ADVERTISEMENT

Explainer| ಏನಿದು ಜಿಎಸ್‌ಟಿ ವಿವಾದ, ರಾಜ್ಯಗಳಿಗೆ ಕೇಂದ್ರ ಏಕೆ ಹಣ ನೀಡುತ್ತಿಲ್ಲ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಆಗಸ್ಟ್ 2020, 12:19 IST
Last Updated 31 ಆಗಸ್ಟ್ 2020, 12:19 IST
   

ಏಪ್ರಿಲ್‌ ತಿಂಗಳಿನಿಂದ ಕೇಂದ್ರ ಸರ್ಕಾರ, ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಪಾವತಿಸಿಲ್ಲ. ಏಪ್ರಿಲ್– ಜುಲೈ ತಿಂಗಳ ಅವಧಿಯಲ್ಲಿ ಕೊಡಬೇಕಾಗಿದ್ದ ಪರಿಹಾರ ಮೊತ್ತದ ಹಣ ₹1.5 ಲಕ್ಷ ಕೋಟಿ ಬಾಕಿ ಇದೆ. ಈ ಕೊರತೆ ನೀಗಿಸಿಕೊಳ್ಳಲು ರಾಜ್ಯ ಸರ್ಕಾರಗಳು ಸಾಲ ತೆಗೆದುಕೊಳ್ಳುವಂತೆ ಕೇಂದ್ರ ಹೇಳಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೊರೊನಾ ಬಿಕ್ಕಟ್ಟು ಎಂಬುದು ‘ಭಗವಂತನ ಆಟ‘. ಈ ಬಿಕ್ಕಟ್ಟಿನಿಂ ದಾಗಿ ಕೇಂದ್ರ ಸರ್ಕಾರ ಆದಾಯ ಸಂಗ್ರಹದ ಮೇಲೆ ಪರಿಣಾಮ ಬೀರಿದೆ. ಈಗ ರಾಜ್ಯಗಳಿಗೆ ನೀಡಲು ಉಳಿದಿರುವುದು ಸ್ವಲ್ಪ ಮಾತ್ರ‘ ಎಂದು ಹೇಳಿದ್ದಾರೆ.

ಕೋವಿಡ್‌ ಸೋಂಕಿನಿಂದ ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರಗಳಿಗೆ, ಸಚಿವರ ಈ ಪ್ರಸ್ತಾವನೆ ಸಮಾಧಾನ ತಂದಿಲ್ಲ. ಹಾಗಾದರೆ, ಜಿಎಸ್‌ಟಿ ಪರಿಹಾರ ಎನ್ನುವುದು ಏಕೆ ಇಷ್ಟು ದೊಡ್ಡ ವ್ಯವಹಾರವಾಗಿದೆ ? ರಾಜ್ಯಗಳಿಗೆ ಮುಂದೆ ಯಾವ ಆಯ್ಕೆಗಳಿವೆ ?

ಜಿಎಸ್‌ಟಿ ಪರಿಹಾರ ಎಂದರೇನು ?

ಕೇಂದ್ರ ಸರ್ಕಾರ ಪರೋಕ್ಷ ತೆರಿಗೆಗಳನ್ನೆಲ್ಲ ಸೇರಿಸಿ 2017ರಲ್ಲಿ ಹೊಸ ಏಕರೂಪ ತೆರಿಗೆ ಪದ್ಧತಿ (ಜಿಎಸ್‌ಟಿ) ಜಾರಿಗೊಳಿಸಿದಾಗ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆಲವು ತೆರಿಗೆಗಳ ಮೇಲೆ ತಮಗಿದ್ದ ಹಕ್ಕುಗಳನ್ನು ಕಳೆದುಕೊಂಡವು. ಈ ಹೊಸ ತೆರಿಗೆಯಿಂದ ರಾಜ್ಯ ಸರ್ಕಾರಗಳ ಮೇಲೆ ಮುಂದಿನ ಐದು ವರ್ಷಗಳವರೆಗೆ ಉಂಟಾಗುವ ಆದಾಯ ನಷ್ಟವನ್ನು ಕೇಂದ್ರವು ಸರಿದೂಗಿಸಬೇಕು ಎಂಬ ಷರತ್ತಿನ ಮೇಲೆ ರಾಜ್ಯ ಸರ್ಕಾರಗಳು ಇದಕ್ಕೆ ಸಮ್ಮತಿಸಿದವು.

ಕೇಂದ್ರ ಸರ್ಕಾರ ಐಷಾರಾಮಿ ವಸ್ತುಗಳು ಮತ್ತು ಲಿಕ್ಕರ್‌, ಆಟೊಮೊಬೈಲ್‌, ತಂಪು ಪಾನೀಯ ಮತ್ತು ತಂಬಾಕು ಉತ್ಪನ್ನಗಳ ಮಾರಾಟಗಾರರಿಂದ ಸೆಸ್ ಸಂಗ್ರಹಿಸಿ, ರಾಜ್ಯಗಳಿಗೆ ಪರಿಹಾರ ವಿತರಿಸಬೇಕು. ರಾಜ್ಯ ಸರ್ಕಾರಗಳೂ ಜಿಎಸ್‌ಟಿ (ರಾಜ್ಯಗಳಿಗೆ ಪರಿಹಾರ) ಕಾಯ್ದೆ–2017 ರ ಅಡಿಯಲ್ಲಿ 2022 ರವರೆಗೆ 2015–16ರ ವಾರ್ಷಿಕ ಆದಾಯದ ಆಧಾರದ ಮೇಲೆ, ಪ್ರತಿ ವರ್ಷ ಶೇ 14ರಷ್ಟುನ್ನು ಕೇಂದ್ರಕ್ಕೆ ಪಾವತಿಸುವುದಾಗಿ ಗ್ಯಾರಂಟಿ ನೀಡಿವೆ.

ಜಿಎಸ್‌ಟಿ ಪರಿಹಾರದ ಸೆಸ್‌ ಸಮಸ್ಯೆ ಶುರುವಾಗಿದ್ದು ಯಾವಾಗ ? ಹೇಗೆ ?

ಕಳೆದ ವರ್ಷ ದೇಶದಲ್ಲಿ ಆರ್ಥಿಕ ಕುಸಿತ ಆರಂಭವಾದಾಗಿನಿಂದ ಜಿಎಸ್‌ಟಿ ಸಂಗ್ರಹ ಕುಸಿತ ಕಾಣಲಾರಂಭಿಸಿತು. ಕೋವಿಡ್ 19 ಸಾಂಕ್ರಾಮಿಕ ರೋಗ ಶುರುವಾದ ಮೇಲೆ, ಪರಿಸ್ಥಿತಿ ಇನ್ನಷ್ಟು ಬಿಗುಡಾಯಿಸಿತು. ಆಗ ಕೇಂದ್ರ ಸರ್ಕಾರ, ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರದ ಹಣ ಕೊಡುವ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸಲಾರಂಭಿಸಿತು. ಈ ವಿಷಯ ಡಿಸೆಂಬರ್ 17, 18, 2019ರಲ್ಲಿ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಬಿಸಿ ಬಿಸಿ ಚರ್ಚೆಗೂ ಕಾರಣವಾಯಿತು.

ಕೇರಳದ ಹಣಕಾಸು ಸಚಿವ ಟಿ.ಎಂ.ಥಾಮಸ್ ಐಸಾಕ್ ಅವರು, ‘ಈ ವಿಷಯದಲ್ಲಿ ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ‘ ಎಂದು ಕೇಂದ್ರಕ್ಕೆ ಬೆದರಿಕೆಯನ್ನೂ ಹಾಕಿದರು. ಈ ಬೆಳವಣಿಗೆಯ ನಂತರ ಕೇಂದ್ರ ಸರ್ಕಾರ ಆಗಸ್ಟ್‌ನಿಂದ ನವೆಂಬರ್‌ವರೆಗೆ ಬಾಕಿ ಉಳಿಸಿಕೊಂಡಿದ್ದ ಜಿಎಸ್‌ಟಿ ಪರಿಹಾರ ಹಣವನ್ನು ರಾಜ್ಯಗಳಿಗೆ ವಿತರಿಸಿತು. ಆದರೆ, ಪರಿಹಾರದ ಹಣ ನೀಡಲು ಬಹಳ ಸತಾಯಿಸಿತು. ಈ ವರ್ಷ ಮಾರ್ಚ್‌ ತಿಂಗಳವರೆಗೆ ಉಳಿದಿರುವ ಪರಿಹಾರ ಹಣವನ್ನು ಜುಲೈನಲ್ಲಿ ನೀಡಿದೆ. ರಾಜ್ಯ ಸರ್ಕಾರಗಳೂ ಏಪ್ರಿಲ್‌ ತಿಂಗಳಿಂದ ಯಾವುದೇ ಹಣವನ್ನು ಕೇಂದ್ರಕ್ಕೆ ಪಾವತಿಸಿಲ್ಲ.

ಏಪ್ರಿಲ್ ನಂತರ ಏನಾಯಿತು ?

ನಮಗೆಲ್ಲ ತಿಳಿದಿರುವಂತೆ, ಹೊಸ ಆರ್ಥಿಕ ವರ್ಷಕ್ಕೆ ಕಾಲಿಡುತ್ತಿದ್ದಂತೆ ದೇಶದಾದ್ಯಂತ ಕೋವಿಡ್‌ 19 ಸಾಂಕ್ರಾಮಿಕ ರೋಗ ಅಪ್ಪಳಿಸಿತು. ಮೊದಲೇ ನಿಧಾನಗತಿಯಲ್ಲಿ ಸಾಗುತ್ತಿದ್ದ ದೇಶದ ಆರ್ಥಿಕತೆ, ಕೊರೊನಾ–ಲಾಕ್‌ಡೌನ್‌ನಿಂದಾಗಿ ಮತ್ತಷ್ಟು ಜರ್ಝರಿತವಾಯಿತು. ರಾಜ್ಯ ಸರ್ಕಾರಗಳಲ್ಲಿ ಹಣಕಾಸು ಪರಿಸ್ಥಿತಿ ಬಿಗುಡಾಯಿಸಿತು. ಈ ಸಂದರ್ಭದಲ್ಲಿ ತಮ್ಮ ಜಿಎಸ್‌ಟಿ ಪರಿಹಾರ ಹಣವನ್ನು ನೀಡುವಂತೆ ರಾಜ್ಯ ಸರ್ಕಾರಗಳು ಕೇಂದ್ರವನ್ನು ಒತ್ತಾಯಿಸಿದವು. ಸಾಲ ಸಂಗ್ರಹಿಸಿಯಾದರೂ ನಮಗೆ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದವು.

ಈ ಸಂದರ್ಭದಲ್ಲಿ ಹಣಕಾಸು ಸಚಿವರು, ‘ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಸಮಸ್ಯೆಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಆಗಸ್ಟ್ 27ರಂದು ಜಿಎಸ್‌ಟಿ ಮಂಡಳಿ ಸಭೆ ನಡೆಯಿತು. ಸಭೆಯಲ್ಲಿ, ‘ರಾಜ್ಯ ಸರ್ಕಾರಗಳು ಕೇಂದ್ರ ಅಟಾರ್ನಿ ಜನರಲ್ ಅವರ ಅಭಿಪ್ರಾಯ ಪಡೆದು ಸಾಲ ಸಂಗ್ರಹಿಸಬಹುದು‘ ಎಂದು ಹೇಳಿದರು.

ಜಿಎಸ್‌ಟಿ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಎಷ್ಟು ಉತ್ತರದಾಯಿಯಾಗಿದೆ?

ಏಪ್ರಿಲ್-ಜುಲೈನಲ್ಲಿ ಕೊಡಬೇಕಾದ ಪರಿಹಾರ ಬಾಕಿ ₹1.5 ಲಕ್ಷ ಕೋಟಿ. ಆದರೆ ಈ ಹಣಕಾಸು ವರ್ಷ ಕೊಡಬೇಕಾಗಿರುವ ಒಟ್ಟು ಬಾಕಿ ಹಣ ₹ 3 ಲಕ್ಷ ಕೋಟಿ. ಕೇಂದ್ರ ಸರ್ಕಾರ, ಮಾರ್ಚ್ 31, 2021ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ರಾಜ್ಯ ಸರ್ಕಾರದಿಂದ ಪರಿಹಾರ ಸೆಸ್ ಮೂಲಕ ಕೇವಲ ₹65,000 ಮಾತ್ರ ಸಂಗ್ರಹಿಸುವ ನಿರೀಕ್ಷೆ ಇದೆ ಎಂದು ಹೇಳಿದೆ.

ರಾಜ್ಯ ಸರ್ಕಾರಗಳು ಉಳಿದ ₹ 2.35 ಲಕ್ಷ ಕೋಟಿ ಹಣವನ್ನು ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಬೇಕು. 2022 ರ ನಂತರ ಕೇಂದ್ರವು ಭಾಗಶಃ ಆ ಸಾಲಗಳನ್ನು ಪಾವತಿಸುತ್ತದೆ ಎಂದು ಹೇಳಿದ ಕೇಂದ್ರ ಹಣಕಾಸು ಸಚಿವರು, ಹಣ ಸಂಗ್ರಹಿಸಲು ರಾಜ್ಯಗಳಿಗೆ ಎರಡು ಆಯ್ಕೆಗಳನ್ನು ನೀಡಿದರು.

ಆಯ್ಕೆಗಳು ಯಾವುವು?

ಜಿಎಸ್‌ಟಿ ಅನುಷ್ಠಾನದಿಂದ ಉಂಟಾಗಿರುವ ಹಣಕಾಸು ಕೊರತೆಯನ್ನು ಸಾಲ ಸಂಗ್ರಹಿಸುವ ಮೂಲಕ ಪರಿಹರಿಸಿಕೊಳ್ಳಬಹುದು. ಇದಕ್ಕಾಗಿ ರಿಸರ್ವ್‌ ಬ್ಯಾಂಕ್‌ನಿಂದ ₹97 ಸಾವಿರ ಕೋಟಿ ಸಾಲ ಪಡೆಯಬಹುದು. ಇಲ್ಲವೇ, ಹೊರಗಡೆಯಿಂದ ₹2.35 ಲಕ್ಷ ಕೋಟಿ ಪೂರ್ಣ ಹಣವನ್ನು ಸಾಲವಾಗಿ ಪಡೆಯಬಹುದು.

ಮೊದಲ ಆಯ್ಕೆಯಲ್ಲಿ ರಾಜ್ಯಗಳು ₹97,000 ಕೋಟಿ ಸಾಲವನ್ನು ಸಂಗ್ರಹಿಸಿದರೆ, ಕೇಂದ್ರವು ಅಸಲು ಮತ್ತು ಬಡ್ಡಿಯನ್ನು ಭರಿಸುತ್ತದೆ. ಎರಡನೇ ಆಯ್ಕೆಯಡಿ, ರಾಜ್ಯಗಳು ₹ 2.35 ಲಕ್ಷ ಕೋಟಿ ಸಾಲ ಮಾಡಿದರೆ, ಕೇಂದ್ರ ಅಸಲು ಮಾತ್ರ ಪಾವತಿಸುತ್ತದೆ. ಅಂತಹ ಸಾಲಗಳ ಮೇಲಿನ ಬಡ್ಡಿಯನ್ನು ರಾಜ್ಯಗಳೇ ಭರಿಸಬೇಕಾಗುತ್ತದೆ. ಎರಡೂ ಆಯ್ಕೆಯಲ್ಲಿ ಕೇಂದ್ರ ಸರ್ಕಾರ ನೀಡುವ ಹಣವನ್ನು 2022ರ ನಂತರ ಸೆಸ್‌ ಮೂಲಕ ಮರುಪಾವತಿ ಮಾಡುತ್ತದೆ.

ಕೇಂದ್ರದ ಈ ಪ್ರಸ್ತಾಪಕ್ಕೆ ರಾಜ್ಯಗಳು ಒಪ್ಪುತ್ತವೆಯೇ?

ಪ್ರಸ್ತುತದ ಪರಿಸ್ಥಿತಿಯಲ್ಲಿ ರಾಜ್ಯಗಳು ಸಾಲ ಮಾಡುವುದು, ಹೊರಗಡೆಯಿಂದ ಸಾಲ ಸಂಗ್ರಹಿಸುವುದು ಅಸಂಭವ. ಮೊದಲನೆಯದಾಗಿ, ರಾಜ್ಯಗಳಿಗೆ ಕಾನೂನಾತ್ಮಕವಾಗಿ ಜಿಎಸ್‌ಟಿ ಪರಿಹಾರ ದೊರೆಯಲೇಬೇಕು. ಎರಡನೆಯದಾಗಿ, ರಾಜ್ಯಗಳು ಪಡೆಯುವ ಎಲ್ಲ ಸಾಲದ ಮೇಲೆ ಹೆಚ್ಚಿನ ಬಡ್ಡಿ ಬೀಳುತ್ತದೆ. ಅಲ್ಲದೇ, ಸಾಲ ಮರುಪಾವತಿ ವಿಷಯದಲ್ಲಿ ರಾಜ್ಯ ಸರ್ಕಾರಗಳು, ಕೇಂದ್ರದಷ್ಟು ಸಾಮರ್ಥ್ಯ ಹೊಂದಿಲ್ಲ. ಮತ್ತೊಂದು ಸಮಸ್ಯೆ ಎಂದರೆ, ಕಾನೂನಿನ ಪ್ರಕಾರ ರಾಜ್ಯ ಸರ್ಕಾಗಳು ತಮ್ಮ ಜಿಡಿಪಿಯ ಶೇ 3.5ಕ್ಕಿಂತ ಹೆಚ್ಚು ಹಣವನ್ನು ಸಾಲ ಪಡೆಯುವಂತಿಲ್ಲ. ಒಂದು ಪಕ್ಷ ಆ ನಿಯಮವನ್ನು ಸಡಿಲಿಸುವುದಾದರೆ, ರಾಜ್ಯ ಸರ್ಕಾರಗಳ ಜಿಡಿಪಿ ಅನುಪಾತದಲ್ಲಿ ತೀರ ವ್ಯತ್ಯಾಸವಾಗುತ್ತದೆ ಮತ್ತು ಬಂಡವಾಳ ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ. ಕೇಂದ್ರ ಸರ್ಕಾರ ಜಿಎಸ್‌ಟಿ ಬಿಕ್ಕಟ್ಟು ಬಗೆಹರಿಸಲು ಮಂಗಳವಾರ ರಾಜ್ಯ ಸರ್ಕಾರಗಳ ಹಣಕಾಸು ಕಾರ್ಯದರ್ಶಿಗಳ ಸಭೆ ಕರೆದಿದೆ.

ವಾಗ್ದಾನದಿಂದ ಹಿಂದೆ ಸರಿಯಬಾರದು ಎಂದ ರಾಜ್ಯಗಳು

ಕೇರಳ, ಕರ್ನಾಟಕ , ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮಬಂಗಾಳ, ರಾಜಸ್ಥಾನ, ಛತ್ತೀಸ‌ಗಡ ಮತ್ತು ಜಾರ್ಖಂಡ್ ರಾಜ್ಯಗಳಿಗೆ ಈ ಪರಿಹಾರದ ಹಣ ಪಾವತಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ತನ್ನ ವಾಗ್ದಾನದಿಂದ ಹಿಂದೆ ಸರಿಯಬಾರದು ಎಂದು ಎಚ್ಚರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.