ADVERTISEMENT

Fact Check | ದೃಷ್ಟಿ ನಿವಾರಿಸಿದ್ದ ತಮಿಳುನಾಡು ಸಿಎಂ ಸ್ಟಾಲಿನ್ ?

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 19:45 IST
Last Updated 21 ಜೂನ್ 2021, 19:45 IST
   

‘ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಮ್ಮನ್ನು ತಾವು ನಾಸ್ತಿಕರು ಎಂದು ಹೇಳಿಕೊಳ್ಳುತ್ತಾರೆ. ಆದರೆ, ಈಚೆಗೆ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದಾಗ ತಮ್ಮ ಅಧಿಕೃತ ಕಾರಿನ ನಾಲ್ಕೂ ಚಕ್ರಗಳ ಕೆಳಗೆ ನಿಂಬೆಹಣ್ಣು ಇರಿಸಿ, ದೃಷ್ಟಿ ನಿವಾರಿಸಿದ್ದರು. ದುಷ್ಟಶಕ್ತಿಗಳು ತಾಗದೇ ಇರಲಿ ಎಂದು ಹಾಗೆ ಮಾಡಿದ್ದರು’ ಎಂಬ ವಿವರ ಇರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಾರಿನ ಚಕ್ರಗಳ ಮುಂದೆ ನಿಂಬೆಹಣ್ಣು ಇರಿಸಿರುವ ಚಿತ್ರವೂ ವೈರಲ್ ಆಗಿದೆ.

ಇದು ಸುಳ್ಳು ಸುದ್ದಿ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ವೈರಲ್ ಆಗಿರುವ ಚಿತ್ರ ಟೊಯೋಟಾ ಇನೋವಾ ಕ್ರಿಸ್ಟಾ ಕಾರಿನದ್ದು. ಕ್ರಿಸ್ಟಾ ಕಾರು ದೆಹಲಿ ತಮಿಳು ಭವನದ ಹೆಸರಿನಲ್ಲಿ ನೋಂದಣಿ ಆಗಿಲ್ಲ. ಅಲ್ಲದೆ, ಈ ಪ್ರವಾಸದ ವೇಳೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಇನೋವಾ ಕ್ರಿಸ್ಟಾ ಕಾರನ್ನು ಬಳಸಿಲ್ಲ. ಬದಲಿಗೆ ಟೊಯೋಟಾ ಲ್ಯಾಂಡ್‌ಕ್ರೂಸರ್ ಎಸ್‌ಯುವಿಯನ್ನು ಬಳಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೊವನ್ನು ಹಲವು ಸುದ್ದಿವಾಹಿನಿಗಳು ಪ್ರಸಾರ ಮಾಡಿವೆ. ಲ್ಯಾಂಡ್‌ಕ್ರೂಸರ್‌ನ ಚಕ್ರಕ್ಕೆ ನಿಂಬೆಹಣ್ಣು ಇರಿಸಿರುವುದು ಚಿತ್ರದಲ್ಲಾಗಲೀ, ವಿಡಿಯೊದಲ್ಲಾಗಲೀ ದಾಖಲಾಗಿಲ್ಲ. ತಪ್ಪಾದ ಚಿತ್ರವನ್ನು ಬಳಸಿಕೊಂಡು ಸ್ಟಾಲಿನ್ ಅವರ ಬಗ್ಗೆ ತಪ್ಪು ಮಾಹಿತಿ ಹಂಚಿಕೊಳ್ಳಲಾಗಿದೆ’ ಎಂದು ದಿ ಲಾಜಿಕಲ್ ಇಂಡಿಯನ್ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT