ADVERTISEMENT

Fact Check: ವಿಮಾನಯಾನ ಸಚಿವಾಲಯ ಪ್ರಕಟಿಸಿದ ಚಿತ್ರ ಚೆನ್ನೈ ವಿಮಾನ ನಿಲ್ದಾಣದ್ದೇ?

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 18:41 IST
Last Updated 2 ಆಗಸ್ಟ್ 2021, 18:41 IST
   

ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಇತ್ತೀಚೆಗೆ ಟ್ವೀಟ್ ಮಾಡಿದ ವಿಮಾನ ನಿಲ್ದಾಣದ ಚಿತ್ರಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಟ್ವೀಟ್‌ನಲ್ಲಿರುವ ಮೂರು ಚಿತ್ರಗಳು ಚೆನ್ನೈ ವಿಮಾನ ನಿಲ್ದಾಣದಅದ್ಭುತ ವಿನ್ಯಾಸ ಹಾಗೂ ಸ್ವಚ್ಛತೆ ಬಗ್ಗೆ ಗಮನ ಸೆಳೆದಿವೆ. ‘ಅದ್ಭುತ ಭಾರತೀಯ ವಿಮಾನ ನಿಲ್ದಾಣಗಳು! ಏಷ್ಯಾದ ಡೆಟ್ರಾಯಿಟ್‌ ಎಂದು ಖ್ಯಾತಿ ಪಡೆದಿರುವ ಚೆನ್ನೈನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಯಾಣಿಕರ ದಟ್ಟಣೆಯ ದೃಷ್ಟಿಯಿಂದ ಭಾರತದ ನಾಲ್ಕನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣ ಎನಿಸಿದೆ. 2020ನೇ ಇಸವಿಯಲ್ಲಿ ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಸುಮಾರು 2.2 ಕೋಟಿ ಪ್ರಯಾಣಿಕರನ್ನು ನಿರ್ವಹಿಸಿದೆ’ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ಸಚಿವಾಲಯದ ಟ್ವೀಟ್‌ಗೆ ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೂರು ಚಿತ್ರಗಳ ಪೈಕಿ ಒಂದು ಚಿತ್ರವು ಚೆನ್ನೈ ವಿಮಾನ ನಿಲ್ದಾಣದ್ದಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಲಾಜಿಕಲ್‌ ಫ್ಯಾಕ್ಟ್‌ ಚೆಕ್ ತಂಡವು ರಿವರ್ಸ್ ಇಮೇಜ್ ಮೂಲಕ ಪರಿಶೀಲಿಸಿದಾಗ, ಸಚಿವಾಲಯ ಪ್ರಕಟಿಸಿದ ಒಂದು ಚಿತ್ರವು ಬ್ಯಾಂಕಾಕ್‌ವಿಮಾನ ನಿಲ್ದಾಣದ್ದು ಎಂಬುದು ದೃಢಪಟ್ಟಿದೆ. ಹಲವಾರು ಬಳಕೆದಾರರು ಈ ಬಗ್ಗೆ ಪ್ರತಿಕ್ರಿಯಿಸಿದ್ದರಿಂದ, ಸಚಿವಾಲಯವು ಚೆನ್ನೈಗೆ ಸೇರಿದ ಎರಡು ಚಿತ್ರಗಳನ್ನು ಉಳಿಸಿಕೊಂಡು ಬ್ಯಾಂಕಾಕ್‌ ವಿಮಾನ ನಿಲ್ದಾಣದ ಚಿತ್ರವನ್ನು ತೆಗೆದುಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT