ADVERTISEMENT

ಆಳ–ಅಗಲ: ಕೋವಿಡ್‌ ಪ್ರಹಾರ – ಲಸಿಕೆಗೆ ಹಾಹಾಕಾರ

​ಪ್ರಜಾವಾಣಿ ವಾರ್ತೆ
Published 19 ಮೇ 2021, 19:30 IST
Last Updated 19 ಮೇ 2021, 19:30 IST
ಮುಂಬೈನ ಜಂಬೊ ಲಸಿಕೆ ಕೇಂದ್ರದ ಮುಂದೆ ‘ಲಸಿಕೆ ಲಭ್ಯ ಇಲ್ಲ’ ಎಂಬ ಫಲಕಗಳನ್ನು ಕಳೆದ ತಿಂಗಳು ಹಾಕಲಾಗಿತ್ತು –ಪಿಟಿಐ ಚಿತ್ರ
ಮುಂಬೈನ ಜಂಬೊ ಲಸಿಕೆ ಕೇಂದ್ರದ ಮುಂದೆ ‘ಲಸಿಕೆ ಲಭ್ಯ ಇಲ್ಲ’ ಎಂಬ ಫಲಕಗಳನ್ನು ಕಳೆದ ತಿಂಗಳು ಹಾಕಲಾಗಿತ್ತು –ಪಿಟಿಐ ಚಿತ್ರ   

ಕೋವಿಡ್‌ ಹರಡುವುದನ್ನು ತಡೆಯಲು ಭಾರತ ಸರ್ಕಾರವು ಆರಂಭಿಸಿದ ಕೋವಿಡ್‌ ಲಸಿಕೆ ಕಾರ್ಯಕ್ರಮಕ್ಕೆ ಬುಧವಾರಕ್ಕೆ 125 ದಿನ ತುಂಬಿದೆ. 123ನೇ ದಿನದ ಅಂತ್ಯಕ್ಕೆ ಒಟ್ಟು 18.57 ಕೋಟಿ ಡೋಸ್‌ ಲಸಿಕೆ ಹಾಕಲಾಗಿದೆ. ಮೊದಲ ಹಂತದ ಲಸಿಕೆ ಕಾರ್ಯಕ್ರಮದಲ್ಲಿ ಆರೋಗ್ಯ ಸೇವಾ ಸಿಬ್ಬಂದಿ ಮತ್ತು ಕೋವಿಡ್‌ ಮುಂಚೂಣಿ ಕಾರ್ಯಕರ್ತರಿಗೆ ಮಾತ್ರ ಲಸಿಕೆ ಹಾಕಲಾಗಿತ್ತು. ಹೀಗಾಗಿ ಈ ಅವಧಿಯಲ್ಲಿ ಪ್ರತಿದಿನ ಅತ್ಯಂತ ಕಡಿಮೆ ಡೋಸ್‌ ಲಸಿಕೆ ನೀಡಲಾಗಿತ್ತು. ಆದರೆ, ಮಾರ್ಚ್‌ 1ರಿಂದ ಎರಡನೇ ಹಂತದ ಲಸಿಕೆ ಕಾರ್ಯಕ್ರಮ ಆರಂಭವಾಗಿತ್ತು. ಆನಂತರ ಪ್ರತಿದಿನ ನೀಡಲಾದ ಲಸಿಕೆಯ ಡೋಸ್‌ಗಳ ಸಂಖ್ಯೆ ಏರಿಕೆಯಾಗಿದೆ. ಆದರೆ, ಲಸಿಕೆಯ ಕೊರತೆ ಕಾಡಿದ ಕಾರಣ ಏಪ್ರಿಲ್‌ನ ನಂತರ ಪ್ರತಿದಿನ ನೀಡಲಾಗುತ್ತಿರುವ ಲಸಿಕೆಯ ಡೋಸ್‌ಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ

ವಿದೇಶಗಳಿಗೆ ಹೆಚ್ಚು ಪೂರೈಕೆ ಆರೋಪ

ದೇಶದಲ್ಲಿ ಈಗ ಆಸ್ಟ್ರಾಜೆನಿಕಾ ಕಂಪನಿಯ ಕೋವಿಶೀಲ್ಡ್‌ (ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಇದನ್ನು ತಯಾರಿಸುತ್ತಿದೆ) ಲಸಿಕೆ ಮತ್ತು ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯನ್ನು ಮಾತ್ರ ಕೋವಿಡ್‌ ಲಸಿಕೆ ಕಾರ್ಯಕ್ರಮದಲ್ಲಿ ಬಳಸಲಾಗುತ್ತಿದೆ. ರಷ್ಯಾದ ಸ್ಪುಟ್ನಿಕ್‌-ವಿ ಲಸಿಕೆಯ ಬಳಕೆಯನ್ನು ಈಚೆಗಷ್ಟೇ ಆರಂಭಿಸಲಾಗಿದೆ. ಸೀರಂ ಇನ್‌ಸ್ಟಿಟ್ಯೂಟ್ ಮತ್ತು ಭಾರತ್ ಬಯೊಟೆಕ್‌ ಕಂಪನಿಗಳು ಒಟ್ಟಾಗಿ ತಿಂಗಳಿಗೆ ಗರಿಷ್ಠ 11 ಕೋಟಿ ಡೋಸ್‌ ಲಸಿಕೆ ತಯಾರಿಸುವ ಸಾಮರ್ಥ್ಯ ಹೊಂದಿವೆ. ಈ ಗರಿಷ್ಠ ಸಾಮರ್ಥ್ಯದ ಶೇ 85ರಷ್ಟು ಮಾತ್ರ ತಯಾರಿಕೆ ಮಾತ್ರ ಸಾಧ್ಯ ಎಂದು ಸೀರಂ ಇನ್‌ಸ್ಟಿಟ್ಯೂಟ್‌ನ ಸಿಇಒ ಆದಾರ್ ಪೂನಾವಾಲ ಹೇಳಿದ್ದರು. ಆದರೆ, ಈ ಕಂಪನಿಗಳು ಈವರೆಗೆ ಎಷ್ಟು ಡೋಸ್‌ ಲಸಿಕೆ ತಯಾರಿಸಿವೆ ಎಂಬುದರ ಅಧಿಕೃತ ಮಾಹಿತಿ ಲಭ್ಯವಿಲ್ಲ.

ADVERTISEMENT

ದೇಶಕ್ಕೆ ಪೂರೈಕೆ ಮಾಡಿರುವುದಕ್ಕಿಂತ ಹೆಚ್ಚಿನ ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡಲಾಗಿದೆ. ಇದರಿಂದಲೇ ದೇಶದಲ್ಲಿ ಲಸಿಕೆ ಕೊರತೆ ಉಂಟಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.

‘ಭಾರತವು ತನ್ನ ಸ್ವಂತಕ್ಕೆ ಬಳಸಿದ ಡೋಸ್‌ಗಳಿಗಿಂತ ಹೆಚ್ಚಿನ ಡೋಸ್‌ಗಳನ್ನು ವಿದೇಶಕ್ಕೆ ರಫ್ತು ಮಾಡಿದೆ’ ಎಂದು 2021ರ ಮಾರ್ಚ್‌ 27ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ರಾಯಭಾರಿ ಕೆ.ನಾಗರಾಜು ನಾಯ್ಡು ಹೇಳಿದ್ದರು. ಆ ಅವಧಿಯಲ್ಲಿ ದೇಶದ ಎಲ್ಲಾ ರಾಜ್ಯಗಳಿಗೆ ಎಷ್ಟು ಡೋಸ್ ಲಸಿಕೆ ಪೂರೈಕೆ ಮಾಡಲಾಗಿತ್ತು ಎಂಬುದರ ನಿಖರ ಮಾಹಿತಿ ಲಭ್ಯವಿಲ್ಲ. ಆದರೆ, ದೇಶದಾದ್ಯಂತ ಜನರಿಗೆ 5.5 ಕೋಟಿ ಡೋಸ್‌ ಲಸಿಕೆ ನೀಡಲಾಗಿತ್ತು.

ಈ ಎರಡೂ ಕಂಪನಿಗಳು ಈವರೆಗೆ ತಯಾರಿಸಿದ ಒಟ್ಟು ಲಸಿಕೆಯ ಡೋಸ್‌ಗಳಲ್ಲಿ, ಮೇ 18ರವರೆಗೆ 20 ಕೋಟಿ ಡೋಸ್‌ ಅನ್ನು ಮಾತ್ರ ರಾಜ್ಯ ಸರ್ಕಾರಗಳಿಗೆ ಪೂರೈಕೆ ಮಾಡಲಾಗಿದೆ. ಜನವರಿ 22ರಿಂದ ಮೇ 19ರವರೆಗೆ ವಿದೇಶಗಳಿಗೆ 6.63 ಕೋಟಿ ಡೋಸ್‌ ಪೂರೈಸಲಾಗಿದೆ. ಮಾರ್ಚ್ 27ರ ನಂತರ 19.6 ಲಕ್ಷ ಡೋಸ್‌ಗಳನ್ನು ಮಾತ್ರ ವಿದೇಶಗಳಿಗೆ ರಫ್ತು ಮಾಡಲಾಗಿದೆ ಎಂಬ ಮಾಹಿತಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಇದೆ. ವಿದೇಶಗಳಿಗೆ ಪೂರೈಕೆ ಮಾಡಿರುವ 6.63 ಕೋಟಿ ಡೋಸ್‌ನಲ್ಲಿ 19.6 ಲಕ್ಷ ಡೋಸ್‌ಗಳನ್ನು ತೆಗೆದರೆ, 6.40 ಕೋಟಿ ಡೋಸ್‌ಗಳನ್ನು ಮಾತ್ರ ಮಾರ್ಚ್ 27ರವರೆಗೆ ರಫ್ತು ಮಾಡಲಾಗಿದೆ.

2021ರ ಜನವರಿ 22ರಿಂದ ಮಾಡಲಾದ ರಫ್ತಿನ ಮಾಹಿತಿ ಮಾತ್ರ ಈ ವೆಬ್‌ಸೈಟ್‌ನಲ್ಲಿ ಇದೆ. ಆದರೆ 2020ರ ಡಿಸೆಂಬರ್‌ನಿಂದಲೇ ಲಸಿಕೆ ರಫ್ತು ಮಾಡಲಾಗುತ್ತಿದೆ. ಡಿಸೆಂಬರ್ ಒಂದರಲ್ಲೇ 5 ಕೋಟಿ ಡೋಸ್ ಲಸಿಕೆ ತಯಾರಿಸಲಾಗಿದೆ. ಡಿಸೆಂಬರ್‌ನಿಂದ ಜನವರಿ 22ರವರೆಗೆ ಮಾಡಲಾಗಿರುವ ರಫ್ತಿನ ಮಾಹಿತಿ ಈ ಡ್ಯಾಶ್‌ಬೋರ್ಡ್‌ನಲ್ಲಿ ಇಲ್ಲ.

‘ದೇಶದಲ್ಲಿ ಈವರೆಗೆ ಎಷ್ಟು ಲಸಿಕೆ ತಯಾರಾಗಿದೆ, ಅದರಲ್ಲಿ ಎಷ್ಟನ್ನು ವಿದೇಶಗಳಿಗೆ ಪೂರೈಕೆ ಮಾಡಲಾಗಿದೆ ಎಂಬುದರ ಪೂರ್ಣ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಿಲ್ಲ. ಸರ್ಕಾರ ಹೇಳುತ್ತಿರುವ ಲೆಕ್ಕಕ್ಕೂ, ದೇಶದ ಲಸಿಕೆ ತಯಾರಿಕೆ ಸಾಮರ್ಥ್ಯಕ್ಕೂ ತಾಳೆಯಾಗುತ್ತಿಲ್ಲ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಎಲ್ಲರಿಗೂ ಲಸಿಕೆ ಹಾಕಲು ಬೇಕು 3ರಿಂದ 5 ವರ್ಷ

ದೇಶದಲ್ಲಿ ಕೋವಿಡ್‌ ಲಸಿಕೆ ಕಾರ್ಯಕ್ರಮ ಆರಂಭವಾಗಿ ನಾಲ್ಕು ತಿಂಗಳು ಕಳೆದಿದೆ. ಒಟ್ಟು 18.57 ಕೋಟಿ ಡೋಸ್‌ಗಳನ್ನಷ್ಟೇ ನೀಡಲಾಗಿದೆ.ಈ ಅವಧಿಯಲ್ಲಿ ಒಟ್ಟು 4.22 ಕೋಟಿ ಜನರಿಗಷ್ಟೇ ಲಸಿಕೆಯ ಎರಡೂ ಡೋಸ್‌ಗಳನ್ನು ನೀಡಲಾಗಿದೆ. ಇನ್ನೂ 10.13 ಕೋಟಿ ಜನರಿಗೆ ಎರಡನೇ ಡೋಸ್‌ ನೀಡಬೇಕಿದೆ. ದೇಶದ ಎಲ್ಲಾ ಜನರಿಗೆ ಲಸಿಕೆ ನೀಡಲು ಇನ್ನೂ 240 ಕೋಟಿ ಡೋಸ್‌ ಲಸಿಕೆಯ ಅವಶ್ಯಕತೆ ಇದೆ.

ಮೇ 1ರಿಂದ ಮೇ 18ರವರೆಗೆ ಕೇವಲ 2.9 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ. ಮೇ ಅಂತ್ಯದವರೆಗೆ ನೀಡಲು ಇನ್ನು 1.2 ಕೋಟಿ ಡೋಸ್‌ ಲಸಿಕೆ ಮಾತ್ರವೇ ಉಳಿದಿದೆ. ಅಂದರೆ ಮೇ ಅಂತ್ಯದ ವೇಳೆಗೆ 4 ಕೋಟಿ ಡೋಸ್‌ಗಳನ್ನಷ್ಟೇ ನೀಡಲು ಸಾಧ್ಯವಾಗುತ್ತದೆ. ಪ್ರತಿ ತಿಂಗಳು ಕೇವಲ 4 ಕೋಟಿ ಡೋಸ್‌ ಲಸಿಕೆ ನೀಡುತ್ತಾ ಹೋದರೆ ದೇಶದ ಶೇ 98ರಷ್ಟು ಜನರಿಗೆ ಲಸಿಕೆ ನೀಡಲು ಇನ್ನೂ 60 ತಿಂಗಳು ಬೇಕಾಗುತ್ತದೆ. ಅಂದರೆ ಲಸಿಕೆ ಕಾರ್ಯಕ್ರಮ ಪೂರ್ಣವಾಗಲು ಇನ್ನೂ 5 ವರ್ಷ ಬೇಕಾಗುತ್ತದೆ. ಒಂದು ವೇಳೆ ದೇಶದಲ್ಲಿ ತಯಾರಾಗುವ ಕೋವಿಡ್‌ ಲಸಿಕೆಯ ಎಲ್ಲಾ ಡೋಸ್‌ಗಳನ್ನು ನಾವೇ ಬಳಸಿಕೊಂಡರೂ, ಲಸಿಕೆ ಕಾರ್ಯಕ್ರಮ ಪೂರ್ಣಗೊಳ್ಳಲು ಇನ್ನೂ ಎರಡೂವರೆ ವರ್ಷದಿಂದ ಮೂರು ವರ್ಷ ಸಮಯ ಬೇಕಾಗುತ್ತದೆ.

ಆಮದಿನತ್ತ ಗಮನ

ಜಗತ್ತಿಗೇ ಕೋವಿಡ್‌ ಲಸಿಕೆಯನ್ನು ರಫ್ತು ಮಾಡುವ ದೇಶ ಎನಿಸಿದ್ದ ಭಾರತದಲ್ಲಿ ಕೋವಿಡ್‌ನ ಎರಡನೇ ಅಲೆಯು ತೀವ್ರಗೊಳ್ಳುತ್ತಿದ್ದಂತೆಯೇ ಲಸಿಕೆಯ ಕೊರತೆ ಉಂಟಾಯಿತು. ಪರಿಣಾಮ ಈಗ ದೇಶವು ವಿದೇಶಗಳಿಂದ ಲಸಿಕೆಯನ್ನು ಆಮದು ಮಾಡಬೇಕಾದ ಸ್ಥಿತಿ ಎದುರಾಗಿದೆ.

ದೇಶದಲ್ಲೇ ತಯಾರಾಗುತ್ತಿರುವ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ ಲಸಿಕೆಗಳ ಪೂರೈಕೆಯು ಬೇಡಿಕೆಗೆ ಅನುಗುಣವಾಗಿ ಇಲ್ಲದಿರುವುದರಿಂದ ಲಸಿಕೆಗೆ ಹಾಹಾಕಾರವೆದ್ದಿತು. ಕೂಡಲೇ ಲಸಿಕೆಯ ಆಮದಿಗೆ ಸರ್ಕಾರೇತರ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳಿಗೆ ಸರ್ಕಾರ ಅನುಮತಿ ನೀಡಿತು. ಹೈದರಾಬಾದ್‌ನ ಡಾ. ರೆಡ್ಡೀಸ್‌ ಲ್ಯಾಬ್‌ ಸಂಸ್ಥೆಯು ರಷ್ಯಾದಲ್ಲಿ ತಯಾರಾಗಿರುವ ‘ಸ್ಪುಟ್ನಿಕ್‌–ವಿ’ ಲಸಿಕೆಯ ಆಮದನ್ನು ಆರಂಭಿಸಿದೆ. ಎರಡು ಹಂತಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಡೋಸ್‌ಗಳಷ್ಟು ಲಸಿಕೆಯನ್ನು ಈಗಾಗಲೇ ಆಮದು ಮಾಡಿಕೊಳ್ಳಲಾಗಿದೆ. ಒಟ್ಟಾರೆ 25 ಕೋಟಿ ಡೋಸ್‌ಗಳನ್ನು ಆಮದು ಮಾಡಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ಅಮೆರಿಕದ ಎಫ್‌ಡಿಎ ಅನುಮೋದನೆ ಪಡೆದಿರುವ ಯಾವುದೇ ಲಸಿಕೆಯನ್ನು ಆಮದು
ಮಾಡಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

‘ಕೇಂದ್ರದ ಜೈವಿಕ ತಂತ್ರಜ್ಞಾನ ವಿಭಾಗ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕೋವಿಡ್‌ ಲಸಿಕೆ ತಯಾರಿಸುತ್ತಿರುವ ಫೈಜರ್‌, ಮೊಡೆರ್ನಾ ಹಾಗೂ ಜಾನ್ಸನ್‌ ಅಂಡ್‌ ಜಾನ್ಸನ್‌ ಸಂಸ್ಥೆಯ ಜತೆಗೆ ಮಾತುಕತೆ ನಡೆಸಿದೆ. ಅವುಗಳಿಗೆ ಭಾರತದಲ್ಲಿ ಎಲ್ಲಾ ಅಗತ್ಯ ನೆರವಿನ ಭರವಸೆ ನೀಡಲಾಗಿದೆ. ಅದೂ ಅಲ್ಲದೆ, ಲಸಿಕೆಗಳನ್ನು ಆಮದು ಮಾಡಲು ಮುಂದಾಗುವ ಸಂಸ್ಥೆಗಳಿಗೆ ಒಂದೆರಡು ದಿನಗಳಲ್ಲೇ ಅಗತ್ಯ ಪರವಾನಗಿಗಳನ್ನೂ ನೀಡಲಾಗುವುದು’ ಎಂದು ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪಾಲ್‌ ಹೇಳಿದ್ದಾರೆ.

ಆದರೆ, ‘ಭಾರತಕ್ಕೆ ಲಸಿಕೆ ರಫ್ತು ಮಾಡುವ ವಿಚಾರದಲ್ಲಿ 2021ರ ಮೂರನೇ ತ್ರೈಮಾಸಿಕದವರೆಗೂ ಮಾತುಕತೆಗೆ ನಡೆಸಲಾಗದು’ ಎಂದು ಈ ಸಂಸ್ಥೆಗಳು ಹೇಳಿವೆ. ಆದ್ದರಿಂದ ಸ್ಪುಟ್ನಿಕ್‌ ಬಿಟ್ಟರೆ ಉಳಿದ ಲಸಿಕೆಗಳು ಶೀಘ್ರದಲ್ಲಿ ಆಮದಾಗುವ ಸಾಧ್ಯತೆ ಕಾಣಿಸುತ್ತಿಲ್ಲ.

ಸಮೂಹ ರೋಗನಿರೋಧಕ ಶಕ್ತಿಯ ಹಾದಿ ಕಠಿಣ

ಕೊರೊನಾ ವೈರಸ್ ವಿರುದ್ಧ ದೇಶದಲ್ಲಿ ಸಮೂಹ ರೋಗನಿರೋಧಕ ಶಕ್ತಿ (ಹರ್ಡ್ ಇಮ್ಯುನಿಟಿ) ಸೃಷ್ಟಿಯಾಗುವುದು ಸದ್ಯದ ತುರ್ತು. ಆದರೆ ಇದು ಸಾಧ್ಯವಾಗಬೇಕಾದರೆ, ದೇಶವ್ಯಾಪಿಯಾಗಿ ಜನರಿಗೆ ಲಸಿಕೆ ಹಾಕುವ ಕಾರ್ಯಕ್ರಮ ಸಮರೋಪಾದಿಯಲ್ಲಿ ನಡೆಯಬೇಕಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಸಮೂಹವು ರೋಗನಿರೋಧಕ ಶಕ್ತಿ ಸಾಧಿಸಿದರೆ, ಕೋವಿಡ್ ಹೋರಾಟದಲ್ಲಿ ಗೆದ್ದಂತೆ. ಆದರೆ ದೇಶದ 135 ಕೋಟಿ ಜನರಿಗೆ ತರಾತುರಿಯಲ್ಲಿ ಲಸಿಕೆ ಹಾಕುವುದು ಅಷ್ಟು ಸುಲಭದ ಮಾತಲ್ಲ. ಮೇಲಾಗಿ ಲಸಿಕೆಗಳ ತೀವ್ರ ಅಭಾವವನ್ನು ದೇಶ ಎದುರಿಸುತ್ತಿದೆ. ಮೊದಲ ಹಂತದ ಅಭಿಯಾನ ಆರಂಭವಾದಾಗ ಕೋವಿಡ್ ತಡೆ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದವರಿಗೆ ಆದ್ಯತೆ ನೀಡಲಾಯಿತು. ನಂತರ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ವಾಗ್ದಾನ ನೀಡಲಾಯಿತು. ಆದರೆ ಇನ್ನೂ ಕೋಟ್ಯಂತರ ಜನರು ಮೊದಲ ಡೋಸ್‌ ಅನ್ನೇ ಪಡೆದಿಲ್ಲ. ಜನರು ಎರಡನೇ ಡೋಸ್‌ಗೆ ಪರದಾಡಬೇಕಾಯಿತು. ಹೀಗಾಗಿ ಎರಡು ಲಸಿಕೆಗಳ ನಡುವಣ ಅಂತರವನ್ನು ಪರಿಷ್ಕರಿಸಲಾಯಿತು. ಈ ಮಧ್ಯೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಘೋಷಿಸಿದ ಸರ್ಕಾರ, ಅಗತ್ಯ ಪ್ರಮಾಣದ ಲಸಿಕೆ ಇಲ್ಲದ ಕಾರಣ ಕಾರ್ಯಕ್ರಮವನ್ನು ಮುಂದೂಡುವ ಪ್ರಸಂಗ ನಿರ್ಮಾಣವಾಯಿತು.

ಎಷ್ಟು ಸಮಯ ಬೇಕು?: ದೇಶವು ಸಮೂಹ ರೋಗನಿರೋಧಕ ಶಕ್ತಿ ಸಾಧಿಸಬೇಕಾದರೆ ಒಟ್ಟು ಜನಸಂಖ್ಯೆಯ ಶೇ 60ರಿಂದ ಶೇ 90ರಷ್ಟು ಜನರು ಲಸಿಕೆಯ ರಕ್ಷಣೆ ಪಡೆಯಬೇಕಿದೆ. ಈಗಿನ ವೇಗದಲ್ಲಿ ಲಸಿಕಾ ಕಾರ್ಯಕ್ರಮ ನಡೆದಲ್ಲಿ, ದೇಶದ ಕನಿಷ್ಠ 70ರಷ್ಟು ಜನರು ಲಸಿಕೆ ಪಡೆಯಲು ಕೆಲವು ವರ್ಷಗಳು ಬೇಕು ಎನ್ನುತ್ತಾರೆ ತಜ್ಞರು.

ಸಮೂಹ ರೋಗನಿರೋಧಕ ಶಕ್ತಿ ಸಾಧ್ಯವಾಗುವ ಪ್ರಮಾಣ ಒಂದೊಂದು ಕಾಯಿಲೆಗೂ ಒಂದೊಂದು ರೀತಿ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳುತ್ತದೆ. ಉದಾಹರಣೆಗೆ ದಡಾರ ರೋಗದಲ್ಲಿ ಹರ್ಡ್ ಇಮ್ಯುನಿಟಿ ಸಾಧಿಸಲು ಶೇ 95 ಜನರು ಲಸಿಕೆಯ ರಕ್ಷಣೆ ಪಡೆಯಬೇಕಿತ್ತು. ಅದೇ ರೀತಿ ಪೋಲಿಯೊ ವಿರುದ್ಧ ಸಮೂಹ ರೋಗನಿರೋಧಕ ಶಕ್ತಿ ಸೃಷ್ಟಿಯಾಗಲು ಶೇ 80ರಷ್ಟು ಜನರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸಂಸ್ಥೆ ತಿಳಿಸಿದೆ. ಆದರೆ ಕೋವಿಡ್ ವಿರುದ್ದ ಹರ್ಡ್ ಇಮ್ಯೂನಿಟಿ ಸಾಧಿಸಬೇಕಾದರೆ, ಎಷ್ಟು ಮಂದಿ ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳಬೇಕು ಎಂಬ ಬಗ್ಗೆ ಡಬ್ಲ್ಯುಎಚ್‌ಒ ಖಚಿತವಾಗಿ ತಿಳಿಸಿಲ್ಲ.

ರಕ್ಷಣೆಯ ಅವಧಿ ಎಷ್ಟು?: ಲಸಿಕೆ ಹಾಕಿಸಿಕೊಂಡ ವ್ಯಕ್ತಿಯನ್ನು ವೈರಸ್ ಬಾಧಿಸುವುದಿಲ್ಲವೇ? ಲಸಿಕೆಯು ಎಷ್ಟು ಸಮಯದವರೆಗೆ ರಕ್ಷಣೆ ಕೊಡಬಲ್ಲದು ಎಂಬಿತ್ಯಾದಿ‍ಪ್ರಶ್ನೆಗಳಿಗೆ ತಜ್ಞರ ಬಳಿ ಸ್ಪಷ್ಟ ಉತ್ತರವಿಲ್ಲ. ಲಸಿಕೆ ಹಾಕಿದ ನಂತರ ಯಾವ ಹಂತದಲ್ಲಿ ಜನರು ಮತ್ತೆ ವೈರಸ್‌ಗೆ ಗುರಿಯಾಗುತ್ತಾರೆ ಎಂಬ ಬಗ್ಗೆ ಅಧ್ಯಯನಗಳು ನಡೆಯಬೇಕಿದೆ ಎಂದುವಾಷಿಂಗ್ಟನ್ ವಿಶ್ವವಿದ್ಯಾಲಯದ ಲಸಿಕೆ ಸಂಶೋಧಕ ಡೆಬೊರಾ ಫುಲ್ಲರ್ ಹೇಳುತ್ತಾರೆ.ಸಮೂಹ ರೋಗ ನಿರೋಧಕ ಶಕ್ತಿ ಸಾಧ್ಯವಾಗುವ ಮುನ್ನವೇ ಜನರು ಎರಡನೇ ಸಲ ಲಸಿಕೆ ಹಾಕಿಸಿಕೊಳ್ಳಬೇಕಾಗುತ್ತದೆಯೇ ಎಂಬುದಕ್ಕೆ ಇನ್ನೂ ಖಚಿತ ಉತ್ತರ ಲಭ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.