ADVERTISEMENT

ಕಾರ್ಮಿಕರ ಹಸಿವಿಗೆ ‘ಸ್ತ್ರೀ ಶಕ್ತಿ’ ಆಹಾರ

ಮಹಿಳಾ ಸಂಘಗಳ ಅನುಪಮ ಕಾರ್ಯ, ಸ್ತ್ರೀಶಕ್ತಿಯ ಅನುಪಮ ಹೆಜ್ಜೆ

ಸಿ.ಎಸ್.ನಿರ್ವಾಣ ಸಿದ್ದಯ್ಯ
Published 4 ಮೇ 2020, 20:00 IST
Last Updated 4 ಮೇ 2020, 20:00 IST
ವಲಸೆ ಕಾರ್ಮಿಕರಿಗಾಗಿ ಚಪಾತಿ ತಯಾರಿಸುತ್ತಿರುವ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು
ವಲಸೆ ಕಾರ್ಮಿಕರಿಗಾಗಿ ಚಪಾತಿ ತಯಾರಿಸುತ್ತಿರುವ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು   
""

ಬೆಂಗಳೂರು ಸಮೀಪದ ಯಲಹಂಕ ತಾಲ್ಲೂಕಿನ ರಾಜಾನುಕುಂಟೆಯ ಶ್ರೀವೇಣುಗೋಪಾಲ ಸ್ವಾಮಿ ಮತ್ತು ಶ್ರೀಕೃಷ್ಣ ಮಹಿಳಾ ಸ್ವಸಹಾಯ ಸಂಘಗಳ ಮೂವತ್ತು ಮಹಿಳಾ ಸದಸ್ಯರ ಮನೆಗಳಲ್ಲಿ ಕಳೆದ ಒಂದು ವಾರ ನಿತ್ಯ ಸುಮಾರು ಒಂದು ಸಾವಿರ ಚಪಾತಿಗಳು ತಯಾರಾಗುತ್ತಿದ್ದವು..!

ಮಧ್ಯಾಹ್ನದ ಊಟದ ವೇಳೆಗೆ ರೆಡಿಯಾಗುತ್ತಿದ್ದ ಈ ಚಪಾತಿ ಜೊತೆಗೆ ನೆಂಚಿಕೊಳ್ಳುವುದಕ್ಕಾಗಿ ಚಟ್ನಿ ಪುಡಿಯೂ ಸಿದ್ಧವಾಗಿರುತ್ತಿತ್ತು. ಹೀಗೆ ಸಿದ್ಧವಾದ ಚಪಾತಿಗಳನ್ನು ಒಬ್ಬರು ಮನೆ ಮನೆಗಳಿಂದ ಸಂಗ್ರಹಿಸಿಕೊಂಡು, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿದ್ದ ನೂರಾರು ಕಾರ್ಮಿಕರಿಗೆ ಹಂಚುವ ಕೆಲಸ. ಇದು ಕಳೆದ ಏಳು ದಿನಗಳಿಂದ ನಿತ್ಯ ನಡೆಯುತ್ತಿರುವ ಕಾಯಕ!

ರಾಜಾನುಕುಂಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಗುಜರಾತ್, ಬಿಹಾರದ ಕಡೆಯಿಂದ ನೂರಾರು ಕಾರ್ಮಿಕರು ಬಂದು ನೆಲೆಸಿದ್ದಾರೆ. ಲಾಕ್‌ಡೌನ್‌ನಿಂದಾಗಿ ಅವರಿಗೆ ಕೆಲಸವೂ ಇಲ್ಲದಂತಾಗಿ, ಊಟಕ್ಕೂ ಪರದಾಡುವಂತಾಗಿತ್ತು. ಇದನ್ನು ಮನಗಂಡ ಪಂಚಾಯ್ತಿ ಅಭಿವೃದ್ಧಿಅಧಿಕಾರಿ ರಾಜೇಶ್, ‘ಇವರಿಗೆ ಒಂದು ಹೊತ್ತು ಊಟದ ವ್ಯವಸ್ಥೆಯನ್ನಾದರೂ ಮಾಡಬೇಕು’ ಎಂದು ಯೋಚಿಸಿದರು. ಆಗ ಹೊಳೆದಿದ್ದು ಈ ಚಪಾತಿ ಪೂರೈಸುವ ಯೋಜನೆ. ಈ ವಿಷಯವನ್ನು ಗ್ರಾಮದ ಈ ಎರಡು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರ ಎದುರು ಹೇಳಿಕೊಂಡರು. ಸಂಘದ ಮಹಿಳೆಯರು ಮರು ಮಾತನಾಡದೇ ‘ಚಪಾತಿಗೆ ಬೇಕಾದ ವಸ್ತುಗಳನ್ನು ತಂದುಕೊಡಿ. ನಾವೆಲ್ಲ ಉಚಿತವಾಗಿ ಚಪಾತಿ ಮಾಡಿಕೊಡುತ್ತೇವೆ’ ಎಂದು ಭರವಸೆ ನೀಡಿದರು.

ADVERTISEMENT

ಸಂಘದವರಿಂದ ಒಪ್ಪಿಗೆ ಸಿಕ್ಕಿತು, ಆದರೆ ವಸ್ತುಗಳ ಖರೀದಿಗೆ ಬೇಕಾಗುವಷ್ಟು ಪಂಚಾಯ್ತಿಯಲ್ಲಿ ಹಣವಿರಲಿಲ್ಲ. ಆಗ ರಾಜೇಶ್ ಊರಿನಲ್ಲಿನ ಕೆಲವು ದಾನಿಗಳ ಮೊರೆ ಹೋದರು. ಇವರ ಮನವಿಗೆ ಸ್ಪಂದಿಸಿದ ಕೆಲವರು, ಚಪಾತಿ ಮಾಡಲು ಬೇಕಾದ ಗೋದಿಹಿಟ್ಟು, ಶೇಂಗಾ ಎಣ್ಣೆ ಕೊಡಿಸಿದರು. ‘ನಮ್ಮ ಹೆಸರೇನು ಬೇಡ. ಅನುಕೂಲವಾದರಾಯ್ತು’ ಎಂಬ ಹೃದಯ ವೈಶಾಲ್ಯವನ್ನು ಮೆರೆದರು ದಾನಿಗಳು ಎಂದು ಅವರ ಸೇವೆಯನ್ನು ಸ್ಮರಿಸುತ್ತಾರೆ ರಾಜೇಶ್.

ಪರಸ್ಪರ ಸಹಕಾರ..

ಪ್ರತಿ ದಿನ ಬೆಳಿಗ್ಗೆ 10 ಗಂಟೆಗೆ ಮನೆ ಕೆಲಸ ಮುಗಿಸಿ ಚಪಾತಿ ಮಾಡಲು ಮಹಿಳೆಯರು ಸಿದ್ಧರಾಗುತ್ತಿದ್ದರು. ಅಷ್ಟರೊಳಗೆ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಾಜೇಶ್ ಅಗತ್ಯ ವಸ್ತುಗಳನ್ನ ಸ್ತ್ರೀಶಕ್ತಿ ಸಂಘದ ಮುಖ್ಯಸ್ಥೆ ಕೋಕಿಲ ಅವರ ಮನೆಗೆ ತಲುಪಿಸುತ್ತಿದ್ದರು. ಉಳಿದ ಸದಸ್ಯರು ಆ ವಸ್ತುಗಳನ್ನು ತಮ್ಮ ತಮ್ಮ ಮನೆಗೆ ತೆಗೆದುಕೊಂಡು ಹೋಗಿ, ಚಪಾತಿ ಲಟ್ಟಿಸಲು ಶುರು ಮಾಡುತ್ತಿದ್ದರು. ಇದೇ ವೇಳೆ ಕೋಕಿಲಾ ಅವರ ಮನೆಯ ಅಂಗಳದಲ್ಲಿ ನಾಲ್ಕು ಜನರ ಎರಡು ತಂಡಗಳು ಸುರಕ್ಷತೆ ಮತ್ತು ಶುಚಿತ್ವ ಕಾಪಾಡಿಕೊಂಡು ಚಪಾತಿ ತಯಾರಿಸುತ್ತಿದ್ದರು.

ಆರಂಭದಲ್ಲಿ ನಿತ್ಯ ನೂರು ಚಪಾತಿ ಮಾಡುವುದು ಸಾಧ್ಯವೇ ಎನ್ನುತ್ತಾ ಕೆಲಸ ಶುರು ಮಾಡುತ್ತಿದ್ದ ಮಹಿಳೆಯರಿಗೆ ಇಡೀ ಕುಟುಂಬ ಸಾಥ್ ನೀಡಲು ಶುರುವಾಯಿತು. ಕ್ರಮೇಣ ‘ನಾವೂ ಕೈ ಜೋಡಿಸುತ್ತೇವೆ’ ಎಂದು ನೆರೆಹೊರೆಯವರು ಮುಂದಾದರು. ‘ಎಲ್ಲರೂ ಒಟ್ಟಾಗಿ ಈ ಸೇವೆಯಲ್ಲಿ ತೊಡಗಿದ್ದು ಬಹಳ ಖುಷಿಕೊಟ್ಟಿತು, ಸಮಾಧಾನ ತಂದಿತು’ ಎಂದರು ಶ್ರೀಕೃಷ್ಣ ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿ ಮಂಜುಳಾ. ‘ಮನೆಯಲ್ಲಿದ್ದುಕೊಂಡೇ ಕಷ್ಟದಲ್ಲಿರುವ ಕಾರ್ಮಿಕರಿಗೆ ಸಹಾಯ ಮಾಡುವ ಈ ಮಾರ್ಗ ಅನನ್ಯ’ ಎಂದರು ಮಹಿಳಾ ಸ್ವಸಹಾಯ ಸಂಘದ ಮುಖ್ಯಸ್ಥೆ ಜಿ.ಎಚ್.ಕೋಕಿಲ.

ಮಕ್ಕಳ ಹಸಿವು ನೀಗಿತು..

ಬಿಹಾರ–ಗುಜರಾತ್ ಭಾಗದವರಿಗೆ ರೊಟ್ಟಿ, ಚಪಾತಿಯೇ ಪೌಷ್ಟಿಕ ಆಹಾರ. ಈ ತಂಡಗಳು ಚಪಾತಿ ನೀಡುತ್ತಿದ್ದದು ಅವರಿಗೆ ತುಂಬಾ ಅನುಕೂಲವಾಗುತ್ತಿತ್ತು. ‘ಪಂಚಾಯಿತಿಯವರು ಕೊಡುತ್ತಿದ್ದ ಚಪಾತಿಯಿಂದ ನನ್ನ ಎರಡು ಮಕ್ಕಳ ಹಸಿವು ನೀಗಿತು. ಮಧ್ಯಾಹ್ನ ಒಂದು ಹೊತ್ತು ಚಪಾತಿ ತಿಂದರೆ ಎರಡು ಹೊತ್ತು ಊಟವಿಲ್ಲದಿದ್ದರೂ ಇರಬಹುದು. ಹಾಗಾಗಿ ನಮಗೆ ಈ ಚಪಾತಿ ಬದುಕಲು ಶಕ್ತಿ ನೀಡಿತ್ತು’ ಎಂದು ವಿನಮ್ರವಾಗಿ ನೆನಪಿಸಿಕೊಂಡರು ಬಿಹಾರ ಮೂಲದ ಕಂಬಿಕಟ್ಟುವ ಕಾರ್ಮಿಕ ಕುಟುಂಬದ ಮಧು ಮೊತಿ ಮಹ್ಹ ಅವರು.

ಲಾಕ್‌ಡೌನ್ ಮುಗಿಯಬಹುದೆಂದು ಚಪಾತಿ ಪೂರೈಕೆಯನ್ನು ಮೇ 3ಕ್ಕೆ ನಿಲ್ಲಿಸಿದ್ದರು. ಈಗ ಅದು ವಿಸ್ತರಣೆಯಾಗಿರುವುದರಿಂದ, ಲಾಕ್‌ಡೌನ್ ಅವಧಿಯವರೆಗೂ ಇದನ್ನು ಮುಂದುವರಿಸುವ ಯೋಚನೆ ಈ ಸಂಘಗಳದ್ದು.

(ಚಿತ್ರಗಳು: ಲೇಖಕರವು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.