ADVERTISEMENT

ಆಳ–ಅಗಲ: ಕಾಳಗಕ್ಕಿಳಿದ ಬೈಡನ್‌–ಪುಟಿನ್‌

‘ಪುಟಿನ್‌ ಹಂತಕ’ ಎಂದ ಅಮೆರಿಕ ಅಧ್ಯಕ್ಷ: ಕ್ಷಮೆ ಯಾಚನೆಗೆ ರಷ್ಯಾ ಪಟ್ಟು

ಪ್ರಜಾವಾಣಿ ವಿಶೇಷ
Published 18 ಮಾರ್ಚ್ 2021, 19:31 IST
Last Updated 18 ಮಾರ್ಚ್ 2021, 19:31 IST
ಜೋ ಬೈಡನ್‌
ಜೋ ಬೈಡನ್‌   

ಅಮೆರಿಕ ಮತ್ತು ರಷ್ಯಾದ ನಡುವೆ 1950ರ ದಶಕದಿಂದಲೂ ಸೌಹಾರ್ದ ಸಂಬಂಧ ಇಲ್ಲ. ಈ ಎರಡು ದೇಶಗಳು ಜಗತ್ತಿನ ಎರಡು ಸೂಪರ್‌ ಪವರ್‌ಗಳೆಂದು ತಮ್ಮನ್ನು ಕರೆದುಕೊಂಡು ಯಜಮಾನಿಕೆಗಾಗಿ ಶೀತಲ ಸಮರ ನಡೆಸಿದ್ದವು. ಆ ದಿನಗಳಲ್ಲಿಯೂ ಎರಡೂ ದೇಶಗಳ ನಡುವೆ ಸ್ಪರ್ಧೆ ಮತ್ತು ಸಹಕಾರದ ವಿಶಿಷ್ಟವಾದ ಸಂಬಂಧ ಇತ್ತು. ಈಗ ಅಮೆರಿಕ–ರಷ್ಯಾ ನಡುವಣ ಸಂಬಂಧ ಹಿಂದೆಂದಿಗಿಂತಲೂ ಹದಗೆಟ್ಟಂತೆ ಕಾಣಿಸುತ್ತಿದೆ. ಎರಡೂ ದೇಶಗಳ ನಡುವೆ ಇರುವ ಪೈಪೋಟಿಗೆ ಈಗ ನಾಯಕರ ನಡುವಣ ವೈಮನಸ್ಸಿನ ಆಯಾಮವೂ ಇದೆ ಎಂಬುದು ಪರಿಸ್ಥಿತಿಯನ್ನು ಇನ್ನಷ್ಟು ಶೋಚನೀಯಗೊಳಿಸಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ‘ಹಂತಕ’ ಎಂದು ‘ಎಬಿಸಿ ನ್ಯೂಸ್‌’ಗೆ ನೀಡಿದ ಸಂದರ್ಶನದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ. ಪುಟಿನ್‌ ವಿರೋಧಿ ನಾಯಕ ಅಲೆಕ್ಸಿ ನವಾಲ್ನಿ ಅವರಿಗೆ ವಿಷಪ್ರಾಶನದ ವಿದ್ಯಮಾನವನ್ನು ಇರಿಸಿಕೊಂಡು ಬೈಡನ್‌ ಹೀಗೆ ಹೇಳಿದ್ದಾರೆ. 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್‌ ಅವರು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯೇ ಆಗದಂತೆ ನೋಡಿಕೊಳ್ಳಲು ರಷ್ಯಾ ಶ್ರಮಿಸಿದೆ, ಅದರ ಹಿಂದೆ ಇದ್ದದ್ದು ಪುಟಿನ್‌ ಎಂಬ ಗುಪ್ತಚರ ಮಾಹಿತಿಯು ಅಮೆರಿಕಕ್ಕೆ ಸಿಕ್ಕಿದೆ. ಇದುವೇ ಸಂಘರ್ಷ ತೀವ್ರಗೊಳ್ಳಲು ಕಾರಣ ಎನ್ನಲಾಗುತ್ತಿದೆ. ಗುಪ್ತಚರ ವರದಿಯು ನಿಜವೇ ಆಗಿದ್ದರೆ ಅದಕ್ಕೆ ಪುಟಿನ್‌ ‘ತಕ್ಕ ಬೆಲೆ ತೆರಲೇಬೇಕಾಗುತ್ತದೆ’ ಎಂದೂ ಸಂದರ್ಶನದಲ್ಲಿ ಬೈಡನ್ ಹೇಳಿದ್ದಾರೆ. (2016ರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ ಗೆಲುವಿನ ಹಿಂದೆ ಪುಟಿನ್ ಕೈವಾಡ ಇತ್ತು ಎಂಬುದು ಕೂಡ ಆಗ ಬಹುದೊಡ್ಡ ಚರ್ಚೆಯ ವಿಷಯ ಆಗಿತ್ತು.) ಹಾಗಾಗಿಯೇ, ಅಮೆರಿಕ–ರಷ್ಯಾ ನಡುವಣ ಸಂಬಂಧದಲ್ಲಿ ವೈಯಕ್ತಿಕ ಇಷ್ಟಾನಿಷ್ಟಗಳು ಕೂಡ ನಿರ್ಣಾಯಕ ಆಗಬಹುದು ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ.

ಬೈಡನ್ ಹೇಳಿಕೆಯು ಪುಟಿನ್‌ ಅವರನ್ನು ಕೆರಳಿಸಿದೆ. ಅಮೆರಿಕದಲ್ಲಿರುವ ರಾಯಭಾರಿ ಅನತೋಲಿ ಆ್ಯಂಟನೋವ್‌ ಅವರನ್ನು ರಷ್ಯಾ ಕರೆಸಿಕೊಂಡಿದೆ. ‘ಈಗಿನ ಸನ್ನಿವೇಶದಲ್ಲಿ ಏನು ಮಾಡಬಹುದು ಮತ್ತು ಅಮೆರಿಕದ ಜತೆಗಿನ ಸಂಬಂಧದ ಮೇಲೆ ಆಗುವ ಪರಿಣಾಮಗಳು ಏನು ಎಂಬುದನ್ನು ವಿಶ್ಲೇಷಿಸುವುದಕ್ಕಾಗಿ ಮಾಸ್ಕೋಗೆ ಬರುವಂತೆ ರಾಯಭಾರಿಗೆ ಆಹ್ವಾನ ನೀಡಲಾಗಿದೆ’ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಹೇಳಿದೆ.

ADVERTISEMENT
ವ್ಲಾಡಿಮಿರ್‌ ಪುಟಿನ್‌

ಆದರೆ, ಬೈಡನ್‌ ಹೇಳಿಕೆಯನ್ನು ರಷ್ಯಾ ಬಹಳ ಗಂಭೀರವಾಗಿಯೇ ತೆಗೆದುಕೊಂಡಿದೆ.

‘ನಮ್ಮ ದೇಶದ ಜನರನ್ನು ಬೈಡನ್‌ ಅವಮಾನಿಸಿದ್ದಾರೆ. ಪುಟಿನ್‌ ಮೇಲೆ ದಾಳಿ ಎಂದರೆ ದೇಶದ ಮೇಲೆ ದಾಳಿ ನಡೆಸಿದಂತೆ’ ಎಂದು ರಷ್ಯಾ ಕೆಳಮನೆಯ ಸಭಾಪತಿ ವ್ಯಾಚೆಸ್ಲಾವ್‌ ವೊಲೊಡಿನ್‌ ಹೇಳಿದ್ದಾರೆ. ತಮ್ಮ ಹೇಳಿಕೆಗೆ ಬೈಡನ್‌ ಅವರು ವಿವರಣೆ ಕೊಡಬೇಕು ಮತ್ತು ಕ್ಷಮೆ ಯಾಚಿಸಬೇಕು ಎಂದು ರಷ್ಯಾ ಸಂಸತ್ತಿನ ಮೇಲ್ಮನೆಯ ಉಪಸಭಾಪತಿ ಕಾನ್‌ಸ್ಟಾನ್‌ಟಿನ್‌ ಕೊಶ್ಚೇವ್‌ ಹೇಳಿದ್ದಾರೆ. ‘ಬೈಡನ್‌ ಅವರಂತಹ ಮುತ್ಸದ್ದಿಯಿಂದ ಇಂತಹ ಹೇಳಿಕೆ ಸ್ವೀಕಾರಾರ್ಹವಲ್ಲ. ಯಾವ ಸನ್ನಿವೇಶದಲ್ಲಿಯೂ ಇಂತಹ ಹೇಳಿಕೆ ಒಪ್ಪಿತವಲ್ಲ. ದ್ವಿಪಕ್ಷೀಯ ಸಂಬಂಧವನ್ನು ಇಂತಹ ಹೇಳಿಕೆಯು ಸರಿಪಡಿಸಲಾರದ ರೀತಿಯಲ್ಲಿ ಹಾಳುಗೆಡವುತ್ತದೆ’ ಎಂದು ಕೊಶ್ಚೇವ್‌ ಹೇಳಿದ್ದಾರೆ.

‘ನಾವು ನೇರವಾಗಿಯೇ ಇರುತ್ತೇವೆ. ಅಧ್ಯಕ್ಷರು ಮಾತನಾಡಿದ ರೀತಿಯಲ್ಲಿಯೇ, ನಮಗೆ ಕಳವಳ ಇರುವ ವಿಚಾರಗಳ ಬಗ್ಗೆ ಮಾತನಾಡುತ್ತೇವೆ. ತಮ್ಮ ಕೃತ್ಯಗಳ ಹೊಣೆಯನ್ನು ರಷ್ಯನ್ನರು ಹೊತ್ತುಕೊಳ್ಳಲೇಬೇಕಾಗುತ್ತದೆ’ ಎಂದು ಶ್ವೇತಭವನದ ವಕ್ತಾರೆ ಜೆನ್‌ ಸಾಕಿ ಹೇಳಿದ್ದಾರೆ. ಆದರೆ, ದ್ವಿಪಕ್ಷೀಯ ಸಂಬಂಧವನ್ನು ಮತ್ತೆ ಹಳಿಗೆ ತರುವ ಹೊಣೆಯು ಅಮೆರಿಕದ್ದೇ ಆಗಿದೆ ಎಂದು ರಷ್ಯಾ ಹೇಳಿದೆ.

ಎರಡೂ ದೇಶಗಳ ಪ್ರತಿನಿಧಿಗಳು ನಿಷ್ಠುರವಾಗಿಯೇ ಮಾತನಾಡುತ್ತಿದ್ದಾರೆ ಎಂಬುದು ಪರಿಸ್ಥಿತಿಯು ಎಷ್ಟು ಸಂಘರ್ಷಮಯವಾಗಿದೆ ಎಂಬುದರ ಸೂಚನೆಯಾಗಿದೆ.

ಅಲೆಕ್ಸಿ ವಿಷಪ್ರಾಶನ: ರಷ್ಯಾ ಅಧಿಕಾರಿಗಳಿಗೆ ಅಮೆರಿಕ ನಿರ್ಬಂಧ

ಅಲೆಕ್ಸಿ ನವಾಲ್ನಿ

ಪುಟಿನ್ ಅವರ ಪ್ರಮುಖ ಟೀಕಾಕಾರ ಎನಿಸಿರುವ ಅಲೆಕ್ಸಿ ನವಾಲ್ನಿ ಅವರನ್ನು ಕಳೆದ ವರ್ಷ ವಿಷವಿಟ್ಟು ಕೊಲ್ಲಲು ಯತ್ನಿಸಲಾಗಿತ್ತು. ವಿಷಪ್ರಾಶನ ಮಾಡಿದ ಆರೋಪವನ್ನು ರಷ್ಯಾ ಮೇಲೆ ಅಮೆರಿಕ ಹೊರಿಸಿದರೂ, ಇದನ್ನು ರಷ್ಯಾ ಅಲ್ಲಗಳೆದಿತ್ತು. ಆದರೆ ವಿಷವುಣಿಸಲು ಕಾರಣ ಎನ್ನಲಾದ ರಷ್ಯಾದ ಅಧಿಕಾರಿಗಳ ಮೇಲೆ ಅಮೆರಿಕ ಇದೇ ಮಾರ್ಚ್ 2ರಂದು ನಿರ್ಬಂಧ ವಿಧಿಸಿತ್ತು. ಈ ನಿರ್ಬಂಧದ ಪರಿಣಾಮವಾಗಿ, ಅಮೆರಿಕದಲ್ಲಿರುವ ಈ ಎಲ್ಲ ಅಧಿಕಾರಿಗಳು ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿದೆ.

ಅಲೆಕ್ಸಿ ಹತ್ಯೆ ಯತ್ನದಲ್ಲಿ ರಷ್ಯಾದ 14 ಸಂಸ್ಥೆಗಳು ಮತ್ತು ಏಳು ಅಧಿಕಾರಿಗಳ ಪಾತ್ರ ಇದೆ ಎಂಬುದು ಅಮೆರಿಕದ ಆರೋಪ. 2018ರಲ್ಲಿಯೂ ಇದೇ ರೀತಿಯ ವಿಷವನ್ನು ರಷ್ಯಾದಿಂದ ದೇಶಭ್ರಷ್ಟನಾಗಿದ್ದ ಸರ್ಜಿ ಸ್ಕ್ರಿಪಾಲ್ ಹಾಗೂ ಆತನ ಮಗಳ ವಿರುದ್ಧ ರಷ್ಯಾ ಬಳಸಿತ್ತು ಎಂದು ಅಮೆರಿಕ ಆಪಾದಿಸಿತ್ತು. ರಷ್ಯಾದ ಪ್ರಮುಖ ಗುಪ್ತಚರ ಸಂಸ್ಥೆ ಎಫ್‌ಎಸ್‌ಬಿ ಮುಖ್ಯಸ್ಥ ಅಲೆಕ್ಸಾಂಡರ್ ಬೊರ್ಟ್ನಿಕೋವ್ ಮತ್ತು ಉಪ ರಕ್ಷಣಾ ಮಂತ್ರಿಗಳಾದ ಅಲೆಕ್ಸಿ ಕ್ರಿವೊರುಚ್ಕೊ ಮತ್ತು ಪಾವೆಲ್ ಪೊಪೊವ್ ಅವರು ಅಮೆರಿಕದ ನಿರ್ಬಂಧಕ್ಕೆ ಒಳಗಾದ ಪ್ರಮುಖರಾಗಿದ್ದಾರೆ. ಅಮೆರಿಕ ಅಧ್ಯಕ್ಷರಾಗಿ ಬೈಡನ್ ತೆಗೆದುಕೊಂಡ ಮೊದಲ ಕಠಿಣ ನಿರ್ಧಾರ ಇದಾಗಿದೆ.

‘ನೊವಿಚೋಕ್’ನಂತಹ ರಾಸಾಯನಿಕ ಮತ್ತು ಜೈವಿಕ ಶಸ್ತ್ರಾಸ್ತ್ರಗಳ ವಿರುದ್ಧದ ಅಂತರರಾಷ್ಟ್ರೀಯ ನಿಷೇಧವನ್ನು ಉಲ್ಲಂಘಿಸಿದ್ದಕ್ಕಾಗಿ ರಷ್ಯಾದ ಮೇಲೆ ರಫ್ತು ನಿರ್ಬಂಧವನ್ನು ವಿಸ್ತರಿಸುವುದಾಗಿ ಅಮೆರಿಕ ಘೋಷಿಸಿದೆ. ಈ ಕ್ರಮವೂ ರಷ್ಯಾವನ್ನು ಕೆರಳಿಸಿದೆ.

ಕಳೆದ ತಿಂಗಳು ಪುಟಿನ್ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದ ಬೈಡನ್, ಅಮೆರಿಕದ ನಿಲುವುಗಳನ್ನು ಸ್ಪಷ್ಟಪಡಿಸಿದ್ದರು. ರಷ್ಯಾದ ಆಕ್ರಮಣಕಾರಿ ನೀತಿಗಳು, ಅಧ್ಯಕ್ಷೀಯ ಚುನಾವಣೆಗಳಲ್ಲಿ ಹಸ್ತಕ್ಷೇಪ, ಸೈಬರ್ ದಾಳಿ, ನಾಗರಿಕರಿಗೆ ವಿಷಪ್ರಾಶನದಂತಹ ಕ್ರಮಗಳನ್ನು ಸಹಿಸುವುದಿಲ್ಲ ಎಂದು ನೇರವಾಗಿ ಹೇಳಿದ್ದರು.

ಟ್ರಂಪ್-ಪುಟಿನ್ ಸೌಹಾರ್ದ ಸಂಬಂಧ

ಡೊನಾಲ್ಡ್ ಟ್ರಂಪ್

2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಪರವಾಗಿ ರಷ್ಯಾ ಹಸ್ತಕ್ಷೇಪ ನಡೆಸಿದೆ ಎಂಬ ಆರೋಪಗಳು ಇವೆ. ಇದನ್ನು ಡೆಮಾಕ್ರಟಿಕ್ ಪಕ್ಷದ ಸದಸ್ಯರು, ನಾಯಕರು ಕಟುವಾಗಿ ಟೀಕಿಸಿದ್ದಾರೆ. ಆದರೆ, ಟ್ರಂಪ್ ಅವರ ರಿಪಬ್ಲಿಕನ್ ಪಕ್ಷವು ಈ ಬಗ್ಗೆ ಚಕಾರ ಎತ್ತಿರಲಿಲ್ಲ. ಬದಲಿಗೆ 2013-2015ರ ಮಧ್ಯೆ ಉದ್ಯಮಿ ಟ್ರಂಪ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹಲವು ಬಾರಿ ಹಾಡಿ ಹೊಗಳಿದ್ದರು. 2016ರ ಚುನಾವಣೆಯಲ್ಲಿ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಈ ಹೊಗಳುವಿಕೆ ಮತ್ತಷ್ಟು ಹೆಚ್ಚಿತು.

ಅಂತರರಾಷ್ಟ್ರೀಯ ವಿದ್ಯಮಾನಗಳಲ್ಲಿ ಪುಟಿನ್ ಅವರು ತೆಗೆದುಕೊಂಡ ನಿಲುವುಗಳನ್ನು ಹಲವು ಸಂದರ್ಭಗಳಲ್ಲಿ ಟ್ರಂಪ್ ಅವರು ಬಹಿರಂಗವಾಗಿಯೇ ಪ್ರಶಂಸಿಸಿದ್ದಾರೆ. ಮಾಧ್ಯಮಗೋಷ್ಠಿಗಳಲ್ಲಿ, ಟ್ವಿಟರ್‌ನಲ್ಲಿ ಪುಟಿನ್ ಪರವಾಗಿ ಮಾತನಾಡಿದ್ದಾರೆ. ಉಕ್ರೇನ್-ರಷ್ಯಾ ಸಂಘರ್ಷ, ರಷ್ಯಾ-ಕ್ರಿಮಿಯನ್‌ ಸಂಘರ್ಷದ ವೇಳೆ ಪುಟಿನ್ ಅವರು ತೆಗೆದುಕೊಂಡಿದ್ದ ನಿಲುವುಗಳನ್ನು ಟ್ರಂಪ್ ಹೊಗಳಿದ್ದರು. ‘ಪುಟಿನ್ ಅವರು ತಮ್ಮ ರಾಷ್ಟ್ರದ ಹಿತಾಸಕ್ತಿಗಾಗಿ ಅತ್ಯಂತ ದಿಟ್ಟ ನಿಲುವನ್ನು ತೆಗೆದುಕೊಂಡಿದ್ದಾರೆ’ ಎಂದು ಟ್ರಂಪ್ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ಹಲವು ಅಮೆರಿಕನ್ನರು ಆಕ್ಷೇಪ ವ್ಯಕ್ತಪಡಿಸಿದ್ದರು.

2017ರಲ್ಲಿ ಅಫ್ಗಾನಿಸ್ತಾನದಲ್ಲಿ ಅಮೆರಿಕದ ಸೈನಿಕರನ್ನು, ಉಗ್ರರು ಹತ್ಯೆ ಮಾಡಿದ್ದರು. ಆ ಉಗ್ರ ಸಂಘಟನೆಗೆ ರಷ್ಯಾ ಹಣಕಾಸು ಮತ್ತು ಶಸ್ತ್ರಾಸ್ತ್ರ ನೆರವು ನೀಡಿದೆ ಎಂದು ಅಮೆರಿಕದ ಗುಪ್ತಚರ ಇಲಾಖೆ ವರದಿ ನೀಡಿತ್ತು. ಆಗಲೂ ರಷ್ಯಾ ವಿರುದ್ಧವಾಗಿ ಟ್ರಂಪ್ ಅವರು ಒಂದು ಹೇಳಿಕೆಯನ್ನೂ ನೀಡಿರಲಿಲ್ಲ. ಪುಟಿನ್ ಸಹ ಟ್ರಂಪ್ ವಿರುದ್ಧವಾಗಿ ಒಂದೂ ಹೇಳಿಕೆ ನೀಡಿರಲಿಲ್ಲ. ಉಕ್ರೇನ್‌ ಜತೆಗಿನ ಸಂಘರ್ಷದ ಫಲವಾಗಿ ರಷ್ಯಾ ಮೇಲೆ ಅಮೆರಿಕವು ಆರ್ಥಿಕ ದಿಗ್ಬಂಧನ ಹೇರಿತ್ತು. ಭಾರತವು ರಷ್ಯಾದೊಂದಿಗೆ ಮಾಡಿಕೊಂಡಿದ್ದ ಶಸ್ತ್ರಾಸ್ತ್ರ ಒಪ್ಪಂದವನ್ನು ಕೈಬಿಡಬೇಕು ಎಂದು ಅಮೆರಿಕ ಒತ್ತಡ ಹೇರಿತ್ತು. ಆದರೆ, ಆನಂತರ ಈ ಒತ್ತಡವನ್ನು ಕೈಬಿಟ್ಟಿತ್ತು.

ಈಗ ಅಮೆರಿಕದ ನಾಯಕತ್ವ ಬದಲಾಗಿರುವ ಕಾರಣ, ಅಮೆರಿಕದ ನಿಲುವೂ ಬದಲಾಗಿದೆ. ಎರಡೂ ರಾಷ್ಟ್ರಗಳು ಯುದ್ಧ ಮಾಡುವ ಸಾಧ್ಯತೆ ಅತ್ಯಂತ ಕಡಿಮೆ. ಆದರೆ, ಈ ಸಂಘರ್ಷವು ವಾಣಿಜ್ಯ ಸಮರಕ್ಕೆ ಕಾರಣವಾಗುವ ಸಾಧ್ಯತೆ ಅತ್ಯಧಿಕವಾಗಿದೆ. ರಷ್ಯಾದ ಹಸ್ತಕ್ಷೇಪ ವಿಚಾರವನ್ನು ಅಧ್ಯಕ್ಷ ಜೋ ಬೈಡನ್ ಗಂಭೀರವಾಗಿ ಪರಿಗಣಿಸಿದ್ದಾರೆ. ರಷ್ಯಾ ಮೇಲೆ ಹೇರಲಿರುವ ಆರ್ಥಿಕ ದಿಗ್ಬಂಧನದ ಪರಿಣಾಮವು ಭಾರತದ ಮೇಲೂ ಆಗುವ ಸಾಧ್ಯತೆ ಇದೆ. ರಷ್ಯಾದಿಂದ ಇನ್ನಷ್ಟೇ ಬರಬೇಕಿರುವ ಎಸ್‌-400 ಟ್ರಯಂಪ್ ಕ್ಷಿಪಣಿ ನಿರೋಧಕ ವ್ಯವಸ್ಥೆ, ಭಾರತಕ್ಕೆ ಪೂರೈಕೆಯಾಗುವುದು ವಿಳಂಬವಾಗುವ ಸಾಧ್ಯತೆ ಇದೆ. ಅಥವಾ ಆ ಒಪ್ಪಂದವನ್ನೇ ರದ್ದುಪಡಿಸಿ ಎಂದು ಅಮೆರಿಕವು ಭಾರತದ ಮೇಲೆ ಒತ್ತಡ ಹೇರುವ ಅಪಾಯವೂ ಇದೆ.

ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ರಷ್ಯಾ ಸಹ ದಿಗ್ಬಂಧನ ಹೇರುವ ಸಾಧ್ಯತೆ ಇದೆ. ಅಮೆರಿಕದ ಒತ್ತಡಕ್ಕೆ ಮಣಿದರೆ, ಭಾರತದ ಮೇಲೂ ರಷ್ಯಾ ಅಸಮಾಧಾನಗೊಳ್ಳುವ ಸಾಧ್ಯತೆ ಇದೆ. ಭಾರತಕ್ಕೆ ಅತಿಹೆಚ್ಚು ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದು-ಗುಂಡುಗಳನ್ನು ಪೂರೈಕೆ ಮಾಡುವ ಅತ್ಯಂತ ದೊಡ್ಡ ರಾಷ್ಟ್ರ ರಷ್ಯಾ. ಭಾರತದ ಮೇಲೆ ರಷ್ಯಾ ಅಸಮಾಧಾನಗೊಂಡರೆ, ಶಸ್ತ್ರಾಸ್ತ್ರ ಪೂರೈಕೆಯಲ್ಲೂ ವ್ಯತ್ಯಯವಾಗುವ ಅಪಾಯವಿದೆ.

ಹಸ್ತಕ್ಷೇಪಕ್ಕೆ ಅಮೆರಿಕದ ಆಕ್ಷೇಪ

2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಮಧ್ಯಪ್ರವೇಶ ಮಾಡಿರುವ ಸಾಧ್ಯತೆಯಿದೆ ಎಂದು ಅಮೆರಿಕ ಗುಪ್ತಚರ ಇಲಾಖೆಯು ಮಂಗಳವಾರ ನೀಡಿರುವ ವರದಿಯು ಬೈಡನ್ ಅವರನ್ನು ಕೆರಳಿಸಿದೆ. 2016ರ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಗೆಲುವಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪರೋಕ್ಷ ನೆರವು ನೀಡಿದ್ದರು ಎಂಬ ವಿವಾದವೇ ಇನ್ನೂ ತಣ್ಣಗಾಗಿಲ್ಲ. ಹೀಗಿರುವಾಗ 2020ರ ಅಧ್ಯಕ್ಷೀಯ ಚುನಾವಣೆಯಲ್ಲೂ ಟ್ರಂಪ್ ಅವರ ಪರವಾಗಿ ಪುಟಿನ್ ಕೆಲಸ ಮಾಡಿದ್ದಾರೆ ಎಂದು ಗುಪ್ತಚರ ವರದಿ ಉಲ್ಲೇಖಿಸಿದೆ. ಟ್ರಂಪ್ ಜೊತೆಗಿನ ಸೌಹಾರ್ದ ಸಂಬಂಧದ ಕಾರಣ ಪುಟಿನ್ ಅವರು ಬೈಡನ್ ಅವರನ್ನು ಸೋಲಿಸಲು ಶ್ರಮಿಸಿರುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

ಚುನಾವಣೆಯ ಸಮಯದಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವ ಪ್ರಯತ್ನವನ್ನು ರಷ್ಯಾ ನಡೆಸಿತು ಎಂದು ವರದಿ ಉಲ್ಲೇಖಿಸಿದೆ. ರಷ್ಯಾದ ಗುಪ್ತಚರ ಸಂಸ್ಥೆ ಜತೆ ಸಂಪರ್ಕ ಹೊಂದಿದ ಉಕ್ರೇನ್ ಮೂಲದ ವ್ಯಕ್ತಿಗಳು, ಅಮೆರಿಕದ ಕೆಲವು ಪ್ರಮುಖ ವ್ಯಕ್ತಿಗಳು ಮತ್ತು ಮಾಧ್ಯಮಗಳನ್ನು ಬೈಡನ್ ಸೋಲಿಸುವ ಅಭಿಯಾನಕ್ಕೆ ಬಳಸಿಕೊಂಡಿರುವ ಬಗ್ಗೆ ಶಂಕೆ ಇದೆ ಎಂದು ವರದಿ ತಿಳಿಸಿದೆ.

ರಷ್ಯಾದ ನಂಟು ಹೊಂದಿರುವ ಸೈಬರ್ ದಾಳಿಗಳು ಹಾಗೂ ಚುನಾವಣಾ ಸಂಬಂಧಿತ ಆನ್‌ಲೈನ್ ಹಸ್ತಕ್ಷೇಪದ ಬಗ್ಗೆ ಗಟ್ಟಿ ದನಿಯಲ್ಲಿ ಬೈಡನ್ ಮಾತನಾಡಿರುವುದು ಮತ್ತೊಂದು ಸುತ್ತಿನ ಸಂಘರ್ಷದ ಸೂಚನೆ ನೀಡಿದೆ.

ಗ್ಯಾಸ್‌ ಪೈಪ್‌ಲೈನ್‌ ವಿಚಾರದಲ್ಲಿ ಸಂಘರ್ಷ

ರಷ್ಯಾದಿಂದ ಜರ್ಮನಿಗೆ ನೈಸರ್ಗಿಕ ಅನಿಲವನ್ನು ಪೂರೈಸುವ ನಿರ್ಮಾಣ ಹಂತದ ನಾರ್ಡ್ ಸ್ಟ್ರೀಮ್ 2 ಗ್ಯಾಸ್‌ ಪೈಪ್‌ಲೈನ್ ವಿಚಾರದಲ್ಲಿ ಅಮೆರಿಕ–ರಷ್ಯಾ ನಡುವೆ ಸಂಘರ್ಷ ಏರ್ಪಟ್ಟಿದೆ. ಈ ಯೋಜನೆಗೆ ಸಂಬಂಧಿಸಿದ ಸಂಸ್ಥೆಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದೆ. ಕಾಮಗಾರಿಯಲ್ಲಿ ತೊಡಗಿರುವ ರಷ್ಯಾದ ಹಡಗಿನ ಮೇಲೆ ನಿರ್ಬಂಧ ವಿಧಿಸಿದೆ. ಇದು ಯುರೋಪ್‌ಗೆ ಒಂದು ಕೆಟ್ಟ ಯೋಜನೆ ಆಗಬಲ್ಲದು ಎಂದು ಬೈಡನ್ ಒತ್ತಿ ಹೇಳಿದ್ದಾರೆ. ನ್ಯಾಟೊದಲ್ಲಿ ರಷ್ಯಾದ ಪ್ರಭಾವ ಹೆಚ್ಚಳವಾಗಲು ಈ ಯೋಜನೆ ದಾರಿ ಮಾಡಿಕೊಡಬಹುದು ಎಂಬ ಬಗ್ಗೆ ಅಮೆರಿಕ ಸಂಸದರು ದನಿ ಎತ್ತಿದ್ದಾರೆ.

2019ರಿಂದಲೂ ನಾರ್ಡ್ ಸ್ಟ್ರೀಮ್ 2 ಯೋಜನೆಯು ಅಮೆರಿಕದ ಟೀಕೆಗೆ ಗುರಿಯಾಗಿದೆ. ನೈಸರ್ಗಿಕ ಅನಿಲಕ್ಕಾಗಿ ಯುರೋಪ್‌ನ ದೇಶಗಳು ರಷ್ಯಾದ ಮೇಲೆ ಸಂಪೂರ್ಣವಾಗಿ ಅವಲಂಬನೆಯಾಗುತ್ತವೆ ಎಂಬುದು ಅಮೆರಿಕದ ಆತಂಕ. ಇದಕ್ಕೆ ತಲೆಕೆಡಿಸಿಕೊಳ್ಳದ ಜರ್ಮನಿ, ಅಮೆರಿಕ ನಿರ್ಬಂಧದ ನಡುವೆಯೂ ಯೋಜನೆಯನ್ನು ಪುನರಾರಂಭಿಸಿರುವುದು ಅಮೆರಿಕವನ್ನು ಸಿಟ್ಟಿಗೇಳಿಸಿದೆ.

ಆಧಾರ: ಬಿಬಿಸಿ, ಇಂಡಿಪೆಂಡೆಂಟ್, ದಿ ನ್ಯೂಯಾರ್ಕ್ ಟೈಮ್ಸ್, ಸಿಇಡಬ್ಲ್ಯು, ರಾಯಿಟರ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.