ADVERTISEMENT

Fact Check: ಗುಜರಾತಿನ ಜನರಿಗೆ ಅರವಿಂದ ಕೇಜ್ರಿವಾಲ್‌ ಬೆದರಿಕೆ ಹಾಕಿದ್ದು ನಿಜವೇ?

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 2:51 IST
Last Updated 14 ಸೆಪ್ಟೆಂಬರ್ 2022, 2:51 IST
ವೈರಲ್ ಆಗಿರುವ ವಿಡಿಯೊದ ಸ್ಕ್ರೀನ್‌ಶಾಟ್‌
ವೈರಲ್ ಆಗಿರುವ ವಿಡಿಯೊದ ಸ್ಕ್ರೀನ್‌ಶಾಟ್‌   

‘ಗುಜರಾತಿನ ಜನರೇ ಕೇಳಿಸಿಕೊಳ್ಳಿ. ನನ್ನ ವಿರುದ್ಧ ಪ್ರತಿಭಟನೆ ನಡೆಸಿದರೆ, ನಿಮ್ಮನ್ನು ಮುಗಿಸಿಬಿಡುತ್ತೇನೆ. ನೀವು ಏನು ಮಾಡುತ್ತೀರೋ ಮಾಡಿ, ನೋಡೇಬಿಡೋಣ’ ಎಂದು ಅರವಿಂದ ಕೇಜ್ರಿವಾಲ್‌ ಅವರು ಹೇಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೇಜ್ರಿವಾಲ್‌ ಅವರು ಗುಜರಾತಿನ ಜನರಿಗೆ ಬೆದರಿಕೆ ಹಾಕುತ್ತಿದ್ದಾರೆ. ಎಎಪಿ ಗುಜರಾತ್‌ ಚುನಾವಣೆಯಲ್ಲಿ ಗೆಲ್ಲುವ ಮೊದಲೇ ಈ ರೀತಿ ಬೆದರಿಕೆ ಹಾಕುತ್ತಿದೆ. ಇನ್ನು ಗೆದ್ದಮೇಲೆ ಹೇಗೆ ವರ್ತಿಸಬಹುದೋ? ಇಂತಹವರನ್ನು ಗುಜರಾತಿನ ಜನರು ಸ್ವೀಕರಿಸುತ್ತಾರೋ ಇಲ್ಲವೋ ನೋಡೋಣ ಎಂದು ಹಲವರು ಟ್ವೀಟ್‌ ಮಾಡಿದ್ದಾರೆ. ಗುಜರಾತ್‌ ಬಿಜೆಪಿಯ ಹಲವು ನಾಯಕರೂ ಈ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಇದು ಸುಳ್ಳು ಸುದ್ದಿ’ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ಇದು ಹಳೆಯ ವಿಡಿಯೊ. 2016ರಲ್ಲಿ ಸೂರತ್‌ನಲ್ಲಿ ನಡೆದಿದ್ದ ಎಎಪಿ ಕಾರ್ಯಕ್ರಮ ಒಂದರಲ್ಲಿ ಕೇಜ್ರಿವಾಲ್ ಮಾತನಾಡಿದ್ದರು. ಆಗ ಅವರು, ‘ಅಮಿತ್ ಶಾ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅವರ ವಿರುದ್ಧ ಪ್ರತಿಭಟನೆ ನಡೆಸುವವರಿಗೆ ಬೆದರಿಕೆ ಹಾಕುತ್ತಾರೆ.ಗುಜರಾತಿನ ಜನರೇ ಕೇಳಿಸಿಕೊಳ್ಳಿ. ನನ್ನ ವಿರುದ್ಧ ಪ್ರತಿಭಟನೆ ನಡಸಿದರೆ, ನಿಮ್ಮನ್ನು ಮುಗಿಸಿಬಿಡುತ್ತೇನೆ. ನೀವು ಏನು ಮಾಡುತ್ತೀರೋ ಮಾಡಿ, ನೋಡೇಬಿಡೋಣ ಎನ್ನುತ್ತಾರೆ’ ಎಂದು ಕೇಜ್ರಿವಾಲ್‌ ಹೇಳಿದ್ದರು. ಈ ವಿಡಿಯೊವನ್ನು ತುಂಡರಿಸಿ, ‘ಗುಜರಾತಿನ ಜನರೇ ಕೇಳಿಸಿಕೊಳ್ಳಿ. ನನ್ನ ವಿರುದ್ಧ ಪ್ರತಿಭಟನೆ ನಡಸಿದರೆ, ನಿಮ್ಮನ್ನು ಮುಗಿಸಿಬಿಡುತ್ತೇನೆ. ನೀವು ಏನು ಮಾಡುತ್ತೀರೋ ಮಾಡಿ, ನೋಡೇಬಿಡೋಣ’ ಎಂಬ ಮಾತುಗಳಷ್ಟೇ ಇರುವ ವಿಡಿಯೊವನ್ನು ಸೃಷ್ಟಿಸಲಾಗಿದೆ. ಇದನ್ನು ಹಂಚಿಕೊಳ್ಳುವ ಮೂಲಕ ತಪ್ಪು ಮಾಹಿತಿ ಹರಡಲಾಗುತ್ತಿದೆ’ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT