ADVERTISEMENT

ಪ್ರಧಾನಿ ಮೋದಿ ಚೀತಾ ಬಿಡುಗಡೆ ಕಾರ್ಯಕ್ರಮಕ್ಕಾಗಿ ಮರಗಳನ್ನು ಕಡಿಯಲಾಗಿತ್ತೇ?

ಪಿಟಿಐ
Published 23 ಸೆಪ್ಟೆಂಬರ್ 2022, 14:50 IST
Last Updated 23 ಸೆಪ್ಟೆಂಬರ್ 2022, 14:50 IST
ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳನ್ನು ಬಿಡುಗಡೆ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ – ಸಂಗ್ರಹ ಚಿತ್ರ
ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳನ್ನು ಬಿಡುಗಡೆ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ – ಸಂಗ್ರಹ ಚಿತ್ರ   

ಭೋಪಾಲ: ನಮೀಬಿಯಾದಿಂದ ತರಲಾದ ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಕಳೆದ ವಾರ ಬಿಡುಗಡೆ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 300 ಜನ ಭಾಗವಹಿಸಿದ್ದು, ಇದಕ್ಕಾಗಿ ಮರಗಳನ್ನು ಕಡಿಯಲಾಗಿತ್ತು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಈ ವರದಿಗಳನ್ನು ಮಧ್ಯ ಪ್ರದೇಶದ ಅರಣ್ಯ ಇಲಾಖೆ ಅಲ್ಲಗಳೆದಿದೆ.

ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಈ ಹಿಂದೆ ಒಂದೇ ಅತಿಥಿಗೃಹ ಇತ್ತು. ಮೋದಿ ಅವರು ಚೀತಾಗಳನ್ನು ಬಿಡುಗಡೆ ಮಾಡುವ ಕಾರ್ಯಕ್ರಮಕ್ಕೆ ಬರುವ ವಿಐಪಿಗಳಿಗಾಗಿ ಟೆಂಟ್‌ಗಳನ್ನು ನಿರ್ಮಿಸಲಾಗಿದ್ದು, ಇದಕ್ಕಾಗಿ ಹಲವು ಮರಗಳನ್ನು ಕಡಿಯಲಾಗಿದೆ ಎಂದು ವರದಿಗಳಲ್ಲಿ ಉಲ್ಲೇಖವಾಗಿತ್ತು.

ಹೆಲಿಪ್ಯಾಡ್‌ಗಳನ್ನು ನಿರ್ಮಾಣ ಮಾಡುವುದಕ್ಕಾಗಿಯೂ ಮರಗಳನ್ನು ಕಡಿಯಲಾಗಿದೆ ಎಂದು ಆರೋಪಿಸಲಾಗಿತ್ತು.

‘ಹೆಲಿಪ್ಯಾಡ್‌ಗಳ ನಿರ್ಮಾಣಕ್ಕಾಗಿ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಮರಗಳನ್ನು ಕಡಿದಿಲ್ಲ. ಅದಕ್ಕಾಗಿ ಆಯ್ಕೆ ಮಾಡಿದ್ದ ನಿವೇಶನದಲ್ಲಿ ಮರಗಳು ಇರಲಿಲ್ಲ. ಹೀಗಾಗಿ ಮರಗಳನ್ನು ಕಡಿಯಲಾಗಿದೆ ಎಂಬ ವರದಿ ಸಂಪೂರ್ಣ ಸುಳ್ಳು’ ಎಂದು ಅರಣ್ಯ ಇಲಾಖೆ ಹೇಳಿದೆ.

‘ಕಾರ್ಯಕ್ರಮದಲ್ಲಿ 300 ಅತಿಥಿಗಳು ಭಾಗವಹಿಸಿಲ್ಲ ಮತ್ತು ಅಷ್ಟು ಮಂದಿಗೆ ಟೆಂಟ್‌ಗಳನ್ನು ನಿರ್ಮಿಸಲಾಗಿಲ್ಲ. ಸಸಾಯ್‌ಪುರ ರೆಸಾರ್ಟ್‌ನಲ್ಲಿ ಅತಿಥಿಗಳಿಗೆ ಹಾಗೂ ಅಧಿಕಾರಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿತ್ತು. ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಟೆಂಟ್‌ಗಳನ್ನು ನಿರ್ಮಿಸಿರುವ ವರದಿ ಸುಳ್ಳು’ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಧಾನಿ ಮೋದಿ ಅವರು 8 ಚೀತಾಗಳನ್ನು ಬಿಡುಗಡೆ ಮಾಡಿದ್ದ ಕಾರ್ಯಕ್ರಮದಲ್ಲಿ 300 ಅತಿಥಿಗಳು ಭಾಗವಹಿಸಿದ್ದರು ಮತ್ತು ಅದಕ್ಕಾಗಿ ಮರಗಳನ್ನು ಕಡಿಯಲಾಗಿತ್ತು ಎಂಬ ವರದಿಗಳು ಸುಳ್ಳು. ಸಸಾಯ್‌ಪುರ ‘ಎಫ್‌ಆರ್‌ಎಚ್ ಮತ್ತು ಟೂರಿಸಂ ಜಂಗಲ್ ಲಾಡ್ಜ್’ನಲ್ಲಿ ಅತಿಥಿಗಳಿಗೆ ವ್ಯವಸ್ಥೆ ಮಾಡಲಾಗಿತ್ತು ಎಂದು ‘ಪಿಐಬಿ ಫ್ಯಾಕ್ಟ್‌ಚೆಕ್’ ಟ್ವೀಟ್ ಮಾಡಿದೆ.

ಒಟ್ಟು 8 ಚೀತಾಗಳನ್ನು (ಐದು ಹೆಣ್ಣು ಮತ್ತು ಮೂರು ಗಂಡು) ನಮೀಬಿಯಾದಿಂದ ಗ್ವಾಲಿಯರ್‌ಗೆ ಬೋಯಿಂಗ್ ವಿಮಾನದಲ್ಲಿ ಕಳೆದ ವಾರ ತರಲಾಗಿತ್ತು. ತಮ್ಮ 72ನೇ ಹುಟ್ಟುಹಬ್ಬದ ದಿನ ಚೀತಾಗಳನ್ನು ಮೋದಿ ಅವರು ಉದ್ಯಾನದಲ್ಲಿ ಬಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.