ADVERTISEMENT

Fact Check | ಹಿಂದೂ ಯುವತಿಯ ಮೇಲೆ ಮುಸ್ಲಿಂ ವ್ಯಕ್ತಿ ಹಲ್ಲೆ ನಡೆಸಿದ್ದಾನೆಯೇ ?

ಪ್ರಜಾವಾಣಿ ವಿಶೇಷ
Published 21 ಫೆಬ್ರುವರಿ 2023, 22:30 IST
Last Updated 21 ಫೆಬ್ರುವರಿ 2023, 22:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವ್ಯಕ್ತಿಯೊಬ್ಬ, ಯುವತಿಯೊಬ್ಬರ ಜುಟ್ಟು ಹಿಡಿದು ಎಳೆದೊಯ್ಯುತ್ತಿರುವ ದೃಶ್ಯಗಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಯುವತಿಯ ಬಟ್ಟೆ ರಕ್ತಮಯವಾಗಿರುವ ಮತ್ತು ಆ ವ್ಯಕ್ತಿ ಕೈಯಲ್ಲಿ ಉದ್ದ ಚೂರಿ ಹಿಡಿದಿರುವ ದೃಶ್ಯವೂ ಆ ವಿಡಿಯೊದಲ್ಲಿ ಇದೆ. ‘ಹಿಂದೂ ಯುವತಿಯ ಮೇಲೆ ಮುಸ್ಲಿಂ ವ್ಯಕ್ತಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಮದುವೆಗೆ ಒಪ್ಪಿಲ್ಲವೆಂದು ಹಿಂದೂ ಯುವತಿಯ ಮೇಲೆ ದಾಳಿ ನಡೆಸಲಾಗಿದೆ’ ಎಂಬ ವಿವರವನ್ನು ಈ ವಿಡಿಯೊ ಜತೆಗೆ ಹಂಚಿಕೊಳ್ಳಲಾಗಿದೆ. ‘ಈ ಕ್ರೂರಿ ರಸ್ತೆಯಲ್ಲೇ ಯುವತಿಯನ್ನು ಎಳೆದೊಯ್ಯುತ್ತಿದ್ದಾನೆ. ಜನರು ಸತ್ತವರಂತೆ ಸುಮ್ಮನೆ ನಿಂತಿದ್ದಾರೆ. ಛತ್ತೀಸಗಢ ಪೊಲೀಸರು ನಿದ್ದೆ ಮಾಡುತ್ತಿದ್ದಾರೆಯೇ?’ ಎಂದು ಸೋಹಿನಿ ಸರ್ಕಾರ್‌ ಎಂಬುವವರು ಟ್ವೀಟ್‌ ಮಾಡಿದ್ದಾರೆ. #ಹಿಂದೂಸ್‌ ಅಂಡರ್ ಅಟ್ಯಾಕ್‌ ಎಂಬ ಹ್ಯಾಷ್‌ಟ್ಯಾಗ್‌ ಅನ್ನೂ ಅವರು ಬಳಸಿದ್ದಾರೆ. ಆದರೆ, ಹಿಂದೂ ಯುವತಿ ಮೇಲೆ ದಾಳಿ ನಡೆಸಿದ್ದ ವ್ಯಕ್ತಿ ಮುಸ್ಲಿಂ ಎಂಬುದು ಸುಳ್ಳು ಸುದ್ದಿ.

‘ಇದು ತಿರುಚಲಾದ ಸುದ್ದಿ. ಛತ್ತೀಸಗಢದ ರಾಯಪುರದಲ್ಲಿ ಫೆಬ್ರುವರಿ 19ರಂದು ಈ ಘಟನೆ ನಡೆದಿದೆ. ಹಲ್ಲೆಗೆ ಒಳಗಾದ ಯುವತಿ ಮತ್ತು ಹಲ್ಲೆ ನಡೆಸಿದ ವ್ಯಕ್ತಿ ಇಬ್ಬರೂ ಹಿಂದೂಗಳು. ಆರೋಪಿ ಓಂಕಾರ್‌ ತಿವಾರಿಯ ಅಂಗಡಿಯಲ್ಲಿ ಯುವತಿ ಕೆಲಸ ಮಾಡುತ್ತಿದ್ದರು. ಹಣದ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದು, ಯುವತಿ ಕೆಲ ದಿನಗಳ ಹಿಂದೆ ಕೆಲಸ ಬಿಟ್ಟಿದ್ದರು. ಫೆಬ್ರುವರಿ 19ರಂದು ಯುವತಿಯ ಮನೆಗೆ ನುಗ್ಗಿದ್ದ ಓಂಕಾರ್, ಆಕೆಯ ಮೇಲೆ ಹಲ್ಲೆ ನಡೆಸಿದ್ದ. ಯುವತಿ ಮದುವೆ ಪ್ರಸ್ತಾವವನ್ನು ತಿರಸ್ಕರಿಸಿದ್ದು ಸಹ ಹಲ್ಲೆಗೆ ಒಂದು ಕಾರಣ ಎಂದು ಎನ್‌ಡಿ ಟಿ.ವಿ., ಟೈಮ್ಸ್‌ ಆಫ್‌ ಇಂಡಿಯಾ, ಇಂಡಿಯಾ ಟುಡೇ ವರದಿ ಮಾಡಿವೆ. ರಾಯಪುರ ಪೊಲೀಸರು ಸಹ ಇದನ್ನೇ ದೃಢಪಡಿಸಿದ್ದಾರೆ’ ಎಂದು ದಿ ಲಾಜಿಕಲ್‌ ಇಂಡಿಯನ್ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.