ADVERTISEMENT

ಭೂತಾನ್‌ನ ವೆರೈಟಿ ಖಾದ್ಯ

ಡಿ.ಜಿ.ಮಲ್ಲಿಕಾರ್ಜುನ
Published 23 ಜನವರಿ 2020, 7:36 IST
Last Updated 23 ಜನವರಿ 2020, 7:36 IST
ಭೂತಾನ್ ಖಾದ್ಯ
ಭೂತಾನ್ ಖಾದ್ಯ   

ಭೂತಾನ್ ದೇಶದ ಸ್ವಿಟ್ಜರ್‌ಲೆಂಡ್‌ ಎಂದೇ ಕರೆಯುವ ಭೂಮ್‌ಥಾಂಗ್ ಎಂಬ ಊರಿನಲ್ಲಿ ಉಳಿದಿದ್ದೆವು. ಅಲ್ಲಿನ ಚಳಿ ವಾತಾವರಣಕ್ಕೆಂದು ಪೂರಾ ಮರದಲ್ಲೇ ಕಟ್ಟಿದ್ದ ಹೋಟೆಲ್ ಹೋಮ್‌ನಲ್ಲಿ ತಂಗಿದ್ದೆವು. ಆ ಹೋಟೆಲ್ ಒಂದು ಕುಟುಂಬದವರದ್ದಾಗಿದ್ದು, ಅಡುಗೆ ಹಾಗೂ ಅದರ ನಿರ್ವಹಣೆಯನ್ನು ಅವರೇ ಮಾಡುತ್ತಿದ್ದರು.

ಆ ಕುಟುಂಬದ ಯಜಮಾನ, ‘ನಿಮಗೆಲ್ಲಾ ಭೂತಾನ್ ಖಾದ್ಯಗಳನ್ನು ತಯಾರಿಸುತ್ತಿದ್ದೇವೆ’ ಎಂದು ಹೇಳಿದಾಗ ನಮ್ಮ ಜೊತೆಯಲ್ಲಿದ್ದವರು, ಹೇಗಿರುತ್ತೆ? ಏನೇನು? ಚೆನ್ನಾಗಿರುತ್ತಾ? ಎಂದು ಭಯಮಿಶ್ರಿತ ಕುತೂಹಲದಿಂದ ವಿಚಾರಿಸಿದರು. ಆಗ ಆತ, ‘ನೀವು ಭೂತಾನ್‌ಗೆ ಬಂದು ಇಲ್ಲಿನ ಖಾದ್ಯವನ್ನು ಸವಿಯದೇ ಹೋದರೆ ನಿಮ್ಮ ಪ್ರವಾಸ ಅಪೂರ್ಣ’ ಅಂದರು. ಇದು ಸಾರ್ವಕಾಲಿಕವಾದ ಮಾತು.

ಮೋಮೋಸ್, ಜಂಬಲಿ(ಪಾಸ್ತಾ), ಚೀಸ್, ಮೆಣಸಿನಕಾಯಿ ಮತ್ತು ಆಲೂಗಡ್ಡೆ ಬಳಸಿ ತಯಾರಿಸಿದ ಕೆವಾದಶಿ, ಕೆಂಪು ಮೆಣಸಿನಕಾಯಿಯಲ್ಲಿ ತಯಾರಿಸಿದ ಬಟರ್ ಚಿಲ್ಲಿ, ಹಸಿರು ಮೆಣಸಿನಕಾಯಿ ಬಳಸಿ ತಯಾರಿಸಿದ ಮಾಝಮ್ ಅವರ ಅಡುಗೆಗಳು. ಭೂತಾನ್‌ನ ಪ್ರಮುಖ ಆಹಾರ ಅಕ್ಕಿ, ಗೋಧಿ ಮತ್ತು ಜೋಳ. ತರಕಾರಿಗಳನ್ನು ಒಣಗಿಸಿ ಉಪ್ಪು, ಮೆಣಸು ಹಾಕಿ ಸೂಪ್ ಮಾಡಿ ಕುಡಿಯುತ್ತಾರೆ.

ADVERTISEMENT

ಭೂತಾನೀಯರು ನಮ್ಮ ಬೈರ‍್ನೆಲ್ಲು ಅಕ್ಕಿಯಂತ ಕೆಂಪಕ್ಕಿ ಅನ್ನವನ್ನು ಹೆಚ್ಚಾಗಿ ಬಳಸುತ್ತಾರೆ. ಎಮಾದಶಿ(ಎಮಾ ಅಂದರೆ ಮೆಣಸಿನಕಾಯಿ, ದಶಿ ಅಂದರೆ ಚೀಸ್), ಕೆವಾದಶಿ(ಕೆವಾ ಅಂದರೆ ಆಲೂಗಡ್ಡೆ), ಮಶ್ರೂಮ್ ದಶಿ ಅಲ್ಲಿನ ಬಹುಮುಖ್ಯ ತಿನಿಸುಗಳು. ಇಲ್ಲಿ ಮೆಣಸಿನ ಕಾಯಿಗೆ ಸ್ವಲ್ಪ ತರಕಾರಿ ಸೇರಿಸಿ ಖಾದ್ಯ ತಯಾರಿಸುತ್ತಾರೆ. ಖಾರದ ಮೆಣಸಿನಕಾಯಿಯನ್ನು ಬಹುಮುಖ್ಯ ತರಕಾರಿ ಎಂದು ಭಾವಿಸಿದ್ದಾರೆ! ಸೂಜ ಎಂಬ ಬಟರ್ ಟೀ ಕೂಡಾ ಅಲ್ಲಿನ ವಿಶೇಷ ಪಾನೀಯ. ಟೀ ತಯಾರಿಸಲು ಬಿದಿರಿನ ಅಥವಾ ಮರದ ಪರಿಕರವನ್ನು ಬಳಸುತ್ತಾರೆ. ಯಾಕ್ ಚೀಸ್, ಉಪ್ಪು ಹಾಗೂ ಸ್ವಲ್ಪವೇ ಸ್ವಲ್ಪ ಹಾಲು ಬೆರೆಸಿ ತಯಾರಿಸುವ ಈ ಪಾನೀಯಕ್ಕೆ ವಿಶೇಷ ಟೀ ಎಲೆಗಳನ್ನು ಬಳಸುತ್ತಾರೆ.

ಹೋಟೆಲ್‌ನ ಮಾಲೀಕ ಆತ್ಮೀಯವಾಗಿ ಮಾತನಾಡಿ ಅವರ ಅಡುಗೆಯ ಬಗ್ಗೆ ನಮ್ಮ ಅನಿಸಿಕೆ ಕೇಳಿದರು. ಅವರ ಉಪಚಾರಕ್ಕೆ ಮಾರುಹೋದೆವು. ಅವರ ಅಡುಗೆಯೂ ಅಷ್ಟೇ ಸೊಗಸಾಗಿತ್ತು. ಹಾಗಾಗಿ ಅವರ ಅಡುಗೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆವು.

ಭೂತಾನ್ ಸಂಪೂರ್ಣ ಸಾವಯವ ಕೃಷಿ ಪದ್ಧತಿ ಅಳವ ಡಿಸಿಕೊಂಡಿರುವ ದೇಶ. ಅಲ್ಲಿ ರಸ ಗೊಬ್ಬರ ದುಬಾರಿ ಎಂದು ಯಾರೂ ಬಳಸುವುದಿಲ್ಲ ಹಾಗೂ ಅಲ್ಲಿನ ಫಲವತ್ತಾದ ಭೂಮಿಗೆ ಅದರ ಅಗತ್ಯವೂ ಇಲ್ಲ. ಹಾಗಾಗಿ ಅಲ್ಲಿ ಬೆಳೆಯುವ ತರಕಾರಿ, ಹಣ್ಣುಗಳೆಲ್ಲವೂ ಸಾವಯವ. ರೈತರ ಉತ್ಪನ್ನಗಳನ್ನು ರಸ್ತೆ ಬದಿಯಲ್ಲಿಟ್ಟು ಮಾರಾಟ ಮಾಡಲು ಅನುಕೂಲವಾಗುವಂತೆ ಅಲ್ಲಿನ ಸರ್ಕಾರ ದಾರಿಯುದ್ದಕ್ಕೂ ತಂಗುದಾಣಗಳನ್ನು ನಿರ್ಮಿಸಿದೆ. ಮಧ್ಯವರ್ತಿಗಳಿಲ್ಲದೆ ರೈತ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯವಸ್ಥೆ.

ಅಲ್ಲಿ ಮಾರಾಟಕ್ಕಿದ್ದ ಸೇಬು, ಲಿಚಿ, ಪೀಚ್, ಚೆರ‍್ರಿ ಮುಂತಾದ ಹಣ್ಣುಗಳನ್ನು ಸವಿದೆವು. ಬೆಣ್ಣೆ, ಚೀಸ್‌ಗಳನ್ನೂ ಎಲೆಯಲ್ಲಿ ಸುತ್ತಿ ಮಾರಾಟಕ್ಕಿಟ್ಟಿದ್ದರು. ನಮ್ಮಲ್ಲಿ ಶೀಥಲ ಯಂತ್ರದಲ್ಲಿಡುವ ಬೆಣ್ಣೆ, ಚೀಸ್‌ಗಳನ್ನು ಅವರು ಈ ರೀತಿ ಎಲೆಯಲ್ಲಿ ಸುತ್ತಿಟ್ಟಿರುವುದು ಕಂಡು ಅಚ್ಚರಿಯಾಯಿತು. ಅಲ್ಲಿನ ಥಂಡಿ ವಾತಾರಣಕ್ಕೆ ಶೀಥಲ ಯಂತ್ರದ ಅಗತ್ಯವೇ ಅವರಿಗಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.