ADVERTISEMENT

ಆಮ್ಲಜನಕ ತಯಾರಿಕಾ ಘಟಕ ಸ್ಥಾಪನೆ ಯೋಜನೆ: ಜಾರಿಗೆ ನಿರ್ಲಕ್ಷ್ಯ; ಸಮಸ್ಯೆ ಉಲ್ಬಣ

ಪಿಎಂ-ಕೇರ್ಸ್‌ ಅನುದಾನ

ಜಯಸಿಂಹ ಆರ್.
Published 26 ಏಪ್ರಿಲ್ 2021, 19:30 IST
Last Updated 26 ಏಪ್ರಿಲ್ 2021, 19:30 IST
   

ದೇಶದಲ್ಲಿ ಆಮ್ಲಜನಕದ ಕೊರತೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು, ದೇಶದ ವಿವಿಧೆಡೆ 162 ಪ್ರೆಷರ್ ಸ್ವಿಂಗ್ ಅಡ್ಸಾರ್ಪ್ಶನ್ (ಪಿಎಸ್‌ಎ) ಆಮ್ಲಜನಕ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಯೋಜನೆ ಹಾಕಿಕೊಂಡಿತ್ತು. ಇದಕ್ಕಾಗಿ 2020ರ ಅಕ್ಟೋಬರ್ 21ರಂದು ಟೆಂಡರ್ ಕರೆಯಲಾಗಿತ್ತು (ಟೆಂಡರ್ ಸಂಖ್ಯೆ: CMSS/PROC/ 2020-21/PSA PLANT/018 ). 2020ರ ನವೆಂಬರ್ 11ರಂದು ಟೆಂಡರ್ ಅಂತಿಮವಾಗಿತ್ತು.

ಬಿಡ್ಡಿಂಗ್‌ನಲ್ಲಿ ಆಯ್ಕೆ ಆದವರಿಗೆ 2020ರ ಡಿಸೆಂಬರ್‌ 12ರಂದು ಯೋಜನೆ ಅನುಷ್ಠಾನದ ಗುತ್ತಿಗೆ ನೀಡಲಾಗಿತ್ತು. ಕಾಮಗಾರಿಗೆ ಲೆಟರ್‌ ಆಫ್ ಕ್ರೆಡಿಟ್ ನೀಡಿ 45 ದಿನಗಳ ಒಳಗೆ ಈ ಘಟಕಗಳನ್ನು ಸ್ಥಾಪಿಸಬೇಕು ಎಂದು ಟೆಂಡರ್‌ನಲ್ಲಿ ಷರತ್ತು ವಿಧಿಸಲಾಗಿತ್ತು. ಆದರೆ 2021ರ ಏಪ್ರಿಲ್‌ 18ರ ವೇಳೆಗೆ ಇಂತಹ 33 ಘಟಕಗಳನ್ನಷ್ಟೇ ಸ್ಥಾಪಿಸಲಾಗಿತ್ತು. ಅಂದರೆ, ಗುತ್ತಿಗೆ ನೀಡಿ ಐದು ತಿಂಗಳು ಕಳೆದರೂ ಯೋಜನೆ ಶೇ 20ರಷ್ಟು ಮಾತ್ರ ಅನುಷ್ಠಾನವಾಗಿದೆ.

ಆಮ್ಲಜನಕ ಕೊರತೆ ಸಂಬಂಧ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ವೇಳೆ ಕೇಂದ್ರ ಆರೋಗ್ಯ ಸಚಿವಾಲಯವು ಯೋಜನೆ ಅನುಷ್ಠಾನದ ಬಗ್ಗೆ ಮಾಹಿತಿ ನೀಡಿದೆ. ‘ಈಗಾಗಲೇ 33 ಘಟಕಗಳನ್ನು ಸ್ಥಾಪಿಸಲಾಗಿದೆ. ಏಪ್ರಿಲ್‌ ಅಂತ್ಯಕ್ಕೆ ಇನ್ನೂ 59 ಘಟಕಗಳು ಮತ್ತು ಮೇ ಅಂತ್ಯಕ್ಕೆ ಉಳಿದ 80 ಘಟಕಗಳು ಸ್ಥಾಪನೆಯಾಗಲಿವೆ. ದೆಹಲಿಗೆ 8 ಘಟಕಗಳನ್ನು ಹಂಚಿಕೆ ಮಾಡಲಾಗಿದೆ. ಅದರಲ್ಲಿ ಒಂದು ಘಟಕವನ್ನು ಸ್ಥಾಪಿಸಲಾಗಿದೆ’ ಎಂದು ಸಚಿವಾಲಯವು ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿತ್ತು.

ADVERTISEMENT

ಆದರೆ ಈಗಾಗಲೇ ಸ್ಥಾಪನೆಯಾಗಿರುವ 33 ಘಟಕಗಳಲ್ಲಿ ಎಷ್ಟು ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂಬುದರ ಬಗ್ಗೆ ಆರೋಗ್ಯ ಸಚಿವಾಲಯವು, ಹೈಕೋರ್ಟ್‌ಗೆ ಯಾವುದೇ ಮಾಹಿತಿ ನೀಡಿಲ್ಲ.

ಈಗ ಕೇಂದ್ರ ಸರ್ಕಾರವು ಇಂತಹ ಇನ್ನೂ 551 ಘಟಕಗಳನ್ನು ‘ಪಿಎಂಕೇರ್ಸ್‌’ ಅಡಿ ಸ್ಥಾಪಿಸುವುದಾಗಿ ಘೋಷಿಸಿದೆ. ಈ ಹೊಸ ಕಾರ್ಯಕ್ರಮಕ್ಕೆ ಸಂಬಂಧಿಸಿದ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

154 ಟನ್ ಸಾಮರ್ಥ್ಯ
ಪಿಎಂಕೇರ್ಸ್ ಅಡಿ ಸ್ಥಾಪಿಸಲಾಗುತ್ತಿರುವ ಈ 162 ಪಿಎಸ್‌ಎ ಆಮ್ಲಜನಕ ಘಟಕಗಳ ಒಟ್ಟು ಸಾಮರ್ಥ್ಯ 154 ಟನ್.

ಪಿಎಸ್‌ಎ ಘಟಕಗಳು ಅನಿಲ ಸ್ವರೂಪದ ಆಮ್ಲಜನಕವನ್ನು ಮಾತ್ರ ತಯಾರಿಸುತ್ತವೆ. ಈ ಘಟಕಗಳ ಸಾಮರ್ಥ್ಯವನ್ನು ‘ಪ್ರತಿ ನಿಮಿಷಕ್ಕೆ ಲೀಟರ್‌’ನಂತೆ (ಲೀಟರ್ ಪರ್ ಮಿನಿಟ್‌-ಎಲ್‌ಪಿಎಂ) ಲೆಕ್ಕಹಾಕಲಾಗುತ್ತದೆ. 24 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು ಸಾಮಾನ್ಯ ಒತ್ತಡದಲ್ಲಿ ಒಂದು ಲೀಟರ್‌ ಅನಿಲ ಆಮ್ಲಜನಕದ ತೂಕ 1.43 ಗ್ರಾಂ ಮಾತ್ರ.

ಈ ಎಲ್ಲಾ ಘಟಕಗಳು ದಿನದ 24 ಗಂಟೆಯೂ ಶೇ 100ರಷ್ಟು ಕಾರ್ಯದಕ್ಷತೆಯಲ್ಲಿ ಕೆಲಸ ಮಾಡಿದರೆ, ದಿನಕ್ಕೆ ಗರಿಷ್ಠ 11.5 ಕೋಟಿ ಲೀಟರ್ ಅನಿಲ ಆಮ್ಲಜನಕವನ್ನು ತಯಾರಿಸುತ್ತವೆ. ಈ ಅನಿಲ ಆಮ್ಲಜನಕವನ್ನು ದ್ರವೀಕೃತ ಆಮ್ಲಜನಕವಾಗಿ ಪರಿವರ್ತಿಸಿದರೆ, ಒಟ್ಟು 154 ಟನ್‌ ದ್ರವೀಕೃತ ಆಮ್ಲಜನಕ ಲಭ್ಯವಾಗುತ್ತದೆ.

ಕರ್ನಾಟಕಕ್ಕೆ ಎಷ್ಟು ಎಂಬ ಗೊಂದಲ
162 ಘಟಕಗಳನ್ನು ಸ್ಥಾಪಿಸುವ ಈ ಯೋಜನೆ ಅಡಿ, ಕರ್ನಾಟಕಕ್ಕೆ ಒಂದು ಘಟಕವೂ ಹಂಚಿಕೆಯಾಗಿಲ್ಲ. ಆದರೆ ದೆಹಲಿ ಹೈಕೋರ್ಟ್‌ಗೆ ಕೇಂದ್ರ ಆರೋಗ್ಯ ಸಚಿವಾಲಯವು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ‘2 ಘಟಕಗಳನ್ನು ಕರ್ನಾಟಕದಲ್ಲಿ ಈಗಾಗಲೇ ಸ್ಥಾಪಿಸಲಾಗಿದೆ’ ಎಂದು ವಿವರಿಸಲಾಗಿದೆ. ಇದೇ ಮಾಹಿತಿಯನ್ನು ಆರೋಗ್ಯ ಸಚಿವಾಲಯವು ಟ್ವೀಟ್ ಸಹ ಮಾಡಿತ್ತು. ಆದರೆ, ಕರ್ನಾಟಕದ ಯಾವ ಆಸ್ಪತ್ರೆಗಳಲ್ಲಿ ಈ ಘಟಕಗಳನ್ನು ಸ್ಥಾಪಿಸಲಾಗಿದೆ ಎಂಬ ಮಾಹಿತಿಯನ್ನು ಆರೋಗ್ಯ ಸಚಿವಾಲಯ ನೀಡಿಲ್ಲ.

‘ಪಿಎಂಕೇರ್ಸ್‌ ಅಡಿ ಕರ್ನಾಟಕಕ್ಕೆ 6 ಘಟಕಗಳು ಮಂಜೂರಾಗಿವೆ’ ಎಂದು ಕರ್ನಾಟಕದ ಆರೋಗ್ಯ ಸಚಿವ ಕೆ.ಸುಧಾಕರ್ ಅವರ ಕಚೇರಿಯು ‘ಪ್ರಜಾವಾಣಿ’ಗೆ ಮಾಹಿತಿ ನೀಡಿತ್ತು. ‘ರಾಜ್ಯದ ಪಾವಗಡ, ಶಿಕಾರಿಪುರ, ಮುಧೋಳ, ಯಲ್ಲಾಪುರ, ಚಿಂಚೋಳಿ ಮತ್ತು ಶೋರಾಪುರ ತಾಲ್ಲೂಕುಗಳ ಆಸ್ಪತ್ರೆಗಳಿಗೆ ತಲಾ 100 ಎಲ್‌ಪಿಎಂ ಸಾಮರ್ಥ್ಯದ ಒಂದು ಪಿಎಸ್‌ಎ ಘಟಕ ಮಂಜೂರಾಗಿದೆ. ಈ ತಿಂಗಳ ಅಂತ್ಯಕ್ಕೆ ಈ ಘಟಕಗಳು ಕಾರ್ಯಾರಂಭ ಮಾಡುತ್ತವೆ’ ಎಂದು ಆರೋಗ್ಯ ಸಚಿವರ ಕಚೇರಿಯು ಮಾಹಿತಿ ನೀಡಿದೆ.

ಈ ಘಟಕಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಟೆಂಡರ್‌ನಲ್ಲಿರುವ ಮಾಹಿತಿ, ಕೇಂದ್ರ ಆರೋಗ್ಯ ಸಚಿವಾಲಯವು ದೆಹಲಿ ಹೈಕೋರ್ಟ್‌ಗೆ ನೀಡಿರುವ ಮಾಹಿತಿ ಮತ್ತು ರಾಜ್ಯ ಆರೋಗ್ಯ ಸಚಿವರ ಕಚೇರಿ ನೀಡಿರುವ ಮಾಹಿತಿ ಪರಸ್ಪರ ವ್ಯತಿರಿಕ್ತವಾಗಿವೆ.

162 ಘಟಕಗಳ ಸ್ಥಾಪನೆ ಕಾರ್ಯಕ್ರಮದಲ್ಲಿ ರಾಜ್ಯಕ್ಕೆ ಒಂದೂ ಘಟಕ ಹಂಚಿಕೆಯಾಗಿಲ್ಲ. ಆದರೆ ಏಪ್ರಿಲ್ 22ರಂದು ಆರೋಗ್ಯ ಸಚಿವರ ಕಚೇರಿಯು ರಾಜ್ಯಕ್ಕೆ 6 ಘಟಕಗಳು ಹಂಚಿಕೆಯಾಗಿದೆ ಎಂದು ಹೇಳಿತ್ತು. ಕೇಂದ್ರ ಸರ್ಕಾರವು ಭಾನುವಾರವಷ್ಟೇ (ಏಪ್ರಿಲ್ 25) 551 ಪಿಎಸ್‌ಎ ಘಟಕಗಳನ್ನು ದೇಶದಾದ್ಯಂತ ಸ್ಥಾಪಿಸುತ್ತೇವೆ ಎಂದು ಹೇಳಿದೆ. ಆರೋಗ್ಯ ಸಚಿವ ಸುಧಾಕರ್ ಅವರ ಕಚೇರಿ ಹೇಳಿರುವ 6 ಘಟಕಗಳು, ಈಗ ಕೇಂದ್ರ ಸರ್ಕಾರ ಘೋಷಿಸಿರುವ ಕಾರ್ಯಕ್ರಮದ ಅಡಿಯಲ್ಲಿ ಬರುವುದಿಲ್ಲ.

ಆಮ್ಲಜನಕ, ಸಿಲಿಂಡರ್ ಖರೀದಿ
ಆಮ್ಲಜನಕ ಕೊರತೆಯನ್ನು ನಿವಾರಿಸುವ ಸಲುವಾಗಿ ಕೇಂದ್ರ ಸರ್ಕಾರವು ಏಪ್ರಿಲ್‌ ಮೂರನೇ ವಾರದಲ್ಲಿ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಜಾಗತಿಕ ಮಾರುಕಟ್ಟೆಯಿಂದ 50,000 ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕ ಖರೀದಿಸಲು ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದೆ. ಆರೋಗ್ಯ ಸಚಿವಾಲಯದ ಪರವಾಗಿ ಎಚ್‌ಎಲ್‌ಎಲ್ ಲೈಫ್‌ಕೇರ್ ಸಂಸ್ಥೆಯು ಏಪ್ರಿಲ್ 16ರಂದು ಈ ಸಂಬಂಧ ಜಾಗತಿಕ ಟೆಂಡರ್ ಕರೆದಿದೆ. ಏಪ್ರಿಲ್ 20ರಂದು ಪೂರ್ವ ಬಿಡ್ಡಿಂಗ್ ಸಭೆ ನಡೆದಿದೆ. ಏಪ್ರಿಲ್ 28ರಂದು ಬಿಡ್ಡಿಂಗ್‌ ತೆರೆಯಲಾಗುತ್ತದೆ.

ದೇಶದಲ್ಲಿ ಆಮ್ಲಜನಕ ಸಿಲಿಂಡರ್‌ಗಳ ಕೊರತೆ ಇದೆ. ಈ ಸಿಲಿಂಡರ್‌ಗಳ ಬೇಡಿಕೆ ಏರಿಕೆಯಾಗಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಿಂದ 1 ಲಕ್ಷ ಸಿಲಿಂಡರ್‌ಗಳನ್ನು ಖರೀದಿಸಲು ಕೇಂದ್ರೀಯ ವೈದ್ಯಕೀಯ ಸೇವಾ ಸೊಸೈಟಿ ಟೆಂಡರ್ ಕರೆದಿದೆ.

ಉತ್ಪಾದನೆ ಕಡಿಮೆ ಸಾಗಾಟವೂ ಸಮಸ್ಯೆ
‌ಕೈಗಾರಿಕಾ ಬಳಕೆಯ ಆಮ್ಲಜನಕ ಸೇರಿದಂತೆ ಭಾರತವು ಪ್ರತಿನಿತ್ಯ 7,100 ಟನ್‌ನಷ್ಟು ಆಮ್ಲಜನಕ ತಯಾರಿಕಾ ಸಾಮರ್ಥ್ಯ ಹೊಂದಿದೆ. ಇದರ ಪೂರ್ತಿ ಸಾಮರ್ಥ್ಯವನ್ನು ಬಳಕೆ ಮಾಡಿದರೆ ಈಗಿನ ತುರ್ತು ಬೇಡಿಕೆಯನ್ನು ಈಡೇರಿಸಿಕೊಳ್ಳಲು ಸಾಧ್ಯವಾಗಬಹುದು. ಆದರೆ ಅದರ ಸಾಗಾಣಿಕೆಯೇ ದೊಡ್ಡ ಸಮಸ್ಯೆಯಾಗಿದೆ.

ಪ್ರಸಕ್ತ, ಅತಿ ಹೆಚ್ಚು ಬೇಡಿಕೆ ಇರುವ 10 ರಾಜ್ಯಗಳಲ್ಲಿ ಆಮ್ಲಜನಕ ತಯಾರಿಕೆಯ ಪ್ರಮಾಣವು ಅಗತ್ಯಕ್ಕೆ ತಕ್ಕಷ್ಟು ಇಲ್ಲ. ಆದ್ದರಿಂದ ಬೇರೆ ರಾಜ್ಯಗಳಿಂದ ತರಿಸಬೇಕಾದ ಸ್ಥಿತಿ ಎದುರಾಗಿದೆ. ಕೆಲವು ರಾಜ್ಯಗಳು ಸಾವಿರಕ್ಕೂ ಹೆಚ್ಚು ಕಿ.ಮೀ. ದೂರದಿಂದ ಆಮ್ಲಜನಕವನ್ನು ತರಿಸಬೇಕಾಗಿದೆ.

ಸಾಗಾಣಿಕೆಯ ಸಮಸ್ಯೆ ಈಗಲೂ ಪೂರ್ತಿಯಾಗಿ ಬಗೆಹರಿದಿಲ್ಲವಾದ್ದರಿಂದ ಕೆಲವು ರಾಜ್ಯಗಳಲ್ಲಿ ರೋಗಿಗಳು ಆಮ್ಲಜನಕದ ಕೊರತೆಯಿಂದ ಸಾಯುವಂತಾಗಿದೆ. ದೆಹಲಿಗೆ ಕಳೆದ ವಾರ 378 ಟನ್‌ ಆಮ್ಲಜನಕ ಹಂಚಿಕೆಯಾಗಿದ್ದರೂ ತಲುಪಿದ್ದು 177 ಟನ್‌ ಮಾತ್ರ. ಸಾಗಾಣಿಕೆಯ ಜಾಲವು ಸರಿಯಾಗಿ ಇಲ್ಲದಿರುವುದು ಇದಕ್ಕೆ ಕಾರಣ. ‘ಆಕ್ಸಿಜನ್‌ ಎಕ್ಸ್‌ಪ್ರೆಸ್‌’ ರೈಲುಗಳು ಆರಂಭವಾಗಿದ್ದರಿಂದ ಈಗ ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ದೇಶದಲ್ಲಿ ಪ್ರತಿನಿತ್ಯ 3,842 ಟನ್‌ ವೈದ್ಯಕೀಯ ಆಮ್ಲಜನಕಕ್ಕೆ ಬೇಡಿಕೆ ಇರುತ್ತಿತ್ತು. ಆದರೆ, ಕೋವಿಡ್‌ ಎರಡನೇ ಅಲೆಯು ಅಪ್ಪಳಿಸಿದ ನಂತರ ಬೇಡಿಕೆ ಹೆಚ್ಚಾಗಿದೆ. ರಸ್ತೆ, ವಾಯುಮಾರ್ಗ, ರೈಲು ಮಾರ್ಗ ಸೇರಿದಂತೆ, ಆಮ್ಲಜನಕ ಸಾಗಾಣಿಕೆಗೆ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಸರ್ಕಾರ ಮಾಡುತ್ತಿದೆ.

ಉಕ್ಕು ಘಟಕ ಹಾಗೂ ಇತರ ಕೆಲವು ಕೈಗಾರಿಕೆಗಳಿಂದಲೂ ಸರಬರಾಜು ಹೆಚ್ಚಿದ್ದರಿಂದ ಕಳೆದ ಕೆಲವು ದಿನಗಳಲ್ಲಿ ದ್ರವೀಕ್ರತ ಆಮ್ಲಜನಕ ಲಭ್ಯತೆಯ ಪ್ರಮಾಣವನ್ನು 3,300 ಟನ್‌ನಷ್ಟು ಹೆಚ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೋಟಾ ನಿಗದಿ
ಆಮ್ಲಜನಕದ ಬೇಡಿಕೆ ಹೆಚ್ಚುತ್ತಿದ್ದಂತೆ, ಪೂರೈಕೆ ಏರುಪೇರಾಗುವುದನ್ನು ತಡೆಯಲು ಕೇಂದ್ರ ಸರ್ಕಾರವೇ ರಾಜ್ಯಗಳಿಗೆ ಆಮ್ಲಜನಕದ ಹಂಚಿಕೆಯನ್ನು ಆರಂಭಿಸಿತು.

ಅತಿ ಹೆಚ್ಚು ಬೇಡಿಕೆ ಇರುವ ಮಹಾರಾಷ್ಟ್ರ, ದೆಹಲಿ ಮುಂತಾದ ರಾಜ್ಯಗಳಿಗೆ ಹೆಚ್ಚು, ಹಾಗೂ ಬೇಡಿಕೆ ಕಡಿಮೆ ಇರುವ ರಾಜ್ಯಗಳಿಗೆ ಕಡಿಮೆ ಪ್ರಮಾಣದಲ್ಲಿ ಹಂಚಿಕೆ ಮಾಡಲಾಯಿತು. ಅತಿ ಹೆಚ್ಚು ಕೋವಿಡ್‌ ಪ್ರಕರಣಗಳಿರುವ 10 ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಂಚಿಕೆಯಾಯಿತು. ಉತ್ತರಾಖಂಡಕ್ಕೆ ಕನಿಷ್ಠ 103 ಟನ್‌, ಮಹಾರಾಷ್ಟ್ರಕ್ಕೆ 1661 ಟನ್‌ ಕೋಟಾ ನಿಗದಿ ಮಾಡಲಾಯಿತು.

ಈ ಕೋಟಾ ವ್ಯವಸ್ಥೆಯು ಇತರ ರಾಜ್ಯಗಳ ಚಿಂತೆ ಹೆಚ್ಚಿಸಲು ಕಾರಣವಾಗಿದೆ. ನಮ್ಮ ರಾಜ್ಯದಲ್ಲಿ ತಯಾರಾದ ಆಮ್ಲಜನಕವನ್ನು ಬೇರೆ ರಾಜ್ಯಗಳಿಗೆ ಸಾಗಿಸಿದರೆ ನಮ್ಮಲ್ಲಿನ ರೋಗಿಗಳಿಗೆ ಕಷ್ಟವಾಗುತ್ತದೆ. ನಮಗೆ ಹಂಚಿಕೆಯಾಗಿರುವ ಪ್ರಮಾಣವೂ ಕಡಿಮೆ ಇದೆ. ಆದ್ದರಿಂದ ಇಲ್ಲಿನ ಆಮ್ಲಜನಕವನ್ನು ಬೇರೆಡೆಗೆ ಸಾಗಿಸಬಾರದು ಎಂದು ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡು ಸರ್ಕಾರಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.

ಕೇರಳದಲ್ಲಿಲ್ಲ ಸಮಸ್ಯೆ
ದೇಶದ ಅನೇಕ ರಾಜ್ಯಗಳು ಆಮ್ಲಜನಕದ ಕೊರತೆ ಎದುರಿಸುತ್ತಿದ್ದರೆ, ಕೋವಿಡ್‌ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರೂ, ಕೇರಳ ಮಾತ್ರ ಈ ಸಮಸ್ಯೆಯಿಂದ ಮುಕ್ತವಾಗಿದೆ. ಬರಬಹುದಾದ ಸಮಸ್ಯೆಯನ್ನು ಮನಗಂಡಿದ್ದ ಕೇರಳವು ಕಳೆದ ಒಂದು ವರ್ಷದಲ್ಲಿ ಆಮ್ಲಜನಕದ ತಯಾರಿಕೆಯನ್ನು ದ್ವಿಗುಣಗೊಳಿಸಿತ್ತು. ಆದರೆ, ರಾಜ್ಯದಲ್ಲಿ ಆಮ್ಲಜನಕದ ಅಗತ್ಯ ಇರುವ ರೋಗಿಗಳ ಸಂಖ್ಯೆಯು ಅಂದಾಜಿಸಿದ ಮಟ್ಟದಲ್ಲಿ ಹೆಚ್ಚಳವಾಗಿಲ್ಲ. ಆಮ್ಲಜನಕದ ಕೊರತೆ ಗಂಭೀರ ಆಗದಿರಲು ಇದೂ ಕಾರಣ ಎನ್ನಲಾಗಿದೆ.

‘ಕಳೆದ ಮಾರ್ಚ್‌ನಲ್ಲಿ ಕೇರಳದ ಆಮ್ಲಜನಕ ಉತ್ಪಾದನಾ ಸಮಾರ್ಥ್ಯ ದಿನಕ್ಕೆ 99 ಟನ್‌ನಷ್ಟಿತ್ತು. ಈಗ ಅದು 200 ಟನ್‌ ಮೀರಿದೆ. ಅದನ್ನು 250 ಟನ್‌ಗೆ ಹೆಚ್ಚಿಸಲು ಕೇರಳ ಮೆಡಿಕಲ್‌ ಸರ್ವೀಸ್‌ ಕಾರ್ಪೊರೇಷನ್‌ ಚಿಂತನೆ ನಡೆಸಿದೆ’ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಆಧಾರ: ಕೇಂದ್ರ ಆರೋಗ್ಯ ಸಚಿವಾಲಯ, ಕೇಂದ್ರೀಯ ವೈದ್ಯಕೀಯ ಸೇವಾ ಸೊಸೈಟಿ, ರಿಟ್‌ ಅರ್ಜಿ ಸಂಖ್ಯೆ 10060/2020 ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನ ತೀರ್ಪು, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.