕು, ಔಷಧಗಳು ಹಾಗೂ ಉಪಕರಣಗಳು ಸಾರ್ವಜನಿಕ ರಂಗದಲ್ಲೇ ಉತ್ಪಾದನೆಯಾಗಬೇಕು ಎಂದು ಸಲಹೆ ನೀಡಿತ್ತು. ಖಾಸಗಿ ಹಿತಾಸಕ್ತಿಗಳಿಗಾಗಲೀ, ಆಯುರ್ವೇದ ಇತ್ಯಾದಿ ಪದ್ಧತಿಗಳಿಗಾಗಲೀ ಯಾವುದೇ ಮಹತ್ವವನ್ನು ಅದು ನೀಡಿರಲಿಲ್ಲ. ಮುಂದೆ 1943ರಲ್ಲಿ ಸರ್ ಜೋಸೆಫ್ ಭೋರ್ ಅವರ ಸಮಿತಿಯು ಕೂಡ ಸೋಖಿ ಸಮಿತಿಯ ಆಶಯಗಳನ್ನೇ ಬೆಂಬಲಿಸಿ, ಪ್ರತಿ 10-20 ಸಾವಿರ ಜನತೆಗೆಂಬಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಪ್ರತಿ ಜಿಲ್ಲೆಗೊಂದು 2,500 ಹಾಸಿಗೆಗಳ ತೃತೀಯ ಸ್ತರದ ಆಸ್ಪತ್ರೆ ಇರಬೇಕು ಎಂದು ಸಲಹೆ ನೀಡಿತು.

ADVERTISEMENT

ನೆಹರೂ ಸರ್ಕಾರದ ಮೊದಲ ಮೂರು ಪಂಚವಾರ್ಷಿಕ ಯೋಜನೆಗಳ ಅಂತ್ಯಕ್ಕೆ 4,631 ಆರೋಗ್ಯ ಕೇಂದ್ರಗಳಾದವು; ದಿಲ್ಲಿಯ ಏಮ್ಸ್, ಚಂಡೀಗಡದ ಪಿಜಿಐ, ಬೆಂಗಳೂರಿನ ಮನೋರೋಗ ಸಂಸ್ಥೆ, ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ ಮುಂತಾದ ಅತ್ಯುನ್ನತ ವೈದ್ಯಕೀಯ ಹಾಗೂ ಸಂಶೋಧನಾ ಸಂಸ್ಥೆಗಳು ಸ್ಥಾಪನೆಗೊಂಡವು, ಬ್ರಿಟಿಷರು ತೆರೆದಿದ್ದ ಲಸಿಕೆ ಸಂಶೋಧನಾ ಸಂಸ್ಥೆಗಳು ಬಲಗೊಂಡವು. ಹಿಂದುಸ್ಥಾನ್ ಆ್ಯಂಟಿಬಯಾಟಿಕ್ಸ್, ಐಡಿಪಿಎಲ್‌ನಂತಹ ಸಂಸ್ಥೆಗಳು ಸಾರ್ವಜನಿಕ ಕ್ಷೇತ್ರದಲ್ಲಿ ಸ್ಥಾಪನೆಯಾದವು. ಆಧುನಿಕ ವೈದ್ಯಕೀಯ ಕಾಲೇಜುಗಳು 1946ರಲ್ಲಿ 15 ಇದ್ದುದು 1965ರಲ್ಲಿ 81ರಷ್ಟಾದವು, ಸೀಟುಗಳು 1,200ರಿಂದ 10,000ಕ್ಕೇರಿದವು. ಮಲೇರಿಯಾ, ಕ್ಷಯ, ಕುಷ್ಠ, ಕಾಲರಾ ಮುಂತಾದವುಗಳ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮಗಳೂ ಆರಂಭಗೊಂಡವು; 1947ರಲ್ಲಿ ಮಲೇರಿಯಾದಿಂದ ವರ್ಷಕ್ಕೆ 8 ಲಕ್ಷ ಜನರು ಸಾವನ್ನಪ್ಪುತ್ತಿದ್ದರೆ, 1961ರಲ್ಲಿ ಇದು 50 ಸಾವಿರಕ್ಕಿಳಿಯಿತು.

ನೆಹರೂ ನಂತರ ಈ ಸಾಧನೆಗಳು ಮುಂದುವರಿಯಲಿಲ್ಲ. ತೊಂಬತ್ತರ ಆರಂಭದಲ್ಲಿ ಹೊಸ ಆರ್ಥಿಕ ನೀತಿಯೆಡೆಗೆ ಹೊರಳಿದಾಗ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳು ಅನುತ್ಪಾದಕವೆನಿಸಿದವು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಶುಲ್ಕಗಳೂ ಬಂದವು, ಉನ್ನತ ಶಿಕ್ಷಣ ಖಾಸಗಿಯವರಿಗೆ ವಹಿಸಲ್ಪಟ್ಟಿತು, ಶಿಕ್ಷಣ ಹಾಗೂ ಆರೋಗ್ಯ ಸೇವೆಗಳು ಉಚಿತವಾಗಿರಬೇಕೆಂಬ ಸ್ವಾತಂತ್ರ್ಯಯೋಧರ ಆಶಯಗಳು ಅಂದೇ ಮಣ್ಣುಪಾಲಾದವು.

ಭೋರ್ ಸಮಿತಿಯನುಸಾರ ಈಗ 1,30,000 ಪ್ರಾಥಮಿಕ ಆರೋಗ್ಯ ಕೇಂದ್ರಗಳಿರಬೇಕಾದಲ್ಲಿ 30,045 ಮಾತ್ರ ಇವೆ, ಇವುಗಳಲ್ಲೂ ಶೇ 24ರಷ್ಟು ಕಡೆ ವೈದ್ಯರಿಲ್ಲ, ಶೇ 35-50ರಷ್ಟು ಸಹಾಯಕ ಸಿಬ್ಬಂದಿಯಿಲ್ಲ. ಇವನ್ನು ಸುಧಾರಿಸುವ ಬದಲಿಗೆ, ಆರೋಗ್ಯ ಕೇಂದ್ರಗಳಿಂದ ಜಿಲ್ಲಾಸ್ಪತ್ರೆಗಳವರೆಗೆ ಎಲ್ಲವನ್ನೂ ಖಾಸಗಿ ಗುತ್ತಿಗೆಗೆ ಒಪ್ಪಿಸಿ, ಉಪಕೇಂದ್ರಗಳನ್ನು ಬದಲಿ ಪದ್ಧತಿ-ಯೋಗಗಳ ಸೌಖ್ಯಾಲಯಗಳನ್ನಾಗಿ ಮಾಡಿ, ಕಾರ್ಪೊರೇಟ್ ಶಕ್ತಿಗಳ ಟೆಲಿಮೆಡಿಸಿನ್ ಜಾಲಕ್ಕೆ ಜೋಡಿಸುವ ಯೋಜನೆಗಳಾಗುತ್ತಿವೆ.

ಭೋರ್ ಸಮಿತಿಯು ರಾಷ್ಟ್ರೀಯ ಉತ್ಪನ್ನದ ಶೇ 15ರಷ್ಟನ್ನು ಆರೋಗ್ಯ ಸೇವೆಗಳಿಗೆ ಒದಗಿಸಬೇಕೆಂದು ಹೇಳಿತ್ತು (ಅತ್ಯುತ್ತಮ ಆರೋಗ್ಯ ಸೇವೆಗಳಿರುವ ದೇಶಗಳಲ್ಲಿ ಶೇ10-11ರಷ್ಟು ವ್ಯಯಿಸಲಾಗುತ್ತಿದೆ). ಹನ್ನೊಂದನೇ ಯೋಜನೆಯಲ್ಲಿ (2007-12) ಇದು ಕೇವಲ ಶೇ 0.9ರಷ್ಟು ಆಯಿತು. ಈಗಿನ ಸರ್ಕಾರವು 2017ರ ಆರೋಗ್ಯ ನೀತಿಯಲ್ಲಿ 2025ಕ್ಕೆ ಶೇ 2.5ರಷ್ಟು ಅನುದಾನವಿರಲಿದೆ ಎಂದು ಹೇಳಿತಾದರೂ, ಅದೆಲ್ಲೂ ಕಾಣುತ್ತಿಲ್ಲ. ಬದಲಿಗೆ, ಕಳೆದ ವರ್ಷದ ಖರ್ಚಿಗಿಂತಲೂ ₹7,000 ಕೋಟಿ ಕಡಿಮೆ ಅನುದಾನ ಒದಗಿಸಿ, ನೀರು-ನೈರ್ಮಲ್ಯಗಳ ಖರ್ಚನ್ನು ಆರೋಗ್ಯ ಸೇವೆಗೆ ಸೇರಿಸಿ, 100 ವರ್ಷಗಳಲ್ಲೇ ಮೊದಲಿಗೆ ಆರೋಗ್ಯಕ್ಕೆ ₹2 ಲಕ್ಷ ಕೋಟಿಗೂ ಮಿಕ್ಕಿ ಹಣ ನೀಡಲಾಗಿದೆ ಎಂದು ಜಾದೂ ಮಾಡಲಾಗಿದೆ.

Caption

ಸರ್ಕಾರಿ ಆಸ್ಪತ್ರೆಗಳಿಗೆ ಹಣವೊದಗಿಸದೆ ಕೆಡಿಸಿ, ಆಯುಷ್ಮಾನ್ ಭಾರತ ಇತ್ಯಾದಿ ಹೆಸರಲ್ಲಿ ಜನರನ್ನು ದೊಡ್ಡ ಖಾಸಗಿ ಆಸ್ಪತ್ರೆಗಳತ್ತ ತಳ್ಳಲಾಗುತ್ತಿದೆ. ಸಮಗ್ರ ಆರೋಗ್ಯ ಸೇವೆಗಳಿಗೆ ಪ್ರತಿ ವರ್ಷ ಬೇಕಾಗುವ ಕನಿಷ್ಠ ₹2.15 ಲಕ್ಷ ಕೋಟಿಗಳನ್ನು ಸರ್ಕಾರವು ಒದಗಿಸದಿರುವುದರಿಂದ ಶೇ 80ರಷ್ಟು ಖರ್ಚನ್ನು ಜನರೇ ವ್ಯಯಿಸಿ ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ.

ಈ ಹಿಂದೆ ಅನೇಕ ವೈದ್ಯರು ತಮ್ಮ ಊರುಗಳಲ್ಲಿ ಸಣ್ಣ ಖಾಸಗಿ ಆಸ್ಪತ್ರೆಗಳನ್ನು ನಡೆಸಿ ಶೇ 70ರಷ್ಟು ಆರೋಗ್ಯ ಸೇವೆಗಳನ್ನು ಒದಗಿಸುವಂತಾಗಿತ್ತು. ಈಗ ಬಗೆಬಗೆಯ ನಿಯಂತ್ರಣಗಳನ್ನು ಹೇರಿ ಅವನ್ನು ನಡೆಸಲು ಅಸಾಧ್ಯವಾಗುವಂತೆ ಮಾಡಲಾಗುತ್ತಿದೆ. ಅತ್ತ ಕಾರ್ಪೊರೇಟ್ ಶಕ್ತಿಗಳಿಗೆ ನಗರಗಳಲ್ಲಿ ಬೃಹತ್ ಆಸ್ಪತ್ರೆಗಳನ್ನು ನಿರ್ಮಿಸಲು ಎಕರೆಗಟ್ಟಲೆ ಜಾಗವನ್ನೂ, ಎಲ್ಲ ಬಗೆಯ ವಿನಾಯಿತಿಗಳನ್ನೂ ನೀಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳನ್ನಷ್ಟೇ ಅಲ್ಲ, ಸಣ್ಣ ಖಾಸಗಿ ಆಸ್ಪತ್ರೆಗಳನ್ನೂ ನುಂಗಲು ಕಾರ್ಪೊರೇಟ್ ಆಸ್ಪತ್ರೆಗಳಿಗೆ ಅನುಕೂಲ ಒದಗಿಸಲಾಗುತ್ತಿದೆ.

ಸಾವಿರ ಜನರಿಗೊಬ್ಬ ಆಧುನಿಕ ವೈದ್ಯನಿರಬೇಕೆಂಬ ಗುರಿಯನ್ನು ತಲುಪಲಾಗಿಲ್ಲ; 1,500 ಜನರಿಗೊಬ್ಬನಂತೆ 9 ಲಕ್ಷದಷ್ಟು ವೈದ್ಯರಿದ್ದಾರೆ, ಜೊತೆಗೆ 8 ಲಕ್ಷದಷ್ಟು ಬದಲಿ ಚಿಕಿತ್ಸಕರನ್ನೂ ತಯಾರಿಸಲಾಗಿದೆ. ಗ್ರಾಮೀಣ ಆರೋಗ್ಯ ಅಭಿಯಾನದಲ್ಲಿ ಉತ್ತಮ ಸಂಬಳಕ್ಕೆ ಆಧುನಿಕ ವೈದ್ಯರನ್ನು ನೇಮಿಸುವ ಬದಲು ಕಡಿಮೆ ಸಂಬಳಕ್ಕೆ 12,000ದಷ್ಟು ಬದಲಿ ಚಿಕಿತ್ಸಕರನ್ನು ನೇಮಿಸಲಾಗಿದೆ. ಹೊಸ ಶಿಕ್ಷಣ ನೀತಿಯಲ್ಲಿ ಆಧುನಿಕ ವೈದ್ಯಕೀಯ ಶಿಕ್ಷಣದಲ್ಲಿ ಬದಲಿ ಪದ್ಧತಿಗಳನ್ನು ಕಲಬೆರಕೆ ಮಾಡುವ ಪ್ರಸ್ತಾವವಿದ್ದು, ಬೆರಕೆಗಳಿಗೆ ಪರವಾನಿಗೆ ಕೊಡಲು ಎನ್‌ಎಂ‌ಸಿಯನ್ನೂ ತರಲಾಗಿದೆ. ಒಟ್ಟಿನಲ್ಲಿ ಆಧುನಿಕ ವೈದ್ಯವಿಜ್ಞಾನವೇ ಆರೋಗ್ಯ ಸೇವೆಗಳನ್ನೊದಗಿಸಬೇಕೆಂಬ ಆಶಯಗಳನ್ನೂ ಹೂತು ಹಾಕಿ, ಅದರ ಮಾನಗೆಡಿಸಿ, ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಅಲ್ಪ ಸಂಬಳಕ್ಕೆ ಗುಲಾಮರಾಗಲು ಬೆರಕೆ ವೈದ್ಯರು ತಯಾರಾಗಲಿದ್ದಾರೆ.

ವೈದ್ಯಕೀಯ ಶಿಕ್ಷಣವನ್ನೂ ಕಾರ್ಪೊರೇಟ್ ಚರಣಗಳಿಗೆ ಅರ್ಪಿಸಲಾಗುತ್ತಿದೆ. ನೆಹರೂ ಕಾಲಾಂತ್ಯಕ್ಕೆ 81 ವೈದ್ಯಕೀಯ ಕಾಲೇಜುಗಳಿದ್ದು, ಅವುಗಳಲ್ಲಿ ಕೇವಲ 7 (ಶೇ9) ಖಾಸಗಿ ಕಾಲೇಜುಗಳಿದ್ದರೆ, ಈಗ ಒಟ್ಟು ಕಾಲೇಜುಗಳು 554ಕ್ಕೆ ಏರಿ, ಸೀಟುಗಳು 10 ಸಾವಿರದಿಂದ 83 ಸಾವಿರವಾಗಿವೆ, ಅವುಗಳಲ್ಲಿ 269 (ಶೇ 49) ಖಾಸಗಿ ಕಾಲೇಜುಗಳಾಗಿದ್ದು, 40 ಸಾವಿರ ಸೀಟುಗಳನ್ನು ಹೊಂದಿವೆ. ಈಗ ಎಂಸಿಐಯನ್ನು ಕಿತ್ತೊಗೆದು ಎನ್‌ಎಂಸಿಯನ್ನು ತಂದು, ಕಾರ್ಪೊರೇಟ್ ಶಕ್ತಿಗಳು ಸೇರಿದಂತೆ ಯಾರು ಬೇಕಾದರೂ, ಎಲ್ಲಿ ಬೇಕಾದರೂ, ಇನ್ನಷ್ಟು ಖಾಸಗಿ ಕಾಲೇಜುಗಳನ್ನು ತೆರೆಯುವುದಕ್ಕೆ ದಾರಿ ತೆರೆಯಲಾಗಿದೆ.

ನೆಹರೂ ಕಾಲದ ಸರ್ಕಾರಿ ಔಷಧ-ಲಸಿಕೆಗಳ ಕಂಪೆನಿಗಳು ಕೂಡ ರೋಗಗ್ರಸ್ತವಾಗಿವೆ, ಮುಚ್ಚಿವೆ. ಔಷಧಗಳ ಮೇಲೆ ವಿದೇಶಿ ಕಂಪೆನಿಗಳ ಹಕ್ಕು ಸ್ವಾಮ್ಯತೆಯನ್ನು ನಿರಾಕರಿಸಿ ನಮ್ಮ ಕಂಪೆನಿಗಳಿಗೆ ಆ ಔಷಧಗಳನ್ನು ಉತ್ಪಾದಿಸಲು ಇತ್ತೀಚಿನವರೆಗೂ ಅವಕಾಶ ನೀಡಲಾಗುತ್ತಿತ್ತು. ಈಗ ಅದಕ್ಕೆ ಅರ್ಜಿ ಹಾಕುವುದನ್ನೇ ತಡೆಯಲಾಗುತ್ತಿದೆ. ಕೊರೋನಾ ಲಸಿಕೆಯನ್ನು ಹಕ್ಕು ಸ್ವಾಮ್ಯತೆಯಿಂದ ಹೊರಗಿರಿಸಬೇಕೆಂಬ ದಕ್ಷಿಣ ಆಫ್ರಿಕಾದ ಪ್ರಸ್ತಾವಕ್ಕೆ ಭಾರತವು ಅಲ್ಲಿ ಜೊತೆಯಾಗಿದ್ದರೂ, ಇಲ್ಲಿ ಖಾಸಗಿ ಕಂಪೆನಿಗಳ ತಾಳಕ್ಕೆ ಕುಣಿದು, ಲಸಿಕೆ ಅಭಿವೃದ್ಧಿ ಪಡಿಸುವಲ್ಲಿ ಐಸಿಎಂಆರ್, ಎನ್‌ಐವಿ ನೀಡಿದ್ದ ಕೊಡುಗೆಗಳನ್ನೇ ಅಡಗಿಸಲಾಗಿದೆ.

ಹೊಸ ಆರ್ಥಿಕ ನೀತಿಯ ಪರಿಣಾಮಗಳೆಲ್ಲವೂ ಕೊರೋನಾ ನಿಭಾವಣೆಯಲ್ಲೇ ಎದ್ದು ತೋರಿವೆ. ನೆಹರೂ ಕಾಲದಲ್ಲಿ ಸರ್ಕಾರಿ ಸಂಸ್ಥೆಗಳ ತಜ್ಞರ ನೇತೃತ್ವದಲ್ಲಿ ಮಲೇರಿಯಾದಂತಹ ರೋಗಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗಿದ್ದರೆ, ಈಗ ಕೊರೋನಾ ಸೋಂಕನ್ನು ನಿಭಾಯಿಸುವಲ್ಲಿ ತಜ್ಞರೆಲ್ಲರನ್ನೂ ಮೂಲೆಗೆ ತಳ್ಳಿ ಕಾರ್ಪೊರೇಟ್ ಧಣಿಗಳನ್ನೇ ತಜ್ಞರನ್ನಾಗಿಸಿ, ಅವರ ಸಲಹೆಗಳಂತೆಯೇ ಲಾಕ್‌ಡೌನ್, ಶಾಲೆ ಬಂದ್, ಅಲ್ಲಲ್ಲಿ ಆರ್‌ಟಿ ಪಿಸಿಆರ್, ಮತ್ತೀಗ ಕಡ್ಡಾಯ ಲಸಿಕೆ ಎಂದೆಲ್ಲ ಹೇರಲಾಗುತ್ತಿದೆ, ಸೋಂಕೆಂಬ ಪರಿಕಲ್ಪನೆಯೇ ಇಲ್ಲದ ಬದಲಿ ಪದ್ಧತಿಗಳೇ ಕೊರೋನಾ ಸೋಂಕಿಗೆ ಪರಿಹಾರವೆಂಬಂತೆ ಬಿಂಬಿಸಲಾಗುತ್ತಿದೆ.

ಕಾಂಕ್ರೀಟಿಗೆ ಸುರಿಯಲು ಹಣವಿದೆ, ಆರೋಗ್ಯ-ಶಿಕ್ಷಣಗಳಿಗೆ ಇಲ್ಲವಾಗಿದೆ. ಹಾಗಾಗಿ ಆರೋಗ್ಯ ಸೇವೆಗಳು ಕಾರ್ಪೊರೇಟ್ ಮುಷ್ಠಿಯೊಳಗಾಗಿ ಹಿಮ್ಮುಖವಾಗಿವೆ.

**
ಕೇಂದ್ರದ ನೀತಿಯಲ್ಲೇ ಸಮಸ್ಯೆ
ವೈದ್ಯಕೀಯ ಕ್ಷೇತ್ರದ ಮೇಲೆ ಜಾಗತೀಕರಣ– ಉದಾರೀಕರಣವು ಮಿಶ್ರ ಪ್ರಭಾವ ಬೀರಿದೆ. ಸಂಶೋಧನೆಗಳು ಹೆಚ್ಚಿವೆ. ಹೊಸಹೊಸ ಔಷಧಿ, ಚಿಕಿತ್ಸಾ ಪದ್ಧತಿಗಳು ಬಂದಿವೆ. ಜತೆಗೆ ಅವು ದುಬಾರಿಯೂ ಆಗಿವೆ. ಈ ವಿಚಾರದಲ್ಲಿ ಗ್ಯಾಟ್‌ ಒಪ್ಪಂದವನ್ನು ದೂಷಿಸುವುದಕ್ಕಿಂತ ಕೇಂದ್ರ ಸರ್ಕಾರದ ನೀತಿಗಳನ್ನು ಪ್ರಶ್ನಿಸಬೇಕಾಗಿದೆ.

–ಡಾ. ಎಂ. ಅಚ್ಯುತ ಆರ್. ಕುಡ್ವ

ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಸಂಶೋಧನೆಗಳಾಗಿವೆ ನಿಜ, ಆದರೆ ಖಾಸಗಿ ಸಂಸ್ಥೆಗಳೇ ಹೆಚ್ಚು ಸಂಶೋಧನೆಯಲ್ಲಿ ತೊಡಗಿವೆ. ಸಂಶೋಧನೆಗೆ ಹಾಕಿದ ಹಣವನ್ನು ಅವರು ತೆಗೆಯದೇ ಬಿಡುತ್ತಾರೆಯೇ? ಆ ಕಾರಣಕ್ಕೆ ಔಷಧಿಗಳು ದುಬಾರಿ ಆಗಿವೆ. ಇನ್ನೊಂದೆಡೆ, ಎಷ್ಟೇ ಉತ್ತಮ ವೈದ್ಯರಾದರೂ ಚಿಕಿತ್ಸೆಗೆ ಆಧುನಿಕ ತಂತ್ರಜ್ಞಾನ–ಔಷಧಿಗಳು ಬೇಕಲ್ಲವೇ?

ಇಂಗ್ಲೆಂಡ್, ಅಮೆರಿಕದಂಥ ರಾಷ್ಟ್ರಗಳ ವೈದ್ಯಕೀಯ ನೀತಿಯಲ್ಲಿ ಒಂದು ಸ್ಪಷ್ಟತೆ ಇದೆ. ನಮ್ಮ ನೀತಿಗಳಿಂದಾಗಿ ಜಾಗತಿಕ ಮಟ್ಟದಲ್ಲಿ ದೇಶದ ಮಾನ ಹೋಗುತ್ತಿದೆ. ಆರೋಗ್ಯ ಸಚಿವಾಲಯ ಇರುವಾಗಲೇ ಆಯುಷ್‌ಗೆ ಪ್ರತ್ಯೇಕ ಸಚಿವಾಲಯ ಮಾಡಿದ್ದಾರೆ. ಹಾಗಾದರೆ ‘ಆಯುಷ್‌’ಗೂ ‘ಆರೋಗ್ಯ’ಕ್ಕೂ ಸಂಬಂಧವೇ ಇಲ್ಲವೇ? ಹಾಗಿದ್ದರೆ ಪ್ರತಿ ಪದ್ಧತಿಗೊಂದು ಸಚಿವಾಲಯ ಮಾಡಲಿ.

ಹಲವಾರು ಕಾಲೇಜುಗಳು ಮತ್ತು ಸಂಸ್ಥೆಗಳು ಸಂಶೋಧನೆ ನಡೆಸುತ್ತಿವೆ. ಇವುಗಳನ್ನು ಸರ್ಕಾರ ಪ್ರೋತ್ಸಾಹಿಸಬೇಕು. ಸರ್ಕಾರವು ಸಂಶೋಧನೆಗೆ ನೀಡಿದ ಅನುದಾನ ಪೋಲಾದ ಕಾರಣ, ನಿರ್ವಹಿಸಲಾಗದೇ ಖಾಸಗೀಕರಣಕ್ಕೆ ಒತ್ತು ನೀಡಿರಬಹುದು. ನಮ್ಮ ಆರೋಗ್ಯ ಇಲಾಖೆ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂಬುದರ ಸೂಚನೆ ಇದು.

–ಡಾ. ಎಂ. ಅಚ್ಯುತ ಆರ್. ಕುಡ್ವ, ಭಾರತೀಯ ವೈದ್ಯಕೀಯ ಸಂಸ್ಥೆ ಮಂಗಳೂರು ಘಟಕದ ಅಧ್ಯಕ್ಷ

**
ಉದಾರೀಕರಣದ ಲಾಭವೇ ಹೆಚ್ಚು
ಉದಾರೀಕರಣದಿಂದ ವೈದ್ಯಕೀಯ ಕ್ಷೇತ್ರಕ್ಕೆ ಪ್ರಯೋಜನ ಆಗಿದೆ. ವಿಶೇಷವಾಗಿ ಔಷಧ ಮತ್ತು ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಹೆಚ್ಚಿನ ಒತ್ತು ಸಿಕ್ಕಿದೆ. ಆರೋಗ್ಯ ಸೇವೆಯೂ ಉತ್ತಮವಾಗಿದೆ. ಇದರಿಂದಾಗಿ ಈ ಕ್ಷೇತ್ರದಲ್ಲಿ ದೇಶ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಿದೆ. ಉತ್ತಮ ಗುಣಮಟ್ಟದ ಆಸ್ಪತ್ರೆಗಳು ಸ್ಥಾಪನೆಯಾಗಿ ರೋಗಿಗಳಿಗೆ ಶ್ರೇಷ್ಠ ಮಟ್ಟದ ಆರೈಕೆ ಸಿಗುತ್ತಿದೆ. ಜಾಗತಿಕವಾಗಿ ವೈದ್ಯಕೀಯ ವಿಜ್ಞಾನ ಬೆಳೆದಂತೆಲ್ಲಾ ಅದಕ್ಕೆ ಪೂರಕ ಆರೋಗ್ಯ ವ್ಯವಸ್ಥೆ, ತಂತ್ರಜ್ಞಾನ, ಚಿಕಿತ್ಸಾ ಪದ್ಧತಿ ಹೊಂದುವುದೂ ಅಷ್ಟೇ ಮುಖ್ಯ.

ಭಾರತ ಮಾತ್ರವಲ್ಲ ಯಾವುದೇ ದೇಶವಿರಲಿ ಉದಾರೀಕರಣಕ್ಕೆ ತೆರೆದುಕೊಂಡ ಬಳಿಕ ಸಾಕಷ್ಟು ಲಾಭ ಪಡೆದಿವೆ. ಕಮ್ಯುನಿಸ್ಟ್‌ ರಾಷ್ಟ್ರಗಳೂ ಇದಕ್ಕೆ ಹೊರತಾಗಿಲ್ಲ. ಉದಾರೀಕರಣ ಪೂರ್ವದ ವ್ಯವಸ್ಥೆ ಮತ್ತು ಉದಾರೀಕರಣ ವ್ಯವಸ್ಥೆ ಎಂದು ತುಲನೆ ಮಾಡಲು ಸಾಧ್ಯವಿಲ್ಲ. ಹುಟ್ಟಿಕೊಳ್ಳುವ ಹೊಸ ಹೊಸ ಕಾಯಿಲೆಗಳು ಅದನ್ನು ನಿಭಾಯಿಸಲು ರೂಪುಗೊಳ್ಳುವ ಆಧುನಿಕ ತಂತ್ರಜ್ಞಾನ ಮತ್ತು ಔಷಧಗಳ ಲಭ್ಯತೆ ಮುಖ್ಯವಾಗುತ್ತದೆ. ಉದಾರೀಕರಣ ವ್ಯವಸ್ಥೆಯಲ್ಲಿ ಇವೆಲ್ಲವನ್ನೂ ತ್ವರಿತವಾಗಿ ಪಡೆಯಬಹುದು. ಕಾರ್ಪೊರೇಟ್‌ ಹಿಡಿತಕ್ಕೆ ಆರೋಗ್ಯ ವಲಯ ಒಳಪಟ್ಟಿದೆ ಎಂಬ ವಾದಕ್ಕೆ ಯಾವುದೇ ಆಧಾರವಿಲ್ಲ.

–ಡಾ.ಮಹೇಶ್‌ ನಲ್ವಾಡ್‌, ಸಂಚಾಲಕ, ಬಿಜೆಪಿಯ ವೈದ್ಯಕೀಯ ಪ್ರಕೋಷ್ಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.