ADVERTISEMENT

Factcheck: ಆಸ್ಪತ್ರೆಯಲ್ಲಿ ಕೋವಿಡ್‌ ರೋಗಿಗಳನ್ನು ಕೊಲ್ಲಲಾಗುತ್ತಿದೆಯೇ?

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 21:28 IST
Last Updated 28 ಏಪ್ರಿಲ್ 2021, 21:28 IST
   

ಬೆಂಗಳೂರಿನ ಆಸ್ಪತ್ರೆಯಲ್ಲಿ ಕೋವಿಡ್‌ ರೋಗಿಗಳನ್ನು ಕೊಲ್ಲಲಾಗುತ್ತಿದೆ. ಸರ್ಕಾರ, ಮೃತಪಡುವ ಪ್ರತಿ ಕೋವಿಡ್‌ ರೋಗಿಗೆ ₹ 5ಲಕ್ಷದಿಂದ 7 ಲಕ್ಷಪಾವತಿಸುತ್ತಿದೆ. ಹೀಗಾಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳನ್ನು ಕೊಲ್ಲಲಾಗುತ್ತಿದೆ. ಬೆಂಗಳೂರಿನ ಬನ್ನೇರುಘಟ್ಟದ ಆಕ್ಸ್‌ಫರ್ಡ್ ಯೂನಿರ್ವಸಿಟಿ ಆಸ್ಪತ್ರೆಯಲ್ಲಿ ಕೋವಿಡ್‌ ರೋಗಿಯನ್ನು, ಆಸ್ಪತ್ರೆ ಸಿಬ್ಬಂದಿ ಹೊಡೆದು ಕೊಂದಿದ್ದಾರೆ ಎಂಬ ವಿವರ ಇರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೋಸ್ಟ್‌ನಲ್ಲಿ ಒಂದು ವಿಡಿಯೊ ಸಹ ಹಂಚಿಕೊಳ್ಳಲಾಗಿದೆ. ಆಸ್ಪತ್ರೆ ಸಿಬ್ಬಂದಿಯು ರೋಗಿಯೊಬ್ಬರ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಆ ವಿಡಿಯೊದಲ್ಲಿ ಇದೆ.

ಆದರೆ, ಈ ವಿಡಿಯೊಗೆ ಸಂಬಂಧಿಸಿದ ವಿವರ ತಪ್ಪಾಗಿದೆ ಎಂದು ಹಲವು ಫ್ಯಾಕ್ಟ್‌ಚೆಕ್ ವೇದಿಕೆಗಳು ಫ್ಯಾಕ್ಟ್‌ಚೆಕ್ ಪ್ರಕಟಿಸಿವೆ. ಈ ಪೋಸ್ಟ್‌ನಲ್ಲಿ ಇರುವ ವಿಡಿಯೊ ಬೆಂಗಳೂರಿನ ಆಸ್ಪತ್ರೆಯದ್ದಲ್ಲ. ಇದು ಪಂಜಾಬ್‌ನ ಪಟಿಯಾಲದ ಆಸ್ಪತ್ರೆ ಒಂದರ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ. 2020ರ ಆಗಸ್ಟ್‌ನಲ್ಲಿ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬರಿಗೆ ಆಸ್ಪತ್ರೆ ಸಿಬ್ಬಂದಿ ಥಳಿಸಿದ್ದ ದೃಶ್ಯ ಅದು. ಈ ಸಂಬಂಧ ಅಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ, ಹಲ್ಲೆ ನಡೆಸಿದ ಸಿಬ್ಬಂದಿಯನ್ನು ಬಂಧಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ಸುದ್ದಿಯನ್ನು ಅಮರ್ ಉಜಾಲ, ಎಬಿಪಿ ನ್ಯೂಸ್‌ ಮತ್ತಿತರ ಪತ್ರಿಕೆ ಮತ್ತು ವಾಹಿನಿಗಳು ಪ್ರಕಟಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT