ADVERTISEMENT

FACT CHECK | ರೈಲಿನಲ್ಲಿ ಮುಸ್ಲಿಮರಿಂದ ಯೋಧನ ಮೇಲೆ ಹಲ್ಲೆ ನಡೆಯಿತೇ?

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 1:21 IST
Last Updated 29 ನವೆಂಬರ್ 2022, 1:21 IST
   

ಸೇನೆಯ ನಿವೃತ್ತ ಯೋಧರೊಬ್ಬರ ಮುಖದ ಮೇಲೆ ರಕ್ತದ ಕಲೆ ಹಾಗೂ ಗಾಯದ ಗುರುತು ಕಾಣಿಸುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರೈಲಿನಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಮುಸ್ಲಿಂ ಸಮುದಾಯದ ಕೆಲವರು ಯೋಧ ವಿಲಾಸ್ ನಾಯಕ್ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ರೈಲಿನಲ್ಲಿ ಪ್ರಾರ್ಥನೆ ಮಾಡುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಸ್ವರ್ಣ ಜಯಂತಿ ರೈಲಿನಲ್ಲಿ ನಡೆದ ಈ ಘಟನೆಯ ವಿಡಿಯೊವನ್ನು ಹಲವರು ಹಂಚಿಕೊಂಡಿದ್ದಾರೆ. ‘ಜಿಹಾದಿಗಳು ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಸುದರ್ಶನ್ ವಾಹಿನಿಯ ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ್ದಾರೆ. ಆದರೆ ಇದರಲ್ಲಿ ಸತ್ಯಾಂಶವಿಲ್ಲ.

ಯೋಧನ ಮೇಲೆ ಮುಸ್ಲಿಮರು ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು ಎಂದು ಲಾಜಿಕಲ್ ಇಂಡಿಯನ್ ವೆಬ್‌ಸೈಟ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ಗಾಯಾಳು ವ್ಯಕ್ತಿಯು ವಿಡಿಯೊದಲ್ಲಿ ಮಾತನಾಡಿರುವ ಪ್ರಕಾರ, ಹಲ್ಲೆ ನಡೆಸಿದ್ದು ರೈಲಿನ ಅಡುಗೆ ಕೆಲಸಗಾರರೇ ಹೊರತು ಮುಸ್ಲಿಮರಲ್ಲ. ‘ಫಸ್ಟ್‌ಪೋಸ್ಟ್‌’ನಲ್ಲಿ ನ.22ರಂದು ಪ್ರಕಟವಾದ ವರದಿಯಲ್ಲಿ ಈ ಅಂಶವಿದೆ. ಮುಸ್ಲಿಮರು ಬೋಗಿಯಲ್ಲಿ ಆಗಾಗ್ಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ನಾಯಕ್ ಅವರಿಗೆ ಶೌಚಾಲಯಕ್ಕೆ ಹೋಗಲು ದಾರಿ ಸಿಗಲಿಲ್ಲ. ಇದನ್ನು ಪ್ರತಿಭಟಿಸುವ ಸಲುವಾಗಿ ನಾಯಕ್ ಸಹ ಅದೇ ಜಾಗದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಅಡುಗೆ ಕೆಲಸಗಾರರು ಹೇಳಿದರು. ಆದರೆ, ಅವರು ಒಪ್ಪದ್ದರಿಂದ ವಾಗ್ವಾದ ನಡೆದು, ಅದು ಘರ್ಷಣೆಗೆ ತಿರುಗಿತು ಎಂದು ವರದಿ ಉಲ್ಲೇಖಿಸಿದೆ. ‘ನಾಯಕ್ ನೀಡಿರುವ ದೂರಿನಲ್ಲಿ ಇಬ್ಬರು ಅಡುಗೆ ಕೆಲಸಗಾರರ ಮೇಲೆ ಹಲ್ಲೆ ಆರೋಪ ಮಾಡಿದ್ದಾರೆ. ಈ ಘರ್ಷಣೆಯಲ್ಲಿ ಮುಸ್ಲಿಮರು ಪಾಲ್ಗೊಂಡಿಲ್ಲ’ ಎಂದು ಜಿಆರ್‌ಪಿ ಬೇತುಲ್ ಪೊಲೀಸ್ ಠಾಣೆಯ ಉಸ್ತುವಾರಿ ಪೊಲೀಸ್ ಅಧಿಕಾರಿ ನರೋತ್ತಮ ಠಾಕೂರ್ ಸ್ಪಷ್ಟಪಡಿಸಿದ್ದಾರೆ. ಅಡುಗೆ ಕೆಲಸದವರಿಗೂ ಗಾಯಗಳಾಗಿವೆ ಎಂದು ಅಡುಗೆ ಕೆಲಸ ವಿಭಾಗದ ಮ್ಯಾನೇಜರ್ ಹರ್ವೇಶ್ ಶ್ರೀವಾಸ್ತವ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT