ADVERTISEMENT

ಆಳ-ಅಗಲ: ಆಹಾರ ಬರ ಶ್ರೀಲಂಕಾ ತತ್ತರ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 19:31 IST
Last Updated 2 ಸೆಪ್ಟೆಂಬರ್ 2021, 19:31 IST
ಕೊಲಂಬೊದಲ್ಲಿ ಸೀಮೆ ಎಣ್ಣೆಗಾಗಿ ಜನರ ಸಾಲು -ಎಎಫ್‌ಪಿ ಚಿತ್ರ
ಕೊಲಂಬೊದಲ್ಲಿ ಸೀಮೆ ಎಣ್ಣೆಗಾಗಿ ಜನರ ಸಾಲು -ಎಎಫ್‌ಪಿ ಚಿತ್ರ   

ನಾಲ್ಕು ದಶಕಗಳಲ್ಲೇ ಅತ್ಯಂತ ಕೆಟ್ಟ ಪರಿಸ್ಥಿತಿಯು ಶ್ರೀಲಂಕಾದಲ್ಲಿ ಮನೆ ಮಾಡಿದೆ. ವಿದೇಶಿ ವಿನಿಮಯ ಮೀಸಲು ಕುಸಿದಿದೆ. ಆಹಾರ ಕೊರತೆ ತೀವ್ರವಾಗಿದೆ. ಪರಿಣಾಮವಾಗಿ, ದೇಶದಲ್ಲಿ ಆಹಾರ ತುರ್ತುಸ್ಥಿತಿಯನ್ನು ಹೇರಲಾಗಿದೆ.

ತಮಿಳು ಪ್ರತ್ಯೇಕತಾವಾದಿ ಸಂಘಟನೆ ಎಲ್‌ಟಿಟಿಇ ಜತೆಗಿನ ಸುಮಾರು ಮೂರು ದಶಕಗಳ ರಕ್ತಸಿಕ್ತ ಹೋರಾಟವು 2009ರಲ್ಲಿ ಕೊನೆಗೊಂಡರೂ ದ್ವೀಪರಾಷ್ಟ್ರ ಶ್ರೀಲಂಕಾವು ಆರ್ಥಿಕವಾಗಿ ಚೇತರಿಕೆಯ ಹಾದಿಗೆ ಮರಳುವುದು ಸಾಧ್ಯವಾಗಲೇ ಇಲ್ಲ. ಆಂತರಿಕ ಸಂಘರ್ಷದ ಬಳಿಕ ದೇಶವನ್ನು ಮತ್ತೆ ಕಟ್ಟುವ ಕೆಲಸಕ್ಕೆ ಚಾಲನೆ ಸಿಕ್ಕರೂ ಅದಕ್ಕೆ ಹಲವು ಅಡೆತಡೆಗಳು ಎದುರಾದವು.

2019ರ ಬಳಿಕ ಶ್ರೀಲಂಕಾದ ಸ್ಥಿತಿಯು ಇನ್ನಷ್ಟು ಶೋಚನೀಯಗೊಂಡಿದೆ. 2019ರ ಏಪ್ರಿಲ್‌ನಲ್ಲಿ ಉಗ್ರರು ನಡೆಸಿದ ಬಾಂಬ್‌ ಸ್ಫೋಟ, ಆಂತರಿಕ ಭದ್ರತೆಯ ಬಗ್ಗೆ ಸೃಷ್ಟಿಯಾದ ಕಳವಳ, ನಂತರ ಕಾಣಿಸಿಕೊಂಡ ಕೋವಿಡ್‌ ಸಾಂಕ್ರಾಮಿಕವು ದೇಶದ ಆರ್ಥಿಕತೆಯ ಬೆನ್ನೆಲುಬನ್ನೇ ಮುರಿದು ಹಾಕಿವೆ.

ADVERTISEMENT

ಶ್ರೀಲಂಕಾವು ಸಾಂಪ್ರದಾಯಿಕವಾಗಿ ಖಾಸಗಿ ಕೇಂದ್ರಿತ, ಮಾರುಕಟ್ಟೆಸ್ನೇಹಿ ಆರ್ಥಿಕ ನೀತಿಯನ್ನು ಅವಲಂಬಿಸಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ನೀತಿಯಲ್ಲಿ ಬದಲಾವಣೆ ಕಂಡು ಬಂದಿದೆ. ಅರ್ಥ ವ್ಯವಸ್ಥೆಯಲ್ಲಿ ಸರ್ಕಾರಕ್ಕೆ ಪ್ರಮುಖ ಪಾತ್ರವನ್ನು ಈಗ ನೀಡಲಾಗಿದೆ ಎಂದು ಅಲ್ಲಿನ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಪಂಚವಾರ್ಷಿಕ ಯೋಜನೆಗಳನ್ನು ಹಮ್ಮಿಕೊಂಡು, ವಾರ್ಷಿಕ ಶೇ 6.5ಕ್ಕಿಂತ ಹೆಚ್ಚಿನ ಆರ್ಥಿಕ ಪ್ರಗತಿ, 6,500 ಡಾಲರ್‌ಗಿಂತ (ಸುಮಾರು ₹4.75 ಲಕ್ಷ) ಹೆಚ್ಚಿನ ತಲಾ ಆದಾಯ, ನಿರುದ್ಯೋಗ ಪ್ರಮಾಣವನ್ನು ಶೇ 4ಕ್ಕಿಂತ ಕೆಳಕ್ಕೆ ಇಳಿಸುವುದು ಮುಂತಾದ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ, ಯಾವುದೂ ಈಡೇರಿಲ್ಲ.

ಸಾಲದ ಸುಳಿಗೆ ಸಿಲುಕಿರುವ ದೇಶವು ತೀವ್ರ ಬಡತನಕ್ಕೆ ಜಾರಿದೆ.

ಸಂಕಷ್ಟದ ಹಲವು ಕಾರಣಗಳು
ಶ್ರೀಲಂಕಾ ದೇಶವು ಭಾರಿ ಸಾಲದಲ್ಲಿ ಮುಳುಗಿದೆ. ‌2020ರಲ್ಲಿ ದೇಶದ ಆರ್ಥಿಕತೆಯು ದಾಖಲೆಯ ಶೇ 3.6ರಷ್ಟು ಕುಸಿತ ಕಂಡಿತು. ಪ್ರಮುಖವಾಗಿ ವಿದೇಶಿ ವಿನಿಮಯ ಕೊರತೆ, ಕೋವಿಡ್ ಸೇರಿದಂತೆ ಹಲವು ಕಾರಣಗಳನ್ನು ಗುರುತಿಸಲಾಗಿದೆ.

ಕೋವಿಡ್ ಪ್ರಹಾರ: ಶ್ರೀಲಂಕಾವು ತನ್ನ ಆಂತರಿಕ ಭದ್ರತೆಯ ಬಗ್ಗೆ ನಿರ್ಲಕ್ಷ್ಯ ತಾಳಿದ್ದರಿಂದ 2019ರಲ್ಲಿ ಬಾಂಬ್‌ ಸ್ಫೋಟ ಘಟನೆಗೆ ಸಾಕ್ಷಿಯಾಯಿತು. ಇದರಿಂದ ದೇಶ ಚೇತರಿಸಿಕೊಳ್ಳುವ ಮುನ್ನವೇ ಎದುರಾಗಿದ್ದು ಕೋವಿಡ್‌ ಸಾಂಕ್ರಾಮಿಕ. ಕೋವಿಡ್ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸದ್ದರಿಂದ ದೇಶವ್ಯಾಪಿ ಸೋಂಕು ಹರಡಿತು. ಲಾಕ್‌ಡೌನ್‌ಗಳು ಆರ್ಥಿಕತೆಯನ್ನು ಸಂಪೂರ್ಣವಾಗಿ ಮಲಗಿಸಿದವು. ಲಸಿಕೆ ಖರೀದಿಗೆ ವಿಶ್ವಬ್ಯಾಂಕ್‌ನಿಂದ ₹750 ಕೋಟಿ ಸಾಲ ಪಡೆಯಬೇಕಾಯಿತು.

ಭಯೋತ್ಪಾದಕ ದಾಳಿಯ ಬಳಿಕ ದೇಶದಲ್ಲಿ ಬಂಡವಾಳ ಹೂಡಿಕೆಯ ವಿಶ್ವಾಸ ಕುಗ್ಗಿದೆ. ಹಣ ಚಲಾವಣೆಗೆ ಕಾರಣವಾಗುವ ಮೂಲಸೌಕರ್ಯ ಕ್ಷೇತ್ರದ ಬದಲು ರಕ್ಷಣಾ ವಲಯದಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದೆ. ಇಂತಹ ದುರ್ಬಲ ಸ್ಥಿತಿಯಲ್ಲಿ ತುರ್ತುಪರಿಸ್ಥಿತಿ ಘೋಷಿಸದೇ ಬೇರೆ ಆಯ್ಕೆ ಇರಲಿಲ್ಲ ಎನ್ನುತ್ತಾರೆ ವಿಶ್ಲೇಷಕರು.

ಸಾಲದ ಶೂಲ: ಚೀನಾ ಸೇರಿದಂತೆ ಹಲವು ದೇಶಗಳು ಹಾಗೂ ಐಎಂಎಫ್ ಸೇರಿದಂತೆ ವಿವಿಧ ಅಂತರರಾಷ್ಟ್ರೀಯ ಸಂಘಟನೆಗಳಿಂದ ಪಡೆದ ಅಪಾರ ಪ್ರಮಾಣದ ಸಾಲಕ್ಕೆ ಬಡ್ಡಿ ಕಟ್ಟಲು ಶ್ರೀಲಂಕಾವು ತನ್ನ ವಿದೇಶಿ ವಿನಿಮಯದ ಶೇ 80ರಷ್ಟು ಖರ್ಚು ಮಾಡುತ್ತಿರುವುದು ಆರ್ಥಿಕತೆಯ ದಿಕ್ಕು ತಪ್ಪಿಸಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಕಳೆದ ಬಾರಿ ಚೀನಾದಿಂದ ಮಾಡಿದ್ದ ಸಾಲಕ್ಕೆ ಬಡ್ಡಿಕಟ್ಟಲೂ ಆಗದ ಪರಿಸ್ಥಿತಿ ಎದುರಾದಾಗ, ಶ್ರೀಲಂಕಾವು ಒಂದು ಬಂದರನ್ನು ಚೀನಾಕ್ಕೆ ಹಸ್ತಾಂತರಿಸಬೇಕಾಯಿತು. ಈ ವರ್ಷ ಒಟ್ಟು ₹30 ಸಾವಿರ ಕೋಟಿ ವಿದೇಶಿ ಸಾಲ ಪಾವತಿ ಮಾಡಬೇಕಾಗಿದೆ. ಏಪ್ರಿಲ್ ವೇಳೆಗೆ ದೇಶದ ಒಟ್ಟು ಸಾಲ ₹2.63 ಲಕ್ಷ ಕೋಟಿ ಇತ್ತು ಎಂದು ಕೇಂದ್ರೀಯ ಬ್ಯಾಂಕ್ ತಿಳಿಸಿದೆ. 2012ರಿಂದಲೂ ಶ್ರೀಲಂಕಾದ ಜಿಡಿಪಿ ಬೆಳವಣಿಗೆ ದರ ನಿರಂತರವಾಗಿ ಇಳಿಯುತ್ತಾ ಬಂದಿದೆ. ಉತ್ಪಾದನಾ ವಲಯದಲ್ಲಿ ಯಾವುದೇ ಬೆಳವಣಿಗೆ ಇಲ್ಲ. ಶ್ರೀಲಂಕಾವು ಐಎಂಎಫ್‌ನಿಂದ ಈವರೆಗೆ ವಿವಿಧ ಸಂದರ್ಭಗಳಲ್ಲಿ ಒಟ್ಟು 16 ಬಾರಿ ಆರ್ಥಿಕ ನೆರವು (ಬೇಲ್‌ಔಟ್) ಕೋರಿದೆ.

ಕೋವಿಡ್‌ ಲಾಕ್‌ಡೌನ್ ಸಂದರ್ಭದಲ್ಲಿ (ಆಗಸ್ಟ್‌ 21) ನಿರ್ಜನವಾಗಿದ್ದ ಬೀದಿ -ಎಎಫ್‌ಪಿ ಚಿತ್ರ

ವಿದೇಶಿ ವಿನಿಮಯ ಕೊರತೆ: ಶ್ರೀಲಂಕಾದಲ್ಲಿ ಕಳೆದ 12 ತಿಂಗಳಲ್ಲಿ ಅನೇಕ ಅಗತ್ಯ ವಸ್ತುಗಳ ಬೆಲೆ ವಿಪರೀತ ಏರಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ, ವಿದೇಶಿ ವಿನಿಮಯ ಕೊರತೆ. ಅಳಿದುಳಿದ ವಿದೇಶ ವಿನಿಮಯವನ್ನು ಉಳಿತಾಯ ಮಾಡಲು, ಸರ್ಕಾರವು ಆಮದು ನಿಷೇಧದಂತಹ ಕ್ರಮಗಳನ್ನು ಜಾರಿಗೊಳಿಸಿತು. ಅರಿಶಿಣ ಪುಡಿ, ಅಡುಗೆ ಎಣ್ಣೆಯಿಂದ ಹಿಡಿದು, ವಾಹನಗಳ ಆಮದಿನ ಮೇಲೆ ಸರ್ಕಾರ ನಿರ್ಬಂಧ ವಿಧಿಸಿತು. ಹೀಗಾಗಿ ಕೆಲವು ಆಹಾರ ಪದಾರ್ಥಗಳಿಗೆ ದೇಶದಲ್ಲಿ ಹಾಹಾಕಾರ ಶುರುವಾಗಿ, ಈಗ ಆಹಾರ ತುರ್ತುಪರಿಸ್ಥಿತಿ ಘೋಷಿಸುವ ಮಟ್ಟವನ್ನು ತಲುಪಿದೆ.

ಅಗತ್ಯ ಆಹಾರ ಮತ್ತು ಔಷಧಿ ಖರೀದಿಗೆ ಡಾಲರ್‌ ಹೊಂದಿಸಲು ಸರ್ಕಾರ ಕಷ್ಟಪಡುತ್ತಿದೆ. ವಾಹನ ಚಾಲಕರು ಇಂಧನವನ್ನು ಮಿತವಾಗಿ ಬಳಸಬೇಕು ಎಂದು ಇಂಧನ ಸಚಿವ ಉದಯ ಗಮ್ಮನ್‌ಪಿಲ ಒತ್ತಾಯಿಸಿರುವುದು ಪರಿಸ್ಥಿತಿಯ ತೀವ್ರತೆಯನ್ನು ವಿವರಿಸುತ್ತದೆ.

ಪರಿಣಾಮಗಳ ವಿಷವರ್ತುಲ
ಶ್ರೀಲಂಕಾದ ಆರ್ಥಿಕ ಮುಗ್ಗಟ್ಟಿನಿಂದ ಉಂಟಾದ ವಿವಿಧ ಪರಿಣಾಮಗಳ ಮಧ್ಯೆ ಪರಸ್ಪರ ಸಂಬಂಧವಿದೆ. ಒಂದು ಕ್ಷೇತ್ರದ ಮೇಲೆ ಉಂಟಾದ ಪರಿಣಾಮವು, ಮತ್ತೊಂದು ಕ್ಷೇತ್ರದ ಮೇಲಿನ ದುಷ್ಪರಿಣಾಮವನ್ನು ಹೆಚ್ಚಿಸಿದೆ. ಆ ಪರಿಣಾಮವು ಬೇರೊಂದು ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರಿದೆ. ಹೀಗೆ ಪರಿಣಾಮಗಳ ಸರಪಳಿ ಬೆಳೆದಿದೆ ಮತ್ತು ಅದು ವಿಷ ವರ್ತುಲದಂತೆ ಆಗಿದೆ.

ಪ್ರವಾಸೋದ್ಯಮಕ್ಕೆ ತೊಡಕು:ಶ್ರೀಲಂಕಾದ ಪ್ರವಾಸೋದ್ಯಮ ಕುಸಿತಕ್ಕೆ 2019ರ ಏಪ್ರಿಲ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟವೇ ಕಾರಣ ಎನ್ನಲಾಗಿದೆ. ಬಾಂಬ್ ಸ್ಫೋಟದ ಕಾರಣ ಪ್ರವಾಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. 2019ರ ಬಾಂಬ್ ಸ್ಫೋಟದ ನಂತರ ಪ್ರವಾಸೋದ್ಯಮ ಉತ್ತೇಜನಕ್ಕೆ ಹಲವು ಕ್ರಮಗಳನ್ನು ಶ್ರೀಲಂಕಾ ಸರ್ಕಾರ ತೆಗೆದುಕೊಂಡಿತ್ತಾದರೂ, ಕೋವಿಡ್‌ನ ಕಾರಣ ಪ್ರವಾಸೋದ್ಯಮ ಮತ್ತೆ ಕುಸಿಯಿತು.

2020ರಲ್ಲಿ 45 ಲಕ್ಷ ಪ್ರವಾಸಿಗರನ್ನು ಶ್ರೀಲಂಕಾ ನಿರೀಕ್ಷಿಸಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ, ಇಡೀ 2020ರಲ್ಲಿ ಶ್ರೀಲಂಕಾಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ 1 ಲಕ್ಷವನ್ನೂ ದಾಟಿಲ್ಲ. ಈಗ ಲಾಕ್‌ಡೌನ್‌ ತೆರವಾಗಿದ್ದರೂ, ಪ್ರವಾಸಿಗರು ಶ್ರೀಲಂಕಾದತ್ತ ಮುಖ ಮಾಡುತ್ತಿಲ್ಲ. ಪ್ರವಾಸಿ ಸ್ಥಳಗಳು ಬಿಕೋ ಎನ್ನುತ್ತಿವೆ. ಪ್ರವಾಸಿ ಸಂಬಂಧಿ ಸೇವೆಗಳು ಸಂಪೂರ್ಣವಾಗಿ ಸ್ಥಗಿತವಾಗಿದೆ. ಈ ಕಾರಣದಿಂದ 2020ರಲ್ಲಿ ಶ್ರೀಲಂಕಾದ ಒಟ್ಟು ಆದಾಯದಲ್ಲಿ 500 ಕೋಟಿ ಅಮೆರಿಕನ್ ಡಾಲರ್‌ನಷ್ಟು (ಅಂದಾಜು ₹36,550 ಕೋಟಿ) ಖೋತಾ ಆಗಿದೆ. 2021ರಲ್ಲಿ ಈವರೆಗೆ 350 ಕೋಟಿ ಅಮೆರಿಕನ್‌ ಡಾಲರ್‌ನಷ್ಟು (ಅಂದಾಜು ₹25,585 ಕೋಟಿ) ಆದಾಯ ಖೋತಾ ಆಗಿದೆ.

ಉದ್ಯೋಗ ನಷ್ಟ:ಪ್ರವಾಸೋದ್ಯಮ ಕುಸಿದಿರುವ ಕಾರಣ ಈ ಕ್ಷೇತ್ರದಲ್ಲಿ ಇದ್ದವರು ಉದ್ಯೋಗ ಕಳೆದುಕೊಂಡಿದ್ದಾರೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕ್ಯಾಸಿನೋಗಳು ಮತ್ತು ಟೂರ್‌ ಆಪರೇಟರ್‌ ಸೇವೆಗಳು ಸ್ಥಗಿತವಾಗಿವೆ. ಈ ಎಲ್ಲಾ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರು ಉದ್ಯೋಗ ಕಳೆದುಕೊಂಡಿದ್ದಾರೆ. ಈ ಕ್ಷೇತ್ರಗಳನ್ನು ಅವಲಂಬಿಸಿದ್ದ ಇತರೆ ಸೇವೆಗಳೂ ಸ್ಥಗಿತವಾಗಿವೆ. ಇದರಿಂದ ಪರೋಕ್ಷವಾಗಿಯೂ ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಅಂದಾಜು 40 ಲಕ್ಷ ಮಂದಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉದ್ಯೋಗ ಕಳೆದುಕೊಂಡಿದ್ದಾರೆ. ತಕ್ಷಣಕ್ಕೆ ಈ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆಗಳು ತೀರಾ ಕಡಿಮೆ ಎನ್ನಲಾಗಿದೆ.

ಬಡತನ:ಆದಾಯದ ಪ್ರಧಾನ ಮೂಲವಾದ ಪ್ರವಾಸೋದ್ಯಮದ ಸ್ಥಗಿತ ಮತ್ತು ಉದ್ಯೋಗ ನಷ್ಟದ ಕಾರಣ ದೇಶದಲ್ಲಿ ಬಡತನದ ಪ್ರಮಾಣ ವಿಪರೀತ ಮಟ್ಟದಲ್ಲಿ ಏರಿಕೆಯಾಗಿದೆ. ದೇಶದ ಜನರಲ್ಲಿ ಕೊಳ್ಳುವ ಶಕ್ತಿ ಇಲ್ಲದ ಕಾರಣ, ಆಹಾರ ಪದಾರ್ಥಗಳು ಮತ್ತು ದಿನಬಳಕೆ ವಸ್ತು-ಸರಕುಗಳ ವ್ಯಾಪಾರ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಈ ವಸ್ತುಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡಿದ್ದರಿಂದ ದೇಶೀಯ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದು ಜನರ ಕೊಳ್ಳುವ ಶಕ್ತಿಯನ್ನು ಮತ್ತಷ್ಟು ಕುಸಿಯುವಂತೆ ಮಾಡಿದೆ. ಆಹಾರ ಮತ್ತು ದಿನಬಳಕೆ ವಸ್ತುಗಳನ್ನು ಕೊಳ್ಳಲು ಆಗದೇ ಇರುವಂತಹ ಸ್ಥಿತಿ ನಿರ್ಮಾಣವಾಗಿರುವ ಕಾರಣ, ದೇಶದ ಜನರ ಜೀವನಮಟ್ಟವೂ ಕುಸಿದಿದೆ.

ರೂಪಾಯಿ ಮೌಲ್ಯ ಕುಸಿತ:ದೇಶದ ಆರ್ಥಿಕತೆ ಸ್ಥಗಿತವಾಗಿರುವ ಕಾರಣ ವಿದೇಶಿ ವಿನಿಮಯವೂ ಕುಸಿದಿದೆ. ವಿದೇಶಿ ವಿನಿಮಯ ಕುಸಿದಿರುವ ಕಾರಣ ಡಾಲರ್ ಎದುರು ಶ್ರೀಲಂಕಾ ರೂಪಾಯಿಯ ಮೌಲ್ಯ ಕುಸಿಯುತ್ತಲೇ ಇದೆ. 2019ರ ಸ್ಫೋಟದಿಂದ ಈವರೆಗೆ ಶ್ರೀಲಂಕಾ ರೂಪಾಯಿಯ ಮೌಲ್ಯವು, ಅಮೆರಿಕನ್ ಡಾಲರ್ ಎದುರು ಶೇ 20ರಷ್ಟು ಕುಸಿದಿದೆ. ಇದರಿಂದಾಗಿ ಆಮದು ಮಾಡಿಕೊಳ್ಳುವ ವಸ್ತುಗಳ ಮೌಲ್ಯ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ. ಬೆಲೆ ಏರಿಕೆಯಿಂದ ಈ ಸರಕುಗಳನ್ನು ಕೊಳ್ಳುವವರ ಸಂಖ್ಯೆ ಇಳಿಕೆಯಾಗಿದೆ. ಇದರಿಂದ ಮತ್ತೆ ರೂಪಾಯಿ ಮೌಲ್ಯ ಕುಸಿಯುತ್ತಿದೆ.

ಇದರ ಪರಿಣಾಮವಾಗಿ ಶ್ರೀಲಂಕಾದ ವಿದೇಶಿ ವಿನಿಮಯ ಮೀಸಲು ಸಹ ಕುಸಿದಿದೆ. ಖಾಸಗಿ ಬ್ಯಾಂಕ್‌ಗಳ ವಿದೇಶಿ ವಿನಿಮಯ ಮೀಸಲು ಸಂಪೂರ್ಣವಾಗಿ ಖಾಲಿಯಾಗಿದೆ. ಈ ಕಾರಣದಿಂದ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲು ಅಗತ್ಯವಿರುವಷ್ಟು ಆರ್ಥಿಕ ನೆರವು ನೀಡಲು ಖಾಸಗಿ ಬ್ಯಾಂಕ್‌ಗಳ ಬಳಿ ಹಣ ಇಲ್ಲ. ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಆಹಾರ ಪದಾರ್ಥಗಳ ಕೊರತೆ ಉಂಟಾಗಿದೆ.

ಆಧಾರ: ರಾಯಿಟರ್ಸ್, ಏಷ್ಯಾ ಪೆಸಿಫಿಕ್ ಪಾಲಿಸಿ ಸೊಸೈಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.