ADVERTISEMENT

ಆಳ–ಅಗಲ: ಪಶ್ಚಿಮ ಬಂಗಾಳ: ಸೆಣಸಿ ಗೆದ್ದ ‘ಬಂಗಾಳ ಹುಲಿ’

​ಪ್ರಜಾವಾಣಿ ವಾರ್ತೆ
Published 4 ಮೇ 2021, 20:00 IST
Last Updated 4 ಮೇ 2021, 20:00 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಪಶ್ಚಿಮ ಬಂಗಾಳ ವಿಧಾನಸಭೆಗೆ ಈ ಬಾರಿ ನಡೆದದ್ದು ಬರೀ ಚುನಾವಣೆ ಅಲ್ಲ, ಅದು ಸೆಣಸಾಟ ಮತ್ತು ಬೀದಿಹೋರಾಟ. ಯಾವುದೇ ರಾಜ್ಯದ ವಿಧಾನಸಭಾ ಚುನಾವಣೆಯು ಇಷ್ಟು ಜಿದ್ದಿನಿಂದ ನಡೆದಿರಲಿಕ್ಕಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರುಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲೇಬೇಕು ಎಂಬ ಹಟಕ್ಕೆ ಬಿದ್ದಿದ್ದರು.
ಬಿಜೆಪಿ ಅಧಿಕಾರಕ್ಕೆ ಬರಲು ಬಿಡಲೇಬಾರದು ಎಂದು ಟಿಎಂಸಿ ಮುಖ್ಯಸ್ಥೆ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಣ ತೊಟ್ಟಿದ್ದರು. ಈ ಮೂವರು ನಾಯಕರ ಜಿದ್ದು ಚುನಾವಣೆಯನ್ನು ಸೆಣಸಾಟವಾಗಿ ಮಾರ್ಪಡಿಸಿತು.

ಇದಕ್ಕೆ ಮುಖ್ಯ ಕಾರಣ 2019ರ ಲೋಕಸಭಾ ಚುನಾವಣೆಯ ಫಲಿತಾಂಶ. ಈ ಚುನಾವಣೆಯಲ್ಲಿ, ಇಲ್ಲಿನ 42 ಕ್ಷೇತ್ರಗಳ ಪೈಕಿ 18ರಲ್ಲಿ ಬಿಜೆಪಿ ಗೆದ್ದಿತು. ವಿಧಾನಸಭೆಯ 294 ಕ್ಷೇತ್ರಗಳ ಪೈಕಿ 122ರಲ್ಲಿ ಆ ಪಕ್ಷಕ್ಕೆ ಮುನ್ನಡೆ ಸಿಕ್ಕಿತ್ತು. ಪಶ್ಚಿಮ ಬಂಗಾಳದಲ್ಲಿ ಅಧಿಕಾರವು ಕೈಯಳತೆ ದೂರದಲ್ಲಿದೆ ಎಂದು ಬಿಜೆಪಿ ಭಾವಿಸಿದ್ದು ಸಹಜವೇ. ಆದರೆ, ಅಧಿಕಾರ ಪಡೆಯಲು ಅಳವಡಿಸಿಕೊಂಡ ವಿಧಾನಗಳ ಬಗ್ಗೆ ಮಾತ್ರ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ದೇಶದ ವಿವಿಧ ಭಾಗಗಳು ಕೋವಿಡ್‌–19ರ ಎರಡನೇ ಅಲೆಯಿಂದ ತತ್ತರಿಸಿರುವ ಸಂದರ್ಭದಲ್ಲಿಯೂ ಮೋದಿ ಮತ್ತು ಶಾ ಅವರು ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಆಪಾದಿಸಿದ್ದರು.

ADVERTISEMENT

ಕೋವಿಡ್‌ ತಂದೊಡ್ಡಿದ ಕ್ರೌರ್ಯ ದಿನಗಳೆದಂತೆ ಹೆಚ್ಚುತ್ತಲೇ ಇತ್ತು. ಆದರೆ, ಬಿಜೆಪಿಯ ಘಟಾನುಘಟಿ ನಾಯಕರೆಲ್ಲ ರಾಜ್ಯದಲ್ಲಿ ಪ್ರಚಾರ ನಡೆಸಿದರು. ಮೋದಿ, ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ರ್‍ಯಾಲಿಗಳಿಗೆ ಸಾವಿರಾರು ಜನರು ಸೇರುತ್ತಿದ್ದರು.

ಸಿಬಿಐನಂತಹ ಕೇಂದ್ರದ ಸಂಸ್ಥೆಗಳನ್ನು ಬಿಜೆಪಿ ತಮ್ಮ ವಿರುದ್ಧ ಕಳೆದ ಕೆಲವು ವರ್ಷಗಳಿಂದಲೇ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮಮತಾ ಹಲವು ಬಾರಿ ಆರೋಪಿಸಿದ್ದಾರೆ. ಅದಕ್ಕೆ ಪುಷ್ಟಿ ನೀಡುವಂತೆ ಚುನಾವಣಾ ಪ್ರಕ್ರಿಯೆಯ ಮಧ್ಯದಲ್ಲಿಯೂ ಮಮತಾ ಅವರ ಸೋದರಳಿಯನ ಮನೆಯಲ್ಲಿ ಶೋಧ ನಡೆಯಿತು.

ಚುನಾವಣಾ ಆಯೋಗವನ್ನು ಕೂಡ ಬಿಜೆಪಿ ಬಳಸಿಕೊಂಡಿತು ಎಂಬುದು ಮಮತಾ ಅವರ ಆರೋಪ. ಮೋದಿ, ಶಾ ಅವರಿಗೆ ಪ್ರಚಾರಕ್ಕೆ ಹೆಚ್ಚು ಸಮಯ ಸಿಗಲಿ ಎಂಬ ಕಾರಣಕ್ಕೇ ಮತದಾನವನ್ನು ಎಂಟು ಹಂತದಲ್ಲಿ ನಡೆಸಲಾಗಿದೆ ಎಂದು ಮಮತಾ ಹೇಳಿದ್ದಾರೆ. ಮೋದಿ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಕೋಮು ಧ್ರುವೀಕರಣದ ಹೇಳಿಕೆ ಕೊಟ್ಟಿದ್ದಾರೆ. ಮಮತಾ ಅವರನ್ನು ‘ಬೇಗಂ’ ಎಂದು ಕರೆಯಲಾಗಿದೆ. ಅವರ ವಿರುದ್ಧ ಯಾವುದೇ ಕ್ರಮವನ್ನು ಆಯೋಗವು ಕೈಗೊಂಡಿಲ್ಲ. ಆದರೆ, ಮಮತಾ ಅವರಿಗೆ ಒಂದು ದಿನದ ಪ್ರಚಾರ ನಿಷೇಧದ ಶಿಕ್ಷೆ ವಿಧಿಸಿತ್ತು.

ಪ್ರಚಾರದ ಆರಂಭದಲ್ಲಿಯೇ ಮಮತಾ ಅವರು ನಂದಿಗ್ರಾಮದಲ್ಲಿ ಗಾಯಗೊಂಡರು. ಕಾಲಿನ ಗಾಯಕ್ಕೆ ಪ್ಲಾಸ್ಟರ್‌ ಹಾಕಿಸಿಕೊಂಡು ಗಾಲಿಕುರ್ಚಿಯಲ್ಲಿಯೇ ಪ್ರಚಾರದ ಮುಂಚೂಣಿಯಲ್ಲಿದ್ದ ಮಮತಾ ಅವರದ್ದು ಒಂದು ಲೆಕ್ಕದಲ್ಲಿ ಏಕಾಂಗಿ ಹೋರಾಟ ಕೂಡ. 294 ಕ್ಷೇತ್ರಗಳ ಪೈಕಿ 213ರಲ್ಲಿ ಟಿಎಂಸಿ ಗೆದ್ದಿದೆ. ಹೋರಾಟಕ್ಕೆ ತಕ್ಕೆ ಗೆಲುವು ಅವರಿಗೆ ಸಿಕ್ಕಿದೆ.

ಬಿಜೆಪಿಯ ಅಬ್ಬರದ ಪ್ರಚಾರದ ಜತೆಗೆ ಇನ್ನೂ ಹಲವು ತೊಡಕುಗಳು ಮಮತಾ ಮುಂದಿದ್ದವು. ಟಿಎಂಸಿಯ ಪ್ರಮುಖ ಮುಖಂಡರಲ್ಲಿ ಹಲವರನ್ನು ಬಿಜೆಪಿ ಸೆಳೆದುಕೊಂಡಿತ್ತು. ಆದರೆ,
ಬಿಜೆಪಿಯನ್ನು ವಿರೋಧಿಸುವ ಹಲವು ಪಕ್ಷಗಳು ಮಮತಾ ಬೆಂಬಲಕ್ಕೆ ನಿಂತಿದ್ದವು. ಶಿವಸೇನಾ ಅಂತೂ ಅವರನ್ನು ‘ಬಂಗಾಳದ ಹುಲಿ’ ಎಂದೇ ಕರೆದಿತ್ತು.

ದೀದಿಗೆ ಮೋದಿ ಲೇವಡಿ

ಪಶ್ಚಿಮ ಬಂಗಾಳದ ಚುನಾವಣೆ ಪ್ರಚಾರದ ವೇಳೆಮೋದಿ ಅವರು ಮಮತಾ ಅವರನ್ನು ‘ದೀದಿ ಓ ದೀದಿ, ದೀದಿ ಓ ದೀದಿ’ ಎಂದು ಲೇವಡಿಯ ರೀತಿಯಲ್ಲಿ ಕರೆದದ್ದು ಭಾರಿ ಆಕ್ಷೇಪಕ್ಕೆ ಕಾರಣವಾಗಿತ್ತು. ಪ್ರಧಾನಿಯ ಈ ಮಾತನ್ನು ಮಹಿಳಾ ವಿರೋಧಿ ಎಂದು ಟಿಎಂಸಿ ಬಿಂಬಿಸಿದೆ. ‘ಇದು ಮಮತಾ ಅವರಿಗೆ ಮಾತ್ರವಲ್ಲ, ಬಂಗಾಳದ ಎಲ್ಲಾ ಮಹಿಳೆಯರಿಗೆ ಮಾಡಿದ ಅವಮಾನ. ಪುಂಡ ಪೋಕರಿಗಳು ಮಹಿಳೆಯರನ್ನು ರೇಗಿಸುವ ರೀತಿಯಲ್ಲಿ ಮೋದಿ ಮಾತನಾಡಿದ್ದಾರೆ’ ಎಂದು ಸಂಸದೆ ಮಹುವಾ ಮೊಯಿತ್ರಾ ಕಿಡಿಕಾರಿದ್ದರು.

ಮಮತಾ ಮೇಲೆ ವಾಗ್ದಾಳಿ ಮುಂದುವರಿಸಿದ ಪ್ರಧಾನಿ, ‘ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಲ್ಲೇ ಕ್ಲೀನ್‌ಬೋಲ್ಡ್ ಆಗಿದ್ದಾರೆ. ಅವರ ತಂಡದ ಆಟಗಾರರೆಲ್ಲರೂ ಔಟ್ ಆಗಿದ್ದಾರೆ. ಈಗ ಮಮತಾ ತಂಡದವರು ಮೈದಾನ ಬಿಟ್ಟು ನಡೆಯಬೇಕು’ ಎಂದು ಪ್ರಧಾನಿ ಲೇವಡಿ ಮಾಡಿದ್ದರು.

2024ರ ಲೋಕಸಭಾ ಚುನಾವಣೆಯಲ್ಲಿ ವಾರಾಣಸಿಯಲ್ಲಿ ಮೋದಿ ವಿರುದ್ಧ ಮಮತಾ ಸ್ಪರ್ಧಿಸಲಿದ್ದಾರೆ ಎಂಬುದನ್ನು ಪ್ರಸ್ತಾಪಿಸಿದ ಮೋದಿ, ‘ದೀದಿ ಈಗಾಗಲೇ ಸೋಲನ್ನು ಒಪ್ಪಿಕೊಂಡಿದ್ದಾರೆ’ ಎಂದು ಲೇವಡಿ ಮಾಡಿದ್ದರು. ನಂದಿಗ್ರಾಮದಲ್ಲಿ ಮಮತಾ ಸೋಲು ಖಚಿತವಾಗಿದ್ದು, ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಪ್ರಧಾನಿ ಸಲಹೆ ನೀಡಿದ್ದರು. ಇದನ್ನು ಮಮತಾ ತಿರಸ್ಕರಿಸಿದ್ದರು.

‘ದೆಹಲಿಯಲ್ಲಿ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ಮಮತಾ ಬಂಗಾಳವನ್ನು ದಲ್ಲಾಳಿಗಳಿಗೆ ನೀಡಿದ್ದಾರೆ’ ಎಂದು ದೀದಿ ಮೇಲೆ ಮೋದಿ ಮತ್ತೊಂದು ದಾಳ ಎಸೆದಿದ್ದರು. ತೈಲ ಬೆಲೆ ಏರಿಕೆ ಖಂಡಿಸಿ ಸ್ಕೂಟರ್‌ನಲ್ಲಿ ಪ್ರಯಾಣಿಸಿದ ಮಮತಾ ಅವರನ್ನು ಮೋದಿ ಗೇಲಿ ಮಾಡಿದ್ದರು. ‘ಯಾರಿಗೂ ನೋವಾಗಬಾರದು ಎಂಬುದು ನಮ್ಮ ಬಯಕೆ. ಆದರೆ ನಂದಿಗ್ರಾಮದಲ್ಲಿ ಸ್ಕೂಟರ್ ಪಲ್ಟಿಯಾದರೆ ನಾವೇನು ಮಾಡಲಾಗುತ್ತದೆ’ ಎಂದಿದ್ದರು.

ಸೀತಾಲಕುಚಿಯ ಗಲಭೆಯಲ್ಲಿ ಮೃತಪಟ್ಟವರ ಮೃತದೇಹಗಳನ್ನು ಮೆರವಣಿಗೆ ಮಾಡಬೇಕು ಎಂದು ಮಮತಾ ಅವರು ಹೇಳಿದ್ದಾರೆ ಎನ್ನಲಾದ ಆಡಿಯೊ ಕ್ಲಿಪ್ ವಿವಾದ ಸೃಷ್ಟಿಸಿತ್ತು. ಮಮತಾ ಅವರು ಧ್ವನಿ ಅದಲ್ಲ ಎಂದು ಟಿಎಂಸಿ ಸ್ಪಷ್ಟನೆ ನೀಡಿತ್ತು. ಆದರೆ, ‘ಮೃತದೇಹ ಇಟ್ಟುಕೊಂಡು ರಾಜಕೀಯ ಲಾಭ ಮಾಡಿಕೊಳ್ಳಲು ದೀದಿ ಯತ್ನಿಸಿದ್ದಾರೆ. ಇದು ಅವರ ಹವ್ಯಾಸ’ ಎಂದು ಪ್ರಧಾನಿ ಛೇಡಿಸಿದ್ದರು.

ಪ್ರಧಾನಿ ಜೊತೆಗೆ ಬಿಜೆಪಿ ನಾಯಕರೂ ದೀದಿ ವಿರುದ್ಧ ಚುನಾವಣೆಯಲ್ಲಿ ಮುಗಿಬಿದ್ದಿದ್ದರು. ಮಮತಾ ಬ್ಯಾನರ್ಜಿ ಅವರ ಪರಿಸ್ಥಿತಿ ಸೋತ ಆಟಗಾರನಂತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಲೇವಡಿ ಮಾಡಿದ್ದರು. ‘ಮಮತಾ ಬ್ಯಾನರ್ಜಿ ಅವರು ‘ಜೈ ಶ್ರೀ ರಾಮ್’ ಘೋಷಣೆಗಳಿಂದ ಏಕೆ ಕೆರಳುತ್ತಾರೆ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರಶ್ನಿಸಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮಮತಾ ದೀದಿ ಬದಲಾಗಿದ್ದು, ಈಗ ಅವರು ದೇವಸ್ಥಾನಗಳಿಗೆ ಹೋಗಲು ಆರಂಭಿಸಿದ್ದಾರೆ ಎಂದೂ ಟೀಕಿಸಿದ್ದರು.

ಚುನಾವಣೆಯು ‌ಮೋದಿ ಅವರ ‘ವಿಕಾಸ ಮಾದರಿ’ ಮತ್ತು ಬ್ಯಾನರ್ಜಿ ಅವರ ‘ವಿನಾಶ ಮಾದರಿ’ ನಡುವಣ ಸ್ಪರ್ಧೆಯಾಗಿರಲಿದೆ ಎಂದು ಅಮಿತ್ ಶಾ ಹೇಳಿದ್ದರು.

ಮಮತಾ ಮಾತಿನ ವರಸೆ

ಮಮತಾ ಅವರೇನೂ ಮಾತಿನ ವರಸೆಯಲ್ಲಿ ಕಡಿಮೆ ಇರಲಿಲ್ಲ. ‘ಪ್ರಧಾನಿ ಮೋದಿ ಅವರ ಪ್ರಚಾರ ಸಭೆಗಳಿಗೆ ಪೆಂಡಾಲ್‌ ಹಾಕಲು, ವೇದಿಕೆ ನಿರ್ಮಿಸಲು ಗುಜರಾತ್‌ನಂಥ ರಾಜ್ಯಗಳಿಂದ ಬಿಜೆಪಿಯವರು ಜನರನ್ನು ಕರೆತಂದಿದ್ದರು. ಬಂಗಾಳದಲ್ಲಿ ಕೋವಿಡ್‌ ಪಸರಿಸಲು ಇವರೇ ಕಾರಣ’ ಎಂದು ಚುಚ್ಚಿದ್ದರು.

ಗಲಭೆ ಪ್ರಕರಣ ಸಂಬಂಧ ಕೂಚ್‌ ಬಿಹಾರ್‌ ಜಿಲ್ಲೆಗೆ ಯಾವ ರಾಜಕಾರಣಿಯೂ ಭೇಟಿ ನೀಡದಂತೆ ಆಯೋಗ ಆದೇಶಿಸಿದ್ದಕ್ಕೆ ಮಮತಾ ಕೆಂಡವಾಗಿದ್ದರು. ‘ಮಾದರಿ ನೀತಿ ಸಂಹಿತೆಯನ್ನು (ಎಂಸಿಸಿ) ‘ಮೋದಿ ನೀತಿ ಸಂಹಿತೆ’ ಎಂದು ಬದಲಿಸಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಚುನಾವಣಾ ಆಯೋಗ, ಕೇಂದ್ರೀಯ ಪಡೆಗಳ ವಿರುದ್ಧವೂ ತಮ್ಮ ಸಿಟ್ಟನ್ನು ಅವರು ಪ್ರದರ್ಶಿಸಿದ್ದರು. ‘ಈ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿಲ್ಲ. ಗೃಹ ಸಚಿವ ಅಮಿತ್ ಶಾ ನಡೆಸುತ್ತಿದ್ದಾರೆ’ ಎಂದು ನೇರವಾಗಿ ದೂರಿದ್ದರು.

ಮರುಕಳಿಸಿದ ಹಿಂಸೆಯ ಇತಿಹಾಸ

ಮತದಾನ ಆರಂಭಕ್ಕೂ ಮುನ್ನ, ಕಳೆದ ಡಿ.10ರಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ದಾಳಿನಡೆಯಿತು. ಈ ಬಾರಿಯ ಚುನಾವಣೆಯಲ್ಲಿ ಭಾರಿ ಪ್ರಮಾಣದಲ್ಲಿ ಹಿಂಸಾಚಾರ ನಡೆಯುವ ಸಾಧ್ಯತೆ ಇದೆ ಎಂಬ ಸೂಚನೆಯನ್ನು ಆ ಘಟನೆ ನೀಡಿತ್ತು.

‘ಲೋಕಸಭಾ ಚುನಾವಣೆಯ ನಂತರ ನಮ್ಮ ಪಕ್ಷದ 130ಕ್ಕೂ ಹೆಚ್ಚು ಕಾರ್ಯಕರ್ತರ ಹತ್ಯೆ ನಡೆದಿದೆ’ ಎಂದು ಬಿಜೆಪಿ ಹೇಳಿದೆ. ಬಿಜೆಪಿಯು ಚುನಾವಣೆಗೂ ಮುನ್ನ ಬಿಡುಗಡೆ ಮಾಡಿದ್ದ ಕಿರು ಪುಸ್ತಕದಲ್ಲಿ, ಹಿಂದಿನ ಐದು ವರ್ಷಗಳಲ್ಲಿ ಹತ್ಯೆಯಾದ 107 ಮಂದಿ ಬಿಜೆಪಿ ಕಾರ್ಯಕರ್ತರ ಹೆಸರನ್ನು ಸಹ ಪ್ರಕಟಿಸಿತ್ತು. ಇದು ಸುಳ್ಳು ಎಂದು ಹೇಳಿದ್ದ ಮಮತಾ, ‘1998ರಿಂದ ಈವರೆಗೆ ಟಿಎಂಸಿಯ 1,000 ಕಾರ್ಯಕರ್ತರ ಹತ್ಯೆ ನಡೆದಿದೆ’ ಎಂದಿದ್ದರು.

ಚುನಾವಣಾ ಗಲಭೆಗಳನ್ನು ನಿಯಂತ್ರಿಸುವ ಸಲುವಾಗಿಯೇ ಚುನಾವಣಾ ಆಯೋಗವು ಅತಿ ಹೆಚ್ಚು ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಂಡಿತ್ತು. ಆದರೂ ಹಿಂಸಾಚಾರ ಮತ್ತು ಹತ್ಯೆಗಳನ್ನು ತಡೆಯಲು ಸಾಧ್ಯವಾಗಲಿಲ್ಲ. ಕಚ್ಚಾ ಬಾಂಬ್‌, ನಾಡಪಿಸ್ತೂಲ್‌ಗಳನ್ನು ಬಳಸಿ ಹತ್ಯೆಗಳನ್ನು ನಡೆಸಲಾಗಿದೆ. ಕೂಚ್‌ಬಿಹಾರದಲ್ಲಿ ಮತದಾರರು ಮತ್ತು ಭದ್ರತಾಪಡೆಗಳ ನಡುವೆಯೇ ಸಂಘರ್ಷ ನಡೆಯಿತು. ಭದ್ರತಾಪಡೆಯ ಸಿಬ್ಬಂದಿ ಗುಂಡುಹಾರಿಸಿದ್ದರಿಂದ ಐವರು ಪ್ರಾಣಬಿಡುವಂತಾಗಿತ್ತು.

‘ಹಿಂಸಾಚಾರ ಎಂಬುದು ಬಂಗಾಳದ ರಾಜಕೀಯದಲ್ಲಿ ರಕ್ತಗತವಾಗಿ ಬಂದಿದೆ. ಆದ್ದರಿಂದ ಅದನ್ನು ತಡೆಯುವುದು ಅಸಾಧ್ಯ. ಘಟನೆಯ ನಂತರ ಪಕ್ಷಗಳು ಪರಸ್ಪರರ ಮೇಲೆ ಕೆಲವು ದಿನ ಆರೋಪ–ಪ್ರತ್ಯಾರೋಪಗಳನ್ನು ಮಾಡುತ್ತವೆ. ಚುನಾವಣೆಯ ನಂತರ ಎಲ್ಲರೂ ಎಲ್ಲವನ್ನೂ ಮರೆಯುತ್ತಾರೆ ಪ್ರಾಣ ಕಳೆದುಕೊಂಡ ವ್ಯಕ್ತಿಯ ಕುಟುಂಬದವರ ನೋವು ಮಾತ್ರ ಉಳಿದಿರುತ್ತದೆ’ಎಂದು ವಿಶ್ಲೇಷಕರು ಹೇಳುತ್ತಾರೆ.

ಧ್ರುವೀಕರಣಕ್ಕೆ ಸಿಗದ ಮನ್ನಣೆ

ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲು ಬಿಜೆಪಿಯು ‘ಸಕಲ ಪ್ರಯತ್ನ’ಗಳನ್ನು ಮಾಡಿದ್ದರೂ ಅವುಗಳನ್ನು ವಿಫಲಗೊಳಿಸಿ, ಅಧಿಕಾರ ಉಳಿಸಿಕೊಳ್ಳುವಲ್ಲಿ ಮಮತಾ ಯಶಸ್ವಿಯಾದರು. ‘ಮಮತಾ ಅವರ ಜನಕಲ್ಯಾಣ ಯೋಜನೆಗಳು ಅವರ ಗೆಲುವಿಗೆ ಸಹಕಾರಿಯಾದವು’ ಎಂಬ ಅಭಿಪ್ರಾಯವಿದೆ. ‘ಹಿಂದುತ್ವ’ದ ಕಾರ್ಯಸೂಚಿ ಇಟ್ಟುಕೊಂಡು ಬಂಗಾಳವನ್ನು ಗೆಲ್ಲುವ ಪ್ರಯತ್ನವನ್ನು ಬಿಜೆಪಿ ಮಾಡಿತ್ತು. ಆದರೆ, ಅಲ್ಲಿನ ಹಿಂದೂಗಳು ಬಿಜೆಪಿಯನ್ನು ಸ್ವೀಕರಿಸಲಿಲ್ಲ. ಇದೇ ಬಿಜೆಪಿಯ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಧರ್ಮದ ಆಧಾರದಲ್ಲಿ ಮತಗಳ ಧ್ರುವೀಕರಣವು ಬಿಜೆಪಿಗೆ ಸಹಕಾರಿಯಾಗಲಿಲ್ಲ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮುಸ್ಲಿಮರ ಸಂಖ್ಯೆ ಕಡಿಮೆ ಇರುವ ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚಿನ ಮತಗಳನ್ನು ಪಡೆದಿತ್ತು ಎಂಬುದು ನಿಜ. ಆದರೆ ವಿಧಾನಸಭಾ ಚುನಾವಣೆಯಲ್ಲಿ ಆ ಕ್ಷೇತ್ರಗಳಲ್ಲೇ ಶೇ 80ರಷ್ಟನ್ನು ಟಿಎಂಸಿ ಗೆದ್ದುಕೊಂಡಿದೆ. ಹಿಂದುತ್ವದ ಆಧಾರದಲ್ಲಿ ಬಿಜೆಪಿಗೆ ಮತನೀಡಲು ಈ ಕ್ಷೇತ್ರಗಳ ಮತದಾರರು ನಿರಾಕರಿಸಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗಿದೆ.

ಇನ್ನೊಂದೆಡೆ, ಮುಸ್ಲಿಂ ಸಮುದಾಯ ಈ ಬಾರಿ ಟಿಎಂಸಿ ಬೆನ್ನಿಗೆ ಗಟ್ಟಿಯಾಗಿ ನಿಂತಿದೆ. ರಾಜ್ಯದಲ್ಲಿ ಸುಮಾರು 110 ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳು ನಿರ್ಣಾಯಕವಾಗಿವೆ. ಟಿಎಂಸಿಯು ಇದರ ಲಾಭವನ್ನು ಪಡೆದಿದೆ. ಮತ ಧ್ರುವೀಕರಣದ ಲಾಭ ಬಿಜೆಪಿಗಿಂತ ಹೆಚ್ಚಾಗಿ ಟಿಎಂಸಿಗೆ ಆಗಿದೆ.

ರಾಜ್ಯದ ಮಹಿಳೆಯರು ಈ ಚುನಾವಣೆಯಲ್ಲೂ ‘ದೀದಿ’ಯ ಕೈಬಿಟ್ಟಿಲ್ಲ ಎಂಬುದು ಇನ್ನೊಂದು ಪ್ರಮುಖ ಅಂಶವಾಗಿದೆ. ಮಹಿಳೆಯರಿಗಾಗಿ ಕೇಂದ್ರ ಘೋಷಿಸಿರುವ ವಿವಿಧ ಯೋಜನೆಗಳು ಮತಗಳಿಕೆಗೆ ನೆರವಾಗಬಹುದೆಂಬ ಬಿಜೆಪಿಯ ನಿರೀಕ್ಷೆ ಹುಸಿಯಾಗಿದೆ. ಬದಲಿಗೆ, ಮಹಿಳೆಯರು ಮಮತಾ ಮೇಲೆಯೇ ಹೆಚ್ಚಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.