ADVERTISEMENT

Fact Check: ದಿನಕ್ಕೊಂದು ‘ಲವ್‌ ಜಿಹಾದ್’ ಸುದ್ದಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 16:17 IST
Last Updated 25 ನವೆಂಬರ್ 2022, 16:17 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಶ್ರದ್ಧಾ ವಾಲಕರ್ ಹತ್ಯೆಯ ಬಳಿಕ ‘ಲವ್ ಜಿಹಾದ್‌’ಗೆ ಸಂಬಂಧಿಸಿದವು ಎನ್ನಲಾದ ಹಲವು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮಥುರಾ ಸಮೀಪದ ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ, ಸೂಟ್‌ಕೇಸ್‌ನಲ್ಲಿ ಇರಿಸಿದ್ದ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಇತ್ತೀಚೆಗೆ ಪತ್ತೆಯಾಗಿತ್ತು. ಘಟನೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಹಂಚಿಕೊಂಡಿದ್ದಾರೆ. ‘ಶವವಾಗಿ ಸಿಕ್ಕಿರುವ ಮತ್ತೊಬ್ಬ ಮಹಿಳೆ ಲವ್ ಜಿಹಾದ್‌ನ ಸಂತ್ರಸ್ತೆ. ಹಿಂದೂಗಳೇ ನಿದ್ದೆಯಿಂದ ಏಳಬೇಡಿ. ಹೆಣ್ಣುಮಕ್ಕಳು ಇದೇ ರೀತಿ ಸಾಯುತ್ತಿರಲಿ’ ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಪೋಸ್ಟ್‌ ಮಾಡಿದ್ದಾರೆ.

ಮಥುರಾ ಘಟನೆಗೂ ಲವ್ ಜಿಹಾದ್‌ಗೂ ಯಾವುದೇ ನಂಟಿಲ್ಲ ಎಂದು ‘ಇಂಡಿಯಾಟುಡೇ’ ವರದಿ ಮಾಡಿದೆ. ಮಗಳು ಬೇರೆ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ನಿತೇಶ್ ಯಾದವ್ ಎಂಬುವರು ತನ್ನ ಮಗಳು ಆಯುಷಿ ಯಾದವ್ ಅವರ ಮೇಲೆ ಗುಂಡು ಹಾರಿಸಿದ್ದರು. ಬಳಿಕ ಮಗಳ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿ ಹೆದ್ದಾರಿಯ ಬದಿಯಲ್ಲಿ ಇರಿಸಿ ಮನೆಗೆ ಹೋಗಿದ್ದರು ಎಂದು ಮಥುರಾ ಎಎಸ್‌ಪಿ ಎಂ.ಪಿ ಸಿಂಗ್ ಅವರು ಹೇಳಿದ್ದಾರೆ. ಆಯುಷಿ ಅವರ ತಂದೆ–ತಾಯಿಯನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಕಾರು, ಪಿಸ್ತೂಲ್‌ ವಶಪಡಿಸಿಕೊಳ್ಳಲಾಗಿದೆ. ಛತ್ರಪಾಲ್ ಸಿಂಗ್ ಗುರ್ಜರ್ ಎಂಬುವರನ್ನುಆಯುಷಿ ಮದುವೆಯಾಗಿದ್ದರು. ಆಯುಷಿ, ಅವರ ತಂದೆ ಹಾಗೂ ಪತಿ ಒಂದೇ ಧರ್ಮಕ್ಕೆ ಸೇರಿದವರಾಗಿದ್ದು, ಪ್ರಕರಣದಲ್ಲಿ ಲವ್ ಜಿಹಾದ್‌ನ ಪಾತ್ರವಿಲ್ಲ ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT