ADVERTISEMENT

Fact Check: ದೆಹಲಿ ಸಿಎಂ ಕೇಜ್ರಿವಾಲ್ ಅವರನ್ನು ಡಿಸಿಎಂ ಸಿಸೋಡಿಯಾ ಟೀಕಿಸಿದರೇ?

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 18:30 IST
Last Updated 28 ಜೂನ್ 2021, 18:30 IST
   

‘ಸರ್ಕಾರವು ಕೋವಿಡ್ ಲಸಿಕೆ ನೀಡುತ್ತಿಲ್ಲ. ಲಸಿಕೆ ನೀಡದೇ ಇದ್ದರೂ ಎಲ್ಲಾ ದಿನಪತ್ರಿಕೆಗಳ ಪೂರ್ಣಪುಟ ಜಾಹೀರಾತು ನೀಡುತ್ತಿದೆ. ಜಾಹೀರಾತಿನ ಹಣವನ್ನು ಲಸಿಕೆಗೆ ವಿನಿಯೋಗಿಸಿದ್ದರೆ ಕೋಟ್ಯಂತರ ಜನರಿಗೆ ಲಸಿಕೆ ನೀಡಬಹುದಿತ್ತು. ಆದರೆ ಸರ್ಕಾರ ಜಾಹೀರಾತಿಗೆ ಹಣ ವಿನಿಯೋಗಿಸುತ್ತಿದೆ’ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಟೀಕಿಸುತ್ತಿರುವ ವಿಡಿಯೊ ವೈರಲ್ ಆಗಿದೆ. ವಿಡಿಯೊ ಪಕ್ಕದಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಚಿತ್ರ ಇರುವ ದೆಹಲಿ ಸರ್ಕಾರದ ಜಾಹೀರಾತಿನ ಚಿತ್ರ ಹಾಕಲಾಗಿದೆ. ಕೇಜ್ರಿವಾಲ್ ಅವರನ್ನು ಅವರ ಉಪಮುಖ್ಯಮಂತ್ರಿಯೇ ಟೀಕಿಸುತ್ತಿದ್ದಾರೆ ಎಂದು ಹಲವರು ಲೇವಡಿ ಮಾಡಿದ್ದಾರೆ.

ಇದು ತಿರುಚಿದ ಮಾಹಿತಿ ಎಂದು ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ಸಿಸೋಡಿಯಾ ಅವರು ಜೂನ್ 21ರಂದು ಪತ್ರಿಕಾಗೋಷ್ಠಿ ನಡೆಸಿದ್ದರು. ಅದರಲ್ಲಿ ಕೇಂದ್ರ ಸರ್ಕಾರ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳ ಸರ್ಕಾರಗಳ ಲಸಿಕೆ ಜಾಹೀರಾತನ್ನು ಟೀಕಿಸಿದ್ದರು. ಆ ವಿಡಿಯೊವನ್ನು ತಿರುಚಿ, ಸರ್ಕಾರ ಜಾಹೀರಾತು ನೀಡುತ್ತಿದೆ ಎಂಬುದನ್ನಷ್ಟೇ ಉಳಿಸಿಕೊಳ್ಳಲಾಗಿದೆ. ಜತೆಗೆ ಕೇಜ್ರಿವಾಲ್ ಅವರ ಜಾಹೀರಾತಿನ ಚಿತ್ರ ಬಳಸಿ ಮಾಹಿತಿಯನ್ನು ತಿರುಚಲಾಗಿದೆ. ಐದು ನಿಮಿಷಗಳ ವಿಡಿಯೊವನ್ನು ಎಡಿಟ್ ಮಾಡಿ, ಕೇವಲ 18 ಸೆಕೆಂಡ್‌ಗಳ ವಿಡಿಯೊ ಉಳಿಸಿಕೊಳ್ಳಲಾಗಿದೆ. ಈ ಸುಳ್ಳು ಸುದ್ದಿಯನ್ನು ಮೊದಲು ಪೋಸ್ಟ್ ಮಾಡಿರುವ ‘ಪೊಲಿಟಿಕಲ್ ಕೀಡಾ’ ಹ್ಯಾಂಡ್ಲರ್‌ನಲ್ಲಿ ಈ ಹಿಂದೆಯೂ ಹಲವು ಸುಳ್ಳುಸುದ್ದಿಗಳನ್ನು ಪೋಸ್ಟ್ ಮಾಡಲಾಗಿತ್ತು’ ಎಂದು ಆಲ್ಟ್‌ನ್ಯೂಸ್ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT