ADVERTISEMENT

ಆಳ- ಅಗಲ | ಭಾರತದ ಕಾಡುಗಳಲ್ಲಿ ಹುಲಿ ಗರ್ಜನೆ

ವಿಶ್ವ ಹುಲಿದಿನ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 20:44 IST
Last Updated 28 ಜುಲೈ 2020, 20:44 IST
ಹುಲಿ
ಹುಲಿ    
""
""
""

ಜಗತ್ತಿನಲ್ಲಿ ಇರುವ ಹುಲಿಗಳ ಪೈಕಿ ಶೇ 80ರಷ್ಟು ಭಾರತದ ಕಾಡುಗಳಲ್ಲಿವೆ. ಭಾರತದ ವಿವಿಧ ಹುಲಿ ಸಂರಕ್ಷಿತ ಅರಣ್ಯಗಳಲ್ಲಿ 2,967 ಹುಲಿಗಳಿವೆ ಎಂದು ‘ಸ್ಟೇಟಸ್‌ ಆಫ್‌ ಟೈಗರ್ಸ್: ಕೊ ಪ್ರಿಡೇಟರ್ಸ್ ಎಂಡ್‌ ಪ್ರೇ ಇನ್‌ ಇಂಡಿಯಾ’ ಎಂಬ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಲಾಗಿದೆ. ಹುಲಿಗಳ ಸಂಖ್ಯೆ ಏರಿಕೆ ಮತ್ತು ಸಂರಕ್ಷಣೆಯಲ್ಲಿ ಬಹುದೊಡ್ಡ ಯಶಸ್ಸು ದಕ್ಕಿದೆ. ಈ ಯಶಸ್ಸು ಅಭೂತ‍ಪೂರ್ವವಾದುದು. ಯಾಕೆಂದರೆ, 2006ರ ಹುಲಿಗಣತಿ ಪ್ರಕಾರ ದೇಶದಲ್ಲಿ ಇದ್ದ ಹುಲಿಗಳ ಸಂಖ್ಯೆ 1,411. 2010 ಮತ್ತು 2014ರ ಗಣತಿಯಲ್ಲಿ ಇದು ಕ್ರಮವಾಗಿ 1,706 ಮತ್ತು 2,226ಕ್ಕೆ ಏರಿಕೆಯಾಯಿತು.

ಹಾಗಿದ್ದರೂ ಹುಲಿಗಳ ಸಂತತಿ ವೃದ್ಧಿಯ ದರವನ್ನು ಹೀಗೆಯೇ ಕಾಯ್ದುಕೊಳ್ಳುವುದು ಸುಲಭವೇನಲ್ಲ. ಸಂರಕ್ಷಣೆಗೆ ಹಲವು ಸವಾಲುಗಳು ಇವೆ. ಹುಲಿ ಸಂಚಾರ ಮಾರ್ಗಗಳ (ಟೈಗರ್‌ ಕಾರಿಡಾರ್‌) ಒತ್ತುವರಿ ಇಲ್ಲಿನ ಬಹುದೊಡ್ಡ ಸಮಸ್ಯೆ. ಪಶ್ಚಿಮ ಬಂಗಾಳದ ಸುಂದರ್‌ಬನ್‌ನಲ್ಲಿ 88 ಹುಲಿಗಳಿವೆ. ಇದು ಜೌಗು ಪ್ರದೇಶದಲ್ಲಿ ಇರುವ ಏಕೈಕ ಹುಲಿ ಆವಾಸಸ್ಥಾನ. ಈ ಪ್ರದೇಶದಿಂದ ಹೊರಗಿನ ಕಾಡುಗಳಿಗೆ ಹೋಗಲು ಹುಲಿಗಳಿಗೆ ಕಾರಿಡಾರ್‌ಗಳೇ ಇಲ್ಲ. ಹಾಗಾಗಿ, ಹುಲಿಗಳ ಸಂಖ್ಯೆ ಸೀಮಿತ ಕಾಡು ಪ್ರದೇಶದಲ್ಲಿ ಕೇಂದ್ರೀಕೃತವಾಗುತ್ತದೆ. ಮರಿ ಹುಲಿಗಳು ಯೌವನಕ್ಕೆ ಬಂದಾಗ ಸಂಘರ್ಷ ಏರ್ಪಡುತ್ತದೆ. ಈ ಸಂಘರ್ಷದಲ್ಲಿ ಸೋತ ಹುಲಿಯು ಕಾಡಿನ ಅಂಚಿಗೆ ಹೋಗಬೇಕಾಗುತ್ತದೆ. ಕಾಡಿನ ಅಂಚಿನಲ್ಲಿ ಬಲಿ ಪ್ರಾಣಿಗಳ (ಹುಲಿಗೆ ಆಹಾರವಾಗುವ ಪ್ರಾಣಿಗಳು) ಸಂಖ್ಯೆ ಕಡಿಮೆ ಇರುತ್ತದೆ. ಜತೆಗೆ, ಕಾಡಿನ ಅಂಚಿನಲ್ಲಿ ವಾಸವಿರುವ ಜನರು ಇಲ್ಲಿ ಜಾನುವಾರುಗಳನ್ನು ಮೇಯಿಸುತ್ತಾರೆ. ಬಲಿ ಪ್ರಾಣಿ ಸಿಗದ ಹುಲಿಯು ಜಾನುವಾರುಗಳನ್ನು ಹಿಡಿದು ತಿನ್ನಲಾರಂಭಿಸುತ್ತದೆ. ಅನಿವಾರ್ಯ ಸಂದರ್ಭದಲ್ಲಿ ಮನುಷ್ಯನ ಮೇಲೆಯೂ ಹುಲಿ ದಾಳಿ ಮಾಡಬಹುದು. ಇಂತಹ ಸಂದರ್ಭದಲ್ಲಿ ಹುಲಿಯ ಬೇಟೆ ನಡೆಯುತ್ತದೆ.

ಪುಷ್ಪಗಿರಿ, ಬ್ರಹ್ಮಗಿರಿ, ತಲಕಾವೇರಿ, ಬಿಳಿಗಿರಿರಂಗನಬೆಟ್ಟ, ಸತ್ಯಮಂಗಳ, ವಯನಾಡ್‌, ನಾಗರಹೊಳೆ, ಮುದುಮಲೈ ಹುಲಿ ಸಂರಕ್ಷಿತಾರಣ್ಯಗಳನ್ನು ಹೊಂದಿರುವ ದಕ್ಷಿಣ ಭಾರತದ ನೀಲಗಿರಿ ಅರಣ್ಯ ಪ್ರದೇಶವು ಅತ್ಯುತ್ತಮ ಸಂರಕ್ಷಣೆಯ ವಲಯ ಎಂಬ ಹೆಗ್ಗಳಿಕೆ ಯನ್ನು ಹೊಂದಿದೆ. ಆದರೆ, ಈ ಪ್ರದೇಶದಲ್ಲಿ ಕೂಡ ಕಾಡಿನ ವಿಸ್ತಾರ ಕುಗ್ಗುತ್ತಿದೆ ಮತ್ತು ಅಡೆ ತಡೆ ಇಲ್ಲದ ಸಂಚಾರಕ್ಕೆ ಅಡ್ಡಿ ಎದುರಾಗಿದೆ. ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ಹೆದ್ದಾರಿಗಳು, ಕೃಷಿಗಾಗಿ ಕಾಡಿನ ಒತ್ತುವರಿ, ಜಲ ವಿದ್ಯುತ್‌ ಯೋಜನೆಗಳು ಹುಲಿಗಳನ್ನು ಸಣ್ಣ ಪ್ರದೇಶಕ್ಕೆ ಸೀಮಿತಗೊಳಿಸುತ್ತವೆ. ಹೊಸ ಆವಾಸಸ್ಥಾನಗಳನ್ನು ಹುಡುಕಿಕೊಳ್ಳಲು ಸಾಧ್ಯವಾಗದೆ ಹುಲಿಗಳ ನಡುವಣ ಸಂಘರ್ಷದಲ್ಲಿಯೂ ಹಲವು ಹುಲಿಗಳು ಸಾಯುತ್ತವೆ. ಬಲಿಮೃಗಗಳ ಸಂಖ್ಯೆಯಲ್ಲಿ ಕುಸಿತ ಕೂಡ ಹುಲಿಗಳ ಸಂತತಿ ವೃದ್ಧಿಗೆ ಪ್ರತಿಕೂಲವಾಗುತ್ತದೆ.

ADVERTISEMENT

ಹುಲಿಗಳು ಮಾತ್ರವಲ್ಲದೆ, ಯಾವುದೇ ಕಾಡು ಪ್ರಾಣಿಗಳ ಸಂರಕ್ಷಣೆಗೆ ವಿಸ್ತಾರವಾದ, ನಿರಂತರವಾದ ಅರಣ್ಯವನ್ನು ಕಾಯ್ದುಕೊಳ್ಳುವುದು ಅಗತ್ಯ. ಸ್ಥಳೀಯ ಸಮುದಾಯವನ್ನು ಸಂರಕ್ಷಣೆ ಪ್ರಯತ್ನದಲ್ಲಿ ಭಾಗಿಯಾಗಿಸುವುದು ನಿರ್ಣಾಯಕ. ಜಾಗೃತಿ ಮೂಡಿಸಿ ಅರಣ್ಯ ಅಭಿವೃದ್ಧಿಯ ಕೆಲಸಗಳಲ್ಲಿ ಸ್ಥಳೀಯರನ್ನು ಭಾಗಿಯಾಗಿಸಬಹುದು. ಕಳ್ಳಬೇಟೆಯ ವಿರುದ್ಧ ಸ್ಥಳೀಯರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು.

ಸಂಖ್ಯೆ ಏರಿಕೆ

ದೇಶದಾದ್ಯಂತ ಎಲ್ಲಾ ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗಿದೆ. 2006ರ ಗಣತಿಯಲ್ಲಿ ಮಧ್ಯಪ್ರದೇಶದಲ್ಲಿ ಹೆಚ್ಚು ಹುಲಿಗಳನ್ನು ಪತ್ತೆ ಮಾಡಲಾಗಿತ್ತು. ನಂತರದ ಎರಡು ಗಣತಿಗಳು ನಡೆದಾಗ ಕರ್ನಾಟಕದಲ್ಲಿ ಹೆಚ್ಚು ಹುಲಿಗಳು ಪತ್ತೆಯಾಗಿದ್ದವು. ಈಗ ಮಧ್ಯಪ್ರದೇಶದಲ್ಲಿ ಹೆಚ್ಚು ಹುಲಿಗಳು ಪತ್ತೆಯಾಗಿವೆ.

****
ಗಣತಿಗೆ ನೆರವಾದ ತಂತ್ರಜ್ಞಾನ

ಭಾರತದಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ರಾಷ್ಟ್ರೀಯ ಹುಲಿಗಳ ಗಣತಿ ಮತ್ತು ಮೌಲ್ಯಮಾಪನ ಜಗತ್ತಿನ ದೊಡ್ಡ ಜೀವವೈವಿಧ್ಯ ಸಮೀಕ್ಷೆಗಳಲ್ಲಿ ಒಂದು. ಜಗತ್ತಿನಲ್ಲಿ ಲಭ್ಯವಿರುವ ಎಲ್ಲ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಈ ಸಮೀಕ್ಷೆ ನಡೆಸಲಾಗುತ್ತಿದೆ.

ಈ ಸಮೀಕ್ಷೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಡೆಹ್ರಾಡೂನ್‌ನಲ್ಲಿನ ಭಾರತೀಯ ವನ್ಯಜೀವಿ ಸಂಸ್ಥೆಯ ಹಿರಿಯ ವಿಜ್ಞಾನಿಗಳಾದ ಪ್ರೊ. ಯಾದವೇಂದ್ರದೇವ್‌ ಜಾಲಾ ಮತ್ತು ಪ್ರೊ. ಖಮರ್‌ ಖುರೇಷಿ ಅವರು, ಇಲ್ಲಿಯವರೆಗೆ ನಡೆದ ಬಹುತೇಕ ಎಲ್ಲ ಹುಲಿಗಳ ಗಣತಿ ಮತ್ತು ಸಮೀಕ್ಷೆಗಳಲ್ಲೂ ಪಾಲ್ಗೊಂಡಿದ್ದಾರೆ.

ಈ ಇಬ್ಬರು ವಿಜ್ಞಾನಿಗಳು, ಹುಲಿಗಳ ಗಣತಿ ಪ್ರಕ್ರಿಯೆಯನ್ನು ದೂರವಾಣಿ ಮೂಲಕ ‘ಪ್ರಜಾವಾಣಿ‘ ಯೊಂದಿಗೆ ಹಂಚಿಕೊಂಡಿದ್ದಾರೆ. ಆ ಅನುಭವಗಳನ್ನು ಅವರ ಮಾತುಗಳಲ್ಲೇ ಕೇಳೋಣ.

2006ರಿಂದ ಆರಂಭವಾಗಿರುವ ಈ ಹುಲಿಗಣತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. 2019 ಮಾರ್ಚ್‌ನಲ್ಲಿ ನಡೆದಿರುವುದು ಕೊನೆಯ ಗಣತಿ. ಈ ಗಣತಿಯಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಅತ್ಯಾಧುನಿಕ ವಿಶ್ಲೇಷಣಾ ಬಳಸಿಕೊಳ್ಳಲಾಗುತ್ತದೆ. ಹುಲಿಗಳ ಕರಾರುವಾಕ್ಕಾದ ಗಣತಿಗಾಗಿಯೇ ‘ಎಂ– ಸ್ಟ್ರೈ ಪ್ಸ್‌’ ಎಂಬ ಮೊಬೈಲ್ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಎಂ–ಸ್ಟ್ರೈಪ್ಸ್‌ ಎನ್ನುವುದು ‘ಮಾನಿಟರಿಂಗ್ ಸಿಸ್ಟಮ್‌ ಫಾರ್‌ ಟೈಗರ್ಸ್‌–ಇಂಟೆನ್ಸಿವ್‌ ಪ್ರೊಟೆಕ್ಷನ್‌‌ ಆಂಡ್‌ ಎಕೊಲಜಿ ಸ್ಟೇಟಸ್’ ಸಂಕ್ಷಿಪ್ತ ರೂಪ.

ಅರಣ್ಯಗಳಲ್ಲಿ ಅಳವಡಿಸಲಾದ ಸ್ವಯಂಚಾಲಿತ ಕ್ಯಾಮೆರಾಗಳು ಸೆರೆ ಹಿಡಿಯುವ ಹುಲಿಗಳ ಚಿತ್ರಗಳು ಗಣತಿ ವೇಳೆ ಪುನರಾವರ್ತನೆಯಾಗದಂತೆ ಪ್ರತ್ಯೇಕಿಸಲು ಕೃತಕ ಬುದ್ಧಿಮತ್ತೆ (ಎಐ) ನೆರವು ಪಡೆಯಲಾಗಿದೆ. ಜಿಪಿಎಸ್‌ ಮತ್ತು ಜಿಯೊ ಟ್ಯಾಗ್‌ ಮೂಲಕ ಅತ್ಯಂತ ನಿಖರವಾಗಿ ಸಮೀಕ್ಷೆ ನಡೆಸಲಾಗಿದೆ. ಇದರಿಂದ ಸಾಮಾನ್ಯವಾಗಿ ಗಣತಿ ವೇಳೆ ಆಗುತ್ತಿದ್ದ ಸಣ್ಣಪುಟ್ಟ ಮಾನವ ದೋಷಗಳನ್ನು ತಗ್ಗಿಸಲಾಗಿದೆ.

ಕೃತಕ ಬುದ್ಧಿಮತ್ತೆ ಆಧಾರಿತ ಕ್ಯಾಮೆರಾ ಟ್ರ್ಯಾಪ್‌ ಡೇಟಾ ರೆಪೊಸಿಟರಿ ಆಂಡ್ ಅನಾಲಿಸಿಸ್‌ ಟೂಲ್‌ (ಕಾಟ್ರ್ಯಾಟ್‌) ಹುಲಿಗಳ ಮೈಮೇಲಿನ ಪಟ್ಟೆಗಳ ಮಾದರಿ (ಸ್ಟ್ರೈಪ್‌ ಪ್ಯಾಟರ್ನ್) ಮತ್ತು ಫೂಟ್‌ಪ್ರಿಂಟ್‌ (ಹೆಜ್ಜೆಗುರುತು) ವಿಶ್ಲೇಷಿಸಿ ನಿಖರವಾಗಿ ಹುಲಿಗಳ ಸಂಖ್ಯೆ ಪತ್ತೆ ಹಚ್ಚುತ್ತದೆ.

ಪರಿಸರದಲ್ಲಿ ಹುಲಿಗಳ ಮಹತ್ವ

* 1973ರಲ್ಲಿ ಮೊದಲ ಬಾರಿಗೆ ದೇಶದಲ್ಲಿ ‘ಪ್ರಾಜೆಕ್ಟ್‌ ಟೈಗರ್‌’ ಹೆಸರಿನಲ್ಲಿ ಹುಲಿ ಸಂರಕ್ಷಣೆ ಯೋಜನೆ ಅನುಷ್ಠಾನಕ್ಕೆ ತರಲಾಯಿತು.

* ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಕೈಗೊಂಡ ರಚನಾತ್ಮಕ ಮತ್ತು ಪರಿಣಾಮಕಾರಿ ಕ್ರಮಗಳಿಂದಾಗಿ ದೇಶದಲ್ಲಿ 16 ವರ್ಷಗಳಿಂದ ಹುಲಿಗಳ ಸಂಖ್ಯೆ ಏರುತ್ತಿದೆ.

* 1973ರಲ್ಲಿ ದೇಶದಲ್ಲಿ ಒಟ್ಟು 9 ಹುಲಿ ಸಂರಕ್ಷಿತ ಅಭಯಾರಣ್ಯಗಳು 18,278 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹರಡಿದ್ದವು. ಸದ್ಯ ಅವುಗಳ ಸಂಖ್ಯೆ 50ಕ್ಕೆ ಏರಿದ್ದು, ವಿಸ್ತೀರ್ಣ ಕೂಡ 72,749 ಚದರ ಕಿಲೋ ಮೀಟರ್‌ಗೆ ಏರಿದೆ.‌

***
ರಷ್ಯಾದ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ2010ರಲ್ಲಿ ನಡೆದ ‘ವಿಶ್ವ ಹುಲಿ ಸಂರಕ್ಷಣಾ ಶೃಂಗಸಭೆ’ಯಲ್ಲಿ 2022ರ ವೇಳೆಗೆ ಜಗತ್ತಿನ ಹುಲಿಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಬೇಕು ಎಂಬ ನಿರ್ಣಯ ಅಂಗೀಕರಿಸಲಾಗಿತ್ತು. ಆ ದಿಸೆಯಲ್ಲಿ ಭಾರತ ಸಕಾರಾತ್ಮಕ ಹೆಜ್ಜೆಯನ್ನಿಡುತ್ತಿದೆ.ಜಗತ್ತಿನ ಒಟ್ಟು ಹುಲಿಗಳ ಪೈಕಿ ಭಾರತದಲ್ಲಿಯೇ ಶೇ 80ರಷ್ಟು ಹುಲಿಗಳಿವೆ
-ಡಾ. ಯಾದವೇಂದ್ರದೇವ್‌ ಜಾಲಾ, ಹಿರಿಯ ವಿಜ್ಞಾನಿ, ಭಾರತೀಯ ವನ್ಯಜೀವಿ ಸಂಸ್ಥೆ, ಡೆಹ್ರಾಡೂನ್

ಕಾಡುಗಳ ಆರೋಗ್ಯ ಮತ್ತು ಸಮತೋಲನ ಕಾಪಾಡುವಲ್ಲಿ ಹುಲಿಗಳ ಪಾತ್ರ ಮುಖ್ಯ. ಕಾಡುಗಳಿಲ್ಲದೆ ಹುಲಿಗಳು ಉಳಿಯಲು ಸಾಧ್ಯವಿಲ್ಲ. ಹುಲಿಗಳಿಲ್ಲದೆ ಅರಣ್ಯಗಳು ಉಳಿಯಲಾರವು. ಹುಲಿಗಳನ್ನು ರಕ್ಷಿಸಿದರೆ ಕಾಡುಗಳ ಜೀವವೈವಿಧ್ಯ ಮತ್ತು ಪರಿಸರ ಸಮತೋಲಿತವಾಗಿರುತ್ತದೆ
-ಡಾ. ಖಮರ್‌ ಖುರೇಷಿ, ಹಿರಿಯ ವಿಜ್ಞಾನಿ, ಭಾರತೀಯ ವನ್ಯಜೀವಿ ಸಂಸ್ಥೆ, ಡೆಹ್ರಾಡೂನ್

*****
ಹುಲಿಹೆಜ್ಜೆ...

ದೇಶದಲ್ಲಿ ಹುಲಿಗಳ ಸಂಖ್ಯೆ ಇಳಿಮುಖವಾಗುತ್ತಿವೆ ಎಂಬ ವರದಿಯಿಂದ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ 2005ರಲ್ಲಿ ‘ಹುಲಿ ಸಂರಕ್ಷಣಾ ಕಾರ್ಯಪಡೆ’ (ಟೈಗರ್‌ ಟಾಸ್ಕ್‌ಫೋರ್ಸ್‌) ನೇಮಕ ಮಾಡಿತು.

ರಾಜ್ಯ ಅರಣ್ಯ ಇಲಾಖೆ, ವನ್ಯಜೀವಿಗಳಿಗಾಗಿ ಕೆಲಸ ಮಾಡುತ್ತಿರುವ ಸ್ವಯಂಸೇವಾ ಸಂಸ್ಥೆಗಳು ಮತ್ತು ಭಾರತೀಯ ವನ್ಯಜೀವಿ ಸಂಸ್ಥೆಯ ಜಂಟಿ ಸಹಯೋಗದಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರ (ಎನ್‌ಟಿಸಿಎ) ಹುಲಿಗಳ ಗಣತಿ ನಡೆಸುತ್ತದೆ.

ಭಾರತೀಯ ವನ್ಯಜೀವಿ ಸಂಸ್ಥೆ (ಡಬ್ಲ್ಯೂಐಐ) ಅಳವಡಿಸಿದ ವೈಜ್ಞಾನಿಕ ಪದ್ಧತಿಯ ಅನ್ವಯ ಕಾರ್ಯಪಡೆಯು ದೇಶದ ಅರಣ್ಯಗಳಲ್ಲಿರುವ ಹುಲಿಗಳ ಗಣತಿ ನಡೆಸಿ, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ.

2006 ರಿಂದ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಈ ಸಂಸ್ಥೆಗಳು ಜಂಟಿಯಾಗಿ ಹುಲಿಗಳ ಸ್ಥಿತಿಗತಿ ಬಗ್ಗೆ ಮೌಲ್ಯಮಾಪನ ನಡೆಸಿ ‘ಸ್ಟೇಟಸ್ ಆಫ್‌ ಟೈಗರ್ಸ್‌, ಕೋ–ಪ್ರಿಡೇಟರ್ಸ್ ಆಂಡ್‌ ದೇರ್‌ ಹ್ಯಾಬಿಟೇಟ್‌’ ಹೆಸರಿನಲ್ಲಿ ವರದಿ ನೀಡುತ್ತವೆ.

ಕನಿಷ್ಠ 500–600 ಪುಟಗಳ ವರದಿಯಲ್ಲಿ ದೇಶದ ಅರಣ್ಯಗಳಲ್ಲಿರುವ ಹುಲಿಗಳ ಗಣತಿ, ಸ್ಥಿತಿಗತಿ, ಬೇಟೆ ಮತ್ತು ವಾಸಸ್ಥಾನಗಳ ಬಗ್ಗೆ ಸಮಗ್ರ ವಿಶ್ಲೇಷಣೆ ಮತ್ತು ಮೌಲ್ಯಮಾಪನ ನಡೆಸಲಾಗುತ್ತದೆ.

2006ರಲ್ಲಿ ಮೊದಲ ‘ಹುಲಿ ಗಣತಿ’ ವರದಿ ಬಿಡುಗಡೆ ಮಾಡಲಾಗಿತ್ತು. 2019ರಲ್ಲಿ ನಡೆದಿರುವುದು ನಾಲ್ಕನೇ ಹುಲಿ ಗಣತಿ.

****


ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳು

ಕಾಳಿ

* 4 ಕ್ಯಾಮೆರಾ ಟ್ರ್ಯಾಪ್‌ ಮೂಲಕ ಪತ್ತೆ ಮಾಡಲಾಗಿರುವ ಹುಲಿಗಳ ಸಂಖ್ಯೆ

ಉತ್ತರ ಕನ್ನಡ ಜಿಲ್ಲೆಯ ಅಣಶಿ ರಾಷ್ಟ್ರೀಯ ಉದ್ಯಾನ ಮತ್ತು ದಾಂಡೇಲಿ ವನ್ಯಜೀವಿ ಅಭಯಾರಣ್ಯದಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶವಿದೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿ 1,306 ಚದರ ಕಿ.ಮೀ. ಇದು ಗೋವಾ ಮತ್ತು ಮಹಾರಾಷ್ಟ್ರದ ಇತರ ಸಂರಕ್ಷಿತ ಅರಣ್ಯ ಪ್ರದೇಶಗಳಿಗೆ ಹೊಂದಿಕೊಂಡಿದೆ. ವಾರ್ಷಿಕ 3,000–6,000 ಮಿಲಿಮೀಟರ್‌ನಷ್ಟು ಮಳೆ ಸುರಿಯುವ ಈ ಪ್ರದೇಶದಲ್ಲಿ ಜೀವವೈವಿಧ್ಯ ಹೇರಳವಾಗಿದೆ. ಚಿರತೆ, ಆನೆ, ಕಾಡುಹಂದಿ, ಕಾಡೆಮ್ಮೆ, ಸಾಂಬರ್‌, ಜಿಂಕೆ, ಕಾಡು ನಾಯಿಗಳ ಸಂಖ್ಯೆ ಹೇರಳವಾಗಿದೆ.

* ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲೇ 52 ಗ್ರಾಮಗಳಿವೆ. ಇದು ಹುಲಿಗಳ ಅಭಿವೃದ್ಧಿಗೆ ತೊಡಕಾಗಿದೆ

* ಸಂರಕ್ಷಿತ ಪ್ರದೇಶದ ಹೊರಗೆ ಪಟ್ಟಣಗಳು, ಕೈಗಾರಿಕೆಗಳೂ ಇವೆ. ಇವು ಸಹ ಹುಲಿ ಅಭಿವೃದ್ಧಿಗೆ ತೊಡಕಾಗಿವೆ

ಬಂಡೀಪುರ

* 912 ಚದರ ಕಿ.ಮೀ. ಸಂರಕ್ಷಿತ ಪ್ರದೇಶದ ವ್ಯಾಪ್ತಿ

* 126 ಹುಲಿಗಳು ಇವೆ ಎಂದು ಗುರುತಿಸಲಾಗಿದೆ

* 7.77 ಹುಲಿಗಳು ಪ್ರತಿ 100 ಚದರ ಕಿ.ಮೀ.ನಲ್ಲಿ ಹುಲಿಗಳ ಸಾಂದ್ರತೆ

2014ರ ಗಣತಿಗಿಂತಲೂ ಹೆಚ್ಚು ಹುಲಿಗಳಿವೆ ಎಂದು ಗುರುತಿಸಲಾಗಿದೆ. ಹುಲಿ ಸಂರಕ್ಷಣೆ ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದದ್ದರ ಫಲ ಇದೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೂ ಎರಡು ಪ್ರಮುಖ ಸಮಸ್ಯೆಗಳನ್ನು ಈ ಸಂರಕ್ಷಿತ ಪ್ರದೇಶ ಎದುರಿಸುತ್ತಿದೆ. ಸಂರಕ್ಷಿತ ಪ್ರದೇಶ ಗಡಿಯ 5 ಕಿ.ಮೀ. ವ್ಯಾಪ್ತಿಯಲ್ಲಿ 200 ಹಳ್ಳಿಗಳಿವೆ. ಈ ಹಳ್ಳಿಗಳ ಜನರ ಜಾನುವಾರುಗಳು ಅರಣ್ಯ ಪ್ರದೇಶದಲ್ಲೇ ಮೇಯುತ್ತವೆ. ಜತೆಗೆ ಸೌದೆಗಾಗಿ ಅರಣ್ಯದ ಮರಗಳನ್ನು ಆಶ್ರಯಿಸಲಾಗಿದೆ. ಎರಡು ಹೆದ್ದಾರಿಗಳೂ ಈ ಸಂರಕ್ಷಿತ ಪ್ರದೇಶವನ್ನು ಹಾದುಹೋಗುತ್ತವೆ. ಈ ಪ್ರದೇಶದಲ್ಲಿ ಬಿದಿರಿನ ವ್ಯಾಪ್ತಿ ಕುಗ್ಗುತ್ತಿದೆ ಮತ್ತು ಲಂಟಾನಾ ಕ್ಷಿಪ್ರಗತಿಯಲ್ಲಿ ವ್ಯಾಪ್ತಿಸುತ್ತಿದೆ. ಇದು ಹುಲಿ ಸಂರಕ್ಷಣೆಗೆ, ಬಲಿ ಪ್ರಾಣಿಗಳ ಅಭಿವೃದ್ಧಿಗೆ ಮತ್ತು ಆ ಮೂಲಕ ಹುಲಿಗಳ ಸಹಜ ಅಭಿವೃದ್ಧಿಗೆ ತೊಡಕಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭದ್ರಾ

*492 ಚದರ ಕಿ.ಮೀ. ಸಂರಕ್ಷಿತ ಪ್ರದೇಶದ ವ್ಯಾಪ್ತಿ

* 28 ಹುಲಿಗಳನ್ನು ಕ್ಯಾಮೆರಾ ಟ್ರ್ಯಾಪ್ ಮೂಲಕ ಪತ್ತೆ ಮಾಡಲಾಗಿದೆ

* 2.26 ಪ್ರತಿ 100 ಚದರ ಕಿ.ಮೀ.ನಲ್ಲಿ ಹುಲಿ ಸಾಂದ್ರತೆ

1988ರಲ್ಲಿ ಇದನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಯಿತು. 2002ರ ನಂತರ ಈ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿದ್ದ ಹಲವು ಗ್ರಾಮಗಳನ್ನು ಬೇರೆ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಯಿತು. ಆನಂತರ ಈ ಪ್ರದೇಶದಲ್ಲಿ ಬಲಿ ಪ್ರಾಣಿಗಳ ಸಂಖ್ಯೆ ಮತ್ತು ದಟ್ಟಣೆಯಲ್ಲಿ ಏರಿಕೆಯಾಗಿದೆ. ಆರಂಭದ ದಿನಗಳಿಂದಲೂ ಇಲ್ಲಿ ಹುಲಿಗಳ ದಟ್ಟಣೆ ಕಡಿಮೆ ಇದೆ. ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಇರುವ ಧಾರ್ಮಿಕ ಸ್ಥಳಗಳು, ನೀರಾವರಿ ಯೋಜನೆಗಳು ದೊಡ್ಡ ತೊಡಕುಗಳಾಗಿವೆ.

ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ

* 540 ಚದರ ಕಿ.ಮೀ. ಸಂರಕ್ಷಿತ ಪ್ರದೇಶದ ವ್ಯಾಪ್ತಿ

* 49 ಹುಲಿಗಳನ್ನು ಕ್ಯಾಮೆರಾ ಟ್ರ್ಯಾಪ್‌ ಮೂಲಕ ಪತ್ತೆ ಮಾಡಲಾಗಿದೆ

* 4.96 ಪ್ರತಿ 100 ಚದರ ಕಿ.ಮೀ.ನಲ್ಲಿ ಹುಲಿ ಸಾಂದ್ರತೆ

2011ರಲ್ಲಿ ಇದನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ. ಇಲ್ಲಿ ಹುಲಿಗಳ ದಟ್ಟಣೆ ಸಾಧಾರಣಮಟ್ಟದಲ್ಲಿದೆ. ಈ ಸಂರಕ್ಷಿತ ಪ್ರದೇಶವು ಬಂಡೀಪುರ–ನಾಗರಹೊಳೆ–ಮುದುಮಲೈ–ವಯನಾಡ್ ಸಂರಕ್ಷಿತ ಪ್ರದೇಶಗಳ ಸಾಲಿನಲ್ಲೇ ಇರುವುದರಿಂದ ಮುಂದಿನ ದಿನಗಳಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಸಂರಕ್ಷಿತ ಪ್ರದೇಶದ ಸುತ್ತ ಮತ್ತು ಹೃದಯಭಾಗದಲ್ಲಿ ಅರಣ್ಯವಾಸಿಗಳ ನೆಲೆ ಇದೆ. ಅಲ್ಲದೆ ಸತ್ಯಮಂಗಲ–ಚಾಮರಾಜನಗರ ಮತ್ತು ಕೊಳ್ಳೇಗಾಲ–ಹಸನೂರು ರಸ್ತೆಗಳು ಸಂರಕ್ಷಿತ ಪ್ರದೇಶವನ್ನು ಹಾದುಹೋಗುತ್ತವೆ. ಇದು ಅತ್ಯಂತ ದೊಡ್ಡ ತೊಡಕು ಎಂದು ಪರಿಗಣಿಸಲಾಗಿದೆ.

ನಾಗರಹೊಳೆ

* 644 ಚದರ ಕಿ.ಮೀ. ಸಂರಕ್ಷಿತ ಪ್ರದೇಶದ ವ್ಯಾಪ್ತಿ

* 125 ಹುಲಿಗಳನ್ನು ಕ್ಯಾಮೆರಾ ಟ್ರ್ಯಾಪ್‌ ಮೂಲಕ ಪತ್ತೆ ಮಾಡಲಾಗಿದೆ

* 11.82 ಪ್ರತಿ 100 ಚದರ ಕಿ.ಮೀ.ನಲ್ಲಿ ಹುಲಿ ಸಾಂದ್ರತೆ

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಾಂದ್ರತೆ ಹೆಚ್ಚು. ಪಶ್ಚಿಮಘಟ್ಟದ ಹುಲಿ ಸಂರಕ್ಷಿತ ಪ್ರದೇಶದಲ್ಲೇ ಹೆಚ್ಚು ಹುಲಿ ಸಾಂದ್ರತೆ ಇರುವ ಪ್ರದೇಶವಿದು. ಸಂರಕ್ಷಿತ ಪ್ರದೇಶದ ಹೃದಯ ಭಾಗದಲ್ಲೇ 33 ಜನವಸತಿ ಪ್ರದೇಶಗಳಿವೆ. ಅಲ್ಲದೆ, ರಾಷ್ಟ್ರೀಯ ಹೆದ್ದಾರಿ ಸಹ ಸಂರಕ್ಷಿತ ಪ್ರದೇಶದ ಹೃದಯ ಭಾಗವನ್ನು ಹಾದುಹೋಗುತ್ತದೆ. ಇದು ಹುಲಿ ಸಂರಕ್ಷಣೆಯಲ್ಲಿ ದೊಡ್ಡ ತೊಡಕಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

***
ಮಾನವ ಹಸ್ತಕ್ಷೇಪದಿಂದ ಅಪಾಯ
ಮಾನವನ ಅಸ್ತಕ್ಷೇಪದಿಂದ ವನ್ಯ ಮೃಗಗಳ ಆವಾಸಸ್ಥಾನ ಹಾಗೂ ಅವುಗಳ ಜೀವ ಎಷ್ಟು ಅಪಾಯಕ್ಕೆ ಒಳಗಾಗಿದೆ ಎಂಬುದು ಕ್ಯಾಮೆರಾ ಟ್ರ್ಯಾಪ್‌ನಿಂದ ಸಂಗ್ರಹಿಸಿದ ಚಿತ್ರಗಳು ಬಿಡಿಸಿಡುತ್ತವೆ.

ಅನೇಕ ರಕ್ಷಿತಾರಣ್ಯಗಳಲ್ಲಿ ದನಗಳ ಮೇಯಿಸುವಿಕೆ ಎಗ್ಗಿಲ್ಲದೆ ನಡೆಯುತ್ತಿದ್ದರೆ, ಕೆಲವೆಡೆ ನಾಯಿಗಳು ಗುಂಪಾಗಿ ಪ್ರಾಣಿಗಳ ಮೇಲೆ ದಾಳಿ ನಡೆಸುವುದು ಕಂಡುಬಂದಿದೆ.

ಉದಂತಿ–ಸೀತಾನದಿ, ಪಲಮಾವು, ಶ್ರೀಶೈಲಂ, ರಾಜಾಜಿ ರಕ್ಷಿತಾರಣ್ಯ, ನಾಗರಹೊಳೆ ಮುಂತಾದ ಹಲವು ಅರಣ್ಯಗಳಲ್ಲಿ ಕಾಡುಪ್ರಾಣಿಗಳ ಬೇಟೆ ನಡೆಯುವುದು ಕಂಡುಬಂದಿದೆ. ಶಸ್ತ್ರಸಹಿತರಾದ ಬೇಟೆಗಾರರು ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾಗಿದ್ದಾರೆ. ಬೇಟೆಗಾರರ ದಾಳಿಯಿಂದ ಗಾಯಗೊಂಡ ಹುಲಿಗಳು ಸಹ ಕ್ಯಾಮೆರಾ ಕಣ್ಣಿಗೆ ಬಿದ್ದಿವೆ.

ಕೆಲವು ಅರಣ್ಯ ಪ್ರದೇಶದಲ್ಲಿ ಕಾಡಿನ ನಿವಾಸಿಗಳು ಮತ್ತು ಹುಲಿಗಳ ಮಧ್ಯೆ ಸಂಘರ್ಷ ತೀವ್ರಗೊಂಡಿದೆ. ಅರಣ್ಯದ ಅಂಚಿನಲ್ಲಿ ವಾಸಿಸುವ ಇಂಥ ಸಮುದಾಯದವರಿಗೆ ಪರಿಹಾರ ಹಾಗೂ ಇತರ ಸೌಲಭ್ಯಗಳನ್ನು ನೀಡಿ ಅವರನ್ನು ಸ್ಥಳಾಂತರಿಸುವ ಯೋಜನೆಗಳನ್ನು ಜಾರಿ ಮಾಡಬೇಕಾಗಿದೆ.

ಇತರ ರಕ್ಷಿತಾರಣ್ಯಗಳಿಗೆ ಹೋಲಿಸಿದರೆ ಸುಂದರಬನ್‌, ಒರಂಗ, ಕಾಲಕಾಡ್‌ ಮುಂಡಂತುರೈ, ಪೆರಿಯಾರ್‌ ಕಾರ್ಬೆಟ್‌, ಮಾನಸಾ, ಕಾಜಿರಂಗ ಹಾಗೂ ಬಂಡೀಪುರ ಅರಣ್ಯಗಳಲ್ಲಿ ಮಾನವನ ಹಸ್ತಕ್ಷೇಪ ಕಡಿಮೆ ಕಂಡುಬಂದಿದೆ. ಆದರೆ, ಬೇಟೆನಾಯಿಗಳ ಗುಂಪುಗಳು ಅನೇಕ ಕಾಡುಗಳಲ್ಲಿ ಪತ್ತೆಯಾಗಿವೆ. ಇವುಗಳು ಅಪಾಯಕಾರಿಯಾದ ರೇಬಿಸ್‌ನಂಥ ಕಾಯಿಲೆಗಳ ವಾಹಕಗಳಾಗಿರುವುದರಿಂದ ಇತರ ಪ್ರಾಣಿಗಳಿಗೆ ಇವುಗಳಿಂದ ಅಪಾಯ ಇರುತ್ತದೆ.

ಹುಲಿ ಸಂರಕ್ಷಣೆ ಎಂಬುದು ಹುಲಿಗಳ ಸಂಖ್ಯೆಯನ್ನು ಹೆಚ್ಚಿಸುವಷ್ಟಕ್ಕೇ ಸೀಮಿತವಾಗಬಾರದು. ಹುಲಿಗಳ ಸಂರಕ್ಷಣೆ ಆಗಬೇಕಾದರೆ, ಒಟ್ಟಾರೆ ಪ್ರಾಣಿ ಸಂಕುಲದ ಅಸ್ತಿತ್ವ ಮತ್ತು ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವುದು ಅಗತ್ಯ. ಅದಕ್ಕಾಗಿ ನಾವು ಜೈವಿಕ ತಳಿಗಳಿಗೆ ಅನುಗುಣವಾಗಿ ಹುಲಿಗಳ ಸಂಖ್ಯೆಯನ್ನು ತಿಳಿಯಬೇಕು. ಆನಂತರ ಯಾವ ತಳಿಯ ಹುಲಿ ಅಳಿವಿನ ಅಂಚಿನಲ್ಲಿದೆ ಎಂಬುದನ್ನು ಗುರುತಿಸಿ, ಅವುಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ವರದಿ ಹೇಳಿದೆ.

ಅನೇಕ ಸಂರಕ್ಷಿತಾರಣ್ಯಗಳಲ್ಲಿ ವಿಶೇಷವಾಗಿ ಈಶಾನ್ಯ ರಾಜ್ಯಗಳಲ್ಲಿ ಮನುಷ್ಯರು ಬೇಟಿಯಾಡುವುದರಿಂದ ಹುಲಿಗಳಿಗೆ ಅಗತ್ಯ ಇರುವಷ್ಟು ಬೇಟೆ ಲಭಿಸುತ್ತಿಲ್ಲ. ಇಂಥ ಅರಣ್ಯಗಳಲ್ಲಿ ಮಾನವ ಪ್ರವೇಶವನ್ನು ತಡೆದರೆ ಹುಲಿಗಳ ಸಂತತಿ ತಾನಾಗಿಯೇ ವೃದ್ಧಿಸುತ್ತದೆ. ಅಕ್ರಮ ಬೇಟೆಯನ್ನು ತಡೆಯಬೇಕಾದರೆ ಅರಣ್ಯ ಸಂರಕ್ಷಕರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಿ, ಅವರ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಲಾಗಿದೆ.

(ವರದಿ: ಯತೀಶ್ ಕುಮಾರ್ ಜಿ.ಡಿ, ಉದಯ್ ಯು, ಗವಿ ಸಿದ್ಧಪ್ಪ ಬ್ಯಾಳಿ, ಜಯಸಿಂಹ. ಆರ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.