ADVERTISEMENT

ಆಳ-ಅಗಲ: ತೆರವಿಗೆ ನೆರವಾದ ದುಶಾಂಬೆ ವಾಯುನೆಲೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 22:30 IST
Last Updated 26 ಆಗಸ್ಟ್ 2021, 22:30 IST
ಅಫ್ಗಾನಿಸ್ತಾನದಿಂದ ಜಾಮ್‌ನಗರದ ವಾಯುನೆಲೆಯಲ್ಲಿ ಬಂದಿಳಿದ ಭಾರತೀಯರು -ಪಿಟಿಐ ಚಿತ್ರ
ಅಫ್ಗಾನಿಸ್ತಾನದಿಂದ ಜಾಮ್‌ನಗರದ ವಾಯುನೆಲೆಯಲ್ಲಿ ಬಂದಿಳಿದ ಭಾರತೀಯರು -ಪಿಟಿಐ ಚಿತ್ರ   

ಅಫ್ಗಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರು ಮತ್ತು ಮಿತ್ರರಾಷ್ಟ್ರಗಳ ಪ್ರಜೆಗಳನ್ನು ಸುರಕ್ಷಿತವಾಗಿ ತೆರವು ಮಾಡುವ ಹೊಣೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೊತ್ತಿದೆ. ವಾಯುಪಡೆ ಮತ್ತು ಏರ್‌ ಇಂಡಿಯಾದ ಸಹಯೋಗದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಪ್ರತಿ ಬ್ಯಾಚ್‌ನಲ್ಲಿಯೂ ಕೆಲವೇ ಮಂದಿಯನ್ನಷ್ಟೇ ಕರೆತರಲು ಸಾಧ್ಯವಾಗುತ್ತಿದೆ.

ಈ ಕಾರ್ಯಾಚರಣೆಯ ಮೇಲ್ನೋಟಕ್ಕೆ ಕಂಡಷ್ಟು ಸರಳವಾಗಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ವಿವರಿಸಿದ್ದಾರೆ. ಹಲವು ಬ್ಯಾಚ್‌ಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈವರೆಗೆ 800 ಜನರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ. ಇದರಲ್ಲಿ ಭಾರತೀಯರು, ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ, ಅಫ್ಗನ್ ಪ್ರಜೆಗಳು ಮತ್ತು ನೇಪಾಳದ ಪ್ರಜೆಗಳೂ ಸೇರಿದ್ದಾರೆ. ಇನ್ನು ಕೆಲವೇ ಮಂದಿಯನ್ನು ಮಾತ್ರ ತೆರವು ಮಾಡಬೇಕಿದೆ ಎಂದು ಸಚಿವಾಲಯವು ಹೇಳಿದೆ.

ಭಾರತವು ಜುಲೈ 16ರಂದು ತನ್ನ ಮೊದಲ ಕಾರ್ಯಾಚರಣೆಯನ್ನು ನಡೆಸಿತು. ಆ ಕಾರ್ಯಾಚರಣೆಯಲ್ಲಿ ಕರೆತರಲು ಸಾಧ್ಯವಾಗಿದ್ದು 40 ಜನರನ್ನು ಮಾತ್ರ. ವಿಮಾನದ ಸಾಮರ್ಥ್ಯ ಹೆಚ್ಚಾಗಿದ್ದರೂ, ಕಡಿಮೆ ಜನರನ್ನು ಕರೆತರಲು ಮಾತ್ರ ಸಾಧ್ಯವಾಗಿರುವುದು ಕಾರ್ಯಾಚರಣೆಯ ಸಂಕೀರ್ಣತೆಯನ್ನು ತೋರಿಸುತ್ತದೆ. ಮೊದಲ ಕಾರ್ಯಾಚರಣೆಯಲ್ಲಿ ಕರೆತಂದವರನ್ನು ತಾಲಿಬಾನ್‌ ಸೈನಿಕರ ಕಾವಲಿನಲ್ಲಿ ವಿಮಾನ ನಿಲ್ದಾಣಕ್ಕೆ ಕರೆತರಲಾಗಿತ್ತು.

ADVERTISEMENT

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಹಾರಾಟ ನಡೆಸಲು ಈಗ ಸೇನಾ ವಿಮಾನಗಳಿಗೆ ಮಾತ್ರವೇ ಅವಕಾಶ ನೀಡಲಾಗುತ್ತಿದೆ. ದೇಶವನ್ನು ತೊರೆಯಲು ಸಾವಿರಾರು ಮಂದಿ ನಿಲ್ದಾಣದ ಸುತ್ತ ಕಿಕ್ಕಿರಿದು ತುಂಬಿದ್ದಾರೆ. ಅವರನ್ನು ತಪಾಸಣೆ ನಡೆಸಿ ಒಳಗೆ ಬಿಡುವ ಕಾರ್ಯ ಸುಲಭದ್ದಲ್ಲ. ಆರಂಭದ ಕೆಲವು ದಿನ ನೂಕುನುಗ್ಗಲು ಉಂಟಾಗಿ, ಸಾವಿರಾರು ಜನರು ವಿಮಾನಗಳಿಗೆ ಮುಗಿಬಿದ್ದಿದ್ದರು. ರನ್‌ವೇಯಲ್ಲಿ ಓಡುತ್ತಿದ್ದ ವಿಮಾನಗಳಿಗೆ ಸಿಲುಕಿ ಹಲವರು ಸತ್ತಿದ್ದಾರೆ. ಹೀಗೆ ಕಿಕ್ಕಿರಿದು ತುಂಬಿರುವ ಜನರ ಮಧ್ಯೆ ಭಾರತೀಯರನ್ನಷ್ಟೇ ಗುರುತಿಸಿ, ವಿಮಾನಕ್ಕೆ ಹತ್ತಿಸಿಕೊಳ್ಳುವ ಕೆಲಸ ಭಾರಿ ಸವಾಲಿನದ್ದು. ಹೀಗಾಗಿಯೇ ಪ್ರತಿ ಕಾರ್ಯಾಚರಣೆಯಲ್ಲೂ ಕೆಲವೇ ಮಂದಿಯನ್ನು ತೆರವು ಮಾಡಲಾಗುತ್ತಿದೆ.

3,450 ಮೀಟರ್ ಉದ್ದದ ಏಕ ರನ್‌ವೇ ಹೊಂದಿರುವ ಕಾಬೂಲ್ ವಿಮಾನ ನಿಲ್ದಾಣವನ್ನು ಈಗ ಅಮೆರಿಕದ ಸೇನೆ, ನ್ಯಾಟೊ ಪಡೆಗಳು ನಿರ್ವಹಣೆ ಮಾಡುತ್ತಿವೆ. 45ಕ್ಕೂ ಹೆಚ್ಚು ದೇಶಗಳು ತೆರವು ಕಾರ್ಯಾಚರಣೆ ನಡೆಸುತ್ತಿವೆ. ವಾಣಿಜ್ಯ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಇರುವ ಕಾರಣ ಸಣ್ಣ ಸೇನಾ ವಿಮಾನಗಳನ್ನಷ್ಟೇ ಬಳಸಲಾಗುತ್ತಿದೆ.

ಕಾಬೂಲ್‌ನಿಂದ ನೇರವಾಗಿ ಭಾರತಕ್ಕೆ ಹಾರಾಟ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತೆರವು ಕಾರ್ಯಾಚರಣೆ ದೀರ್ಘವಾಗುತ್ತಿದೆ. ಕಾಬೂಲ್‌ನಿಂದ ನೇರವಾಗಿ ಭಾರತದತ್ತ ಹಾರಾಟ ನಡೆಸಲು, ಪಾಕಿಸ್ತಾನದ ವಾಯುಗಡಿಯನ್ನು ಪ್ರವೇಶಿಸಬೇಕು. ಪಾಕಿಸ್ತಾನದ ಗಡಿ ಪ್ರವೇಶಿಸಲು ಸೇನಾ ವಿಮಾನಕ್ಕೆ ಅವಕಾಶವಿಲ್ಲ. ಹೀಗಾಗಿ ವಿಮಾನವು ಕಾಬೂಲ್‌ನಿಂದ ಇರಾನ್ ಪ್ರವೇಶಿಸಿ, ನಂತರ ಅರಬ್ಬಿ ಸಮುದ್ರದ ಮೇಲೆ ಹಾರುತ್ತಾ ಗುಜರಾತ್‌ನ ಜಾಮ್‌ನಗರ ವಿಮಾನ ನಿಲ್ದಾಣ ಪ್ರವೇಶಿಸಬೇಕು. ಜಾಮ್‌ನಗರದಲ್ಲಿ ವಿಮಾನಕ್ಕೆ ಇಂಧನ ಭರ್ತಿ ಮಾಡಿಕೊಂಡು, ನಂತರ ದೆಹಲಿಯತ್ತ ಹಾರಾಟ ಮುಂದುವರಿಸಬೇಕು. ನೇರ ವಾಯುಮಾರ್ಗಕ್ಕಿಂತ ಈ ಮಾರ್ಗದ ಉದ್ದ ದುಪ್ಪಟ್ಟಾಗುತ್ತದೆ.

ಕಾಬೂಲ್-ದುಶಾಂಬೆ-ದೆಹಲಿ

ನೇರಮಾರ್ಗದ ಕಾರ್ಯಾಚರಣೆ ಕಾರ್ಯಸಾಧುವಲ್ಲದ ಕಾರಣ, ತಜಿಕಿಸ್ತಾನದಲ್ಲಿರುವ ಭಾರತದ ಮೊದಲ ವಿದೇಶಿ ವಾಯುನೆಲೆ ದುಶಾಂಬೆ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾಬೂಲ್‌ನ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಳಾವಕಾಶದ ಕೊರತೆ ಮತ್ತು ತೀವ್ರ ಗದ್ದಲವಿರುವ ಕಾರಣ ಭಾರತವು ತನ್ನ ಎಲ್ಲಾ ತೆರವು ಕಾರ್ಯಾಚರಣೆಯನ್ನು ದುಶಾಂಬೆ ವಾಯುನೆಲೆಯಿಂದ ನಡೆಸುತ್ತಿದೆ.

ಕಾರ್ಯಾಚರಣೆಗೆ ಬಳಸುತ್ತಿರುವ ಸಿ-17 ಗ್ಲೋಬ್‌ಮಾಸ್ಟರ್ ಮತ್ತು ಸಿ-13 ಸೇನಾ ವಿಮಾನಗಳನ್ನು ದುಶಾಂಬೆಯಲ್ಲಿ ನಿಲ್ಲಿಸಲಾಗಿದೆ. ಕಾಬೂಲ್‌ನಲ್ಲಿ ಇಳಿಯಲು ಅವಕಾಶ ದೊರೆತಾಗ ವಿಮಾನಗಳು ಇಲ್ಲಿಂದ ಹೊರಡುತ್ತವೆ ಮತ್ತು ಜನರನ್ನು ಕರೆದುಕೊಂಡು ವಾಪಸ್ ಇಲ್ಲಿಗೇ ಬರುತ್ತವೆ. ಇಲ್ಲಿಂದ ಏರ್‌ ಇಂಡಿಯಾ ವಿಶೇಷ ವಿಮಾನದ ಮೂಲಕ ದೆಹಲಿಗೆ ಕರೆತರಲಾಗುತ್ತಿದೆ.

ತಜಿಕಿಸ್ತಾನ ಈಗ ತಟಸ್ಥ ರಾಷ್ಟ್ರವಾಗಿರುವ ಕಾರಣ ಭಾರತದ ವಿಮಾನಗಳಿಗೆ ಯಾವುದೇ ಅಪಾಯವಿಲ್ಲ. ಜತೆಗೆ ಭಾರತದ್ದೇ ವಾಯುನೆಲೆ ಇರುವ ಕಾರಣ ವಿಮಾನಗಳ ನಿರ್ವಹಣೆ, ಇಂಧನ ಭರ್ತಿಗೆ ಅವಕಾಶ ದೊರೆಯುತ್ತಿದೆ. ಇದೇ ವಿಮಾನ ನಿಲ್ದಾಣದಿಂದ ವಾಣಿಜ್ಯ ವಿಮಾನಗಳ ಮೂಲಕ ತೆರವು ಕಾರ್ಯಾಚರಣೆ ಮುಂದುವರಿಸಲಾಗುತ್ತಿದೆ.

ಭಾರತದ ಜತೆ ದುಶಾಂಬೆಯ ಬಂಧ

ಭಾರತದ ಮೊದಲ ಸಾಗರೋತ್ತರ ವಾಯುನೆಲೆ ಎಂದು ಹೆಸರಾಗಿರುವುದು ತಜಿಕಿಸ್ತಾನದ ರಾಜಧಾನಿ ದುಶಾಂಬೆ ಬಳಿಯಿರುವ ಗಿರ್ಸ್ಸಾ ಮಿಲಿಟರಿ ಏರೋಡ್ರೋಮ್ (ಜಿಎಂಎ). ಅಫ್ಗನ್ ಬಿಕ್ಕಟ್ಟಿನ ಈ ಸಮಯದಲ್ಲಿ ಭಾರತ ಹೆಚ್ಚಾಗಿ ಅವಲಂಬಿಸಿದ್ದು ಈ ವಾಯುನೆಲೆಯನ್ನು. ಸುಮಾರು ಎರಡು ದಶಕಗಳಿಂದ ತಜಿಕಿಸ್ತಾನದ ಜೊತೆ ಸೇರಿ ಈ ವಾಯುನೆಲೆಯನ್ನು ಭಾರತ ನಿರ್ವಹಿಸುತ್ತಿದೆ. ಸೇನಾ ಕಾರ್ಯಾಚರಣೆಗಳು ಮತ್ತು ತರಬೇತಿಗಾಗಿ ಇದನ್ನು ಸ್ಥಾಪಿಸಲಾಗಿತ್ತು.ಸೋವಿಯತ್ ನಿರ್ಮಿತ ವಾಯುನೆಲೆಯನ್ನು ಭಾರತವು ₹525 ಕೋಟಿ (ಸುಮಾರು 70 ಮಿಲಿಯನ್ ಡಾಲರ್‌) ವೆಚ್ಚದಲ್ಲಿ ನವೀಕರಿಸಿತು. 2010ರಲ್ಲಿ ತಜಿಕಿಸ್ತಾನ ರಕ್ಷಣಾ ಸಚಿವಾಲಯಕ್ಕೆ ಹಸ್ತಾಂತರಿಸಲಾಯಿತು.

ಭಾರತದ ಕಾರ್ಯತಂತ್ರ ಏನು?

ಕಾರ್ಯತಂತ್ರದ ದೃಷ್ಟಿಯಿಂದ ಭಾರತೀಯ ಸೇನೆಗೆ ಜಿಎಂಎ ಅತಿಮುಖ್ಯವಾದುದು. ತಜಿಕಿಸ್ತಾನವು ಚೀನಾ ಮತ್ತು ಪಾಕಿಸ್ತಾನದೊಂದಿಗೆ ಗಡಿಗಳನ್ನು ಹಂಚಿಕೊಂಡಿದೆ. ಜತೆಗೆ ಅಫ್ಗಾನಿಸ್ತಾನದ ವಖಾನ್ ಕಾರಿಡಾರ್‌ಗೆ ಹೊಂದಿಕೊಂಡಿದೆ.ಈ ಕಾರಿಡಾರ್‌ ಪಾಕ್ ಆಕ್ರಮಿತ ಕಾಶ್ಮೀರದಿಂದ (ಪಿಒಕೆ) ಕೇವಲ 20 ಕಿಮೀ ದೂರದಲ್ಲಿದೆ. ಹೀಗಾಗಿ ತಜಿಕಿಸ್ತಾನದಿಂದ ಕಾರ್ಯನಿರ್ವಹಿಸುವ ಅವಕಾಶವು ಸೇನೆಗೆ ಸಿಗುತ್ತದೆ. ವಾಯುಪಡೆ ಯೋಧರು ತಜಿಕಿಸ್ತಾನವನ್ನು ನೆಲೆಯಾಗಿಸಿಕೊಂಡು, ಪಕ್ಕದ ಪಾಕಿಸ್ತಾನದ ಪೆಶಾವರವನ್ನು ಗುರಿಯಾಗಿಸಿಕೊಳ್ಳಬಹುದು. ಚೀನಾಕ್ಕೂ ಸವಾಲು ಒಡ್ಡಬಹುದು.

ತಜಿಕಿಸ್ತಾನದ ಜೊತೆ ಸಂಬಂಧ

ಅಫ್ಗಾನಿಸ್ತಾನದಲ್ಲಿ ಪ್ರಾಬಲ್ಯ ಸಾಧಿಸಲು ಭಾರತವು ಮಧ್ಯ ಏಷ್ಯಾದ ದೇಶಗಳ ಜೊತೆ ಕಳೆದ ಎರಡು ದಶಕಗಳಿಂದ ನಿಕಟ ಒಡನಾಟ ಇಟ್ಟುಕೊಂಡಿದೆ. ಕಾಬೂಲ್‌ ಜೊತೆ ಹೊಂದಿರುವ ವಿಶೇಷ ಸಂಬಂಧ ಹಾಗೂ ದುಶಾಂಬೆಯ ಸಾಮೀಪ್ಯದ ಕಾರಣ, ತಜಿಕಿಸ್ತಾನಕ್ಕೆ ಭಾರತ ವಿಶೇಷ ಗಮನ ನೀಡಿದೆ.ವಾಯುನೆಲೆ ನವೀಕರಣಕ್ಕೆ ಉಭಯ ದೇಶಗಳ ಸಂಬಂಧ ಸೀಮಿತವಾಗಿಲ್ಲ. 2003ರಲ್ಲಿ ಮಧ್ಯ ಏಷ್ಯಾದ ಮೊದಲ ಸೇನಾ ಕಸರತ್ತನ್ನು ತಜಿಕಿಸ್ತಾನದ ಜತೆ ಭಾರತ ನಡೆಸಿತ್ತು. ತಜಿಕಿಸ್ತಾನ ರಕ್ಷಣಾ ಸಚಿವಾಲಯಕ್ಕೆ ಭಾರತ ಸಾಕಷ್ಟು ದೇಣಿಗೆ ನೀಡಿದೆ. ಎರಡು ಎಂಐ–8 ಹೆಲಿಕಾಪ್ಟರ್‌ಗಳು, ಬಿಡಿಭಾಗಗಳು, ಟ್ರಕ್‌ಗಳು, ಇತರ ವಾಹನಗಳು, 10,000 ಸಮವಸ್ತ್ರಗಳು ಮತ್ತು ಕಂಪ್ಯೂಟರ್‌ಗಳನ್ನು ಕೊಟ್ಟಿದೆ.

ವಿದೇಶದಲ್ಲಿ ಭಾರತದ ಸೇನಾ ನೆಲೆಗಳು

ತಜಿಕಿಸ್ತಾನ: ರಾಜಧಾನಿ ದುಶಾಂಬೆಯ ಸನಿಹದಲ್ಲಿದೆ. ಭಾರತೀಯ ವಾಯುಪಡೆ ಹಾಗೂ ತಜಿಕಿಸ್ತಾನ ವಾಯುಪಡೆಗಳು ಜಂಟಿಯಾಗಿ ಇದನ್ನು ನಿರ್ವಹಿಸುತ್ತಿವೆ. ಇದು ವಿದೇಶದಲ್ಲಿರುವ ಭಾರತದ ಮೊದಲ ಸೇನಾ ನೆಲೆಯಾಗಿದೆ.

ಭೂತಾನ್: ಭಾರತೀಯ ಸೇನಾ ತರಬೇತಿ ಕೇಂದ್ರವು (ಐಎಂಟಿಆರ್‌ಎಟಿ) ಭೂತಾನ್‌ನ ಹಾ ಜಾಂಗ್‌ನಲ್ಲಿದೆ. ಇದು ರಾಯಲ್ ಭೂತಾನ್ ಆರ್ಮಿ (ಆರ್‌ಬಿಎ) ಮತ್ತು ರಾಯಲ್ ಬಾಡಿಗಾರ್ಡ್ ಆಫ್ ಭೂತಾನ್ (ಆರ್‌ಬಿಜಿ) ಸಿಬ್ಬಂದಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು ಹೊತ್ತಿದೆ.

ಮಡಗಾಸ್ಕರ್: ಸಾಗರದಲ್ಲಿನ ಹಡಗುಗಳ ಚಲನೆಯ ಮೇಲೆ ಕಣ್ಣಿಡಲು ಮತ್ತು ಕಡಲ ಸಂವಹನಗಳನ್ನು ಕೇಳಿಸಿಕೊಳ್ಳಲು ಉತ್ತರ ಮಡಗಾಸ್ಕರ್‌ನಲ್ಲಿ ಮೇಲ್ವಿಚಾರಣಾ ಕೇಂದ್ರವನ್ನು ಭಾರತ ಸ್ಥಾಪಿಸಿದೆ. ಇತರ ನೌಕಾಪಡೆಯ ಕಾರ್ಯಾಚರಣೆಯ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಲು ಭಾರತೀಯ ನೌಕಾಪಡೆಯ ಆಲಿಸುವಿಕೆ ಕೇಂದ್ರ (ಲಿಸನಿಂಗ್ ಪೋಸ್ಟ್) 2007ರಲ್ಲಿ ಪ್ರಾರಂಭವಾಯಿತು.

ಮಾರಿಷಸ್: ಉತ್ತರ ಅಗಲೆಗಾ ದ್ವೀಪದಲ್ಲಿ ಕರಾವಳಿ ಕಣ್ಗಾವಲು ರೇಡಾರ್ ವ್ಯವಸ್ಥೆ ಇರುವ ಸೇನಾ ನೆಲೆಯನ್ನು ಭಾರತ ಅಭಿವೃದ್ಧಿಪಡಿಸಿದೆ. ಹಿಂದೂ ಮಹಾಸಾಗರದಲ್ಲಿ ನೆಲೆಗೊಂಡಿರುವ ದ್ವೀಪವನ್ನು ಭಾರತ-ಮಾರಿಷಸ್ ಸೇನಾ ಸಹಕಾರದ ಭಾಗವಾಗಿ, ಭಾರತೀಯ ಸೇನೆಗೆ ಗುತ್ತಿಗೆಗೆ ನೀಡಲಾಗಿದೆ.

ಸೀಶೆಲ್ಸ್: ಚೀನಾದ ಸ್ಟ್ರಿಂಗ್ ಆಫ್ ಪರ್ಲ್ಸ್ ತಂತ್ರವನ್ನು ಎದುರಿಸಲು, ಅಸಂಪ್ಷನ್ ದ್ವೀಪ ದಲ್ಲಿ ನೌಕಾನೆಲೆಯನ್ನು ನಿರ್ಮಿಸಲು ಭಾರತ ಹಾಗೂ ಸೀಶೆಲ್ಸ್‌ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದವು. ಇದಕ್ಕಾಗಿ ಭಾರತವು ಸೀಶೆಲ್ಸ್‌ಗೆ ₹750 ಕೋಟಿ ಸಾಲ ಮತ್ತು ಡಾರ್ನಿಯರ್ ವಿಮಾನವನ್ನು ನೀಡಿತು. ಭಾರತವು ಸೀಶೆಲ್ಸ್‌ನಲ್ಲಿ ಕರಾವಳಿ ಕಣ್ಗಾವಲು ರೇಡಾರ್ ವ್ಯವಸ್ಥೆಯನ್ನು ನಿರ್ವಹಿಸುತ್ತದೆ.

ಒಮಾನ್: ಭಾರತವು ರಾಸ್ ಅಲ್ ಹಾಡ್‌ನಲ್ಲಿ ಆಲಿಸುವ ಕೇಂದ್ರ ನಿರ್ಮಿಸಿದೆ. ಭಾರತವು ಮೂರು ನೌಕಾ ನೆಲೆಗಳನ್ನು ಮತ್ತು ಒಮಾನ್‌ನಲ್ಲಿ ಒಂದು ವಾಯುನೆಲೆಯನ್ನು ಹೊಂದಿದೆ.

ಇರಾನ್: ಒಮಾನ್ ಕೊಲ್ಲಿಯಲ್ಲಿ ಚಾಬಹರ್ ಬಂದರು ನಿರ್ಮಾಣವಾಗಿದೆ. 2018ರಿಂದ ಇಲ್ಲಿ ಭಾರತ ಕಾರ್ಯಾಚರಣೆ ಆರಂಭಿಸಿದೆ.

ನೇಪಾಳ: ಸುರ್‌ಖೇತ್‌ ಎಂಬಲ್ಲಿ ಭಾರತವು ಏರ್‌ಸ್ಟ್ರಿಪ್ ನಿರ್ಮಿಸಿದೆ. ವಾಯುದಾಳಿ ಬೆದರಿಕೆಗಳಿಂದ ಇದು ರಕ್ಷಣೆ ನೀಡುತ್ತದೆ.

ಸಿಂಗಪುರ: ಮಲಕ್ಕಾ ಜಲಸಂಧಿಯಲ್ಲಿ ಚೀನಾ ಪ್ರಾಬಲ್ಯ ನಿಯಂತ್ರಣಕ್ಕೆ ಭಾರತ–ಸಿಂಗಪುರ 2017ರಲ್ಲಿ ಸಹಿ ಹಾಕಿದವು. ಈ ಒಪ್ಪಂದವು ಚೀನಾದ ವ್ಯಾಪಾರ ಮಾರ್ಗದಲ್ಲಿ (ಮಲಕ್ಕಾ) ಭಾರತದ ಸೇನಾ ಉಪಸ್ಥಿತಿಯನ್ನು ಸಾಧ್ಯವಾಗಿಸುತ್ತದೆ. ಸಿಂಗಪುರದ ಚಾಂಗಿ ನೌಕಾನೆಲೆಯು ಭಾರತದ ನೌಕಾನೆಲೆಯಾಗಿಯೂ ಬಳಕೆಯಾಗುತ್ತಿದೆ.

ತೆರವು ಸ್ಥಿತಿಗತಿ

ಅಫ್ಗಾನಿಸ್ತಾನದಿಂದ ತೆರಳುವವರನ್ನು ಆಗಸ್ಟ್ 31ರ ಒಳಗೆ ತೆರವು ಮಾಡಬೇಕು ಎಂದು ತಾಲಿಬಾನ್ ಗಡುವು ವಿಧಿಸಿದೆ. ಈವರೆಗೆ 88,000 ಜನರನ್ನು ವಿವಿಧ ದೇಶಗಳು ತೆರವು ಮಾಡಿವೆ. ಇನ್ನೂ ಸಾವಿರಾರು ಮಂದಿಯನ್ನು ತೆರವು ಮಾಡಬೇಕಿದೆ

ಅಮೆರಿಕ: ಅಮೆರಿಕವು ಈಗಾಗಲೇ 4,400 ನಾಗರಿಕರನ್ನು ತೆರವು ಮಾಡಿದೆ. ‘ಆಗಸ್ಟ್ 31ರ ಒಳಗೇ ತೆರವು ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಯತ್ನಿಸಲಾಗುತ್ತದೆ. ಅನಿವಾರ್ಯ ಅನಿಸಿದರೆ 31ರ ನಂತರವೂ ತೆರವು ಕಾರ್ಯಾಚರಣೆ ಮುಂದುವರಿಸಲಾಗುವುದು. ಆದರೆ 31ರ ನಂತರ ಸೈನಿಕರು, ಸೇನಾ ವಾಹನಗಳು, ಶಸ್ತ್ರಾಸ್ತ್ರ ಮತ್ತು ಸೇನಾ ಸಲಕರಣೆಗಳ ತೆರವಿಗೆ ಆದ್ಯತೆ ನೀಡಲಾಗುತ್ತದೆ’ ಎಂದು ಅಮೆರಿಕ ಹೇಳಿದೆ. ಅಂದಾಜು ಇನ್ನೂ 2,500 ಅಮೆರಿಕನ್ನರು ಅಫ್ಗಾನಿಸ್ತಾನದಲ್ಲಿ ಇದ್ದಾರೆ ಎನ್ನಲಾಗಿದೆ.

ಬ್ರಿಟನ್: ಆಗಸ್ಟ್ 31ರಂದು ಅಮೆರಿಕದ ಕೊನೆಯ ವಿಮಾನ ಹೊರಡುವುದಕ್ಕೂ ಮುನ್ನವೇ ಬ್ರಿಟನ್ ಸೈನಿಕರು ತೆರವು ಕಾರ್ಯಾಚರಣೆ ಪೂರ್ಣಗೊಳಿಸಲಿದ್ದಾರೆ ಎಂದು ಬ್ರಿಟನ್ ಹೇಳಿದೆ. ಆದರೆ ನಿಗದಿತ ದಿನಾಂಕವನ್ನು ಘೋಷಿಸಿಲ್ಲ. ಈವರೆಗೆ 12,279 ಮಂದಿಯನ್ನು ತೆರವು ಮಾಡಲಾಗಿದ್ದು, ಇನ್ನೂ 400 ಜನರಷ್ಟೇ ಅಫ್ಗಾನಿಸ್ತಾನದಲ್ಲಿ ಉಳಿದಿದ್ದಾರೆ.

ಜರ್ಮನಿ: ಗುರುವಾರ ಬೆಳಿಗ್ಗೆವರೆಗೆ 5,193 ಜನರನ್ನು ಜರ್ಮನಿ ತೆರವು ಮಾಡಿತ್ತು. ಇದರಲ್ಲಿ 540 ಜನರು ಮಾತ್ರವೇ ಜರ್ಮನ್ನರು. ಇನ್ನೂ 200 ಜರ್ಮನ್‌ ಪ್ರಜೆಗಳು ಕಾಬೂಲ್‌ನಲ್ಲಿ ಇದ್ದು, ಅವರನ್ನು ಶೀಘ್ರವೇ ತೆರವು ಮಾಡಲಾಗುವುದು. ತಾಲಿಬಾನ್‌ನಿಂದ ಸೇಡಿನ ಕ್ರಮದ ಆತಂಕ ಎದುರಿಸುತ್ತಿರುವ 10,000 ಸರ್ಕಾರಿ ಸಿಬ್ಬಂದಿ, ಪತ್ರಕರ್ತರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರನ್ನು ಜರ್ಮನಿ ಗುರುತಿಸಿದೆ. ಅಷ್ಟೂ ಜನರನ್ನು ತೆರವು ಮಾಡಲು ಯತ್ನಿಸಲಾಗುತ್ತದೆ. ‘ಸಾಧ್ಯವಿರುವವರೆಗೂ ತೆರವು ಕಾರ್ಯಾಚರಣೆ ಮುಂದುವರಿಸಲಾಗುತ್ತದೆ’ ಎಂದು ಜರ್ಮನಿ ಸರ್ಕಾರ ಹೇಳಿದೆ.

ಫ್ರಾನ್ಸ್: ಶುಕ್ರವಾರ ಸಂಜೆ ವೇಳೆಗೆ ತೆರವು ಕಾರ್ಯಾಚರಣೆಯನ್ನು ಪೂರ್ಣಗೊಳಿಸುವುದಾಗಿ ಫ್ರಾನ್ಸ್ ಸರ್ಕಾರ ಹೇಳಿದೆ. 100 ಫ್ರಾನ್ಸ್‌ ಪ್ರಜೆಗಳು ಮತ್ತು 2,000 ಅಫ್ಗನ್ ಪ್ರಜೆಗಳನ್ನು ಈವರೆಗೆ ತೆರವು ಮಾಡಲಾಗಿದೆ. ಇನ್ನೂ ಎಷ್ಟು ಜನರನ್ನು ತೆರವು ಮಾಡಲಾಗುತ್ತದೆ ಎಂಬುದರ ಮಾಹಿತಿಯನ್ನು ಫ್ರಾನ್ಸ್ ನೀಡಿಲ್ಲ.

ಕತಾರ್: ಈವರೆಗೆ ಕಾಬೂಲ್‌ನಿಂದ ದೋಹಾಗೆ 40,000 ಜನರನ್ನು ತೆರವು ಮಾಡಲು ಕತಾರ್ ನೆರವಾಗಿದೆ. ‘ನಮ್ಮ ಮಿತ್ರರಾಷ್ಟ್ರಗಳು ತೆರವು ಮುಂದುವರಿಸುವವರೆಗೂ, ನಾವು ನೆರವು ನೀಡುತ್ತೇವೆ’ ಎಂದು ಕತಾರ್ ಘೋಷಿಸಿದೆ.

ಬೆಲ್ಜಿಯಂ: ಬುಧವಾರ ರಾತ್ರಿವರೆಗೆ ಬೆಲ್ಜಿಯಂ ಒಟ್ಟು 1,400 ಜನರನ್ನು ತೆರವು ಮಾಡಿದೆ. ಕಾಬೂಲ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ ನಡೆಯಬಹುದು ಎಂದು ಅಮೆರಿಕವು ಎಚ್ಚರಿಕೆ ನೀಡಿದ ನಂತರ ತೆರವು ಕಾರ್ಯಾಚರಣೆಯನ್ನು ಬೆಲ್ಜಿಯಂ ಸ್ಥಗಿತಗೊಳಿಸಿದೆ.

ಟರ್ಕಿ: 1,000 ಟರ್ಕಿ ನಾಗರಿಕರು ಸೇರಿದಂತೆ, ಒಟ್ಟು 1,400 ಜನರನ್ನು ಟರ್ಕಿ ಈವರೆಗೆ ತೆರವು ಮಾಡಿದೆ. ಈಗ ಅಫ್ಗಾನಿಸ್ತಾನದಲ್ಲಿರುವ ಟರ್ಕಿ ಸೈನಿಕರನ್ನು ತೆರವು ಮಾಡುವ ಕಾರ್ಯಾಚರಣೆ ಆರಂಭಿಸಲಾಗಿದೆ. ಒಂದೆರಡು ದಿನಗಳಲ್ಲಿ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಟರ್ಕಿ ಹೇಳಿದೆ.

ಪೋಲಂಡ್‌ ಈವರೆಗೆ 900 ಜನರನ್ನು ತೆರವು ಮಾಡಿದೆ. ಅದರಲ್ಲಿ 300 ಮಕ್ಕಳು, 300 ಮಹಿಳೆಯರು ಸೇರಿದ್ದಾರೆ. ಗುರುವಾರ ರಾತ್ರಿ ವೇಳೆಗೆ ತೆರವು ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ ಎಂದು ಪೋಲಂಡ್‌ ಸರ್ಕಾರ ಹೇಳಿದೆ. ಈವರೆಗೆ 36,500 ಜನರನ್ನು ತೆರವು ಮಾಡಲು ಯುಎಇ ನೆರವು ನೀಡಿದೆ. ಅದರಲ್ಲಿ 8,500 ಜನರು ಯುಎಇಯಲ್ಲಿ ನೆಲೆಸಿದ್ದಾರೆ.

ಹಂಗರಿ ಈವರೆಗೆ 540 ಜನರನ್ನು ತೆರವು ಮಾಡಿದೆ.

ಡೆನ್ಮಾರ್ಕ್ ಈವರೆಗೆ 1,000 ಜನರನ್ನು ತೆರವು ಮಾಡಿದ್ದು, ಬುಧವಾರ ಸಂಜೆಗೆ ತೆರವು ಕಾರ್ಯಚರಣೆ ಸ್ಥಗಿತಗೊಳಿಸಲಾಗಿದೆ.

ಸ್ವಿಟ್ಜರ್ಲೆಂಡ್ ಮತ್ತು ಆಸ್ಟ್ರಿಯಾ ತೆರವು ಕಾರ್ಯಾಚರಣೆಗಾಗಿ ಜರ್ಮನಿಯನ್ನು ಆಶ್ರಯಿಸಿವೆ. ಎರಡೂ ದೇಶಗಳ ಇನ್ನೂ ಹಲವು ಮಂದಿ ಕಾಬೂಲ್‌ನಲ್ಲಿ ಉಳಿದಿದ್ದಾರೆ. ಜರ್ಮನಿ ಸೇನೆ ಅವರನ್ನು ತೆರವು ಮಾಡಲಿದೆ.

ಆಧಾರ: ಪಿಟಿಐ, ಎಎಫ್‌ಪಿ, ರಾಯಿಟರ್ಸ್, ವಿದೇಶಾಂಗ ವ್ಯವಹಾರಗಳ ಸಚಿವಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.