ADVERTISEMENT

Fact Check: ಪಂಜಾಬ್‌ನ ಅತ್ಯಾಧುನಿಕ ಸರ್ಕಾರಿ ಶಾಲೆ ಎಎಪಿ ಅಭಿವೃದ್ಧಿ ಪಡಿಸಿದ್ದೆ?

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2022, 19:31 IST
Last Updated 15 ಡಿಸೆಂಬರ್ 2022, 19:31 IST
   

‘ಖಾಸಗಿ ಶಾಲೆಯನ್ನೂ ನಾಚಿಸುವಂತಿರುವ ಸರ್ಕಾರಿ ಶಾಲೆ. ಅಚ್ಚುಕಟ್ಟು ಕೊಠಡಿಗಳು, ಅತ್ಯಾಧುನಿಕ ಪೀಠೋಪಕರಣ, ಪ್ರೊಜೆಕ್ಟರ್, ಹವಾನಿಯಂತ್ರಿತ ವ್ಯವಸ್ಥೆ ಸೇರಿದಂತೆ ಎಲ್ಲ ಸವಲತ್ತುಗಳನ್ನೂ ಈ ಶಾಲೆ ಹೊಂದಿದೆ. ಪಂಜಾಬ್‌ನಲ್ಲಿ ಎಎಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಶಿಕ್ಷಣ ವ್ಯವಸ್ಥೆ ಸುಧಾರಿಸಿದೆ. ದೆಹಲಿಯ ರೀತಿ, ಪಂಜಾಬ್‌ನ ಶಾಲೆಗಳೂ ಹೊಸ ರೂಪ ಪಡೆಯುತ್ತಿವೆ’ ಎಂದು ಎಎಪಿ ಹೇಳಿಕೊಂಡಿದೆ. ಪಂಜಾಬ್‌ನ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬಿಯಾನ್ಸ್, ಎಎಪಿ ಮುಖಂಡ ಅನುರಾಗ್ ದಂಡಾ ಸೇರಿದಂತೆ ಪಕ್ಷದ ಹಲವು ಮುಖಂಡರು ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇದು ತಪ್ಪು ಮಾಹಿತಿ.

ಪಂಜಾಬ್‌ನಲ್ಲಿ ಎಎಪಿ ಸರ್ಕಾರ ರಚನೆಯಾಗಿದ್ದು 2022ರ ಮಾರ್ಚ್‌ನಲ್ಲಿ. ಆದರೆ,2021ರ ಸೆ.2ರಂದೇ ‘ದೈನಿಕ ಜಾಗರಣ್ ಪಂಜಾಬಿ’ ಪತ್ರಿಕೆಯಲ್ಲಿ ಈ ಚಿತ್ರ ಪ್ರಕಟವಾಗಿದೆ ಎಂದು ‘ಲಾಜಿಕಲ್ ಇಂಡಿಯನ್’ ಫ್ಯಾಕ್ಟ್‌ಚೆಕ್ ಜಾಲತಾಣ ವರದಿ ಮಾಡಿದೆ. ಫತೇಗಡ ಸಾಹಿಬ್ ಜಿಲ್ಲೆಯ ಮನೇಲಾ ಎಂಬಲ್ಲಿರುವ ಪ್ರಾಥಮಿಕ ಶಾಲೆಗೆ ಅಲ್ಲಿನ ಶಿಕ್ಷಕ ಜಗತಾರ್ ಸಿಂಗ್ ಅವರು 2015ರಲ್ಲಿ ಹೊಸ ರೂಪ ನೀಡಿದ್ದರು. ಮನೆಮನೆಗೆ ತೆರಳಿ ವಂತಿಗೆ ಸಂಗ್ರಹಿಸಿ, ಶಾಲೆಯನ್ನು ಆಧುನಿಕಗೊಳಿಸಿದ್ದರು ಎಂದು ಪತ್ರಿಕೆ ವರದಿ ಮಾಡಿತ್ತು. ಎಎಪಿ ಸರ್ಕಾರ ರಚನೆಯಾಗುವುದಕ್ಕೂ ಮೊದಲು ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಶಾಲೆ ಹೊಸ ರೂಪ ಪಡೆದಿದೆ ಎಂಬುದು ಸ್ಪಷ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT