ADVERTISEMENT

ಸಂಜೆ ಕಾಫಿಯ ಜೊತೆ ಬ್ರೆಡ್ ತಿನಿಸು

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 19:30 IST
Last Updated 24 ಜನವರಿ 2020, 19:30 IST
Bread recipe
Bread recipe   

ಬ್ರೆಡ್‌ ಸಿಹಿ ರೋಸ್ಟ್‌

ಬೇಕಾಗುವ ಸಾಮಗ್ರಿಗಳು:ಬ್ರೆಡ್ ತುಂಡುಗಳು – 5, ಸಕ್ಕರೆ – 100 ಗ್ರಾಂ, ಏಲಕ್ಕಿ – 2, ನೀರು – 1 ಗ್ಲಾಸ್, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಬ್ರೆಡ್‌ಗಳನ್ನು ತ್ರಿಕೋನಾಕಾರದಲ್ಲಿ ಕತ್ತರಿಸಿಟ್ಟುಕೊಳ್ಳಬೇಕು. ಕತ್ತರಿಸಿದ ಬ್ರೆಡ್ ತುಂಡುಗಳನ್ನು ಎಣ್ಣೆಯಲ್ಲಿ ಕರಿಯಬೇಕು. ಒಂದು ಬಾಣಲೆಗೆ ಒಂದು ಗ್ಲಾಸ್ ನೀರು ಹಾಗೂ ಸಕ್ಕರೆ ಹಾಕಿ ಸಕ್ಕರೆ ಕರಗುವವರೆಗೂ ಕುದಿಸಬೇಕು. ಪಾಕ ಬಂದ ನಂತರ ಕರಿದ ಬ್ರೆಡ್ ತುಂಡುಗಳನ್ನು ಅದರಲ್ಲಿ ಹಾಕಿ ಅದರ ಮೇಲೆ ಏಲಕ್ಕಿ ಪುಡಿ ಹಾಕಿ ಹೊರ ತೆಗೆದು ಸರ್ವಿಂಗ್ ಬೌಲ್‌ಗೆ ಹಾಕಿ ಸವಿಯಬೇಕು.

ADVERTISEMENT

ಬ್ರೆಡ್ ಜಾಮೂನು

ಬೇಕಾಗುವ ಸಾಮಗ್ರಿಗಳು: ಬ್ರೆಡ್ – 4–5 ತುಂಡುಗಳು, ಸಕ್ಕರೆ – 150 ಗ್ರಾಂ, ಏಲಕ್ಕಿ – 2, ಹಾಲು – 1 ಲೋಟ, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಬ್ರೆಡ್‌ನ ಸುತ್ತಲಿರುವ ಕಂದು ಬಣ್ಣದ ಭಾಗವನ್ನು ಕತ್ತರಿಸಿ. ನಂತರ ಬ್ರೆಡ್ ಅನ್ನು ಚಿಕ್ಕ ಚಿಕ್ಕ ತುಂಡು ಮಾಡಿ. ಅದು ನೆನೆಯುವಷ್ಟು ಹಾಲು ಹಾಕಿ ನೆನೆಸಿ. ಸಂಪೂರ್ಣವಾಗಿ ನೆನೆದ ನಂತರ ಚೆನ್ನಾಗಿ ಕಲೆಸಿಕೊಳ್ಳಬೇಕು. ಒಂದು ಬಾಣಲೆಗೆ ನೀರು ಮತ್ತು ಸಕ್ಕರೆ ಹಾಕಿ ತೆಳುವಾದ ಪಾಕ ಮಾಡಿಕೊಳ್ಳಬೇಕು. ಇನ್ನೊಂದು ಬಾಣಲೆಗೆ ಎಣ್ಣೆ ಹಾಕಿ ಕಲೆಸಿಟ್ಟ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ ಕಂದು ಬಣ್ಣ ಬರುವವರೆಗೂ ಕರಿಯಬೇಕು. ನಂತರ ಉಂಡೆಗಳನ್ನು ಪಾಕದಲ್ಲಿ ಹಾಕಿ, ಅವುಗಳ ಮೇಲೆ ಏಲಕ್ಕಿ ಪುಡಿಯನ್ನು ಹಾಕಿ ಜಾಮೂನ್‌ಗಳು ಪಾಕವನ್ನು ಹೀರಿಕೊಂಡ ನಂತರ ಬಟ್ಟಲಿಗೆ ಹಾಕಿ ತಿನ್ನಬಹುದು.

ಬ್ರೆಡ್ ಖಾರದ ಒಗ್ಗರಣೆ

ಬೇಕಾಗುವ ಸಾಮಗ್ರಿಗಳು: ಬ್ರೆಡ್ 6–8 ತುಂಡುಗಳು, ಸಣ್ಣ ಈರುಳ್ಳಿ – 1, ಸಣ್ಣ ಟೊಮೆಟೊ – 1, ಸಾಸಿವೆ – 1 ಟೇಬಲ್ ಚಮಚ, ಜೀರಿಗೆ, ಎರಡು ಟೇಬಲ್ ಚಮಚ ಎಣ್ಣೆ, ಅರಿಸಿನ – ಚಿಟಿಕೆ, ಅಚ್ಚ ಖಾರದ ಪುಡಿ – 1 ಟೇಬಲ್ ಚಮಚ, ಉಪ್ಪು –ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ: ಬ್ರೆಡ್‌ಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆ ತೆಗೆದುಕೊಂಡು ಒಲೆಯ ಮೇಲಿಟ್ಟು ಅದಕ್ಕೆ ಎಣ್ಣೆ ಹಾಕಬೇಕು. ಎಣ್ಣೆ ಕಾದ ನಂತರ ಸಾಸಿವೆ, ಜೀರಿಗೆ ಹಾಕಬೇಕು. ನಂತರ ಹೆಚ್ಚಿಟ್ಟುಕೊಂಡ ಈರುಳ್ಳಿ, ಅರಿಸಿನ, ಉಪ್ಪು ಹಾಕಿ ಹುರಿದುಕೊಳ್ಳಬೇಕು. ನಂತರದಲ್ಲಿ ಟೊಮೊಟೊ ಹಾಕಿ ಕಲೆಸುತ್ತಿರಬೇಕು. ಈ ಮಿಶ್ರಣಕ್ಕೆ ಅಚ್ಚಖಾರದ ಪುಡಿ ಹಾಕಿ 2–3 ನಿಮಿಷ ಕಲೆಸಿ ನಂತರದಲ್ಲಿ ಬ್ರೆಡ್‌ನ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಮಿಶ್ರಣ ಚೆನ್ನಾಗಿ ಬೆರೆತ ನಂತರ ಒಂದು ಪ್ಲೇಟ್‌ಗೆ ಹಾಕಿ ಸವಿಯಲು ಕೊಡಿ.

ಬ್ರೆಡ್ ಕಡಲೆಹಿಟ್ಟಿನ ಬಜ್ಜಿ

ಬೇಕಾಗುವ ಸಾಮಗ್ರಿಗಳು: ಬ್ರೆಡ್ 4–5 ತುಂಡು, ಕಡಲೆಹಿಟ್ಟು – 100 ಗ್ರಾಂ, ಉಪ್ಪು – ರುಚಿಗೆ ತಕ್ಕಷ್ಟು, ಅರಿಸಿನ – ಚಿಟಿಕೆ, ಅಚ್ಚ ಖಾರದ ಪುಡಿ – 1 ಟೇಬಲ್ ಚಮಚ, ಸಾಜೀರಾ –ಕಾಲು ಚಮಚ, ಕರಿಯಲು ಎಣ್ಣೆ, ಸ್ವಲ್ಪ ಜೀರಿಗೆ.

ತಯಾರಿಸುವ ವಿಧಾನ: 4–5 ಬ್ರೆಡ್ ತುಂಡುಗಳನ್ನು ತೆಗೆದುಕೊಂಡು, ಸುತ್ತಲೂ ಇರುವ ಕಂದು ಪದರವನ್ನು ತೆಗೆದು, ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ಬ್ರೆಡ್ ಪುಡಿಗೆ ಕಡಲೆಹಿಟ್ಟು ಹಾಕಬೇಕು. ಸಾಜೀರಾ, ಉಪ್ಪು, ಜೀರಿಗೆ, ಖಾರದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಮಿಶ್ರಣಕ್ಕೆ ನೀರು ಹಾಕಿ ಬಜ್ಜಿ ಹಿಟ್ಟಿನ ಹದಕ್ಕೆ ಕಲೆಸಿಕೊಂಡು 5 ನಿಮಿಷ ಹಾಗೆ ಬಿಡಬೇಕು. ಒಂದು ಬಾಣಲೆಯಲ್ಲಿ ಕರಿಯಲು ಎಣ್ಣೆ ಹಾಕಿ ಬಿಸಿಯಾಗಲು ಇಡಬೇಕು. ಎಣ್ಣೆ ಬಿಸಿಯಾದ ನಂತರ ಕಲೆಸಿಟ್ಟ ಹಿಟ್ಟನ್ನು ಬಜ್ಜಿ ಆಕಾರದಲ್ಲಿ ಕಾದ ಎಣ್ಣೆಗೆ ಬಿಡಬೇಕು. ಕಂದು ಬಣ್ಣ ಬರುವವರೆಗೂ ಚೆನ್ನಾಗಿ ಕರಿದು. ಪ್ಲೇಟ್‌ಗೆ ಹಾಕಿ ಸ್ವಲ್ಪ ಬಿಸಿಯಿರುವಾಗಲೇ ತಿನ್ನಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.