ADVERTISEMENT

Explainer: ಮಾರಣಾಂತಿಕ ಹಳದಿ ಶಿಲೀಂಧ್ರ.. ಇಲ್ಲಿದೆ ತಿಳಿಯಬೇಕಾದ ಪ್ರಮುಖ ಮಾಹಿತಿ

​ಪ್ರಜಾವಾಣಿ ವಾರ್ತೆ
Published 25 ಮೇ 2021, 10:31 IST
Last Updated 25 ಮೇ 2021, 10:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊರೊನಾ ವೈರಸ್‌ನ ಎರಡನೇ ಅಲೆಗೆ ವಿಶ್ವವೇ ತತ್ತರಿಸಿರುವ ಬೆನ್ನಲ್ಲೆ ಬಣ್ಣ ಬಣ್ಣದ ಫಂಗಸ್‌ಗಳು ಕಾಣಿಸಿಕೊಂಡು ಜನರನ್ನು ಕಕ್ಕಾಬಿಕ್ಕಿಯನ್ನಾಗಿಸುತ್ತಿವೆ. ಮೊದಲಿಗೆ ಕಪ್ಪು ಶಿಲೀಂಧ್ರ, ನಂತರ ಬಿಳಿ ಶಿಲೀಂಧ್ರ, ಈಗ ಇವರೆಡಕ್ಕಿಂತ ಹೆಚ್ಚು ಅಪಾಯಕಾರಿಯಾದ ಹಳದಿ ಶಿಲೀಂಧ್ರ ಸೋಂಕು ಉತ್ತರ ಪ್ರದೇಶದ ಗಾಜಿಯಾದಬಾದ್‌ನಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ಕಪ್ಪು ಮತ್ತು ಬಿಳಿ ಶಿಲೀಂಧ್ರ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯಲ್ಲೇ ಹಳದಿ ಸೋಂಕು ಕಾಣಿಸಿಕೊಂಡಿದ್ದು, ವೈದ್ಯಕೀಯ ಲೋಕಕ್ಕೆ ಸವಾಲಾಗಿ ಪರಿಣಮಿಸಿದೆ.

ಹಳದಿ ಶಿಲೀಂಧ್ರವು ಮಾರಣಾಂತಿಕ ಸೋಂಕು. ಇದು ದೇಹದ ಒಳಗಿನ ಅಂಗಾಂಗಗಳ ಮೇಲೆ ನೇರವಾಗಿ ದುಷ್ಪರಿಣಾಮ ಬೀರುತ್ತದೆ. ಸೂಕ್ತ ಚಿಕಿತ್ಸೆ ನೀಡಲು ವ್ಯಕ್ತಿಯು ಯಾವ ರೋಗದಿಂದ ಬಳಲುತ್ತಿದ್ದಾನೆ ಎಂಬುದನ್ನು ಪತ್ತೆ ಹಚ್ಚುವುದೂ ಈ ಶಿಲೀಂಧ್ರದಿಂದಾಗಿ ಕಷ್ಟವಾಗುತ್ತದೆ.

ಹಳದಿ ಶಿಲೀಂಧ್ರ ಎಂದರೇನು?
ವೈದ್ಯಕೀಯ ಭಾಷೆಯಲ್ಲಿ ಮ್ಯೂಕರ್‌ ಸೆಪ್ಟಿಕಸ್‌ ಎಂದು ಗುರುತಿಸಲ್ಪಟ್ಟಿರುವ ಹಳದಿ ಶಿಲೀಂಧ್ರ ಸೋಂಕು ಸಾಮಾನ್ಯವಾಗಿ ಮನುಷ್ಯನಲ್ಲಿ ಕಾಣಿಸಿಕೊಳ್ಳುವ ಸೋಂಕಲ್ಲ. ಇದು ಹಲ್ಲಿಗಳಲ್ಲಿ ಕಂಡುಬರುವ ಸೋಂಕು. ಕೋವಿಡ್‌ 19 ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭ ಸ್ಟಿರಾಯ್ಡ್‌ಗಳು ಮತ್ತು ಇಮ್ಯುನೊಸುಪ್ರೆಸಂಟ್‌ಗಳಂತಹ ಡ್ರಗ್ಸ್‌ ಬಳಕೆಯಿಂದ ದೇಹದ ಸಹಜ ರೋಗನಿರೋಧಕ ಶಕ್ತಿಯನ್ನು ಕ್ಷೀಣಿಸುವಂತೆ ಮಾಡಿರುತ್ತವೆ. ಇದರಿಂದ ಇಂತಹ ಅಪರೂಪದ ಶಿಲೀಂಧ್ರ ಸೋಂಕುಗಳು ತಗುಲುತ್ತಿವೆ ಎಂದು ತಜ್ಞರು ಹೇಳಿದ್ದಾರೆ.

ADVERTISEMENT

ಗುಣಲಕ್ಷಣಗಳೇನು?
ಆಲಸ್ಯ, ಹಸಿವಾಗದಿರುವುದು ಮತ್ತು ತೂಕ ಇಳಿಕೆಯಾಗುವುದು ಹಳದಿ ಶಿಲೀಂಧ್ರ ಸೋಂಕಿನ ಪ್ರಮುಖ ಗುಣಲಕ್ಷಣಗಳಾಗಿವೆ. ಸೂಕ್ತ ಸಮಯದಲ್ಲಿ ಸೋಂಕು ತಗುಲಿರುವುದು ಪತ್ತೆಯಾಗದಿದ್ದಲ್ಲಿ ಗುಣಲಕ್ಷಣಗಳು ಗಂಭೀರ ಸ್ಥತಿಗೆ ತಲುಪುತ್ತವೆ. ಇದರಿಂದ ಕೀವು ಸೋರುವುದು, ಗಾಯಗಳು ಗುಣವಾಗುವ ಪ್ರಕ್ರಿಯೆ ನಿಧಾನವಾಗುವುದು, ಕಣ್ಣಿನ ಗುಡ್ಡೆಗಳು ಒಳಗೆ ಹೋಗುವುದು, ಅಂಗಾಂಶಗಳ ಜೀವಕೋಶಗಳು ಸಾಯುವಂತಹ ಗಂಭೀರ ಸಮಸ್ಯೆಗಳು ಎದುರಾಗುತ್ತವೆ.

ಕಪ್ಪು ಮತ್ತು ಬಿಳಿ ಶಿಲೀಂಧ್ರಕ್ಕಿಂತ ಹೆಚ್ಚು ಅಪಾಯಕಾರಿಯೇ?
ಹಳದಿ ಶಿಲೀಂಧ್ರ ಸೋಂಕು ತಗುಲಿರುವುದು ಬೇಗನೆ ಪತ್ತೆಯಾದರೆ ಚಿಕಿತ್ಸೆ ಫಲಕಾರಿಯಾಗಬಹುದು. ಆದರೆ ದೇಹದಲ್ಲಿ ಈ ಸೋಂಕಿನ ಇರುವಿಕೆಯು ಬೇಗನೆ ಪತ್ತೆಯಾಗುವುದಿಲ್ಲ. ಕಪ್ಪು ಮತ್ತು ಬಿಳಿ ಶಿಲೀಂಧ್ರ ಸೋಂಕುಗಳು ಗುಣವಾಗುವುದಕ್ಕೂ ಬಿಡುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಅಂಗಾಂಗಗಳ ವೈಫಲ್ಯಕ್ಕೂ ಕಾರಣವಾಗಬಲ್ಲದು. ಈ ಸೋಂಕಿನಿಂದ ಸಂಭವಿಸಬಹುದಾದ ಸಾವುನೋವಿನ ಬಗ್ಗೆ ಇದುವರೆಗೆ ಯಾವುದೇ ಅಧ್ಯಯನ ವರದಿಗಳು ಬಂದಿಲ್ಲ.

ಹಳದಿ ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳಲು ಕಾರಣವೇನು?
ಅತಿಯಾದ ತೇವಾಂಶ, ದೇಹದಲ್ಲಿ ತೇವಾಂಶವು 30-40%ಗಿಂತ ಹೆಚ್ಚಾದರೆ ಶಿಲೀಂಧ್ರಗಳು ಬೆಳೆಯುತ್ತವೆ. ನೈರ್ಮಲ್ಯ ಕಾಪಾಡಿಕೊಳ್ಳದಿರುವುದೇ ಇಂತಹ ಶಿಲೀಂಧ್ರಗಳು ಬೆಳವಣಿಗೆ ಹೊಂದಲು ಪ್ರಮುಖ ಕಾರಣ. ದೀರ್ಘಾವಧಿ ಹೊಂದಿದ ಆಹಾರ ಮತ್ತು ಸೂಕ್ತ ರೀತಿಯಲ್ಲಿ ತ್ಯಾಜ್ಯ ವಿಲೇವರಿ ಮಾಡದಿರುವುದು, ಕೊಳಕಾಗಿರುವುದು ಇತ್ಯಾದಿ ಕಾರಣಗಳಿಂದಲೂ ಸೋಂಕುಗಳು ಕಾಣಿಸಿಕೊಳ್ಳುತ್ತವೆ.

ಹಳದಿ ಶಿಲೀಂಧ್ರ ಸೋಂಕಿಗೆ ಚಿಕಿತ್ಸೆಯೇನು?
ಆ್ಯಂಫೊಟೆರಿಸಿನ್ ಬಿ(Amphotericin B) ಚುಚ್ಚುಮದ್ದು ಒಂದೇ ಸದ್ಯಕ್ಕಿರುವ ಚಿಕಿತ್ಸೆ. ಕಪ್ಪು ಶಿಲೀಂಧ್ರಕ್ಕೂ ಇದೇ ಚುಚ್ಚುಮದ್ದನ್ನು ನೀಡಲಾಗುತ್ತಿದೆ. ಇದು ಶಿಲೀಂಧ್ರಗಳ ಬೆಳವಣಿಗೆಯನ್ನು ನಿರೋಧಿಸುವ ಚುಚ್ಚುಮದ್ದಾಗಿದೆ. ಗುಣಲಕ್ಷಣಗಳನ್ನು ಬೇಗನೆ ಗುರುತಿಸಿ ರೋಗಿಯನ್ನು ತಕ್ಷಣಆಸ್ಪತ್ರೆಗ ದಾಖಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.