ADVERTISEMENT

Explainer: ಸುಯೆಜ್ ಸಂಚಾರ ಸ್ಥಗಿತ, ಇಲ್ಲಿದೆ ಸಮಗ್ರ ವಿವರ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 19:31 IST
Last Updated 26 ಮಾರ್ಚ್ 2021, 19:31 IST
ಕಾಲುವೆಯ ದಂಡೆಯಲ್ಲಿ ಮರಳು ಮತ್ತು ಮಣ್ಣನ್ನು ತೆರವು ಮಾಡಲಾಗುತ್ತಿದೆ
ಕಾಲುವೆಯ ದಂಡೆಯಲ್ಲಿ ಮರಳು ಮತ್ತು ಮಣ್ಣನ್ನು ತೆರವು ಮಾಡಲಾಗುತ್ತಿದೆ   

ಸುಯೆಜ್ ಕಾಲುವೆಯಲ್ಲಿ ಎವರ್‌ಗ್ರೀನ್‌ ಕಂಪನಿಯ ಎವರ್ ಗಿವೆನ್ ಬೃಹತ್ ಕಂಟೇನರ್ ಹಡಗು ಸಿಲುಕಿಕೊಂಡಿರುವುದರಿಂದ, ನಾಲ್ಕು ದಿನಗಳಿಂದ ಕಾಲುವೆಯಲ್ಲಿ ಹಡಗು ಸಂಚಾರ ಸ್ಥಗಿತವಾಗಿದೆ.

ಸುಯೆಜ್ ಕಾಲುವೆಯಲ್ಲಿ ಎವರ್‌ಗ್ರೀನ್‌ ಕಂಪನಿಯ ಎವರ್ ಗಿವೆನ್ ಬೃಹತ್ ಕಂಟೇನರ್ ಹಡಗು ಸಿಲುಕಿಕೊಂಡಿರುವುದರಿಂದ,
ನಾಲ್ಕು ದಿನಗಳಿಂದ ಕಾಲುವೆಯಲ್ಲಿ ಹಡಗು ಸಂಚಾರ ಸ್ಥಗಿತವಾಗಿದೆ. ವಿಶ್ವದ ಅತ್ಯಂತ ದಟ್ಟಣೆಯ ಸಮುದ್ರಮಾರ್ಗವಾದ ಸುಯೆಜ್ ಕಾಲುವೆ ಸ್ಥಗಿತವಾಗಿರುವ ಕಾರಣ, ಜಾಗತಿಕ ಮಟ್ಟದಲ್ಲಿ ವಾಣಿಜ್ಯ ವಹಿವಾಟಿನ ಮೇಲೆ ಭಾರಿ ಪರಿಣಾಮ ಬೀರಿದೆ. ಎಲ್ಲಕ್ಕಿಂತ ಮುಖ್ಯವಾಗಿ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಕಚ್ಚಾತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಸುಯೆಜ್ ಕಾಲುವೆಯಲ್ಲಿ ಹಡಗು ಸಂಚಾರ ಆರಂಭವಾಗಲು ಇನ್ನೂ ಒಂದೆರಡು ವಾರಗಳು ಬೇಕಾಗಬಹುದು

ಆಗಿದ್ದೇನು?

ADVERTISEMENT

ಮೆಡಿಟರೇನಿಯನ್ ಸಮುದ್ರದಿಂದ ಕೆಂಪು ಸಮುದ್ರದ ಕಡೆಗೆ ಬರುತ್ತಿದ್ದ ಎವರ್‌ ಗಿವೆನ್ ಹಡಗು, ಸುಯೆಜ್ ಕಾಲುವೆಯ ದಕ್ಷಿಣದ ತುದಿಯಲ್ಲಿ ಕೆಟ್ಟು ನಿಂತಿದೆ. ಇದೇ ವೇಳೆ ಬಿರುಗಾಳಿ ಬೀಸಿದ ಕಾರಣ, ಹಡಗಿನ ಮುಂಭಾಗ ದಕ್ಷಿಣದ ಕಡೆಗೆ, ಹಿಂಭಾಗ ಉತ್ತರದ ಕಡೆಗೆ ತೇಲಿದೆ. ಇದನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಹಡಗು ಕಾಲುವೆಗೆ ಅಡ್ಡವಾಗಿ ನಿಂತಿದೆ. ಆದರೆ, ಹಡಗಿನ ಮುಂಭಾಗ ಮತ್ತು ಹಿಂಭಾಗವು ಕಾಲುವೆಯ ಅಂಚಿನಲ್ಲಿ ಇರುವ ಮರಳಿನಲ್ಲಿ ಸಿಲುಕಿಕೊಂಡಿದೆ. ಮರಳಿನಿಂದ ಅದನ್ನು ಬಿಡಿಸಲು ಸಾಧ್ಯವಾಗುತ್ತಿಲ್ಲ. ಕಾಲುವೆ ಸಂಪೂರ್ಣವಾಗಿ ಬಂದ್ ಆಗಿದೆ.

ಪರಿಣಾಮಗಳು

ಕಾಲುವೆ ಸಂಪೂರ್ಣವಾಗಿ ಬಂದ್ ಆಗಿರುವ ಕಾರಣ ಸಂಚಾರವೂ ಸಂಪೂರ್ಣವಾಗಿ ಸ್ಥಗಿತವಾಗಿದೆ. ಹಡಗು ಸಿಲುಕಿದ್ದರೂ, ಉತ್ತರದ ಕಡೆಯಿಂದ ಹಲವು ಹಡಗುಗಳು ಕಾಲುವೆ ಪ್ರವೇಶಿಸಿವೆ. ಅವು ಹಿಂದಕ್ಕೂ ಹೋಗಲಾರದೆ, ಮುಂದಕ್ಕೂ ಹೋಗಲಾರದೆ ಸಿಲುಕಿಕೊಂಡಿವೆ. ಬೇರೆ ಹಡಗುಗಳು ಅಫ್ರಿಕಾವನ್ನು ಬಳಸಿ ಪ್ರಯಾಣ ಆರಂಭಿಸಿವೆ.

213 ಕಾಲುವೆಯ ಎರಡೂ ಬದಿಯಲ್ಲಿ ಸಂಚಾರ ಬಂದ್ ಮಾಡಿ ನಿಂತಿರುವ ಹಡಗುಗಳ ಸಂಖ್ಯೆ

12-14 ದಿನಗಳು ಆಫ್ರಿಕಾವನ್ನು ಬಳಸಿ ಹೋಗಲು ಹಡಗುಗಳಿಗೆ ಬೇಕಿರುವ ಹೆಚ್ಚುವರಿ ಸಮಯ

ಕಚ್ಚಾತೈಲ ಬೆಲೆ ಏರಿಕೆ

ಮಧ್ಯಪ್ರಾಚ್ಯ ದೇಶಗಳಿಂದ ವಿಶ್ವದ ವಿವಿಧೆಡೆಗೆ ಹೋಗಬೇಕಿರುವ ತೈಲವಾಹಕ ಹಡಗುಗಳು ಕಾಲುವೆಯಲ್ಲಿ ಸಿಲುಕಿವೆ. ಅಲ್ಲದೆ, ಹಲವು ಹಡಗುಗಳು ಆಫ್ರಿಕಾವನ್ನು ಬಳಸಿ ಪ್ರಯಾಣ ಆರಂಭಿಸಿರುವ ಕಾರಣ ಕಚ್ಚಾತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ನಿಗದಿತ ಅವಧಿಯಲ್ಲಿ ಯಾವ ದೇಶಕ್ಕೂ ತೈಲ ಪೂರೈಕೆಯಾಗುತ್ತಿಲ್ಲ. ಇದರಿಂದ ಕಚ್ಚಾತೈಲದ ಕೊರತೆ ಆರಂಭವಾಗಿದೆ. ಕೊರತೆಯ ಕಾರಣ ಕಚ್ಚಾತೈಲದ ಬೆಲೆ ಏರಿಕೆಯಾಗಿದೆ. ಈಗ ಹಡಗುಗಳ ಸಂಚಾರದ ದೂರ ಏರಿಕೆ ಆಗುವ ಕಾರಣ, ಕಚ್ಚಾತೈಲ ಪೂರೈಕೆಯ ವೆಚ್ಚವೂ ಏರಿಕೆಯಾಗಲಿದೆ. ಅಂತಿಮವಾಗಿ ಭಾರತವೂ ಸೇರಿದಂತೆ, ವಿಶ್ವದ ಹಲವು ದೇಶಗಳಲ್ಲಿ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಮತ್ತು ನೈಸರ್ಗಿಕ ಅನಿಲದ ಬೆಲೆಯಲ್ಲಿ ಏರಿಕೆಯಾಗಲಿದೆ.

ತೆರವು ಕಾರ್ಯಾಚರಣೆ

ಮರಳಿನಲ್ಲಿ ಸಿಲುಕಿರುವ ಎವರ್‌ಗ್ರೀನ್ ಹಡಗನ್ನು, ಬಿಡಿಸಲು ನಡೆಸುತ್ತಿರುವ ಕಾರ್ಯಾಚರಣೆಗಳು ವಿಫಲವಾಗಿವೆ. ಹಡಗನ್ನು ಕಾಲುವೆಯ ಮಧ್ಯಕ್ಕೆ ಎಳೇದು ತರಲು, ಭಾರಿ ಸಾಮರ್ಥ್ಯದ ಆರು ಟಗ್‌ಬೋಟ್‌ಗಳನ್ನು ಬಳಸಲಾಗುತ್ತಿದೆ. ಆದರೆ, ಹಡಗು ಸ್ವಲ್ಪವೂ ಸರಿಯುತ್ತಿಲ್ಲ.

* ಹಡಗು ಸಿಲುಕಿರುವ ಸ್ಥಳದಲ್ಲಿ, ಕಾಲುವೆಯ ಅಡಿಯಲ್ಲಿ ಇರುವ ಮರಳನ್ನು ಹೊರತೆಗೆಯಲಾಗುತ್ತಿದೆ

* ಈವರೆಗೆ 20,000 ಘನ ಮೀಟರ್‌ನಷ್ಟು ಮರಳನ್ನು ಅಲ್ಲಿಂದ ಹೊರಗೆ ತೆಗೆಯಲಾಗಿದೆ

* ಇನ್ನೂ ಒಂದೆರಡು ವಾರಗಳವರೆಗೆ ಕಾರ್ಯಾಚರಣೆ ನಡೆಯುವ ಸಾಧ್ಯತೆ ಇದೆ

* 400 ಮೀಟರ್‌ – ಹಡಗಿನ ಉದ್ದ

* 2 ಲಕ್ಷ ಟನ್ – ಹಡಗಿನ ತೂಕ

* 22,000 – ಹಡಗಿನಲ್ಲಿರುವ ಕಂಟೇರ್‌ನಗಳ ಸಂಖ್ಯೆ

(ಆಧಾರ: ರಾಯಿಟರ್ಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.