ADVERTISEMENT

ಚಕ್ಕುಲಿ, ನಿಪ್ಪಟ್ಟು ಮಾರಾಟಕ್ಕೆ ಟ್ರಕ್ ಚಿಂತನೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 20:02 IST
Last Updated 30 ಜನವರಿ 2020, 20:02 IST
   

ಬೆಂಗಳೂರು: ಆರ್ಯ– ವೈಶ್ಯ ಸಮುದಾಯದ ಸಾಂಪ್ರದಾಯಿಕ ತಿನಿಸುಗಳಾದ ಚಕ್ಕುಲಿ, ನಿಪ್ಪಟ್ಟಿನಂತಹ ಕುರುಕಲು ತಿಂಡಿಗಳನ್ನು ಟ್ರಕ್‌ಗಳಲ್ಲಿ ಮಾರಾಟ ಮಾಡುವ ದಿನಗಳು ದೂರವಿಲ್ಲ!

ಕರ್ನಾಟಕ ಆರ್ಯ– ವೈಶ್ಯ ಸಮುದಾಯ ಅಭಿವೃದ್ಧಿ ನಿಗಮವು ವಾಹನಗಳಿಗೆ ಸಾಲ ನೀಡುವಂತಹ ಸ್ವ–ಉದ್ಯೋಗ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಸಮುದಾಯದ ನಿರುದ್ಯೋಗಿಗಳು ಚಕ್ಕುಲಿ, ನಿಪ್ಪಟ್ಟು ಮಾರಾಟ ಮಾಡುವ ವ್ಯವಹಾರ ಆರಂಭಿಸಲು ಟ್ರಕ್ ಮತ್ತಿತರ ವಾಹನಗಳನ್ನು ಕೊಳ್ಳಲು ₹5 ಲಕ್ಷದಿಂದ ₹10 ಲಕ್ಷದವರೆಗೂ ಸಾಲ ನೀಡುವ ಯೋಜನೆಯನ್ನು ರೂಪಿಸಿದೆ.

‘ನಮ್ಮ ಸಮುದಾಯದ ಜನರು ವಿಶೇಷವಾಗಿ ಚಕ್ಕುಲಿ, ನಿಪ್ಪಟ್ಟು ಹಾಗೂ ಚಾಟ್ಸ್‌ಗಳನ್ನು ತಯಾರಿಸುತ್ತಾರೆ. ಮಾಲ್‌ಗಳು ಹಾಗೂ ಇತರೆಡೆ ಇಂತಹ ಆಹಾರ ಪದಾರ್ಥಗಳ ಮಾರಾಟದಿಂದಾಗಿ ಅದರ ಮೂಲ ಸ್ವಾದ ಮರೆಯಾಗುತ್ತಿದೆ. ಹಳೆಯ ಶೆಟ್ಟರ ಅಂಗಡಿಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಹಾಗಾಗಿ ವಾಹನಗಳ ಮೇಲೆ ಚಾಟ್ಸ್ ಮಾರಾಟ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ’ ಎಂದು ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ ಹೇಳುತ್ತಾರೆ.

ADVERTISEMENT

‘ಈಗ ಆರಂಭಿಸಲು ಉದ್ದೇಶಿಸಿರುವ ಸ್ವ–ಉದ್ಯೋಗ ಯೋಜನೆಯು ಸಮುದಾಯದ ಆಹಾರದ ವಿಶೇಷತೆಯನ್ನುಸಂರಕ್ಷಿಸಿಕೊಳ್ಳುವುದು ಹಾಗೂ ಇನ್ನಷ್ಟು ಕಡೆಗೆ ವಿಸ್ತರಿಸುವ ಉದ್ದೇಶ ಹೊಂದಿದೆ. ಈ ಯೋಜನೆಯಲ್ಲಿ ಮೂರು ಚಕ್ರದ ವಾಹನ ಕೊಳ್ಳಲು ₹5 ಲಕ್ಷ, ದೊಡ್ಡ ಪ್ರಮಾಣದ ವಾಹನ ಖರೀದಿಗೆ ₹10 ಸಾಲ ನೀಡಲಾಗುತ್ತದೆ’ ಎಂದರು.

ಈ ರೀತಿ ಸಾಲ ನೀಡುವ ವ್ಯವಸ್ಥೆ ಕಳೆದ ವರ್ಷದಿಂದ ಜಾರಿಯಲ್ಲಿದೆ. ಈಗಾಗಲೇ ₹1 ಲಕ್ಷ ಸಾಲ ನೀಡುತ್ತಿದ್ದು, ಶೇ 20ರಷ್ಟು ಸಬ್ಸಿಡಿ (₹20 ಸಾವಿರ) ಕೊಡುತ್ತಿದ್ದು, ಉಳಿದ ₹80 ಸಾವಿರ ಸಾಲಕ್ಕೆ ಶೇ 4ರಷ್ಟು ಬಡ್ಡಿ ವಿಧಿಸಲಾಗುತ್ತಿದೆ. ಸಮುದಾಯದ ಶೇ 10ರಷ್ಟು ಜನರು ಇನ್ನೂ ಸಂಕಷ್ಟದ ಸ್ಥಿತಿಯಲ್ಲೇ ಇದ್ದಾರೆ.ಈಗ ಆರಂಭಿಸುತ್ತಿರುವ ಸಾಲ ಯೋಜನೆಯು ಮುಂದಿನ ದಿನಗಳಲ್ಲಿ ಸಮುದಾಯವನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲಿದೆ ಎಂದು ಅವರು ಸಮರ್ಥಿಸಿಕೊಂಡರು.

‘ವಾಹನಗಳಿಗೆ ಸಾಲ ನೀಡುವ ಯೋಜನೆಯ ಪ್ರಸ್ತಾವವನ್ನು ಸ್ವೀಕರಿಸಿದ್ದು, ಸರ್ಕಾರದ ಹಂತದಲ್ಲಿ ಚರ್ಚಿಸಿದ ನಂತರ ನಿರ್ಧರಿಸಲಾಗುವುದು’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.