ADVERTISEMENT

ಹೊರ ರಾಜ್ಯ | ಈಶಾನ್ಯದಲ್ಲಿ ಮತ್ತೆ ಪ್ರತಿರೋಧದ ಕಿಡಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 19:34 IST
Last Updated 18 ಆಗಸ್ಟ್ 2022, 19:34 IST
‘ನಾರ್ತ್‌–ಈಸ್ಟ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌’ ಕಾರ್ಯಕರ್ತರು ಸಿಎಎ ವಿರುದ್ಧ ಗುವಾಹಟಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದ್ದರುGuwahati: Police personnel stand guard as North-East Students Organisation (NESO) leaders and activists stage a protest demanding scrapping of Citizenship Amendment Act (CAA), in Guwahati, Wednesday, Aug. 17, 2022. (PTI Photo)(PTI08_17_2022_000126B)
‘ನಾರ್ತ್‌–ಈಸ್ಟ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌’ ಕಾರ್ಯಕರ್ತರು ಸಿಎಎ ವಿರುದ್ಧ ಗುವಾಹಟಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದ್ದರುGuwahati: Police personnel stand guard as North-East Students Organisation (NESO) leaders and activists stage a protest demanding scrapping of Citizenship Amendment Act (CAA), in Guwahati, Wednesday, Aug. 17, 2022. (PTI Photo)(PTI08_17_2022_000126B)   

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಪೌರತ್ವ (ತಿದ್ದುಪಡಿ) ಕಾಯ್ದೆ–2019’ (ಸಿಎಎ) ವಿರುದ್ಧ ಈಶಾನ್ಯ ಭಾರತದ ರಾಜ್ಯಗಳ ವಿದ್ಯಾರ್ಥಿಗಳು ಮತ್ತೆ ಪ್ರತಿಭಟನೆಗೆ ಇಳಿದಿದ್ದಾರೆ. ನೆರೆಯ ದೇಶಗಳ ಹಿಂದೂ, ಸಿಖ್‌, ಜೈನ, ಪಾರ್ಸಿ, ಕ್ರೈಸ್ತ ಮತ್ತು ಬೌದ್ಧ ಧರ್ಮೀಯರಿಗೆ ಭಾರತದ ಪೌರತ್ವ ನೀಡಲು ಈ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ಈ ರೀತಿ ಪೌರತ್ವ ನೀಡಿದರೆ ತಮ್ಮ ಜನಾಂಗೀಯತೆಗೆ ಧಕ್ಕೆಯಾಗುತ್ತದೆ ಎಂಬುದು ಈಶಾನ್ಯ ಭಾರತದ ನಾಗರಿಕರ ಆಕ್ಷೇಪ. 2019ರ ಡಿಸೆಂಬರ್‌ನಲ್ಲಿ ಈ ಕಾಯ್ದೆ ಬಂದಾಗ ದೇಶದಾದ್ಯಂತ, ಇದರ ವಿರುದ್ಧ ಜನರ ಆಕ್ರೋಶ ಭುಗಿಲೆದ್ದಿತ್ತು. ಕೋವಿಡ್‌ ಸಾಂಕ್ರಾಮಿಕದ ಕಾರಣ ಪ್ರತಿಭಟನೆ ತಣ್ಣಗಾಗಿತ್ತು.ಆದರೆ, ಈಶಾನ್ಯ ಭಾರತದಲ್ಲಿ ಈ ಕಾಯ್ದೆಯ ವಿರುದ್ಧ ಮತ್ತೆ ಪ್ರತಿಭಟನೆ ಭುಗಿಲೆದ್ದಿದೆ. ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‌, ಮೇಘಾಲಯ, ಮಣಿಪುರ, ತ್ರಿಪುರಾ ಮತ್ತು ಮಿಜೋರಾಂನ ಹಲವೆಡೆ ಜನರು ಈ ಕಾಯ್ದೆಯ ವಿರುದ್ಧ ಅಹೋರಾತ್ರಿ ಧರಣಿ ಮತ್ತು ಪ್ರತಿಭಟನೆ ಆರಂಭಿಸಿದ್ದಾರೆ. ಈ ರಾಜ್ಯಗಳ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಯ ನೇತೃತ್ವ ವಹಿಸಿವೆ. ಪ್ರತಿಭಟನಕಾರರು ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿರಿಸಿದ್ದಾರೆ. ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ರದ್ದುಪಡಿಸಬೇಕು ಎಂದು ಆಗ್ರಹಿಸಿಯೂ ಪ್ರತಿಭಟನೆ ನಡೆಯುತ್ತಿದೆ.

***

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಪೌರತ್ವ (ತಿದ್ದುಪಡಿ) ಕಾಯ್ದೆ–2019’ (ಸಿಎಎ) ವಿರುದ್ಧ ಈಶಾನ್ಯ ಭಾರತದ ರಾಜ್ಯಗಳ ವಿದ್ಯಾರ್ಥಿಗಳು ಮತ್ತೆ ಪ್ರತಿಭಟನೆಗೆ ಇಳಿದಿದ್ದಾರೆ. ನೆರೆಯ ದೇಶಗಳ ಹಿಂದೂ, ಸಿಖ್‌, ಜೈನ, ಪಾರ್ಸಿ, ಕ್ರೈಸ್ತ ಮತ್ತು ಬೌದ್ಧ ಧರ್ಮೀಯರಿಗೆ ಭಾರತದ ಪೌರತ್ವ ನೀಡಲು ಈ ಕಾಯ್ದೆ ಅವಕಾಶ ಮಾಡಿಕೊಡುತ್ತದೆ.

ADVERTISEMENT

ಈ ರೀತಿ ಪೌರತ್ವ ನೀಡಿದರೆ ತಮ್ಮ ಜನಾಂಗೀಯತೆಗೆ ಧಕ್ಕೆಯಾಗುತ್ತದೆ ಎಂಬುದು ಈಶಾನ್ಯ ಭಾರತದ ನಾಗರಿಕರ ಆಕ್ಷೇಪ. 2019ರ ಡಿಸೆಂಬರ್‌ನಲ್ಲಿ ಈ ಕಾಯ್ದೆ ಬಂದಾಗ ದೇಶದಾದ್ಯಂತ, ಇದರ ವಿರುದ್ಧ ಜನರ ಆಕ್ರೋಶ ಭುಗಿಲೆದ್ದಿತ್ತು. ಕೋವಿಡ್‌ ಸಾಂಕ್ರಾಮಿಕದ ಕಾರಣ ಪ್ರತಿಭಟನೆ ತಣ್ಣಗಾಗಿತ್ತು.ಆದರೆ, ಈಶಾನ್ಯ ಭಾರತದಲ್ಲಿ ಈ ಕಾಯ್ದೆಯ ವಿರುದ್ಧ ಮತ್ತೆ ಪ್ರತಿಭಟನೆ ಭುಗಿಲೆದ್ದಿದೆ. ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‌, ಮೇಘಾಲಯ, ಮಣಿಪುರ, ತ್ರಿಪುರಾ ಮತ್ತು ಮಿಜೋರಾಂನ ಹಲವೆಡೆ ಜನರು ಈ ಕಾಯ್ದೆಯ ವಿರುದ್ಧ ಅಹೋರಾತ್ರಿ ಧರಣಿ ಮತ್ತು ಪ್ರತಿಭಟನೆ ಆರಂಭಿಸಿದ್ದಾರೆ. ಈ ರಾಜ್ಯಗಳ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಯ ನೇತೃತ್ವ ವಹಿಸಿವೆ. ಪ್ರತಿಭಟನಕಾರರು ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿರಿಸಿದ್ದಾರೆ. ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ರದ್ದುಪಡಿಸಬೇಕು ಎಂದು ಆಗ್ರಹಿಸಿಯೂ ಪ್ರತಿಭಟನೆ ನಡೆಯುತ್ತಿದೆ.

‘ಸಿಎಎ ರದ್ದುಪಡಿಸಿ’
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಪಡಿಸಿ ಎಂಬುದು ಪ್ರತಿಭಟನಕಾರರ ಪ್ರಮುಖ ಆಗ್ರಹ. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ‘ಕೋವಿಡ್‌ ಸಂಪೂರ್ಣ ಇಳಿಕೆಯಾದ ತಕ್ಷಣವೇ ಸಿಎಎ ಅನ್ನು ಅನುಷ್ಠಾನಕ್ಕೆ ತರಲಾಗುತ್ತದೆ. ಈಶಾನ್ಯ ಭಾರತದ ರಾಜ್ಯಗಳಲ್ಲೂಜಾರಿಗೆ ತರಲಾಗುತ್ತದೆ’ ಎಂದು ಹೇಳಿದ್ದರು. ಆನಂತರವೇ ಇಲ್ಲಿನ ಜನರು ಸಿಎಎ ವಿರುದ್ಧ ಮತ್ತೆ ಪ್ರತಿಭಟನೆಗೆ ಮುಂದಾಗಿದ್ದು.

ನೆರೆಯ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದಲ್ಲಿ ಧಾರ್ಮಿಕ ಕಿರುಕುಳ ಎದುರಿಸಿದ ಹಿಂದೂ, ಸಿಖ್‌, ಕ್ರೈಸ್ತ, ಬೌದ್ಧ, ಜೈನ ಮತ್ತು ಪಾರ್ಸಿ ಧರ್ಮೀಯರು ಭಾರತದ ಪೌರತ್ವ ಪಡೆಯಲು ಈ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ಧಾರ್ಮಿಕ ಕಿರುಕುಳದ ಕಾರಣ ಈ ದೇಶಗಳಿಂದ ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡಬಹುದು. ಈ ಹಿಂದೆಯೂ ಈ ಸ್ವರೂಪದ ಪೌರತ್ವ ನೀಡಲಾಗುತ್ತಿದ್ದರೂ, ಅದಕ್ಕೆ ದೀರ್ಘಾವಧಿ ಪ್ರಕ್ರಿಯೆಯ ಅವಶ್ಯಕತೆ ಇತ್ತು ಮತ್ತು ಎಲ್ಲಾ ಧರ್ಮೀಯರಿಗೂ ಅದು ಅನ್ವಯವಾಗುತ್ತಿತ್ತು. ಜತೆಗೆ 1971ಕ್ಕೂ ಮುನ್ನ ಭಾರತಕ್ಕೆ ಬಂದವರಿಗಷ್ಟೇ ಪೌರತ್ವ ದೊರೆಯುತ್ತಿತ್ತು. ಆದರೆ ಸಿಎಎಯು, 2014ರ ಡಿಸೆಂಬರ್ 31ರವರೆಗೆ ಹೀಗೆ ವಲಸೆ ಬಂದವರಿಗೂ ಪೌರತ್ವ ನೀಡಲು ಅವಕಾಶ ಮಾಡಿಕೊಡುತ್ತದೆ. ಈ ಕಾರಣದಿಂದಲೇ ಈ ಕಾಯ್ದೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

1971ರ ಬಾಂಗ್ಲಾ ವಿಮೋಚನಾ ಯುದ್ಧದ ನಂತರ ಈಶಾನ್ಯ ಭಾರತದ ರಾಜ್ಯಗಳಿಗೆ ಲಕ್ಷಾಂತರ ಬಾಂಗ್ಲಾ ದೇಶೀಯರು ವಲಸೆ ಬಂದಿದ್ದರು. ಅವರನ್ನೆಲ್ಲಾ ಗಡಿಪಾರು ಮಾಡಬೇಕು ಎಂಬುದು 1980ರ ದಶಕದ ಅಸ್ಸಾಂ ವಿದ್ಯಾರ್ಥಿ ಚಳವಳಿಯ ಆಗ್ರಹವಾಗಿತ್ತು. ಆ ಪ್ರಕಾರ 1966ರ ಜನವರಿ 1ಕ್ಕೂ ಮುನ್ನ ವಲಸೆ ಬಂದವರಿಗಷ್ಟೇ ಭಾರತದ ಪೌರತ್ವ ನೀಡಬೇಕು ಮತ್ತು ಆನಂತರದ ದಿನಗಳಲ್ಲಿ ವಲಸೆ ಬಂದವರನ್ನು ಗುರುತಿಸಿ ಅಗತ್ಯ ಕ್ರಮ ತಗೆದುಕೊಳ್ಳಬೇಕು ಎಂಬ ಷರತ್ತುಗಳಿದ್ದ ಒಪ್ಪಂದಕ್ಕೆ 1985ರಲ್ಲಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಚಳವಳಿಯ ನಾಯಕರು ಸಹಿ ಹಾಕಿದ್ದರು. ಇದನ್ನು ಅಸ್ಸಾಂ ಒಪ್ಪಂದ ಎಂದು ಕರೆಯಲಾಗುತ್ತಿದೆ.

ಸಿಎಎಯು ಅಸ್ಸಾಂ ಒಪ್ಪಂದದ ಷರತ್ತುಗಳನ್ನು ಅಮಾನ್ಯ ಮಾಡುತ್ತದೆ ಎಂಬುದು ಪ್ರತಿಭಟನಕಾರರ ಪ್ರಮುಖ ಆಕ್ಷೇಪ. ‘ಈಗ 2014ರ ಡಿಸೆಂಬರ್ 31ರವರೆಗೆ ವಲಸೆ ಬಂದವರಿಗೂ ಪೌರತ್ವ ನೀಡಲು ನೂತನ ಕಾಯ್ದೆಯು ಅವಕಾಶ ಮಾಡಿಕೊಟ್ಟಿದೆ. 1966ರ ನಂತರ ಬಾಂಗ್ಲಾ ಹಿಂದೂಗಳು ಲಕ್ಷಾಂತರ ಸಂಖ್ಯೆಯಲ್ಲಿ ಅಸ್ಸಾಂ, ತ್ರಿಪುರಾ ಮತ್ತು ಮೇಘಾಲಯಗಳಿಗೆ ವಲಸೆ ಬಂದಿದ್ದಾರೆ. ಅವರ ಸಂಸ್ಕೃತಿಯು ನಮ್ಮ ಸಂಸ್ಕೃತಿಗಿಂತ ತೀರಾ ಭಿನ್ನವಾದುದು. ಅವರಿಗೆ ಇಲ್ಲಿನ ಪೌರತ್ವ ನೀಡಿದರೆ, ಅದು ಸಾಂಸ್ಕೃತಿಕ ಸಂಘರ್ಷಕ್ಕೆ ಕಾರಣವಾಗುತ್ತದೆ. ಜತೆಗೆ ಇಲ್ಲಿನ ನೈಸರ್ಗಿಕ ಸಂಪನ್ಮೂಲದ ಮೇಲೆ ತೀವ್ರ ಹೊರೆಯಾಗುತ್ತದೆ. ಹೀಗಾಗಿ ಸಿಎಎ ಅನ್ನು ಸಂಪೂರ್ಣವಾಗಿ ರದ್ದು ಮಾಡಬೇಕು’ ಎಂಬುದು ಪ್ರತಿಭಟನಕಾರರ ಆಗ್ರಹ.

‘ಇಡೀ ಈಶಾನ್ಯಕ್ಕೆ ಐಎಲ್‌ಪಿ ತನ್ನಿ’
ಈಶಾನ್ಯ ಭಾರತದ ಹಲವು ರಾಜ್ಯಗಳಲ್ಲಿ ಇನ್ನರ್ ಲೈನ್ ಪರ್ಮಿಟ್ (ಐಎಲ್‌ಪಿ) ಜಾರಿಯಲ್ಲಿದೆ. ಈ ರಾಜ್ಯಗಳಿಗೆ ಸಂವಿಧಾನದ ವಿವಿಧ ವಿಧಿಗಳ ಅಡಿಯಲ್ಲಿ ವಿಶೇಷ ಸ್ಥಾನವನ್ನು ನೀಡಲಾಗಿದೆ. ವಿಶೇಷ ಸ್ಥಾನಗಳಲ್ಲಿ ಐಎಲ್‌ಪಿಯೂ ಒಂದು. ಈ ರಾಜ್ಯಗಳಿಗೆ ಪೌರತ್ವ (ತಿದ್ದುಪಡಿ) ಕಾಯ್ದೆ ಅನ್ವಯ ಆಗುವುದಿಲ್ಲ. ಹೀಗಾಗಿ ಐಎಲ್‌ಪಿಯನ್ನು ಈಶಾನ್ಯ ಭಾರತದ ಎಲ್ಲಾ ರಾಜ್ಯಗಳಿಗೆ ಅನ್ವಯ ಮಾಡಿ ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.

ಐಎಲ್‌ಪಿ ಜಾರಿಯಲ್ಲಿರುವ ರಾಜ್ಯಗಳಿಗೆ ಭೇಟಿ ನೀಡಲು,ದೇಶದ ಬೇರೆ ರಾಜ್ಯಗಳ ಜನರು ಸರ್ಕಾರದಿಂದ ಏಳು ದಿನಗಳ ಪರ್ಮಿಟ್ ಪಡೆಯಬೇಕಾಗುತ್ತದೆ. ಈ ರಾಜ್ಯಗಳನ್ನು ಸಂರಕ್ಷಿತ ಪ್ರದೇಶಗಳು ಎಂದು ಗುರುತಿಸಲಾಗಿದೆ. ಹೀಗಾಗಿ ಹೊರಗಿನ ವ್ಯಕ್ತಿಗಳು ಇಲ್ಲಿಗೆ ಮುಕ್ತವಾಗಿ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಈ ರಾಜ್ಯಗಳಲ್ಲಿ ಬೇರೆ ರಾಜ್ಯದವರು ನೆಲೆಸಲೂ ವಿಶೇಷ ‘ಪರ್ಮಿಟ್’ ಪಡೆಯಬೇಕು. ಆದರೆ ಹೊರಗಿನವರು ಇಲ್ಲಿ ಜಮೀನು ಖರೀದಿಸಲು ಅವಕಾಶ ಇಲ್ಲ. ಐಎಲ್‌ಪಿ ವ್ಯಾಪ್ತಿಗೆ ಒಳಪಡದ ಪ್ರದೇಶಗಳಲ್ಲಿ ಸಿಎಎ ಅನ್ವಯವಾಗುತ್ತದೆ. ಹೀಗಾಗಿಯೇ ಆ ಭಾಗದ ಜನರು, ಎಲ್ಲೆಡೆಯೂ ಐಎಲ್‌ಪಿ ಜಾರಿಗೆ ತನ್ನಿ ಎಂದು ಕೇಳುತ್ತಿದ್ದಾರೆ.

ಆಫ್‌ಸ್ಪ ವಿರುದ್ಧವೂ ಪ್ರತಿಭಟನೆ ಶುರು
ವಿವಾದಾತ್ಮಕ ‘ಸಶಸ್ತ್ರಪಡೆಗಳ ವಿಶೇಷಾಧಿಕಾರ ಕಾಯ್ದೆ–1958’ (ಆಫ್‌ಸ್ಪ) ವಿರುದ್ಧ ಈಶಾನ್ಯ ರಾಜ್ಯಗಳ ಜನರು ಮತ್ತೆ ದನಿ ಎತ್ತಿದ್ದು, ಬೀದಿಗಿಳಿದಿದ್ದಾರೆ.ವಾರಂಟ್ ಇಲ್ಲದೇ ಜನರನ್ನು ಬಂಧಿಸುವ, ಸ್ಥಳಗಳಲ್ಲಿ ಶೋಧ ನಡೆಸುವ, ನಾಗರಿಕರ ಮೇಲೂ ಗುಂಡು ಹಾರಿಸುವ ಹಾಗೂ ಗುಂಡು ಹಾರಿಸಿದವರಿಗೆ ರಕ್ಷಣೆ ನೀಡುವ ವಿವಾದಾತ್ಮಕ ಅಂಶಗಳನ್ನು ಈ ಕಾಯ್ದೆ ಹೊಂದಿದ್ದು, ಪ್ರತಿಭಟನಕಾರರು ಬೃಹತ್ ಹೋರಾಟಕ್ಕೆ ಮತ್ತೆ ಸಜ್ಜಾಗುತ್ತಿದ್ದಾರೆ.

ಈಶಾನ್ಯ ರಾಜ್ಯಗಳಲ್ಲಿ ಬಂಡುಕೋರರು ನಡೆಸುವ ದಾಳಿಯಿಂದ ಜನರಿಗೆ ರಕ್ಷಣೆ ಕೊಡುವ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಆದರೆ ಇದು ಸ್ಥಳೀಯರಿಗೆ ಬೆದರಿಕೆಯಾಗಿ ಪರಿಣಮಿಸಿದ್ದು, ಈ ಕಾಯ್ದೆ ಜಾರಿಗೊಳಿಸುವ ಹೊಣೆ ಹೊತ್ತುಕೊಂಡಿರುವಅಸ್ಸಾಂ ರೈಫಲ್ಸ್‌ ಯೋಧರಿಂದ ಜನರು ತೊಂದರೆ ಎದುರಿಸುತ್ತಿ ದ್ದಾರೆ ಎಂಬುದು ಪ್ರತಿಭಟನಕಾರರ ಆರೋಪ.

ಆಫ್‌ಸ್ಪವನ್ನು ಹಿಂದಕ್ಕೆ ಪಡೆಯಬೇಕು ಎಂಬ ಕೂಗು ಇದ್ದ ಸಮಯದಲ್ಲೇ, 2021ರ ಡಿಸೆಂಬರ್‌ನಲ್ಲಿ ನಾಗಾಲ್ಯಾಂಡ್‌ನಲ್ಲಿ ಭೀಕರ ಘಟನೆ ನಡೆಯಿತು. ಇಲ್ಲಿನ ಟಿರು ಹಾಗೂ ಒಟಿಂಗ್ ಗ್ರಾಮಸ್ಥರ ಮೇಲೆ ಅಸ್ಸಾಂ ರೈಫಲ್ಸ್ ಸೈನಿಕರು ಗುಂಡುಹಾರಿಸಿದ್ದರು. ಬಂಡುಕೋರರು ಎಂದು ತಪ್ಪಾಗಿ ಭಾವಿಸಿ, 14 ಅಮಾಯಕ ನಾಗರಿಕರನ್ನು ಯೋಧರು ಹತ್ಯೆ ಮಾಡಿದ್ದರು. ಇದು ಆಫ್‌ಸ್ಪ ವಿರೋಧಿ ಹೋರಾಟಗಾರರನ್ನು ಮತ್ತಷ್ಟು ಕೆರಳಿಸಿತು. ಯೋಧರಿಂದ ಆಗುತ್ತಿರುವ ತೊಂದರೆ ಬಗ್ಗೆ ಪದೇ ಪದೇ ದನಿ ಎತ್ತಿದ್ದರೂ ಕೇಂದ್ರ ಸರ್ಕಾರ ತಮ್ಮ ಕೂಗು ಕೇಳಿಸಿಕೊಳ್ಳುತ್ತಿಲ್ಲ ಎಂದು ಜನರು ಮತ್ತೆ ಬೀದಿಗಿಳಿದು ಪ್ರತಿಭಟಿಸಿದರು. ಈ ಘಟನೆಯು ಕಾಯ್ದೆ ಜಾರಿ ಬಗ್ಗೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.

ನಾಗಾಲ್ಯಾಂಡ್ ಘಟನೆಯ ಬಳಿಕ ಕೇಂದ್ರ ಸರ್ಕಾರ ಆಫ್‌ಸ್ಪವನ್ನು ಹಿಂದಕ್ಕೆ ಪಡೆಯಬಹುದು ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಘಟನೆ ನಡೆದಮೂರು ತಿಂಗಳ ಬಳಿಕ, ಅಂದರೆ 2022ರ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರವು ನಾಗಾಲ್ಯಾಂಡ್, ಅಸ್ಸಾಂ ಹಾಗೂ ಮಣಿಪುರದ ಆಯ್ದ ಸ್ಥಳಗಳಿಂದ ಕಾಯ್ದೆಯನ್ನು ವಾಪಸ್ ಪಡೆಯಿತು. ಕೇಂದ್ರ ಸರ್ಕಾರವು ಜನರ ಒತ್ತಡಕ್ಕೆ ಮಣಿದಿದ್ದರೂ, ಸಂಪೂರ್ಣವಾಗಿ ಕಾಯ್ದೆಯನ್ನು ವಾಪಸ್ ಪಡೆದಿಲ್ಲ ಎಂಬುದು ಇಲ್ಲಿ ಗಮನಾರ್ಹ. ಭೀಕರ ಘಟನೆಗಳು ನಡೆದರೂ, ಕಾಯ್ದೆಯನ್ನು ಆಯ್ದ ಜಾಗಗಳಲ್ಲಿ ಮುಂದುವರಿಸಿರುವ ಕೇಂದ್ರದ ವಿರುದ್ಧ ಮತ್ತೆ ಹೋರಾಟ ಶುರುವಾಗಿದೆ. ಇದುಅನಿರ್ದಿಷ್ಟಾವಧಿ ಹೋರಾಟವಾಗುವ ಎಲ್ಲ ಸೂಚನೆಗಳಿವೆ.

ಆಫ್‌ಸ್ಪ ವ್ಯಾಪ್ತಿ ಎಲ್ಲೆಲ್ಲಿ..?
* ಅಸ್ಸಾಂ:
ಅಸ್ಸಾಂನ 24 ಜಿಲ್ಲೆಗಳ ಪೈಕಿ 23 ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಹಾಗೂ ಒಂದು ಜಿಲ್ಲೆಯಲ್ಲಿ ಭಾಗಶಃ ಕಾಯ್ದೆಯನ್ನು ವಾಪಸ್ ಪಡೆದಿದೆ. ಅಂದರೆ, ಒಂದು ಜಿಲ್ಲೆಯ ಕೆಲವು ಪೊಲೀಸ್ ಠಾಣೆಗಳಲ್ಲಿ ಈ ಕಾಯ್ದೆ ಜಾರಿಯಲ್ಲಿದೆ

* ಮಣಿಪುರ: ಇಂಫಾಲ ನಗರಪಾಲಿಕೆ ಪ್ರದೇಶವನ್ನು ಹೊರತುಪಡಿಸಿ, ಇಡೀ ಮಣಿಪುರ ರಾಜ್ಯವನ್ನು ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಲಾಗಿತ್ತು. 2022ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಆರು ಜಿಲ್ಲೆಗಳ ವ್ಯಾಪ್ತಿಯ 15 ಪೊಲೀಸ್ ಠಾಣೆಗಳಿಂದ ಕಾಯ್ದೆಯನ್ನು ವಾಪಸ್ ಪಡೆಯಲಾಗಿದೆ. ಅಂದರೆ, ಈ 15 ಪೊಲೀಸ್ ಠಾಣೆಗಳು ಹಾಗೂ ಇಂಫಾಲ ನಗರಪಾಲಿಕೆ ಹೊರತುಪಡಿಸಿ ಇಡೀ ರಾಜ್ಯದಲ್ಲಿ ಕಾಯ್ದೆ ಈಗಲೂ ಜಾರಿಯಲ್ಲಿದೆ

* ಅರುಣಾಚಲ ಪ್ರದೇಶ: ಅಸ್ಸಾಂ ಜೊತೆ ಗಡಿ ಹಂಚಿಕೊಂಡಿರುವ ಅರುಣಾಚಲ ಪ್ರದೇಶದ ಮೂರು ಜಿಲ್ಲೆಗಳ 20 ಕಿಲೋಮೀಟರ್ ಉದ್ದಕ್ಕೂ ಹಾಗೂ ಇತರ 9 ಜಿಲ್ಲೆಗಳ 16 ಪೊಲೀಸ್ ಠಾಣೆಗಳು ಈ ವ್ಯಾಪ್ತಿಯಲ್ಲಿದ್ದವು. ಆದರೆ, ಕಾಯ್ದೆಯ ವ್ಯಾಪ್ತಿಯನ್ನು ಈಗ ಮೂರು ಜಿಲ್ಲೆಗಳಿಗೆ ತಗ್ಗಿಸಲಾಗಿದೆ

* ನಾಗಾಲ್ಯಾಂಡ್: ತಜ್ಞರ ಸಮಿತಿ ಶಿಫಾರಸುಗಳನ್ನು ಆಧರಿಸಿ, 7 ಜಿಲ್ಲೆಗಳ 15 ಪೊಲೀಸ್ ಠಾಣೆಗಳ ವ್ಯಾಪ್ತಿಯಿಂದ ಮಾತ್ರ ಕಾಯ್ದೆಯನ್ನು ಹಿಂಪಡೆಯಲಾಗಿದೆ. ರಾಜ್ಯದ ಉಳಿದ ಎಲ್ಲ ಪ್ರದೇಶಗಳು ‘ಪ್ರಕ್ಷುಬ್ಧ ಪ್ರದೇಶ’ ಎಂದು ಕರೆಸಿಕೊಂಡಿವೆ

* ಪರಿಸ್ಥಿತಿ ಸುಧಾರಿಸಿದ ಕಾರಣದಿಂದ, ತ್ರಿಪುರಾ ಮತ್ತು ಮೇಘಾಲಯ ರಾಜ್ಯಗಳಲ್ಲಿ ಮಾತ್ರ ಇದನ್ನು ಸಂಪೂರ್ಣ ವಾಪಸ್ ಪಡೆಯಲಾಗಿದೆ

ಆಧಾರ: ಪಿಟಿಐ, ರಾಯಿಟರ್ಸ್‌, ಅಸ್ಸಾಂ ಅಕಾರ್ಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.