ADVERTISEMENT

PV Web Exclusive | ಭೂ ತಾಯಿಗಿಂದು ಸೀಮಂತ

ಸುಮಾ ಬಿ.
Published 31 ಅಕ್ಟೋಬರ್ 2020, 5:55 IST
Last Updated 31 ಅಕ್ಟೋಬರ್ 2020, 5:55 IST
ರೈತನು ತನ್ನ ಹೊಲದಲ್ಲಿ ವಿವಿಧ ಬಗೆಯ ಅಡುಗೆಗಳನ್ನು ಇಟ್ಟು ಪೂಜೆಗೆ ಸಿಂಗರಿಸಿರುವುದು (ಪ್ರಜಾವಾಣಿ ಸಂಗ್ರಹ ಚಿತ್ರ)
ರೈತನು ತನ್ನ ಹೊಲದಲ್ಲಿ ವಿವಿಧ ಬಗೆಯ ಅಡುಗೆಗಳನ್ನು ಇಟ್ಟು ಪೂಜೆಗೆ ಸಿಂಗರಿಸಿರುವುದು (ಪ್ರಜಾವಾಣಿ ಸಂಗ್ರಹ ಚಿತ್ರ)   
""
""
""

‘ಹಚ್ಚಂಬ್ಲಿ ಹರಬಿಸೊಪ್ಪು
ಹಿತ್ತಲಾಗಿರೋ ದಾರೀರೇಕಾಯಿ
ಭೂಂಕವ್ವನ ಬಯ್ಕೆಬಾನ
ಎದ್ದೆದ್ ಉಣ್ಣೆ ಭೂಂಕವ್ವೋ
ಹೋಯ್ ಹೋಯ್...’

ಈ ದಿನ (ಅ.31) ಮುಂಜಾನೆ ಮಲೆನಾಡಿನ ಗದ್ದೆ ಬಯಲುಗಳಿಗೆ ಹೋದರೆ ಇಂತಹದ್ದೊಂದು ‘ದಿವ್ಯವಾಣಿ’ ಅನುರಣಿಸುತ್ತದೆ.ಹೀಗೆ ಹೇಳುತ್ತ ಅನ್ನದಾತ ‘ಚರಗ’ ಬೀರುವ ದೃಶ್ಯ ಕಣ್ತುಂಬಿಕೊಳ್ಳಬಹುದು.

ಈ ದಿನ ಎಂದರೆ ‘ಭೂಮಿ ಹುಣ್ಣಿಮೆ’ ದಿನ.ಭೂ ತಾಯಿಯ ಸೀಮಂತದ ದಿನ,ಹಸಿರುಟ್ಟು ಕಂಗೊಳಿಸುವ ಭೂಮಿ ತಾಯಿಗೆ ಗೌರವಿಸುವ ದಿನ.ಬಗೆ ಬಗೆ ಭಕ್ಷ್ಯ ಭೋಜನಗಳನ್ನು ಭೂತಾಯಿಗೆ ಉಣಿಸಿ,ತಾವೂ ಸವಿಯುವ ದಿನ. ‘ಹುಲುಸು ಹೋಗಿ,ಗಟ್ಟಿ ಕಾಳುಗಳಿಂದ ಚೀಲ ತುಂಬಲಿ’ಎಂದು ಅನ್ನದಾತ ಭೂಮಿತಾಯಿಗೆ ಕೋರುವ ದಿನ.

ADVERTISEMENT

ಮಲೆನಾಡು, ಅರೆ ಮಲೆನಾಡು ರೈತ ಕುಟುಂಬಗಳಿಗೆ ಈ ಹಬ್ಬವೆಂದರೆ ಅದೇನೋ ಹಿಗ್ಗು.ಪ್ರಕೃತಿಯೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ರೈತ, ಈ ಹಬ್ಬದ ಆಚರಣೆ ಮೂಲಕ ನಿಸರ್ಗ ಪ್ರೀತಿ ಸಾರುತ್ತಾನೆ.ಬದುಕಿಗೆ ಅನ್ನ ಕೊಡುವ ಭೂತಾಯಿಗೆ ಆಸ್ಥೆಯಿಂದ ನಮಿಸಲು ಒಂದು ದಿನ ಮೀಸಲಿಟ್ಟಿರುವುದು ಹೆಮ್ಮೆಯೇ ಸರಿ.

ಹಿಂಗಾರು ಬಿತ್ತನೆ ಜತೆಯಲ್ಲೇ ಬರುವ ಈ ಹಬ್ಬ ಒಂದೊಂದು ಕಡೆ ಒಂದೊಂದು ನಾಮಾವಳಿಗಳನ್ನು ಅಂಟಿಸಿಕೊಂಡಿದೆ.ಮಲೆನಾಡಿಗರು ಭೂಮಣ್ಣಿ ಹಬ್ಬ,ಭೂಮಿ ಹುಣ್ಣಿಮೆ,ಭೂಮ್ತ್ಯವ್ವನ ಹಬ್ಬ ಎಂದು ಕರೆದರೆ,ಉತ್ತರ ಕರ್ನಾಟಕದ ಮಂದಿಶೀಗೆ ಹಬ್ಬ,ಸೀಗೆ ಹುಣ್ಣಿಮೆ ಎನ್ನುವರು.

ಬಹುಶಃ ಮಲೆನಾಡಿನ ಭಾಗದಲ್ಲಿ ಅತಿ ಹೆಚ್ಚು ಖಾದ್ಯ ತಯಾರಿಸುವ ಹಬ್ಬ ಎಂದರೆ ಭೂಮಿ ಹುಣ್ಣಿಮೆ.ಮುಂಗಾರು ಸಮಯದಲ್ಲಿ ಬಿತ್ತಿರುವ ಬೆಳೆ ಹೊಡೆ ಹಾಯುವ ಸಮಯದಲ್ಲಿ ಭೂ ತಾಯಿಯನ್ನು ತುಂಬು ಗರ್ಭಿಣಿ ಎಂದು ಭಾವಿಸಿ ಆಕೆಯ ಬಯಕೆಯನ್ನು ಈಡೇರಿಸಲು ಬಗೆ ಬಗೆ ಖಾದ್ಯಗಳನ್ನು ತಯಾರಿಸಲಾಗುತ್ತದೆ.

ಚಿನ್ನಿಕಾಯಿ ಕಡುಬು,ಮೊಸರು ಬುತ್ತಿ,ಚಿತ್ರಾನ್ನ,ಕೇಸರಿ ಬಾತ್‌,ಹೆಸರುಕಾಳು ಉಂಡೆ,ಉದ್ದಿನ ವಡೆ, ಕಜ್ಜಾಯ, ಮೀನ್‌ ಸಾರು, ಚಿಕನ್‌, ಪಾಯಸ, ಅಕ್ಕಿ ಹುಗ್ಗಿ, ಕರಿಗಡುಬು, ಕರಿ ಬುತ್ತಿ, ಬಿಳಿ ಬುತ್ತಿ, ರೊಟ್ಟಿ, ಕರ್ಚಿಕಾಯಿ,ಎಳ್ಳಿನ ಹೋಳಿಗೆ,ಶೇಂಗಾ ಹೋಳಿಗೆ,ಅನ್ನ,ಸಾಂಬಾರ್‌,ಪಲ್ಯಗಳು,ಕೋಸಂಬರಿ,ಉಪ್ಪಿನ ಕಾಯಿ,ಹಪ್ಪಳ– ಸಂಡಿಗೆ ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ.

ಸೂರ್ಯ ಉದಯಿಸುವ ಮುನ್ನ ರೈತನೊಬ್ಬ ತನ್ನ ಜಮೀನಿನಲ್ಲಿ ಶೀಗೆ ಹುಣ್ಣಿಮೆಯ ದಿನ ಚರಗ ಚೆಲ್ಲುತ್ತಿರುವುದು‌ (ಪ್ರಜಾವಾಣಿ ಸಂಗ್ರಹ ಚಿತ್ರ)

ಆಚರಣೆ ಹೇಗೆ:ಒಂದೊಂದು ಭಾಗದಲ್ಲಿ ಒಂದೊಂದು ಜನಾಂಗದವರೂ ಒಂದೊಂದು ಬಗೆಯಲ್ಲಿ ಭೂತಾಯಿಗೆ ನಮಿಸುವ ರೂಢಿ ಇದೆ.ಎಲ್ಲರ ಇಂಗಿತವೂ ಭೂತಾಯಿಗೆ ನಮಿಸುವುದೇ ಆಗಿದೆ.ಮಲೆನಾಡ ದೀವರ ಜನಾಂಗದವರಲ್ಲಿ ಹಬ್ಬಕ್ಕೂ ವಾರದ ಮುಂಚಿತವಾಗೇ ‘ಭೂಮಣ್ಣಿ ಬುಟ್ಟಿ’ ತಯಾರಿಸುವ ಕಾರ್ಯಕ್ಕೆ ಚಾಲನೆ ಸಿಗುತ್ತದೆ. ‘ಹಚ್ಚಂಬ್ಲಿ ಬುಟ್ಟಿ’, ‘ಭೂಮಣ್ಣಿ ಬುಟ್ಟಿ’ ಎಂದು ಎರಡು ಬಗೆಯ ಬುಟ್ಟಿ ತಯಾರಿಸಲಾಗುತ್ತದೆ.ಬುಟ್ಟಿ ತಯಾರಿ ಸಾಕಷ್ಟು ಕೌಶಲ,ತಾಳ್ಮೆ ಬೇಡುತ್ತದೆ.

ಬಿದಿರಿನ ಬುಟ್ಟಿಯನ್ನು ಮೊದಲು ಸಗಣಿಯಿಂದ ಬಳಿಯಲಾಗುತ್ತದೆ.ಬಳಿಕ ಕೆಮ್ಮಣ್ಣು ಬಳಿದು ಬುಟ್ಟಿಯ ಮೇಲ್ಭಾಗವನ್ನು ಸಾಪು ಮಾಡಲಾಗುತ್ತದೆ. ಅಕ್ಕಿ ಹಿಟ್ಟು ತಿರುವಿ,ಪುಂಡಿ ದಾರವನ್ನು ‘ಪೇಂಟ್‌ ಬ್ರೆಶ್‌’ ಆಗಿ ಮಾಡಿಕೊಂಡು ಬುಟ್ಟಿ ಮೇಲೆ ಚಿತ್ತಾರ ಬಿಡಿಸಲಾಗುತ್ತದೆ.ಅತಿ ಸೂಕ್ಷ್ಮ ಎಳೆಗಳನ್ನು ಈ ಚಿತ್ತಾರ ಒಳಗೊಂಡಿರುತ್ತದೆ.ಕೃಷಿಗೆ ಸಂಬಂಧಿಸಿದ ಕಲಾಕೃತಿಗಳು ಬುಟ್ಟಿ ಮೇಲೆ ಪಡಮೂಡುತ್ತವೆ.ಇದು ಗ್ರಾಮೀಣ ಹೆಣ್ಣು ಮಕ್ಕಳ ಕಲಾ ಕೌಶಲವನ್ನೂ ಬಿಂಬಿಸುತ್ತದೆ.

ಹಚ್ಚಂಬ್ಲಿ ಬುಟ್ಟಿಯಲ್ಲಿ ‘ಚರಗ’ ತುಂಬಿಕೊಂಡರೆ,ಭೂಮಣ್ಣಿ ಬುಟ್ಟಿಯಲ್ಲಿ ಹಬ್ಬಕ್ಕೆ ತಯಾರಿಸಿದ ಅಡುಗೆ ತುಂಬಲಾಗುತ್ತದೆ.ಕುಟುಂಬ ಸಮೇತ ಗದ್ದೆಗೆ ಹೋಗಿ ಚಿಕ್ಕ ಚಪ್ಪರ ಹಾಕಿ,ಪೈರಿಗೆ ಸೀರೆ ಉಡಿಸಿ,ಒಡವೆ ಹಾಕಿ,ಎಡೆ ಮಾಡಿ ಪೂಜಿಸಲಾಗುತ್ತದೆ.

‘ಭೂಮಿ ತಾಯಿ ಎಡೆ’, ‘ಇಲಿ ಎಡೆ’, ‘ಗೂಳಿ ಎಡೆ’ ಹೀಗೆ ಮೂರು ಎಡೆ ಮಾಡಲಾಗುತ್ತದೆ.ಇಲಿಗಾಗಿಯೇ ಒಂದು ಎಡೆ ಮೀಸಲಿಡುವ ಔದಾರ್ಯ ಅನ್ನದಾತರದ್ದು.ಇಲಿ ರೈತರ ಬೆಳೆಗಳನ್ನು ಹಾಳು ಮಾಡುತ್ತದೆ. ಆದ ಕಾರಣ ಇಲಿಯನ್ನು ರೈತರ ಶತ್ರು ಎಂದೇ ಹೇಳಲಾಗುತ್ತದೆ.ಬೆಳೆದ ಪೈರುಗಳನ್ನು ತಿನ್ನುವ ಇಲಿಗೂ ಎಡೆ ಮೀಸಲಿಡುವುದು ರೈತನ ಜೀವಪ್ರೀತಿಯನ್ನು ತೋರುತ್ತದೆ.ಭೂಮಿ ತಾಯಿ ಎಡೆಯನ್ನು ಭೂಮಿಯಲ್ಲಿ ಹುಗಿದರೆ,ಗೂಳಿ ಎಡೆಯನ್ನು ಕಾಗೆಗೆ ಇಡಲಾಗುತ್ತದೆ. ‘ದೆವ್ಗಾಗೆ’(ದೊಡ್ಡ ಕಾಗೆ) ಎಡೆಯನ್ನು ಮುಟ್ಟಿದ ಬಳಿಕವೇ ಕುಟುಂಬದವರು ಊಟ ಮಾಡುವುದು.ಇಲ್ಲಿ ಧಾರ್ಮಿಕ ನಂಬಿಕೆಯೊಂದು ಮಿಳಿತಗೊಂಡಿದೆ.ನಿಧನಹೊಂದಿದ ಮನೆಯ ಹಿರಿಯರು ಕಾಗೆಯ ರೂಪದಲ್ಲಿ ಬಂದು ಎಡೆ ಉಣ್ಣುವರು ಎಂಬ ನಂಬಿಕೆ.ಹಾಗಾಗಿ,ಕಾಗೆ ಬಂದು ಎಡೆ ಉಣ್ಣದ ಹೊರತು ಯಾರೊಬ್ಬರೂ ಊಟ ಮಾಡುವಂತಿಲ್ಲ.ಅದು ಎಷ್ಟು ಸಮಯವಾದರೂ ಸರಿಯೇ.ಇಂತಹ ಹಲವು ಧಾರ್ಮಿಕ ನಂಬಿಕೆಗಳು ಈ ಹಬ್ಬದಲ್ಲಿ ಮಿಳಿತಗೊಂಡಿವೆ.ಅರಿಸಿನ ಎಲೆ ಅಥವಾ ಬಾಳೆ ಎಲೆಯಲ್ಲಿ ತಯಾರಿಸುವ ಚಿನ್ನಿಕಾಯಿ ಕಡುಬನ್ನು ಕೆಲವರು ಭೂಮಿಯಲ್ಲಿ ಹುದುಗಿಸಿ ಇಡುತ್ತಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಈ ಪೂಜೆ ವಿಧಾನ ಭಿನ್ನ.ಹೊಲದಲ್ಲಿ ಐದು ಕಲ್ಲುಗಳಿಗೆ ಸುಣ್ಣ– ಬಣ್ಣ ಹಚ್ಚಿ,ಐದು ಜೋಳದ ದಂಟಿನಿಂದ ಗುಡಿಸಲಿನಂತೆ ಮಾಡಿ ಅವುಗಳಿಗೆ ನೆರಳು ಮಾಡುತ್ತಾರೆ.ಅದಕ್ಕೆ ಸೀರೆ,ಪಂಚೆ ತೊಡಿಸಿ,ತುಂಬಿದ ಎಡೆ ಇಟ್ಟು ಪೂಜೆ ಸಲ್ಲಿಸುತ್ತಾರೆ.ಇಲ್ಲಿ ಐದು ಕಲ್ಲುಗಳು ಪಾಂಡವರನ್ನು ಪ್ರತಿನಿಧಿಸುತ್ತವೆ.

ಇನ್ನು ಕೆಲವರು ಐದು ಕಲ್ಲುಗಳ ಪಕ್ಕ ಮತ್ತೊಂದು ಕಲ್ಲನ್ನು ಇಟ್ಟು ಪೂಜೆ ಮಾಡಿ(ಕಳ್ಳ ಎಂದು ತಿಳಿದು)ನಂತರ ಎಡೆ ಹಿಡಿದು ಭೂತಾಯಿಗೆ,ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸುತ್ತಾರೆ.ಬೆಳೆ ಉತ್ತಮ ಇಳುವರಿ ಬರಲಿ,ಲಾಭ ತರಲಿ ಎಂದು ಪ್ರಾರ್ಥಿಸುತ್ತಾರೆ.ನಂತರ ಎಡೆಯನ್ನು ನಾಲ್ಕು ದಿಕ್ಕುಗಳಿಗೂ ಚೆಲ್ಲುತ್ತಾರೆ.

ಭೂಮಿ ಹುಣ್ಣಿಮೆಗಾಗಿ ತಯಾರಾಗಿರುವ ಹಚ್ಚಂಬ್ಲಿ ಬುಟ್ಟಿ ಹಾಗೂ ಭೂಮಣ್ಣಿ ಬುಟ್ಟಿ

ಚರಗ ತಯಾರಿಯೇ ಸೊಗಸು:ಭೂಮಿ ಹುಣ್ಣಿಮೆ ಬಹುಮುಖ್ಯ ಕಾರ್ಯ ಚರಗ.ಕೃಷಿ ಕುಟುಂಬದ ಮಹಿಳೆಯರು ಭೂಮಿ ಹುಣ್ಣಿಮೆ ಹಿಂದಿನ ರಾತ್ರಿ ನಿದ್ದೆ ಬಿಟ್ಟು, 101ಜಾತಿಯ ಬೆರಕೆ ಸೊಪ್ಪು,ತರಕಾರಿ ಬೇಯಿಸಿ ಚರಗ ಸಿದ್ಧ ಮಾಡುತ್ತಾರೆ.ಅದನ್ನು ನಸುಕಿನಲ್ಲೇ ರೈತರು ಗದ್ದೆ ತುಂಬಾ ಉಗ್ಗುತ್ತಾರೆ. ‘ಹೋಲಿಗೆ,ಹೋಲಿಗೆ’ ಎನ್ನುತ್ತಾ ಚರಗ ಚೆಲ್ಲುತ್ತಾರೆ.

ಮಲೆನಾಡಿನ ಭಾಗದಲ್ಲಿ ಭೂಮಿ ಹುಣ್ಣಿಮೆ ದಿನ ಚಿನ್ನಿಕಾಯಿ ಕಡುಬು ಪ್ರಮುಖ ಖಾದ್ಯ.ವರ್ಷಕ್ಕೆ ಒಮ್ಮೆ ಮಾಡುವ ಈ ಕಡುಬು ತಯಾರಿ ವಿಧಾನವೇ ಭಿನ್ನ.ಹೇರಳ ಪೌಷ್ಟಿಕಾಂಶ ಹೊಂದಿರುವ ಈ ಖಾದ್ಯ ಸವಿಯಲು ಬಹುತೇಕರು ಕಾದು ಕುಳಿತಿರುತ್ತಾರೆ.ಈಗೆಲ್ಲ ಮಾರುಕಟ್ಟೆಯಲ್ಲಿ ಚಿನ್ನಿಕಾಯಿ ಸಿಗುತ್ತವೆ.ಮನೆಗೆ ತಂದು ನೀವೂ ಟ್ರೈ ಮಾಡಿ ಮತ್ತೆ.

ಅರಿಶಿನ ಎಲೆಯಲ್ಲಿ ಬೇಯಿಸಿದ ಚಿನ್ನಿಕಾಯಿ ಕಡುಬು

ಬೇಕಾಗುವ ಸಾಮಗ್ರಿ

ಚಿಕ್ಕ ಗಾತ್ರದ ಚಿನ್ನಿಕಾಯಿ–1,ಅಕ್ಕಿ–250ಗ್ರಾಂ,ಸಣ್ಣ ರವೆ–100ಗ್ರಾಂ,ಏಲಕ್ಕಿ,ಒಣಶುಂಠಿ ಪುಡಿ– ಒಂದು ಚಮಚ,ಬೆಲ್ಲ–250ಗ್ರಾಂ(ಹೆಚ್ಚು ಸಿಹಿ ಬೇಕೆಂದವರು ಇನ್ನಷ್ಟು ಬಳಸಬಹುದು),ಅರಿಸಿನದ ಎಲೆ.

ತಯಾರಿ ವಿಧಾನ

ಚಿನ್ನಿಕಾಯಿಯನ್ನು ಒಡೆದು ಹೋಳು ಮಾಡಿ ಸಿಪ್ಪೆ ತೆಗೆಯಬೇಕು.ನಂತರ ಹೋಳುಗಳನ್ನು ತುರಿಯಬೇಕು. (ಅಥವಾ ಹೋಳುಗಳನ್ನು ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಬಹುದು)ಅಕ್ಕಿಯನ್ನು ಬಂಗಾರ ಬಣ್ಣ ಬರುವವರೆಗೂ ಹುರಿಯಬೇಕು.ಅಕ್ಕಿ ಪೂರ್ತಿ ತಣ್ಣಗಾದ ಬಳಿಕ ಮಿಕ್ಸಿಗೆ ಹಾಕಿ ರವೆ ಮಾಡಿಕೊಳ್ಳಿ.ಸಣ್ಣ ರವೆಯನ್ನೂ ಚೆನ್ನಾಗಿ ಹುರಿದುಕೊಳ್ಳಬೇಕು.ರವೆ ತಣ್ಣಗಾದ ಬಳಿಕ ಚಿನ್ನಿಕಾಯಿ ತುರಿಗೆ ಬೆಲ್ಲ,ಅಕ್ಕಿ ರವೆ,ಸಣ್ಣ ರವೆ,ಏಲಕ್ಕಿ– ಶುಂಠಿಪುಡಿ ಹಾಕಿ ಚೆನ್ನಾಗಿ ಕಲೆಸಿ.ಬಳಿಕ ಬಾಳೆ ಎಲೆ ಅಥವಾ ಅರಿಸಿನದ ಎಲೆಯನ್ನು ಪ್ಲಸ್‌ ಮಾರ್ಕ್‌ರೀತಿ ಒಂದರ ಮೇಲೆ ಒಂದು ಇರಿಸಿ ಎಲೆಯ ಮಧ್ಯ ಭಾಗಕ್ಕೆ ಮಿಶ್ರಣವನ್ನು ಇಟ್ಟು ನಾಲ್ಕೂ ಮೂಲೆಯ ಎಲೆಯಿಂದ ಸುತ್ತಿ ಪ್ಯಾಕ್‌ ಮಾಡಬೇಕು.ಹೀಗೆ ಮಿಶ್ರಣವನ್ನು ಪೂರ್ತಿ ಎಲೆಗಳಿಂದ ಚಿಕ್ಕ್ ಚಿಕ್ಕ ಪ್ಯಾಕ್‌ ಮಾಡಿ ಇಡಬೇಕು.

ಬಳಿಕ ಇಡ್ಲಿ ಪಾತ್ರೆಯಲ್ಲಿ ತಳಭಾಗಕ್ಕೆ ನೀರು ಹಾಕಿ,ಇಡ್ಲಿ ತಟ್ಟೆ ಇಟ್ಟು ಅದರ ಮೇಲೆ ಮಿಶ್ರಣದ ಪ್ಯಾಕ್‌ಗಳನ್ನು ಇರಿಸಿ ಮುಚ್ಚಳ ಮುಚ್ಚಬೇಕು.ಮೊದಲು10ನಿಮಿಷ ದೊಡ್ಡ ಉರಿಯಲ್ಲಿ,ಆ ಬಳಿಕ ಸಣ್ಣ ಉರಿಯಲ್ಲಿ30ರಿಂದ35ನಿಮಿಷ ಬೇಯಿಸಬೇಕು. 20ನಿಮಿಷ ತಣಿಯಲು ಬಿಟ್ಟರೆ ಚಿನ್ನಿಕಾಯಿ ಕಡುಬು ಹದವಾಗಿ ಬೇಯುತ್ತವೆ.ಕಡುಬಿಗೆ ತುಪ್ಪ, ಹಾಲು ಹಾಕಿಕೊಂಡು ಸವಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.