ADVERTISEMENT

ಅನುಭವ ಮಂಟಪ | ‘ಕೃಷಿಕನಿಗೆ ಶಕ್ತಿ ತುಂಬಲಿದೆ ಭೂಮಿ ಮೌಲ್ಯ’

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 19:31 IST
Last Updated 29 ಜೂನ್ 2020, 19:31 IST
   
""
""
""
""

ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು, ಕೃಷಿಕರಲ್ಲದವರಿಗೂ ಕೃಷಿಭೂಮಿ ಖರೀದಿಗೆ ಅನುವು ಮಾಡಿಕೊಡಲು ಹೊರಟಿರುವ ರಾಜ್ಯ ಸರ್ಕಾರದ ತೀರ್ಮಾನದ ಕುರಿತು ಹಲವು ಆಯಾಮಗಳ ಚರ್ಚೆ ನಡೆಯುತ್ತಿದೆ. ಸರ್ಕಾರದ ಈ ನಡೆಯ ಕುರಿತು ನಿಮ್ಮ ನಿಲುವೇನು ಎಂಬ ಪ್ರಶ್ನೆಯನ್ನು ಪ್ರಜಾವಾಣಿ ಹಲವು ರೈತರ ಮುಂದಿಟ್ಟಾಗ ಅವರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿವೆ.

ಆ ಅನಿಸಿಕೆಗಳು ಕೃಷಿವಲಯದ ಮೇಲೆ ಹೊಸ ನೋಟವನ್ನೂ ಬೀರುವಂತಿವೆ...

***

ADVERTISEMENT

ಹಿಂದುಳಿದಿದ್ದೇವೆ; ಮುಂದೆ ಸಾಗಬೇಕು
-ಕೆ.ಎಂ. ಹೆಗಡೆ

ಭೂಮಾಲೀಕ ತನ್ನ ಕೃಷಿ ಜಮೀನಿನ ಜೊತೆ ನಂಟುಹೊಂದಿರದೆ, ಗೇಣಿದಾರನಿಂದ ಗೇಣಿ ಪಡೆಯುವಲ್ಲಿ ಮಾತ್ರ ಆಸಕ್ತಿ ಹೊಂದಿದ್ದ ಸಂದರ್ಭದಲ್ಲಿ ಭೂಸುಧಾರಣೆ ಕಾನೂನು ಜಾರಿಗೆ ಬಂತು. ಆ ಸುಧಾ ರಣೆಯ ನಂತರ ಉಳುವವ ಹೊಲದ ಒಡೆಯನಾದ. ಇದು ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಗುರಿ ಹೊಂದಿದ್ದ ಬದಲಾವಣೆ ಅಲ್ಲ; ಸಾಮಾಜಿಕ ನ್ಯಾಯದ ನೆಲೆಯಲ್ಲಿ ಬಂದ ಕಾನೂನು.

ಈ ಕಾನೂನು ಜಾರಿಗೆ ಬಂದ ನಂತರ ಸಮಾಜದಲ್ಲಿ ಬಹಳಷ್ಟು ಬದಲಾವಣೆಗಳು ಆಗಿವೆ. ಕೃಷಿ ಕುಟುಂಬಗಳಿಗೆ ಸೇರಿದವರು ಉದ್ಯೋಗ ಹಿಡಿದು ಬೇರೆಡೆ ಹೋಗಿದ್ದಾರೆ. ಹೀಗೆ ಬೇರೆಡೆ ಹೋದವರು ತಮ್ಮ ಜಮೀನು ಮಾರಾಟ ಮಾಡಲು ಮುಂದಾದಾಗ ತೊಂದರೆ ಅನುಭವಿಸಿದ್ದಾರೆ. ಇದು ಇನ್ನೊಂದು ಬಗೆಯ ಸಮಸ್ಯೆಯನ್ನು ಸೃಷ್ಟಿಸಿದೆ. ಈ ಸರ್ಕಾರ ಪ್ರಸ್ತಾಪಿಸಿರುವಂತೆ, ಭೂಸುಧಾರಣಾ ಕಾಯ್ದೆಯಲ್ಲಿ ಬದಲಾವಣೆಗಳನ್ನು ತರುವುದರಿಂದ, ನಗರದಲ್ಲಿ ಇರುವವರು ಕೃಷಿಯಲ್ಲಿ ಆಸಕ್ತರಾಗಿದ್ದರೆ, ಕೃಷಿ ಜಮೀನಿನ ಮೇಲೆ ಬಂಡವಾಳ ಹೂಡಿಕೆ ಮಾಡಲು ಅವಕಾಶ ಸಿಗುತ್ತದೆ. ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರು, ಬಂಡವಾಳ ಹೂಡಲು ಸಿದ್ಧವಿರುವವರ ಜೊತೆ ವರ್ಕಿಂಗ್‌ ಪಾರ್ಟ್‌ನರ್‌‌ ಆಗಿ ಕೆಲಸ ಮಾಡಬಹುದು.

-ಕೆ.ಎಂ. ಹೆಗಡೆ

ಈ ರೀತಿ ಮಾಡಲು ಸಾಧ್ಯವಾದರೆ, ಬಂಡವಾಳ ಹೂಡಿಕೆ ಮಾಡುವವ ತನ್ನ ಕೃಷಿ ಆಸಕ್ತಿಯನ್ನು ಪೋಷಿಸಿಕೊಂಡಂತೆ ಆಗುತ್ತದೆ. ಹಳ್ಳಿಯಲ್ಲಿ ಇರುವವನಿಗೆ ಅಲ್ಲೇ ಒಂದು ಉದ್ಯೋಗ ಕೂಡ ಸಿಕ್ಕಂತಾಗುತ್ತದೆ. ಸಣ್ಣ ಹಿಡುವಳಿದಾರರು ತಮ್ಮದೇ ಆದ ಸ್ವಸಹಾಯ ಸಂಘ ರಚಿಸಿಕೊಂಡು, ಹೆಚ್ಚು ಜಮೀನು ಇರುವವರ ಜಮೀನನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಬಹುದು. ಹಣ ಇದ್ದವರಿಂದ ಬಂಡವಾಳ ತಂದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು. ಆ ಮೂಲಕ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಅವಕಾಶ ಇದೆ.

ಕೃಷಿ ಜಮೀನನ್ನು ಖರೀದಿಸಲು ಇರುವ ನಿರ್ಬಂಧಗಳನ್ನು ತೆಗೆಯುವುದರಿಂದ ರೈತ ಬೀದಿಪಾಲಾಗುತ್ತಾನೆ ಎಂಬುದು ತಪ್ಪು. ರೈತರು ಬುದ್ಧಿ ಇಲ್ಲದ ಮನುಷ್ಯರಲ್ಲ. ಬಹುತೇಕ ರೈತರ ಕೈಯಲ್ಲಿ ಸ್ಮಾರ್ಟ್‌ ಫೋನ್‌ ಇದೆ. ಅವರಿಗೆ ಆಧುನಿಕ ತಂತ್ರಜ್ಞಾನ ಗೊತ್ತಿದೆ. ನಮ್ಮ ಭಾಗದಲ್ಲಿ ರೈತರು ಕಂಪ್ಯೂಟರ್‌ ಮೂಲಕ ಒಂದಿಷ್ಟು ಕೃಷಿ ಸಂಬಂಧಿ ಕೆಲಸಗಳನ್ನು ನಿಭಾಯಿಸುತ್ತಾರೆ. ಬುದ್ಧಿವಂತ, ಚೂಟಿ ರೈತರಿಗೆ ಕಾರ್ಪೊರೇಟ್ ಕಂಪನಿಗಳ ಜೊತೆ ಕೃಷಿ ಕೆಲಸಗಳಲ್ಲಿ ವರ್ಕಿಂಗ್ ಪಾರ್ಟ್‌ನರ್‌‌ ಆಗಿ ಕೆಲಸ ಮಾಡುವ ಅವಕಾಶ ಕೂಡ ತೆರೆದುಕೊಳ್ಳುತ್ತದೆ. ರೈತರಲ್ಲಿ ವೃತ್ತಿಗೆ ಸಂಬಂಧಿಸಿದ ಜ್ಞಾನ, ಕೌಶಲಗಳನ್ನು ರೈತ ಸಂಘಟನೆಗಳು ಹೆಚ್ಚಿಸಿದರೆ ರೈತ ಖಂಡಿತ ಬೀದಿಗೆ ಬರುವುದಿಲ್ಲ.

ಕಳೆದ ಎಪ್ಪತ್ತು ವರ್ಷಗಳ ಅವಧಿಯಲ್ಲಿ ನಾವು ಜಾಗತಿಕವಾಗಿ ಕೃಷಿ ಕ್ಷೇತ್ರದಲ್ಲಿ ಹಿಂದುಳಿದೆವು. ಮುಂದಿನ ಹತ್ತು ವರ್ಷಗಳಲ್ಲಿ ನಾವು ಇತರರಿಗಿಂತ ಮುಂದೆ ಸಾಗಬೇಕು. ಹಾಗೆ ಮುಂದೆ ಸಾಗಲು ನಮಗೆ ಈಗ ಅವಕಾಶ ಸಿಗುತ್ತಿದೆ. ಇದರ ಸದುಪಯೋಗ ಮಾಡಿಕೊಳ್ಳಬೇಕು. ಆಧುನಿಕ ಕೃಷಿ ಪದ್ಧತಿ ಬಳಸಿಕೊಳ್ಳಬೇಕು.

ಆ ಮೂಲಕ ಉತ್ಪಾದಕತೆ ಹೆಚ್ಚಿಸಿಕೊಳ್ಳಬೇಕು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ವ್ಯವಸ್ಥೆ ಬಂದ ನಂತರ ರೈತರಿಗೆ ಅನುಕೂಲ ಆಯಿತು. ಮುಸುಕಿನ ಹಿಂದೆ ನಡೆಯುತ್ತಿದ್ದ ಮಾರಾಟ ವ್ಯವಸ್ಥೆಯ ನಿಯಂತ್ರಣ ಸಾಧ್ಯವಾಯಿತು. ಇದರಿಂದಾಗಿ ರೈತರಿಗೆ ನ್ಯಾಯ ಸಿಕ್ಕಿತು. ಕೃಷಿ ಉತ್ಪನ್ನಗಳು ನಿರ್ದಿಷ್ಟ ಪ್ರಾಂಗಣದ ಮೂಲಕ ಮಾರಾಟ ಆಗುವುದರಿಂದಾಗಿ ರೈತನಿಗೆ ತಾನು ಬೆಳೆದಿದ್ದು ಹೇಗೆ ಮಾರಾಟ ಆಗುತ್ತದೆ ಎಂಬುದು ಗೊತ್ತಾಗುವಂತೆ ಆಯಿತು.

ಆದರೆ, ಕಾಲಕ್ರಮೇಣ ಈ ಮಾರಾಟ ವ್ಯವಸ್ಥೆಯಲ್ಲಿ ವೃತ್ತಿಪರತೆ ಹೊರಟುಹೋಗಿ ಅದು ರಾಜಕಾರಣಿಗಳ ಪಾಲಿಗೆ ಲಾಂಚ್‌ಪ್ಯಾಡ್‌ ಆಯಿತು. ಇದು ದೊಡ್ಡ ಸಮಸ್ಯೆ. ಹಾಗಂತ, ರಾಜಕಾರಣಿ ಎಪಿಎಂಸಿಗೆ ಚುನಾಯಿತ ಆದ ನಂತರ ಅವನಿಗೆ ಹೆಚ್ಚಿನ ಅಧಿಕಾರ ಇಲ್ಲ. ಅಲ್ಲಿನ ಅಧಿಕಾರಿಗಳೇ ಎಲ್ಲವನ್ನೂ ತಮ್ಮ ಕೈಯಲ್ಲಿ ಇರಿಸಿಕೊಳ್ಳುತ್ತಿದ್ದಾರೆ.

ಎಪಿಎಂಸಿ ವ್ಯವಸ್ಥೆಯಲ್ಲಿ ಆಧುನಿಕತೆ ಇನ್ನೂ ಬಂದಿಲ್ಲ. ಯಾಂತ್ರೀಕರಣ ದೊಡ್ಡ ಪ್ರಮಾಣದಲ್ಲಿ ಆಗಿಲ್ಲ. ಕೃಷಿ ಉತ್ಪನ್ನಗಳನ್ನು ಕ್ಲಸ್ಟರ್‌ ಮಟ್ಟದಲ್ಲಿ ಮೌಲ್ಯವರ್ಧನೆ ಮಾಡಿ, ಅದಕ್ಕೆ ಒಂದು ಉತ್ಪನ್ನದ ಮೌಲ್ಯ ನೀಡಿದ್ದಿದ್ದರೆ ದೇಶದ ಎಲ್ಲೆಡೆ ಮಾರುಕಟ್ಟೆ ವಿಸ್ತರಣೆ ಸಾಧ್ಯವಿತ್ತು. ಆದರೆ ಅಂತಹ ಕೆಲಸ ಆಗಲಿಲ್ಲ. ಇನ್ನು ಮುಂದೆ ಅದನ್ನು ಸಾಧ್ಯವಾಗಿಸಬೇಕು.

ಎಪಿಎಂಸಿಗಳಲ್ಲಿ ಆಧುನಿಕ ಶೇಖರಣಾ ವ್ಯವಸ್ಥೆ ಕೂಡ ಬಂದಿಲ್ಲ. ಎಪಿಎಂಸಿ ವ್ಯವಸ್ಥೆಯು ರೈತರು ಎದುರಿಸುತ್ತಿದ್ದ ಶೋಷಣೆಯನ್ನು ತಪ್ಪಿಸಿತು ಎಂಬುದು ನಿಜ. ಆ ಸಂದರ್ಭ ಬೇರೆ, ಈ ಸಂದರ್ಭ ಬೇರೆ.ಹಳೆಯ ಕಾಲದಲ್ಲಿ ನಡೆದಂತೆ ಈಗಲೂ ರೈತರನ್ನು ಅದೇ ರೀತಿ ಶೋಷಿಸಲು ಸಾಧ್ಯವಿಲ್ಲ. ಎಪಿಎಂಸಿ ವ್ಯವಸ್ಥೆಯಲ್ಲಿ ಪ್ರಸ್ತಾವಿತ ಬದಲಾವಣೆಗಳು ಸ್ವಾಗತಾರ್ಹ.

ಬಂಡವಾಳ, ತಂತ್ರಜ್ಞಾನ...
ಕೃಷಿ ಉತ್ಪಾದಕತೆ ಹೆಚ್ಚಿಸಬೇಕು ಎಂದಾದರೆ ಮೂರು ಅಂಶಗಳು ಮಹತ್ವದ್ದಾಗುತ್ತವೆ: ಜಮೀನು, ಕಾರ್ಮಿಕರು ಮತ್ತು ಹೂಡುವ ಬಂಡವಾಳ (ಹಣಕಾಸು ಮತ್ತು ಹಣಕಾಸೇತರ ಬಂಡವಾಳ). ಬಂಡವಾಳದಲ್ಲಿ ಮೂರು ಅಂಶಗಳನ್ನು ಪರಿಗಣಿಸಬೇಕು. ಹಣಕಾಸಿನ ಹೂಡಿಕೆ, ಯಂತ್ರೋಪಕರಣ ಮತ್ತು ತಂತ್ರಜ್ಞಾನ ಆ ಮೂರು ಅಂಶಗಳು. ಕೃಷಿ ಜಮೀನನ್ನು ಹೊರಗಿನವರಿಗೆ ಮುಕ್ತವಾಗಿಸುವ ಮೂಲಕ, ಹೂಡಿಕೆ, ಯಂತ್ರೋಪಕರಣ ಹಾಗೂ ತಂತ್ರಜ್ಞಾನ ಕೃಷಿ ಕ್ಷೇತ್ರಕ್ಕೆ ಸಿಗುವಂತೆ ಮಾಡಬಹುದು.

ಲೇಖಕ: ಭೈರುಂಬೆಯ (ಶಿರಸಿ) ಚಿಂತನಶೀಲ ಕೃಷಿಕ
ನಿರೂಪಣೆ: ವಿಜಯ್‌ ಜೋಷಿ

***

ರೈತನ ಬಾಳು ಹರಿದ ಅಂಗಿ ಸವೆದ ಚಡ್ಡಿಗೆ ಸೀಮಿತವೇ?
-ಡಿ.ಚಂದ್ರಶೇಖರ್‌

ರಾಜ್ಯದಲ್ಲಿ ಭೂ ಸುಧಾರಣೆ ಕಾಯ್ದೆ ಜಾರಿಯಲ್ಲಿದ್ದರೂ ರೈತನ ಬದುಕು ಮಾತ್ರ ಸುಧಾರಣೆ ಆಗಿಲ್ಲ. ‘ವ್ಯವಸಾಯ ಎಂದರೆ ಮನೆ ಮಂದಿಯೆಲ್ಲಾ ಸಾಯ’ ಎಂಬ ಮಾತು ಗ್ರಾಮೀಣ ಭಾಗದಲ್ಲಿ ಜನಜನಿತ. ನಗರ ಪ್ರದೇಶದಲ್ಲಿ ಒಂದು ಗುಂಟೆ ನಿವೇಶನಕ್ಕೆ ಬ್ಯಾಂಕ್‌ಗಳು₹ 20 ಲಕ್ಷದಿಂದ ₹ 30 ಲಕ್ಷ ಗೃಹ ಸಾಲ ಕೊಡುತ್ತವೆ, ಆದರೆ ಹಳ್ಳಿಗಳಲ್ಲಿ ಎಕರೆ ಜಮೀನಿದ್ದರೂ ಅದಕ್ಕೆ₹ 1 ಲಕ್ಷ ಸಾಲ ದೊರೆಯುವುದಿಲ್ಲ. ಭೂಮಿ ಒಂದೇ ಆದರೂ ಬೆಲೆಯಲ್ಲಿ ಅಸಮಾನತೆ ಇದೆ. ತನ್ನ ಸ್ವಂತ ಜಮೀನು ಮಾರಾಟ ಮಾಡಲು ರೈತ ಹಲವು ನಿಯಮ ದಾಟಿ ಬರಬೇಕಾಗಿದೆ. ಭೂಮಿಗೆ ಬೆಲೆ ಬಂದರೆ ಮಾತ್ರ ಸುಧಾರಣಾ ಕಾಯ್ದೆಗಳು ಯಶಸ್ವಿಯಾಗುತ್ತವೆ. ಇಲ್ಲದಿದ್ದರೆ ರೈತನ ಬಾಳು ‘ಹರಿದ ಅಂಗಿ, ಸವೆದ ಚಡ್ಡಿ’ಗೆ ಸೀಮಿತಗೊಳ್ಳುತ್ತದೆ.

ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಭೂಮಿಯ ಮಾರಾಟಕ್ಕಿದ್ದ ನಿಯಮಗಳನ್ನು ಸರಳೀಕೃತ ಗೊಳಿಸುವ ರಾಜ್ಯ ಸರ್ಕಾರದ ನಡೆ ಸ್ವಾಗತಾರ್ಹ. ಭೂಮಿಗೆ ಬೆಲೆ ಬಂದರೆ ರೈತ ಜಮೀನು ಮಾರಾಟ ಮಾಡುತ್ತಾನೆ ಎಂಬುದು ತಪ್ಪು ವಿಶ್ಲೇಷಣೆ. ರೈತನನ್ನು ಅತ್ಯಂತ ಕನಿಷ್ಠವಾಗಿ ಕಾಣುವ ಪರಿ ಇದು. ಅನ್ನಕೊಡುವ ಭೂಮಿ ಚಿನ್ನಕ್ಕಿಂತಲೂ ಹೆಚ್ಚು ಮೌಲ್ಯ ಹೊಂದಿದೆ ಎಂಬ ಅರಿವು ರೈತರಿಗಿದೆ. ಹೀಗಿರುವಾಗ ಯಾರೂ ಜಮೀನು ಮಾರಾಟ ಮಾಡುವುದಿಲ್ಲ. ಭೂಮಿಗೆ ಬೆಲೆ ಬಂದರೆ ರೈತರ ಜೀವನಮಟ್ಟ ಸುಧಾರಣೆಯಾಗುತ್ತದೆ ಎಂಬ ಸತ್ಯವನ್ನು ಅರಿಯಬೇಕಾಗಿದೆ.

-ಡಿ.ಚಂದ್ರಶೇಖರ್‌

ಭೂಮಿಯ ಮೌಲ್ಯ ಹೆಚ್ಚಿಸುವ ತಿದ್ದುಪಡಿ ಬಂದರೆ ಯಾವ ರೈತ ತಾನೆ ಬೇಡ ಅನ್ನುತ್ತಾನೆ? ಭೂಸುಧಾರಣೆ ಕಾಯ್ದೆಯನ್ನು ವಿರೋಧ ಮಾಡುತ್ತಿರುವವರು ಜಮೀನು ಕೊಳ್ಳುವವರೂ ಅಲ್ಲ, ಮಾರುವವರೂ ಅಲ್ಲ, ಅವರು ರೈತರೂ ಅಲ್ಲ. ಮಕ್ಕಳ ಮದುವೆಗೋ, ವಿದ್ಯಾಭ್ಯಾಸಕ್ಕೋ ಅಥವಾಸಾಲಕ್ಕೋ ರೈತ ಇರುವ ಭೂಮಿಯನ್ನೆಲ್ಲಾ ಬಂಡವಾಳಶಾಹಿಗಳಿಗೆ ಮಾರುವುದಿಲ್ಲ. ಉದ್ಯಮಪತಿ ಗಳು ಕೃಷಿ ಭೂಮಿಯಲ್ಲಿ ಬಂಡವಾಳ ಹೂಡಿದರೆ ಅದು ಕೃಷಿ, ರೈತನನ್ನು ನಾಶ ಮಾಡಲು ಸಾಧ್ಯವಿಲ್ಲ. ಭೂಮಿ ಇರುವವರೆಗೂ ರೈತ ಇರುತ್ತಾನೆ, ಕೃಷಿಯೂ ಇರುತ್ತದೆ.

‘ಉಳುವವನೇ ಭೂಮಿಯ ಒಡೆಯ’ ಎಂಬುದು ಭೂಮಿಯ ಮೌಲ್ಯಕ್ಕೆ ಸಂಬಂಧಿಸಿದ್ದಲ್ಲ, ಮಾಲೀಕತ್ವಕ್ಕೆ ಸಂಬಂಧಪಟ್ಟದ್ದು. ಹಲವು ದಶಕಗಳಿಂದ ಸರ್ಕಾರಗಳು ಭೂಮಿಯ ಮೌಲ್ಯ ಹೆಚ್ಚಿಸುವ ಕೆಲಸ ಮಾಡಿಯೇ ಇಲ್ಲ. ಈ ಕಾರಣಕ್ಕಾಗಿಯೇ ರೈತರ ಹಲವು ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದಿವೆ, ರೈತರ ಆತ್ಮಹತ್ಯೆಗಳು ಮುಂದುವರಿಯುತ್ತಿವೆ.

ನಮ್ಮ ರಾಜ್ಯದಲ್ಲಿ ಯಾರೂ ಜಮೀನ್ದಾರರಿಲ್ಲ, ಎಲ್ಲರೂ ಸಣ್ಣ ಹಿಡುವಳಿದಾರರೇ ಆಗಿದ್ದಾರೆ. ಬಹುತೇಕ ಸಣ್ಣ ಹಿಡುವಳಿದಾರರು ತಮ್ಮ ತುಂಡು ಭೂಮಿಯನ್ನು ಪಾಳು ಬಿಟ್ಟು ನಗರ, ಪಟ್ಟಣಗಳಿಗೆ ವಲಸೆ ಹೋಗಿದ್ದಾರೆ. ಸುತ್ತಲೂ ಇರುವ ರೈತರು ಪಾಳುಬಿದ್ದ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಆ ತುಂಡು ಭೂಮಿಯನ್ನು ಮಾರಾಟ ಮಾಡಿದರೆ ಖರೀದಿಸುವವರು ಯಾರೂ ಇಲ್ಲ. ಅಕ್ಕಪಕ್ಕದ ರೈತರೇ ಖರೀದಿ ಮಾಡಬೇಕು, ಆದರೆ ಅವರು ಕೇಳಿದ ಬೆಲೆಗೆ ಮಾರಬೇಕು. ಹೀಗಾಗಿ ಸಣ್ಣ ಭೂಮಿ ಉಳ್ಳವರು ಕೃಷಿಯಿಂದ ವಿಮುಖರಾಗಿದ್ದಾರೆ.

ಕೊರೊನಾ ಸೋಂಕಿನ ಅವಧಿಯಲ್ಲಿ ಬಹುತೇಕ ವಲಸಿಗರು ಕೃಷಿಯತ್ತ ಮುಖಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ತಿದ್ದುಪಡಿ ಕಾಯ್ದೆಯಿಂದ ಕೃಷಿ ಭೂಮಿಯ ಮೌಲ್ಯ ಹೆಚ್ಚಾದರೆ ಕೃಷಿಯ ಚಿಂತನೆಯಲ್ಲಿರುವ ರೈತರಿಗೆ ಶಕ್ತಿ ತುಂಬಿದಂತಾಗುತ್ತದೆ.

ಲೇಖಕ: ನೈಸರ್ಗಿಕ ಕೃಷಿಕ, ಹನಿಯಂಬಾಡಿ, ಮಂಡ್ಯ ತಾಲ್ಲೂಕು
ನಿರೂಪಣೆ: ಎಂ.ಎನ್‌.ಯೋಗೇಶ್‌

***

ಭೂಮಿ ಕಳೆದುಕೊಳ್ಳುವ ಅಪಾಯ
-ಎಂ.ನಾಗರಾಜು

ವ್ಯವಸಾಯ ಕಷ್ಟ ಎಂದುಕೊಳ್ಳುವ ತುಂಡು ಜಮೀನು ಹೊಂದಿರುವ ಕೃಷಿಕರು, ‘ಹೆಚ್ಚಿನ ಬೆಲೆ ಸಿಗುತ್ತದೆ, ಆರಾಮವಾಗಿ ಜೀವನ ಸಾಗಿಸಬಹುದು’ ಎಂಬ ಕಾರಣಕ್ಕೆ ತಮ್ಮ ಕೃಷಿ ಭೂಮಿಯನ್ನು ಉದ್ಯಮಿಗಳು ಅಥವಾ ಕಾರ್ಪೊರೇಟ್‌ ಸಂಸ್ಥೆಗಳಿಗೆ ಮಾರಾಟ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಆ ಸಂದರ್ಭದಲ್ಲಿ ಜಮೀನು ಮಾಲೀಕರಿಗೆ ದೊಡ್ಡ ಮೊತ್ತವೇ ಕೈಗೆ ಬರಬಹುದು. ಹಣವೆಲ್ಲ ಖರ್ಚಾದ ಮೇಲೆ ಅವರು ಜೀವನಕ್ಕೆ ಏನು ಮಾಡುತ್ತಾರೆ? ಅನಿವಾರ್ಯವಾಗಿ ಮತ್ತೆ ಕೂಲಿ ಕೆಲಸಕ್ಕೆ ಹೋಗಬೇಕಾಗುತ್ತದೆ. ಇನ್ನೊಬ್ಬರ ಜಮೀನಿನಲ್ಲಿ ಕೆಲಸಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸಣ್ಣ ಹಾಗೂ ಮಧ್ಯಮ ಪ್ರಮಾಣದ ರೈತರಿಗೆ ಈತಿದ್ದುಪಡಿಯಿಂದ ಅಪಾಯವೇ ಹೆಚ್ಚು.

ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಯತ್ನಿಸುವುದರ ಮೂಲಕ ರಾಜ್ಯ ಸರ್ಕಾರವು ‘ಉಳುವವನೇ ಭೂಮಿಯ ಒಡೆಯ’ ಎಂಬ ನಿಯಮವನ್ನು ಬುಡಬೇಲು ಮಾಡಲು ಹೊರಟಿದೆ. ಪ್ರಸ್ತಾವಿತ ತಿದ್ದುಪಡಿ ಜಾರಿಯಾದರೆ ಕೃಷಿ ಜಮೀನು, ದುಡ್ಡು ಇರುವವರು ಹಾಗೂ ಉದ್ಯಮಿಗಳ ಪಾಲಾಗುತ್ತದೆ.

-ಎಂ.ನಾಗರಾಜು

ಕೃಷಿಯಲ್ಲಿ ಆಸಕ್ತಿ ಹೊಂದಿರುವವರು, ಯಾವುದೇ ಅಡೆತಡೆ ಇಲ್ಲದೆ ಜಮೀನು ಖರೀದಿಸಲು ಅನುಕೂಲವಾಗಿದೆ ಎನ್ನುವುದು ನಿಜ. ಆದರೆ, ಬದಲಾವಣೆಗಳನ್ನುಕೂಲಂಕಷವಾಗಿ ಪರಿಶೀಲಿಸಿದಾಗ ರೈತರಿಗೆ ಇದರಿಂದ ಅನನುಕೂಲವೇ ಹೆಚ್ಚು. ಸಣ್ಣ ಹಿಡುವಳಿದಾರರಿಗೆ ಪ್ರಸ್ತಾವಿತ ಕಾನೂನು ಬಲವಾದ ಹೊಡೆತ ನೀಡುವುದು ಖಚಿತ.

ಲೇಖಕ: ಕೊಳ್ಳೇಗಾಲದ ಕೃಷಿಕ,
ನಿರೂಪಣೆ: ವಿ. ಸೂರ್ಯನಾರಾಯಣ

**

ಬದಲಾವಣೆಗೆ ಇರಲಿ ಅವಕಾಶ
-ಶ್ರೀಪಾದರಾಜ ಜಿ. ಮುರಡಿ

ಪ್ರತಿನಿತ್ಯ ನಮ್ಮ ಜಮೀನಿಗೆ ಹೋಗುವಾಗ, ದಾರಿಯ ಎರಡೂ ಬದಿಗಳಲ್ಲಿ ಕಾಣಸಿಗುವ ನೋಟಗಳು ಕಣ್ಣಿಗೆ ಇರಿಯುತ್ತವೆ. ಏಕೆಂದರೆ, ಅಲ್ಲಿನ ಬಹುತೇಕ ಜಮೀನುಗಳಲ್ಲಿ ಯಾವುದೇ ಕೃಷಿ ಚಟುವಟಿಕೆ ನಡೆಸದೆ ಬಂಜರು ಭೂಮಿಯನ್ನಾಗಿ ಹಾಗೇ ಬಿಡಲಾಗಿದೆ.

ರೈತಾಪಿ ವರ್ಗದ ಕುಟುಂಬಗಳಲ್ಲಿ ಆಸ್ತಿ ಪಾಲಾಗುತ್ತಾ ಬಂದಿದ್ದರೂ ಬಹುತೇಕ ಪ್ರಕರಣಗಳ ಕಂದಾಯ ದಾಖಲೆಗಳಲ್ಲಿ ಯಾವುದೇ ಬದಲಾವಣೆ ಮಾಡಿಸದಿರುವುದು ಹಲವು ಬಿಕ್ಕಟ್ಟುಗಳನ್ನು ಸೃಷ್ಟಿಸಿದೆ. ಅಸಮರ್ಪಕ ದಾಖಲೆ, ಸಿಗದ ಪ್ರೋತ್ಸಾಹ, ಮಳೆ ಅಭಾವ... ಹೀಗೆ ಹತ್ತಾರು ಕಾರಣಗಳಿಂದ ಅವರೆಲ್ಲ ಕೃಷಿ ತೊರೆದು, ವಲಸೆ ಹೋಗುತ್ತಿರುವುದು ನಮ್ಮ ಭಾಗದಲ್ಲಿ ಸಾಮಾನ್ಯ.

-ಶ್ರೀಪಾದರಾಜ ಜಿ. ಮುರಡಿ

ಒಂದೆಡೆ ಕೃಷಿ ಭೂಮಿಯು ಬಂಜರಾಗಿ ಉಳಿದರೆ, ಇನ್ನೊಂದೆಡೆ ಕೃಷಿಮಾಡಲು ಆಸಕ್ತರು ಅಂತಹ ಭೂಮಿಗಾಗಿ ಹುಡುಕು ತ್ತಿರುವುದು ನಮ್ಮ ಮುಂದಿರುವ ಸತ್ಯ. ಕಾಯ್ದೆಗೆ ಹೊಸರೂಪ ಸಿಗುವುದರಿಂದ ಎರಡೂ ಸಮಸ್ಯೆ ಬಗೆಹರಿಯುವುದಾದರೆ ಬದಲಾವಣೆ ಆಗಲಿ ಬಿಡಿ.

ಲೇಖಕ:ಆಚಾರ ತಿಮ್ಮಾಪುರದ (ಕೊಪ್ಪಳ) ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.