ADVERTISEMENT

Fact Check: ಕಾಂಗ್ರೆಸ್ ಮಹಾಧಿವೇಶನಕ್ಕೆ ಬಂದವರಿಗೆ ತೊಡಿಸಿದ್ದು ಚಿನ್ನದ ಹಾರವೇ?

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 14:28 IST
Last Updated 3 ಮಾರ್ಚ್ 2023, 14:28 IST
   

ಛತ್ತೀಸಗಡದ ರಾಯಪುರದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಮಹಾಧಿವೇಶದನಲ್ಲಿ ಪಾಲ್ಗೊಂಡಿದ್ದ ಪಕ್ಷದ ಮುಖಂಡರಿಗೆ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರು ದುಬಾರಿ ಉಡುಗೊರೆ ನೀಡಿ ಸ್ವಾಗತ ಮಾಡಿದರು ಎಂಬ ಚರ್ಚೆ ಶುರುವಾಗಿದೆ. ಬಘೆಲ್ ಅವರು ಮುಖಂಡರಿಗೆ ‘ಚಿನ್ನದ ಹಾರ’ ತೊಡಿಸುತ್ತಿದ್ದಾರೆ ಎಂದು ಹೇಳಲಾಗುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ರಾಜ್ಯದಲ್ಲಿ ಆಲೂಗಡ್ಡೆಗಿಂತ ಚಿನ್ನ ಅಗ್ಗವಾಗಿದೆಯೇ’ ಎಂದು ಜಾಲತಾಣ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ. ಬಘೆಲ್ ಅವರು ಚಿನ್ನದ ಸರ ಖರೀದಿಸಲು ಮಾಡಿರುವ ವೆಚ್ಚದ ವಿವರ ನೀಡುವಂತೆ ಆಗ್ರಹಿಸಿದ್ದಾರೆ. ಆದರೆ, ಈ ಸುದ್ದಿ ಸುಳ್ಳು.

ಬಘೆಲ್ ಅವರು ಕಾಂಗ್ರೆಸ್ ಮುಖಂಡರನ್ನು ಸ್ವಾಗತಿಸುವಾಗ ತೊಡಿಸಿದ ಹಾರವು ಚಿನ್ನದ ಬಣ್ಣದಲ್ಲಿ ಕಾಣುವುದರಿಂದ ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ‘ದಿ ಲಾಜಿಕಲ್ ಇಂಡಿಯನ್’ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ಮುಖಂಡರಿಗೆ ತೊಡಿಸಿದ್ದು ‘ಬಿರನ್’ ಎಂಬ ಸರ. ಇದನ್ನು ಹುಲ್ಲು ಹಾಗೂ ಖರ್ಸಾಲಿ ಎಂಬ ಮರದ ಭಾಗವನ್ನು ಬಳಸಿ ತಯಾರಿಸಲಾಗುತ್ತದೆ. ಛತ್ತೀಸಗಢ ಹಾಗೂ ಮಧ್ಯಪ್ರದೇಶದಲ್ಲಿ ವಾಸವಾಗಿರುವ ಬೈಗಾ ಬುಡಕಟ್ಟು ಸಮುದಾಯದವರು ಇದನ್ನು ತಯಾರಿಸಿದ್ದಾರೆ. ಬಿರನ್ ಸರವು ಸಮುದಾಯದ ಸಂಸ್ಕೃತಿಯ ಪ್ರತೀಕ ಎನ್ನಲಾಗುತ್ತಿದೆ. ನೈಸರ್ಗಿಕ ವಸ್ತುಗಳನ್ನು ಬಳಸಿ ತಯಾರಿಸಿದ ಹಾರವನ್ನು ಚಿನ್ನದ ಸರ ಎಂಬುದಾಗಿ ಸುಳ್ಳು ಹೇಳಲಾಗುತ್ತಿದೆ ಎಂದು ಸ್ವತಃ ಬಘೆಲ್ ಅವರೇ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT