ADVERTISEMENT

ಆಳ–ಅಗಲ: ಮಮತಾ ಬ್ಯಾನರ್ಜಿಗೆ ಪರಿಷತ್‌ ಮೋಹ

ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಮೇಲ್ಮನೆ ರಚನೆ ಪ್ರಯತ್ನಕ್ಕೆ ಚಾಲನೆಯೇ?

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 19:33 IST
Last Updated 12 ಜುಲೈ 2021, 19:33 IST
ಮಮತಾ
ಮಮತಾ   

ವಿಧಾನ ಪರಿಷತ್‌ ರಚನೆಯ ಪ್ರಸ್ತಾವವನ್ನು ಪಶ್ಚಿಮ ಬಂಗಾಳ ವಿಧಾನಸಭೆ ಅಂಗೀಕರಿಸಿದೆ.

ಸದನದಲ್ಲಿದ್ದ 265 ಸದಸ್ಯರ ಪೈಕಿ, 196 ಸದಸ್ಯರ ಬಹುಮತದೊಂದಿಗೆ ನಿರ್ಣಯ ಅಂಗೀಕಾರಗೊಂಡಿದೆ. ವಿಧಾನಸಭಾ ಚುನಾವಣೆಗೆ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪ್ರಕಟಿಸಿದ್ದ ಪ್ರಣಾಳಿಕೆಯಲ್ಲಿಯೇ ಪರಿಷತ್‌ ರಚನೆಯ ಭರವಸೆ ಇತ್ತು. ಆದರೆ, ಈಗ ಪರಿಷತ್‌ ರಚನೆಗೆ ಟಿಎಂಸಿ ಮುಂದಾಗಿರುವುದರ ಹಿಂದೆ ಬೇರೆ ಕಾರಣವಿದೆ. ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಲ್ಲಿ ತಮ್ಮ ಒಂದು ಕಾಲದ ಆಪ್ತ, ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಟಿಎಂಸಿ ಮುಖ್ಯಸ್ಥೆ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋತಿದ್ದಾರೆ.

ಮುಖ್ಯಮಂತ್ರಿಯಾಗಿ ಮೇ 5ರಂದು ಪ್ರಮಾಣ ವಚನ ಸ್ವೀಕರಿಸಿರುವ ಮಮತಾ, ಆರು ತಿಂಗಳೊಳಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲ್ಲಲೇಬೇಕಿದೆ. ಈಗಾಗಲೇ ಎರಡು ತಿಂಗಳು ಕಳೆದಿದೆ.

ADVERTISEMENT

ಲೋಕಸಭೆ ಮತ್ತು ವಿಧಾನಸಭೆಯ ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ಕೋವಿಡ್‌–19ರ ಕಾರಣದಿಂದ ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗವು ನಿರ್ಧರಿಸಿದೆ. ಹೀಗಾಗಿ, ಪಶ್ಚಿಮ ಬಂಗಾಳದಲ್ಲಿಯೂ ಉಪಚುನಾವಣೆ ಸಾಧ್ಯತೆ ಬಹುತೇಕ ಇಲ್ಲ. ಹೀಗಾದರೆ, ಇನ್ನುಳಿದ ನಾಲ್ಕು ತಿಂಗಳಲ್ಲಿ ಮಮತಾ ಬ್ಯಾನರ್ಜಿ ಅವರು ಶಾಸಕರಾಗಿ ಆಯ್ಕೆಯಾಗುವುದು ಕಷ್ಟ. ಆದ್ದರಿಂದ, ಈ ಅವಧಿಯಲ್ಲಿ ವಿಧಾನ ಪರಿಷತ್‌ ಅಸ್ತಿತ್ವಕ್ಕೆ ಬಂದಿದ್ದೇ ಆದಲ್ಲಿ, ಪರಿಷತ್‌ ಸದಸ್ಯೆಯಾಗಿ ಆಯ್ಕೆಯಾಗುವ ಮೂಲಕ ಮಮತಾ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಬಹುದು.

ಬಿಜೆಪಿಯ ವಿರೋಧ

ಪಶ್ಚಿಮ ಬಂಗಾಳದಲ್ಲಿ ವಿಧಾನ ಪರಿಷತ್‌ ರಚಿಸುವ ಪ್ರಸ್ತಾವಕ್ಕೆ ಅಲ್ಲಿನ ವಿರೋಧ ಪಕ್ಷ ಬಿಜೆಪಿಯಿಂದ ತೀವ್ರ ಆಕ್ಷೇಪ ಇದೆ. ವಿಧಾನ ಸಭಾ ಚುನಾವಣೆಯಲ್ಲಿ ಸೋತ ಟಿಎಂಸಿ ನಾಯಕರ ಹುದ್ದೆಗಳನ್ನು (ಮಮತಾ ಅವರ ಮುಖ್ಯಮಂತ್ರಿ ಸ್ಥಾನ) ರಕ್ಷಿಸುವುದನ್ನು ಬಿಟ್ಟರೆ ಇದರಲ್ಲಿ ಜನಹಿತದ ಕಾಳಜಿಯೇನೂ ಇಲ್ಲ ಎಂಬುದು ಬಿಜೆಪಿಯ ಪ್ರತಿಪಾದನೆ.

‘ಬಹಳಷ್ಟು ರಾಜ್ಯಗಳು ವಿಧಾನ ಪರಿಷತ್‌ ಅನ್ನು ರದ್ದುಪಡಿಸಿವೆ. ವಿಧಾನಸಭೆ ಚುನಾವಣೆಯಲ್ಲಿ ಸೋತ ನಾಯಕರಿಗೆ ಹಿಂಬಾಗಿಲ ಪ್ರವೇಶ ದೊರಕಿಸಿಕೊಡುವುದಕ್ಕಾಗಿಯೇ ಟಿಎಂಸಿ, ಪರಿಷತ್‌ ರಚನೆಯ ಪ್ರಸ್ತಾವ ಮುಂದಿಟ್ಟಿದೆ. ಪರಿಷತ್‌ ರಚನೆಯಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆ. ಹಣ ಇಲ್ಲ ಎಂದು ಹೇಳುವ ಸರ್ಕಾರವು ಈಗ ಪರಿಷತ್‌ ರಚನೆಗೆ ಮುಂದಾಗಿರುವುದು ಏಕೆ? ವರ್ಷಕ್ಕೆ ₹90 ಕೋಟಿಯಿಂದ ₹100 ಕೋಟಿ ಹೊರೆ ಬೀಳಲಿದೆ’ ಎಂದು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.

1952ರಿಂದ 1969ರ ವರೆಗೆ ಪಶ್ಚಿಮ ಬಂಗಾಳದಲ್ಲಿ ಪರಿಷತ್‌ ಇತ್ತು. ಈ ಅವಧಿಯಲ್ಲಿ 436 ಮಸೂದೆಗಳಿಗೆ ಅಂಗೀಕಾರ ಸಿಕ್ಕಿದೆ. ಅವುಗಳ ಪೈಕಿ ಎರಡು ಮಾತ್ರ ಪರಿಷತ್‌ ಕಾರಣಕ್ಕೆ ತಿದ್ದುಪಡಿಗೆ ಒಳಗಾದವು ಎಂದು ಅಧಿಕಾರಿ ವಿವರಿಸಿದ್ದಾರೆ.

ರದ್ದತಿಯ ಹಿಂದೆಯೂ ರಾಜಕಾರಣ

ಸಂಯುಕ್ತ ರಂಗ ಮೈತ್ರಿಕೂಟವು 1967ರಲ್ಲಿ ಕಾಂಗ್ರೆಸ್ ಅನ್ನು ಪಶ್ಚಿಮ ಬಂಗಾಳದಲ್ಲಿ ಅಧಿಕಾರದಿಂದ ಕೆಳಕ್ಕೆ ಇಳಿಸಿತು. ಆದರೆ, ಒಂಬತ್ತೇ ತಿಂಗಳಲ್ಲಿ ಈ ಸರ್ಕಾರವು ಪತನವಾಗಿ, ಕಾಂಗ್ರೆಸ್ ಬೆಂಬಲದ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದರು. ಸಂಯುಕ್ತ ರಂಗ ನೇತೃತ್ವದ ಸರ್ಕಾರವನ್ನು ರಾಜ್ಯಪಾಲರು ವಜಾ ಮಾಡಿದ್ದು ಅಸಾಂವಿಧಾನಿಕ ಎಂದು ವಿಧಾನಪರಿಷತ್‌ನ ಸ್ಪೀಕರ್‌ ಹೇಳಿದ್ದರು. ಆದರೆ, ಹೊಸ ಸರ್ಕಾರವು ಸಂವಿಧಾನಬದ್ಧ ಎಂದು ವಿಧಾನ ಪರಿಷತ್‌ ನಿರ್ಣಯ ಅಂಗೀಕರಿಸಿತ್ತು. ಪರಿಷತ್‌ನಲ್ಲಿ ಕಾಂಗ್ರೆಸ್‌ಗೆ ಬಹುಮತವಿತ್ತು.

1969ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಂಯುಕ್ತ ರಂಗ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬಂತು. ಮೈತ್ರಿಕೂಟಕ್ಕೆ ಮೂರನೇ ಎರಡಕ್ಕೂ ಹೆಚ್ಚು ಬಹುಮತ ಇತ್ತು. ವಿಧಾನಪರಿಷತ್‌ ಅನ್ನು ರದ್ದುಪಡಿಸುವ ನಿರ್ಣಯವನ್ನು ಈ ಸರ್ಕಾರವು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಿತು. ಸಂಸತ್ತಿನ ಅನುಮೋದನೆಯೊಂದಿಗೆ ಪರಿಷತ್‌ ರದ್ದಾಯಿತು.

ಪಶ್ಚಿಮ ಬಂಗಾಳ ವಿಧಾನಸಭೆ ಕಟ್ಟಡ

2011ರಲ್ಲಿ ಅಧಿಕಾರಕ್ಕೆ ಬಂದಾಗಲೇ ಪರಿಷತ್‌ ರಚನೆಯ ಪ್ರಸ್ತಾವವನ್ನು ಟಿಎಂಸಿ ವಿಧಾನಸಭೆಯಲ್ಲಿ ಮಂಡಿಸಿತ್ತು. ಪ್ರಸ್ತಾವಕ್ಕೆ ಅನುಮೋದನೆಯೂ ಸಿಕ್ಕಿತ್ತು. ಪರಿಷತ್‌ ರಚನೆಯ ಸಂಬಂಧ ವರದಿ ಸಲ್ಲಿಸಲು ಸಮಿತಿಯೊಂದನ್ನು ರಚಿಸಲಾಗಿತ್ತು. ಆದರೆ, ಮುಂದಿನ ದಿನಗಳಲ್ಲಿ ಅದು ನನೆಗುದಿಗೆ ಬಿತ್ತು. ಕಾರಣ ಏನು ಎಂಬುದೂ ತಿಳಿಯಲಿಲ್ಲ.

ತೀರಥ್‌ ಸಿಂಗ್‌ ಬಲಿಪಶುವೇ?

ಉತ್ತರಾಖಂಡ ಮುಖ್ಯಮಂತ್ರಿ ತೀರಥ್‌ ಸಿಂಗ್ ರಾವತ್‌ ಅವರು ಅಧಿಕಾರಕ್ಕೆ ಏರಿ ನಾಲ್ಕು ತಿಂಗಳ ಒಳಗೇ ಸ್ಥಾನಕ್ಕೆ ಇದೇ 3ರಂದು ರಾಜೀನಾಮೆ ನೀಡಿದ್ದಾರೆ. ಕೋವಿಡ್‌–19 ತಡೆ ಮಾರ್ಗಸೂಚಿಯ ಕಾರಣದಿಂದಾಗಿ ಉಪಚುನಾವಣೆ ನಡೆಸಲು ಸಾಧ್ಯವಾಗದು. ಹಾಗಾಗಿ, ರಾಜೀನಾಮೆ ನೀಡುವುದಾಗಿ ತೀರಥ್‌ ಸಿಂಗ್‌ ಹೇಳಿದ್ದರು.

ಆದರೆ, ಇದು ಮಮತಾ ಅವರನ್ನು ಗುರಿಯಾಗಿಸಿ ಬಿಜೆಪಿ ಹೆಣೆದ ಕಾರ್ಯತಂತ್ರ ಎಂದು ಕಾಂಗ್ರೆಸ್‌ ಮತ್ತು ಇತರ ಪಕ್ಷಗಳ ಮುಖಂಡರು ಹೇಳಿದ್ದಾರೆ. ನವೆಂಬರ್‌ 5ರೊಳಗೆ ವಿಧಾನ ಸಭೆಗೆ ಮಮತಾ ಆಯ್ಕೆಯಾಗುವುದು ಸಾಧ್ಯವಿಲ್ಲ. ಹಾಗಾಗಿ, ಅವರು ರಾಜೀನಾಮೆ ನೀಡಬೇಕು ಎಂದು ತೀರಥ್‌ ಸಿಂಗ್‌ ಅವರನ್ನು ಬಲಿಪಶುವಾಗಿಸುವ ಮೂಲಕ ಬಿಜೆಪಿ ಹೇಳಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಸಂಸತ್ತಿನ ಅಂಗೀಕಾರ ಬೇಕು

ಸಂಸತ್ತಿನಲ್ಲಿ ಎರಡು ಸದನಗಳಿರುವಂತೆಯೇ, ರಾಜ್ಯಗಳು ಸಂವಿಧಾನದ 169ನೇ ವಿಧಿ ಮೂಲಕ ವಿಧಾನಸಭೆಯ ಜೊತೆಗೆ ವಿಧಾನ ಪರಿಷತ್ ಅನ್ನು ಹೊಂದಲು ಅವಕಾಶವಿದೆ.

ಈಗಾಗಲೇ ಅಸ್ತಿತ್ವದಲ್ಲಿರುವ ವಿಧಾನ ಪರಿಷತ್ತನ್ನು ಸಂಸತ್ತು ರದ್ದುಗೊಳಿಸಬಹುದು ಅಥವಾ ಸರಳ ಬಹುಮತದ ಮೂಲಕ ಹೊಸದಾಗಿ ರಚಿಸಬಹುದು. ರಾಜ್ಯದ ವಿಧಾನಸಭೆಯಲ್ಲಿ ಬಹುಮತದ ಮೂಲಕ ಈ ಪ್ರಸ್ತಾವವನ್ನು ಮೊದಲಿಗೆ ಅಂಗೀಕರಿಸಬೇಕು. ಈ ನಿರ್ಣಯಕ್ಕೆ ರಾಜ್ಯಪಾಲರಿಂದ ಅನುಮೋದನೆ ಬೇಕಾಗುತ್ತದೆ. ಇದನ್ನು ಕೇಂದ್ರಕ್ಕೆ ರವಾನಿಸಿ, ಸಂಸತ್ತಿನಲ್ಲಿ ಮಸೂದೆ ಅಂಗೀಕಾರ ಪಡೆಯಬೇಕಿದೆ. ಇದಕ್ಕೆ ಒಂದಿಷ್ಟು ಕಾಲಾವಕಾಶ ಹಿಡಿಯುತ್ತದೆ.

ಸಂವಿಧಾನದ 171ನೇ ವಿಧಿ ಪ್ರಕಾರ, ರಾಜ್ಯದ ವಿಧಾನ ಪರಿಷತ್ತಿನ ಸಾಮರ್ಥ್ಯವು ರಾಜ್ಯ ವಿಧಾನಸಭೆಯ ಒಟ್ಟು ಬಲದ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಇರುವಂತಿಲ್ಲ. ಕೇಂದ್ರದಲ್ಲಿ ರಾಜ್ಯಸಭೆ ಇರುವಂತೆ ರಾಜ್ಯದಲ್ಲಿ ಪರಿಷತ್ ಇರುತ್ತದೆ. ಇದು ಶಾಶ್ವತವಾಗಿದ್ದು, ಎಂದಿಗೂ ವಿಸರ್ಜನೆಯಾಗುವುದಿಲ್ಲ. ವಿಧಾನ ಪರಿಷತ್ತಿನ (ಎಂಎಲ್‌ಸಿ) ಸದಸ್ಯರ ಅಧಿಕಾರಾವಧಿ ಆರು ವರ್ಷಗಳಾಗಿದ್ದು, ಮೂರನೇ ಎರಡರಷ್ಟು ಸದಸ್ಯರು ಪ್ರತಿ ಎರಡು ವರ್ಷಗಳಿಗೊಮ್ಮೆ ನಿವೃತ್ತರಾಗುತ್ತಾರೆ.

ತಕ್ಷಣಕ್ಕೆ ರಚನೆ ಸಾಧ್ಯವೇ?

ವಿಧಾನ ಪರಿಷತ್‌ಗಳನ್ನು ಹೊಸದಾಗಿ ಸ್ಥಾಪಿಸುವ ಅಥವಾ ರದ್ದುಗೊಳಿಸುವ ಪ್ರಕ್ರಿಯೆ ನಡೆಯುತ್ತಲೇ ಇದೆ. 2020ರಲ್ಲಿ ವಿಧಾನ ಪರಿಷತ್ತನ್ನು ರದ್ದು ಗೊಳಿಸುವ ನಿರ್ಣಯವನ್ನು ಆಂಧ್ರಪ್ರದೇಶದ ವಿಧಾನಸಭೆ ಅಂಗೀಕರಿಸಿತು. ಪರಿಷತ್ ರದ್ದುಗೊಳಿಸುವ ನಿರ್ಣಯವನ್ನು ಸಂಸತ್ತು ಇನ್ನಷ್ಟೇ
ಅನುಮೋದಿಸಬೇಕಿದೆ.

ಜಮ್ಮು ಮತ್ತು ಕಾಶ್ಮೀರ ವಿಧಾನ ಪರಿಷತ್ತನ್ನು 2019ರಲ್ಲಿ ರದ್ದುಪಡಿಸಲಾಯಿತು. ಜಮ್ಮು ಕಾಶ್ಮೀರ ಮರುರಚನೆ ಮಸೂದೆಯ ಮೂಲಕ ಇದನ್ನು ರದ್ದು ಮಾಡಲಾಯಿತು. ಈ ಕಾಯ್ದೆ ಮೂಲಕ ಜಮ್ಮು ಕಾಶ್ಮೀರದ ರಾಜ್ಯದ ಸ್ಥಾನಮಾನವು ಹೋಗಿ, ಕೇಂದ್ರಾಡಳಿತ ಪ್ರದೇಶವಾಗಿ ಬದಲಾಯಿತು.

ಪರಿಷತ್‌ ಸ್ಥಾಪನೆ ವಿಚಾರವು ತಮಿಳುನಾಡಿನಲ್ಲಿ ಮೂರು ದಶಕಗಳಿಂದ ವಿವಾದದ ಕೇಂದ್ರವಾಗಿದೆ. 2010ರಲ್ಲಿ ಅಸ್ಸಾಂ ವಿಧಾನಸಭೆ ಮತ್ತು 2012ರಲ್ಲಿ ರಾಜಸ್ಥಾನ ವಿಧಾನಸಭೆಗಳು ತಮ್ಮ ರಾಜ್ಯಗಳಲ್ಲಿ ವಿಧಾನ ಪರಿಷತ್ ರಚಿಸುವ ನಿರ್ಣಯಗಳನ್ನು ಅಂಗೀಕರಿಸಿವೆ. ಈ ಮಸೂದೆಗಳು ರಾಜ್ಯಸಭೆಯಲ್ಲಿ ಇನ್ನೂ ಬಾಕಿ ಉಳಿದಿವೆ. ಹಾಗಾಗಿ, ಪರಿಷತ್‌ ಅನ್ನು ತುರ್ತಾಗಿ ರಚಿಸುವ ಟಿಎಂಸಿ ಪ್ರಯತ್ನ ಕೈಗೂಡುವುದು ಸುಲಭವಲ್ಲ.

ಎಲ್ಲೆಲ್ಲಿವೆ ಪರಿಷತ್‌

1.ಕರ್ನಾಟಕ

2.ಆಂಧ್ರಪ್ರದೇಶ

3.ಉತ್ತರ ಪ್ರದೇಶ

4.ಮಹಾರಾಷ್ಟ್ರ

5.ಬಿಹಾರ

6.ತೆಲಂಗಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.