ADVERTISEMENT

ಕೇರಳದ ವೈಫಲ್ಯ, ಉತ್ತರ ಪ್ರದೇಶದ ಸಾಫಲ್ಯ: ಅದಲು ಬದಲಾದ ಕೋವಿಡ್‌ ಚಿತ್ರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಆಗಸ್ಟ್ 2021, 8:12 IST
Last Updated 26 ಆಗಸ್ಟ್ 2021, 8:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೊರೊನಾ ಸೋಂಕನ್ನು ನಿಯಂತ್ರಿಸುವಲ್ಲಿ ಕೇರಳವು ಅತ್ಯಂತ ಸಮರ್ಪಕ ಮಾದರಿಯನ್ನು ಅಳವಡಿಸಿಕೊಂಡಿದೆ ಎಂಬ ಹೊಗಳಿಕೆ ಈ ಹಿಂದೆ ವ್ಯಕ್ತವಾಗಿತ್ತು. ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆಯುಳ್ಳ ಉತ್ತರ ಪ್ರದೇಶವು ಸಾಂಕ್ರಾಮಿಕವನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ಟೀಕೆಗಳು ಕೇಳಿಬಂದಿದ್ದವು. ಆದರೀಗ, ಈ ಎರಡು ರಾಜ್ಯಗಳ ಚಿತ್ರಣವೇ ಅದಲು ಬದಲಾಗಿ ಹೋಗಿದೆ.

ದೇಶದಲ್ಲಿ ದಾಖಲಾಗುತ್ತಿರುವ ಒಟ್ಟು ಹೊಸ ಪ್ರಕರಣಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪ್ರಕರಣಗಳು ಕೇರಳದಿಂದ ವರದಿಯಾಗುತ್ತಿವೆ. ಆದರೆ, ಎರಡನೇ ಅಲೆಯಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದ ಉತ್ತರ ಪ್ರದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಅತ್ಯಂತ ಕನಿಷ್ಠ ಪ್ರಮಾಣದಲ್ಲಿದೆ.

ಕೇರಳವು ಒಟ್ಟು 3.5 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು, ಆಗಸ್ಟ್ 25ರಂದು 31,445 ಹೊಸ ಪ್ರಕರಣಗಳು ವರದಿಯಾಗಿವೆ. ದೇಶದ ಒಟ್ಟು ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ಕೇರಳದಲ್ಲಿ ದಾಖಲಾಗಿವೆ. ಆದರೆ, ಉತ್ತರ ಪ್ರದೇಶವು ಸುಮಾರು 24 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಅಲ್ಲಿ ಕೇವಲ 22 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ.

ADVERTISEMENT

ಆಗಸ್ಟ್ 25 ರಂದು ಕೇರಳದಲ್ಲಿ 215 ಸೋಂಕಿತರು ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿ ಕೇವಲ ಇಬ್ಬರು ಸೋಂಕಿತರು ಅಸುನೀಗಿದ್ದಾರೆ. ಉತ್ತರ ಪ್ರದೇಶದಲ್ಲಿ ಈಗ ಕೇವಲ 345 ಸಕ್ರಿಯ ಪ್ರಕರಣಗಳಿದ್ದು, ಕೇರಳದಲ್ಲಿ ಒಟ್ಟು 1.7 ಲಕ್ಷ ಸಕ್ರಿಯ ಪ್ರಕರಣಗಳಿವೆ.

'ಹೆಚ್ಚಿನ ಸಂಖ್ಯೆಯ ಪರೀಕ್ಷೆಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ' ಎಂದು ಕೇರಳ ಸರ್ಕಾರ ವಾದಿಸುತ್ತಿದೆ. ಆದರೆ, ಎರಡೂ ರಾಜ್ಯಗಳ ಅಂಕಿ-ಸಂಖ್ಯೆಗಳನ್ನು ವಿಶ್ಲೇಷಿಸಿದಾಗ ಕೇರಳ ಸರ್ಕಾರದ ಈ ವಾದ ಸಮರ್ಪಕವಾಗಿಲ್ಲ ಎಂಬುದು ತಿಳಿದುಬರುತ್ತದೆ.

ಆಗಸ್ಟ್‌ 25ರಂದು ಕೇರಳವು 1.65 ಲಕ್ಷ ಪರೀಕ್ಷೆಗಳನ್ನು ನಡೆಸಿ, 31,445 ಪಾಸಿಟಿವ್ ಪ್ರಕರಣಗಳನ್ನು ಪತ್ತೆಹಚ್ಚದೆ. ಅದೇ ದಿನ, ಉತ್ತರ ಪ್ರದೇಶವು 1.87 ಲಕ್ಷ ಪರೀಕ್ಷೆಗಳನ್ನು ಮಾಡಿದ್ದು, 22 ಹೊಸ ಪ್ರಕರಣಗಳು ವರದಿಯಾಗಿವೆ.

ಕೇರಳದ ಪಾಸಿಟಿವಿಟಿ ದರವು ಶೇ 19.03ಕ್ಕೆ ತಲುಪಿದ್ದು, ಉತ್ತರ ಪ್ರದೇಶದಲ್ಲಿ ಶೇ 0.01ಕ್ಕೆ ಇಳಿದಿದೆ. ಉತ್ತರ ಪ್ರದೇಶದಲ್ಲಿ ಶೇ 60ರಷ್ಟು (1.15 ಲಕ್ಷ) ಆರ್‌ಟಿ-ಪಿಸಿಆರ್ ಪರೀಕ್ಷೆಗಳಾದರೆ, ಕೇರಳದಲ್ಲಿ ಶೇ 38ರಷ್ಟು (62,428) ಆರ್‌ಟಿ-ಪಿಸಿಆರ್ ಪರೀಕ್ಷೆಗಳಾಗಿವೆ.

ಉತ್ತರ ಪ್ರದೇಶವು ಈ ವರೆಗೆ ಸುಮಾರು 7.10 ಕೋಟಿ ಪರೀಕ್ಷೆಗಳನ್ನು ನಡೆಸಿದೆ. ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 32,000 ಪರೀಕ್ಷೆಗಳನ್ನು ಮಾಡಿದೆ. ಆದರೆ, ಕೇರಳವು ಒಟ್ಟು 3.06 ಕೋಟಿ ಪರೀಕ್ಷೆಗಳನ್ನು ಮಾಡಿದೆ. ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಸುಮಾರು 87,000 ಪರೀಕ್ಷೆಗಳನ್ನು ನಡೆಸಿದೆ.

ತಜ್ಞರ ಎಚ್ಚರಿಕೆಯನ್ನೂ ಗಾಳಿಗೆ ತೂರಿದ ಕೇರಳ ಸರ್ಕಾರ

ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರದ ತಂಡವು ಕೇರಳಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತು. ಓಣಂ ಹಬ್ಬದ ಬಳಿಕ ಪಾಸಿಟಿವಿಟಿ ದರವು ಶೇ 20 ದಾಟಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಬಕ್ರೀದ್‌ ಸಂದರ್ಭದಲ್ಲಿ ಕೆಲವು ದಿನಗಳ ಮಟ್ಟಿಗೆ ಕೋವಿಡ್ ನಿರ್ಬಂಧಗಳನ್ನು ಸಡಿಲಿಸಲಾಗಿತ್ತು. ಜುಲೈ ಕೊನೆಗೆ ಪ್ರತಿ ದಿನ ಕೋವಿಡ್ ಪ್ರಕರಣಗಳ ಸಂಖ್ಯೆ 20 ಸಾವಿರ ಗಡಿ ದಾಟಲು ಆರಂಭವಾಗಿತ್ತು. ಮತ್ತೊಂದೆಡೆ, ಉತ್ತರ ಪ್ರದೇಶದಲ್ಲಿ ಎರಡನೇ ಅಲೆಯ ನಂತರದ ವಾರಾಂತ್ಯಗಳಲ್ಲಿ ಕಠಿಣ ಲಾಕ್‌ಡೌನ್ ಅನ್ನು ಜಾರಿಗೊಳಿಸಿತ್ತು. ಕನ್ವರ್‌ ಯಾತ್ರೆಗಳಂತಹ ಧಾರ್ಮಿಕ ಆಚರಣೆಗಳನ್ನು ರದ್ದುಗೊಳಿಸುವಂತೆ ಯುಪಿ ಸರ್ಕಾರ ಮನವಿ ಮಾಡಿತ್ತು.

ಉತ್ತರ ಪ್ರದೇಶದ 75 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ಈಗ ಸಕ್ರಿಯ ಕೋವಿಡ್ ಪ್ರಕರಣಗಳಿಲ್ಲ ಮತ್ತು ಅನೇಕ ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ. ಉತ್ತರ ಪ್ರದೇಶದಲ್ಲಿ ಸಕ್ರಿಯ ಪ್ರಕರಣಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದರೆ, ಕೇರಳದಲ್ಲಿ ಪ್ರತಿದಿನ ಹೆಚ್ಚುತ್ತಿವೆ.

ಕೇರಳದಲ್ಲಿ ಕೋವಿಡ್‌ನಿಂದ ಈ ವರೆಗೆ 20,000 ಜನರು ಮೃತಪಟ್ಟಿದ್ದರೆ, ಉತ್ತರ ಪ್ರದೇಶದಲ್ಲಿ 22,700 ಸೋಂಕಿತರು ಸಾವಿಗೀಡಾಗಿದ್ದಾರೆ. ಆದರೆ, ಉತ್ತರ ಪ್ರದೇಶವು ಕೇರಳಕ್ಕಿಂತ ಸುಮಾರು ಏಳು ಪಟ್ಟು ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.

ಕೇರಳದ ವಿರುದ್ಧ ಯೋಜಿತ ಅಭಿಯಾನ ನಡೆಯುತ್ತಿದೆ ಎಂದಿದ್ದ ಆರೋಗ್ಯ ಸಚಿವೆ

'ಕೇರಳದ ವಿರುದ್ಧ ಯೋಜಿತ ಅಭಿಯಾನ ನಡೆಯುತ್ತಿದೆ. ನಮ್ಮಲ್ಲಿ ಉತ್ತಮ ರಕ್ಷಣಾ ಕಾರ್ಯವಿಧಾನವಿದೆ ಎಂದು ವಿವಿಧ ರಾಜ್ಯಗಳ ತಜ್ಞರು ಹೇಳಿದ್ದಾರೆ. ಕೋವಿಡ್‌ ತಡೆಗಟ್ಟುವ ಕಾರ್ಯವಿಧಾನವೂ ನಮ್ಮಲ್ಲಿ ಉತ್ತಮವಾಗಿದೆ' ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಈ ಹಿಂದೆ ಸಮರ್ಥಿಸಿಕೊಂಡಿದ್ದರು.

ಆದರೆ, ಈಗ ಬೆಳಕಿಗೆ ಬರುತ್ತಿರುವ ಅಂಕಿ-ಸಂಖ್ಯೆಗಳಿಗೂ ಕೇರಳ ಆರೋಗ್ಯ ಸಚಿವರು ನೀಡಿದ್ದ ಸಮರ್ಥನೆಗೂ ಸಂಬಂಧವೇ ಇಲ್ಲದಂತಾಗಿದೆ.

ಕರ್ನಾಟಕ ಸರ್ಕಾರದ ಕ್ರಮದ ವಿರುದ್ಧ ಹೈಕೋರ್ಟ್‌ ಮೊರೆ ಹೋಗಿದ್ದ ಕೇರಳ

ಕೇರಳದಿಂದ ಬರುವವರು ರಾಜ್ಯವನ್ನು ಪ್ರವೇಶಿಸುವುದಿದ್ದರೆ 72 ತಾಸುಗಳ ಒಳಗೆ ಪಡೆದ ಆರ್‌ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ಪತ್ರ ತೋರಿಸುವುದು ಕಡ್ಡಾಯ ಎಂದು ಕರ್ನಾಟಕ ಸರ್ಕಾರ ಆದೇಶಿಸಿತ್ತು. ಈ ಕ್ರಮದ ವಿರುದ್ಧ ಕೇರಳ ಸರ್ಕಾರವು ಅಲ್ಲಿನ ಹೈಕೋರ್ಟ್‌ ಮೊರೆಹೋಗಿತ್ತು.

'ನಾಗರಿಕ ಸಂಚಾರಕ್ಕೆ ಅನುಮತಿ ನಿಷೇಧಿಸಿರುವ ಕರ್ನಾಟಕ ಸರ್ಕಾರದ ಕ್ರಮದಿಂದ ಕೇಂದ್ರದ ಕೋವಿಡ್ ನಿಯಮಾವಳಿಯ ಉಲ್ಲಂಘನೆಯಾಗಿದೆ. ಇಂತಹ ಅಮಾನವೀಯ ನಾಗರಿಕ ಹಕ್ಕು ಉಲ್ಲಂಘನೆ ಕುರಿತು ಸ್ಪಷ್ಟೀಕರಣ ನೀಡಬೇಕು' ಎಂದು ಕರ್ನಾಟಕಕ್ಕೆ ಕೇರಳ ಹೈಕೋರ್ಟ್ ನೋಟಿಸ್ ಅನ್ನೂ ಜಾರಿಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.