ADVERTISEMENT

ಆಳ–ಅಗಲ | ಮೂರು ತಿಂಗಳ ಬಳಿಕ ಮೂರನೇ ಅಲೆ: ಮಕ್ಕಳಿಗೆ ಹೆಚ್ಚಿನ ಅಪಾಯ

ವೈದ್ಯಕೀಯ ತಜ್ಞರ ಎಚ್ಚರಿಕೆ

ಗುರು ಪಿ.ಎಸ್‌
Published 12 ಮೇ 2021, 19:31 IST
Last Updated 12 ಮೇ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

‘ರಾಜ್ಯದಲ್ಲಿ ಜೂನ್ ಮೊದಲ ವಾರದ ವೇಳೆಗೆ ಕೋವಿಡ್ ಎರಡನೇ ಅಲೆಯು ನಿಯಂತ್ರಣಕ್ಕೆ ಬರಲಿದೆ. ಆದರೆ, ಮೂರು ತಿಂಗಳ ಬಳಿಕ ಮೂರನೇ ಅಲೆ ಕಾಣಿಸಿಕೊಳ್ಳುವುದು ನಿಶ್ಚಿತ. ಆ ವೇಳೆ ಮಕ್ಕಳಿಗೆ ಸೋಂಕು ಹೆಚ್ಚಿನ ಅಪಾಯವನ್ನು ತಂದೊಡ್ಡಬಹುದು’ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಕಳೆದ ವರ್ಷ ಮಾ.8ರಂದು ಮೊದಲ ಪ್ರಕರಣ ವರದಿಯಾಗಿತ್ತು. ಜೂನ್ ತಿಂಗಳಲ್ಲಿ ಏರುಗತಿ ಪಡೆದ ಸೋಂಕು, ಅಕ್ಟೋಬರ್ ತಿಂಗಳಲ್ಲಿ ಇಳಿಕೆ ಕಂಡಿತ್ತು. ಈ ವರ್ಷ ಫೆಬ್ರವರಿ ತಿಂಗಳ ಕೆಲದಿನಗಳು 24 ಗಂಟೆಗಳ ಅವಧಿಯಲ್ಲಿ ವರದಿಯಾಗುತ್ತಿದ್ದ ಪ್ರಕರಣಗಳ ಸಂಖ್ಯೆ 500ರ ಗಡಿಯ ಆಸುಪಾಸಿನಲ್ಲಿತ್ತು. ಆದರೆ, ಮಾರ್ಚ್‌ ತಿಂಗಳಲ್ಲಿ ಮತ್ತೆ ಏರುಗತಿ ಪಡೆದುಕೊಳ್ಳುವ ಮೂಲಕ ರಾಜ್ಯದಲ್ಲಿ ಎರಡನೇ ಅಲೆ ಕಾಣಿಸಿಕೊಂಡಿತು. ಮೊದಲ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ 60 ವರ್ಷ ಮೇಲ್ಪಟ್ಟವರು ಕೋವಿಡ್ ಪೀಡಿತರಾಗಿ, ಸಮಸ್ಯೆ ಎದುರಿಸಿದ್ದರು. ಆದರೆ, ಎರಡನೇ ಅಲೆಯಲ್ಲಿ ಮಧ್ಯ ವಯಸ್ಕರು ಅಧಿಕ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರಾಗುತ್ತಿದ್ದಾರೆ.

ಈಗ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ ಅಭಿಯಾನ ನಡೆಯುತ್ತಿರುವ ಕಾರಣ ಮೂರನೇ ಅಲೆ ಈ ವರ್ಗದವರಿಗೆ ಅಪಾಯವನ್ನುಂಟು ಮಾಡದು ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಆದರೆ, ಮಕ್ಕಳಿಗೆ ಈವರೆಗೂ ದೇಶದಲ್ಲಿ ಲಸಿಕೆಗಳು ಸಂಶೋಧಿಸಲ್ಪಟ್ಟಿಲ್ಲ. ಹೀಗಾಗಿ, ಮೂರನೇ ಅಲೆ ಕಾಣಿಸಿಕೊಳ್ಳುವ ವೇಳೆಗೆ ಅವರಿಗೆ ಲಸಿಕೆ ವಿತರಣೆ ಪ್ರಾರಂಭವಾಗದಿದ್ದಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗಿ, ಸಮಸ್ಯೆ ಎದುರಿಸಬೇಕಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಮೇ 15ರ ಬಳಿಕ ಕೊರೊನಾ ಸೋಂಕು ಉತ್ತುಂಗಕ್ಕೆ ಹೋಗಲಿದೆ. ಬಳಿಕ ಪ್ರಕರಣಗಳ ಸಂಖ್ಯೆ ಇಳಿಕೆ ಕಾಣುತ್ತಾ ಬರುತ್ತದೆ. ಜೂನ್ ಮೊದಲ ವಾರದಲ್ಲಿ ನಿಯಂತ್ರಣಕ್ಕೆ ಬರುವ ನಿರೀಕ್ಷೆಯಿದೆ. ಮೂರನೇ ಅಲೆ ಬರುತ್ತದೆಯೋ ಇಲ್ಲವೋ ಎಂಬ ಪ್ರಶ್ನೆ ಅಪ್ರಸ್ತುತ. ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳುತ್ತದೆ. ಈಗಾಗಲೇ ಕೆಲ ದೇಶಗಳು ನಾಲ್ಕನೇ ಅಲೆಯನ್ನು ಎದುರಿಸುತ್ತಿವೆ’ ಎಂದು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ತಿಳಿಸಿದ್ದಾರೆ.

ವರ್ತನೆ ಮೇಲೆ ಅವಲಂಬನೆ: ‘ರಾಜ್ಯದಲ್ಲಿ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳಲಿದೆ. ಎರಡನೇ ಅಲೆ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದ 90 ದಿನಗಳ ಬಳಿಕ ಮೂರನೇ ಅಲೆ ಪ್ರಾರಂಭವಾಗಲಿದೆ. ಹೀಗಾಗಿ, ಚಳಿಗಾಲದಲ್ಲಿ ಈ ವೈರಾಣು ಮತ್ತೆ ರೂಪಾಂತರಗೊಂಡು ಕಾಣಿಸಿಕೊಳ್ಳುತ್ತದೆ. ಅದರ ತೀವ್ರತೆ ಮತ್ತು ಹರಡುವಿಕೆಯ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ಜನರ ವರ್ತನೆ ಮತ್ತು ರೋಗ ಎದುರಿಸಲು ಮಾಡಿಕೊಳ್ಳುವ ಸಿದ್ಧತೆಯನ್ನು ಅವಲಂಬಿಸಿರುತ್ತದೆ’ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಹಾಗೂ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದರು.

‘ಈಗ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ ಪ್ರಾರಂಭವಾಗಿದೆ. ಆದರೆ, ಮಕ್ಕಳಿಗೆ ಲಸಿಕೆಗಳು ಸಂಶೋಧಿಸಲ್ಪಟ್ಟಿಲ್ಲ. ಹೀಗಾಗಿ, ಮೂರನೇ ಅಲೆಯು ಮಕ್ಕಳಿಗೆ ಹೆಚ್ಚು ಸಮಸ್ಯೆಯನ್ನು ತಂದೊಡ್ಡುವ ಸಾಧ್ಯತೆ ಇರುತ್ತದೆ. ಮೊದಲ ಅಲೆಗೆ ಹೋಲಿಸಿದಲ್ಲಿ ಈಗ ಸೋಂಕು ವೇಗವಾಗಿ ಹರಡುತ್ತಿದೆ. ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳದಿದ್ದಲ್ಲಿ ಮೂರನೇ ಅಲೆ ಕೂಡ ಹೆಚ್ಚಿನ ಅಪಾಯವನ್ನುಂಟು ಮಾಡಲಿದೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ಶ್ವಾಸಕೋಶ ಔಷಧ ವಿಭಾಗದ ಮುಖ್ಯಸ್ಥ ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ
ಡಾ. ಶಶಿಭೂಷಣ್ ಬಿ.ಎಲ್. ಎಚ್ಚರಿಸಿದರು.

‘ಮಕ್ಕಳಲ್ಲಿ ಸೋಂಕಿನ ತೀವ್ರತೆ ಕಡಿಮೆ’
‘ಈಗಾಗಲೇ ಕೋವಿಡ್‌ ಪೀಡಿತರಾದ ಬಹುತೇಕ ಮಕ್ಕಳಿಗೆ ಸೌಮ್ಯ ಮತ್ತು ಮಧ್ಯಮ ಸ್ವರೂಪದ ಲಕ್ಷಣಗಳು ಕಾಣಿಸಿಕೊಂಡಿವೆ. ಅವರು ಬೇಗ ಚೇತರಿಸಿಕೊಳ್ಳುತ್ತಿದ್ದಾರೆ. ಮೂರನೇ ಅಲೆಯಲ್ಲಿ ವೈರಾಣು ಯಾವ ರೀತಿ ರೂಪಾಂತರಗೊಂಡು, ಪರಿಣಾಮ ಬೀರುತ್ತದೆ ಎನ್ನುವುದರ ಬಗ್ಗೆ ಈಗಲೇ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಹಾಗಾಗಿ, ಆತಂಕಕ್ಕೆ ಒಳಗಾಗಬೇಕಿಲ್ಲ’ ಎಂದು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ನಿರ್ದೇಶಕ ಡಾ. ಸಂಜಯ್ ಕೆ.ಎಸ್. ತಿಳಿಸಿದರು.

‘ಮಕ್ಕಳಿಗೆ ಸೋಂಕಿನ ಸೌಮ್ಯ ಮತ್ತು ಮಧ್ಯಮ ಲಕ್ಷಣಗಳು ಕಾಣಿಸಿಕೊಂಡಲ್ಲಿ ಮನೆ ಆರೈಕೆಗೆ ಒಳಗಾಗಬಹುದು. ಎರಡರಿಂದ ಮೂರು ದಿನಗಳಲ್ಲಿಯೇ ಲಕ್ಷಣಗಳು ಕಡಿಮೆಯಾಗಲಿವೆ. ತೀವ್ರ ಪ್ರಮಾಣದ ಶ್ವಾಸಕೋಶದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಕಡಿಮೆ. ಒಟ್ಟು ಜನಸಂಖ್ಯೆಯಲ್ಲಿ ಶೇ 30ರಷ್ಟು ಮಕ್ಕಳಿದ್ದಾರೆ. ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾದರೂ ಚಿಕಿತ್ಸೆಗೆ ಅಗತ್ಯವಿರುವ ಸೌಲಭ್ಯಗಳು ಹಾಗೂ ಹಾಸಿಗೆಗಳು ಇವೆ’ ಎಂದರು.

3ನೇ ಅಲೆಗೆ ಸಿದ್ಧತೆ ಏನು: ಹೈಕೋರ್ಟ್
ಸಂಭವನೀಯ ಕೋವಿಡ್ ಮೂರನೇ ಅಲೆ ಎದುರಿಸಲು ಮಾಡಿಕೊಂಡಿರುವ ಸಿದ್ಧತೆ ಏನು ಎಂದು ಪ್ರಶ್ನಿಸಿರುವ ಕರ್ನಾಟಕ ಹೈಕೋರ್ಟ್, ಪೂರ್ವ ತಯಾರಿ ಕುರಿತು ಎರಡು ವಾರಗಳಲ್ಲಿ ಮುನ್ನೋಟದ ವರದಿ ಸಲ್ಲಿಸಬೇಕು ಎಂದು ತಿಳಿಸಿತು.

‘ಹಾಸಿಗೆ, ಆಮ್ಲಜನಕ, ಔಷಧ, ವೈದ್ಯಕೀಯ ಸಿಬ್ಬಂದಿ ಅಗತ್ಯದ ಬಗ್ಗೆ ಸಿದ್ಧತೆ ಮಾಡಿಕೊಳ್ಳಲು ಇದು ಸಕಾಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಹೇಳಿತು.

**
ಮೊದಲು ಎರಡನೇ ಅಲೆ ನಿಭಾಯಿಸಿ: ಡಾ. ಶ್ರೀನಿವಾಸ ಕಕ್ಕಿಲ್ಲಾಯ
ಎರಡನೇ ಅಲೆಯನ್ನೇ ಸರ್ಕಾರ ಸರಿಯಾಗಿ ನಿಭಾಯಿಸುತ್ತಿಲ್ಲ. ಇನ್ನು ಮೂರನೇ ಅಲೆಯ ಬಗ್ಗೆ ಚಿಂತಿಸುವುದು ಹಾಸ್ಯಾಸ್ಪದ.ಎರಡನೇ ಅಲೆ ತಡೆಗೆ ಮುಂದಿನ 48 ಗಂಟೆಗಳಲ್ಲಿ ಏನು ಮಾಡುತ್ತೇವೆ ಎಂಬುದನ್ನಾದರೂ ಸರ್ಕಾರ ನಿರ್ದಿಷ್ಟವಾಗಿ ಹೇಳಬೇಕು. ಈವರೆಗೆ ವೈಜ್ಞಾನಿಕ ಚಿಕಿತ್ಸಾ ಮಾರ್ಗಸೂಚಿಯನ್ನೂ (ಟ್ರೀಟ್‌ಮೆಂಟ್‌ ಪ್ರೊಟೊಕಾಲ್) ಸರ್ಕಾರ ಹೊರಡಿಸಿಲ್ಲ.

ಈಗಿನ ಅವ್ಯವಸ್ಥೆಯನ್ನು ಮುಚ್ಚಿ ಹಾಕಿ, ಮೂರನೇ ಅಲೆಯ ಬಗ್ಗೆ ಮಾತನಾಡುವ ಮೂಲಕ ತಮ್ಮದು ದೂರದೃಷ್ಟಿಯ ಸರ್ಕಾರ ಎಂದು ತೋರಿಸಿಕೊಳ್ಳುವ ಯತ್ನ ಇದು.ರೆಮ್‌ಡಿಸಿವಿರ್‌ ಬಳಕೆ ಮಾಡಬಾರದು ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಪತ್ರಿಕೆಗಳಲ್ಲಿ ಅರ್ಧಪುಟ ಜಾಹೀರಾತು ಕೊಡುತ್ತಾರೆ. ಅದೇ ಸರ್ಕಾರದ ಪ್ರತಿನಿಧಿಗಳು, ರೆಮ್‌ಡಿಸಿವಿರ್‌ ಯಾಕೆ ಪೂರೈಕೆ ಮಾಡುತ್ತಿಲ್ಲ ಎಂದು ಕಂಪನಿಗಳಿಗೆ ಪತ್ರ ಬರೆಯಲಾಗಿದೆ ಎಂದು ಹೇಳುತ್ತಾರೆ. ಸರ್ಕಾರ ಸಂಪೂರ್ಣ ಗೊಂದಲದಲ್ಲಿದೆ.

–ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಮಂಗಳೂರು

**
ಲಸಿಕೆಯತ್ತ ಗಮನ ಹರಿಸಿ: ಡಾ.ವೈ.ಸಿ. ಯೋಗಾನಂದ ರೆಡ್ಡಿ
ನಗರ ಪ್ರದೇಶಗಳಲ್ಲಿ ತುಂಬಾ ಜನರಿಗೆ ಈಗಾಗಲೇ ಕೋವಿಡ್‌ ಬಂದು ಹೋಗಿದೆ. ಮೂರನೇ ಅಲೆಯು ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಕ್ಕೆ ಹರಡುವ ಸಾಧ್ಯತೆ ಇದೆ. ಈ ಪ್ರದೇಶಗಳಿಗೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮುಂದೆ ಲಾಕ್‌ಡೌನ್‌ ಮಾಡಿದರೂ, ಅದು ಲಸಿಕೆ ಸಹಿತ ಲಾಕ್‌ಡೌನ್ ಆಗಿರಬೇಕು. ಹೆಚ್ಚು ಹೆಚ್ಚು ಜನರು ಲಸಿಕೆ ಹಾಕಿಸಿಕೊಂಡರೆ ಮೂರನೇ ಅಲೆಯನ್ನು ತಡೆಗಟ್ಟಬಹುದು.

ಕೋವಿಡ್‌ ಲಸಿಕೆಗೆ ಹಕ್ಕುಸ್ವಾಮ್ಯ ವಿನಾಯಿತಿ ನೀಡಬೇಕು. ಅಂದರೆ, ಲಸಿಕೆ ಉತ್ಪಾದನಾ ತಂತ್ರಜ್ಞಾನ ಹೊಂದಿರುವ ಕಂಪನಿಯಿಂದ ಹಕ್ಕುಸ್ವಾಮ್ಯವನ್ನು ಪಡೆದು, ಅದನ್ನು ಸಾರ್ವತ್ರೀಕರಣಗೊಳಿಸಬೇಕು. ಎಲ್ಲ ಕಂಪನಿಗಳು ಲಸಿಕೆ ಉತ್ಪಾದಿಸುವಂತಾದರೆ ಎಲ್ಲರಿಗೂ ಸುಲಭವಾಗಿ ಸಿಗುತ್ತದೆ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗುತ್ತದೆ. ಮೂರನೇ ಅಲೆ ಬಗ್ಗೆ ಸಮುದಾಯ ಆರೋಗ್ಯ ವಿಭಾಗದ ವೈದ್ಯರುಗಳು, ಸಂಖ್ಯಾಶಾಸ್ತ್ರಜ್ಞರು ದತ್ತಾಂಶ ಸಹಿತ ಅಧ್ಯಯನ ನಡೆಸಬೇಕು. ಅವರು ನಿಖರವಾದ ವರದಿ ನೀಡಬೇಕು.

–ಡಾ.ವೈ.ಸಿ. ಯೋಗಾನಂದ ರೆಡ್ಡಿ, ಬಳ್ಳಾರಿ

**
ತಡೆಗೆ ಆದ್ಯತೆ ಇರಲಿ: ಡಾ.ವೀರಗಂಗಾಧರ ಬಿ
ಕೋವಿಡ್‌–19ರ ಮೂರನೇ ಅಲೆ ತಡೆಗೆ ನಾವು ಹಣ ಖರ್ಚು ಮಾಡದಿದ್ದರೆ, ಚಿಕಿತ್ಸೆಗೆ ಅದರ ನಾಲ್ಕು ಪಟ್ಟು ವ್ಯಯಿಸಬೇಕಾಗುತ್ತದೆ. ವೈದ್ಯಕೀಯ ಸಿಬ್ಬಂದಿಯನ್ನು ತಕ್ಷಣ ಸನ್ನದ್ಧಗೊಳಿಸಬೇಕು. ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಸಹಾಯಕ ಸಿಬ್ಬಂದಿ ಇಲ್ಲ.

ಬಿಎಸ್‌ಸಿಯಲ್ಲಿ ನರ್ಸಿಂಗ್ ಮಾಡಿರುವ ಅನೇಕರು ಇದ್ದಾರೆ. ಅವರಿಗೆ ದುಪ್ಪಟ್ಟು ವೇತನ ನೀಡಿ ನೇಮಕ ಮಾಡಿಕೊಳ್ಳಬೇಕು. ಮುಂದೆ ಅನುಕೂಲವಾಗುವ ರೀತಿಯಲ್ಲಿ ನಿರ್ದಿಷ್ಟ ಪ್ರಮಾಣ ಪತ್ರವನ್ನು ಅವರಿಗೆ ನೀಡಬೇಕು ಮತ್ತು ಈ ಸಿಬ್ಬಂದಿಗೆ ಸೂಕ್ತ ತರಬೇತಿಯನ್ನೂ ನೀಡಬೇಕು.

ವೆಂಟಿಲೇಟರ್‌ ನಿರ್ವಹಿಸುವುದಕ್ಕೆ ಎಷ್ಟೋ ಜನರಿಗೆ ಬರುವುದಿಲ್ಲ. ಆಪರೇಷನ್‌ ಥಿಯೇಟರ್‌ ಕಾರ್ಯನಿರ್ವಹಣೆಯೂ ತಿಳಿದಿರುವುದಿಲ್ಲ. ಇಂಥವರಿಗೆ ತರಬೇತಿ ಅವಶ್ಯವಿದೆ. ‘ಸ್ಟೇ ಹೋಂ, ಸ್ಟೇ ಸೇಫ್‌’ ಎನ್ನುವುದಕ್ಕಿಂತ ‘ಸ್ಟೇ ಆ್ಯಕ್ಟೀವ್, ಬಿ ಸೇಫ್‌’ ಎಂಬುದು ಮುಖ್ಯವಾಗಬೇಕು. ಅಂದರೆ, ಎಲ್ಲರೂ ಮನೆಯಲ್ಲಿಯೆ ಇದ್ದರೂ ಜೀವನ ನಡೆಯುವುದಿಲ್ಲ. ದುಡಿಯಲು ಹೊರಗೆ ಹೋಗಬೇಕಾಗುತ್ತದೆ. ದಿನಸಿ, ಆಹಾರ ಹಂಚಿದರೂ ಅಲ್ಲಿ ಅಂತರ ಕಾಪಾಡಿಕೊಳ್ಳಲು ಆಗುವುದಿಲ್ಲ. ಬಿಪಿಎಲ್‌ ಕುಟುಂಬದವರ ಬ್ಯಾಂಕ್‌ ಖಾತೆಗೆ ಸರ್ಕಾರವೇ ಇಂತಿಷ್ಟು ಹಣ ಹಾಕಬೇಕು.

–ಡಾ.ವೀರಗಂಗಾಧರ ಬಿ. ನಿಟಾಲಿ, ಹುಬ್ಬಳ್ಳಿ

**
ಐಸಿಯು ಹಾಸಿಗೆ ಇರಲಿ: ಡಾ. ಅನ್ಸರ್ ಅಹ್ಮದ್
ಮೂರನೇ ಅಲೆಗೆ ಆಸ್ಪತ್ರೆಗಳನ್ನು ಸಜ್ಜುಗೊಳಿಸಬೇಕು. ಸಾಮಾನ್ಯ ಹಾಸಿಗೆ ಬದಲು ಐಸಿಯು ಹಾಸಿಗೆಗಳ ಹೆಚ್ಚಳಕ್ಕೆ ಗಮನ ನೀಡಬೇಕು. ಕರ್ಫ್ಯೂ ಸಡಿಲಿಕೆ ನಂತರವೂ ಸಾರ್ವಜನಿಕ ಸ್ಥಳಗಳಲ್ಲಿ ಅಂತರ ನಿಯಮ ಪಾಲನೆ ಕಡ್ಡಾಯವಾಗಿರಬೇಕು.

ಜ್ವರ, ಕೆಮ್ಮಿನಂತಹ ಸೌಮ್ಯ ಲಕ್ಷಣಗಳನ್ನು ಹೊಂದಿರುವ ಸೋಂಕಿತರ ಚಿಕಿತ್ಸೆಗೆ ಆಟದ ಮೈದಾನ, ಕಲ್ಯಾಣಮಂಟಪಗಳಲ್ಲಿ ವ್ಯವಸ್ಥೆ ಮಾಡಬೇಕು. ಗಂಭೀರ ಸ್ವರೂಪದ ಲಕ್ಷಣ ಹೊಂದಿರುವವರ ಚಿಕಿತ್ಸೆಗೆ ಆದ್ಯತೆ ನೀಡಬೇಕು. ಈಗಾಗಲೇ ಬಹುತೇಕರಲ್ಲಿ ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿ ಹೆಚ್ಚುತ್ತಿದೆ. ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಮಧ್ಯವಯಸ್ಕರು ಮತ್ತು ಹಿರಿಯರ ನಾಗರಿಕರ ಮೇಲೆಯೇ ಮೂರನೇ ಅಲೆಯೂ ಪರಿಣಾಮ ಬೀರಬಹುದು.

–ಡಾ. ಅನ್ಸರ್ ಅಹ್ಮದ್, ವೈದ್ಯಕೀಯ ಅಧೀಕ್ಷಕ, ಸಾಂಕ್ರಾಮಿಕ ರೋಗಗಳ ಆಸ್ಪತ್ರೆ, ಬೆಂಗಳೂರು

–ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಡಾ.ವೈ.ಸಿ. ಯೋಗಾನಂದ ರೆಡ್ಡಿ, ಡಾ.ವೀರಗಂಗಾಧರ ಬಿ., ಡಾ. ಅನ್ಸರ್ ಅಹ್ಮದ್

**
ಮೂರನೇ ಅಲೆ ನಿರ್ವಹಣೆಗೆ ತಜ್ಞರ ಸಲಹೆಗಳು

* ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳು ಹೆಚ್ಚಾಗಲಿ

* ಸ್ಥಳೀಯ ಮಟ್ಟದಲ್ಲಿ ಆಮ್ಲಜನಕ ಉತ್ಪಾದನೆಗೆ ವ್ಯವಸ್ಥೆ ಮಾಡಿ

* ಆಸ್ಪತ್ರೆಗಳು ಆಮ್ಲಜನಕ ಜನರೇಟರ್ ಅಳವಡಿಸಿಕೊಳ್ಳಬೇಕು

* ಮಕ್ಕಳ ಐಸಿಯುಗಳನ್ನು ಬಲಪಡಿಸಬೇಕು

* ವೈದ್ಯಕೀಯ ಸಿಬ್ಬಂದಿ ನೇಮಕ–ತರಬೇತಿ

* ಈಗಿರುವ ವೆಂಟಿಲೇಟರ್‌–ಆಮ್ಲಜನಕ ಸಿಲಿಂಡರ್‌ಗಳ ನಿರ್ವಹಣೆ

* ಲಾಕ್‌ಡೌನ್ ಜೊತೆಗೇ ಲಸಿಕಾ ಅಭಿಯಾನ

* ಲಸಿಕೆಗೆ ‘ಹಕ್ಕುಸ್ವಾಮ್ಯ ವಿನಾಯಿತಿ’ ನೀಡಬೇಕು

* ಲಾಕ್‌ಡೌನ್ ನಂತರವೂ ಅಂತರ ಕಾಪಾಡಲು ವ್ಯವಸ್ಥೆ

* ಮೈದಾನ, ಕಲ್ಯಾಣಮಂಟಪಗಳಲ್ಲಿ ಒಪಿಡಿ ನಿರ್ಮಾಣ

**
ಮಕ್ಕಳಿಗೆ ಲಸಿಕೆ ದೊರೆಯದಿದ್ದಲ್ಲಿ ಅವರು ದುರ್ಬಲ ವರ್ಗಕ್ಕೆ ಸೇರುತ್ತಾರೆ. ಪರಿಣಾಮ ಮೂರನೇ ಅಲೆಯಲ್ಲಿ ವೈರಾಣು ಅವರ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ.
–ಡಾ.ಸಿ.ಎನ್. ಮಂಜುನಾಥ್, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ

**
ಯಾವುದೇ ಸಾಂಕ್ರಾಮಿಕ ಕಾಯಿಲೆ ಉತ್ತುಂಗಕ್ಕೆ ಹೋಗಿ, ಕಡಿಮೆಯಾಗುತ್ತದೆ. ಅಕ್ಟೋಬರ್ ಬಳಿಕ ಮೂರನೇ ಅಲೆ ರಾಜ್ಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
–ಡಾ. ಶಶಿಭೂಷಣ್ ಬಿ.ಎಲ್., ವಿಕ್ಟೋರಿಯಾ ಆಸ್ಪತ್ರೆಯ ಶ್ವಾಸಕೋಶ ಔಷಧ ವಿಭಾಗದ ಮುಖ್ಯಸ್ಥ

**
ಜಪಾನ್‌ ಸೇರಿದಂತೆ ಕೆಲ ದೇಶಗಳಲ್ಲಿ ನಾಲ್ಕನೇ ಅಲೆ ಕಾಣಿಸಿಕೊಂಡಿದೆ. ಹಾಗಾಗಿ, ಇಲ್ಲಿಯೂ ಮೂರನೇ ಅಲೆ ಬರುವುದು ಖಚಿತ. ಚಳಿಗಾಲದಲ್ಲಿ ಕಾಣಿಸಿಕೊಳ್ಳಲಿದೆ.
–ಡಾ. ಗಿರಿಧರ್ ಬಾಬು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.