ADVERTISEMENT

ಚುನಾವಣೆ ಸೋಲು: ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ವಾಪಸ್‌ ಪಡೆದರೇ ಮಮತಾ?

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 19:31 IST
Last Updated 29 ಜೂನ್ 2021, 19:31 IST
   

‘ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ದ ಸೋತಿದ್ದ ಮಮತಾ ಬ್ಯಾನರ್ಜಿ ಅವರು, ಫಲಿತಾಂಶದ ವಿರುದ್ಧ ಕೋಲ್ಕತ್ತ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಈಗ ಹೈಕೋರ್ಟ್‌ನಲ್ಲಿಯೂ ತಮ್ಮ ಅರ್ಜಿಗೆ ಸೋಲಾಗುತ್ತದೆ ಎಂದು ಮಮತಾ ಬ್ಯಾನರ್ಜಿ ಅವರಿಗೆ ಅರಿವಾಗಿದೆ. ಹೀಗಾಗಿ ಹೆದರಿಕೊಂಡಿರುವ ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ತಮ್ಮ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ’ ಎಂಬ ವಿವರ ಇರುವ ಪೋಸ್ಟ್‌ಗಳು ಫೇಸ್‌ಬುಕ್‌ನಲ್ಲಿ ವೈರಲ್ ಆಗಿವೆ.

‘ಮಮತಾ ಬ್ಯಾನರ್ಜಿ ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ತಮ್ಮ ಅರ್ಜಿಯನ್ನು ವಾಪಸ್ ಪಡೆದಿಲ್ಲ. ಮಮತಾ ಅವರು ಸಲ್ಲಿಸಿದ್ದ ಅರ್ಜಿಯು ಕೋಲ್ಕತ್ತ ಹೈಕೋರ್ಟ್‌ನ ನ್ಯಾಯಮೂರ್ತಿ ಕೌಶಿಕ್ ಚಂದ ಅವರ ಪೀಠದ ಎದುರು ಬಂದಿತ್ತು. ಅರ್ಜಿಯ ಮೊದಲ ವಿಚಾರಣೆ ಜೂನ್ 18ರಂದು ನಡೆಯಬೇಕಿತ್ತು. ಅದೇ ದಿನ ಮಮತಾ ಅವರ ವಕೀಲ ಸಂಜಯ್ ಬಸು ಅವರು ಕೋಲ್ಕತ್ತ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿ ಅವರಿಗೆ ಪತ್ರ ಬರೆದಿದ್ದರು.

‘ನ್ಯಾಯಮೂರ್ತಿ ಕೌಶಿಕ್ ಚಂದ್ರ ಅವರು ಬಿಜೆಪಿಯ ಸಕ್ರಿಯ ಕಾರ್ಯಕರ್ತರು. ಇದು ರಾಜಕೀಯ ಅರ್ಜಿ. ಇದರಲ್ಲಿ ರಾಜಕೀಯ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ನನ್ನ ಕಕ್ಷಿದಾರರ ಅರ್ಜಿಯನ್ನು ಬೇರೆ ಪೀಠಕ್ಕೆ ವರ್ಗಾಯಿಸಿ’ ಎಂದು ಕೋರಿದ್ದರು. ಈ ಬೆಳವಣಿಗೆಯನ್ನೇ, ಮಮತಾ ಅವರು ಅರ್ಜಿ ವಾಪಸ್ ಪಡೆದಿದ್ದಾರೆ ಎಂದು ತಪ್ಪಾಗಿ ಅರ್ಥೈಸಲಾಗಿದೆ. ಆ ಮೂಲಕ ಸುಳ್ಳುಸುದ್ದಿ ಹರಡಲಾಗಿದೆ. ಈ ಸುಳ್ಳುಸುದ್ದಿಯ ಪೋಸ್ಟ್‌ಗಳನ್ನು ‘ತಪ್ಪು ದಾರಿಗೆಳೆವ ಮಾಹಿತಿ’ ಎಂದು ಫೇಸ್‌ಬುಕ್ ಟ್ಯಾಗ್ ಮಾಡಿದೆ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.