ADVERTISEMENT

ಫ್ಯಾಕ್ಟ್‌ಚೆಕ್: ಬಿಹಾರದ ಮದ್ಯ ಮಾಫಿಯಾದ ಪರಿಸ್ಥಿತಿ- ವಿಡಿಯೊ ಇತ್ತೀಚಿನದ್ದಲ್ಲ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 19:46 IST
Last Updated 4 ಜನವರಿ 2023, 19:46 IST
   

2022ರ ಡಿಸೆಂಬರ್ 28ರಂದು ಬಿಹಾರದ ಬಿಜೆಪಿ ಘಟಕ ಮಾಡಿದ ಟ್ವೀಟ್‌ನಲ್ಲಿ ಜನರ ಗುಂಪೊಂದು ಪೊಲೀಸರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೊವನ್ನು ಹಂಚಿಕೊಳ್ಳಲಾಗಿತ್ತು. ‘ಇದು ಬಿಹಾರದ ಮದ್ಯ ಮಾಫಿಯಾದ ಪರಿಸ್ಥಿತಿ’ ಎಂಬುದಾಗಿ ವಿವರಣೆ ನೀಡಲಾಗಿತ್ತು. ‘ಬಿಹಾರದಲ್ಲಿ ಅಧಿಕಾರದಲ್ಲಿರುವ ಜೆಡಿಯು–ಆರ್‌ಜೆಡಿ ನೇತೃತ್ವದ ಸರ್ಕಾರದಲ್ಲಿ ಮದ್ಯ ಮಾಫಿಯಾ ಪ್ರಬಲವಾಗಿದೆ’ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಈ ವಿಡಿಯೊ ಇತ್ತೀಚಿನದ್ದಲ್ಲ.

ಬಿಜೆಪಿ ಟ್ವೀಟ್‌ನಲ್ಲಿ ಹಂಚಿಕೊಂಡಿರುವ ವಿಡಿಯೊ ಎರಡು ವರ್ಷಗಳ ಹಿಂದಿನದ್ದಾಗಿದ್ದು, ಬಿಜೆಪಿ–ಜೆಡಿಯು ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ನಡೆದ ಘಟನೆ ಎಂದು ‘ಆಲ್ಟ್‌ ನ್ಯೂಸ್’ ವರದಿ ಮಾಡಿದೆ. 2020ರ ಸೆಪ್ಟೆಂಬರ್‌ನಲ್ಲಿ ಆರ್‌ಜೆಡಿ ನಾಯಕ ತೇಜ್‌ಪ್ರತಾಪ್ ಯಾದವ್ ಅವರು ಈ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಮದ್ಯ ನಿಷೇಧವಿದ್ದರೂ, ರಾಜ್ಯದಲ್ಲಿ ಮದ್ಯ ಸಾಗಾಟ ನಿರಂತರವಾಗಿ ನಡೆಯುತ್ತಿದೆ ಎಂದು ಅವರು ಉಲ್ಲೇಖಿಸಿದ್ದರು. ಅಕ್ರಮ ಮದ್ಯ ಸಾಗಾಟದ ಬೆನ್ನುಹತ್ತಿದ್ದ ಪೊಲೀಸರ ಮೇಲೆ ಗುಂಪೊಂದು ದಾಳಿ ನಡೆಸಿತ್ತು. 2020ರ ಆಗಸ್ಟ್ 5ರಂದು ನಡೆದ ಈ ಘಟನೆ ಬಗ್ಗೆ ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ವಿಡಿಯೊವನ್ನು ಇತ್ತೀಚಿನದ್ದು ಎಂಬುದಾಗಿ ಬಿಹಾರದ ಬಿಜೆಪಿ ಘಟಕ ತಪ್ಪಾಗಿ ಹಂಚಿಕೊಂಡಿದೆ ಎಂದು ಆಲ್ಟ್‌ ನ್ಯೂಸ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT