ADVERTISEMENT

ಆಳ –ಅಗಲ: ತಲಾ ಆದಾಯ ಏರಿಕೆ ಆಗಿದ್ದೆಷ್ಟು?

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 19:31 IST
Last Updated 6 ಮಾರ್ಚ್ 2023, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಲಾ ಆದಾಯವು ದೇಶದ ಜನರ ಆದಾಯದ ಅಸಮಾನ ಹಂಚಿಕೆಯನ್ನು ತೋರಿಸುವುದಿಲ್ಲ. ದೇಶದ ಒಟ್ಟು ಜನಸಂಖ್ಯೆಯಲ್ಲಿ, ದೇಶದ ಒಟ್ಟು ಆದಾಯವನ್ನು ಭಾಗಿಸಿ ತಲಾ ಆದಾಯವನ್ನು ಲೆಕ್ಕ ಹಾಕಲಾಗುತ್ತದೆ. ವಾಸ್ತವ ಸ್ಥಿತಿಯಲ್ಲಿ ಕೆಲವೇ ಶ್ರೀಮಂತರ ಆದಾಯದಲ್ಲಿನ ಏರಿಕೆ ದೊಡ್ಡ ಪ್ರಮಾಣದಲ್ಲಿರುತ್ತದೆ. ಅದೇ ಸಂದರ್ಭದಲ್ಲಿ ಕೆಲವರ ಆದಾಯವು ಏರಿಕೆ ಆಗದೇ ಇರಬಹದು ಅಥವಾ ಇಳಿಕೆಯಾಗಿರಬಹುದು. ಈ ಏರಿಳಿತಗಳನ್ನು ತಲಾ ಆದಾಯದ ಲೆಕ್ಕಾಚಾರದ ವೇಳೆ ಪರಿಗಣಿಸುವುದಿಲ್ಲ. ಹೀಗಾಗಿ ತಲಾ ಆದಾಯವು ದೇಶದ ಎಲ್ಲಾ ಜನರ ಆದಾಯವಲ್ಲ.

**

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರದ ಅಧಿಕಾರದ ಅವಧಿಯಲ್ಲಿ ದೇಶದ ಜನರ ತಲಾ ಆದಾಯ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 2014–15ಕ್ಕೆ ಹೋಲಿಸಿದರೆ 2022–23ರ ವೇಳೆಗೆ ದೇಶದ ಜನರ ರಾಷ್ಟ್ರೀಯ ತಲಾ ಆದಾಯವು ಶೇ 98ರಷ್ಟು ಏರಿಕೆಯಾಗಿದೆ ಎಂದು ಸರ್ಕಾರವು ಹೇಳಿದೆ. ಇದು ಹಾಲಿ ದರದ ಲೆಕ್ಕಾಚಾರದಲ್ಲಿ ಆಗಿರುವ ಏರಿಕೆ ಪ್ರಮಾಣ. ಆದರೆ ಸ್ಥಿರ ದರದ ಲೆಕ್ಕಾಚಾರದಲ್ಲಿ ಆಗಿರುವ ಏರಿಕೆ ಪ್ರಮಾಣವು ತೀರಾ ಕಡಿಮೆ ಇದೆ. ಹೀಗಾಗಿ ದೇಶದ ಜನರ ತಲಾ ಆದಾಯದಲ್ಲಿ ಶೇ 98ರಷ್ಟು ಏರಿಕೆಯಾಗಿದೆ ಎಂದು ಹೇಳುತ್ತಿರುವುದು ಮತ್ತು ತಲಾ ಆದಾಯವು ದುಪ್ಪಟ್ಟಾಗಿದೆ ಎಂದು ಹೇಳುತ್ತಿರುವುದು ವಾಸ್ತವವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ADVERTISEMENT

ಸರ್ಕಾರದ ದತ್ತಾಂಶಗಳ ಪ್ರಕಾರ 2014–15ರಲ್ಲಿ ಹಾಲಿ ದರದ ಲೆಕ್ಕಾಚಾರದಲ್ಲಿ ದೇಶದ ಜನರ ತಲಾ ಆದಾಯವು ₹86,647 ಇತ್ತು. ಅದು 2022–23ರಲ್ಲಿ ₹1.71 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಸರ್ಕಾರವು ಹೇಳಿದೆ. ಹಾಲಿ ದರದ ಲೆಕ್ಕಾಚಾರದಲ್ಲಿ ಹಣದುಬ್ಬರದ ಕಾರಣ ಜನರ ವೆಚ್ಚದಲ್ಲಿ ಆಗಿರುವ ಏರಿಕೆಯನ್ನು ಪರಿಗಣಿಸುವುದಿಲ್ಲ. ಈ ಕಾರಣದಿಂದ ತಲಾ ಆದಾಯದಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿರುವಂತೆ ಕಾಣುತ್ತದೆ. ದೇಶದ ಒಟ್ಟು ರಾಷ್ಟ್ರೀಯ ಆದಾಯದಲ್ಲಿ ಆಗಿರುವ ಏರಿಕೆಯನ್ನು ಮಾತ್ರ ಇದು ಸೂಚಿಸುತ್ತದೆ. ಆದರೆ, ವಾಸ್ತವದಲ್ಲಿ ಇದು ದೇಶದ ಆರ್ಥಿಕತೆಯ ಪ್ರಗತಿಯ ದರದ ನೈಜ ಚಿತ್ರಣವನ್ನು ತೋರಿಸುವುದಿಲ್ಲ. ಹೀಗಾಗಿ ಯಾವುದೇ ದೇಶಗಳು ತಮ್ಮ ತಲಾ ಆದಾಯವನ್ನು ಘೋಷಿಸುವಾಗ, ಹಾಲಿ ದರದ ಲೆಕ್ಕಾಚಾರದ ತಲಾ ಆದಾಯವನ್ನು ಪರಿಗಣಿಸುವುದಿಲ್ಲ.

ವಿಶ್ವ ಬ್ಯಾಂಕ್‌ ಸಹ ಇದನ್ನೇ ಹೇಳುತ್ತದೆ. ‘ಹಾಲಿ ದರದ ಲೆಕ್ಕಾಚಾರದಲ್ಲಿ ತೋರಿಸುವ ತಲಾ ಆದಾಯವು ನೈಜ ಸ್ವರೂಪದ್ದಲ್ಲ. ತಲಾ ಆದಾಯದೊಂದಿಗೆ, ಜನರ ಜೀವನಮಟ್ಟವೂ ಸುಧಾರಿಸಿರಬೇಕು. ಆದರೆ ಹಾಲಿ ದರದ ಲೆಕ್ಕಾಚಾರದಲ್ಲಿ ತೋರಿಸುವ ತಲಾ ಆದಾಯದ ಏರಿಕೆಗೆ ಹೋಲಿಸಿದರೆ, ಅದೇ ದರದಲ್ಲಿ ಜೀವನಮಟ್ಟ ಸುಧಾರಿಸಿರುವುದಿಲ್ಲ. ಹಣದುಬ್ಬರವು ಜನರ ವೆಚ್ಚ ಮಾಡುವ ಸಾಮರ್ಥ್ಯವನ್ನು ಪ್ರಭಾವಿಸುತ್ತದೆ. ಹಣದುಬ್ಬರ ಹೆಚ್ಚಾದರೆ, ಸರಕು ಮತ್ತು ಸೇವೆಗಳ ಮೌಲ್ಯದಲ್ಲಿ ಕುಸಿತವಾಗುತ್ತದೆ ಹಾಗೂ ಅವುಗಳ ಬೆಲೆ ಏರಿಕೆಯಾಗುತ್ತದೆ. ಜನರ ಆದಾಯ ಏರಿಕೆಯಾಗಿದ್ದರೂ, ಅವರು ಈ ಹಿಂದೆ ಸರಕೊಂದನ್ನು ಖರೀದಿಸಲು ನೀಡಬೇಕಿದ್ದ ಹಣಕ್ಕಿಂತ ಹೆಚ್ಚು ಹಣವನ್ನು ನೀಡಬೇಕಾಗುತ್ತದೆ. ಹೀಗಾಗಿ ಅವರ ವೆಚ್ಚದ ಪ್ರಮಾಣ ಏರಿಕೆಯಾಗುತ್ತದೆ. ಇದು ತಲಾ ಆದಾಯವನ್ನು ಪ್ರಭಾವಿಸುತ್ತದೆ. ಹೀಗಾಗಿ ಹಣದುಬ್ಬರದ ಪರಿಣಾಮವನ್ನು ಪರಿಗಣಿಸುವ ಸ್ಥಿರ ದರದ ಲೆಕ್ಕಾಚಾರದ ತಲಾ ಆದಾಯವನ್ನೇ ಪರಿಗಣಿಸಬೇಕು. ಆರ್ಥಿಕ ಪ್ರಗತಿ ಮತ್ತು ಜನರ ತಲಾ ಆದಾಯದಲ್ಲಿ ಆಗಿರುವ ನೈಜ ಚಿತ್ರಣವನ್ನು ನೀಡುತ್ತದೆ’ ಎಂದು ವಿಶ್ವ ಬ್ಯಾಂಕ್‌ ವಿವರಿಸಿದೆ.

ಭಾರತದ ಜನರ, ಸ್ಥಿರ ದರದ ಲೆಕ್ಕಾಚಾರದ ತಲಾ ಆದಾಯದಲ್ಲಿ ಆಗಿರುವ ಏರಿಕೆ ಪ್ರಮಾಣವು ದೊಡ್ಡದೇನಲ್ಲ. ಸ್ಥಿರ ದರದ ತಲಾ ಆದಾಯವನ್ನು ಲೆಕ್ಕ ಹಾಕುವಾಗ ಹಣದುಬ್ಬರವನ್ನು ಪರಿಗಣಿಸಲಾಗುತ್ತದೆ. ತಲಾ ಆದಾಯದಲ್ಲಿ ಆಗಿರುವ ಏರಿಕೆ ಪ್ರಮಾಣದಲ್ಲಿ, ದೇಶದ ಹಣದುಬ್ಬರದ ಪ್ರಮಾಣವನ್ನು ಕಳೆಯಲಾಗುತ್ತದೆ. ಉದಾಹರಣೆಗೆ... ಒಂದು ವರ್ಷದಲ್ಲಿ ₹50,000ವಿದ್ದ ತಲಾ ಆದಾಯವು, ಮುಂದಿನ ವರ್ಷದಲ್ಲಿ ₹55,000ಕ್ಕೆ ಏರಿಕೆಯಾಗುತ್ತದೆ. ಇದನ್ನು ಹಾಲಿ ದರದ ಲೆಕ್ಕಾಚಾರದಲ್ಲಿ ಪರಿಗಣಿಸಿದರೆ, ತಲಾ ಆದಾಯದಲ್ಲಿ ಏರಿಕೆಯಾದ ಪ್ರಮಾಣ ಶೇ 10ರಷ್ಟಾಗುತ್ತದೆ. ಆದರೆ, ಅದೇ ವರ್ಷದಲ್ಲಿನ ಹಣದುಬ್ಬರವು ಶೇ 6ರಷ್ಟಿದ್ದರೆ. ಶೇ 10ರಲ್ಲಿ ಶೇ 6ನ್ನು ಕಳೆಯಬೇಕು. ಆಗ ಉಳಿಯುವ ಶೇಷವು ಶೇ 4ರಷ್ಟು. ಈ ಶೇಷವೇ ತಲಾ ಆದಾಯದಲ್ಲಿ ಆಗಿರುವ ಏರಿಕೆ ಪ್ರಮಾಣ. ಇದು ದೇಶದ ಜನರ ತಲಾ ಆದಾಯದ ನೈಜ ಚಿತ್ರಣ. ಈ ಪ್ರಕಾರ ದೇಶದ ಜನರ ತಲಾ ಆದಾಯವು ₹98,118 ಮಾತ್ರ.

2022–23ರ ಆರ್ಥಿಕ ಸಮೀಕ್ಷೆಯಲ್ಲಿ ಸರ್ಕಾರವು ಸ್ಥಿರ ದರದ ಲೆಕ್ಕಾಚಾರದಲ್ಲಿ ದೇಶದ ಜನರ ತಲಾ ಆದಾಯವು ₹96,522 ಇರಲಿದೆ ಎಂದು ಅಂದಾಜಿಸಿತ್ತು. ಈಗ ಪ್ರಕಟಿಸಿರುವ ಪರಿಷ್ಕೃತ ಅಂದಾಜಿನಲ್ಲಿ ತಲಾ ಆದಾಯವು ₹98,118ರಷ್ಟು ಇರಲಿದೆ ಎಂದು ಸರ್ಕಾರ ಹೇಳಿದೆ. ಈ ಪ್ರಕಾರ 2014–15ಕ್ಕೆ ಹೋಲಿಸಿದರೆ ಭಾರತೀಯರ ತಲಾ ಆದಾಯವು ದುಪ್ಪಟ್ಟಾಗಿಲ್ಲ.

ಹಾಲಿ ದರದ ಲೆಕ್ಕಾಚಾರ
* ಹಾಲಿ ದರದ ಲೆಕ್ಕಾಚಾರದ ತಲಾ ಆದಾಯದಲ್ಲಿ ಏರಿಕೆ ಪ್ರಮಾಣವು ಏಕ ಪ್ರಕಾರದಲ್ಲಿ ಇಲ್ಲ. 2014–15ರಿಂದ 2017–18ರವರೆಗೆ ಈ ಸ್ವರೂಪದ ತಲಾ ಆದಾಯದ ಏರಿಕೆ ಪ್ರಮಾಣವು ಪ್ರತಿವರ್ಷ ಶೇ 10ರಷ್ಟರ ಆಸುಪಾಸಿನಲ್ಲಿದೆ. ಈ ಪ್ರಮಾಣದಲ್ಲಿನ ಏರಿಕೆಯು ಆರ್ಥಿಕ ಚಟುವಟಿಕೆಗಳಲ್ಲಿನ ಪ್ರಗತಿಯನ್ನು ಸೂಚಿಸುತ್ತದೆ

* 2018–19ರಿಂದ 2019–20, ಎರಡೂ ಆರ್ಥಿಕ ವರ್ಷಗಳಲ್ಲಿ ಹಾಲಿ ದರದ ಲೆಕ್ಕಾಚಾರದ ತಲಾ ಆದಾಯದ ಏರಿಕೆ ದರವು ಕುಸಿತವಾಗಿದೆ. ಕೋವಿಡ್‌ ಕಾರಣದಿಂದ ದೇಶದ ಆರ್ಥಿಕತೆ ಕುಸಿದಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಕೋವಿಡ್‌ ಬರುವುದಕ್ಕೂ ಎರಡು ವರ್ಷ ಮುನ್ನವೇ ದೇಶದ ಆರ್ಥಿಕ ಚಟುವಟಿಕೆಗಳು ಕುಂಠಿತವಾಗಿದ್ದವು ಎಂಬುದನ್ನು ಸರ್ಕಾರದ್ದೇ ದತ್ತಾಂಶಗಳು ಹೇಳುತ್ತವೆ

* 2017–18ರಲ್ಲಿ ಹಾಲಿ ದರದ ಲೆಕ್ಕಾಚಾರದ ತಲಾ ಆದಾಯದ ಏರಿಕೆ ಪ್ರಮಾಣವು ಶೇ 10.57ರಷ್ಟಿತ್ತು. ಆದರೆ ಈ ಪ್ರಮಾಣವು 2018–19ರಲ್ಲಿ ಶೇ 8.69ಕ್ಕೆ ಕುಸಿತವಾಗಿದೆ. 2019–20ರಲ್ಲಿ ಈ ಪ್ರಮಾಣವು ಮತ್ತಷ್ಟು ಕುಸಿದು, ಶೇ 5.6ರಷ್ಟು ದಾಖಲಾಗಿತ್ತು

ಸ್ಥಿರ ದರದ ಲೆಕ್ಕಾಚಾರ

* ಹಾಲಿ ದರದ ಲೆಕ್ಕಾಚಾರದ ತಲಾ ಆದಾಯದಲ್ಲಿನ ಏರಿಕೆಗೆ ಹೋಲಿಸಿದರೆ, ಸ್ಥಿರ ದರದ ಲೆಕ್ಕಾಚಾರದ ತಲಾ ಆದಾಯದಲ್ಲಿನ ಏರಿಕೆಯು ಅರ್ಧದಷ್ಟಿದೆ. 2014–15ರಿಂದ 2018–19ರವರೆಗೆ ಈ ಸ್ವರೂಪದ ತಲಾ ಆದಾಯದ ಏರಿಕೆ ಪ್ರಮಾಣವು ಸರಾಸರಿ ಶೇ 5.6ರಷ್ಟಿದೆ. ಇದು ದೇಶದ ಜನರ ನೈಜ ತಲಾ ಆದಾಯದಲ್ಲಿ ಆಗಿರುವ ಏರಿಕೆಯನ್ನು ಸೂಚಿಸುತ್ತದೆ

* 2016–17ರ ನಂತರ ಈ ಸ್ವರೂಪದ ತಲಾ ಆದಾಯದಲ್ಲಿನ ಏರಿಕೆ ಪ್ರಮಾಣವು ಕುಸಿತದ ಹಾದಿಯಲ್ಲಿಯೇ ಇದೆ. 2017–18ರಲ್ಲಿ ಏರಿಕೆ ಪ್ರಮಾಣವು ಶೇ 5.52ರಷ್ಟು ಇದ್ದದ್ದು, 2019–20ರಲ್ಲಿ ಶೇ 2.31ಕ್ಕೆ ಕುಸಿದಿತ್ತು. ಅಂದರೆ ದೇಶಕ್ಕೆ ಕೋವಿಡ್‌ ಬರುವ ಮುನ್ನವೇ, ಜನರ ತಲಾ ಆದಾಯದಲ್ಲಿ ಆಗುವ ಏರಿಕೆ ದರವು ಭಾರಿ ಪ್ರಮಾಣದಲ್ಲಿ ಕುಸಿದಿತ್ತು ಎಂಬುದನ್ನು ಇದು ಸೂಚಿಸುತ್ತದೆ. ಕೋವಿಡ್‌ ಅವಧಿಯಲ್ಲಿ ತಲಾ ಆದಾಯವು ಋಣಾತ್ಮಕ ಪ್ರಗತಿ ದಾಖಲಿಸಿತ್ತು. ಅಂದರೆ, ಈ ಹಿಂದಿನ ವರ್ಷದಲ್ಲಿ ಇದ್ದ ತಲಾ ಅದಾಯಕ್ಕಿಂತ ಕಡಿಮೆ ಮಟ್ಟಕ್ಕೆ ಕುಸಿದಿತ್ತು

* ಜನರ ತಲಾ ಆದಾಯದಲ್ಲಿ ದೊಡ್ಡ ಮಟ್ಟದ ಏರಿಕೆ ಸಾಧ್ಯವಾಗದೇ ಇರುವ ಕಾರಣಕ್ಕೆ, ಜೀವನಮಟ್ಟದಲ್ಲಿಯೂ ಗಮನಾರ್ಹ ಸುಧಾರಣೆ ಸಾಧ್ಯವಾಗಿಲ್ಲ ಎಂಬುದರತ್ತ ಈ ದತ್ತಾಂಶಗಳು ಬೊಟ್ಟು ಮಾಡುತ್ತವೆ

ಅಂತರ ಶೇ 431ರಷ್ಟು ಏರಿಕೆ
ಹಾಲಿ ದರದ ಲೆಕ್ಕಾಚಾರದ ತಲಾ ಆದಾಯ ಮತ್ತು ಸ್ಥಿರ ದರದ ಲೆಕ್ಕಾಚಾರದ ತಲಾ ಆದಾಯದ ನಡುವಣ ವ್ಯತ್ಯಾಸ ಕಡಿಮೆ ಇದ್ದರೆ, ಜನರ ಆರ್ಥಿಕ ಸ್ಥಿತಿ ಉತ್ತಮ ಸ್ಥಿತಿಯಲ್ಲಿದೆ ಎಂಬುದನ್ನು ಸೂಚಿಸುತ್ತದೆ ಎನ್ನುತ್ತದೆ ವಿಶ್ವ ಬ್ಯಾಂಕ್‌. ಈ ಅಂತರವು ಹೆಚ್ಚಾದಷ್ಟೂ ಹಣದುಬ್ಬರ ಮತ್ತು ಜನರ ವೆಚ್ಚದ ಪ್ರಮಾಣ ಹೆಚ್ಚಾಗುತ್ತಿದೆ. 2014–15ನೇ ಆರ್ಥಿಕ ವರ್ಷದಲ್ಲಿ ಈ ಎರಡೂ ಸ್ವರೂಪದ ತಲಾ ಆದಾಯಗಳ ನಡುವಣ ಅಂತರವು ₹13,842ರಷ್ಟು ಇತ್ತು. ಆದರೆ, 2022–23ರಲ್ಲಿ ಈ ಅಂತರವು ₹73,502ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಹಾಲಿ ದರದ ಲೆಕ್ಕಾಚಾರದ ತಲಾ ಆದಾಯವು ಶೇ 98ರಷ್ಟು ಮತ್ತು ಸ್ಥಿರ ದರದ ಲೆಕ್ಕಾಚಾರದ ತಲಾ ಆದಾಯವು ಶೇ 35ರಷ್ಟು ಏರಿಕೆಯಾಗಿದ್ದರೆ, ಈ ಎರಡೂ ತಲಾ ಆದಾಯಗಳ ನಡುವಣ ಅಂತರವು ಶೇ 431ರಷ್ಟು ಏರಿಕೆಯಾಗಿದೆ.

ಕೋವಿಡ್‌ ಮುನ್ನವೇ ಕುಸಿತ...
ಒಟ್ಟಾರೆ ಕೋವಿಡ್‌ ಬರುವುದಕ್ಕೂ ಮುನ್ನವೇ ದೇಶದಲ್ಲಿನ ಆರ್ಥಿಕ ಚಟುವಟಿಕೆಗಳು ಕುಂಠಿತವಾಗಿದ್ದವು. ಈ ಕಾರಣದಿಂದ ಜನರ ತಲಾ ಆದಾಯದಲ್ಲಿನ ಏರಿಕೆ ಪ್ರಮಾಣವೂ ಕುಸಿತದ ಹಾದಿಯಲ್ಲಿತ್ತು. ಕೋವಿಡ್‌ ಸಂದರ್ಭದಲ್ಲಿ ಕುಸಿತ ಮತ್ತಷ್ಟು ಹೆಚ್ಚಿತು ಎಂಬುದನ್ನು ಈ ದತ್ತಾಂಶಗಳು ಹೇಳುತ್ತಿವೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಎಂಟು ವರ್ಷಗಳಲ್ಲಿ, ಕೋವಿಡ್‌ ತೀವ್ರವಾಗಿದ್ದ 2020–21 ಸೇರಿ ಮೂರು ವರ್ಷ ದೇಶದ ಆರ್ಥಿಕತೆ ಕುಸಿತದ ಹಾದಿಯಲ್ಲಿತ್ತು ಎಂದು ಈ ದತ್ತಾಂಶಗಳು ಹೇಳುತ್ತವೆ. ದೇಶದ ಕುಂಠಿತ ಆರ್ಥಿಕ ಪ್ರಗತಿಗೆ ಕೋವಿಡ್‌ ಮಾತ್ರ ಕಾರಣವಲ್ಲ ಎಂಬುದನ್ನೂ ಈ ದತ್ತಾಂಶಗಳು ಸೂಚಿಸುತ್ತವೆ.

ಆಧಾರ: 2022–23ರ ಆರ್ಥಿಕ ಸಮೀಕ್ಷೆ, ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆಯ ಪ್ರಕಟಣೆಗಳು, ಪಿಟಿಐ, ವಿಶ್ವ ಬ್ಯಾಂಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.