ADVERTISEMENT

‘ಜನತಾ ಕರ್ಫ್ಯೂ’ಗೆ ಒಂದು ವರ್ಷ: ಕೋವಿಡ್ ಕಾಲದ ಕಾಲಾನುಕ್ರಮದ ಚಿತ್ರಣ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಮಾರ್ಚ್ 2021, 9:50 IST
Last Updated 23 ಮಾರ್ಚ್ 2021, 9:50 IST
ಪ್ರಧಾನಿ ನರೇಂದ್ರಮೋದಿ: ಪಿಟಿಐ ಚಿತ್ರ
ಪ್ರಧಾನಿ ನರೇಂದ್ರಮೋದಿ: ಪಿಟಿಐ ಚಿತ್ರ   

ನವದೆಹಲಿ: 2020ರ ವರ್ಷ ಇಡೀ ಜಗತ್ತಿಗೆ ಒಂದು ರೀತಿಯ ಶಾಪದಂತೆ ಕಾಡಿತ್ತು. ವೇಗವಾಗಿಓಡುತ್ತಿದ್ದ ಜಗತ್ತಿಗೆ ಕೊರೊನಾ ವೈರಸ್ಬ್ರೇಕ್ ಹಾಕಿತ್ತು. ಶರವೇಗದಲ್ಲಿ ಹರಡುತ್ತಿದ್ದ ಸೋಂಕಿನಿಂದ ಜನರ ರಕ್ಷಣೆಗೆ ಭಾರತವು ಸೇರಿದಂತೆ ಬಹುತೇಕ ದೇಶಗಳು ಲಾಕ್‌ಡೌನ್ ಮೊರೆಹೋದವು.

ಮಾರ್ಚ್ 22, 2020 ರಂದು ಕೊರೊನಾ ಸೋಂಕು ಹರಡುವಿಕೆ ತಡೆಯಲು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಮನೆಯೊಳಗೆ ಇರಬೇಕೆಂದು ಘೋಷಿಸಿದರು.

ಹಾಗಾಗಿ, 14 ಗಂಟೆಗಳ ಕಾಲ ‘ಜನತಾ ಕರ್ಫ್ಯೂ’ ಜಾರಿಗೆ ಬಂದಿತು. ಅಷ್ಟೊತ್ತಿಗೆ ಕೋವಿಡ್ ದೇಶದಲ್ಲಿ ನಾಲ್ಕು ಜೀವಗಳನ್ನು ಬಲಿ ತೆಗೆದುಕೊಂಡಿತ್ತು. 169 ಜನರಿಗೆ ಸೋಂಕು ತಗುಲಿತ್ತು.

ADVERTISEMENT

ಅದಾದ ಬಳಿಕ ಹಂತ ಹಂತವಾಗಿ ಲಾಕ್ ಡೌನ್ ವಿಸ್ತರಿಸಲಾಯಿತು. ಅದರೆ, ವರ್ಷ ಕಳೆದ ನಂತರವೂ ಜಗತ್ತು ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ದೇಶದಲ್ಲಿ ಮತ್ತೆ ಕೊರೊನಾ ಅಬ್ಬರ ಶುರುವಾಗಿದೆ. ಸೋಮವಾರ 130 ದಿನಗಳಲ್ಲೇ ಅತ್ಯಧಿಕ ಕೋವಿಡ್ ಪ್ರಕರಣ ಪತ್ತೆಯಾಗಿವೆ.

ಜನತಾ ಕರ್ಫ್ಯೂ ನಂತರದ ಕಾಲಾನುಕ್ರಮದ ಚಿತ್ರಣ ಇಲ್ಲಿದೆ.

ಮಾರ್ಚ್ 23: ವಿದೇಶಗಳಿಂದ ಕೊರೊನಾ ಸೋಂಕು ಹರಡುತ್ತಿದ್ದರಿಂದ ಭಾರತವು ಅಂತರರಾಷ್ಟ್ರೀಯ ವಿಮಾನಗಳ ಆಗಮನ ಮತ್ತು ನಿರ್ಗಮನವನ್ನು ನಿರ್ಬಂಧಿಸಿತು.

ಮಾರ್ಚ್ 24: ಕೊರೊನಾ ತಡೆಗೆ ದೇಶದಲ್ಲಿ ಪ್ರಧಾನಿ ಮೋದಿ 21 ದಿನಗಳ ಲಾಕ್‌ಡೌನ್ ಘೋಷಿಸಿದರು. ಪರಿಸ್ಥಿತಿ ಗಂಭೀರತೆ ಅರಿತು ಪರಿಗಣಿಸಬೇಕು. ಅಗತ್ಯ ಸರಕುಗಳು ಲಭ್ಯವಿರುತ್ತವೆ ಎಂದು ಅವರು ಟ್ವೀಟ್‌ನಲ್ಲಿ ಭರವಸೆ ನೀಡಿದ್ದರು.

ಮಾರ್ಚ್ 25: ಭಾರತದಲ್ಲಿ 600 ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದವು. ಉದ್ಯೋಗ ಅರಸಿ ವಲಸೆ ಬಂದಿದ್ದ ಹಲವು ವಲಸೆ ಕಾರ್ಮಿಕರು ಮನೆಗಳಿಗೆ ಹಿಂದಿರುಗಿದರು.

ಮಾರ್ಚ್ 26: ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದ ಸಂಕಷ್ಟಕೀಡಾಗಿದ್ದ ಲಕ್ಷಾಂತರ ಬಡವರಿಗೆ ಪರಿಹಾರ ನೀಡುವ ಉದ್ದೇಶದಿಂದ ನೇರ ನಗದು ವರ್ಗಾವಣೆ ಮತ್ತು ಆಹಾರ ಭದ್ರತಾ ಕ್ರಮಗಳಿಗಾಗಿ ₹ 1.7 ಲಕ್ಷ ಕೋಟಿ ಆರ್ಥಿಕ ಉತ್ತೇಜನ ಪ್ಯಾಕೇಜ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.

ಮಾರ್ಚ್ 27: ಎಲ್ಲ ಬ್ಯಾಂಕುಗಳು, ಹೌಸಿಂಗ್ ಫೈನಾನ್ಸ್ ಕಂಪನಿಗಳು (ಎಚ್‌ಎಫ್‌ಸಿ) ಮತ್ತು ಎನ್‌ಬಿಎಫ್‌ಸಿಗಳಲ್ಲಿ ಪಡೆದಿರುವ ಸಾಲಕ್ಕೆ ಮಾರ್ಚ್ 1, 2020 ರಿಂದ ಆರ್‌ಬಿಐ 3 ತಿಂಗಳ ಮೊರಟೋರಿಯಮ್ ಘೋಷಿಸಿತು .

ಮಾರ್ಚ್ 31: ದೆಹಲಿಯ ನಿಜಾಮುದ್ದೀನ್ ಪ್ರದೇಶವು ದೇಶದ ಕೊರೊನಾ ವೈರಸ್ ‘ಹಾಟ್‌ಸ್ಪಾಟ್‌’ಗಳಲ್ಲಿ ಒಂದಾಗಿ ಹೊರಹೊಮ್ಮಿತು, ತಬ್ಲಿಘಿ ಧಾರ್ಮಿಕ ಸಭೆಯೊಂದರಲ್ಲಿ ಪಾಲ್ಗೊಂಡ ಹಲವರಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗಿತ್ತು. ಅಷ್ಟೊತ್ತಿಗೆ ದೇಶದಲ್ಲಿ ಒಟ್ಟು 1,397 ಕೋವಿಡ್ ಪ್ರಕರಣ ದಾಖಲಾಗಿ, 35 ಸಾವು ಸಂಭವಿಸಿದ್ದವು.

ಏಪ್ರಿಲ್ 5: ಕೊರೊನಾ ವೈರಸ್ ಕತ್ತಲೆಯನ್ನು ಹೋಗಲಾಡಿಸಲು ದೇಶದಾದ್ಯಂತ ಒಂಬತ್ತು ನಿಮಿಷಗಳ ಕಾಲ ದೀಪ ಬೆಳಗಿಸಲು ಪ್ರಧಾನ ಮಂತ್ರಿ ನರೇಂದ್ರಮೋದಿ ಕರೆಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿತು. ಅಂದಿಗೆ ಕೋವಿಡ್ ಸೋಂಕಿತರ ಸಂಖ್ಯೆ 3,577ಕ್ಕೆ ಮತ್ತು ಸಾವಿನ ಸಂಖ್ಯೆ 83ಕ್ಕೆ ಏರಿತ್ತು.

ಏಪ್ರಿಲ್ 14: ಕೇಂದ್ರ ಸರ್ಕಾರವು ಲಾಕ್‌ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಿತು. ಅಷ್ಟೊತ್ತಿಗೆ ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ 10,000 ಕೋವಿಡ್ ಪಾಸಿಟಿವ್ ಕೇಸ್ ದೃಢಪಟ್ಟಿದ್ದವು. ಭಾರತದಲ್ಲಿ ಒಟ್ಟು 2,30,000 ವ್ಯಕ್ತಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

ಏಪ್ರಿಲ್ 16: ಏಪ್ರಿಲ್ 20 ರಿಂದ ಇ-ಕಾಮರ್ಸ್, ಕೃಷಿ ಉದ್ಯಮವನ್ನು ಪುನರಾರಂಭಿಸಲು ಸರ್ಕಾರ ಅನುಮತಿಸಿತ್ತು. ಕೊರೊನಾ ವೈರಸ್‌ ಕಡಿಮೆ ಪರಿಣಾಮ ಇರುವ ಒಳನಾಡಿನ ಕೃಷಿ ಚಟುವಟಿಕೆಗಳು, ರಸ್ತೆಗಳು ಮತ್ತು ಕಟ್ಟಡಗಳ ನಿರ್ಮಾಣ ಚಟುವಟಿಕೆಗೂ ಸರ್ಕಾರ ಅವಕಾಶ ನೀಡಿತ್ತು.

ಏಪ್ರಿಲ್ 25: ಪುರಸಭೆಯ ವ್ಯಾಪ್ತಿಯ ವಸತಿ ಸಮುಚ್ಚಯಗಳಲ್ಲಿ ಅಂಗಡಿಗಳನ್ನು ಶೇ. 50 ರಷ್ಟು ಸಿಬ್ಬಂದಿ ಬಳಸಿಕೊಂಡು ತೆರೆಯಲು ಸರ್ಕಾರ ಅನುಮತಿಸಿತ್ತು.

ಏಪ್ರಿಲ್ 30: ಕೋವಿಡ್ ರೋಗಲಕ್ಷಣಗಳಿಲ್ಲದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಿಕರು ಮತ್ತು ಪ್ರವಾಸಿಗರು ತಮ್ಮ ರಾಜ್ಯಗಳಿಗೆ ಮರಳಲು ಕೇಂದ್ರವು ಅವಕಾಶ ನೀಡಿತು.

ಮೇ 1: ‘ವಂದೇ ಮಾತರಂ’ ಯೋಜನೆಯಡಿ ವಿಶೇಷ ವಿಮಾನಗಳ ಮೂಲಕ ವಿದೇಶಗಳಲ್ಲಿ ನೆಲೆಸಿದ್ದ ಭಾರತೀಯರನ್ನು ಕರೆತರುವ ಪ್ರಕ್ರಿಯೆ ಆರಂಭಿಸಲಾಯಿತು.

ಮೇ 1: ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಬರುವ ಜಿಲ್ಲೆಗಳಲ್ಲಿ ಸ್ವಲ್ಪ ವಿನಾಯಿತಿಯೊಂದಿಗೆ ಮೇ 17 ರವರೆಗೆ ಲಾಕ್‌ಡೌನ್ ವಿಸ್ತರಿಸಲಾಯಿತು. ಎಲ್ಲ ಕೆಂಪು ವಲಯ ಜಿಲ್ಲೆಗಳಲ್ಲಿ ಕಟ್ಟುನಿಟ್ಟಾದ ಲಾಕ್ ಡೌನ್ ಮುಂದುವರಿಯುತ್ತದೆ. ಭಾರತದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 42,505 ಕ್ಕೆ ಏರಿದ್ದು, 1,391 ಜನರು ಸಾವನ್ನಪ್ಪಿದ್ದರು.

ಮೇ 4: ಭಾರತವು ಲಾಕ್‌ಡೌನ್ 3.0 ಕ್ಕೆ ಪ್ರವೇಶಿಸಿತ್ತು.

ಮೇ 12: ಕೋವಿಡ್‌ನಿಂದ ತತ್ತರಿಸಿದ್ದ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ₹ 20 ಲಕ್ಷ ಕೋಟಿ ಆತ್ಮನಿರ್ಭರ ಪ್ಯಾಕೇಜ್ ಘೋಷಿಸಿದರು. ಈ ಪ್ಯಾಕೇಜ್ ಗಾತ್ರವು ಜಿಡಿಪಿಯ 10% ರಷ್ಟಾಗಿದ್ದು, ಇದರಲ್ಲಿ ಆರ್‌ಬಿಐ ಮತ್ತು ಈ ಹಿಂದೆ ಹಣಕಾಸು ಸಚಿವರು ಮಾಡಿದ ಪ್ರಕಟಣೆಗಳು ಸೇರಿವೆ ಎಂದು ಹೇಳಿದರು.

ಮೇ 16: ಒಟ್ಟು 85,940 ಕೋವಿಡ್ ಪ್ರಕರಣಗಳನ್ನು ಹೊಂದಿದ್ದ ಭಾರತವು ಚೀನಾವನ್ನು ಹಿಂದಿಕ್ಕಿತು.

ಮೇ 17: ಮೇ 31ರವರೆಗೆ ಲಾಕ್‌ಡೌನ್ ವಿಸ್ತರಿಸಲಾಯಿತು.

ಮೇ 31: ಭಾರತದಲ್ಲಿ ಕೋವಿಡ್‌ನಿಂದ ಒಟ್ಟು 5,000 ಸಾವು ದಾಖಲಾಗಿದ್ದವು.

ಜೂನ್ 8: ಅನ್‌ಲಾಕ್ 1.0: 75 ದಿನಗಳ ಸುದೀರ್ಘ ಲಾಕ್ ಡೌನ್ ಬಳಿಕ ಹಂತ ಹಂತವಾಗಿ ಅನ್‌ಲಾಕ್‌ಗೆ ಚಾಲನೆ ಸಿಕ್ಕಿತು. ಒಂದೇ ದಿನ 9,983 ಹೊಸ ಪ್ರಕರಣ ದಾಖಲಾದವು. ಭಾರತದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 2,60,093 ರಷ್ಟಾಗಿ 7,263 ಮಂದಿ ಸಾವನ್ನಪ್ಪಿದ್ದರು.

ಜೂನ್ 17: ಭಾರತದಲ್ಲಿ ಒಂದೇ ದಿನ ಅತಿ ಹೆಚ್ಚು 2,003 ಕೋವಿಡ್ -19 ಸೋಂಕಿತರು ಸಾವಿಗೀಡಾಗುವುದರೊಂದಿಗೆ ದೇಶಕ್ಕೆ ಆಘಾತವಾಗಿತ್ತು.

ಜುಲೈ 1: ದೇಶವು ಅನ್‌ಲಾಕ್ಕ್ 2.0ಗೆ ಕಾಲಿಟ್ಟಿತ್ತು. ಸೋಂಕಿತರ ಸಂಖ್ಯೆ ಒಟ್ಟು 6,00,000 ದಾಟಿತ್ತು. ಸುಮಾರು 17,495 ಸಾವು ಸಂಭವಿಸಿದ್ದವು.

ಜುಲೈ 15: ಭಾರತದಲ್ಲಿ ದೇಶೀಯ ಕೋವಿಡ್ -19 ಲಸಿಕೆ ಕೊವ್ಯಾಕ್ಸಿನ್ ಮೊದಲ ಹಂತದ ಕ್ಲಿನಿಕಲ್ ಪ್ರಯೋಗ ಆರಂಭವಾಯಿತು. ಝೈಡಸ್ ಕ್ಯಾಡಿಲಾ ಸಹ ತನ್ನ ಝೈಕೋವ್-ಡಿ ಲಸಿಕೆಯ ಮಾನವ ಪ್ರಯೋಗಗಳನ್ನು ಸಹ ಪ್ರಾರಂಭಿಸಿತು.

ಜುಲೈ 17: ಭಾರತವು ಫ್ರಾನ್ಸ್ ಮತ್ತು ಅಮೆರಿಕದ ಜೊತೆ ಪ್ರತ್ಯೇಕ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡು ಅಂತರರಾಷ್ಟ್ರೀಯ ವಾಣಿಜ್ಯ ವಿಮಾನಗಳ ಹಾರಾಟ ಪುನರಾರಂಭಗೊಂಡವು. ಭಾರತದ ಒಟ್ಟು ಕೋವಿಡ್ -19 ಪ್ರಕರಣಗಳು 10 ಲಕ್ಷ ದಾಟಿದ್ದವು. ಸಾವಿನ ಸಂಖ್ಯೆ 25,600 ಆಗಿತ್ತು.

ಆಗಸ್ಟ್ 1: ಅನ್‌ಲಾಕ್ 3.0 ನೇ ಹಂತವು ಜಾರಿಗೆ ಬರುತ್ತದೆ, ಜಿಮ್ನಾಷಿಯಂಗಳು ಮತ್ತು ಯೋಗ ಕೇಂದ್ರಗಳು ಕಾರ್ಯನಿರ್ವಹಿಸಲು ಸರ್ಕಾರವು ಅವಕಾಶ ನೀಡಿತು. ರಾತ್ರಿ ಕರ್ಫ್ಯೂ ಆದೇಶವನ್ನು ಹಿಂತೆಗೆದುಕೊಂಡಿತು.

ಆಗಸ್ಟ್ 29: ಕೇಂದ್ರವು ಅನ್‌ಲಾಕ್ 4.0 ಮಾರ್ಗಸೂಚಿಗಳನ್ನು ನೀಡುತ್ತದೆ, ಸೆಪ್ಟೆಂಬರ್ 7 ರಿಂದ ಮೆಟ್ರೋ ಸೇವೆಗಳನ್ನು ಪ್ರಾರಂಭಿಸಲು ಅನುವು ಮಾಡಿಕೊಟ್ಟಿತು.ಸೆಪ್ಟೆಂಬರ್ 21 ರಿಂದ 100 ಜನರುಮಾತ್ರ ಪಾಲ್ಗೊಳ್ಳಬೇಕೆಂಬ ಮಿತಿ ಹೇರಿದೊಡ್ಡ ಕಾರ್ಯಕ್ರಮಗಳಿಗೆಅನುಮತಿಸಲಾಯಿತು.

ಸೆಪ್ಟೆಂಬರ್ 21: ಆರು ತಿಂಗಳ ಬಳಿಕ ದೇಶದ ಹಲವು ರಾಜ್ಯಗಳಲ್ಲಿ ಶಾಲೆಗಳು ಭಾಗಶಃ ತೆರೆಲ್ಪಟ್ಟವು. 9 ರಿಂದ 12 ನೇ ತರಗತಿಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಕರಿಂದ ಮಾರ್ಗದರ್ಶನ ಪಡೆಯಲು ಸ್ವಯಂಪ್ರೇರಿತ ಆಧಾರದ ಮೇಲೆ ಶಾಲೆಗಳಿಗೆ ತೆರಳಲು ಅನುವು ಮಾಡಿಕೊಡಲಾಯ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.