ADVERTISEMENT

Fact check: ದೆಹಲಿ ಸರ್ಕಾರ ಖಾಸಗಿ ಶಾಲೆಯನ್ನು ಸರ್ಕಾರಿ ಶಾಲೆಯೆಂದು ಹೇಳ್ತಿದೆಯೇ?

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2022, 19:31 IST
Last Updated 21 ಆಗಸ್ಟ್ 2022, 19:31 IST
   

‘ದೆಹಲಿಯ ಎಎಪಿ ಸರ್ಕಾರವು ಖಾಸಗಿ ಶಾಲೆಯ ಚಿತ್ರವನ್ನು, ಸರ್ಕಾರಿ ಶಾಲೆಯದ್ದೆಂದು ಹೇಳಿಕೊಳ್ಳುತ್ತಿದೆ. ದೆಹಲಿಯ ಮದರ್ ಮೇರಿಸ್ ಖಾಸಗಿ ಶಾಲೆಯ ಚಿತ್ರವನ್ನು ನ್ಯೂಯಾರ್ಕ್‌ ಟೈಮ್ಸ್‌ ಮತ್ತು ಖಲೀಜ್ ಟೈಮ್ಸ್‌ನ ಲೇಖನದಲ್ಲಿ ಬಳಸಲಾಗಿದೆ. ಅರವಿಂದ ಕೇಜ್ರಿವಾಲ್‌ ಮತ್ತು ಮನೀಷ್‌ ಸಿಸೋಡಿಯಾ ಇಂತಹ ಸುಳ್ಳನ್ನು ದೇಶ ಮತ್ತು ವಿದೇಶದಲ್ಲೂ ಬಿಕರಿಗಿಟ್ಟಿದ್ದಾರೆ’ ಎಂದು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಟ್ವೀಟ್ ಮಾಡಿದ್ದಾರೆ. ಜತೆಗೆ, ದೆಹಲಿಯ ಮಯೂರ್ ವಿಹಾರ್‌ನಲ್ಲಿರುವ ಮದರ್‌ ಮೇರಿಸ್‌ ಶಾಲೆಯ ವಿದ್ಯಾರ್ಥಿನಿಯರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಬಿಜೆಪಿಯ ಹಲವು ನಾಯಕರು ಇದನ್ನು ಮರುಟ್ವೀಟ್‌ ಮಾಡಿದ್ದಾರೆ ಮತ್ತು ಎಎಪಿ ಸರ್ಕಾರವನ್ನು ಟೀಕಿಸಿದ್ದಾರೆ.

ಇದು ಸುಳ್ಳು ಸುದ್ದಿ ಎಂದು ಆಲ್ಟ್‌ ನ್ಯೂಸ್‌ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ಮದರ್ ಮೇರಿಸ್ ಶಾಲೆಯು ಬಾಲಕಿಯರ ಶಾಲೆ. ಆದರೆ ನ್ಯೂಯಾರ್ಕ್‌ ಟೈಮ್ಸ್‌ ಮತ್ತು ಖಲೀಜ್‌ ಟೈಮ್ಸ್‌ನಲ್ಲಿ ಪ್ರಕಟವಾಗಿರುವ ಚಿತ್ರದಲ್ಲಿ ವಿದ್ಯಾರ್ಥಿನಿಯರ ಜತೆ ವಿದ್ಯಾರ್ಥಿಗಳೂ ಇದ್ದಾರೆ. ಅಲ್ಲದೆ, ಮದರ್ ಮೇರಿಸ್ ಶಾಲೆಯ ವಿದ್ಯಾರ್ಥಿನಿಯರ ಸಮವಸ್ತ್ರದ ಕಾಲರ್‌ ಕಡು ನೇರಳೆ ಬಣ್ಣದ್ದು. ಆದರೆ, ಪತ್ರಿಕೆಗಳಲ್ಲಿ ಪ್ರಕಟವಾದ ಚಿತ್ರದಲ್ಲಿ ವಿದ್ಯಾರ್ಥಿನಿಯರು ಧರಿಸಿರುವ ಸಮವಸ್ತ್ರದ ಕಾಲರ್ ತಿಳಿ ನೇರಳೆ ಬಣ್ಣದ್ದು. ಬಿಜೆಪಿ ನಾಯಕರು ಬೇರೆ ಶಾಲೆಯ ಚಿತ್ರಗಳನ್ನು ಬಳಸಿಕೊಂಡು, ಸುಳ್ಳು ಮಾಹಿತಿ ಹಂಚಿಕೊಂಡಿದ್ದಾರೆ’ ಎಂದು ಆಲ್ಟ್‌ ನ್ಯೂಸ್‌ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT