ADVERTISEMENT

ಮಿರ್ಚಿ ಬಜಿಗೆ ಮುಂಗಡ ಬುಕ್ಕಿಂಗ್..!

ಆಲಮೇಲದ ಬಜಿ ಶಿವಪ್ಪ ಅಂಗಡಿ ಫುಲ್ ಫೇಮಸ್

ರಮೇಶ ಎಸ್.ಕತ್ತಿ
Published 16 ಮಾರ್ಚ್ 2019, 19:46 IST
Last Updated 16 ಮಾರ್ಚ್ 2019, 19:46 IST
ಗರಂ ಗರಂ ಮಿರ್ಚಿ ಬಜಿ
ಗರಂ ಗರಂ ಮಿರ್ಚಿ ಬಜಿ   

ಆಲಮೇಲ:ಮುಸ್ಸಂಜೆ 6ರಿಂದ ರಾತ್ರಿ 8ರವರೆಗೂ ಎರಡು ತಾಸಿನ ವ್ಯಾಪಾರ. ಇಲ್ಲಿ ಸಿಗೋದು ಮಿರ್ಚಿ ಭಜಿ, ವಡಾಪಾವ್‌ ಅಷ್ಟೇ. ಅದೂ ತಳ್ಳು ಗಾಡಿಯಲ್ಲಿ. ಇದು ಆಲಮೇಲ ಪಟ್ಟಣದ ಲಕ್ಷ್ಮಣ ಗುರುಕಾರ ಅವರ ವೈಶಿಷ್ಟ್ಯತೆ.

ನಿಗದಿತ ಸಮಯದಲ್ಲಿ ತಳ್ಳುಗಾಡಿ ಮುಂದೆ ಜಮಾಯಿಸುವ ಜನಸ್ತೋಮ ಬಜಿ ಮನೆಗೊಯ್ಯಲು ಮುಂಗಡ ಬುಕ್ಕಿಂಗ್‌ ಮಾಡುತ್ತಾರೆ. ಹಲವರು ಪಾಳಿ ಹಚ್ಚಿ ಕಾದು ನಿಂತು ಬಜಿ ಸವಿದು, ಮನೆಗೂ ಕೊಡೊಯ್ಯುವುದು ವಿಶೇಷ. ಮುಂಗಡವಾಗಿ ₹ 50, ₹ 100 ಕೊಟ್ಟು ಇಲ್ಲಿ ಕಾದು ನಿಲ್ಲುತ್ತಾರೆ.

‘ನಮ್ಮಪ್ಪನಿಂದ ಬಜಿ ಮಾಡೋದನ್ನ ಕಲಿತೆ. ಇದೇ ಸ್ಥಳದಲ್ಲಿ ಮಿಠಾಯಿ, ಬೆಂಡು–ಬತ್ತಾಸು, ಬಜಿ ವ್ಯಾಪಾರ ಮಾಡುತ್ತಿದ್ದರು ಅವರು. ಮಿಠಾಯಿ ವ್ಯಾಪಾರ ಅಷ್ಟಾಗಿ ನಡೆಯಲಿಲ್ಲ. ಬೇಕರಿ ಆರಂಭವಾದಂತೆ ಮಿಠಾಯಿ ವಹಿವಾಟು ಸ್ಥಗಿತಗೊಂಡಿತು. ವ್ಯಾಪಾರಕ್ಕೆ ಸಂಕಟ ಕಾಲ ಬಂದಾಗ, ದುಡಿಯಲು ಪುಣೆಗೆ ಹೋದರು.

ADVERTISEMENT

ಅಲ್ಲಿ ತಳ್ಳುಗಾಡಿಯಲ್ಲಿ ಬಜಿ, ವಡಾಪಾವ್ ಮಾಡುವುದನ್ನು ಕಂಡು ಆಲಮೇಲದಲ್ಲೂ ಇದೇ ವಹಿವಾಟು ನಡೆಸಲು ಊರಿಗೆ ಮರಳಿದರು. ತಳ್ಳುಗಾಡಿಯಲ್ಲಿ ಬಜಿ, ವಡಾಪಾವ್ ವ್ಯಾಪಾರ ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಗಿರಾಕಿಗಳಿಗೆ ಕೊರತೆಯಿಲ್ಲ. ಸಂಕಟದಲ್ಲಿ ಕೈ ಹಿಡಿದ ಈ ಬಜಿ ವ್ಯಾಪಾರ ನೆಮ್ಮದಿಯ ಬುದುಕು ನೀಡಿತು. ಬಜಿ ಶಿವಪ್ಪ ಎಂದೇ ತಂದೆ ಪ್ರಸಿದ್ಧಿಯಾದರು’ ಎಂದು ಲಕ್ಷ್ಮಣ ತಿಳಿಸಿದರು.

2008ರಿಂದ ಲಕ್ಷ್ಮಣ ತಂದೆಯ ಕಾಯಕವನ್ನೇ ಮುಂದುವರೆಸಿದ್ದಾರೆ. ಅವರಪ್ಪನ ಕೈರುಚಿಯಂತೆ ಬಜಿ ಮಾಡುತ್ತಿದ್ದಾರೆ ಎನ್ನುತ್ತಾರೆ ಗ್ರಾಹಕ ಶಿವನಗೌಡ ಬಿರಾದಾರ.

‘ಮಿರ್ಚಿ ಬಜಿ, ವಡಾಪಾವ್‌ ಮಾಡೋದ್‌ ಬಿಟ್ರೇ, ಮತ್ತೇನನ್ನೂ ನಾವು ಮಾಡಲ್ಲ. ಇಷ್ಟು ವರ್ಷ ಇವೆರಡೇ ನಮ್ಮ ಕೈ ಹಿಡಿದಿವೆ. ಬದುಕಿಗೆ ಆಸರೆಯಾಗಿವೆ. ಗ್ರಾಹಕರು ಹುಡುಕಿಕೊಂಡು ಬರುವಂತಾಗಲು ನಮ್ಮ ಸ್ವಾದಿಷ್ಟ ರುಚಿಯೇ ಕಾರಣ’ ಎಂದು ಲಕ್ಷ್ಮಣ ಹೇಳಿದರು.

‘ಶುದ್ಧ ಕಡ್ಲೆ ಹಿಟ್ಟು, ಶೇಂಗಾ ಎಣ್ಣೆ ಬಳಸುವೆ. ಯಾವುದೇ ಸಂದರ್ಭದಲ್ಲೂ ಗುಣಮಟ್ಟದಲ್ಲಿ ರಾಜಿಯಿಲ್ಲ. ಉತ್ತಮ ಸೇವೆ, ಗುಣಮಟ್ಟದ ತಿನಿಸು ನೀಡುವುದು ತಂದೆ ಹೇಳಿಕೊಟ್ಟ ಪಾಠ. ನಿತ್ಯವೂ ಎಲ್ಲ ಖರ್ಚು ತೆಗೆದು ₹ 800ರಿಂದ ₹ 1000 ಉಳಿಯಲಿದೆ. ದಶಕದಿಂದ ನಮ್ಮ ಕೈರುಚಿಗೆ ಗ್ರಾಹಕರು ಮನಸೋತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.